ಕಾಳು ಸಂತೆಯಲ್ಲಿ ಅನ್ನಭಾಗ್ಯ ಅಕ್ಕಿ ಮಾರಾಟ ದಂಧೆ!

Share

 

Writing- ಪರಶಿವ ಧನಗೂರು

ಕಾಳು ಸಂತೆಯಲ್ಲಿ ಅನ್ನಭಾಗ್ಯ ಅಕ್ಕಿ ಮಾರಾಟ ದಂಧೆ!

ದೇಶದಲ್ಲಿ ಕಡುಬಡವರು ಹೊಟ್ಟೆಹಸಿವಿನಿಂದ ನರಳಬಾರದೆಂದು, ಸರ್ಕಾರಗಳು ಉಚಿತವಾಗಿ ನೀಡುತ್ತಿರುವ ಪಡಿತರ ಯೋಜನೆಯ ಅನ್ನಭಾಗ್ಯ ಅಕ್ಕಿಯನ್ನು ಕಡಿಮೆ ಬೆಲೆಗೆ ಖರೀದಿಸಿ ಹೊರ ರಾಜ್ಯಗಳ ರೈಸ್ ಮಿಲ್ ಗಳಿಗೆ, ರೈಸ್ ಮಾರ್ಕೆಟ್ ಗಳಿಗೆ ಸಾಗಿಸುವ ದಂಧೆ ಈಗ ಹೆಚ್ಚು ರಾಜ್ಯಾದ್ಯಂತ ಸಕ್ರಿಯವಾಗಿದೆ. ಫಲಾನುಭವಿ ಗಳಿಂದ ಕಡಿಮೆ ಬೆಲೆಗೆ ಪಡೆದುಕೊಳ್ಳುವ ಕಾಳಸಂತೆಕೋರರು, ಅನ್ನಭಾಗ್ಯದ ಹಸಿವು ನೀಗಿಸಬೇಕಾದ ಅಕ್ಕಿಯನ್ನು ತಮ್ಮ ಸೀಕ್ರೆಟ್ ಗೋಡೌನ್ ಗಳಿಗೆ ಸಾಗಿಸಿ ಬಿಚ್ಚಿಟ್ಟ, ಆನಂತರ ನೂರಾರು ಟನ್ ಅಕ್ರಮ ಅಕ್ಕಿಯನ್ನು ರೈಸ್ ಮಿಲ್ ಗಳಿಗೆ ಸಾಗಿಸಿ ಪಾಲೀಶ್ ಮಾಡಿ-ಸಣ್ಣಕ್ಕಿ ಮಾಡೀ ಬಣ್ಣ ಬಣ್ಣದ ಮೂಟೆಗೆ ತುಂಬಿ ಸಾವಿರಾರು ರೂಪಾಯಿ ಗಳಿಗೆ ಮತ್ತೆ ಇದೇ ಬಡವರಿಗೆ ಮಾರುವ ಖತರ್ನಾಕ್ ಕಳ್ಳರ ಗ್ಯಾಂಗ್ ಈಗ ಕರ್ನಾಟಕದ ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚಾಗಿ ತಂಡಗಳನ್ನು ಮಾಡಿಕೊಂಡು ಓಡಾಡುತ್ತಿದೆ! ಪ್ರತಿ ತಿಂಗಳು ಪ್ರತಿ ಗಲ್ಲಿಗೂ ಬೇಟಿ ನೀಡುವ ಈ ಕಾಳಸಂತೆಕೋರರ ಅಕ್ಕಿಗ್ಯಾಂಗ್ ನಗರವಾಸಿಗಳು, ಮಧ್ಯಮವರ್ಗದವರು, ಪಟ್ಟಣ ಪಂಚಾಯಿತಿ, ಹೋಬಳಿ,ತಾಲೂಕು ಕೇಂದ್ರಗಳನ್ನೇ ಟಾರ್ಗೆಟ್ ಮಾಡಿಕೊಂಡು ಕಾರ್ಯಾಚರಣೆ ನಡೆಸುತ್ತಿದ್ದಾರೆ. ಈ ಉಚಿತ ಅನ್ನಭಾಗ್ಯ ಅಕ್ಕಿಯನ್ನು ಸೇವಿಸದ ಕುಟುಂಬಗಳೇ ಇವರ ಟಾರ್ಗೆಟ್. ಯಾವಾಗಲೂ ಪಾಲಿಷ್ ಅಕ್ಕಿಯನ್ನೇ ಬಯಸುವ ಇಂತವರಿಂದ ಕೆ.ಜಿ. ಗೆ 10 ರೂಪಾಯಿಯಂತೆ ಅಕ್ಕಿ ಖರೀದಿಸಿ, ಅದೇ ಅಕ್ಕಿಯನ್ನೇ ಪಾಲೀಶ್ ಮಾಡಿ ಪ್ಯಾಕೆಟ್ ಗಳಲ್ಲಿ ದೊಡ್ಡ ದೊಡ್ಡ ಕಂಪನಿಯ ಬ್ರಾಂಡ್ ಹೆಸರಿನಲ್ಲಿ ಆಧುನಿಕ ಮಾಲ್ ಗಳು, ಅಕ್ಕಿ ಬಜಾರ್ ಗಳಲ್ಲಿ ವ್ಯಾಪಾರಕ್ಕೆ ಇಟ್ಟು ಲಕ್ಷಾಂತರ ರೂಪಾಯಿ ಕಮಾಯಿ ಮಾಡುತ್ತಿದ್ದಾರೆ! ಈ ದಂಧೆ ಇತ್ತೀಚೆಗೆ ರಾಜ್ಯದ ನಾನಾ ಕಡೆ ಹೆಚ್ಚಾಗಿ ಸದ್ದು ಮಾಡುತ್ತಿದೆ. ಕೆಲವು ಸಾರಿ‌ ಸರ್ಕಾರಿ ಪಡಿತರ ನ್ಯಾಯ ಬೆಲೆ ಅಂಗಡಿಗಳಿಂದಲೇ, ಅಡ್ಜಸ್ಟ್ ಮೆಂಟ್ ಮೂಲಕ ಅನ್ನಭಾಗ್ಯದ ಅಕ್ಕಿಯನ್ನು ಖರೀದಿಸುವ ಈ ಜಾಲದ ಅಕ್ಕಿ ಕಳ್ಳರು, ಈ ಉಚಿತ ಮೂಟೆಗಳನ್ನು ತಮ್ಮ ನಿಗೂಢ ಕಳ್ಳಗೂಡುಗಳಿಗೆ ಸಾಗಿಸಿ ‘ಬ್ರಾಂಡೆಡ್ ಜಾಲದ’ ಕಾಳಸಂತೆಕೋರರಿಗೆ ನೇರವಾಗಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಾರೆ.

ಇದೇ ಕಳ್ಳ ಅಕ್ಕಿಗೇ ರೈಸ್ ಮಿಲ್ ಗಳಲ್ಲಿ ಪಾಲಿಷ್ ಹಾಕಿ, ಬಣ್ಣ ಬಣ್ಣದ ಜಾಹಿರಾತಿನ ಮೂಲಕ ಇದೇ ಬಡವರ ಅನ್ನಭಾಗ್ಯದ ಅಕ್ಕಿಯನ್ನು, ದುಬಾರಿ ಬೆಲೆಗೆ ಡಿಜಿಟಲ್ ಮಾರುಕಟ್ಟೆಗಳು ಬುದ್ಧಿವಂತರು, ಸಿಸಿ ಕ್ಯಾಮೆರಾ ದೆದುರು ರಾಜಾರೋಷವಾಗಿ ಮಾರೀ ದುಡ್ಡು ಮಾಡಿಕೊಳ್ಳುತ್ತಿದ್ದಾರೆ! ಇನ್ನೂ ಕೆಲವು ಕೋಳಿ ಫಾರಂ ಮಾಲೀಕರು, ಇಟ್ಟಿಗೆ ಗೂಡಿನ ಓವರ್ ಗಳು, ಕಂಟ್ರಾಕ್ಟರ್ಸ್ ಗಳು ತಮ್ಮ ಕೂಲಿ ಕಾರ್ಮಿಕರಿಗಾಗಿ ಈ ಅನ್ನಭಾಗ್ಯದ ಅಕ್ಕಿಮೂಟೆಗಳನ್ನು ಪಡಿತರ ನ್ಯಾಯ ಬೆಲೆ ಅಂಗಡಿಗಳಿಂದ ಕಡಿಮೆ ಬೆಲೆಗೆ ತಂದು, ತಮ್ಮ ಗೋಡೌನ್ ಗಳಲ್ಲಿ ತುಂಬಿಸಿಡುತ್ತಿದ್ದಾರೆ. ಇತ್ತೀಚೆಗೆ ಕೋವಿಡ್ ಕಾಲದಲ್ಲಿ ಲಾಕ್ ಡೌನ್ ಇದ್ದಾಗ ಬಡವರಿಗೆ ರಾಜಕಾರಣಿಗಳು, ಇತರರು ಕೊಟ್ಟ ಆಹಾರದ ಕಿಟ್ ಗಳ ಹಿಂದಿನ ಅಕ್ಕಿಯ ಅಸಲೀ ಕತೆ ಇದೇ ಅಕ್ಕಿ ಮಾಫಿಯಾ! 2020ರ ನವೆಂಬರ್ ತಿಂಗಳಲ್ಲಿ ಉಡುಪಿಯಲ್ಲಿ ಬಡವರಿಗೆ ಸೇರಬೇಕಾಗಿದ್ದ ಅನ್ನಭಾಗ್ಯ ಯೋಜನೆಯ 600ಕ್ವಿಂಟಾಲ್ ಅಕ್ಕಿ ಮೂಟೆ ಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದರು. ಕುಂದಾಪುರ, ಬ್ರಹ್ಮಾವರದ ಸುತ್ತಮುತ್ತ ಈ ಪಡಿತರ ಅನ್ನಭಾಗ್ಯ ಅಕ್ಕಿಯನ್ನು ಅಕ್ರಮವಾಗಿ ಸಾಗಾಟ ಮಾಡಿ, ಕದ್ದು ದಾಸ್ತಾನು ಮಾಡುತ್ತಿದ್ದ ಮಾಹಿತಿ ಮೇರೆಗೆ ಜಿಲ್ಲಾಧಿಕಾರಿ ಜಿ. ಜಗದೀಶ್ ತಂಡ ದಾಳಿಮಾಡಿ ರೈಸ್ ಮಿಲ್ ಒಂದರಲ್ಲಿ 16 ಲಕ್ಷಕ್ಕೂ ಅಧಿಕ ಬೆಲೆಯ 600 ಕ್ವಿಂಟಾಲ್ ಅಕ್ಕಿಯನ್ನು ಪತ್ತೆಹಚ್ಚಿ, 6 ಲಾರಿಗಳು ಮೂರು ಟೆಂಪೋ ಗಳನ್ನು ವಶಕ್ಕೆ ತೆಗೆದುಕೊಂಡು ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿತ್ತು.

ಹಾಗೆಯೇ ಗದಗ ಜಿಲ್ಲೆಯಲ್ಲು ವಿವಿಧ ರೀತಿಯ ಸಾಮಾಜಿಕ ಯೋಜನೆಗಳಿಗಾಗಿ, ಉಚಿತ ಬಳಕೆಗೆ ಮೀಸಲಿಟ್ಟಿದ್ದ ಸರ್ಕಾರಿ ಸ್ವಾಮ್ಯದ 42 ಕ್ವಿಂಟಾಲ್ ಅಕ್ಕಿಯನ್ನು ಆಹಾರ ನಿರೀಕ್ಷಕರು ದಾಳಿ ನಡೆಸಿ ವಶಪಡಿಸಿಕೊಂಡಿದ್ದರು. ಹಲವರನ್ನು ಬಂಧಿಸಿದ್ದರು. 2020 ರ ಸೆಪ್ಟೆಂಬರ್ ತಿಂಗಳಲ್ಲಿ ಚಿಕ್ಕಬಳ್ಳಾಪುರ ತಾಲ್ಲೂಕಿನ ಕಂದವಾರ ಕೈಗಾರಿಕಾ ಅಭಿವೃದ್ಧಿ ಪ್ರದೇಶದಲ್ಲಿದ್ದ, ಸಪ್ತಗಿರಿ ಗ್ರಾಮೋದಯ ಅಕ್ಕಿ ಗಿರಣಿ ಮೇಲೆ ದಿಢೀರನೇ ದಾಳಿ ಮಾಡಿದ್ದ ಆಹಾರ ಮತ್ತು ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯ ಉಪನಿರ್ದೇಶಕಿ ಸವಿತಾ ಹಾಗೂ ತಂಡ, ಅಕ್ಕಿಗಿರಣಿಯ ಮುಂಬಾಗಿಲು ಮುಚ್ಚಿ ಅನ್ನಭಾಗ್ಯದ ಅಕ್ಕಿಯನ್ನು ರೀ ಪಾಲೀಷ್ ಮಾಡಿ ತಲಾ 25 ಕೆ.ಜಿ‌ ಯಂತೆ ‘ಮಯೂರ ಬ್ರಾಂಡ್’ ಹೆಸರಿನ ಮೂಟೆಗಳಲ್ಲಿ ಮಾರಾಟಕ್ಕೆ ಸಿದ್ದಗೊಳಿಸುತ್ತಿದ್ದಾಗ, ರೆಡ್ ಹ್ಯಾಂಡ್ ಆಗಿ ಹಿಡಿದಿದ್ದರು! ಒಟ್ಟು 183 ಚೀಲಗಳ 43 ಕ್ವಿಂಟಾಲ್ ಅಕ್ಕಿ ಮೂಟೆ ಗಳನ್ನು ಅಧಿಕಾರಿಗಳು ವಶಪಡಿಸಿಕೊಂಡು, ರೈಸ್ ಮಿಲ್ ಮಾಲೀಕ ವೇಣು ಗೋಪಾಲ್ ಮೇಲೆ ಪ್ರಕರಣ ದಾಖಲಿಸಿದ್ದರು. ಮೂರು ತಿಂಗಳ ಹಿಂದೆಯೂ ಇದೇ ರೈಸ್ ಮಿಲ್ ಮೇಲೆ ದಾಳಿ ನಡೆಸಿ 350 ಕ್ವಿಂಟಾಲ್ ಅಕ್ಕಿಯನ್ನು ಜಪ್ತಿ ಮಾಡಿ ಕೇಸು ದಾಖಲಿಸಿದ್ದರೂ ಈ ವ್ಯಕ್ತಿ ಬದಲಾಗಿರಲಿಲ್ಲ ವೆಂದರೆ ಈ ದಂಧೆಯ ಹಿಂದಿನ ಲಾಭ ಇನ್ನೆಷ್ಟಿರಬೇಕು. ಬೆಂಗಳೂರಿನ ಯಶವಂತಪುರ, ಸುಂಕದ ಕಟ್ಟೆಯ ಪಡಿತರ ಗೋಡೌನ್ ಗಳಲ್ಲಿ ವಿತರಣೆ ಮಾಡಬೇಕಿದ್ದ, ಅನ್ನಭಾಗ್ಯದ ಅಕ್ಕಿಮೂಟೆಗಳು ದೂರದ ಬಂಗಾರಪೇಟೆಯ ಖಾಸಗಿ ರೈಸ್ ಮಿಲ್ ನಲ್ಲಿ ಪತ್ತೆಯಾಗಿದ್ದವು! 2 ವರೆಕೋಟಿ ಮೌಲ್ಯದ 8497 ಕ್ವಿಂಟಾಲ್ ಅಕ್ಕಿಯನ್ನು ಪಿ.ಆರ್.ಎಸ್ ಆಗ್ರೋ ಟೆಕ್ ಮಾಲೀಕ ರಘುನಾಥ ಶೆಟ್ಟಿಯ ರೈಸ್ ಮಿಲ್ ನಿಂದ ಜಪ್ತಿ ಮಾಡಲಾಗಿತ್ತು! ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಯ ಜಂಟಿ ನಿರ್ದೇಶಕ ಡಾ. ಕೆ.ರಾಮೇಶ್ವರಪ್ಪ ದಾಳಿ ಮಾಡಿದಾಗ ಅವರಿಗೇ ಅಚ್ಚರಿ ಕಾದಿತ್ತು.

ತಮಿಳು ನಾಡು, ಕರ್ನಾಟಕ, ಆಂದ್ರ ಪ್ರದೇಶದ ಬಡವರ ಹೊಟ್ಟೆ ತುಂಬಿಸಬೇಕಿದ್ದ ಅನ್ನಭಾಗ್ಯ ಪಡಿತರ ಬಂಗಾರ ಪೇಟೆಯ ಮಿಲ್ ನಲ್ಲಿ ಪಾಲಿಷ್ ಆಗಿ ದುಬಾರಿ ಬೆಲೆಗೆ ಬಿಕರಿಯಾಗಲು ಅಣಿಯಾಗಿತ್ತು. ಇಂತಹ ಅಕ್ರಮಗಳು ಈಗ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಕದ್ದುಮುಚ್ಚಿ ನಿತ್ಯ ನಡೆಯುತ್ತಿವೆ. ಸರ್ಕಾರದ ಪಡಿತರ ಅನ್ನಭಾಗ್ಯದ ಅಕ್ಕಿ ಮೂಟೆಗಳನ್ನು ರೀ ಪಾಲೀಶ್ ಮಾಡಿ ಬೇರೆ ಬೇರೆ ನಕಲೀ ಬ್ರಾಂಡ್ ಹೆಸರಿನಲ್ಲಿ ಓಪನ್ ಮಾರ್ಕೆಟ್ ನಲ್ಲಿ ಮಾರುತ್ತಿರುವುದು ಮಾತ್ರ ಅಕ್ಷಮ್ಯ ಅಪರಾಧ. ಸಾರ್ವಜನಿಕರು ಕೂಡ ಹೀಗೆ ತಮಗೆ ಉಚಿತವಾಗಿ ನೀಡುವ ಅನ್ನಭಾಗ್ಯದ ಅಕ್ಕಿಯನ್ನು ಕಾಳಸಂತೆ ಕೋರರಿಗೆ ಹಣಕ್ಕಾಗಿ ಮಾರುವುದು ‘ಸಾರ್ವಜನಿಕ ಪಡಿತರ ವಿತರಣಾ ಪದ್ಧತಿ ನಿಯಂತ್ರಣ ಆದೇಶ-2016’ ಅನ್ವಯ ಅಪರಾಧವಾಗಿದೆ. ಅಂತಹ ವ್ಯಕ್ತಿಗಳ ರೇಷನ್ ಕಾರ್ಡ್ ಗಳನ್ನು 6 ತಿಂಗಳು ಕಾಲ ಅಮಾನತು ಮಾಡುವ ಅಧಿಕಾರ ಸರ್ಕಾರಕ್ಕಿದೆ. ರಾಜ್ಯದಲ್ಲಿ ಈಗ ಸುಮಾರು 20 ಸಾವಿರದಷ್ಟು ನ್ಯಾಯ ಬೆಲೆ ಅಂಗಡಿಗಳಿವೆ. 5 ಕೋಟಿಗೂ ಹೆಚ್ಚಿನ ಸಂಖ್ಯೆಯಲ್ಲಿರುವ ಪಡಿತರ ಫಲಾನುಭವಿಗಳ ಸಂಖ್ಯೆಯಲ್ಲಿ 3 ಮುಕ್ಕಾಲು ಕೋಟಿ ಬಿ. ಪಿ .ಎಲ್‌ ಕಾರ್ಡು ದಾರರೇ ಇದ್ದಾರೆ.

ಸರ್ಕಾರ ಬಡಜನರ ಹಸಿವು ನೀಗಿಸಲು ಪ್ರತಿ ತಿಂಗಳು ಜನರ ಬಳಿಗೆ ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ ಉಚಿತ ಅಕ್ಕಿಯನ್ನು ಒದಗಿಸುತ್ತಿದೆ. ಈ ಒಳಗಿನ ಪ್ರಕ್ರಿಯೆಯಲ್ಲಿ ಎಲ್ಲಿ ಭ್ರಷ್ಟಾಚಾರ ನಡೆದು ಅನ್ನಭಾಗ್ಯದ ಅಕ್ಕಿ ಮೂಟೆಗಳು ಕ್ವಿಂಟಾಲ್ ಗಟ್ಟಲೇ ಕಾಳಸಂತೆ ಕೋರರ ರೈಸ್ ಮಿಲ್ ಸೇರಿ, ಅಲ್ಲಿ ರೀ ಪಾಲೀಷ್ ಆಗಿ ಜನರಲ್ ಸ್ಟೋರ್ ಗಳಲ್ಲಿ ಮೂರು ಪಟ್ಟಿನ ಬೆಲೆಗೆ, ಇದೇ ಪಡಿತರ ಫಲಾನುಭವಿ ಬಡವರಿಗೇ ಮಾರಾಟವಾಗುತ್ತಿವೆ! ಶಿವಮೊಗ್ಗ, ಬೆಳಗಾವಿ, ಚಿಕ್ಕ ಮಗಳೂರು, ಧಾರವಾಡ, ಹುಬ್ಬಳ್ಳಿ, ಗದಗ, ಹಾವೇರಿ, ಉತ್ತರ ಕರ್ನಾಟಕದ ಕಡೆಯ ರೇಷನ್ ಅಂಗಡಿಗಳಲ್ಲಿ ಸಿಗುವ ಪಾಲಿಷ್ ಅಕ್ಕಿ ಅನ್ನಭಾಗ್ಯದ್ದೋ? ಅಥವಾ ಅಸಲೀ ಬ್ರಾಂಡೆಡ್ ಕಂಪನಿಯದ್ದೋ? ತಿಳಿಯದಂತಾಗಿದೆ! ಮೈಸೂರು, ಮಂಡ್ಯದ ರೈಸ್ ಮಿಲ್ ಸೇರುತ್ತಿರುವ ಕಾಳಸಂತೆಯ ಅನ್ನಭಾಗ್ಯದ ಅಕ್ಕಿ ಮೂಟೆಗಳು , ಬ್ರಾಂಡ್ ರೂಪ ಪಡೆದು ಬೀದಿಗೆ ಬರುತ್ತಿವೆ. ಗ್ರಾಮಾಂತರ ಪ್ರದೇಶದಲ್ಲಿ, ಗಡಿಭಾಗದಲ್ಲಿ ನುಗ್ಗಿ ಹೊರ ರಾಜ್ಯಗಳ ಅಂಗಡಿ ಸೇರುತ್ತಿರುವ ಕ್ವಿಂಟಾಲ್ ಗಟ್ಟಲೆ ಅನ್ನಭಾಗ್ಯದ ಅಕ್ಕಿ ಮೂಟೆಗಳನ್ನು ಈ ಕಾಳ ದಂಧೆಕೋರರು ಅದೆಲ್ಲಿಂದ ಕದ್ದು ತರುತ್ತಿದ್ದಾರೋ ತಿಳಿಯುತ್ತಿಲ್ಲ. ಅಂತ್ಯೋದಯ ಕಾರ್ಡಿನ 35 ಕೆ.ಜಿ. ಅಕ್ಕಿ ಬಿ.ಪಿ.ಎಲ್.ಕಾರ್ಡಿನ ತಲಾ 5 ಕೆ.ಜಿ‌.‌ಅಕ್ಕಿಯ ಲೆಕ್ಕ, ನ್ಯಾಯದ ಬೆಲೆಯ ಸರ್ಕಾರಿ ಸೇವೆಯೂ ಅಕ್ಕಿ ಲೂಟಿಯ ಕಳ್ಳರಿಂದ ಹಳ್ಳಹಿಡಿಯುತ್ತಿದೆ. ಬಡವರಿಗೆ ಬಾಣಂತಿಯರಿಗೆ ಈಸಿಗಬೇಕಿದ್ದ ಪಡಿತರ ಅನ್ನಭಾಗ್ಯ ಅಕ್ಕಿಯನ್ನು ಈ ‘ಅಕ್ಕಿ ಮಾಫಿಯಾ’ ದ ಖದೀಮರು ತಮ್ಮದೇ ಬ್ರಾಂಡಿನ ಗೋಣಿ ಚೀಲಕ್ಕೆ, ಬಣ್ಣ ಬಣ್ಣದ ಬ್ಯಾಂಕುಗಳಿಗೆ ಶಿಫ್ಟ್ ಮಾಡಿ ಸರ್ಕಾರದ ಕಣ್ಣಿಗೆ ಹಾಡುಹಗಲೇ ಮಣ್ಣೆರಚುತಿದ್ದಾರೆ. ಕೋಟ್ಯಂತರ ರೂಪಾಯಿ ಹಣ ಖರ್ಚು ಮಾಡಿ ಸರ್ಕಾರ ಬಡಜನರ ಹೊಟ್ಟೆ ತುಂಬಿಸಲು ಯೋಜನೆ ರೂಪಿಸಿದ್ದರೇ, ಈ ಅನ್ನಭಾಗ್ಯದ ಅಕ್ಕಿ ಮಾರಾಟ ಜಾಲದ ರೂವಾರಿಗಳು ಅಕ್ರಮ ಅಕ್ಕಿ ದಂಧೆ ನಡೆಸಿ ಹಣ ಮಾಡುವುದರಲ್ಲಿ ಬ್ಯುಸಿ ಆಗಿದ್ದಾರೆ. ಈ ಕೊರೋನಾ ವೈರಸ್ ಗಳ ಹಾವಳಿಯಿಂದ ಜನರು ತತ್ತರಿಸಿ ಹೋಗಿದ್ದಾರೆ. ದೇಶದ ಜನರು ಲಾಕ್ ಡೌನ್ ನಿಂದ ಮನೆಸೇರಿ ಆಹಾರ ಪದಾರ್ಥಗಳನ್ನುಕೊಳ್ಳುವ ಶಕ್ತಿಯಿಲ್ಲದೇ, ಆರ್ಥಿಕ ಸಂಕಷ್ಟ ಗಳಿಂದ ಬಳಲುತ್ತಿರುವಾಗಲೇ, ಈ ಅಕ್ಕಿ ಲೂಟಿಯ ಕಳ್ಳರ ಮಾಫಿಯಾ ಜಾಲ ತಲೆಎತ್ತಿ, ಹಸಿದವರ ತಟ್ಟೆಗೇ ಕೈಹಾಕಿ ಕರುಣೆಯಿಲ್ಲದೆ ದೋಚುತ್ತಿದೆ! ಮನುಷ್ಯತ್ವ ಮರೆತ ಈ ಆಧುನಿಕ ಮಾನವನ ಮೆದುಳಿನಲ್ಲಿ ಅದಿನ್ನೇನು ತುಂಬಿಕೊಂಡಿದೆಯೋ ಬಲ್ಲವರಾರು?

ಈ ಉಚಿತ ಅನ್ನಭಾಗ್ಯ ಅಕ್ಕಿ ಸಾಗಾಣಿಕೆ, ಸಂಗ್ರಹ, ಮಾರಾಟ ಜಾಲವನ್ನು ಬಗ್ಗು ಬಡಿಯಬೇಕೆಂದು ದೂರುಗಳು ಕೇಳಿ ಬರುತ್ತಿವೆ. ಇದೇ ರೀತಿ ಅಕ್ರಮವಾಗಿ ಪಡಿತರ ಮಾರಾಟ ಮಾಡುತ್ತಿದ್ದ ಮಾನ್ವಿ ತಾಲೂಕಿನ ವೀರಭದ್ರಪ್ಪ ಗೌಡ ಅಲ್ಲಾಳ್ ಎಂಬಾತ ಈ ಅಕ್ಕಿ ಮಾರಾಟ ಜಾಲದ ವಿರುದ್ಧ ಧ್ವನಿ ಎತ್ತಿದ್ದ ಹೋರಾಟಗಾರರು, ಪತ್ರಕರ್ತರು ಮೇಲೆ ದಾಳಿ ಮಾಡಿಸಿ ಅಕ್ರಮ ತಡೆಯಲು ಬಂದವರ ಮೇಲೆಯೇ ಪೊಲೀಸರಿಂದ ಪ್ರಕರಣ ದಾಖಲಿಸಿದ್ದರು. ಆಗ ‘ಪಡಿತರ ಅಕ್ರಮ ಮಾರಾಟಗಾರರನ್ನು ಗಡಿಪಾರು ಮಾಡಿ!’ ಎಂಬ ಪ್ರತಿಭಟನೆಯ ಆಕ್ರೋಶದ ಕೂಗೆದ್ದಿತ್ತು. ಕಲಬುರ್ಗಿ ನಗರವೊಂದರಲ್ಲೇ 2021 ರಲ್ಲಿ ಒಂದೇ ತಿಂಗಳಲ್ಲಿ ಐದಕ್ಕೂ ಹೆಚ್ಚಿನ ಅಕ್ರಮ ಪಡಿತರ ಅಕ್ಕಿ ಮಾರಾಟ ಪ್ರಕರಣ ಪತ್ತೆಯಾಗಿ 16 ಕ್ಕೂ ಹೆಚ್ಚಿನ ಅಕ್ರಮ ದಾಸ್ತಾನು ಗೋಡೌನ್ ಸೀಜ್ ಮಾಡಲಾಗಿತ್ತೆಂದರೇ ರಾಜ್ಯದ ನಾನಾ ಕಡೆ ಎಷ್ಟು ಪ್ರಕರಣಗಳು ವರದಿಯಾಗಿರಬಹುದು ನೀವೇ ಊಹಿಸಿಕೊಳ್ಳಿ. ರಾಜ್ಯಾದ್ಯಂತ 25 ಕ್ಕೂ ಹೆಚ್ಚು ಅಕ್ಕಿ-ಗೋದಿ ಕಾಳಸಂತೆ ಮಾರಾಟ ಪ್ರಕರಣಗಳು ಇತ್ತೀಚೆಗೆ ಒಂದೇ ವರ್ಷದಲ್ಲಿ, ಈ ಕೋವಿಡ್ ಕಾಲದಲ್ಲಿ ಪತ್ತೆಯಾಗಿವೆ! ಪ್ರಕರಣ ಗಳಿಂದ ಬಚಾವಾಗಲು ಪ್ರಬಾವಿಗಳಿಂದ ತನಿಖಾಧಿಕಾರಿ ಪೊಲೀಸರಿಗೆ, ಒತ್ತಡ ಹಾಕಿಸಿರುವ ಘಟನೆಗಳಿದ್ದರೂ, ಹೊರ ರಾಜ್ಯಗಳಿಗೂ ನುಗ್ಗಿ ದಾಳಿಮಾಡಿ ಕರ್ನಾಟಕದ ನಮ್ಮ ಪೊಲೀಸರು ಜಾಲದ ಕಿಂಗ್ ಪಿನ್ ಗಳಿಗಾಗಿ ಹುಡುಕುತ್ತಿರುವುದು ಶ್ಲಾಘನೀಯ. ಕೇಂದ್ರ ಸರ್ಕಾರದ ಉಗ್ರಾಣ ಗಳಿಂದ ರಾಜ್ಯ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ಗೋಡೌನ್ ಗಳಿಗೆ ತಲುಪುವ ಅಕ್ಕಿ, ಅಲ್ಲಿಂದ ಪಡಿತರ ನ್ಯಾಯ ಬೆಲೆ ಅಂಗಡಿಗಳಿಗೆ ಹೋಗದೇ, ಖಾಸಗಿ ರೈಸ್ ಮಿಲ್ ಗಳಿಗೆ ಹೋಗುತ್ತಿರುವುದರ ಹಿಂದೆ ಇರುವವರಾರು? ಈ ಅಕ್ಕಿ ಲೂಟಿಯ ಸ್ಕೀಂ ನ ಹಿದಿರುವ ಸರ್ಕಾರಿ ಹೆಗ್ಗಣಗಳು ಯಾವುವು ಎಂಬುದು ಪತ್ತೆಯಾಗಬೇಕಿದೆ. ಈ ದಂಧೆಯಲ್ಲಿ ಈಗ ಎಲ್ಲಾ ವರ್ಗದ ಜನರು ಸರ್ಕಾರಿ ಅಧಿಕಾರಿಗಳು, ಕೆಲವು ಭ್ರಷ್ಟ ಪೊಲೀಸ್ ಅಧಿಕಾರಿಗಳೂ ಶಾಮೀಲಾಗಿರುವ ಶಂಕೆಯೂ ಇದೆ. ಗೌಪ್ಯತೆಯೊಂದಿಗೆ ಹಗಲು ರಾತ್ರಿ ಎನ್ನದೆ ನಡೆಯುತ್ತಿರುವ ಈ ಮೋಸದ ಜಾಲವನ್ನು ಸರ್ಕಾರ ಈಗ ತೀವ್ರಾಶಕ್ತಿಯಿಂದ ಬೇದಿಸಬೇಕಿದೆ. ಕೆಲವು ಕಡೆ ಜನರೇ ತಪ್ಪು ಮಾಡುತ್ತಿದ್ದರೇ ಅಕ್ಕಿ ಮಾರಾಟ ಮಾಡದಂತೆ ಜನರಿಗೆ ನಾವೇ ಜಾಗೃತಿ ಮೂಡಿಸಬೇಕಿದೆ.

ಅಥವಾ ಕಳಪೆ ಗುಣಮಟ್ಟದ ಅಕ್ಕಿಯನ್ನು ಜನರಿಗೆ ಒದಗಿಸುವುದನ್ನು ನಿಲ್ಲಿಸುವುದೇ ಸೂಕ್ತವಾಗಿದೆ. ಒಳ್ಳೆಯ ಕ್ಲಾಲಿಟಿಯ ಅಕ್ಕಿಯನ್ನು ಜನರಿಗೆ ಸರ್ಕಾರ ಕೊಟ್ಟರೇ ಅಕ್ಕಿ ಅವರು ಮಾರುವುದನ್ನು ನಿಲ್ಲಿಸಲೂ ಬಹುದು. ಪಡಿತರ ಅಕ್ಕಿ ಸಾಗಾಣಿಕೆ ಪ್ರಕರಣದಲ್ಲಿ ಕೇವಲ ಲಾರಿ ಚಾಲಕರನ್ನು ಬಂಧಿಸಿ ಕೇಸ್ ಮುಚ್ಚಿ ಹಾಕುವುದರಿಂದ ಏನೂ ಪ್ರಯೋಜನವಿಲ್ಲ. ಈ ಜಾಲದ ಹಿಂದಿರುವ ಕಾಳಸಂತೆಯ ದುರುಳರನ್ನು ಪತ್ತೆ ಹಚ್ಚಿ ಕಾನೂನಿನ ಕುಣಿಕೆಯೊಳಗೆ ತಂದು ಶಿಕ್ಷಿಸಿದರೆ ಮಾತ್ರ ಬಡವರ ಪಾಲಿನ ಅನ್ನಭಾಗ್ಯದ ಅಕ್ಕಿ ಬಡವರ ಹೊಟ್ಟೆ ಸೇರುತ್ತದೆ.

 

 

Girl in a jacket
error: Content is protected !!