ನಿರ್ಮಾಪಕ, ನಿರ್ದೇಶಕ, ನಟ ವಾದಿರಾಜ್
ಚಲನಚಿತ್ರ ನಿರ್ಮಾಪಕ, ನಿರ್ದೇಶಕ, ನಟ ವಾದಿರಾಜ್ ಉಡುಪಿಯ ಬಳಿ ಫಣಿಯಾಡು ಎಂಬಲ್ಲಿ ೧೯೨೭ರ ಜನವರಿ ೩ರಂದು ಜನಿಸಿದರು. ತಂದೆ ಶ್ರೀನಿವಾಸ ಫಣಿಯಾಡಿ, ತಾಯಿ ಭಾರತಿ, ತಂದೆ ಸ್ವಾತಂತ್ರ ಹೋರಾಟಗಾರರು ಹಾಗೂ ನಾಟಕ ರಚನೆಕಾರರು. ಬಾಲ್ಯವನ್ನು ತಮ್ಮ ಊರಿನಲ್ಲಿಯೇ ಕಳೆದ ವಾದಿರಾಜ್ ಮದರಾಸಿಗೆ ತೆರಳಿದರು. ಅಲ್ಲಿ ಕೊಂಚ ಕಾಲ ಇದ್ದು ಪುನಃ ತನ್ನೂರಿಗ ಬಂದು ತಮ್ಮ ತಂದೆ ರಚಿಸಿದ್ದ ಕೆಲವು ನಾಟಕಗಳಲ್ಲಿ ಅಭಿನಯಿಸುವ (ಮೂಲಕ ಕಲಾರಂಗಕ್ಕೆ ಕಾಲಿರಿಸಿದರು.೧೯೫೬ರಲ್ಲಿ ತೆರೆಗೆ ಬಂದ ’ಕೋಕಿಲವಾಣಿ’ ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದರು. ನಟರಾಜನ್ ನಿರ್ದೇಶಿಸಿದ ಈ ಚಿತ್ರದಲ್ಲಿ ಅಶ್ವತ್ಥ, ಬಿ.ಸರೋಜಾದೇವಿ ಅಭಿನಯಿಸಿದ್ದರು. ನಂತರ ಹಿಂದಿ ಪ್ರಚಾರ ಸಂಸ್ಥೆಯೊಂದಕ್ಕೆ ಸೇರಿಕೊಂಡರು. ಶ್ರೀಕೃಷ್ಣಗಾರುಡಿ (೧೯೫೮), ಧರ್ಮವಿಜಯ (೧೯೫೯), ಸ್ವರ್ಣಗೌರಿ (೧೯೬೨) ಮುಂತಾದ ಚಿತ್ರಗಳಲ್ಲಿ ಅಭಿನಯಿಸುವ ಮೂಲಕ ಕನ್ನಡ ಚಲನಚಿತ್ರಗಳಲ್ಲಿ ಗುರುತಿಸಿಕೊಂಡರು.
ವಾದಿರಾಜ್ ಅವರ ಸಹೋದರಿ ಹರಿಣಿ ಆ ವೇಳೆಗೆ ಪ್ರಖ್ಯಾತ ತಾರೆಯಾಗಿದ್ದರು. ಸ್ವಂತ ಚಿತ್ರ ನಿರ್ಮಿಸುವ ಸಂಕಲ್ಪ ಮಾಡಿ ಸಹೋದರ ಜವಹರ್ ಹಾಗೂ ಹರಿಣಿ ಜೊತೆ ತಂದೆ ಶ್ರೀನಿವಾಸ ಫಣಿಯಾಡಿ ತಾಯಿ ಭಾರತಿಯವರ ಹೆಸರುಗಳನ್ನು ಸೇರಿಸಿ ಶ್ರೀ ಭಾರತಿ ಚಿತ್ರ ಸಂಸ್ಥೆಯನ್ನು ರೂಪಿಸಿದರು. ಚಿತ್ರರಂಗದಲ್ಲಿ ಹೆಸರು ಮಾಡಿರುವ ವಿ.ಶಾಂತರಾಮ್ ಅವರ ಚಿತ್ರವೊಂದರ ಸ್ಪೂರ್ತಿಯಿಂದ ವಾದಿರಾಜ್ ತಾವೇ ’ನಂದಾದೀಪ’ ಚಿತ್ರದ ಕಥೆ ಬರೆದು, ಚಿತ್ರ ನಿರ್ಮಿಸಿದರು. ವಾದಿರಾಜ್ ನಿರ್ಮಾಣದ ಮೊದಲ ಚಿತ್ರ ಇದು. ಯುವತಿಯೊಬ್ಬಳ ಪ್ರೀತಿ, ವಾತ್ಸಲ್ಯ, ಅನುರಾಗ, ತ್ಯಾಗಗಳ ಸಮ್ಮಿಲನದ ’ನಂದಾದೀಪ’ ಚಿತ್ರವನ್ನು ಎಂ.ಆರ್.ವಿಠಲ್ ನಿರ್ದೇಶಿಸಿದರು. ವಿಶೇಷವೆಂದರೆ ಎಂ.ಆರ್.ವಿಠಲ್ ಅವರು ನಿರ್ದೇಶಿಸಿದ ಮೊದಲ ಚಿತ್ರವೂ ಇದಾಗಿತ್ತು. ಈ ಚಿತ್ರ ಅತ್ಯಂತ ಜನಪ್ರಿಯಗೊಂಡಿತಲ್ಲದೆ ರಾಷ್ಟ್ರಪ್ರಶಸ್ತಿ ಗಳಿಸಿತು.
’ಮಧ್ಯ ದಾರಿಯಲ್ಲಿ’ ನಾಟಕವನ್ನಾಧರಿಸಿದ ’ನವಜೀವನ’ (೧೯೬೪) ಇವರ ಮುಂದಿನ ಚಿತ್ರ ಸಂಕಲನಕಾರರಾಗಿದ್ದ ಪಿ.ಎಸ್. ರಾವ್ ಈ ಚಿತ್ರದ ಮೂಲಕ ನಿರ್ದೇಶಕರಾದರು. ಈ ಚಿತ್ರಕ್ಕೆ ರಾಷ್ಟ್ರಪ್ರಶಸ್ತಿ ಲಭಿಸಿತು. ಇವರು ನಿರ್ಮಿಸಿದ ಕಿವುಡ ಮೂಗರ ಸಮಸ್ಯೆಯನ್ನಾಧರಿಸಿದ ’ನಾಂದಿ’ (೧೯೬೪) ವಿದೇಶದಲ್ಲಿ ಪ್ರದರ್ಶನಗೊಂಡ ಮೊದಲ ಕನ್ನಡ ಚಿತ್ರವೆಂಬ ದಾಖಲೆಗೆ ಪಾತ್ರವಾಯಿತು. ರಾಜಕುಮಾರ್ ಮನೋಜ್ಞ ಅಭಿನಯದ ಚಿತ್ರ ಇದಾಯಿತು.
ಮೊದಲ ಮೂರು ಚಿತ್ರಗಳಿಗೆ ಬೆಂಬಲ ನೀಡಿದ್ದ ವಿಜಯಾ ಹಂಚಿಕಾ ಸಂಸ್ಥೆಯ ವಿಶ್ವಾಸದಿಂದಾಗಿ ತಮ್ಮ ಸಂಸ್ಥೆಗೆ ’ವಿಜಯ ಭಾರತಿ ಚಿತ್ರ’ ಎಂದು ವಾದಿರಾಜ್ ನಾಮಕರಣ ಮಾಡಿದರು. ಈ ಸಂಸ್ಥೆಯಲ್ಲಿ ಪ್ರೇಮಕ್ಕೂ ಪರ್ಮಿಟ್ಟೆ (೧೯೬೭), ನಮ್ಮ ಮಕ್ಕಳು (೧೯೬೯), ಸೀತಾ (೧೯೭೦), ನಾ ಮೆಚ್ಚಿದ ಹುಡುಗ (೧೯೭೨), ಸೀತೆಯಲ್ಲ ಸಾವಿತ್ರಿ (೧೯೭೩), ನಮ್ಮಮ್ಮನ ಸೊಸೆ (೧೯೮೦) ಮುಂತಾದ ಚಿತ್ರಗಳನ್ನು ನಿರ್ಮಿಸಿದರು.
’ನಮ್ಮ ಮಕ್ಕಳು’ ಚಿತ್ರದಿಂದ ಚಂದ್ರಶೇಖರ್ ಬಾಲನಟರಾಗಿ ತೆರೆಗೆ ಪರಿಚಯಗೊಂಡರು. ’ಪ್ರೇಮಕ್ಕೂ ಪರ್ಮಿಟ್ಟಿ’ ಚಿತ್ರವನ್ನು ಆರ್.ನಾಗೇಂದ್ರರಾವ್ ನಿರ್ದೇಶಿಸಿದರೆ ವಾದಿರಾಜ್ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದರು. ’ಸೀತಾ’ ಚಿತ್ರವನ್ನು ನಿರ್ದೇಶಿಸುವ ಮೂಲಕ ವಾದಿರಾಜ್ ಚಿತ್ರ ನಿರ್ದೇಶಕರಾಗಿಯೂ ಹೆಸರು ಮಾಡಿದರು. ’ನಮ್ಮಮ್ಮನ ಸೊಸೆ’ ಚಿತ್ರದ ಮೂಲಕ ಕೋಕಿಲಾ ಮೋಹನ್ ಕನ್ನಡ ಚಿತ್ರದ ನಾಯಕ ನಟರಾಗಿ ಪರಿಚಿತಗೊಂಡರು. ಮಾಸ್ತಿಯವರ ’ಕಾಕನಕೋಟೆ’ ಚಲನಚಿತ್ರವಾಗಿ ಸಿದ್ಧಗೊಳ್ಳಲು ವಾದಿರಾಜ್ ಅವರ ಸಹಾಯ ಸಹಕಾರವಿದೆ. ’ಸೀತೆಯಲ್ಲ ಸಾವಿತ್ರಿ’ ಚಿತ್ರವನ್ನು ವಾದಿರಾಜ್ ನಿರ್ದೇಶಿಸಿದರು. ’ನಮ್ಮಮ್ಮನ ಸೊಸೆ’ ಚಿತ್ರವನ್ನು ವಾದಿರಾಜ್-ಜವಹರ್ ಜಂಟಿಯಾಗಿ ನಿರ್ದೇಶಿಸಿದರು. ೧೯೭೯ರಲ್ಲಿ ತೆರೆಗೆ ಬಂದ ’ದಂಗೆಯೆದ್ದ ಮಕ್ಕಳು’ ಮಕ್ಕಳ ಚಿತ್ರವನ್ನು ವಾದಿರಾಜ್ ನಿರ್ದೇಶಿಸಿದರು. ಈ ಚಿತ್ರಕ್ಕೆ ಭಾರತ ಸರ್ಕಾರ ರಜತ ಕಮಲ ಹಾಗೂ ನಗದು ಬಹುಮಾನದ ಪ್ರಶಸ್ತಿ ನೀಡಿತು. ೧೯೮೫ರಲ್ಲಿ ತೆರೆಗೆ ಬಂದ ರಾಜಕುಮಾರ್ ಅಭಿನಯದ ’ಅದೇ ಕಣ್ಣು’ ಚಿತ್ರವನ್ನು ವಾದಿರಾಜ್ ಸಹೋದರರು ನಿರ್ದೇಶಿಸಿದರು.
ಸ್ವಂತ ನಿರ್ಮಾಣದ ಚಿತ್ರಗಳೇ ಅಲ್ಲದೇ ಹಲವಾರು ಚಿತ್ರಗಳಲ್ಲಿ ಅಭಿನಯಿಸಿರುವ ವಾದಿರಾಜ್ ಉತ್ತಮ ನಟರೂ ಹೌದು. ದೂರದರ್ಶನ ಚಿತ್ರ ಮಾಲಿಕೆಗಳಲ್ಲೂ ಪಾತ್ರ ಮಾಡಿರುವ ವಾದಿರಾಜ್ ಆಕಾರದಲ್ಲಿ ವಾಮನನಾದರೂ ವಿಚಾರದಲ್ಲಿ ವಿರಾಟ ಚಲನಚಿತ್ರ ಕ್ಷೇತ್ರಕ್ಕೆ ಇವರು ಸಲ್ಲಿಸಿದ ಅಪರಿಮಿತ ಸೇವೆಗಾಗಿ ರಾಜ್ಯ ಸರ್ಕಾರ ೧೯೯೮-೯೯ನೇ ಸಾಲಿನಲ್ಲಿ ಡಾ.ರಾಜಕುಮಾರ್ ಪ್ರಶಸ್ತಿ ನೀಡಿ ಪುರಸ್ಕರಿಸಿತು. ಇನ್ನೊಂದು ಮುಖ’ ಇವರ ಮತ್ತೊಂದು ಮಕ್ಕಳ ಚಿತ್ರ. ತಮ್ಮ ೭೭ನೆಯ ವಯಸ್ಸಿನಲ್ಲಿ ವಾದಿರಾಜ್ ೨೦೦೪ರ ಫೆಬ್ರವರಿ ೬ರಂದು ನಿಧನರಾದರು.