ಬೆಂಗಳೂರು, ಮೇ 29: ಕೋವಿಡ್-19 ದಿಂದ ಹೆತ್ತವರನ್ನು ಕಳೆದುಕೊಂಡ ಮಕ್ಕಳಿಗೆ ನೆರವಿಗಾಗಿ ಬಾಲ ಸೇವಾ ಯೋಜನೆಯನ್ನು ರಾಜ್ಯ ಸರ್ಕಾರ ರೂಪಿಸಿದೆ.
ಈ ಕುರಿತಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಘೋಷಣೆ ಮಾಡಿದ್ದಾರೆ.ಈ ಯೋಜನೆಯಡಿ, ಕೊರೊನಾ ಕಾರಣವಾಗಿ ಪೋಷಕರನ್ನು ಕಳೆದುಕೊಂಡಿರುವ ಮಕ್ಕಳಿಗೆ ಪ್ರತಿ ತಿಂಗಳು 3500 ರೂ ಹಾಗೂ ಹಲವು ಸೌಲಭ್ಯಗಳನ್ನು ಒದಗಿಸಲಾಗುವುದು ಎಂದು ತಿಳಿಸಿದರು.
ಕೇಂದ್ರ ಸರ್ಕಾರದ ಸಲಹೆ ಮೇರೆಗೆ, ಅನಾಥ ಮಕ್ಕಳಿಗೆ ರಾಜ್ಯ ಸರ್ಕಾರದಿಂದ ನೆರವು ನೀಡಲಾಗುತ್ತಿದೆ. ಮಕ್ಕಳ ಭವಿಷ್ಯವನ್ನು ಉತ್ತಮವಾಗಿ ರೂಪಿಸುವ ನಿಟ್ಟಿನಲ್ಲಿ ಹಲವು ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಯಡಿಯೂರಪ್ಪ ತಿಳಿಸಿದರು.
ವಿಸ್ತೃತ ಕುಟುಂಬದ ಆಸರೆಯಿಲ್ಲದ, 10 ವರ್ಷದೊಳಗಿನವರಾಗಿದ್ದು, ಕೋವಿಡ್ ನಿಂದಾಗಿ ಅನಾಥರಾಗಿರುವ ಮಕ್ಕಳ ಪೋಷಣೆ ಮತ್ತು ಅವರಿಗೆ ಉತ್ತಮ ಶಿಕ್ಷಣ ಒದಗಿಸುವ ದೃಷ್ಟಿಯಿಂದ ಅಂತಹ ಮಕ್ಕಳನ್ನು ಸರ್ಕಾರಿ ಸ್ವಾಮ್ಯದ ಮಾದರಿ ವಸತಿ ಶಾಲೆಗಳಲ್ಲಿ ದಾಖಲು ಮಾಡಿಕೊಳ್ಳಲಾಗುವುದು. 10ನೇ ತರಗತಿ ಪೂರೈಸಿದ ಮಕ್ಕಳಿಗೆ ಉಚಿತ ಲ್ಯಾಪ್ ಟಾಪ್ ನೀಡಲಾಗುವುದು ಎಂದು ಹೇಳಿದರು.