ಅಮಿತ್ ಶಾ ಬೇಟಿಯಾಗಲಿರುವ ಶ್ರೀರಾಮುಲು?
by ಕೆಂಧೂಳಿ
ಬೆಂಗಳೂರು, ಜ, ೨೯- ಪಕ್ಷ ತೊರೆಯಲು ಮುಂದಾಗಿರುವ ಮಾಜಿ ಸಚಿವ ಶ್ರೀರಾಮುಲು ಅವರಿಗೆ ಕೇಂದ್ರ ಗೃಹಸಚಿವ ಅಮಿತ್ ಶಾ ದೂರವಾಣಿ ಕರೆ ಮಾಡಿ ಸೋಮವಾರ ಬೇಟಿ ಮಾಡುವಂತೆ ತಿಳಿಸಿದ್ದಾರೆ ಎನ್ನುವ ಮಾಹಿತಿಗಳು ಲಭ್ಯವಾಗಿವೆ.
ಮಂಗಳವಾರ ಅಜ್ಞಾತ ಸ್ಥಳದಲ್ಲಿದ್ದ ಶ್ರೀರಾಮುಲುಗೆ ಈ ದೂರವಾಣಿ ಕರೆ ಬಂದಿದ್ದು ಸದ್ಯಕ್ಕೆ ಯಾವುದೇ ದುಡಿಕಿನ ನಿರ್ಧಾರ ಕೈಗೊಳ್ಳಬೇಡಿ ನನ್ನ ಬಂದು ಕಾಣಿ ಎಂದಿದ್ದಾರೆ ಹಾಗಾಗಿ ಸೋಮವಾರ ಶ್ರೀರಾಮಲು ದೆಹಲಿಗೆ ತೆರಳಿ ಅಮಿತ್ ಶಾ ಅವರನ್ನು ಬೇಟಿಯಾಗಲಿದ್ದಾರೆ ಎಂದು ಅವರ ಆಪ್ತ ಮೂಲಗಳು ತಿಳಿಸಿವೆ.
ಈಗಾಗಲೇ ಮಾಜಿ ಸಚಿವ ಶ್ರೀರಾಮುಲು ಅವರು ಕೋರ್ ಕಮಿಟಿ ಸಭೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಹಾಗೂ ಮಾಜಿ ಸಚಿವ ಜನಾರ್ದನ ರೆಡ್ಡಿ ವಿರುದ್ಧ ಸಿಡಿದೆದ್ದಿದ್ದರು. ಇದೀಗ ಶ್ರೀರಾಮುಲುಗೆ ಅಮಿತ್ ಶಾ ಕರೆ ಮಾಡಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಅಜ್ಞಾತ ಸ್ಥಳದಲ್ಲಿ ಶ್ರೀರಾಮುಲು ಅವರಿಗೆ ಕೇಂದ್ರ ಗೃಹಸಚಿವ ಅಮಿತ್ ಶಾ ಕರೆ ಮಾಡಿ ಈ ಸೋಮವಾರವೇ ದೆಹಲಿಗೆ ಬರುವಂತೆ ಸೂಚನೆ ನೀಡಿದ್ದಾರೆ. ಸೋಮವಾರದಿಂದ ಸಂಸತ್ ಬಜೆಟ್ ಅಧಿವೇಶನ ಪ್ರಾರಂಭವಾಗಲಿದೆ. ಈ ಅಧಿವೇಶನದ ಸಂದರ್ಭದಲ್ಲಿ ಭೇಟಿಯಾಗಿ, ಚರ್ಚೆ ಮಾಡಲು ಅಮಿತ್ ಶಾ ನಿರ್ಧಾರ ಮಾಡಿದ್ದಾರೆ. ಈ ವೇಳೆ ಅಮಿತ್ ಶಾ ಜೊತೆಗಿನ ಶ್ರೀರಾಮಲು ಭೇಟಿ ಭಾರೀ ಮಹತ್ವ ಪಡೆದುಕೊಂಡಿದೆ ಎಂದು ಹೇಳಲಾಗಿದೆ. ಇನ್ನೂ ಸಂಡೂರು ಉಪಚುನಾವಣೆ ಸಂದರ್ಭದಲ್ಲಿ ನಾನು ಕೆಲಸ ಮಾಡಿದ್ದೇನೆ ಎಂದು ಮಾಜಿ ಸಚಿವ ಜನಾರ್ದನ ರೆಡ್ಡಿ, ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಹಾಗೂ ಮಾಜಿ ಸಿಎಂ ಯಡಿಯೂರಪ್ಪ ಮೇಲೂ ಶ್ರೀರಾಮುಲು ಕೆಂಡಕಾರಿದ್ದಾರೆ.
ಕಳೆದ ವಾರ ಬಿಜೆಪಿ ರಾಜ್ಯ ಉಸ್ತುವಾರಿ ರಾಧಾ ಮೋಹನದಾಸ್ ಅವರ ನೇತೃತ್ವದಲ್ಲಿ ಬಿಜೆಪಿ ಕೋರ್ ಕಮಿಟಿ ಸಭೆ ನಡೆದಿತ್ತು. ಈ ಸಭೆಯಲ್ಲಿ ಸಂಡೂರು ಉಪಚುನಾವಣೆಯ ಚರ್ಚೆ ಬಂದಾಗ ರಾಧಾ ಮೋಹದಾಸ್ ಅಗರವಾಲ್ ಅವರು ಬಂಗಾರು ಹನುಮಂತು ಸೋಲಿಗೆ ಮಾಜಿ ಸಚಿವ ಶ್ರೀರಾಮುಲು ಕಾರಣ ಎಂದು ಅವರನ್ನು ತರಾಟೆಗೆ ತೆಗೆದುಕೊಂಡಿದ್ದರು. ಹೀಗಾಗಿ ಇದು ಶ್ರೀರಾಮುಲು ಅಸಮಾಧಾನಕ್ಕೆ ಕಾರಣವಾಗಿತ್ತು. ಸಂಡೂರು ಚುನಾವಣೆಯ ಬಳಿಕ ಶ್ರೀರಾಮುಲು ವಿರುದ್ಧ ಬಿಜೆಪಿ ಅಭ್ಯರ್ಥಿಯಾಗಿದ್ದ ಬಂಗಾರು ಹನುಮಂತು ದೂರು ನೀಡಿದ್ದರು .ಇನ್ನು ಆ ಚುನಾವಣೆಯಲ್ಲಿ ಬಿಜೆಪಿ ಗೆಲುವಿಗೆ ನಾಯಕರ ಶ್ರಮ ಸಾಕಾಗಿಲ್ಲ ಎಂದು ಶ್ರೀರಾಮುಲು ಅವರನ್ನು ಸೇರಿಸಿ ಬೇಸರ ವ್ಯಕ್ತಪಡಿಸಿದ್ದಾರೆ. ಎಲ್ಲಾ ಈ ಬೆಳವಣೆಗೆಯ ಮಧ್ಯ ಶ್ರೀರಾಮುಲು ಪಕ್ಷ ಬಿಡುವ ಮಾತನಾಡಿದ್ದಾರೆ. ಅಲ್ಲದೇ ನನ್ನ ಮುಗಿಸಲು ಜನಾರ್ದನ ರೆಡ್ಡಿ ಪ್ರಯತ್ನ ನಡೆಸಿದ್ದಾರೆ ಎಂದು ಶ್ರೀರಾಮುಲು ಆರೋಪಿಸಿದ್ದಾರೆ. ಮಾಜಿ ಸಚಿವ ಜನಾರ್ದನ ರೆಡ್ಡಿ ನನ್ನನ್ನು ರಾಜಕೀಯವಾಗಿ ಮುಗಿಸಲು ಯತ್ನಿಸುತ್ತಿದ್ದಾರೆ. ಈ ವಿಚಾರವನ್ನು ರಾಜ್ಯಾಧ್ಯಕರಿಗೂ ತಿಳಿಸಿದ್ದೇನೆ. ನಾನು ಕೆಲಸ ಮಾಡಿಲ್ಲ ಎಂದು ಜನಾರ್ದನರೆಡ್ಡಿ ಹೇಳರೋದು ಸ್ಪಷ್ಟವಾಗಿದೆ. ಜನಾರ್ದನ ರೆಡ್ಡಿ ನನ್ನನ್ನು ರಾಜಕೀಯವಾಗಿ ಮುಗಿಸಲು ಯತ್ನಿಸುತ್ತಿದ್ದಾರೆ. ಜನಾರ್ದನ ರೆಡ್ಡಿ ಮಾತು ಕೇಳಿ ನನ್ನ ಬಗ್ಗೆ ರಾಧಾಮೋಹನ್ ದಾಸ್ ಲಘುವಾಗಿ ಮಾತನಾಡಿದ್ದಾರೆ ಎಂದು ಮಾಜಿ ಸಚಿವ ಶ್ರೀರಾಮುಲು ಬೇಸರ ಹೊರ ಹಾಕಿದ್ದರು.