ವ್ಯಂಗ್ಯ ವಿಡಂಬನೆ ವಿನೋದ ಕುರಿತು ಈ ಪರಿಯ ಭಯವೇಕೆ?

Share
ವ್ಯಂಗ್ಯ ವಿಡಂಬನೆ ವಿನೋದ ಕುರಿತು ಈ ಪರಿಯ ಭಯವೇಕೆ?
ಪ್ರಧಾನಿಯವರನ್ನು ಟೀಕಿಸಿ ವ್ಯಂಗ್ಯಚಿತ್ರ ರಚಿಸಿದರೆಂದು ಪ್ರಖರ ವ್ಯಂಗ್ಯಚಿತ್ರಕಾರ ಮಂಜುಲ್ ಅವರನ್ನು ಸರ್ಕಾರ ಬೇಟೆಯಾಡಿದೆ.
ಮಂಜುಲ್ ತಮ್ಮ ಉದ್ಯೋಗ ಕಳೆದುಕೊಂಡಿದ್ದಾರೆ. ಮುಖೇಶ್ ಅಂಬಾನಿ ಒಡೆತನದ ರಿಲಯನ್ಸ್ ಉದ್ಯಮ ಸಮೂಹಕ್ಕೆ ಸೇರಿದ ನೆಟ್ವರ್ಕ್-18 ಮಂಜುಲ್ ಅವರನ್ನು ಕೆಲಸದಿಂದ ತೆಗೆದು ಹಾಕಿದೆ. ಈ ವ್ಯಂಗ್ಯಚಿತ್ರವನ್ನು ಮಂಜುಲ್ ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಹಂಚಿಕೊಂಡಿದ್ದರು. ಇದೊಂದೇ ಅಲ್ಲ, ಮೋದಿ ಸರ್ಕಾರವನ್ನು ಕಟು ಟೀಕೆಗೆ ಗುರಿಪಡಿಸಿರುವ ನೂರಾರು ವ್ಯಂಗ್ಯಚಿತ್ರಗಳನ್ನು ಅವರು ಬರೆದಿದ್ದಾರೆ ಮತ್ತು ಹಂಚಿಕೊಂಡಿದ್ದಾರೆ.  ಟ್ವಿಟರ್  ಅವರಿಗೆ ನೋಟಿಸ್ ನೀಡಿದೆ. ಅವರ ಟ್ವಿಟರ್ ಖಾತೆಗೆ ಸಂಬಂಧಿಸಿದಂತೆ ಕ್ರಮ ಜರುಗಿಸಲು ಕೇಂದ್ರ ಸರ್ಕಾರ ‘ಕಾನೂನಾತ್ಮಕ ವಿನಂತಿ’ಯನ್ನು ತನಗೆ ಮಾಡಿಕೊಂಡಿರುವುದಾಗಿ ಟ್ವಿಟರ್ ನೋಟಿಸಿನಲ್ಲಿ ವಿವರಿಸಿದೆ.

ಮೋದಿ ಸರ್ಕಾರದ ಕೋವಿಡ್ ನಿರ್ವಹಣೆ ಮತ್ತು ಜನತೆ ಎದುರಿಸಿರುವ ಕಷ್ಟ ಕಣ್ಣೀರಿನ ದುರಂತ ಕುರಿತು ಮಂಜುಲ್ ಅವರೊಂದಿಗೆ ಕನ್ನಡಿಗರೇ ಆದ ಸತೀಶ್ ಆಚಾರ್ಯ ರಚಿಸಿರುವ ಬಲು ಹರಿತ ವ್ಯಂಗ್ಯಚಿತ್ರಗಳು ಅನೇಕಾನೇಕ. ಆಚಾರ್ಯ ಅವರ ಇಂತಹ ವ್ಯಂಗ್ಯಚಿತ್ರವೊಂದನ್ನು ಟ್ವಟರ್ ನಲ್ಲಿ ಹಂಚಿಕೊಂಡಿದ್ದ ಸುಪ್ರೀಮ್ ಕೋರ್ಟಿನ ನ್ಯಾಯವಾದಿ ಪ್ರಶಾಂತ್ ಭೂಷಣ್ ಅವರಿಗೂ ಟ್ವಿಟರ್ ನೋಟಿಸ್ ಬಂದಿತ್ತು. ಬ್ಯಾಂಕ್ ಲೂಟಿ ಹೊಡೆಯುವ ಕಳ್ಳನೊಬ್ಬ – ಬಾಚಿ ಬಳಿದು ದೋಚುವುದಿಲ್ಲ, ಹಾಗೆ ಮಾಡಲು ನಾನೇನೂ ಸರ್ಕಾರ ಅಲ್ಲ ಎಂದು ಹೇಳಿದ್ದ ವ್ಯಂಗ್ಯಚಿತ್ರವದು.
ತಾವು ಹಂಚಿಕೊಂಡಿರುವ ಈ ಟ್ವೀಟ್ ಭಾರತ ದೇಶದ ಕಾಯಿದೆ ಕಾನೂನುಗಳನ್ನು ಉಲ್ಲಂಘಿಸುತ್ತದೆ ಎಂದು ನೋಟಿಸಿನಲ್ಲಿ ಆಪಾದಿಸಲಾಗಿತ್ತು. ಯಾವ ಕಾಯಿದೆ ಕಾನೂನು ಮಹಾಸ್ವಾಮೀ, ರಾಜದ್ರೋಹದ ಕಾಯಿದೆಯೇ ಅಥವಾ ಬ್ಯಾಂಕುಗಳ ಲೂಟಿ ತಡೆಯ ಕಾಯಿದೆಯೇ ಎಂದು ಭೂಷಣ್ ವ್ಯಂಗ್ಯವಾಗಿ ಪ್ರತಿಕ್ರಿಯಿಸಿದ್ದರು.

ನಿವೃತ್ತ ಸರ್ಕಾರಿ ನೌಕರರ ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ಇತ್ತೀಚೆಗೆ ನಿರ್ಬಂಧಗಳನ್ನು ಹೇರಿರುವ ಮೋದಿ ಸರ್ಕಾರ  ವಾಟ್ಸ್ಯಾಪ್ ಬಳಕೆದಾರರ ಖಾಸಗಿತನ ಮತ್ತು ಗೋಪ್ಯತೆಯನ್ನು ಉಲ್ಲಂಘಿಸುವಂತೆ ವಾಟ್ಸ್ಯಾಪ್ ಕಂಪನಿಯನ್ನು ಜಗ್ಗಿಸಿ ಮಣಿಸುವ ಪ್ರಯತ್ನಗಳಲ್ಲಿ ತೊಡಗಿದೆ.
ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನಜಿ೯. ನಿರಪಾಯಕಾರಿವ್ಯಂಗ್ಯಚಿತ್ರವೊಂದನ್ನು ಅಂತಜಾ೯ಲದಲ್ಲಿ ಹಂಚಿಕೊಂಡರೆಂಬ ಏಕೈಕ ಕಾರಣಕ್ಕಾಗಿ 2012ರಲ್ಲಿ ಜಾಧವಪುರವಿಶ್ವವಿದ್ಯಾಲಯದ ಪ್ರೊಫೆಸರ್್ ಒಬ್ಬರನ್ನು ಜಾಮೀನು ನೀಡದೆ ಜೈಲಿಗೆ ಕಳಿಸಿದ್ದರು.

ಅದೇ ವರ್ಷ ಮುಂಬಯಿಯ ಅಸೀಮ್ ತ್ರಿವೇದಿ ಎಂಬ ಭ್ರಷ್ಟಾಚಾರ ವಿರೋಧೀ ವ್ಯಂಗ್ಯಚಿತ್ರಕಾರರೊಬ್ಬರನ್ನು ರಾಜದ್ರೋಹದ ಕೇಸು ಹಾಕಿ ಬಂಧಿಸಲಾಗಿತ್ತು. ಭಾರತದ ಸಂಸತ್ತನ್ನು, ರಾಷ್ಟ್ರೀಯ ಚಿಹ್ನೆಯನ್ನು ಹಾಗೂ ರಾಷ್ಟ್ರಧ್ವಜವನ್ನು ಅಪಮಾನಗೊಳಿಸಲಾಗಿದೆ ಎಂಬುದು ಅವರ ವಿರುದ್ಧದ ದೂರಿನ ಸಾರ. ರಾಷ್ಟ್ರೀಯ ಚಿಹ್ನೆಯಲ್ಲಿನ ಮೂರು ಸಿಂಹ ಮುಖಗಳ ಬದಲಿಗೆ ಮೂರು ತೋಳಗಳ ಮುಖಗಳನ್ನು ಚಿತ್ರಿಸಿ ಸತ್ಯಮೇವ ಜಯತೇ ಗೆ ಬದಲಾಗಿ ಭ್ರಷ್ಟಮೇವ ಜಯತೇ ಎಂದು ತ್ರಿವೇದಿ ಬರೆದಿದ್ದರು.
ಭಾರತದ ವ್ಯಂಗ್ಯಚಿತ್ರ ಕಲೆಯ ಪಿತಾಮಹ ಎಂದೇ ಹೆಸರಾದವವರು ಕೇಶವನ್ ಶಂಕರ ಪಿಳ್ಳೆ. ಬ್ರಿಟಿಷರ ಆಡಳಿತದಲ್ಲಿ ಅಂದಿನ ವೈಸ್ರಾಯ್ ಲಿನ್ಲಿತ್ಗೋ ಅವರನ್ನು ಲೇವಡಿ ಎಬ್ಬಿಸಿ ವ್ಯಂಗ್ಯಚಿತ್ರ ಬರೆದಿದ್ದರು. ಶಿಕ್ಷೆಯ ನಿರೀಕ್ಷೆಯಲ್ಲಿದ್ದ ಅವರಿಗೆ ಆಪ್ಯಾಯ ಅಚ್ಚರಿಯೊಂದು ಕಾದಿತ್ತು- ಆ ವ್ಯಂಗ್ಯಚಿತ್ರವನ್ನು ವೈಸ್ರಾಯ್ ಮೆಚ್ಚಿದ್ದರು. ಶಂಕರ್ ಅವರ ಸಹಿಯೊಂದಿಗೆ ಈ ವ್ಯಂಗ್ಯಚಿತ್ರದ ಮೂಲ ಪ್ರತಿಯನ್ನು ನೀಡುವಂತೆ ವೈಸ್ರಾಯ್ ತಮ್ಮ ದೂತನೊಬ್ಬನನ್ನು ಕಳಿಸಿದ್ದರಂತೆ.

ಹಿರಿಯ ವ್ಯಂಗ್ಯಚಿತ್ರಕಾರ ಸುಧೀರ್ ತೈಲಾಂಗ್ ಕೂಡ ಇಂತಹುದೇ ಘಟನೆಯನ್ನು ಸ್ಮರಿಸಿಕೊಂಡಿದ್ದಾರೆ- ಅಟಲ್ ಬಿಹಾರಿ ವಾಜಪೇಯಿ ಮಂತ್ರಿಮಂಡಲದಲ್ಲಿ ವಿದೇಶಾಂಗ ಮಂತ್ರಿಯಾಗಿದ್ದ ಜಸ್ವಂತ್ ಸಿಂಗ್ ಈ ಪ್ರಕರಣದ ಪಾತ್ರಧಾರಿ. ತಾಲಿಬಾನಿಗಳು ಅಪಹರಿಸಿದ್ದ ಇಂಡಿಯನ್ ಏರ್ಲೈನ್ಸ್ ವಿಮಾನದಲ್ಲಿದ್ದ ಭಾರತೀಯ ಪ್ರಜೆಗಳ ಬಿಡುಗಡೆಗೆ ಬದಲಾಗಿ  ಭಾರತದಲ್ಲಿ ಖೈದಿಗಳಾಗಿದ್ದ ಪಾಕಿಸ್ತಾನದ ಭಯೋತ್ಪಾದಕರನ್ನು ಆಫ್ಘಾನಿಸ್ತಾನದ ತಾಲಿಬಾನಿಗಳಿಗೆ ಒಪ್ಪಿಸಿ ವಾಪಸಾಗಿದ್ದರು ಜಸ್ವಂತ್ ಸಿಂಗ್. ಆಗ ತಾಲೀಬಾನಿ ವೇಷ ತೊಟ್ಟಂತೆ ತೋರುವ ಜಸ್ವಂತ್ ಸಿಂಗ್ ತಮ್ಮ ಹೆಗಲ ಮೇಲೆ ರಾಕೆಟ್ ಲಾಂಚರ್ ಹೊತ್ತುಕೊಂಡು ವಾಜಪೇಯಿ ಅವರ ಕಚೇರಿಯನ್ನು ಪ್ರವೇಶಿಸುತ್ತಿದ್ದಂತೆ ವ್ಯಂಗ್ಯಚಿತ್ರವೊಂದನ್ನು ತೈಲಾಂಗ್ ರಚಿಸಿದ್ದರು. ಈ ವ್ಯಂಗ್ಯಚಿತ್ರ ಅಚ್ಚಾದ ಮರುದಿನ ತೈಲಾಂಗ್ ಅವರನ್ನು ದೂರವಾಣಿಯಲ್ಲಿ ಸಂಪರ್ಕಿಸಿದ್ದರು ಜಸ್ವಂತ್ ಸಿಂಗ್. ತಮಗೆ ಬಲು ಪಸಂದು ಎನಿಸಿರುವ ಈ ಚಿತ್ರದ ಮೂಲಪ್ರತಿಯನ್ನು ನೀಡುವಂತೆ ಕೋರಿದರು. ಅದಕ್ಕೆ ಗಾಜು ಹೊದಿಸಿ ಚೌಕಟ್ಟು ಹಾಕಿಸಿ ತಮ್ಮ ಅಧ್ಯಯನದ ಕೋಣೆಯಲ್ಲಿ ನೇತು ಹಾಕಲು ಬಯಸಿದ್ದರಂತೆ. ತಾಲಿಬಾನಿ ಉಡುಗೆಗಳಲ್ಲಿ ತಾವು ಮುದ್ದಾಗಿ ಕಾಣುತ್ತಿರುವುದಾಗಿ ಹೇಳಿದ್ದರಂತೆ.

ಅವೇ ದಿನಗಳಲ್ಲಿ ತಮ್ಮ ಕುರಿತು ವ್ಯಂಗ್ಯಚಿತ್ರಗಳನ್ನು ಬರೆಯದೆ ಯಾಕೆ ನಿರ್ಲಕ್ಷ್ಯ ಮಾಡುತ್ತಿದ್ದೀರಿ ಎಂದು ಮತ್ತೊಬ್ಬ ಕೇಂದ್ರ ಸಚಿವ ಡಾ.ಮುರಳಿ ಮನೋಹರ ಜೋಶಿ ಅವರು ತೈಲಾಂಗ್ ಅವರನ್ನು ಪ್ರೀತಿಯಿಂದ ಗದರಿದ್ದರಂತೆ.
ನೆಹರೂ ಅವರನ್ನು ಲೇವಡಿ ಮಾಡಿ ರೇಗಿಸುವ ನಾಲ್ಕು ಸಾವಿರದಷ್ಟು ವ್ಯಂಗ್ಯಚಿತ್ರಗಳನ್ನು ಕೇಶವನ್ ಶಂಕರ ಪಿಳ್ಳೆ  ತಮ್ಮ ಪ್ರಸಿದ್ಧ ನಿಯತಕಾಲಿಕ ‘ಶಂಕರ್ಸ್ ವೀಕ್ಲಿ’ಯಲ್ಲಿ ಪ್ರಕಟಿಸಿದ್ದುಂಟು. ವಿಡಂಬನೆ- ವಿನೋದದಿಂದ ತಮ್ಮನ್ನು ತಿವಿದರೂ ಸಹಿಸಿ ಸವಿದು ನಗುವ ಗುಣ ನೆಹರೂಗಿತ್ತು. ನೆಹರೂ ನಂತರ ನಮ್ಮ ರಾಜಕಾರಣಿಗಳ ಪೈಕಿ ಅತಿ ಹೆಚ್ಚು ವ್ಯಂಗ್ಯಚಿತ್ರಗಳ ವಿಷಯವಸ್ತು ಆದವರು ಪ್ರಾಯಶಃ ಲಾಲೂ ಪ್ರಸಾದ್ ಯಾದವ್. .ಆದರೆ ಈತ ಸರ್ವಾಧಿಕಾರಿಯಂತೆ ಉರಿದೆದ್ದ ಉದಾಹರಣೆಯಿಲ್ಲ.
ನಗೆಯಾಡುವ ಅವಕಾಶಗಳನ್ನು ಪ್ರಜೆಗಳಿಗೆ ನಿರಾಕರಿಸುವುದು ಸವಾ೯ಧಿಕಾರೀ ಆಡಳಿತದ ಪ್ರಧಾನ ಲಕ್ಷಣಗಳಲ್ಲೊಂದು. ತನ್ನ ಕುರಿತೇ ನಕ್ಕುಬಿಟ್ಟರೆ ಎಂಬ ಅಳುಕು ಸವಾ೯ಧಿಕಾರಿಯನ್ನು ಸದಾಸವ೯ದಾ ಕಾಡುತ್ತಿರುತ್ತದೆ. ಅಡಾಲ್ಫ್ ಹಿಟ್ಲರನ ಹಯಾಮಿನಲ್ಲಿ ಒಂದು ಒಳ್ಳೆಯ ಕಾಮಿಡಿ, ಒಂದು ಉತ್ತಮ ವ್ಯಂಗ್ಯಚಿತ್ರ, ಒಂದೇ ಒಂದು ವಿಡಂಬನೆ, ಅಣಕು ಕುಹಕದ ಪ್ರಸಂಗವೂ ಜಮ೯ನರಿಗೆ ನೋಡಲು ಸಿಗಲಿಲ್ಲ  ಎಂದಿದ್ದಾರೆ ಶಂಕರಪಿಳ್ಳೆ. ಇಂದಿರಾಗಾಂಧಿಯವರ ತುತು೯ಪರಿಸ್ಥಿತಿ ಘೋಷಣೆಯ ನಂತರ ‘ವೀಕ್ಲಿ’ಯನ್ನು ಬಂದ್ ಮಾಡಿದ್ದ ಸಂದಭ೯ವದು.
ವ್ಯಂಗ್ಯಚಿತ್ರಗಳು ಮತ್ತು ತಮ್ಮನ್ನು ಕುರಿತು ತಾವೇ ನಗುವ ಸ್ವಸ್ಥಮನಸ್ಸಿನಪ್ರವೖತ್ತಿಯ ಕುರಿತು ನೆಹರೂ ಮತ್ತು ಖುದ್ದು ಶಂಕರ ಪಿಳ್ಳೆ ಹೇಳಿರುವ ವಿವೇಕದಮಾತುಗಳು ಅಧ೯ ಶತಮಾನದಷ್ಟು ಹಳೆಯವಾದರೂ ಅತ್ಯಂತ ಪ್ರಸ್ತುತ.
Don`t spare me Shankar.. . Hit  me, hit me hard ಎಂದು ಶಂಕರ ಪಿಳ್ಳೆಯವರಿಗೆ ಹೇಳುತ್ತಿದ್ದರು ನೆಹರೂ. ಅವರ ಈ ಕೆಳಗಿನ ಮಾತುಗಳು ಇಂದಿಗೂ ಪ್ರಸ್ತುತ.
-ನಮ್ಮಲ್ಲಿ ಬಹಳ ಮಂದಿ ಶಂಕರ್ ವ್ಯಂಗ್ಯಚಿತ್ರಕ್ಕಾಗಿ ನಿತ್ಯ ಕಾಯುತ್ತಿದ್ದೆವು.ಪತ್ರಿಕೆಯನ್ನು ಕೈಗೆತ್ತಿಕೊಳ್ಳುತ್ತಿದ್ದಂತೆ ಆ ದಿನದ ಪ್ರಮುಖ ಸುದ್ದಿಯನ್ನು ಬಿಟ್ಟು ನೇರವಾಗಿ ಶಂಕರ್ ವ್ಯಂಗ್ಯಚಿತ್ರ ಇರುತ್ತಿದ್ದ ಪುಟ ತೆರೆಯುತ್ತಿದ್ದೆವು. ಮನಸ್ಸನ್ನು ಮುದಗೊಳಿಸುತ್ತಿದ್ದುದು ಮಾತ್ರವಲ್ಲ, ಪ್ರಚಲಿತ ವಿದ್ಯಮಾನಗಳಿಗೆಒಳನೋಟವನ್ನು ಕಟ್ಟಿಕೊಡುತ್ತಿದ್ದವು ಶಂಕರ್ ವ್ಯಂಗ್ಯಚಿತ್ರಗಳು.

-ಶಂಕರ್ ಬಿಡಿಸುತ್ತಿದ್ದ ವ್ಯಂಗ್ಯಚಿತ್ರಗಳು ಸಮಾಜಸೇವೆಯೇ ಸರಿ. ನಾವೆಲ್ಲ ಋಣಿಯಾಗಿರಬೇಕಾದ ಸೇವೆಯಿದು. ಒಂದಲ್ಲ ಒಂದು ಹಂತದಲ್ಲಿ ಸ್ವಾಥ೯ಕೇಂದ್ರಿತರೂ ಬೊಗಳೆ ಬಿಟ್ಟು ಬಡಾಯಿ ಕೊಚ್ಚಿಕೊಳ್ಳುವವರೂ ಆಗಿಬಿಡಬಹುದಾದ ನಮ್ಮಂತಂಹವರ ಕಣ್ಣಿಗೆ ಕಟ್ಟುವ ಪೊರೆಯನ್ನು ಹರಿಯುವುದು ಒಳಿತಿನ ಕೆಲಸ ಎಂದಿದ್ದರು ನೆಹರೂ.
ಅಂದಿನ ರಾಜಕಾರಣಿಗಳು ಮತ್ತು ಮಂತ್ರಿಗಳ ವಲಯದಲ್ಲಿ ಡೆಲ್ಲಿ ಡೆವಿಲ್ ಎಂದೇ ಹೆಸರಾಗಿದ್ದರು ಶಂಕರ ಪಿಳ್ಳೆ. ಅವರು ತಮ್ಮ ಪತ್ರಿಕೆಯ ಓದುಗರನ್ನು ಉದ್ದೇಶಿಸಿ ಬರೆದಿದ್ದ ಈ ಕೆಳಕಂಡ ಬಹುತೇಕ ಮಾತುಗಳು ಇಂದಿಗೂ ಅತ್ಯಂತ ಪ್ರಸ್ತುತ
-ನೀವು ನಗಲು ನೆರವಾಗೋದು ನಮ್ಮ ಪತ್ರಿಕೆಯ ಉದ್ದೇಶ. ಜಗತ್ತಿನ ಇತರೆ ದೇಶಗಳ ಜನಸಂಘಷ೯ಗಳ ನಡುವೆಯೂ ಮನಸಾರೆ ನಗುತ್ತಿದ್ದಾರೆ. ವಿನೋದ ವಿಡಂಬನೆಗಳೇ ಇಲ್ಲದ ಪೀಳಿಗೆನಮ್ಮದು, ಒಂಥರಾ ವಣ೯ರಹಿತ ಬೊಂಬೆಗಳ ಮೆರವಣಿಗೆ. ನಗುವ ವರವನ್ನು ವಷ೯ಗಳ ಹಿಂದೆಯೇಕಳೆದುಕೊಂಡವರು. ಜಡ್ಡಿನಂತಹ ಗಾಂಭೀಯ೯ವನ್ನು ಗಳಿಸಿಕೊಂಡುಬಿಟ್ಟಿದ್ದೇವೆ.ಹೆಚ್ಚೆಂದರೆ ಕೖತಕ ಹುಸಿನಗೆ ಧರಿಸಿ ಹಲ್ಲು ಕಿರಿದೇವು. ಆಕಳಿಸಿ ಕಿಸಿಕಿಸಿ ನಕ್ಕೇವು.ಹೊಟ್ಟೆ ತುಂಬ ನಗುವುದೆಂದರೆ ಅಸಭ್ಯವೆಂದು ತಿಳಿದವರು ನಾವು, ನಮ್ಮ ಕುರಿತು ನಾವೇನಗುವುದಂತೂ ಇಲ್ಲವೇ ಇಲ್ಲ. ಇತರರ ಕುರಿತು ಮತ್ತು ನಿಮ್ಮನ್ನೇ ಕುರಿತು ನಗುವುದಕ್ಕೆನೆರವಾಗಲಿದೆ ಶಂಕರ್ಸ್್ ವೀಕ್ಲಿ. . . ಭಾರೀ ಬೋರುಗಳ ದೇಶವಾಗಬಾರದು ನಾವು..-ಜನರನ್ನು ನಗಿಸೋ ಪಾಲಿಸಿ ಬಿಟ್ರೆ ಈ ಪ್ರಯತ್ನದ ಹಿಂದೆ ಬೇರೆ ಯಾವ ಪಾಲಿಸಿಯೂ ಇಲ್ಲ.ನಮ್ಮನ್ನು ಏನೆಂದು ಬೇಕಾದರೂ ಕರೀರಿ. ಸೋಷಲಿಸ್ಟರು, ಕಮ್ಯೂನಿಸ್ಟರು, ಹುಚ್ಚರುಇಲ್ಲವೇ ವಕ್ರರು. . ಆದ್ರೆ ನಗುವಿಗೆ ಸೈದ್ಧಾಂತಿಕ ಇಲ್ಲವೇ ಇಸಮ್ಮುಗಳ ಅಂಟು ಇರೋದುಸಾಧ್ಯ ಇಲ್ಲ.

-ಪರಿಸ್ಥಿತಿ ಬದಲಾಗಿದೆ. ಈಗ ಎಲ್ಲವೂ ಸಂಪೂಣ೯ ಇಂಡಿಯನ್. ಇಂಗ್ಲಿಷ್್ ಸಾಹೇಬರಿಗೆ ಬದಲಾಗಿ ಇಂಡಿಯನ್ ಸಾಹೇಬರುಂಟು. ನಮ್ಮ ದೌಬ೯ಲ್ಯಗಳು ರಾಷ್ಟ್ರೀಯ ದೌಬ೯ಲ್ಯಗಳು, ನಗಬೇಕು ಇಲ್ಲವೇ ಸಾಯಬೇಕು ನಾವು. ಹಾಸ್ಯಾಸ್ಪದ ಸ್ವಸಂತುಷ್ಟಿಯನ್ನು ನಗೆಯಲ್ಲಿ ಉಢಾಯಿಸಬೇಕು. ನಗಬೇಕೆಂದರೆ ತಲೆ ಕೆಳಗಾಗಿ ನಿಲ್ಲಬೇಕಿಲ್ಲ. ಪಾದ ಊರಿಯೇ ನಿಲ್ಲಿರಿ. ಬದುಕು ತಲೆ ಊರಿ ತಿರುಗುವುದನ್ನು ನೋಡಿ ಅದರ ಹತ್ತು ಹಲವು ಮುಖಗಳನ್ನು ಕಂಡು ಮನಸಾರೆ ನಗೋಣ.
-ಆಹಾ ಎಂಥಾ ಬದುಕಿದು! ಬುಶ್ಟ್ ಶರ್ಟ್ ನಾಗರಿಕತೆ, ಕಾಕ್ಟೇಲ್ಸ್  ಮತ್ತು ಮೊನಾಲಿಸಾ ನಗೆ ಹೊತ್ತ ಮೇಮ್ ಸಾಹೇಬ್,  ಸೆಕ್ರೆಟೇರಿಯಟಿನಲ್ಲಿ ಖಾಲಿ ರುಂಡಗಳನ್ನು ಹೊತ್ತು ತಿರುಗುವ ಭ್ರಷ್ಟ ಮುಂಡಗಳು. ಕಪಟ ನಗುವಿನ ಕಳ್ಳಸಂತೆಕೋರರು, ಜನರ ಆದಾಯ ವೆಚ್ಚಗಳನ್ನುನಿಯಂತ್ರಿಸುವ ಬಿಗ್ ಬಿಸಿನೆಸ್ಸುಗಳು, ಸಡಗರದ ಕುಪ್ಪಳಿಕೆಯ ರಾಜಕಾರಣಿಗಳು, ಅರಮನೆ ಕ್ರಾಂತಿಗಳ ಪ್ರಮೋಟರುಗಳು, ದೇಶೀ ರುಚಿಗಳು, ವಿದೇಶೀ ವಿಲಾಸಗಳು, ಯಾತಕ್ಕಾಗಿ ಇಂಥ ಕತ್ತೆಚಾಕರಿಯೆಂದು ಅರಿಯದೆ ಗುಲಾಮಗಿರಿ ಮಾಡ್ತಿರೋ ಶ್ರಮಜೀವಿ, ಏರುತ್ತಿರುವ ಸಂಬಳ-ಕೂಲಿಯ ಜೊತೆ ಜೊತೆಗೇ ಜಿಗಿಯುತ್ತಿರುವ ದರಗಳು, ಲೈಸೆನ್ಸ್ ಇರೋ ಲಂಚಗುಳಿತನ ಮತ್ತು ವಿಶೇಷಾಧಿಕಾರ ಎಂಬಂತಹ ಲಾಭಬಡುಕತನ, ಅರೆನಿಯಂತ್ರಿತ ಬದುಕಿನ ಅರಾಜಕತೆ ,ಜನಿಸಲು ಒಲ್ಲದ ಸಂಸ್ಕೖತಿಯೊಂದರ ಎಲ್ಲ ತಮಾಷೆ ಮತ್ತು ವಿಕಟ ಹಾಸ್ಯ. ಬದುಕನ್ನು ನೋಡಬೇಕಿದ್ದರೆ ಅದು ಆರಾಮವಾಗಿ ಹರಿಯುವುದನ್ನು ಕಾಣಬೇಕೇ ವಿನಾ ಅದರ ಪಾಶ್ವ೯ನೋಟವನ್ನಷ್ಟೇ ಸಾಲದು. ಒಂದಷ್ಟು ಪೀಡನೆ ಇಲ್ಲವೇ ಕೇಡಿಗತನ,  ಪ್ರಾಯಶಃ ಪ್ರೀತಿ ಸಹಿಷ್ಣತೆಗಿಂತ ಹೆಚ್ಚು ಪೀಡನೆಯೇ ಎನಿಸೀತು. ಆದರೆ ನಗೆಗೆ ಲಾಯಕ್ಕಾದ ಎಲ್ಲವನ್ನು ಕಂಡು ನಗಲೇಬೇಕು.

Girl in a jacket
error: Content is protected !!