ಮೈಲಾರವೂ, ಪರಂಪರೆ ಮತ್ತು ಅಲ್ಲಿನ ಕಾರ್ಣೀಕವೂ
ಕರ್ನಾಟಕದ ಪ್ರಸಿದ್ಧ ಜನಪದ ದೈವವಿರುವ ನೆಲೆಗಳಲ್ಲಿ ಮೈಲಾರ ಪ್ರಮುಖವಾದದ್ದು. ಇದು ಮೈಲಾರ ದೇವರು ಆದಿಮ ದೈವವೂ ಅಗಿದೆ. ಪಶುಪಾಲಕರ ಅದಿದೈವವಾದ ಇದು ವಿಜಯನಗರ ಜಿಲ್ಲೆಯಲ್ಲಿ ತುಂಗಭದ್ರಾ ನದಿಯ ಬಲದಂಡೆಯ ಮೇಲಿರುವ ಮೈಲಾರದಲ್ಲಿದೆ. ಇದನ್ನು ಹಿರೇಮೈಲಾರವೆಂತಲೂ ಕರೆಯುತ್ತಿದ್ದು, ಇದೇ ಮೈಲಾರದೇವರ ಮೂಲನೆಲೆಯೆಂದೂ ಹೇಳುತ್ತಾರೆ. ಮೈಲಾರವೆಂಬುದು ಮೈಲಾರಿ, ಮೈಲಾಳಿ ಮಲ್ಲಯ್ಯ, ಮಲ್ಲೇಶ್ವರ, ಮಲುದೇವ, ಮಲ್ಲಾರ, ಮಲ್ಲಾರಿ, ಮಲ್ಲಿಕಾರ್ಜುನ ಮೊದಲಾದ ಹೆಸರುಗಳಿಂದ ನಾಡಿನಾದ್ಯಂತ ಆರಾಧನೆಗೊಳ್ಳುತ್ತದೆ. ಇದು ಕರ್ನಾಟಕದಲ್ಲಿ ಮೈಲಾರವೆಂಬ ಹೆಸರಿನ ಅನೇಕ ಕ್ಷೇತ್ರಗಳನ್ನು ರಾಜ್ಯದಾದ್ಯಂತ ಕಾಣುತ್ತೇವೆ. ಅಲ್ಲದೆ ನೆರೆಯ ಆಂಧ್ರಪ್ರದೇಶ, ಮಹಾರಾಷ್ಟ್ರಗಳಲ್ಲೂ ಮಲ್ಲಯ್ಯ, ಖಂಡೋಬಾ ಹೆಸರುಗಳಿಂದ ಪ್ರಸಿದ್ಧವಾಗಿದೆ. ಮೈಲಾರ ದೇವರು ಮೂಲತಃ ಪಶುಪಾಲಕ ದೈವ. ಇದರ ವಾಹನ ಕುದುರೆ. ಇದನ್ನು ಮಲ್ಲಾರಿ ಶಂಕರ, ಮಹಿಲಾರ ಶಂಕರದೇವರು, ಮೈಳಾರ ಲಿಂಗೇಶ್ವರ, ಮೈಲಾರ ಪರಮೇಶ್ವರ, ಮೈಲಾರಾಖ್ಯ ಗಿರೀಶ, ಮಾರ್ತಾಂಡ ಭೈರವನೆಂದೂ ಕರೆಯುತ್ತಾರೆ. ಇವನು ಶಿಷ್ಟಪರಂಪರೆಯಲ್ಲಿ ಮಲ್ಲಿಕಾರ್ಜುನನಾಗಿ ಕರೆಸಿಕೊಂಡಿದ್ದಾನೆ.
ಇವನು ಮೂಲತಃ ಭೈರವನೇ ಆಗಿದ್ದಾನೆ. ಇಲ್ಲಿನ ಮೈಲಾರ ದೇವಾಲಯ ಕರ್ನಾಟಕದ ಪ್ರಸಿದ್ಧ ದೇವಾಲಯವೂ ಆಗಿದೆ. ಕಾಲಾನುಕ್ರಮವಾಗಿ ಜೀಣೋದ್ಧಾರಗೊಂಡ ಈ ದೇವಾಲಯವು ಗರ್ಭಗೃಹ, ಅಂತರಾಲ, ತೆರೆದ ಮಂಟಪ, ಉಪದೇಗುಲಗಳು ಮತ್ತು ಮಹಾದ್ವಾರಗಳನ್ನು ಹೊಂದಿದೆ. ಮುಖ್ಯ ಗರ್ಭಗೃಹದಲ್ಲಿ ನಾಲ್ಕು ಅಡಿ ಎತ್ತರದ ಮೈಲಾರಲಿಂಗನ ಮಣ್ಣಿನ ಮೂರ್ತಿಯಿದೆ. ಮೈಲಾರ ಲಿಂಗಪ್ಪನು ನಾಲ್ಕು ಕೈಗಳನ್ನು ಹೊಂದಿದ್ದು, ಅವುಗಳಲ್ಲಿ ತ್ರಿಶೂಲ, ಡಮರು, ಖಡ್ಗ ಮತ್ತು ಭಿಕ್ಷಾಪಾತ್ರೆಗಳನ್ನು ಹಿಡಿದಿರುವನು. ಮುಖದಲ್ಲಿ ದೊಡ್ಡದಾದ ಮೀಸೆ, ಇಳಿಬಿದ್ದ ಗಡ್ಡ ಹಾಗೂ ತಲೆಯಲ್ಲಿ ಸುತ್ತಿದ ಜಡೆಯನ್ನು ಹೊಂದಿರುವನು. ಮೂರ್ತಿಯ ಕೆಳಗೆ ಎರಡು ರುಂಡಗಳಿದ್ದು, ಅವುಗಳನ್ನು ಮಲ್ಲಾಸುರ ಮತ್ತು ಮಣಿಕಾಸುರರೆಂದು ಕರೆಯುತ್ತಾರೆ.
ಈ ದೇವಾಲಯದ ಸಭಾಮಂಟಪದಲ್ಲಿ ಕಲ್ಯಾಣ ಚಾಲುಕ್ಯರ ಶೈಲಿಯ ಸೂಕ್ಷ್ಮ ಹಾಗೂ ಹೊಳಪಿನಲ್ಲಿರುವ ಕಂಬಗಳಿವೆ. ಇದರಿಂದ ದೇವಾಲಯವು ೧೧-೧೨ನೆಯ ಶತಮಾನದಷ್ಟು ಹಿಂದಕ್ಕೆ ಹೋಗುತ್ತದೆ. ಮೂರ್ತಿಯ ಮುಂದೆ ಸ್ವಯಂಭೂ ಶಿವಲಿಂಗವಿದೆ. ವಿಜಯನಗರ ಕಾಲದ ಕ್ರಿ.ಶ.೧೪೧೨ ಮತ್ತು ೧೪೪೬ರ ಶಾಸನಗಳಲ್ಲಿ ಮಯ್ಲಾರ ದೇವರ ಭಂಡಾರದ ಅಧಿಕಾರಿಯಾಗಿದ್ದ ಗಂಗರಸು ದೇವಾಲಯದ ರಂಗಮಂಟಪ, ಚಿತ್ರತೋರಣದ ಮಂಟಪ, ಹೆಗ್ಗಡೆ ದೇವರ ಶಿಲಾಮಂಟಪ ಮತ್ತು ಮಾಳಲದೇವಿ ಸುಕನಾಸಿ ಮತ್ತು ನವರಂಗ ಮಂಟಪಗಳನ್ನು ನಿರ್ಮಿಸಿದ್ದನೆಂದು ತಿಳಿಸುತ್ತವೆ. ಹಾಗೆಯೇ ದೇವಾಲಯದ ಉತ್ಸವ ಮೂರ್ತಿಯನ್ನು ೧೫೧೮ರಲ್ಲಿ ಹೊನ್ನಿಸೆಟ್ಟಿಯ ಮಗ ನಕರಸಯ್ಯ ಮತ್ತು ಅವನ ಹೆಂಡತಿ ಬಸಮ್ಮ ಮಾಡಿಸಿದರೆಂದೂ ಶಾಸನದಿಂದ ತಿಳಿಯುವುದು.
ಚಿಕ್ಕಂದಿನಲ್ಲಿ ನಮ್ಮೂರಿನ ಮರಾಠರು ವರ್ಷಕ್ಕೊಮ್ಮೆ ಮೈಲಾರ ಜಾತ್ರೆಗೆ ಹೋಗುವ ಸಡಗರ, ಅಲ್ಲಿನ ಕಾರಣಿಕವನ್ನು ಜನರಿಗೆ ಹೇಳುವ ಮತ್ತು ಭಂಡಾರವನ್ನು ಮನೆಮನೆಗೆ ನೀಡುವ ಸಂಪ್ರದಾಯವನ್ನು ನೋಡಿ-ಕೇಳಿದ್ದೆನು. ಮೂರ್ನಾಲ್ಕು ದಿನಗಳ ಕಾಲ ಜಾತ್ರೆಯ ಸಂಭ್ರಮ, ಅಲ್ಲಿ ಹರಿಯುವ ತುಂಗಭದ್ರಾ ನದಿಯ ಬಗೆಗೂ ಕೇಳಿದ್ದೆನು.
ಆದರೆ ಸ್ವತಃ ಮೈಲಾರವನ್ನು ನೋಡಿ ಅಲ್ಲಿನ ಜನಜಾತ್ರೆಯನ್ನು ಕಣ್ತುಂಬಿಕೊಳ್ಳಲು ಸಾಧ್ಯವಾದದ್ದು ೧೯೯೪ರಲ್ಲಿ. ಪ್ರತಿ ವರ್ಷ ಭಾರತ ಹುಣ್ಣಿಮೆಯಂದು ನಡೆಯುವ ಮೈಲಾರ ಜಾತ್ರೆಯಲ್ಲಿ ನಡೆಯುವ ವೈವಿಧ್ಯಮಯ ಆಚರಣೆಗಳು ಒಂದೇ, ಎರಡೇ. ಗೊರವಯ್ಯರ ಸಂಪ್ರದಾಯ ಮತ್ತು ಅಲ್ಲಿನ ಆಚರಣೆಗಳೋ ವಿಶಿಷ್ಟ ಪ್ರಕಾರದವು. ಕಂಚಾವೀರರ ಸರಳಿ ಹರಿಯುವ ಮತ್ತು ಬಗಣಿ ಗೂಟ ಪವಾಡ, ಶಸ್ತ್ರ ಪವಾಡ, ಆರತಿ ಪವಾಡ, ಕುದುರೆ ಕುಣಿತ, ಗೊರವರ ದೋಣಿ ಸೇವೆ, ಚಾಮರ ಸೇವೆ, ಉರುಳು ಸೇವೆ, ದೀವಟಿಗೆ ಸೇವೆ, ಭಂಡಾರ ಪೂಜೆಗಳು ವಿಶಿಷ್ಟವಾಗಿವೆ. ಹಾಗೆಯೇ ಗೊರವರ ಏಳುಕೋಟಿ ಏಳುಕೋಟಿ, ಏಳುಕೋಟಿ ಉಘೇ, ಚಾಂಗಮಲೋ ಚಾಂಗಮಲೋ ಎಂಬ ಸದ್ದು. ಇವೆಲ್ಲಕ್ಕಿಂತ ಮೈಲಾರಲಿಂಗನ ಜಾತ್ರೆಯ ಮಹತ್ವದ ಆಚರಣೆಗಳಲ್ಲಿ ಕಾರಣೀಕೋತ್ಸವವು ಬಹುಮುಖ್ಯವಾದದ್ದು. ಅದನ್ನು ನುಡಿಯುವ ಗೊರವಯ್ಯ ವೃತಾಚರಣೆಯನ್ನು ಕಟ್ಟುನಿಟ್ಟಾಗಿ ಆಚರಿಸಿ ಮೌನ ಸವಾರಿಯಲ್ಲಿ ಡಂಕನ ಮರಡಿಗೆ ಪಯಣ ಬೆಳಸುತ್ತಾನೆ. ಕಾರಣಿಕವೆಂಬುದು ಮುಂಬರುವ ವರ್ಷದ ವಿದ್ಯಮಾನಗಳ ಕುರಿತ ಭವಿಷ್ಯವಾಣಿ. ಕೃಷಿಯನ್ನು ನಂಬಿದ ಜನರಿಗೆ ಮಳೆ, ಬೆಳೆಗಳ ಕುರಿತು ಮೈಲಾರ ಲಿಂಗಪ್ಪನೇ ಗೊರವಯ್ಯನ ಬಾಯಿಯಿಂದ ಹೇಳಿಸುವ ಭವಿಷ್ಯವಾಗಿದೆ. ಈ ಹೇಳಿಕೆಗಾಗಿಯೇ ಲಕ್ಷಾಂತರ ಜನರು ಕಾದಿರುತ್ತಾರೆ. ಕಾರಣಿಕ ನುಡಿಯುವವನು ಗೊರವಯ್ಯ, ಈತನನ್ನು ಕಾರಣಿಕದ ಗೊರವಯ್ಯನೆಂದೇ ಕರೆಯುತ್ತಾರೆ. ಗೊರವಪ್ಪ ಬಿಲ್ಲೇರುವುದೆಂದರೆ ಅದು ದಿಗ್ವಿಜಯದ ಸಂಕೇತವೂ ಹೌದು. ಗೊರವಯ್ಯನೋ ಕಬ್ಬಿಣದ ಬಿಲ್ಲನ್ನು ಏರಿ ಸದ್ದಲೇ ಎಂದಾಕ್ಷಣ ಇಡೀ ಜನಸ್ತೋಮವೇ ಸ್ತಬ್ದವಾಗುತ್ತದೆ. ಗೊರವಯ್ಯನ ಬಾಯಿಯಿಂದ ಬರುವ ಒಂದೇ ಒಂದು ಹೇಳಿಕೆಗಾಗಿ ಇಡೀ ದಿನ ಕಾದುನಿಂತಿರುತ್ತದೆ ಜನಸಮೂಹ. ಮತ್ತೆ ಕಾರ್ಣೀಕದ ನುಡಿಯಾದ ತಕ್ಷಣ ಇಡೀ ಜನಸಮೂಹ ಚಲಾಪಿಲ್ಲಿಯಾಗುತ್ತದೆ. ಇದೊಂದು ವಿಶಿಷ್ಟ ಅನುಭವ. ಆಕಾಶಕ್ಕೆ ಗುಂಡು ತೂಗಿತಲೇ ಪರಾಕ್ ಎಂಬ ನುಡಿ ಅಂದಿನ ಕಾರ್ಣೀಕೋತ್ಸವದ್ದಾಗಿತ್ತು. ೨೦೨೧ರಲ್ಲಿ ಮುತ್ತಿನ ರಾಶಿ ಮೂರು ಪಾಲು ಆತಲೇ ಪರಾಕ್ ಎಂಬುದಾಗಿತ್ತು.
ಈ ಬಗೆಯ ಕಾರಣಿಕದ ಹೇಳಿಕೆಯನ್ನು ಜನರು ತಮಗೆ ತೋಚಿದಂತೆ ಅರ್ಥೈಸಿಕೊಳ್ಳುವ ಪರಿಪಾಟವೂ ಇದೆ.
ಮೈಲಾರ ಪರಂಪರೆಯ ಪ್ರಾಚೀನತೆ ಶಾಸನ ಮತ್ತು ವಾಸ್ತುಶಿಲ್ಪದ ಹಿನ್ನೆಲೆಯಲ್ಲಿ ಕ್ರಿ.ಶ.೧೧-೧೨ನೆಯ ಶತಮಾನಕ್ಕೂ ಹಿಂದೆ ಹೋಗುತ್ತದೆ. ಇಲ್ಲಿನ ಮಣ್ಣಿನ ಮೂರ್ತಿಯ ಉಲ್ಲೇಖ ೧೫-೧೬ನೆಯ ಶತಮಾನದ ಸಾಹಿತ್ಯಗಳಲ್ಲಿದೆ. ಮೈಲಾರ ಎಂಬ ಪದವು ೧೦೧೭ರ ಹೊತ್ತಿಗೆ ಬಳಕೆಯಾಗಿದೆ. ಶಾಸನಗಳಲ್ಲಿ ಮೈಲಾರವನ್ನು ಉಂಗುರಾಲ, ಗುಂಗುರಾಚಂದ, ಗುಂಗುರಾಲವೆಂದು ಕರೆಯಲಾಗಿದೆ. ಇದಕ್ಕೆ ತುಂಗಭದ್ರಾ ನದಿಯು ಭೌಗೋಳಿಕವಾಗಿ ಉಂಗುರಕಾರದಲ್ಲಿ ಸುತ್ತುವರಿದು ಸಾಗುತ್ತಿರುವುದೂ ಕಾರಣವಾಗಿದೆ.
ಒಟ್ಟಿನಲ್ಲಿ ಮೈಲಾರವು ಹಿರೇ ಮೈಲಾರವಾಗಿದ್ದು, ಇದು ಮೈಲಾರ ಲಿಂಗನ ಪರಂಪರೆಯ ಮೂಲ ನೆಲೆಯೆಂಬುದನ್ನು ವಿದ್ವಾಂಸರು ಒಪ್ಪುತ್ತಾರೆ. ಈ ಸಂಪ್ರದಾಯವು ಇಂದಿಗೂ ಜನಮಾನಸದಲ್ಲಿ ಅಚ್ಚಳಿಯದೆ ಉಳಿದು ಮುಂದುವರಿದು ಪ್ರಾಚೀನ ಪರಂಪರೆಯ ಪ್ರಮುಖ ದೈವವಾಗಿ ನಾಡಿನಾದ್ಯಂತ ವಿಭಿನ್ನವಾಗಿ ಆರಾಧನೆಗೆ ಒಳಪಟ್ಟಿರುವುದು ಗಮನಾರ್ಹ ಸಂಗತಿ.