ಚಿತ್ರದುರ್ಗ ಜಿಲ್ಲೆಯಲ್ಲೊಂದು ಅಪರೂಪದ ಗುಹಾಂತರ ದೇವಾಲಯ

Share

 

ಚಿತ್ರದುರ್ಗ ಜಿಲ್ಲೆಯಲ್ಲೊಂದು ಅಪರೂಪದ ಗುಹಾಂತರ ದೇವಾಲಯ

ದೇವಾಲಯಗಳನ್ನು ಸಾಮಾನ್ಯವಾಗಿ ಪ್ರತ್ಯೇಕವಾದ ಕಟ್ಟಡವುಳ್ಳ ದೇವಾಲಯ, ಸ್ವಾಭಾವಿಕ ಗುಹೆಗಳನ್ನು ಬಳಸಿ ನಿರ್ಮಿಸಿದ ಗುಹಾ ದೇವಾಲಯ(ಗುಹಾಲಯ) ಮತ್ತು ಬೆಟ್ಟವನ್ನು ಕತ್ತರಿಸಿ ಕಡೆಯಲಾದ ಗುಹಾಂತರ ದೇವಾಲಯ (ಖoಛಿಞಛಿuಣ ಖಿemಠಿಟe) ಎಂದು ಕರೆಯುತ್ತೇವೆ. ಇದಕ್ಕೆ ಕಟ್ಟಡ ಮಾದರಿಗೆ ಹಂಪೆಯ ವಿರೂಪಾಕ್ಷ ದೇವಾಲಯ, ಗುಹಾಲಯಕ್ಕೆ ಚಿತ್ರದುರ್ಗ ಬೆಟ್ಟದಲ್ಲಿರುವ ಸಂಪಿಗೆ ಸಿದ್ಧೇಶ್ವರ, ಗುಹಾಂತರ ದೇಗುಲಕ್ಕೆ ಬಾದಾಮಿಯ ಮಹಾವಿಷ್ಣು ದೇಗುಲಗಳನ್ನು ಉದಾಹರಿಸಬಹುದಾಗಿದೆ. ಚಿತ್ರದುರ್ಗ ಜಿಲ್ಲೆಯು ಕರ್ನಾಟಕದ ಇತಿಹಾಸಕ್ಕೆ ಹಲವು ಪ್ರಥಮಗಳನ್ನು ನೀಡಿದುದು ತಿಳಿದ ವಿಷಯ. ಅಂತೆಯೇ ಈ ಜಿಲ್ಲೆಯಲ್ಲಿ ಅನೇಕ ಗುಹಾ ದೇವಾಲಯಗಳಿವೆ. ಇದಕ್ಕೆ ಅಲ್ಲಿ ಕಣಶಿಲೆಯ ಬೃಹತ್ ಬಂಡೆಗಲ್ಲುಗಳ ಬೆಟ್ಟಗಳಿರುವುದು ಮತ್ತು ಚಿತ್ರದುರ್ಗ ಕೋಟೆ ಪರಿಸರವು ಮುಖ್ಯ ಭೂಮಿಕೆಯಾಗಿರುವುದು ಕಾರಣ. ಕೋಟೆಯ ಒಳಗಿರುವ ಪ್ರಸಿದ್ಧ ಪ್ರಾಚೀನ ದೇವಾಲಯಗಳಲ್ಲಿ ಸಂಪಿಗೆ ಸಿದ್ಧೇಶ್ವರ, ಹಿಡಂಬೇಶ್ವರ, ಫಲ್ಗುಣೇಶ್ವರ, ಏಕನಾಥಿ, ಬನಶಂಕರಿ ಮುಖ್ಯವಾಗಿವೆ. ಈ ಎಲ್ಲ ದೇವಾಲಯಗಳ ವಿಶೇಷತೆಯೆಂದರೆ ಬೃಹತ್ ಬಂಡೆಗಲ್ಲುಗಳ ಕೆಳಗಿನ ವಿಸ್ತಾರವಾದ ಗುಹೆಯನ್ನು ದೇವಾಲಯವಾಗಿ ಮಾಡಿಕೊಂಡಿರುವುದು. ಅಲ್ಲದೆ ಈ ಎಲ್ಲ ದೇಗುಲಗಳು ಮೂಲತಃ ಸ್ವಾಭಾವಿಕ ಗುಹೆಗಳೆಂಬುದನ್ನು ಗಮನಿಸಬೇಕು.

ಅಲ್ಲಿರುವ ಗುಹೆಗಳನ್ನು ಬಳಸಿ ಅವುಗಳಿಗೆ ಹೊಂದಿಕೊಂಡಂತೆ ದೇವಾಲಯದ ಇತರೆ ರಚನೆಗಳಾದ ಅಂತರಾಳ, ನವರಂಗ ಮತ್ತು ಮುಖಮಂಟಪಗಳನ್ನು ಕಾಲಾನುಕ್ರಮವಾಗಿ ಅಂದಂದಿನ ಆಳರಸರು ನಿರ್ಮಿಸಿ ವಿಸ್ತರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಇವೆಲ್ಲವುಗಳನ್ನು ಗುಹಾ ದೇಗುಲ ಅಥವಾ ಗುಹಾಲಯಗಳೆಂದೇ ಕರೆಯಬೇಕಾಗುತ್ತದೆ. ಇಂತಹ ಅನೇಕ ಗುಹಾಲಯಗಳು ಚಿತ್ರದುರ್ಗವಲ್ಲದೆ ನಾಡಿನ ಅನೇಕ ಕಡೆಗಳಲ್ಲಿವೆ. ಆದರೆ ಬೆಟ್ಟಗಳನ್ನೇ ಕತ್ತರಿಸಿ ನಿರ್ಮಿಸಲಾದ ಗುಹಾಂತರ ದೇಗುಲಗಳನ್ನು ಕರ್ನಾಟಕದ ಕೆಲವೆಡೆ ಅದರಲ್ಲೂ ಬಾದಾಮಿ, ಐಹೊಳೆಗಳಲ್ಲಿ ವಿಶೇಷವಾಗಿ ಕಾಣುತ್ತೇವೆ.
ಭಾರತದ ಮಟ್ಟಿಗೆ ಹೇಳುವುದಾದರೆ ನೂರಾರು ಬೆಟ್ಟಗಳನ್ನೇ ಕತ್ತರಿಸಿ ನಿರ್ಮಿಸಿದ ಗುಹಾಂತರ ದೇವಾಲಯಗಳ ಆಗರವೇ ಆಗಿರುವ ರಾಜ್ಯವೆಂದರೆ ಅದು ಮಹಾರಾಷ್ಟ್ರ. ಅಲ್ಲಿನ ಅಜಂತಾ, ಎಲ್ಲೋರಾ, ಕಾರ್ಲೇ, ಕನ್ಹೇರಿ, ಎಲಿಫೆಂಟಾ ಮುಂತಾದ ಸ್ಥಳಗಳು ಇದಕ್ಕೆ ಪ್ರಮುಖ ಸಾಕ್ಷ್ಯಗಳಾಗಿವೆ. ಕರ್ನಾಟಕದಲ್ಲೂ ತೀರಾ ಅಪರೂಪವೆನ್ನುವಂತೆ ಇಂತಹ ಗುಹಾಂತರ ದೇಗುಲಗಳನ್ನು ಕಡೆಯುವ ಪ್ರಯತ್ನಕ್ಕೆ ಕ್ರಿ.ಶ.೬-೭ನೆಯ ಶತಮಾನಗಳಲ್ಲಿ ಬಾದಾಮಿ ಚಾಲುಕ್ಯರು ಕೈಹಾಕಿದ್ದಾರೆ. ಬಾದಾಮಿ ಮತ್ತು ಐಹೊಳೆಗಳಲ್ಲಿ ಇಂತಹ ಅತ್ಯದ್ಭುತ ಕಲಾಕೃತಿಗಳು ನೋಡುಗರ ಗಮನವನ್ನು ಇಂದಿಗೂ ಸೂರೆಗೊಳ್ಳುತ್ತಿವೆ. ಇದೇ ಬಗೆಯ ಪ್ರಯತ್ನವನ್ನು ಹೊಯ್ಸಳ ಅರಸರು ಮೇಲುಕೋಟೆಯಲ್ಲಿ, ವಿಜಯನಗರ ಅರಸರು ಹಂಪೆಯಲ್ಲಿ ಪ್ರಯೋಗಿಸಿದ್ದಾರೆ.

ಆದರೆ ಅವರ ಗುಹಾಂತರ ದೇಗುಲಗಳನ್ನು ಗಮನಿಸಿದರೆ ಈ ಪ್ರಯತ್ನದಲ್ಲಿ ಅವರಿಗೆ ಅಷ್ಟಾಗಿ ಯಶಸ್ಸು ದೊರೆತಿಲ್ಲವೆನಿಸುತ್ತದೆ. ಆದರೆ ಚಿತ್ರದುರ್ಗ ಜಿಲ್ಲೆಯಲ್ಲಿ ಇಂತಹ ಪ್ರಯತ್ನವೊಂದನ್ನು ಪ್ರಯೋಗಿಸಿ ಯಶಸ್ವಿಯಾಗಿಸಿದ ಶ್ರೇಯ ಪಾಳೆಂiiಗಾರರಿಗೆ ಸಲ್ಲುತ್ತದೆ. ಅದೂ ಅತ್ಯಂತ ಕಠಿಣವಾದ ಕಣಶಿಲೆಯ ಬೆಟ್ಟವೊಂದರಲ್ಲಿ ಎಂಬುದು ಗಮನಾರ್ಹ ಸಂಗತಿ.
ಕಗ್ಗಲ್ಲಿನ ಬೆಟ್ಟವನ್ನು ಕತ್ತರಿಸಿ ಆಲಯವನ್ನಾಗಿಸಿ, ಇಂದಿಗೂ ಆರಾಧನಾ ಮಂದಿರವಾಗಿಸಿದ ಕೀರ್ತಿ ಪಾಳೆಯಗಾರರದ್ದೇ ಆಗಿದೆ. ಇಂತಹ ಅತ್ಯಂತ ಶ್ರಮಭರಿತ ಕಲಾಕೃತಿ ಇರುವುದು ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿಗೆ ಐದಾರು ಕಿ.ಮೀ ದೂರದಲ್ಲಿ. ನಾಯಕನಹಟ್ಟಿಯಿಂದ ದಕ್ಷಿಣಕ್ಕೆ ನೆಲಗೇತನಹಟ್ಟಿ ರಸ್ತೆಯ ಎಡಭಾಗದಲ್ಲಿ ಒಂದು ಚಿಕ್ಕದಾದ ಬೆಟ್ಟವಿದೆ. ಇದನ್ನು ಹೊಸಗುಡ್ಡವೆಂದೂ, ಇದರ ಮೇಲೆ ಪಾಳೆಯಗಾರರ ಕಾಲದ ಕೋಟೆಯಿದೆ. ಇಲ್ಲಿ ರಾಮಲಿಂಗೇಶ್ವರ ದೇಗುಲವಿರುವುದರಿಂದ ಈ ಕೋಟೆಗೆ ರಾಮದುರ್ಗವೆಂದೂ ಕರೆಯಲಾಗುತ್ತದೆ. ಈ ಗುಡ್ಡದ ಮೇಲೆ ಕಣಶಿಲೆಯ ಬೆಟ್ಟವನ್ನು ಕತ್ತರಿಸಿ ಸುಂದರವಾದ ಗುಹಾಂತರ ದೇವಾಲಯವಿದೆ. ಅದನ್ನು ರಾಮಲಿಂಗೇಶ್ವರನೆಂದೇ ಕರೆಯುತ್ತಿರುವರು. ಇದು ಚಿತ್ರದುರ್ಗ ಜಿಲ್ಲೆಯ ಅಪರೂಪದ ಗುಹಾಂತರ ದೇವಾಲಯ (ಖoಛಿಞಛಿuಣ ಖಿemಠಿಟe). ಒರಟಾದ ಬಂಡೆಗಲ್ಲಿನಲ್ಲಿ ಪಶ್ಚಿಮಾಭಿಮುಖವಾಗಿ ಕಡೆಯಲಾದ ಈ ದೇವಾಲಯದಲ್ಲಿ ಗರ್ಭಗೃಹ ಮತ್ತು ಸಭಾಮಂಟಪಗಳಿವೆ. ಗರ್ಭಗೃಹದಲ್ಲಿ ಹಿಂದೂ-ಮುಸ್ಲಿಂ ಶೈಲಿಯ ಕಮಾನುಗಳುಳ್ಳ ಮೂರು ಕೂಡುಗಳನ್ನು ಗೋಡೆಯಲ್ಲಿ ರಚಿಸಿದ್ದಾರೆ.

ಮಧ್ಯದ ಗೂಡಿನಲ್ಲಿ ಏಳು ಹೆಡೆಗಳುಳ್ಳ ಸರ್ಪವು ಶಿವಲಿಂಗವನ್ನು ಸುತ್ತಿ ಮೇಲ್ಭಾಗದಲ್ಲಿ ಹೆಡೆಗಳನ್ನು ಬಿಚ್ಚಿಕೊಂಡಂತೆ ಬಂಡೆಗಲ್ಲಿನಲ್ಲಿ ಕಡೆದಿರುವರು. ಇದನ್ನು ನಾಗಲಿಂಗೇಶ್ವರ ಎಂದೂ ಕರೆಯಲಾಗುತ್ತದೆ. ಶಿವಲಿಂಗಕ್ಕೆ ಸುಂದರವಾದ ಪ್ರಭಾವಳಿಯನ್ನೂ ಗೋಡೆಯಲ್ಲೇ ಕಡೆದಿರುವುದು ವಿಶೇಷ. ಈ ಶಿವಲಿಂಗವುಳ್ಳ ಮಂಟಪವನ್ನು ಭಾರವಾಹಕ ಶಿಲ್ಪಗಳು ಹೊತ್ತಂತೆ ಉಬ್ಬುಗೆತ್ತನೆಯಲ್ಲಿ ಮೂಡಿಸಿರುವುದು ಗಮನಾರ್ಹ. ಇದರ ಮುಂದೆ ಇನ್ನೊಂದು ಪ್ರತಿಷ್ಠಾಪನಾ ಶಿವಲಿಂಗವನ್ನು ಸ್ಥಾಪಿಸಿದ್ದಾರೆ. ಗರ್ಭಗೃಹದ ಬಾಗಿಲುವಾಡದ ಇಕ್ಕೆಲಗಳಲ್ಲಿ ಶೈವ ದ್ವಾರಪಾಲಕರು ಮತ್ತು ಹೂಬಳ್ಳಿ, ವಜ್ರ, ವ್ಯಾಳ ಶಾಖೆ, ಅರೆಗಂಬಗಳುಳ್ಳ ಪಂಚಶಾಖೆಯ ಕೆತ್ತನೆಗಳನ್ನು ಒಳಗೊಂಡಿದೆ. ಲಲಾಟ ಬಿಂಬದ ಮೇಲ್ಭಾಗದ ದಿಂಡಿನಲ್ಲಿ ಹೂಗಳ ರಚನೆಗಳಿವೆ. ಗರ್ಭಗೃಹವು ಸಭಾಮಂಟಪಕ್ಕಿಂತ ಮೂರು ಅಡಿಗಳಷ್ಟು ಎತ್ತರದಲ್ಲಿದೆ. ಈ ಗುಹಾಂತರ ದೇಗುಲದ ಸಭಾಮಂಟಪವು ನಾಲ್ಕು ಕಂಬಗಳುಳ್ಳ ಆರು ಅಂಕಣಗಳನ್ನು ಹೊಂದಿದೆ. ಇವುಗಳನ್ನು ಬಹುಮುಖಗಳಲ್ಲಿ ಕಡೆದಿದ್ದು, ಕಂಬಗಳಲ್ಲಿ ವರಾಹ, ನರಸಿಂಹ, ಬೇಡರ ಕಣ್ಣಪ್ಪ, ನಾಗಬಂಧ ಮೊದಲಾದ ಉಬ್ಬುಶಿಲ್ಪಗಳಿವೆ. ಕಂಬಗಳ ಮೇಲ್ಭಾಗ ನಾಲ್ಕು ಕಡೆಗಳಲ್ಲೂ ಸುಂದರವಾಗಿ ಕಡೆದ ಪುಷ್ಟ ಬೋದಿಗೆಗಳಿವೆ. ಸಭಾಮಂಟಪದ ಭುವನೇಶ್ವರಿಯಲ್ಲಿ ಮುಗುಚಿದ ಕಮಲದ ಮೊಗ್ಗುಗಳನ್ನು ಆಳವಾಗಿ ಕಡೆದಿದ್ದು, ಅವುಗಳ ಸುತ್ತಲೂ ಅಷ್ಟ ದಿಕ್ಪಾಲಕರನ್ನೂ ಚಿತ್ರಿಸಿರುವರು. ಇವುಗಳಲ್ಲದೆ ಛಾವಣಿಯ ಆರು ಅಂಕಣಗಳಲ್ಲೂ ವಿವಿಧ ಬಗೆಯ ಉಬ್ಬುಶಿಲ್ಪಗಳಿದ್ದು, ಅವುಗಳಲ್ಲಿ ಹಾರುತ್ತಿರುವ ನವಿಲು, ಹಾವನ್ನು ಹಿಡಿದ ಗರುಡ, ನರ್ತಕಿ, ಗಂಡಬೇರುಂಡ, ರಥ, ಲಕ್ಷ್ಮಿ, ಶಿವಪಾರ್ವತಿ, ಷಣ್ಮುಖ, ಆಂಜನೇಯ, ವಾಮನ, ರಾಮ-ಲಕ್ಷ್ಮಣ-ಸೀತೆ, ಕಿನ್ನರ ಶಿಲ್ಪ, ಲಕ್ಷ್ಮಿನಾರಾಯಣ, ಶ್ರೀದೇವಿ-ಭೂದೇವಿಯರೊಂದಿಗಿನ ವಿಷ್ಣು, ಮತ್ತು ಕೃಷ್ಣನ ವಿವಿಧ ಭಂಗಿಗಳಾದ ಬಾಲಕೃಷ್ಣ, ಕಾಳಿಂಗಮರ್ಧನರ ಉಬ್ಬುರಚನೆಗಳಿವೆ. ದೇವಾಲಯದ ಮುಂಭಾಗದಲ್ಲಿ ಸುಂದರವಾದ ಅಲಂಕರಣೆಗಳುಳ್ಳ ಕಪ್ಪುಶಿಲೆಯ ನಂದಿಯನ್ನು ಪ್ರತಿಷ್ಟಾಪಿಸಿರುವರು. ಇದನ್ನು ಗಂಟೆ, ಲೊಡಗ, ಸರಪಳಿಯ ಸರ, ಮುಖವಾಡ, ಹಣೆಪಟ್ಟಿ ಮತ್ತು ಕಾಲ್ಕಡಗಗಳಿಂದ ಅಲಂಕರಿಸಲಾಗಿದೆ.


ಇಲ್ಲಿನ ವಿಶೇಷತೆಯೆಂದರೆ ಎಷ್ಟು ದಿನಗಳ ಕಾಲ ಈ ಗುಹಾಂತರ ದೇಗುಲವನ್ನು ನಿರ್ಮಿಸಲಾಯಿತೆಂಬ ಸಂಗತಿಯನ್ನು ದಾಖಲಿಸಿರುವುದು. ಬಂಡೆಗಲ್ಲಿನ ಮೇಲೆ ಅಂದಿನ ಶಿಲ್ಪಿಗಳು ತಮ್ಮ ತಮ್ಮ ಕೆಲಸದ ದಿನಗಳನ್ನು ಸೂಚಿಸುವ ಸಲುವಾಗಿ ತಮ್ಮ ಹೆಸರಿನ ಮೊದಲ ಅಕ್ಷರ (ಲಕ್ಷ್ಮಣ ಹೆಸರಿಗ್ಕೆ ಲ ಎಂಬಂತೆ) ಮತ್ತು ಕೆಲಸದ ದಿನಗಳಿಗೆ ಉದ್ದ ಗೆರೆಗಳನ್ನು ಕೊರೆದಿರುವುದು ವಿಶೇಷ. ಈ ಗುಹಾಂತರ ದೇವಾಲಯವನ್ನು ಎಷ್ಟು ದಿನಗಳಲ್ಲಿ ಮತ್ತು ಯಾರು ಕಡೆದರೆಂಬುದನ್ನು ನಿಖರವಾಗಿ ಗುರುತಿಸಲು ಇವು ನೆರವಾಗುತ್ತವೆ ಎನ್ನಲಡ್ಡಿಯಿಲ್ಲ.
ಈ ಗುಹಾಂತರ ದೇಗುಲವನ್ನು ಕಡೆಸಿದವರು ಯಾರೆಂಬ ಪ್ರಶ್ನೆ ಸಹಜವಾಗಿಯೇ ಮೂಡುತ್ತದೆ. ಇದಕ್ಕೆ ಈಗಾಗಲೇ ಹೇಳಿದಂತೆ ಶಿಲ್ಪಿಗಳ ಹೆಸರಿನ ಮೊದಲ ಅಕ್ಷರಗಳನ್ನು ಗಮನಿಸಿದರೆ ಅವು ಕನ್ನಡ ಅಕ್ಷರಗಳಾಗಿದ್ದು ವಿಜಯನಗರೋತ್ತರ ಕಾಲದ ಬರಹಗಳೇ ಆಗಿವೆ. ಬಯಲುಸೀಮೆಯ ಈ ಪರಿಸರದಲ್ಲಿ ಇರುವ ಸ್ವಲ್ಪ ಎತ್ತರದ ಮತ್ತು ಸುರಕ್ಷಿತ ಬೆಟ್ಟವೆಂದರೆ ಹೊಸಗುಡ್ಡವೇ ಆಗಿದೆ. ಈ ಹಿನ್ನೆಲೆಯಲ್ಲಿ ಬೆಟ್ಟವನ್ನು ಬಳಸಿ ಕಟ್ಟಲಾದ ಎರಡು ಸುತ್ತಿನ ಕೋಟೆಯಿದೆ. ಈ ಕೋಟೆಯಲ್ಲಿ ಸುತ್ತಲೂ ಬುರುಜುಗಳಿವೆ. ಮಧ್ಯಭಾಗದಲ್ಲಿ ಮೂರು ನೀರಿನ ಕೊಳಗಳಿವೆ. ಇವುಗಳಲ್ಲಿ ಎರಡು ಸ್ವಾಭಾವಿಕ ಕೊಳಗಳಿದ್ದು, ಅಕ್ಕಪಕ್ಕದಲ್ಲಿ ಇರುವುದರಿಂದ ಅಕ್ಕತಂಗಿ ಹೊಂಡಗಳೆಂದು ಕರೆಯುವರು. ಇಲ್ಲಿ ಇನ್ನೊಂದು ಮಾನವನಿರ್ಮಿತ ಕಲ್ಲಿನ ನೀರಿನ ತೊಟ್ಟಿಯನ್ನು ಬಂಡೆಗಲ್ಲಿನಲ್ಲಿ ಆಳವಾಗಿ ಕಡೆದಿರುವರು. ಇವು ಅಂದು ಕೋಟೆಯಲ್ಲಿ ವಾಸಿಸುವ ಜನರಿಗೆ ಅಗತ್ಯ ನೀರನ್ನು ಒದಗಿಸುವ ಜಲಾಗಾರಗಳಾಗಿವೆ. ಇದೊಂದು ಪ್ರಮುಖ ರಕ್ಷಣಾತ್ಮಕ ಕೋಟೆಯಾಗಿದೆ. ಈ ಗುಡ್ಡದ ತಪ್ಪಲಿನಲ್ಲಿ ಇಂದಿಗೂ ವಾಸಿಸುತ್ತಿರುವ ಪಾಳೆಯಗಾರರ ಮನೆತನದ ಕುಟುಂಬಗಳಿವೆ. ಇವೆಲ್ಲವೂ ನಾಯಕನಹಟ್ಟಿ ಪಾಳೆಯಗಾರರ ಆಳ್ವಿಕೆಯನ್ನು ಸಮರ್ಥಿಸುವ ಪ್ರಮುಖ ಆಕರಗಳು. ಅಲ್ಲದೆ ಹಟ್ಟಿ ಪಾಳೆಯಗಾರರು ಕಟ್ಟಿಸಿದ ಅನೇಕ ಸ್ಮಾರಕ-ದೇಗುಲಗಳು ಈ ಪರಿಸರದಲ್ಲಿವೆ. ಅಲ್ಲದೆ ಇದೇ ವಾಸ್ತು ಮಾದರಿಯನ್ನು ಅನುಸರಿಸಿ ಕಟ್ಟಿಸಲಾದ ಪ್ರಸಿದ್ಧ ಶಿವಪಾರ್ವತಿ ದೇವಾಲಯವು ಇಲ್ಲಿಗೆ ಎಂಟು ಕಿ.ಮೀ. ದೂರವಿರುವ ಗೌರಿಪುರ ಗ್ರಾಮದಲ್ಲಿದೆ. ಈ ದೇವಾಲಯದ ಕಂಬಗಳು, ಅದರ ಮೇಲಿನ ಶಿಲ್ಪ ಮೊದಲಾದ ಲಕ್ಷಣಗಳು ರಾಮಲಿಂಗೇಶ್ವರ ಗುಹಾಂತರ ದೇವಾಲಯದ ವಾಸ್ತು ಲಕ್ಷಣಗಳೇ ಆಗಿವೆ.

 

ಆದುದರಿಂದ ಕೋಟೆ, ದೇಗುಲ, ವಾಸ್ತು ಮತ್ತು ಶಿಲ್ಪಗಳ ಹಿನ್ನೆಲೆಯಲ್ಲಿ ಹಟ್ಟಿ ಪಾಳೆಯಗಾರರ ಕಾಲದ ನಿರ್ಮಿತಿಯೆಂಬುದು ಸ್ಪಷ್ಟವಾಗುತ್ತದೆ. ಇಂತಹ ಒಂದು ವಿಶಿಷ್ಟವಾದ ಮತ್ತು ಶ್ರಮದಾಯಕ ಗುಹಾಂತರ (ಖoಛಿಞಛಿuಣ ಖಿemಠಿಟe) ದೇವಾಲಯವನ್ನು ನಿರ್ಮಿಸಿದ ನಾಯಕನಹಟ್ಟಿ ಪಾಳೆಯಗಾರರು ತಮ್ಮ ಕಾರ್ಯವನ್ನು ಅಜರಾಮರವಾಗಿಸಿದ್ದಾರೆ.

Girl in a jacket
error: Content is protected !!