ಶ್ರೀ ಡಾ.ಆರೂಢಭಾರತೀ ಸ್ವಾಮೀಜಿ
ಸಿದ್ಧಸೂಕ್ತಿ :
ಮಾಡಿದವರ ಪಾಪ, ಆಡಿದವರ ಬಾಯಲ್ಲಿ.
ಪಾಪ ದುಷ್ಕೃತ್ಯ ಅಪರಾಧ. ನಿಷಿದ್ಧ ಸೇವನೆ, ಪರಹಣ-ವಸ್ತು – ಆಸ್ತಿ-ವ್ಯಕ್ತಿವಗೈರೆ ಅಪಹರಣ, ಬೆಳೆಸಿದ-ಉಪಕರಿಸಿದ – ನಂಬಿದ ಜನಕೆ ದ್ರೋಹ, ಸುಳ್ಳು ಮೋಸ ವಂಚನೆ ಲಂಚ ಭ್ರಷ್ಟಾಚಾರ, ಕರ್ತವ್ಯವಿಮುಖತೆ, ಕೊಲೆ ಸುಲಿಗೆ ಗೌರವ – ವಸ್ತುಹಾನಿ ಧ್ವಂಸ, ಅತ್ಯಾಚಾರ, ಗೋ-ಶಿಶು-ಸ್ತ್ರೀಹತ್ಯೆ ಅಪರಾಧ! ಸ್ವಾರ್ಥ ದ್ವೇಷ ಅಸಹನೆ ಅತಿಯಾಶೆ, ತಿಳಿವಳಿಕೆಯ ಅಭಾವ, ತಪ್ಪು ತಿಳುವಳಿಕೆ, ದುಡುಕು, ಪರಿಸ್ಥಿತಿಯ ಅನಿವಾರ್ಯತೆ, ಬಡತನ ಇದಕೆ ಕಾರಣ. ದುಷ್ಕೃತ್ಯ ಮಾಡಬಾರದೆನ್ನುತ್ತೇವೆ,ಗುಟ್ಟಾಗಿ ಮಾಡುವುದುಂಟು! ರಟ್ಟಾದ ಪರರ ದುಷ್ಕೃತ್ಯವ ಎಗ್ಗಿಲ್ಲದೇ ಜರಿಯುವುದುಂಟು. ಇದು ಜಗದ ಮೋಡಿ! ಆಡಿಕೊಳ್ಳುವುದನು ತೊರೆದು ತಿಳಿಹೇಳಿ ಅಪರಾಧ ತಡೆಯೋಣ. ಮಾಡಿದವನು ಉಣ್ಣುತ್ತಾನೆ ಮಣಿಯಂಥ ಕಡಬ! ನಾವೇಕೆ ಅದನಾಡಿಕೊಳ್ಳುವುದು? ಆಡಿದರೆ ಮುಗಿಯದು, ಎಲ್ಲೆಲ್ಲೂ ತುಂಬಿಹುದು! ಹೇಸಿಗೆಯ ಮೇಲೆ ಕಲ್ಲೆತ್ತಿ ಹಾಕಿದರೆ ಸಿಡಿಯುವುದು ಮುಖಕೆ! ದುಷ್ಕೃತ್ಯ ಆಡಿದಂತೆ ಮನವಲ್ಲಿ ಬೆರೆಯುವುದು,ಮನ ವಾಣಿ ಮಲಿನ! ಸತ್ಕಾರ್ಯ ಸದ್ವಚನ ಸಚ್ಚಿಂತನ ಭಂಗ! ಪಾಪಿ ಶರಣಾಗತನಾಗಿ ಭಗವಂತನಿಗೆ, ಆಗುವನು ಪವಿತ್ರ, ನಿಂದಕನಾಗುವನು ಮಲಿನ! ಸಂನ್ಯಾಸಿ ಆಶ್ರಮ, ವೇಶ್ಯೆ ಮನೆ ಎದುರೆದುರು. ವೇಶ್ಯೆಯ ಬಳಿ ಸುಳಿವವರ ಜಪ ಸಂನ್ಯಾಸಿಗೆ, ಸಂತ ಸಜ್ಜನ ಜನ್ಮ ನೀಡೆಂಬ ಮೊರೆ ವೇಶ್ಯೆಯದು. ನರಕ ಸಂನ್ಯಾಸಿಗೆ, ಸ್ವರ್ಗ ವೇಶ್ಯೆಗೆ ಅಂತೆ! ಪುಣ್ಯವ ಮಾಡೋಣ, ಜನರ ಪಾಪವ ತಡೆಯೋಣ!!