
ಶ್ರೀ ಆರೂಢ ಭಾರತೀ ಸ್ವಾಮೀಜಿ
ಸಿದ್ಧಸೂಕ್ತಿ :
ಹೊಸ ಯುಕ್ತಿ ಹಳೆ ತತ್ತ್ವದೊಡಗೂಡೆ ಧರ್ಮ.
ಆಧುನಿಕತೆಯನ್ನೆತ್ತಿ ಪ್ರಾಚೀನತೆಯ ತುಳಿದವ ವೈಚಾರಿಕ! ನೆನಪಿರಲಿ :ಆಧುನಿಕತೆಯ ಬೇರು ಪ್ರಾಚೀನತೆ! ಹಳೆ ಬೇರಿಲ್ಲದೇ ಹೊಸ ಚಿಗುರೆಲ್ಲಿ? ಅಪ್ಪ ಅಮ್ಮ ಇಲ್ಲದ ಮಗುವೆಲ್ಲಿ? ಬೆಳೆದ ಮಗು ವಿಮಾನ ನೌಕೆ ವಾಹನ ಚಲಾಯಿಸಬಹುದು! ಇದು ಸಾಧ್ಯವಾದದ್ದು ಇದನರಿಯದ ಅಪ್ಪ ಅಮ್ಮನ ಹಣ ಪರಿಶ್ರಮದಿಂದ! ಭೂತ ವರ್ತಮಾನಕ್ಕೆ ಅಡಿಪಾಯ, ವರ್ತಮಾನ ಭವಿಷ್ಯತ್ತಿನ ಅಡಿಪಾಯ! ಭೂತವಿಲ್ಲದ ವರ್ತಮಾನ ಇಲ್ಲ! ಇದನ್ನರಿತು ನಮ್ಮ ಪ್ರಾಚೀನ ಸಂಸ್ಕೃತಿ ವೇದ ಶಾಸ್ತ್ರ ಪುರಾಣಾಗಮಾದಿಗಳನ್ನಾದರಿಸಬೇಕು! ಆನೆಯ ತಲೆ ಜೋಡಿಸಿ ಜೀವ ಕೊಡಬಲ್ಲ ಶಿವನಿಗೆ, ತಾನೇ ಕತ್ತರಿಸಿದ ಗಣೇಶನ ತಲೆ ಜೋಡಿಸಿ ಜೀವ ಕೊಡಲಾಗಲಿಲ್ಲವೇ? ಎಂಬಿತ್ಯಾದಿ ಪ್ರಶ್ನಿಸಿ, ವೇದ ಪುರಾಣ ಎಲ್ಲಾ ಮೋಸ, ಕಟ್ಟು ಕಥೆ ಎನ್ನುವ ಪೆರಿಯಾರ್ ರಾಮಸ್ವಾಮಿ – ಮರಿಗಳುಂಟು! ಕಟ್ಟು ಕಥೆ ಎಂದು ಹೊಳೆದ ಅವರಿಗೆ ಏತಕ್ಕೆ ಕಥೆ ಕಟ್ಟಲಾಯಿತೆಂಬುದು ಹೊಳೆಯಲಿಲ್ಲ! ಇದೆಲ್ಲವೂ ಪರಮಾತ್ಮಮಯ ಎನ್ನುವ ಉಪನಿಷತ್ತೂ ಮೋಸವೇ? ಉತ್ಪ್ರೇಕ್ಷೆ ಅರ್ಥವಾದಗಳ ಹಿಂದೆ ತತ್ತ್ವ ಅಡಗಿದೆ. ಬಂಗಾರದಂಥವಳು ಎಂಬಲ್ಲಿ ಜಡವೆಂದರ್ಥವಲ್ಲ! ಹಳೆಯದೇ ಪರಿಪೂರ್ಣವೆಂದೂ ಅಲ್ಲ. ಪರಿಷ್ಕಾರ ಇರಲಿ! ಅದಕ್ಕೆ ಹೊಸತನ ನೀಡಿ!ಋಷಿವಾಕ್ಯದೊಡನೆ ವಿಜ್ಞಾನ ಕಲೆ ಜೋಡಿಸಿ! ಇದು ಜೀವನದ ಯಶಸ್ಸು! ಮೂಲವನ್ನು ಸಾಯಿಸುವುದಲ್ಲ!