ಮಂಡ್ಯದಲ್ಲಿ ನೂತನ ಕೃಷಿ, ತೋಟಗಾರಿಕೆ ವಿವಿಗೆ ಸಿಕ್ತು ಸರ್ಕಾರದ ಅನುಮೋದನೆ.
by ಕೆಂಧೂಳಿ
ಬೆಂಗಳೂರು ಜ 29-ಮಂಡ್ಯ ಜಿಲ್ಲೆ, ವಿ.ಸಿ ಫಾರಂನಲ್ಲಿ ನೂತನ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ (ಸಮಗ್ರ) ಸ್ಥಾಪನೆಗೆ ರಾಜ್ಯ ಸರ್ಕಾರ ತಾತ್ವಿಕ ಅನುಮೋದನೆ ನೀಡಿ ಆದೇಶ ಹೊರಡಿಸಿದ್ದು, ಮಂಡ್ಯ ಜಿಲ್ಲೆ ಸೇರಿದಂತೆ ಮೈಸೂರು ವಿಭಾಗದ ಜನರ ಬಹುದಿನಗಳ ಕನಸು ಈಡೇರಿದೆ.
2024-25ನೇ ಸಾಲಿನ ಬಜೆಟ್ ಭಾಷಣದ ಕಂಡಿಕೆ-42ರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯರವರು ಮಂಡ್ಯ ಕೃಷಿ ವಿಶ್ವವಿದ್ಯಾಲಯ ಸ್ಥಾಪನೆಯ ಸಾಧ್ಯತೆ ಕುರಿತು ಪರಿಶೀಲನೆಗೆ ಸಮಿತಿ ರಚಿಸುವುದಾಗಿ ಘೋಷಣೆ ಮಾಡಿದ ಒಂದು ವರ್ಷದೊಳಗೆ ವಿವಿ ಪ್ರಾರಂಭಕ್ಕೆ ಆದೇಶ ಹೊರಬಿದ್ದಿದೆ. ಕೃಷಿ ಸಚಿವರ ವಿಶೇಷ ಕಾಳಜಿ, ನಿರಂತರ ಪರಿಶ್ರಮ ಶೀಘ್ರವೇ ಫಲ ನೀಡಿದೆ.
ಇದಕ್ಕಾಗಿ ಚಲುವರಾಯಸ್ವಾಮಿರವರು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಸಚಿವ ಸಂಪುಟದ ಸಹೊದ್ಯೋಗಿಗಳಿಗೆ ಧನ್ಯವಾದ ಅರ್ಪಿಸಿದ್ದಾರೆ.
ನೂತನ ಬಜೆಟ್ ಘೋಷಣೆಯಂತೆ ಬೆಂಗಳೂರು ಕೃಷಿ ವಿ.ವಿಯ ವಿಶ್ರಾಂತಿ ಕುಲಪತಿ ಡಾ||ರಾಜೇಂದ್ರಪ್ರಸಾದ್‌ರವರ ಅಧ್ಯಕ್ಷತೆಯಲ್ಲಿ ತಜ್ಞರ ಸಮಿತಿ ರಚಿಸಲಾಗಿತ್ತು. ಈ ತಂಡವು ಹಲವು ಭಾರಿ ಸ್ಥಳ ಪರಿಶೀಲಿಸಿ, ಸಭೆಗಳನ್ನು ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಿತ್ತು
ಸಮಿತಿಯ ಅಭಿಪ್ರಾಯವನ್ನು ಕಳೆದ ವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಮುಂದಿಟ್ಟು ಅನುಮೋದನೆ ಪಡೆದ ನಂತರ ಸರ್ಕಾರ ಮಂಡ್ಯ ಜಿಲ್ಲೆಯ ವಿಶ್ವೇಶ್ವರಯ್ಯ ಕಾಲುವ ಫಾರಂನಲ್ಲಿ ನೂತನ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ (ಸಮಗ್ರ) ಸ್ಥಾಪಿಸಲು ತಾತ್ವಿಕ ಅನುಮೋದನೆ ನೀಡಿದೆ.
ಆರ್ಥಿಕ ಇಲಾಖೆ ಕೂಡ ಮಂಡ್ಯದ ವಿಸಿ ಫಾರಂನಲ್ಲಿ ಲಭ್ಯವಿರುವ ಮೂಲಭೂತ ಸೌಕರ್ಯಗಳನ್ನು ಬಳಸಿಕೊಂಡು ಮಂಡ್ಯ ಕೃಷಿ ವಿಶ್ವವಿದ್ಯಾಲಯ ಪ್ರಾರಂಭಿಸಲು ತಾತ್ವಿಕ ಅನುಮತಿ ನೀಡಿ ವಿಶ್ವವಿದ್ಯಾಲಯಕ್ಕೆ ಹಂತ ಹಂತವಾಗಿ ಅವಶ್ಯಕವಿರುವ ಮೂಲಭೂತ ಸೌಕರ್ಯಗಳಿಗೆ ಮಾತ್ರ ವಿಸ್ತೃತ ಅಂದಾಜು ಹಾಗೂ ಆವರ್ತಕ ವೆಚ್ಚದ ಅಂದಾಜನ್ನು ಸಲ್ಲಿಸಲು ತಿಳಿಸಿದೆ.
ಈ ಎಲ್ಲಾ ಅಂಶಗಳ ಆಧಾರದ ಮೇರೆಗೆ ಸರ್ಕಾರವು ಮಂಡ್ಯ ಜಿಲ್ಲೆಯ ವಿಸಿ ಫಾರಂನಲ್ಲಿ ನೂತನ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ (ಸಮಗ್ರ) ಸ್ಥಾಪಿಸಲು ಅನುಮೋದನೆ ನೀಡಿದೆ. ಷರತ್ತು ನಿಬಂಧನೆಗಳು ಹಾಗೂ ಆಡಳಿತಾತ್ಮಕ ಅನುಮೋದನೆಗಳನ್ನು ಮುಂದಿನ ಆದೇಶದಲ್ಲಿ ಹೊರಡಿಸಲಾಗುವುದೆಂದು ತಿಳಿಸಲಾಗಿದೆ.
ಶೀಘ್ರವೇ ವಿಶೇಷಾಧಿಕಾರಿಗಳನ್ನು ನೇಮಿಸಿ ಪ್ರಸಕ್ತ ಸಾಲಿನಲ್ಲಿಯೇ ವಿ.ವಿ ಕಾರ್ಯಾರಂಭ ಮಾಡಲು ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುವುದು ಎಂದು ಕೃಷಿ ಸಚಿವರಾದ ಚಲುವರಾಯಸ್ವಾಮಿ ತಿಳಿಸಿದ್ದಾರೆ.