ಕಾವೇರಿ ವನ್ಯಧಾಮ ವಲಯದಲ್ಲಿ ಮರಿ ವೀರಪ್ಪನ್ ಗಳ ಹಾವಳಿ!!

Share

Writing: ಪರಶಿವ ಧನಗೂರು

ಕಾವೇರಿ ವನ್ಯಧಾಮ ವಲಯದಲ್ಲಿ ಮರಿ ವೀರಪ್ಪನ್ ಗಳ ಹಾವಳಿ!!

ಒಂದು ಕಾಲಕ್ಕೆ ದಂತಚೋರ, ಕಾಡುಗಳ್ಳ,ನರಹಂತಕ ವೀರಪ್ಪನ್ ಹಾವಳಿಯಿಂದ ಕುಖ್ಯಾತಿ ಪಡೆದಿದ್ದ ಕರ್ನಾಟಕ ತಮಿಳುನಾಡು ಗಡಿಯ ಕಾವೇರಿ ವನ್ಯಧಾಮ ಅರಣ್ಯ ಪ್ರದೇಶದಲ್ಲಿ ಈಗ ಮತ್ತೆ ಕಾಡುಗಳ್ಳ ಮರಿವೀರಪ್ಪನ್ ಗಳ ಕಾಟ ಮಿತಿಮೀರುತ್ತಿದೆ! ಕಳೆದವಾರ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಹಲಗೂರು ಬಳಿಯ ಬಸವನಬೆಟ್ಟ ಕಾವೇರಿ ವನ್ಯಧಾಮ ಅರಣ್ಯ ವಲಯದಲ್ಲಿ ರಾತ್ರಿವೇಳೆ ಎರಡು ಜಿಂಕೆ ಗಳನ್ನು ಗುಂಡಿಟ್ಟು ಕೊಂದು ಬೇಟೆಯಾಡುತಿದ್ದ ಮೂವರು ಕಾಡುಗಳ್ಳರ ಮೇಲೆ ಗುಂಡಿನ ದಾಳಿ ನಡೆಸಿರುವ ಅರಣ್ಯ ಇಲಾಖೆ ಸಿಬ್ಬಂದಿಗಳು ಗೊಲ್ಲರ ದೊಡ್ಡಿಯ ವೆಂಕಟೇಶ್ ಎಂಬ ಕಳ್ಳಬೇಟೆಗಾರನ ಕಾಲಿಗೆ ಗುಂಡು ಹಾರಿಸಿ ಬಂಧಿಸಿದ್ದಾರೆ! ಮಳವಳ್ಳಿ ಡಿವೈಎಸ್ಪಿ ಲಕ್ಷ್ಮೀ ನಾರಾಯಣ್ ಪ್ರಸಾದ್, ಎಸಿಎಫ್ ಅಂಕರಾಜು, ಆರ್.ಎಫ್.ಓ. ಮಹದೇವಸ್ವಾಮಿ ನೇತೃತ್ವದಲ್ಲಿ ಪರಾರಿಯಾಗಿರುವ ಇನ್ನಿಬ್ಬರು ಬೇಟೆಗಾರರ ಬಂಧನಕ್ಕೆ ಬಲೆ ಬೀಸಿದ್ದಾರೆ. ಐದು ವರ್ಷಗಳ ಹಿಂದೆ 2016ರ ಮೇ ನಲ್ಲಿ ಇದೆ ಬಸವನಬೆಟ್ಟ ಕಾವೇರಿ ವನ್ಯಧಾಮ ವಲಯದಲ್ಲಿ ಅಕ್ರಮವಾಗಿ ಕಾಡಿಗೆ ನುಗ್ಗಿ ಕಾಡುಕುರಿ ಮತ್ತು ಉಡಗಳನ್ನು ಬೇಟೆಯಾಡಿ ಚರ್ಮ, ಮಾಂಸ ಒತ್ತೊಯ್ಯುತ್ತಿದ್ದ ಮುಸುರೇ ದೊಡ್ಡಿಯ ಮಹಾದೇವ್ ಮತ್ತು ನಿರಂಜನ್ ಎಂಬ ಕಳ್ಳ ಬೇಟೆಗಾರರನ್ನು ಬಂಧಿಸಲಾಗಿತ್ತು. ಈಗ ಇದೇ ಪ್ರದೇಶದಲ್ಲಿ ಮತ್ತೆ ವನ್ಯಜೀವಿಗಳ ಕಳ್ಳಬೇಟೆಗಾರರ ಹಾವಳಿ ಜಾಸ್ತಿಯಾಗಿದ್ದು ರಾತ್ರೋರಾತ್ರಿ ಕಾಡಿಗೆ ನುಗ್ಗಿ ನಾಡ ಬಂದೂಕು ಗಳಿಂದ ಕಾಡುಪ್ರಾಣಿಗಳನ್ನು ಗುಂಡಿಟ್ಟು ಕೊಲ್ಲುತ್ತಿದ್ದಾರೆ. ಮನುಷ್ಯನೆಂಬ ಪ್ರಾಣಿ ತನ್ನ ನಾಲಿಗೆಯ ರುಚಿಯ ಚಪಲಕ್ಕಾಗಿ ಕಾಡುಪ್ರಾಣಿಗಳ ಬೇಟೆಗಿಳಿದು ಈಗ ಹಣಕಾಸಿನ ಆದಾಯಕ್ಕಾಗಿ ಅಳಿವಿನಂಚಿನಲ್ಲಿರುವ ವನ್ಯ ಪ್ರಾಣಿಗಳನ್ನು ಬಲಿ ಪಡೆದು ಹಸಿರು ಅರಣ್ಯವನ್ನು ಪ್ರಾಣಿಸಂತತಿಯನ್ನು ನಾಶ ಮಾಡುತ್ತಿದ್ದಾನೆ.

ದಂತಚೋರ ಕಾಡುಗಳ್ಳ ನರಹಂತಕ ವೀರಪ್ಪನ್ ಬದುಕಿದ್ದಾಗ ಶ್ರೀಗಂಧದ ಮರಗಳನ್ನು ಕಡಿದು ಮಾರುತ್ತಿದ್ದ. ನಂತರ ಆನೆಗಳ ದಂತ ತೆಗೆದು ಹಣ ಸಂಪಾದಿಸಲು ತೊಡಗಿದ.ಆಹಾರಕ್ಕಾಗಿ ಕಾಡುಪ್ರಾಣಿಗಳನೂ ಬೇಟೆಯಾಡುತ್ತಿದ್ದ. ಆನಂತರ ಆತ ದೊಡ್ಡ ದೊಡ್ಡ ಪ್ರಸಿದ್ಧ ಜನರನ್ನು ಕಿಡ್ನಾಪ್ ಮಾಡಿ ಆದಾಯ ಹೆಚ್ಚಿಸಿಕೊಳ್ಳಲು ಸಂಚು ರೂಪಿಸಿ ಯಶಸ್ವಿ ಯಾಗಿ ಸರ್ಕಾರದ ಕೆಂಗಣ್ಣಿಗೆ ಗುರಿಯಾಗಿ ಕೊಲೆಯಾದ. ಆದರೆ ಈಗ ಕಾವೇರಿ ವನ್ಯಧಾಮ ಅರಣ್ಯ ವಲಯದಲ್ಲಿ ಹುಟ್ಟಿಕೊಂಡಿರುವ ಕಳ್ಳ ಬೇಟೆ ಗಾರ ಮರಿವೀರಪ್ಪನ್ ಗಳು ನಿರಂತರವಾಗಿ ವನ್ಯಮ್ರಗ ಶಿಕಾರಿಗೆ ಇಳಿದಿದ್ದು ಕಾಡುಪ್ರಾಣಿಗಳ ಕೊಲ್ಲುವುದರಲ್ಲಿ ಹಳೇ ವೀರಪ್ಪನ್ ನನ್ನೇ ಮೀರಿಸುವ ಹಂತಕ್ಕೆ ಈ ಮರೀ ವೀರಪ್ಪನ್ ಗಳ ಹಾವಳಿ ಹೆಚ್ಚಾಗಿದೆ! ಹಣ ಮತ್ತು ಮಾಂಸದ ಆಸೆಗೆ ಈ ಕಳ್ಳಬೇಟೆಗಾರರು ಹುಲಿ, ಆನೆ,ಜಿಂಕೆ,ಹಂದಿ,ಚಿರತೆ ಇತ್ಯಾದಿ ಪ್ರಾಣಿಗಳನ್ನು ಬೇಟೆಯಾಡಲು ಹುಲ್ಲು, ಹಣ್ಣು ಮತ್ತು ಇತರ ಆಹಾರ ಪದಾರ್ಥಗಳಲ್ಲಿ ಬಾಂಬುಗಳನ್ನು ಇಟ್ಟು ವನ್ಯ ಜೀವಿಗಳ ಜೀವ ತೆಗೆಯುತ್ತಿರುವ ಪ್ರಕರಣಗಳು ಮಲೆಮಹದೇಶ್ವರ ಅರಣ್ಯ ಪ್ರದೇಶದಲ್ಲಿ ಕಾಡಿಗೆ ಮೇಯಲು ಹೋಗಿದ್ದ ಜಾನುವಾರುಗಳು ಬಾಂಬಿಗೆ ಬಾಯಿ ಹಾಕಿ ಬಲಿಯಾದಾಗಲೇ ಬೆಳಕಿಗೆ ಬಂದಿದ್ದವು!

ಕಳೆದ ವರ್ಷ ಕೇವಲ ಐದು ತಿಂಗಳಿಗೆ 13ಕ್ಕೂ ಹೆಚ್ಚು ಕಳ್ಳಬೇಟೆ ಪ್ರಕರಣಗಳು ಮಲೆಮಹದೇಶ್ವರ ಕಾವೇರಿ ವನ್ಯಧಾಮ ವಲಯ ಒಂದರಲ್ಲೇ ವರದಿಯಾಗಿದ್ದವು! ಕೊಳ್ಳೆಗಾಲ, ಹೂಂಗ್ಯಾಂ, ಪಿಜಿ ಪಾಳ್ಯ, ಹನೂರು ಮಹದೇಶ್ವರ ಬೆಟ್ಟಗಳ ಕಾವೇರಿ ವನ್ಯಧಾಮ ಅರಣ್ಯ ವಲಯದಲ್ಲಿ ಕಾಡುಹಂದಿ, ಆಮೆ, ಮೂಲ, ಜಿಂಕೆಯ ಚರ್ಮ ಮೂಳೆ, ಉಗುರು ಅಕ್ರಮ ಸಾಗಾಣಿಕೆಯ ಮೂಕದ್ದಮೆಗಳು ಹೆಚ್ಚಾಗಿ ದಾಖಲಾಗಿವೆ. ಸುರಾಪುರ, ಕುಣಗಳ್ಳಿ ಕಾಡುಗಳಲ್ಲಿ ಹನೂರಿನ ಕಾಡುಗಳಲ್ಲಿ ಕೆಲವು ಬೇಟೆಗಾರರು ಪರಾರಿಯಾಗಿ ತಲೆಮರೆಸಿಕೊಂಡಿದ್ದಾರೆ. ಹನೂರು ಸಮೀಪದ ವೀರಪ್ಪನ್ ಹುಟ್ಟೂರು ಗೋಪಿನಾಥಂ ಗ್ರಾಮದ ಸುರೇಶ್ ಮತ್ತು ರಾಘವೇಂದ್ರನ್ , ಅಯ್ಯಾನ್ ಎಂಬುವರನ್ನು ಜಿಂಕೆಗಳನ್ನು ಬೇಟೆ ಮಾಡಿದ್ದಕ್ಕಾಗಿ 2017 ರಲ್ಲೇ ಬಂಧಿಸಿ ಜೈಲಿಗಟ್ಟಲಾಗಿತ್ತು. ಆಗಸ್ಟ್ 2020ರಲ್ಲಿ ಮಲೆಮಹದೇಶ್ವರ ವನ್ಯ ಜೀವಿಗಳ ವಿಭಾಗ ಮತ್ತು ಬಿಳಿಗಿರಿ ರಂಗನ ಬೆಟ್ಟ ಅರಣ್ಯ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ಕಾಡುಪ್ರಾಣಿಗಳನ್ನು ಕೊಂದು ಎಲುಬುಗಳು, ಚರ್ಮಗಳನ್ನು ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದ ನಲ್ಲಿಕತ್ತಿ ಗ್ರಾಮದ ಮಹಾದೇವ್ , ಕುಮಾರ್, ಗೊಂಬೆಗಲ್ಲಿ ಗ್ರಾಮದ ಮಹಾದೇವ್, ರಂಗಸ್ವಾಮಿ ಎಂಬ ಕಾಡುಬೇಟೆಗಾರರನ್ನು ಬಂಧಿಸಲಾಗಿತ್ತು. ಇವರಿಂದ ಹುಲಿಯ ದೇಹದ ಮೂಳೆಗಳು, ನಾಲ್ಕು ಹುಲಿ ಉಗುರು, ಚಿರತೆ ಉಗುರು, ಜಿಂಕೆ ಚರ್ಮ, ಸೀಳುನಾಯಿ, ಕಾಡು ಕುರಿ ಚರ್ಮ, ಕೊಡುವೆ,ಮೂಸಳೆ ಚರ್ಮ ಹಾಗೂ ಹಾರುವ ಅಳಿಲಿನ ಚರ್ಮವನ್ನು ವಶಪಡಿಸಿಕೊಳ್ಳಲಾಗಿತ್ತು! ಈಗ ಮೊನ್ನೆಯಷ್ಟೇ ಸೇತುರಾಜ್,ಜಪಮಾಲೆ, ಗೋವಿಂದ ರಾಜು ಎಂಬ ಕಾಡುಗಳ್ಳರನ್ನು ಮಲೆಮಹದೇಶ್ವರ ಅರಣ್ಯ ವಲಯದ ಜಾಗೇರಿ ಅರಣ್ಯದಂಚಿನಲ್ಲಿ ಮೂರು ಅಕ್ರಮ ನಾಡ ಬಂದೂಕುಗಳ ಸಮೇತ ಬಂಧಿಸಲಾಗಿದೆ.

ಪಟಾಕಿ ಸಿಡಿಸುವ ಮುದ್ದಿನ ಮಿಶ್ರಣದ ರಾಸಾಯನಿಕವನ್ನು ಸಿಂಪಡಿಸಿ ಕಡಲೆ, ಜೋಳದ ಹಿಟ್ಟಿನ ಹುಲ್ಲುಗಳ ಹುಂಡೆಯ ಬಾಂಬ್ ತಯಾರಿಸಿ ಕಾಡುಗಳಲ್ಲಿ ಅಡಗಿಸಿ ಇಟ್ಟು ಪ್ರಾಣಿಗಳನ್ನು ಕ್ರೂರವಾಗಿ ಬೇಟೆಯಾಡುತ್ತಿರುವವರ ದೊಡ್ಡ ಜಾಲವೇ ವೀರಪ್ಪನ್ ನಾ ಊರಾದ ಗೋಫಿನಾಥಂ ಸುತ್ತಮುತ್ತಲ ಕಾಡುಕೊರೈ,ಪೊಂಜೆಕೊರೈ,ಚಿಟ್ಟಪಟ್ಟಿ, ಗೋವಂದಪಾಡಿ ಗ್ರಾಮಗಳಲ್ಲಿವೆಯಂತೇ! ಇದೇ ಊರುಗಳಲ್ಲಿ ಮರೀ ವೀರಪ್ಪನ್ ಗಳಿದ್ದು ಕಾವೇರಿ ವನ್ಯಧಾಮ ವಲಯದಲ್ಲಿ ಅಕ್ರಮವಾಗಿ ಕಾಡಿಗೆ ನುಗ್ಗಿ ನಿರಂತರವಾಗಿ ಕಳ್ಳಬೇಟೆ ನಡೆಸುತ್ತಾರೆ. ವೀರಪ್ಪನ್ ಕಾಲದಿಂದಲೂ ಈ ಕಾವೇರಿ ವನ್ಯಧಾಮ ಅರಣ್ಯ ಪ್ರದೇಶದಲ್ಲಿ ಕಳ್ಳ ಬೇಟೆಗಾರರ ಬಾಂಬಿನ ಸದ್ದು, ನಾಡ ಬಂದೂಕುಗಳ ಗುಂಡಿನ ಮೊರೆತ ಕಾಡುಗಳಲ್ಲಿ ಮಾರ್ದನಿಸುತ್ತಲೇ ಇದೆ! ಚಾಮರಾಜನಗರ ಜಿಲ್ಲೆಯ ಬಿಳಿಗಿರಿರಂಗನ ಬೆಟ್ಟ, ಮಲೆಮಹದೇಶ್ವರ ಬೆಟ್ಟದ ಅರಣ್ಯದಲ್ಲಿ ತನ್ನದೇ ತಂಡ ಕಟ್ಟಿಕೊಂಡು ತನ್ನದೇ ಹೆಸರಿನ 15ಬೇಟೆನಾಯಿಗಳನ್ನಿಟ್ಟುಕೊಂಡು ಕಾಡಿಗೆ ನುಗ್ಗಿ ನಿರಂತರವಾಗಿ ವನ್ಯಮ್ರಗ ಶಿಕಾರಿ ನಡೆಸುತ್ತಾ ಹಾವಳಿ ಇಡುತ್ತಿದ್ದ ಮರೀ ವೀರಪ್ಪನ್ ಎಂದೇ ಕುಖ್ಯಾತಿ ಪಡೆದಿದ್ದ ಶರವಣನ್ ಎಂಬ ಕಳ್ಳಬೇಟೆಗಾರನನ್ನು 2014 ರ ಜೊನ್ ನಲ್ಲಿ ತಮಿಳುನಾಡಿನ ಮೆಟ್ಟೂರಿನಿಂದ ಕರ್ನಾಟಕದ ಪೊಲೀಸರು ಹಿಡಿದು ತಂದು ಜೈಲಿಗಟ್ಟಿದ್ದರು!

ಹಿಡಿಯಲು ಬಂದ ಅರಣ್ಯಾಧಿಕಾರಿಗಳ ಮೇಲೆ ನಾಡ ಬಂದೂಕು ಗಳಿಂದ ದಾಳಿಮಾಡಿ ಪರಾರಿಯಾಗುತಿದ್ದ ಈ ಮರೀ ವೀರಪ್ಪನ್ ಶರವಣನ್ ಮತ್ತು ಈತನ ತಂಡದ ಉಪನಾಯಕ ರಾವಣನ್ ಹಾಗೂ 11ಮಂದಿ ಯನ್ನು ಬಂಧಿಸಲು ನಮ್ಮ ಪೊಲೀಸರು ಎಸ್.ಟಿ.ಪಿ.ಎಫ್.ಕಮಾಂಡೋ ಪಡೆಯನ್ನೆ ಕರೆಸಿ ಕಾರ್ಯಾಚರಣೆ ನಡೆಸಿದ್ದರು!
ಮಲೆಮಹದೇಶ್ವರ ಬೆಟ್ಟ, ಹನೂರು, ಚಿಕ್ಕಲೂರು, ಕೊತ್ತನೂರು, ಮುಗ್ಗೂರು, ಮತ್ತು ಕಾವೇರಿ ನದಿಯ ಈಚೆ ದಡದ ಹುಣಸನಹಳ್ಳಿ-ಬಿಳಿಕಲ್ ಸಂಗಮ-ಮೇಕೆದಾಟು ಬನ್ನೇರುಘಟ್ಟ ಮೀಸಲು ಅರಣ್ಯ ವಲಯ ಈ ಎಲ್ಲಾ ಪ್ರದೇಶಗಳೂ ಹೊಗೇನೇಕಲ್ ಪಾಲ್ಸ್ ವರೆಗೂ ಒಂದೇ ಕಾರಿಡಾರ್! ಇಲ್ಲೆಲ್ಲಾ ಹುಲಿ ಅಭಯಾರಣ್ಯ ಪ್ರಸ್ತಾವನೆ ಸಲ್ಲಿಸಲಾಗಿದೆ. ಇರುತಿಂಗಳಿಂದೀಚೆಗೆ ಕಾವೇರಿ ವನ್ಯಧಾಮ ವಲಯದಲ್ಲಿ ಕಳ್ಳಬೇಟೆಗಾರ ಹಾವಳಿ ನಾನಾ ಬಗೆಯಲ್ಲಿ ಮಿತಿ ಮೀರಿ ಹೋಗಿದೆ. ರಾಮನಗರ ಜೆಲ್ಲೆಯ ಕನಕಪುರ ತಾಲೂಕಿನ ಕಾವೇರಿ ವನ್ಯಧಾಮ ಅರಣ್ಯ ವಲಯದ ಸಂಗಮದ ಚೀಲುದವಾಡಿ ಮೀಸಲು ಅರಣ್ಯ ಪ್ರದೇಶದಲ್ಲಿ ವನ್ಯಬೇಟೆಗಾರರು ಮತ್ತು ಅರಣ್ಯಾಧಿಕಾರಿಗಳ ನಡುವೆ ಘನಘೋರ ಗುಂಡಿನ ಕಾಳಗವೇ ನಡೆದು ಉಯ್ಯಂಬಳ್ಳಿಯ ಶಿವಮಲ್ಲಯ್ಯ, ನಾಯಕನಳ್ಳಿ ಕ್ರಿಷ್ಣ, ಚಿಕ್ಕ ರಾಜು, ಉಮೇಶ್ ಎಂಬ ಕಾಡುಗಳ್ಳರನ್ನು ಮೇ 2020 ರಲ್ಲಿ ಬಂದಿಸಲಾಗಿತ್ತು! ವನ್ಯಜೀವಿ ಗಳಿಗೆ ಕೊರಳಿಗೆ ಬೈಕ್ ಎಕ್ಸಿಲೇಟರ್ ನಾ ಜಿಂಕ್ ವೈರ್ ಬಳಸಿ ಬಲವಾದ ಉರುಳು ತಯಾರಿಸಿ ಹಾಕುವುದು,ಪ್ರಾಣಿಗಳು ರಾತ್ರಿ ಓಡಾಡುವ ಕಾರಿಡಾರ್ ತಿಳಿದುಕೊಂಡು ನೈಟ್ ಟಾರ್ಚ್ ಲೈಟ್ ಬಳಸಿ ಬಂದೂಕು ಹಿಡಿದ ಬೇಟೆಯಾಡುವುದು. ಫೈರಿಂಗ್ ಸೌಂಡ್ ಬರದಂತೆ ಏರ್ ಗನ್ ಬಳಸುವುದು. ನೀರು ಕುಡಿಯಲು ಬರುವ ಸ್ಥಳದಲ್ಲಿ ನೀರಿನ ಸೆಲೆಗೆ ರೈತರು ಬಳಸುವ ಯೂರಿಯಾ ರಾಸಾಯನಿಕ ಗೊಬ್ಬರ ಸುರಿದು ಕೊಲ್ಲುವುದು, ಕಾಡುಬೇಟೆಗಾರರ ಕುತಂತ್ರಗಳು. ಕಾಡು ಕುರಿ ,ಮೂಲ, ಜಿಂಕೆ ನವಿಲು,ಗೌಜಲಕ್ಕಿ, ಕಾಡುಕೋಳಿ, ಕಾಡು ಬೆಕ್ಕು, ಕಾಡುಹಂದಿಯ ಮಾಂಸಗಳು ವಾರಾಂತ್ಯದಲ್ಲಿ ಬೆಂಗಳೂರು ನಗರ ತಲುಪುತ್ತಿವೆಯಂತೆ! ಕಾವೇರಿ ವನ್ಯಜೀವಿ ವಿಭಾಗದಲ್ಲಿ ಮಂಡ್ಯ ಜಿಲ್ಲೆ, ರಾಮನಗರ, ಚಾಮರಾಜನಗರ ಈ ಮೂರು ಜಿಲ್ಲೆಗಳು ಸೇರುತ್ತವೆ. ಶಿಂಷಾ ಮೀಸಲು ಅರಣ್ಯ,ಹಲಗೂರು ಬಳಿಯ ಬಸವನಬೆಟ್ಟ ಮುತ್ತತ್ತಿ,

ದೊಡ್ಡ ಎಲಚಗೆರೆ ಅರಣ್ಯದಲ್ಲಿಯೂ ಕಾಡುಗಳ್ಳರ ಹಾವಳಿ ವಿಪರೀತ ವಾಗಿದ್ದು ಅರಣ್ಯಾಧಿಕಾರಿಗಳು ಮತ್ತು ಗ್ರಾಮೀಣ ವಿಭಾಗದ ಪೊಲೀಸರು ಕಾರ್ಯಾಚರಣೆ ನಡೆಸಿ ಜಿಂಕೆ ಮಾಂಸದ ವ್ಯವಸ್ಥಿತ ಜಾಲವನ್ನು, ಅಕ್ರಮ ನಾಡ ಬಂದೂಕುಗಳ ಸರಬರಾಜಿನ ಮೂಲವನ್ನು ಬೇಧೀಸಬೇಕಿದೆ.ಬೇಟೆತಡೆ ಶಿಬಿರಗಳನ್ನು ಹೆಚ್ಚಿಸುವುದರ ಜೊತೆಗೆ ಫಾರೆಸ್ಟ್ ವಾಚರ್ ಗಳನ್ನು ಅನ್ಯ ಕೆಲಸಗಳಿಗೆ ಬಳಸದೆ ಕಾಡುಕಾಯಲು ಹಚ್ಚಬೇಕಿದೆ.ಮಾನ್ಯ ಅರಣ್ಯ ಸಚಿವರಾದ ಉಮೇಶ್ ಕತ್ತಿಯವರು ಅರಣ್ಯ ಇಲಾಖೆಯೊಳಗೆ ಸಿಬ್ಬಂದಿ ಕೊರತೆ ಇರುವುದನ್ನು ಸರಿಪಡಿಸಿ, ಓಬಿರಾಯನ ಕಾಲದಗನ್ ಗಳನ್ನು ಬದಲಾಯಿಸಲು ಕ್ರಮಕೈಗೊಳ್ಳಬೇಕಿದೆ. ಕೆಲವು ಕಡೆ ಲೋಕಲ್ ಫಾರೆಸ್ಟ್ ವಾಚರ್ ಗಳೇ ಒಂದು ಗುಡ್ಡೆ ಮಾಂಸ ಒಂದು ಫುಲ್ ಬಾಟಲ್ ಆಲ್ಕೋಹಾಲ್ ಗಾಗಿ ಬೇಟೆಗಾರರ ಜೊತೆಗೆ ಕೈ ಮಿಲಾಯಿಸಲಾಗುತ್ತಿದೆ ಎಂಬ ಆಪಾದನೆಗಳಿವೆ. ಡಿ. ಎಫ್ . ಮತ್ತು ಆರ್.ಎಫ್ ಅಧಿಕಾರಿಗಳು ಇಲ್ಲದ ಸಮಯವನ್ನು ಸ್ಥಳೀಯ ವಾಚರ್ ಗಳೇ ವಾಚ್ ಮಾಡೀ ಹಣದಾಸೆಗೆ ಕಳ್ಳಬೇಟೆಗೆ ನೆರವಾಗಿರುವ ಮಾಹಿತಿ ಇವೆ. ಹಣವಂತರ ಶೋಕಿಗಾಗಿ, ಮೋಜು ಮಸ್ತಿಗಾಗಿ, ಅರಣ್ಯದಂಚಿನ ಗ್ರಾಮಗಳಲ್ಲಿ ರೆಸಾರ್ಟ್, ಹೋಂ ಸ್ಟೇ ಕಟ್ಟಲು ಅನುಮತಿ ನೀಡಿರುವುದರಿಂದ ಕಾವೇರಿ ವನ್ಯಜೀವಿ ಅಭಯಾರಣ್ಯ ವ್ಯಾಪ್ತಿಯಲ್ಲಿಯೂ ಪ್ರವಾಸಿಗರಿಂದಲೂ ವನ್ಯ ಜೀವಿಗಳ ಕಳ್ಳಬೇಟೆ ನಡೆಯುತ್ತಿದೆ. ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಕಟ್ಟುನಿಟ್ಟಾಗಿ ಅರಣ್ಯದೊಳಗಾಗಲೀ ಗಡಿಯಲ್ಲಾಗಲೀ ಇಕೋ-ಟೂರಿಸಂ ಮಾದರಿಯ ಚಟುವಟಿಕೆಗಳನ್ನು ಮಾಡಬಾರದೆಂಬ ಆದೇಶ ಹೊರಡಿಸಿದ್ದರೂ ಅರಣ್ಯಾಧಿಕಾರಿಗಳ, ರಾಜಕಾರಣಿಗಳ ಹಣದಾಹದ ಭ್ರಷ್ಟಾಚಾರದಿಂದ ಸರ್ವೋಚ್ಚ ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸಿ, ಕಾವೇರಿ ವನ್ಯಜೀವಿ ಅಭಯಾರಣ್ಯ ವ್ಯಾಪ್ತಿಯ ಕಾಡಂಚಿನಲ್ಲಿ, ಕಳ್ಳಬೇಟೆಗಾರರಿಗೆ ನೆರವಾಗಲೆಂದೇ 50ಕ್ಕೂ ಹೆಚ್ಚಿನ ಹೋಂ ಸ್ಟೇ ರೆಸಾರ್ಟ್ ಗಳೆದ್ದಿವೆ! ಅರಣ್ಯ ಇಲಾಖೆ ಜಾಣಕುರುಡು ಪ್ರದರ್ಶಿಸುತ್ತಾ ತೆಪ್ಪಗಿದೆ.

ಶಿಲಾಯುಗದಲ್ಲಿ ಬೇಟೆಯು ಆಹಾರದ ಸರಪಳಿಯ ಅನಿವಾರ್ಯ ಕೊಂಡಿಯಾಗಿತ್ತು. ತದನಂತರ ರಾಜರ ಕಾಲದಲ್ಲಿ ಬೇಟೆ ಮೋಜಿನ ಕ್ರೀಡೆಯಾಗಿ ಪಾರಿತೋಷಕ ಪಡೆಯುವ ಶಿಕಾರಿ ಶೌರ್ಯ ಪ್ರದರ್ಶನವಾಗಿ ಸಾಂಪ್ರದಾಯಿಕ, ಸಾಂಸ್ಕೃತಿಕ ಮಹತ್ವ ಪಡೆದಿತ್ತು! ಆದರೆ ನಾಗರಿಕತೆಯ ಬೆಳೆದಂತೆ ಮನುಷ್ಯ ಅರಣ್ಯ ನ್ಯಾಯವನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿದ. ಕಾಡಿನಲ್ಲಿ ವನ್ಯಜೀವಿಗಳು ಆಹಾರ ಸರಪಳಿಯಭಾಗವಾಗಿ, ಅರಣ್ಯ ಸಮತೋಲನದ ಅಂಗವಾಗಿ ಹೆಚ್ಚಾಗುವುದು ಕಡಿಮೆಯಾಗುವುದು ನಡೆಯುತ್ತಲೇ ಇರುತ್ತದೆ. 1972 ರಲ್ಲಿ ಭಾರತೀಯ ವನ್ಯಜೀವಿ ಸಂರಕ್ಷಣಾ ಕಾಯ್ದೆ ಅಡಿ ವನ್ಯ ಜೀವಿಗಳ ಬೇಟೆಯನ್ನು ಕಾನೂನು ಬಾಹಿರವೆಂದು ಘೋಷಣೆ ಮಾಡಲಾಗಿದೆ. ಕಾಡು ಪ್ರಾಣಿಗಳ ಮಾಂಸದ ಒಲವಿನಿಂದ ಆರಂಭವಾಗಿದ್ದ ಸಾಂಪ್ರದಾಯಿಕ ಬೇಟೆಯೂ ಇಂದು ಹಣ ಮಾಡುವ ಉದ್ದೇಶದಿಂದ ಪ್ರಾಣಿಗಳ ಚರ್ಮದ, ಕೊಂಬಿನ, ಮಾಂಸದ ಮೂಳೆಗಳ ಮಾರುಕಟ್ಟೆಯಲ್ಲಿ ಬಿಕರಿಯಾಗಿ, ಬೇಟೆಯೆಂಬುದು ವ್ಯವಸ್ಥಿತ ಜಾಲದ ಹಣಮಾಡುವ ದಂಧೆಯಾಗಿ ಮಾರ್ಪಟ್ಟಿದೆ. ಆದ್ದರಿಂದಲೇ ಕಾವೇರಿ ವನ್ಯಜೀವಿ ಅಭಯಾರಣ್ಯ ವ್ಯಾಪ್ತಿಯಲ್ಲಿಯೂ ಕೂಡ ಕಳ್ಳಬೇಟೆಗಾರರ ಬಂದೂಕಿನ ಗುಂಡಿನ ಸದ್ದು ಕತ್ತಲಲ್ಲಿ ಅನುರಣಿಸುತ್ತಲೇ ಇದೆ.

ನರ ಮನುಷ್ಯನ ಈ ಶಿಕಾರಿಯ ಚಟುವಟಿಕೆಗಳಿಂದ ವನ್ಯ ಜೀವಿಗಳು ಅಳಿವಿನಂಚಿಗೆ ಸರಿಯುತ್ತಿವೆ. ಅಪಾಯದಲ್ಲಿವೆ. ವನ್ಯಪ್ರಾಣಿಗಳ ಜೊತೆಗೆ ನೀರಿನ ಹಕ್ಕಿಗಳು ಮತ್ತು ಮಂಗಟ್ಟೆ ಮತ್ತು ಗ್ರೇಟ್ ಇಂಡಿಯನ್ ಬರ್ಡ್ಸ್ ನಂತಹ ದೊಡ್ಡ ಗಾತ್ರದ ಹಕ್ಕಿಗಳು ಕೂಡ ಕಳ್ಳಬೇಟೆಯಿಂದ ಅಪಾಯ ಎದುರಿಸುತ್ತಿವೆ. ಹಾಗೆಯೇ ಸಸ್ತನಿಗಳ ಜೊತೆಗೆ ಸರೀಸ್ರಪಗಳೂ ಉಭಯಚರಿಗಳೂ ಕೂಡ ನಾಪತ್ತಯಾಗುತ್ತಿವೆ. ಜೀವ ವೈಜ್ಞಾನಿಕ ಸವಾಲುಗಳ ಜೊತೆಗೆ ವನ್ಯಜೀವಿ ಸಂಕುಲವು ಮಾನವ ನಿರ್ಮಿತ ಸಾಮಾಜಿಕ-ರಾಜಕೀಯ ಸಾಂಸ್ಕೃತಿಕ-ಆರ್ಥಿಕ ಸವಾಲುಗಳನ್ನು ಎದುರಿಸಬೇಕಿದೆ!


ವನ್ಯ ಜೀವಿಗಳ ಚರ್ಮ,ಕೊಂಬು, ಮಾಂಸಕ್ಕಾಗಿ ಕಳ್ಳಬೇಟೆಗಿಳಿದಿರುವ ಖದೀಮರು ಈ ಕೋವಿಡ್ ಲಾಕ್ ಡೌನ್ ಘೋಷಣೆ ಯಾದಾಗಿನಿಂದಲೂ ಕಾವೇರಿ ವನ್ಯಧಾಮ ವಲಯದಲ್ಲಿ ಹಗಲು ರಾತ್ರಿ ಎನ್ನದೆ ಸಕ್ರಿಯರಾಗಿರುವ ಅನುಮಾನವಿದೆ. ಹಣಕ್ಕಾಗಿ ಚಿರತೆ ಜಾತಿಯ ಬಾಬರ್ ಬೆಕ್ಕು, ಪುನುಗು ಬೆಕ್ಕು , ಬ್ಲಾಕ್ ಪ್ಯಾಂಥರ್ಸ್, ಕತ್ಲಕ್ಕಿನಿರುಪದ್ರವಿ ಉಡ ಮುಂತಾದ ಅಪರೂಪದ ವನ್ಯ ಪ್ರಾಣಿಗಳನ್ನು ಬೇಟೆಯಾಡಿ ಮುಂದಿನ ಮಾನವ ಪೀಳಿಗೆಯು ಈ ವಿಶಿಷ್ಟ ಪ್ರಾಣಿಗಳನ್ನು ಕೇವಲ ಚಿತ್ರ ಪಟಗಳಲ್ಲಿ ನೋಡುವಂತೆ ಮಾಡಲು ಹೊರಟಿದ್ದಾರೆ. ತಮ್ಮ ನಾಟಿ ಕಳ್ಳ ಬಂದೂಕು ಗಳಿಂದ, ಡಬಲ್ ಬ್ಯಾರೆಲ್ ತಟಾಯಿ ಗನ್ ಗಳಿಂದ, ಏರ್ ಗನ್ ಗಳಿಂದ ವನ್ಯ ಪ್ರಾಣಿಗಳನ್ನು ಕೊಲ್ಲುತ್ತಿರುವ ಕಳ್ಳಬೇಟೆಗಾರರ ಜಾಲವನ್ನು ಬೇಧಿಸಿ ಪೊಲೀಸರು ಮತ್ತು ಅರಣ್ಯ ಅಧಿಕಾರಿಗಳು ಬೇಟೆಯಾಡದಿದ್ದರೇ ಡೈನೋಸಾರ್ ಗಳನ್ನು ಗ್ರಾಫಿಕ್ಸ್ ನಲ್ಲಿ ನೋಡಿದಂತೆಯೇ ಎಷ್ಟೋ ವನ್ಯ ಜೀವಿಗಳನ್ನು ನೋಡಬೇಕಾಗಬಹುದು.

1972 ರ ವನ್ಯಜೀವಿ ಸಂರಕ್ಷಣಾ ಕಾಯ್ದೆಯ ಸರೀಬ್ರಪ ವರ್ಗದಡಿ ಶೆಡ್ಯೂಲ್ 1ರಡಿ ಉಡ ಅಳಿವಿನಂಚಿನಲ್ಲಿರುವ ಪ್ರಾಣಿ ಎಂದು ಸಂರಕ್ಷಣೆಗೆ ಹೆಚ್ಚಿನ ಆಧ್ಯತೆ ನೀಡಲಾಗಿದೆ. ಉಡವನ್ನು ಕೊಂದು ಸಿಕ್ಕಿಹಾಕಿಕೊಂಡರೇ 7ವರ್ಷದ ವರೆಗೂ ಶಿಕ್ಷೆ ವಿಧಿಸುವ ಅವಕಾಶವಿದೆ! ಉಡದ ಎಣ್ಣೆ, ಮಾಂಸವನ್ನು ಆಯುರ್ವೇದ ವೈದ್ಯ ಪದ್ಧತಿಯಲ್ಲಿ ಬಳಸುತ್ತಾರೆಂಬ ಮೂಡನಂಬಿಕೆಯಿಂದ, ವಾಮಾಚಾರಕ್ಕೂ ಬಳಸುವುದರಿಂದ ಉಡವನ್ನು ಹೆಚ್ಚಾಗಿ ಕೊಲ್ಲಲಾಗುತ್ತಿದೆ. 2020ರ ಮೇ ನಲ್ಲಿ ಸಾಕು ನಾಯಿ ಬಿಟ್ಟು ಸತ್ತೇಗಾಲ ಕಾಡಿನಲ್ಲಿ ಉಡಗಳನ್ನು ಬೇಟೆಯಾಡುತ್ತಿದ್ದ ಜಾಗೇರಿ ರಾಶಿ ಭೋಳ್ ದೊಡ್ಡಿಯ ಪ್ರವೀಣ್ ರವೀಶ್ ಎಂಬುವರನ್ನು ಕಾಡಿನಲ್ಲಿ ಅಳವಡಿಸಿದ್ದ ಸಿಸಿಟಿವಿ ಕ್ಯಾಮರಾ ದ್ರಶ್ಯ ಆದರಿಸಿ ಬಂಧಿಸಲಾಗಿತ್ತು. ಹಾಗೆಯೇ 2020ಜೂನ್ ನಲ್ಲಿ ಬೇಟೆ ನಾಯಿಗಳನ್ನಿಟ್ಟು ಮೂಗ್ಗೂರು ಕಾವೇರಿ ವನ್ಯಜೀವಿ ವಲಯದಲ್ಲಿ ಉಡಗಳನ್ನು ಬೇಟೆಯಾಡುತಿದ್ದ ಉಯ್ಯಂಬಳ್ಳಿಯ ಹೋಬಳಿ ಮಡಿವಾಳದ ಶಿವಮಾದ,ಮಹಾಲಿಂಗ, ನಾಗರಾಜ್ ಎಂಬುವರನ್ನು ಬಂಧಿಸಿ ಮೂರು ಜೀವಂತ ಉಡಗಳನ್ನು ರಕ್ಷಿಸಲಾಗಿತ್ತು. ಬೆಂಗಳೂರು ನಗರದ ಬಾರ್ ರೆಸ್ಟೋರೆಂಟ್ ಗಳಿಗೆ ದುಬಾರಿ ಬೆಲೆಗೆ ಉಡದ ಮಾಂಸ ಮಾರಾಟ ಮಾಡುತ್ತಿದ್ದ ಹಕ್ಕಿ ಪಿಕ್ಕಿ ಜನಾಂಗದ ಚಿನ್ನಾ ಎಂಬ ವ್ಯಕ್ತಿಯನ್ನು 2019 ರ ನೆವೆಂಬರ್ ನಲ್ಲಿ ಬಂಧಿಸಿ ಜೈಲಿಗಟ್ಟಲಾಗಿತ್ತು.

ವಾರಾಂತ್ಯದಲ್ಲಿ ಬೆಂಗಳೂರು ಸಿಟಿಯ ಔಟ್ ಸ್ಕರ್ಟ್ ಗಳಲ್ಲಿ ನಡೆವ ಕುಡುಕರ ಎಣ್ಣೆ ಪಾರ್ಟಿ ಗಳಿಗೆ ಉಡದ ಮಾಂಸ ಸಪ್ಲೈ ಮಾಡುತ್ತಿದ್ದನೆಂಬುದು ತನಿಖೆಯಿಂದ ಬೆಳಕಿಗೆ ಬಂದಿತ್ತು. ಐಟಿ.ಮತ್ತು ರಿಯಲ್ ಎಸ್ಟೇಟ್ ಉದ್ಯಮಿಗಳೂ ಕೂಡ ಹೆಚ್ಚಾಗಿ ಉಡದ ಮಾಂಸ ಖರೀದಿ ಮಾಡುತ್ತಿದ್ದಾರೆಂಬ ಮಾಹಿತಿ ಇದೆ. ಉಡದ ರಕ್ತವನ್ನು ರಮ್ ಜೊತೆ ಸೇರಿಸಿ ವಯಾಗ್ರಾದಂತೆ ನೀಡಲಾಗುತ್ತದಂತೇ! ಇಂತಹ ಅರ್ಥವಿಲ್ಲದ ಮಾನವನ ಹುಚ್ಚಾಟಗಳಿಗೆ ವನ್ಯ ಜೀವಿಗಳು ಬಲಿಯಾಗುತ್ತಿವೆ. ರಾತ್ರಿವೇಳೆ ತಮ್ಮ ಆಹಾರ ಹುಡುಕಿಕೊಂಡು ದಟ್ಟ ಕಾಡಿನಿಂದ ಹೊರಗೆ ಬರುವ ಕಾಡು ಪ್ರಾಣಿಗಳು ಶಿಕಾರಿಗಾಗಿ ಬಿಡಾರ ಹೂಡಿ ಕಾದಿರುವ ಕಳ್ಳರ ಅಕ್ರಮ ನಾಡ ಬಂದೂಕಿನ ಗುಂಡಿಗೆ ಬಲಿಯಾಗುತ್ತಿವೆ. ಸಂಮ್ರದ್ಧ ಜೀವ ವೈವಿಧ್ಯತೆಯನ್ನು, ವನ್ಯಜೀವಿ ಸಂಕುಲವನ್ನು ಸಂರಕ್ಷಿಸುವ ಜವಾಬ್ದಾರಿ ನಮ್ಮೆಲ್ಲರದಾಗಿದೆ. ಎಷ್ಟೋ ಜನ ಅರಣ್ಯ ಇಲಾಖೆ ಸಿಬ್ಬಂದಿ ವರ್ಗ ದವರು ಈ ಕಳ್ಳಬೇಟೆಗಾರರ ಹೊಡೆತಕ್ಕೆ ಸಿಕ್ಕಿ ಸಾವನ್ನಪ್ಪಿದ್ದಾರೆ.

ನೋವನ್ನುಂಡಿದ್ದಾರೆ. ಆದರೂ ಈ ಕಳ್ಳಬೇಟೆ ನಿಲ್ಲದಿರುವುದರಿಂದ, ಮರೀ ವೀರಪ್ಪನ್ ಗಳು ಮತ್ತೆ ಮತ್ತೆ ಹುಟ್ಟಿ ಬಂದು ಹಾವಳಿ ಇಡುತ್ತಿರುವುದರಿಂದ, ಪ್ರಾಣಿ ಪ್ರಿಯರು ವನ್ಯ ಜೀವಿ ರಕ್ಷಣೆಯ ಟಾಸ್ಕ್ ಫೋರ್ಸ್ ರಚನೆಗೆ ಸರ್ಕಾರವನ್ನು ಒತ್ತಾಯಿಸುತಿದ್ದಾರೆ.
ಸರ್ಕಾರದಿಂದ ವನ್ಯಜೀವಿಗಳ ರಕ್ಷಣೆಗಾಗಿ ಬಿಡುಗಡೆಯಾಗುವ ಕೋಟ್ಯಂತರ ರೂಪಾಯಿ ಹಣದ ಸದ್ಬಳಕೆ ಆದರೆ, ಕಳ್ಳಬೇಟೆಗಾರರಿಗೆ ಕಠಿಣ ಶಿಕ್ಷೆಯಾಗುವಂತಾದರೆ ಮಾತ್ರ ವನ್ಯಜೀವಿಗಳನ್ನು ಉಳಿಸಬಹುದು.

Girl in a jacket
error: Content is protected !!