writing-ಪರಶಿವ ಧನಗೂರು
ಕನ್ನಡ ಚಿತ್ರರಂಗದ ಯುವನಟ, ರಂಗಕರ್ಮಿ, ರಾಷ್ಟ್ರ ಪ್ರಶಸ್ತಿ ವಿಜೇತ ಸಂಚಾರಿ ವಿಜಯ್ ಆಕಸ್ಮಿಕ ಬೈಕ್ ಅಪಘಾತದಲ್ಲಿ ಮೃತಪಟ್ಟ ಘಟನೆ. ನಾಡಿನಾದ್ಯಂತ ಎಲ್ಲರಲ್ಲೂ ನೋವು ತಂದಿದೆ. ಕರ್ನಾಟಕ ಸರ್ಕಾರದ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನೆರವೇರಿಸಿ ಕರ್ತವ್ಯ ನಿರ್ವಹಿಸಿದೆ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಅಪೋಲೋ ಆಸ್ಪತ್ರೆಯಲ್ಲಾದ ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಖುದ್ದು ಭರಿಸಲು ಮುಂದೆ ಬಂದಿದೆ.
ಈಗಾಗಲೇ ಆರ್ಥಿಕ ಸಂಕಷ್ಟದಲ್ಲಿದ್ದ ನಟ ಸಂಚಾರಿ ವಿಜಯ್ ಕುಟುಂಬಕ್ಕೆ ಇದರಿಂದ ಸ್ವಲ್ಪ ಮಟ್ಟಿಗೆ ಸಾಂತ್ವಾನ ಸಿಗಬಹುದೇನೋ. ಇಷ್ಟೆಲ್ಲಾ ವಿಚಾರಗಳ ಮಧ್ಯೆ ಪತ್ರಿಕೆಯು ನಟ ಸಂಚಾರಿ ವಿಜಯ್ ಸಾವಿನ ಕುರಿತಾದ ಕೆಲವು ಪ್ರಮುಖ ವಿಚಾರಧಾರೆಗಳನ್ನು ಓದುಗರೊಂದಿಗೆ ಹಂಚಿಕೊಳ್ಳುವ ಪ್ರಯತ್ನ ಮಾಡುತ್ತಿದೆ. ಇದರಿಂದ ಈಗ ಯಾರಿಗೇನು ಪ್ರಯೋಜನವೂ ಇಲ್ಲದಿರಬಹುದು. ಆದರೂ ಕೋಟ್ಯಂತರ ಕನ್ನಡ ಜನತೆಯ ಮನಸ್ಸಿನಲ್ಲಿಯೂ ನಮ್ಮ ಮುಂದೆ ಈಗ ಮೂಡಿರುವಂತಹ ಪ್ರಶ್ನೆ ಗಳು, ಬೇಸರ, ಅನುಮಾನ ಸುಳಿದು ಮಾಯವಾಗಿರಲೂ ಬಹುದು.
ಕನ್ನಡ ಸಿನಿಮಾ ರಂಗದ ಅತ್ಯದ್ಭುತ ಕಲಾವಿದನ ಸಾವನ್ನು ಅತ್ಯಂತ ಬೇಸರ ನೋವಿನಿಂದ ನೋಡುತ್ತಾ, ಮರುಗುತ್ತಾ ಆತನ ಕುಟುಂಬ ಆತನ ಅಂಗಾಂಗಗಳ ದಾನಮಾಡಿದಾಗ ದುಃಖದಿಂದ ಗದ್ಗದಿತರಾಗಿ, ಸಾವಿನ ನಂತರವೂ ಸಾರ್ಥಕತೆ ಮೆರೆದ ಸಂಚಾರಿ ವಿಜಯ್ ನೋಡಿ ನಾವು ’ಪಾಪ ಕಣ್ರೀ ಒಳ್ಳೆಯ ವ್ಯಕ್ತಿ. ಮಹಾನ್ ನಟ ಹೀಗಾಗಬಾರದಿತ್ತು ಛೇ..!!’ ಎಂದು ಲೊಚಗುಟ್ಟಿ ಅಷ್ಟೇ ಸಹಜವಾಗಿ ನಮ್ಮ ಎಂದಿನ ಬದುಕುಗಳ ಜಂಜಡಗಳಲ್ಲಿ ಮುಳುಗಿಹೋಗಿತ್ತಿರುವಾಗಲೇ ’ಈ ಬ್ರೈನ್ ಡೆಡ್..! ಎಂದರೇನು? ಬೈಕ್ ಅಪಘಾತದ ರಭಸಕ್ಕೆ ನಟ ಸಂಚಾರಿ ವಿಜಯ್ ತಲೆಯಲ್ಲಿ ಅದೆಂತಹ ಏಟು ಬಿದ್ದಿರಬಹುದೂ..? ಈ ಆಧುನಿಕ ಯುಗದಲ್ಲಿ ಇಷ್ಟೆಲ್ಲಾ ವೈದ್ಯಕೀಯ ಸಂಶೋಧನೆ, ಚಿಕಿತ್ಸೆ ಸಾಧ್ಯವಿದ್ದರೂ ನಮ್ಮ ರಾಜ್ಯದ ಒಬ್ಬ ಮಹಾನ್ ಕಲಾವಿದ ರಾಷ್ಟ್ರ ಪ್ರಶಸ್ತಿ ವಿಜೇತ ನಟನನ್ನು ಉಳಿಸಿಕೊಳ್ಳಲು ಸಾಧ್ಯವಿಲ್ಲದೆ ಹೋಯಿತಲ್ಲ..!’ ಎನ್ನುವ ಪ್ರಶ್ನೆಗಳು, ಗೊಂದಲಗಳು ನಮ್ಮ ಮನದಾಳದಲ್ಲಿ ಎದ್ದೆದ್ದು ಕುಣಿಯುತ್ತಾ ಮಾಯವಾಗುತ್ತಿರಬಹುದು.
ಹೌದು..ಈ ವೈದ್ಯಕೀಯ ಪರಿಭಾಷೆಯ ’ಬ್ರೈನ್ ಡೆಡ್’ ಈಗ ಆರ್ಗಾನ್ ಡೊನೇಷನ್ ಜಗತ್ತಿನಲ್ಲಿ ಬಹಳ ಚಾಲ್ತಿಯಲ್ಲಿರುವ ಪದ! ಮತ್ತು ಡಾಕ್ಟರ್ ಗಳು ಜಗತ್ತಿನಾದ್ಯಂತ ವರ್ಷಕ್ಕೆ ಹದಿನೈದರಿಂದ ಇಪ್ಪತ್ತು ಸಾವಿರಕ್ಕೂ ಹೆಚ್ಚಿನ ಬ್ರೈನ್ ಡೆಡ್ ಡಿಕ್ಲರೇಷನ್ ಡೆತ್ ಸರ್ಟಿಫಿಕೇಟ್ ಗಳನ್ನು ಅನೌನ್ಸ್ ಮಾಡುತ್ತ ನಾನಾ ಕಾರಣದಿಂದ ಕೋಮಾದಲ್ಲಿರುವ ರೋಗಿಗಳನ್ನು ಬದುಕಿಸಲಾರದೆ ಕೈಚೆಲ್ಲಿ ಕುಳಿತಿದ್ದಾರೆ! ಮತ್ತೊಂದೆಡೆ ಪ್ರಪಂಚದ ಮಹಾನ್ ನ್ಯೂರೋ ಸೈಂಟಿಸ್ಟ್ ಗಳು ಈ ಬ್ರೈನ್ ಡೆತ್ ಸಮಸ್ಯೆಗೆ ಶಾಶ್ವತ ಪರಿಹಾರ ಹುಡುಕಲು ನಾನಾ ತರದ ಹೊಸ ಹೊಸ ಸಂಶೋಧನೆಗಳ ಹಾದಿಯಲ್ಲಿದ್ದಾರೆ. ವಾರಗಳಿಂದ ಹಿಡಿದು ವರ್ಷಘಟ್ಟಲೆ ಡೀಪ್ ಕೋಮಾದಲ್ಲೆ ಇರುವ ಕೆಲವು ರೋಗಿಗಳ ಮೇಲೆ ಸ್ಟೀಮ್ ಸೆಲ್ ಥೆರಪಿ, ಟ್ರಾನ್ಸ್ ಕಾರ್ನಿಯಲ್ ಲೇಸರ್ ಥೆರಪಿ, ಬ್ರೈನ್ ಡ್ಯಾಮೇಜ್ ರಿಪೇರಿಗಳ ಹಲವು ವಿಧಾನಗಳನ್ನು ಪ್ರಯೋಗಿಸುತ್ತಿದ್ದಾರೆ! ಈಗ ಜಗತ್ತಿನೆಲ್ಲೆಡೆಯೂ ಈ ಕ್ಲಿನಿಕಲ್ ಬ್ರೈನ್ ಡೆಡ್ ಘೋಷಣೆಗಳು ಕಾಂಟ್ರವರ್ಷಿಯಲ್ ಇಶ್ಯೂಗಳಾಗಿ ಕೋರ್ಟು ಕಟಕಟೆಗೂ ನುಗ್ಗಿವೆ! ಕಾರಣ ಮಿದುಳು ನಿಷ್ಕ್ರಿಯವಾಗಿದೆ ಯೆಂದು ಘೋಷಿಸಿದ ಮೇಲೂ ಹಲವು ದೇಶಗಳಲ್ಲಿ ಕೆಲವು ರೋಗಿಗಳು ಮಿರಾಕಲ್ ಎಂಬಂತೆ ಡೀಪ್ ಕೋಮಾದಿಂದಲೂ ಸಾವನ್ನು ಗೆದ್ದು ಬಂದಿದ್ದಾರೆ! ಇಂತಹ ಪ್ರಕರಣಗಳನ್ನು ಕೆಲವೂಮ್ಮೆ ಪ್ರೀಮೆಚ್ಯೂರ್ ಡಿಸೀಷನ್. ವೆಜಿಟೇಟ್ಯೂ ಸ್ಟೇಟ್, ಪ್ರಿಮೆಚ್ಯೂರ್ ಕನ್ ಕ್ಲೂಷನ್ ಎಂತಲೂ ಹೆಸರಿಸಲಾಗಿದೆ!
ಬ್ರೈನ್ ಡೆಡ್ ಎಂಬ ಗೊಂದಲಗಳು
ನಾವು ನಟ ಸಂಚಾರಿ ವಿಜಯ್ ಅಪಘಾತದ ವಿಷಯಕ್ಕೆ ಬರುವುದಾದರೇ ಇದೇ ಬ್ರೈನ್ ಡೆಡ್ ವಿಷಯಕ್ಕೆ ಅನೇಕ ಗೊಂದಲಗಳು ಮೂಡುತ್ತವೆ. ಆಸ್ಪತ್ರೆಯ ವೈದ್ಯರೇ ಹೇಳು ಪ್ರಕಾರ ಶನಿವಾರ ರಾತ್ರಿ ಹನ್ನೊಂದು ವರೆಗಂಟೆಗೆ ಬೈಕ್ ಅಪಘಾತದ ದೆಸೆಯಿಂದಾಗಿ ನಟ ಸಂಚಾರಿ ವಿಜಯ್ ಯನ್ನು ಕೇವಲ ಎರಡು ಕಿಲೋಮೀಟರ್ ದೂರದಲ್ಲಿದ್ದ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿದೆ. ಆಗ ವೈಧ್ಯರ ಹೇಳಿಕೆಯಂತೆಯೇ ಸಂಚಾರಿ ವಿಜಯ್ ಪ್ರಜ್ಞೆ ಕಳೆದುಕೊಂಡಿದ್ದರೂ ಸ್ವತಹ ತಾವೇ ಉಸಿರಾಡುತ್ತಿದ್ದರು. ಅದೇ ಕಾರಣಕ್ಕೆ, ಹಿರಿಯ ನಟರೊಬ್ಬರ ಫೋನ್ ಕಾರಣಕ್ಕೆ ಆಸ್ಪತ್ರೆ ದಾಖಲಿಸಿಕೊಂಡು, ತಕ್ಷಣವೇ ತಲೆಯಲ್ಲಿ ರಕ್ತ ಸ್ರಾವ ಸರಿಪಡಿಸಲು ಒಂದು ಮೇಜರ್ ಬ್ರೈನ್ ಸರ್ಜರಿ ಮಾಡಲಾಗಿದೆ. ಬಲಗಾಲಿನ ತೊಡೆಯ ಮೂಳೆ ಮುರಿದಿದ್ದರೂ, ತಲೆಕೆಡಿಸಿಕೊಳ್ಳದೇ ವೈದ್ಯಕೀಯ ಸಿಬ್ಬಂದಿ ಸಂಚಾರಿ ವಿಜಯ್ ಗೆ ಪ್ರಜ್ಞೆ ಬರಲು ಸಹಾಯ ವಾಗುವಂತೆ ಮೆದುಳಿನಲ್ಲಿ ಹೆಪ್ಪು ಗಟ್ಟಿದ್ದ ರಕ್ತ ಸ್ರಾವ ಸರಿಪಡಿಸುವ ನಿಟ್ಟಿನಲ್ಲಿ ಚಿಕಿತ್ಸಾ ಕಾರ್ಯ ಔಷಧಿ ಮುಂದುವರಿಸಿದ್ದಾರೆ. ನ್ಯೂರಾಜಲಿಸ್ಟ್ ವೈಧ್ಯರು ಹೇಳುವಂತೆಯೇ ಅಪಘಾತದಲ್ಲಿ ತಲೆಗೆ ನೇರವಾಗಿ ಪೆಟ್ಟಾದ ಯಾವುದೇ ವ್ಯಕ್ತಿ ಆರು ಗಂಟೆಗೆಗಳ ಒಳಗೇ ಆಸ್ಪತ್ರೆಗೆ ದಾಖಲಾಗಿ ಸೂಕ್ತ ಚಿಕಿತ್ಸೆಯನ್ನು ಪಡೆಯಬೇಕು. ಆಗ ವ್ಯಕ್ತಿ ಬದುಕುವ, ಅಥವಾ ಕೋಮಾದಲ್ಲಿದ್ದರೂ ಪ್ರಜ್ಞೆ ಮರಳುವ ಸಾಧ್ಯತೆ ಹೆಚ್ಚಾಗಿರುತ್ತದೆ. ಇಲ್ಲಿ ಸಂಚಾರಿ ವಿಜಯ್ ರವರನ್ನು ಯಾರೋ ಪುಣ್ಯಾತ್ಮರು ಕೇವಲ ಅರ್ಧ ಗಂಟೆಯೊಳಗೇ ಹತ್ತಿರದಲ್ಲಿದ್ದ ಬನ್ನೇರುಘಟ್ಟ ರಸ್ತೆಯ ಅಪೋಲೋ ಆಸ್ಪತ್ರೆಗೆ ಸೇರಿಸಿದ್ದಾರೆ. ಆಗ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಸಂಚಾರಿ ವಿಜಯ್ ಹೃದಯ ಮಿಡಿಯುತ್ತಲೇ ಇತ್ತು. ಉತ್ತಮ ವೈದ್ಯಕೀಯ ಸಿಬ್ಬಂದಿ ಕಾಳಜಿಯಿಂದ ಶನಿವಾರರಾತ್ರಿ ನಾಲ್ಕು ಗಂಟೆ ವೇಳೆಗೆ ತಲೆಯ ಶಸ್ತ್ರಚಿಕಿತ್ಸೆಯೂ ನಡೆದಿದೆ. ಆದರೇ ಆನಂತರವೇ ಮರುದಿನದಿಂದ ಎಲ್ಲಾ ಗೊಂದಲಗಳು ಹುಟ್ಟಿಕೊಂಡಿವೆ. ಮಾಧ್ಯಮದೆದುರು ಸಂಚಾರಿ ವಿಜಯ್ ಅವರೇ ಉಸಿರಾಡುತ್ತಿದ್ದಾರೆ..ಬಿಪಿ ನಾರ್ಮಲ್ ಇದೆ. ಫಲ್ಸ್ ರೇಟ್ ಓಕೇ, ಅವರೀಗ ಮೂತ್ರ ಮಾಡುತ್ತಿದ್ದಾರೆ! ಈಗ ಕೋಮಾದಲ್ಲಿ ಇರುವುದರಿಂದ ಇನ್ನೂ ೪೮ಗಂಟೆ ವರೆಗೂ ಏನೂ ಹೇಳಲು ಬರುವುದಿಲ್ಲ.
ಪ್ರಜ್ಞೆ ಯಾವಾಗ ಮರಳುತ್ತದೋ ಗೊತ್ತಿಲ್ಲ! ಎಂದು ಅಪೋಲೋ ಆಸ್ಪತ್ರೆಯ ಪ್ರಮುಖ ವೈಧ್ಯರೇ ಹೇಳಿದ್ದವರು, ಕೇವಲ ೨೪, ಗಂಟೆ ಯಲ್ಲೇ ಮತ್ತೆ ಮಾಧ್ಯಮಗಳ ಮುಂದೆ ಒಬ್ಬ ವೈಧ್ಯರು ಯಾವಾಗಲೋ ರಾತ್ರಿ ಹಾರ್ಟ್ ಅಟ್ಯಾಕ್ ಆಗಿದೆಯಂತೇ ನಮ್ಮ ಸಿಬ್ಬಂದಿ ಗಮನಿಸಿದ್ದಾರೇ! ಈಗವರು ವೆಂಟಿಲೆಟರ್ ನಲ್ಲಿ ಕೃತಕ ಉಸಿರಾಟದಲ್ಲಿದ್ದಾರೆ! ಎನ್ನುತ್ತಿದ್ದಂತೆಯೇ ಮತ್ತೊಬ್ಬ ನ್ಯೂರಾಲಜಿ ವೈದ್ಯರು ಏಕಾ ಏಕಿ ಬಂದು ಈಗ ಬ್ರೈನ್ ಡೆಡ್ ಆಗಿದೇ! ಬೇಗಬೇಗ ಸಂಚಾರಿ ವಿಜಯ್ ಮನೆಯವರಿಂದ ಒಪ್ಪಿಗೆ ಪಡೆದು ಅಂಗಾಂಗಗಳ ದಾನಕ್ಕೆ ವ್ಯವಸ್ಥೆ ಮಾಡುತ್ತೇವೆ! ಈಗ ಉಸಿರಾಡುತ್ತಿದ್ದಾರೆ ಬದುಕಿದ್ದಾರೆ ಬದುಕಿರುವಾಗಲೇ ಸಂಚಾರಿ ವಿಜಯ್ ಕಿಡ್ನಿ, ಲಿವರ್, ಕಣ್ಣು, ಹಾರ್ಟ್ ವಾಲ್ಯೂ ಗಳನ್ನು ತೆಗೆದು ಸರ್ಕಾರದ ’ಜೀವ ಸಾರ್ಥಕತೆ’ ಸಂಸ್ಥೆಯ ನೇತೃತ್ವದಲ್ಲಿ ಬೇರೆಯ ರೋಗಿಗೆ ಅಂಗಾಂಗ ಕಸಿಮಾಡಬೇಕೆಂದು ಸಂಪೂರ್ಣ ಮಾಹಿತಿ ಕೊಡುತ್ತಿರುವಾಗಲೇ ಕರ್ನಾಟಕದ ಜನರಿಗೇ ಒಂದು ಆಘಾತಕಾರಿ ಸಂದೇಶ ರವಾನೆಯಾಗಿತ್ತು!
ಸಾವಿಗೆ ಮುನ್ನವೇ ಸಂತಾಪ ಸೂಚಿಸಿದ ರಾಜಕಾರಣಿಗಳು
ನಮ್ಮ ನೆಚ್ಚಿನ ಕನ್ನಡ ಸಿನಿಮಾ ರಂಗದ ತಾರೆ ಕೇವಲ ಕೋಮಾದಲ್ಲಿ ಇದ್ದಾರೆ ಅವರು ಮತ್ತೆ ಬದುಕಿ ಬರುತ್ತಾರೆಂದು ಪೇಸ್ ಬುಕ್ ಸೋಷಿಯಲ್ ಮೀಡಿಯಾ ಗಳಲ್ಲಿ ಸಂಚಾರಿ ವಿಜಯ್ ಫೋಟೋ ಹಾಕಿ ಪ್ರಾರ್ಥನೆ ಮಾಡುತ್ತಾ ಕಾದು ಕುಳಿತಿದ್ದವರು, ಮನೆಮುಂದೆ ಟಿವಿ ನೋಡುತ್ತಾ ’ಅಯ್ಯೂ ಪಾಪ..ಕೊರೋನಾ ಟೈಮಲ್ಲಿ ಬಡವರಿಗೆ ಔಷಧಿ-ಆಹಾರ ಹಂಚುತಿದ್ನಂತೆ ಬೇಗ ಗುಣವಾಗಿ ಬರಲೀ ಒಳ್ಳೆ ಹುಡುಗ’ ಅಂದುಕೊಳ್ಳುತ್ತಿದ್ದವರೆಲ್ಲಾ, ಹೋ.. ಅದೇ ನೋ ಬ್ರೈನ್ ಡೆಡ್ ಅಂತೇ.. ನಟ ಸಂಚಾರಿ ವಿಜಯ್ ಸತ್ತೋದ್ ನಂತೆ’ ಎಂದು ಸಾಯುವ ಮೊದಲೇ ಸಂತಾಪ ಸೂಚಿಸಿ, ಶ್ರದ್ಧಾಂಜಲಿ ಸಲ್ಲಿಸಿ ಕೈತೊಳೆದುಕೊಂಡರು!
ಈ ಎಲ್ಲಾ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಕೆಲವು ಸರ್ಕಾರದ ಮಂತ್ರಿಗಳೂ ತಮ್ಮ ಟ್ವೀಟರ್ ಖಾತೆಗಳಲ್ಲಿ ಬ್ರೇಕಿಂಗ್ ನ್ಯೂಸ್ ರೀತಿಯಲ್ಲಿ ಸಂಚಾರಿ ವಿಜಯ್ ಆಸ್ಪತ್ರೆಯಲಿ ಉಸಿರಾಡುತ್ತಿರುವಾಗಲೇ ಆತ್ಮಕ್ಕೆ ಶಾಂತಿ ಸಿಗಲೆಂದು ಸಂತಾಪ ಸೂಚಿಸಿಬಿಟ್ಟಿದ್ದರು! ಆಗ ಹಿರಿಯ ನಟ ಜಗ್ಗೇಶ್ ರಂತವರು ಅಪೋಲೋ ಆಸ್ಪತ್ರೆಗೆ ಖುದ್ದು ಭೇಟಿ ನೀಡಿ ಪರಿಶೀಲಿಸಿ ಹೊರ ಬಂದು ನಟ ಸಂಚಾರಿ ವಿಜಯ್ ಇನ್ನೂ ಸತ್ತಿಲ್ಲ ಕಣ್ರೀ ಅವನಿನ್ನೂ ಉಸಿರಾಡ್ತಿದ್ದಾನೆಂದಾಗ ಬೆಚ್ಚಿ ನಾಚಿ ನೀರಾದ ಕೆಲವು ಬುದ್ಧಿವಂತ ರಾಜಕಾರಣಿಗಳು ಮತ್ತೆ ತಮ್ಮ ಸೋಷಿಯಲ್ ಮೀಡಿಯಾಗಳಲ್ಲಿದ್ದ ಶ್ರದ್ಧಾಂಜಲಿ ಪೋಸ್ಟರ್ ಗಳನ್ನು ಅಳಿಸಿ ಹಾಕಿದರು! ಚಿಕ್ಕ ವಯಸ್ಸಿನಲ್ಲೇ ತಂದೆತಾಯಿ ಕಳೆದುಕೊಂಡು ಬಡತನದಲ್ಲೆ ಓದಿ ಎಂಜಿನಿಯರಿಂಗ್ ಪದವಿದರನಾಗಿ, ಪ್ರಾಧ್ಯಾಪಕರಾಗಿ, ನಂತರ ನಾಟಕರಂಗದಲ್ಲಿ ಗುರುತಿಸಿ ಕೊಂಡು ಅಭಿನಯವನ್ನು ಉಸಿರಾಗಿಸಿಕೊಂಡು, ಕಿರುತೆರೆಯಲ್ಲಿ ಸಣ್ಣ ಪುಟ್ಟ ಪಾತ್ರಗಳಲ್ಲಿ ನಟಿಸಿ ಸಿನಿಮಾ ರಂಗಕ್ಕೆ ಪದಾರ್ಪಣೆ ಮಾಡಿ ನಟನೆಗೆ ರಾಷ್ಟ್ರ ಪ್ರಶಸ್ತಿ ಪಡೆದುಕೊಂಡು ಕನ್ನಡ ನಾಡಿಗೆ ಕೀರ್ತಿ ತಂದುಕೊಟ್ಟ ಸಂಚಾರಿ ವಿಜಯ್ ಎಂಬ ಅಪ್ಪಟ ಕಲಾವಿದ, ಹದಿನೈದಕ್ಕೂ ಹೆಚ್ಚು ಕನ್ನಡ ಚಲನಚಿತ್ರಗಳಲ್ಲಿ ಅಭಿನಯಿಸಿ ಕನ್ನಡ ಪ್ರೇಕ್ಷಕರ ಮನದಲ್ಲಿ ಜಾಗಮಾಡಿಕೊಳ್ಳಲು ಕಲೆಯನ್ನೇ ಉಸಿರಾಡಿ, ಸಾಮಾಜಿಕ ಕಾಳಜಿಯಿಂದ ಕೋವಿಡ್ ಸಂಕಷ್ಟದ ಸಮಯದಲ್ಲಿ ಉಸಿರು ಎಂಬ ಸಂಸ್ಥೆಯ ಮೂಲಕ ಕೊರೋನಾ ರೋಗಿಗಳಿಗೆ ಆಕ್ಸಿಜನ್ ಕಿಟ್ ನೀಡುತ್ತಾ ಆದರ್ಶದಿಂದ ಹಗಲು ರಾತ್ರಿ ಎನ್ನದೆ ಓಡಾಡುತ್ತಿರುವಾಗಲೇ ಈ ಬೈಕ್ ಅಪಘಾತ ಸಾವಿನ ಬಾಗಿಲಲ್ಲಿ ತಂದು ನಿಲ್ಲಿಸಿರುವಾಗ, ಕೋಮಾಗೆ ಜಾರಿರುವ ಒಬ್ಬ ಮಹಾನ್ ಕಲಾವಿದನ ಬದುಕು, ಭವಿಷ್ಯ ವನ್ನು ಲೆಕ್ಕಿಸದೇ ಆತುರಾತುರವಾಗಿ ಕೇವಲ ಒಂದುವರೆ ದಿನದಲ್ಲಿ ೪೮ಗಂಟೆಯೂ ಟೈಂ ಕೊಡದೆ ಉಸಿರಾಡುತ್ತಿದ್ದ ನಟನೊಬ್ಬನ ದೇಹದಿಂದ ಅತ್ಯಮೂಲ್ಯ ಅಂಗಾಂಗಗಳನ್ನು (ಕುಟುಂಬ ದವರನ್ನು ಮಿಸ್ ಗೈಡ್ ಮಾಡೀ) ತೆಗೆದು ಸಾವನ್ನು ಘೋಷಿಸುವುದೆಂದರೇ..ಇದು ಎಂತಹ ಕ್ರೂರ ಅಮಾನವೀಯ ನಡೆಯಲ್ಲವೇ?!
ಕೋಮಾ ಸ್ಥಿತಿ ತಲುಪಿದ್ದ ನಟ ಸಂಚಾರಿ ವಿಜಯ್ ಯನ್ನು ಇನ್ನೂ ಎರಡು ಮೂರು ದಿನವಾದರೂ ಇಡಬಹುದಿತ್ತೇನೋ.. ಪ್ರಜ್ಞೆ ಮರಳುವ ಸಾಧ್ಯತೆ ಇತ್ತೇನೋ..ಅವರ ಸಾವನ್ನು ಅಷ್ಟು ಅರ್ಜೆಂಟ್ ಆಗಿ ಯಾವ ಕನ್ನಡಿಗನೂ ಬಯಸಿರಲಿಲ್ಲ. ಬ್ರೈನ್ ಡೆಡ್ ಆಗಿದೇ ಬೇಗ ನೋಡಿ ಸರ್ಕಾರಕ್ಕೆ ತಿಳಿಸಿ, ಬದುಕಿರುವಾಗಲೇ ಅಂಗಾಂಗ ತೆಗುದುಬಿಡಿ ಎಂದು ಯಾರೂ ಒತ್ತಾಯಿಸಿರಲಿಲ್ಲ.
ಅವಸರ ಏನಿತ್ತು ಕಾಯಬಹುದಿತ್ತಲ್ಲ?
ಆಸ್ಪತ್ರೆಯ ವೆಚ್ಚವನ್ನು ಸರ್ಕಾರವೆ ಖುದ್ದು ಭರಿಸಲು ಮುಂದೆ ಬಂದಿರುವಾಗ ಆಸ್ಪತ್ರೆಯಲ್ಲಿಯೇ ನಟ ಸಂಚಾರಿ ವಿಜಯ್ ಯನ್ನು ಮತ್ತಷ್ಟು ದಿನ ಇಟ್ಟುಕೊಂಡು ಚಿಕಿತ್ಸೆ ನೀಡಲು ಯಾಕೆ ಪ್ರಯತ್ನಿಸಲಿಲ್ಲ? ಸರ್ಕಾರದ ಜೀವ ಸಾರ್ಥಕತೆ ಸಂಸ್ಥೆಯ ಮೂಲಕ ಅಪೋಲೋ ಆಸ್ಪತ್ರೆಯ ಸಿಬ್ಬಂದಿಗಳು ಮತ್ತೊಬ್ಬ ಬದುಕಿರುವ ರೋಗಿಗೆ ಸಂಚಾರಿ ವಿಜಯ್ ಕಿಡ್ನಿ ಜೋಡಿಸಿ ಜೀವನ ಸಾರ್ಥಕ ಪಡಿಸಲು ಉಸಿರಾಡುತ್ತಾ ಬದುಕಿ ಪ್ರಜ್ಞೆ ಕಳೆದುಕೊಂಡಿದ್ದ ನಟ ಸಂಚಾರಿ ವಿಜಯ್ ರ ಕಿಡ್ನಿ ಕಿತ್ತು ಸಾಯಿಸಿ ವಿಜಯ್ ಬದುಕು ಮತ್ತು ಅವರ ಕುಟುಂಬದ ಜೀವನ ಎರಡನ್ನೂ ಹಾಳು ಮಾಡುವ ಅವಶ್ಯಕತೆ ಇರಲಿಲ್ಲ. ಹಾಗೊಂದು ವೇಳೆ ಕೆಲವು ದಿನಗಳು ನಟ ಸಂಚಾರಿ ವಿಜಯ್ ಆಸ್ಪತ್ರೆಯಲಿ ಕೋಮಾದಲ್ಲಿಯೇ ಇದ್ದು ಪ್ರಜ್ಞೆ ಯೇ ಮರಳದೇ ಮುಂದೊಂದು ದಿನ ಸತ್ತಿದ್ದರೇ, ಆವಾಗಲೂ ಸಂಚಾರಿ ವಿಜಯ್ ಆತ್ಮಕ್ಕೆ ಶಾಂತಿ ಸಿಗಲೆಂದು ಅವರ ಎರಡೂ ಕಣ್ಣುಗಳನ್ನು ದಾನ ಮಾಡಬಹುದಿತ್ತೇನೋ..ಈಗಲೇ ಸಂಚಾರಿ ವಿಜಯ್ ಮನೆಯವರನ್ನು ಅಷ್ಟು ಅರ್ಜೆಂಟ್ ಆಗಿ ಕನ್ವಿನ್ಸ್ ಮಾಡೀ ಕೇವಲ ಒಂದೂವರೆ ದಿನದಲ್ಲೇ ಅಷ್ಟು ದೊಡ್ಡ ನಟನ ಕಿಡ್ನಿ ಲಿವರ್ ಕಣ್ಣು ಹಾರ್ಟ್ ವಾಲ್ಯೂ ಬಿಚ್ಚಿ ಕೊಂಡು ಸಾವು ಘೋಷಿಸುವ ತುರ್ತು ಏನಿತ್ತು?
ಪ್ರಯೋಗ ಯಶಸ್ವಿಯಾಗುತ್ತಿತ್ತೇನೋ?
ಎಷ್ಟೋ ಬಾರಿ ಇಂತಹ ಕೋಮಾಗೆ ಜಾರಿದ ರೋಗಿಗಳಲ್ಲಿ ಹಲವು ವಿಧದ ತೆರಫಿ ಚಿಕಿತ್ಸೆಗಳ ನಂತರ ಪ್ರಜ್ಞೆ ಯೂ ನಿಧಾನವಾಗಿ ಮರುಕಳಿಸಿದ ಉದಾಹರಣೆಗೆ ಗಳು ಪ್ರಪಂಚದಲ್ಲಿ ಸಾಕಷ್ಟಿವೆ. ರಾಜಕಾರಣಿಗಳನ್ನು ದೊಡ್ಡ ದೊಡ್ಡ ನಟರನ್ನು ವಿದೇಶಕ್ಕೆ ಸರ್ಕಾರಿ ವೆಚ್ಚದಲ್ಲಿಯೇ ಕಳಿಸಿ ಚಿಕಿತ್ಸೆ ಕೊಡಿಸಿ ಬದುಕಿಸಿಕೊಂಡ ಉದಾಹರಣೆಗಳೂ ನಮ್ಮಲ್ಲೇ ಇವೆಯಲ್ಲ. ಸಂಚಾರಿ ವಿಜಯ್ ವಿದೇಶದಲ್ಲಿ ಚಿಕಿತ್ಸೆ ಪಡೆಯುವಷ್ಟು ಎತ್ತರಕ್ಕೆ ಇನ್ನೂ ಬೆಳೆದಿರಲಿಲ್ಲವೇ? ಬ್ರೈನ್ ಡೆಡ್ ಕಾನ್ಸೆಪ್ಟೇ ಇನ್ನೂ ಬಗೆಹರಿಯದೆ ಜಗತ್ತಿನಾದ್ಯಂತ ಗೊಂದಲದಲ್ಲಿದೆ. ಅದಕ್ಕಾಗಿಯೇ ಅಮೆರಿಕದ ನ್ಯೂರೋ ಸೈಂಟಿಸ್ಟ್ ಗಳು ಹಲವು ವರ್ಷಗಳಿಂದಲೂ ಬೆನ್ನುಮೂಳೆ ಸಂಪೂರ್ಣ ಮುರಿದ ಮನುಷ್ಯನ ಶಿರಸ್ಸನ್ನೇ ಆರೋಗ್ಯ ವಂತ ದೇಹಕ್ಕೆ ಆಪರೇಷನ್ ಮೂಲಕ ಕಸಿಮಾಡುವ ಅಧ್ಬುತವಾದ ಭಯಾನಕ ಮಿಷನ್ ನಲ್ಲಿ ತೊಡಗಿದ್ದಾರೆ! ಈ ಪ್ರಯೋಗ ಯಶಸ್ವಿ ಯಾದರೇ ನಿಜವಾಗಿಯೂ ಬ್ರೈನ್ ಡೆಡ್ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗಬಹುದೇನೋ.
ಈಗ ಕೋಮಾ ಸ್ಥಿತಿಯೆಂದರೇ, ಕಣ್ಣು ಮುಚ್ಚಿದ, ಯಾರಿಗೂ ಸ್ಪಂದಿಸದ, ಪ್ರಜ್ಞೆ ಇಲ್ಲದೆಯೂ ಉಸಿರಾಟ ಕ್ರಿಯೆ ನಡೆಸುವ ಕ್ರಿಯೆ. ಕೋಮಾ ಸ್ಥಿತಿ ಟೆಂಪರೆರಿಯೂ ಆಗಬಹುದು. ಪರ್ಮನೆಂಟ್ ಆಗಿಯೂ ಇರಬಹುದು. ಕೋಮಾಗೆ ಜಾರಿದ ರೋಗಿಗಳಲ್ಲಿ ಮೂರು ಮುಖ್ಯ ಸಾಧ್ಯತೆಗಳಿರುತ್ತವೆ. ರೋಗಿ ಚೇತರಿಕೆಯ ಸಾಧ್ಯತೆ. ಪ್ರಜ್ಞೆ ಮರುಕಳಿಸುವ ಸಾಧ್ಯತೆ, ವೆಜಿಟೇಟಿವ್ ಸ್ಟೇಟ್, ಕೊನೆಯದಾಗಿ ಬ್ರೈನ್ ಡೆತ್! ಕೇವಲ ೨೪ಗಂಟೆಗಳಲ್ಲಿ ಬ್ರೈನ್ ಟಿಷ್ಯೂಗಳು ಡೆಡ್ ಆಗುತ್ತವೆಯೇ? ಮತ್ತೆ ಹೀಲ್ ಆಗಲು ಸಾಧ್ಯವಿಲ್ಲವೇ? ಸಾಯುತ್ತಿರುವ ಮೆದುಳಿನ ಒಳಕೋಶಗಳಲ್ಲಿ ಅತೀ ಕಡಿಮೆ ಸಾಂದ್ರತೆಯ ರೇಡಿಯೋ ಆಕ್ಟಿವಿಟಿ ಮೂಲಕ ವಿದ್ಯುತ್ ತರಂಗ ಹರಿಸಿ ಅಮೆರಿಕದ ನ್ಯೂರೋ ಸೈಂಟಿಸ್ಟ್ ಮಾಡುತ್ತಿರುವ ಪ್ರಯೋಗಗಳ ಫಲಿತಾಂಶಕ್ಕೆ ವೈದ್ಯಕೀಯ ಜಗತ್ತು ಕಾಯುತ್ತಿದೆ.
ಕೋಮಾದಲ್ಲಿದ್ದರೆ ದೇಹದ ಅಂಗಾಗಳು ದಾನಮಾಡುವಂತಿಲ್ಲ
ಮತ್ತೊಂದು ಪ್ರಮುಖವಾದ ವಿಷಯವೇನೆಂದರೆ ವ್ಯಕ್ತಿ ಕೋಮಾದಲ್ಲಿದ್ದರೇ ಆತನ ದೇಹದ ಯಾವುದೇ ಅಂಗಾಂಗಗಳನ್ನು ದಾನಮಾಡುವಂತಿಲ್ಲ! ಹಾಗೇ ಮಾಡುವುದು ಮಹಾಪರಾಧ. ಆದ ಕಾರಣದಿಂದಲೇ ಕೆಲವೊಮ್ಮೆ ಕೋಮಾ ಸ್ಥಿತಿ ಯಿಂದ ಬ್ರೈನ್ ಡೆಡ್ ಡಿಕ್ಲರೇಷನ್ ಮಾಡಲಾಗುತ್ತದಂತೇ!! ಏಕೆಂದರೆ ಕೋಮಾ ಸ್ಥಿತಿಯಲ್ಲಿ ವ್ಯಕ್ತಿ ಉಸಿರಾಡುತ್ತಿರುತ್ತಾನೆ. ಆತನ ಬಿಪಿ ನಾರ್ಮಲ್ ಇರುತ್ತದೆ.ಹಾರ್ಟ್ ಬೀಟ್, ಹಾರ್ಮೋನ್, ಕೂಡ ಸರಿಯಾಗಿಯೇ ಕೆಲಸ ನಿರ್ವಹಿಸುತ್ತಿರುತ್ತದೆ. ಆತನ ಎಲ್ಲಾ ಅಂಗಾಂಗಗಳು ಸುಸ್ಥಿತಿಯಲ್ಲಿರುತ್ತವೆ. ಬ್ರೈನ್ ಡೆಡ್ ಆದರೇ ಬಾಡೀ ಟೆಂಪರೇಚರ್ ನಿಂದ ಹಿಡಿದು ಉಸಿರಾಟ, ಬಿಪಿ.ಎಲ್ಲಾ ಆಗಿಂದಾಗ್ಗೆ ಏರುಪೇರಾಗುವುದು ರಿಂದ ಅಂಗಾಂಗಗಳು ಹಾಳಾಗುವುದು ಬೇಡ ದಾನಮಾಡಿಬಿಡಿ ಎಂದು ರೋಗಿಯ ಮನೆಯವರನ್ನು ಒಪ್ಪಿಸಿ ಓಲೈಸುವುದು ಸಹಝವಾಗಿದೇ! ಹಾಗಿಗಿಯೇ ಬ್ರೈನ್ ಡೆಡ್ ಡಿಕ್ಲರೇಷನ್ ಮಾಡಲು ಮೈಕ್ರೋವೋಲ್ಟ್ ನಲ್ಲಿ ಬ್ರೈನ್ ವೋಲ್ಟ್ ನಿಂದ ಅಳತೆ ಮಾಡಿ, ಸೆರೆಬ್ರಲ್ ಬ್ಲಡ್ ಟೆಸ್ಟ್, ಇಇಜಿ, ಟೆಸ್ಟ್ ನಿಂದ ಬ್ರೈನ್ ಡೆಡ್ ನಿರ್ಧಾರ ಕೈಗೊಳ್ಳಲಾಗುವುದು.
ನಂತರ ಕರ್ನಾಟಕ ಸರ್ಕಾರದ ಜೀವ ಸಾರ್ಥಕತೆ(ಆರ್ಗಾನ್ ಡೊನೇಷನ್ ಪಡೆವ ಸರ್ಕಾರಿ ಸಂಸ್ಥೆ) ತಂಡ ಬಂದು ಬ್ರೈನ್ ಡೆಡ್ ಡಿಕ್ಲರೇಷನ್ ಮಾಡೀ ತಕ್ಷಣವೇ ಕೋಮಾದಲ್ಲಿರುವ ರೋಗಿಯ ಅಂಗಾಂಗಗ ದಾನ ಪಡೆಯಲು ರೋಗಿಯ ಮನೆಯವರಿಂದ ಫಾರ್ಮ್ ನಂಬರ್-೮ ಮೇಲೆ ನೋ ಅಬ್ಸಕ್ಷನ್ ಸಹಿಪಡೆಯುವುದರ ಜೊತೆಗೆ ಅಪಘಾತ ಸಂಭವಿಸಿದೆ ವ್ಯಾಪ್ತಿಯ ಪೊಲೀಸ್ ಠಾಣೆಯಿಂದ ಕ್ಲಿಯರೆನ್ಸ್ ಲೆಟರ್, ಮತ್ತು ಆಸ್ಪತ್ರೆಯ ವೈಧ್ಯರಿಂದ ಫಾರ್ಮ್ ನಂಬರ್-೧೦ ಬ್ರೈನ್ ಡೆಡ್ ಡಿಕ್ಲರೇಷನ್ ಸರ್ಟಿಫಿಕೇಟ್ ಗಳನ್ನು ಪಡೆದು ಅಂಗಾಂಗಗಳ ದಾನ ಪಡೆವ ನಂತರ ಕಸಿ ಮಾಡುವ ವಿಧಾನ ಮುಂದುವರಿಸುತ್ತಾರೆ. ಇಷ್ಟೆಲ್ಲಾ ದೊಡ್ಡ ದೊಡ್ಡ ಪ್ರಕ್ರಿಯೆಗಳು, ಕಾನೂನಿನ ಕೆಲಸಗಳು ನಟ ಸಂಚಾರಿ ವಿಜಯ್ ವಿಷಯದಲ್ಲಿ ಬಹುಬೇಗನೇ ಅಂದರೇ ಕೇವಲ ಆರು ಗಂಟೆಯಲ್ಲಿ ನಡೆದು ಸೋಮವಾರ ರಾತ್ರಿಯೇ ಕ್ರತಕ ಉಸಿರಾಟ(ವೈಧ್ಯರು ಪ್ರಕಾರ) ನಡೆಸುತ್ತಿದ್ದ ಸಂಚಾರಿ ವಿಜಯ್ ಅಂಗಾಂಗಗಳನ್ನು ತೆಗೆದು ಆ ತಕ್ಷಣವೇ ಸರ್ಕಾರದ ಜೀವ ಸಾರ್ಥಕ ವೆಯ್ಟಿಂಗ್ ಲಿಸ್ಟ್ ನಲ್ಲಿದ್ದ ವ್ಯಕ್ತಿಗಳಿಗೇ ಕಸಿಯನ್ನೂ ಮಾಡಲಾಗಿದೇ! ಈಗಾಗಲೇ ಚಿಕಿತ್ಸೆಗಾಗಿ ರಾಜ್ಯದಲ್ಲಿ ಐದುಸಾವಿರ ರೋಗಿಗಳು ಅಂಗಾಂಗಗ ಕಸಿಮಾಡಿಸಿಕೊಳ್ಳಲು ರಾಜ್ಯ ಸರ್ಕಾರಿ ಕಾರ್ಯದರ್ಶಿ ಮಟ್ಟದ ಮೇಲ್ವಿಚಾರಣೆ ಯಲ್ಲಿರುವ ವೇಯ್ಟಿಂಗ್ ಲಿಸ್ಟ್ ನಲ್ಲಿದ್ದಾರಂತೇ! ಆದರೇ ಸಂಚಾರಿ ವಿಜಯ್ ಮನೆಯವರಿಗೇ ಅಷ್ಟು ಬೇಗನೆ ಉಸಿರಾಟ ಇರುವಾಗಲೇ ಬ್ರೈನ್ ಡೆಡ್ ಟೆಸ್ಟ್ ಮಾಡಿಸಿ ಅಂಗಾಂಗ ದಾನ ಮಾಡಲು ಪ್ರೆಷರ್ ಹಾಕಿದವರಾರು ತಿಳಿಯುತ್ತಿಲ್ಲ. ಡೀಪ್ ಕೋಮಾ, ಆರ್ಡಿನರಿ ಕೋಮಾ, ಸೆರೆಬ್ರಲ್ ಡೆತ್, ಬ್ರೈನ್ ಸ್ಟೀಮ್..ಈ ಎಲ್ಲಾ ಮೆಡಿಕಲ್ ಪರಿಭಾಷೆಗಳನ್ನು ಅಷ್ಟು ಬೇಗನೆ ಮನವರಿಕೆ ಮಾಡಿಕೊಟ್ಟು ಮಹಾಧಾನಕ್ಕ ಪ್ರೇರೇಪಿಸಿದವರಾರು? ೧೦ಕ್ಕೂ ಹೆಚ್ಚಿನ ಸ್ಕಲ್ ಫ್ರಾಕ್ಚರ್, ಎರಡೆರಡು ಮೇಜರ್ ಸರ್ಜರಿ ಆಗಿಯೂ ಡೀಪ್ ಕೋಮಾದಿಂದ ಪಾರಾಗಿ ಮಿರಾಕಲ್ ರೆಕವರಿ ಆದವರೂ ಭೂಮಿ ಮೇಲಿದ್ದಾರೇ! ಆದರೂ ಈ ಸಂಚಾರಿ ವಿಜಯ್ ಸಾವಿನ ಘೋಷಣೆಗೆ ಅರ್ಜೆಂಟ್ ಏನಿತ್ತು ಎಂಬುದೇ ಪತ್ರಿಕೆಯ ಸಂಶಯ..
ಹಾಗೆಯೇ ಉಳಿದು ಹೋದ ಪ್ರಶ್ನೆಗಳು..
ಅಷ್ಟು ಅದ್ಭುತವಾಗಿ ನಟಿಸುತ್ತಿದ ನಟ ಗುಣವಂತ, ಎಲ್ಲರಿಗೂ ನೀತಿಭೋದಿಸುತ್ತಿದ್ದ, ಆದರ್ಶ ಪ್ರಾಯವಾಗಿದ್ದ ನಮ್ಮ ಸಂಚಾರಿ ವಿಜಯ್ ಬೈಕ್ ನಲ್ಲಿ ಹೋಗುವಾಗ ತಲೆಗೆ ಹೆಲ್ಮೆಟ್ ಧರಿಸಬೇಕು ಎಂಬುದನ್ನು ಮರೆತುಬಿಟ್ಟಿದ್ದರಲ್ಲಾ ಏಕೇ? ಅಪಘಾತ ನಡೆದ ಸ್ಥಳದಲ್ಲಿ ಒಂದು ಸಿಸಿ ಕ್ಯಾಮೆರಾ ಇದೆ ಆದರೂ ನಮ್ಮ ಪೂಲೀಸರು, ಮಾಧ್ಯಮ ದವರು ಶನಿವಾರ ರಾತ್ರಿ ಬೆಂಗಳೂರಿನ ಜೆಪಿನಗರದ ಏಳನೇ ಹಂತದ ನಿರ್ಜನ ಪ್ರದೇಶದಲ್ಲಿ ಅಪಘಾತ ಹೇಗೆ ಸಂಭವಿಸಿರಬಹುದೆಂಬ ಕುತೂಹಲ ವನ್ನೂ ತೋರಿಸಲಿಲ್ಲವೇಕೇ? ಕನಕಪುರ ರಸ್ತೆಯ ರಘುವನಹಳ್ಳಿ ಬಳಿಯಿರುವ ಸಂಚಾರಿ ವಿಜಯ್ ರನ್ನು ಜೆಪಿ ನಗರಕ್ಕೆ ಕರೆತಂದವರಾರು? ಮನೆಯಲ್ಲಿ ಕಾರಿದ್ದರೂ ಸಂಚಾರಿ ವಿಜಯ್ ಸುರಕ್ಷಿತ ವಲ್ಲದಿದ್ದರೂ ಸ್ಪೋರ್ಟ್ಸ್ ಬೈಕ್ ನಲ್ಲಿ ಹಿಂದೆ ಕುಳಿತು ರಾತ್ರಿ ಹನ್ನೊಂದುವರೆ ಗಂಟೆಗೆ ಹೋರಟಿದ್ದಾದರೂ ಎಲ್ಲಿಗೇ? ಬೈಕ್ ಓಡಿಸುತ್ತಿದ್ದ ಸಂಚಾರಿ ವಿಜಯ್ ಸ್ನೇಹಿತ ನವೀನ ಮದ್ಯಪಾನ ಮಾಡಿ ವೇಗವಾಗಿ ಬೈಕ್ ಚಲಾಯಿಸಿ ಸಂಚಾರಿ ಪ್ರಾಣಕ್ಕೆ ಕುತ್ತು ತಂದನೇ? ನೈಟ್ ಪಾರ್ಟಿಯ ನಶೆಯಲ್ಲಿ ಈ ಬೀಕರ ಅಪಘಾತ ಸಂಭವಿಸಿತೇ? ಕನ್ನಡ ಸಿನಿಮಾ ಪ್ರೇಮಿಗಳಿಗೆ ರಂಜನೆ ನೀಡಿ ಖುಷಿ ಕೊಡ್ತಿದ್ದ ನಟ ಸಂಚಾರಿ ವಿಜಯ್ ಗೆ ಕುಳಿತಿದ್ದ ಬೈಕ್ ಗೆ ಕತ್ತಲಲ್ಲಿ ಮತ್ತಾವುದಾದರೂ ವಾಹನ ಡಿಕ್ಕಿ ಹೊಡೆದು ಪರಾರಿಯಾಯಿತೇ? ಅಥವಾ.. ಶಂಕರ್ ನಾಗ್ ರಂತೆ ಈತನಿಗೂ ಚಿಕ್ಕ ವಯಸ್ಸಿನಲ್ಲೇ ಸಾವು ಹುಡುಕಿ ಬಂತೆ?..