ಬೆಂಗಳೂರು,ಜೂ,18: ಕಮಲ ಪಾಳೆಯದಲ್ಲಿ ಅಸಮಾಧಾನದ ರೋಷಾಗ್ನಿಯ ಕಿಡಿ ದಿನ ದಿನಕ್ಕೂ ಬೆಂಕಿಯಾಗಿ ಪರಿಣಮಿಸುತ್ತಿದೆ..ಈ ಹಿನ್ನೆಲೆಯಲ್ಲಿ ಎಚ್.ವಿಶ್ವನಾಥ್ ನೀರಾವರಿ ಇಲಾಖೆಯಲ್ಲಿ 20 ಸಾವಿರ ಕೋಟಿ ಭ್ರಷ್ಟಾಚಾರ ನಡೆದಿದೆ ಎಂದು ಹೊಸಬಾಂಬ್ ಸಿಡಿಸಿದ್ದಾರೆ.
ಈ ಕುರಿತು ಸುದ್ದಿಗೋಷ್ಠಿ ನಡೆಸಿ ದಾಖಲೆ ಬಿಡುಗಡೆ ಮಾಡಿದ ಹೆಚ್.ವಿಶ್ವನಾಥ್, ಭದ್ರಾ ಮೇಲ್ದಂಡೆ ಯೋಜನೆಯಲ್ಲಿ ಅಕ್ರಮವಾಗಿದೆ ಕಾವೇರಿ ನೀರಾವರಿ ನಿಗಮದಲ್ಲಿ ಅಕ್ರಮ ನಡೆದಿದೆ. 20 ಸಾವಿರ ಕೋಟಿ ಟೆಂಬರ್ ನಲ್ಲಿ ಭಾರಿ ಅಕ್ರಮ ನಡೆದಿದೆ. ಗುತ್ತಿಗೆದಾರರಿಂದ ಕಿಕ್ ಬ್ಯಾಕ್ ಪಡೆಯಲಾಗುತ್ತಿದೆ ಎಂದು ಕಿಡಿಕಾರಿದರು.
ಕುಟುಂಬ ರಾಜಕಾರಣ ಮಿತಿ ಮೀರಿ ಹೋಗಿದೆ. ಕುಟುಂಬ ರಾಜಕಾರಣ ಭ್ರಷ್ಟಾಚಾರ ತಡೆಯಲು ಅರುಣ್ ಸಿಂಗ್ ಗೆ ಹೇಳಿದ್ದೇನೆ. ಏನು ನಡೆಯುತ್ತಿದೆ ಎಂಬುದನ್ನ ನೇರಾನೇರವಾಗಿ ಹೇಳಿದ್ದೇನೆ. ನಾನು ಪಕ್ಷದ ಸಿದ್ಧಾಂತ ಕಾರ್ಯಕ್ರಮದ ಬಗ್ಗೆ ಮಾತನಾಡಿಲ್ಲ. ಭ್ರಷ್ಟಾಚಾರ, ಕುಟುಂಬ ರಾಜಕಾರಣ ಬಗ್ಗೆ ಮಾತ್ರ ಹೇಳಿದ್ದೇನೆ. ಪಕ್ಷದ ಸಿದ್ಧಾಂತಗಳನ್ನ ಪಾಲಿಸುವ ಬಗ್ಗೆ ಪ್ರಸ್ತಾಪಿಸಿದ್ದೇನೆ. 75 ವರ್ಷ ಮೇಲ್ಪಟ್ಟವರಿಗೆ ಅಧಿಕಾರ ಬೇಡ ಎಂಬ ಸಿದ್ಧಾಂತ ಪಾಲನೆ ಬಗ್ಗೆ ಹೇಳಿದ್ದೇನೆ ಎಂದು ಅವರು ತಿಳಿಸಿದರು.
ಯಡಿಯೂರಪ್ಪಗೆ ಮೊದಲಿದ್ಧ ಶಕ್ತಿ ಈಗ ಇಲ್ಲ. ಇದರಿಂದ ವಿಧಾನಸೌಧದ ಶಕ್ತಿ ಪೀಠ ಮುಸುಕಾಗುತ್ತಿದೆ. ನಾಯಕತ್ವ ಕುಸಿಯುತ್ತಿದೆ. ಇವರಿಂದ ಪ್ರಯೋಜನ ಇಲ್ಲ. ಕುಸಿದ ನಾಯಕತ್ವದಿಂದ ರಾಜ್ಯಕ್ಕೆ ಪ್ರಯೋಜನ ಇಲ್ಲ. ಯಡಿಯೂರಪ್ಪ ಗೌರವಿಸಿ ಸಿಎಂ ಮಾಡಿದ್ದೇವೆ. ನಮ್ಮ ಸಹಕಾರದಿಂದ ಸರ್ಕಾರ ಅಧಿಕಾರಕ್ಕೆ ಬಂದಿದೆ. ಈಗ ಸಮರ್ಪಕವಾದ ನಾಯಕತ್ವ ರಾಜ್ಯಕ್ಕೆ ಬೇಕಿದೆ ಎಂದರು.
ಬಿಎಸ್ ವೈ ಪುತ್ರ ವಿಜಯೇಂಧ್ರನಿಂದ ಹಸ್ತಕ್ಷೇಪವಾಗುತ್ತಿದೆ.ಎಲ್ಲಾ ಇಲಾಖೆಗಳಲ್ಲಿ ಹಸ್ತಕ್ಷೇಪವಾಗುತ್ತಿದೆ. ವಿಜಯೇಂದ್ರ ವಿರುದ್ಧ ಇಡಿಯಲ್ಲಿ ಪ್ರಕರಣವೂ ಇದೆ. ಹೀಗಾಗಿ ವಿಜಯೇಂದ್ರ ದೆಹಲಿಗೆ ಹೋಗ್ತಾರೆ. ಬಿಎಸ್ ವೈ ಮೊದಲು ಮಕ್ಕಳಿಂದಲೇ ಜೈಲಿಗೆ ಹೋಗಿದ್ದರು. 2ನೇ ಬಾರಿಗೆ ಜೈಲಿಗೆ ಹೋಗಬಾರದು ಎಂದರು.