ನಿರುದ್ಯೋಗ ಸಮಸ್ಯೆಗೆ ವ್ಯವಸ್ಥೆ ಬದಲಾವಣೆ ಅಗತ್ಯ

Share

 

ಚಿದಂಬರ ಜೋಶಿ,ಚಿಕಾಗೂ.

ಚಿದಂಬರ ಜೋಶಿ ಅವರು ಮೂಲತಃ ರಾಯಚೂರು ಜಿಲ್ಲೆಯ, ಗಂಗಾವತಿಯವರು. ಪ್ರಸ್ತುತ ಅನಿವಾಸಿ ಭಾರತೀಯ. ಕಳೆದ ೩ ದಶಕಗಳಿಂದ ಉತ್ತರ ಅಮೆರಿಕಾದ ಚಿಕಾಗೊದಲ್ಲಿ ನೆಲಿಸಿದ್ದಾರೆ. ಅವರ ಕನ್ನಡ ಪ್ರೇಮ ಇವತ್ತಿಗೂ ಮಾಸಿಲ್ಲ. ಅವರ ವಿಶಿಷ್ಟ ಚಿಂತನೆ ಹಾಗೂ ಬರವಣಿಗೆಯ ಶೈಲಿ, ಓದುಗರ, ಕೇಳುಗರ ವಿಚಾರಶಕ್ತಿಯನ್ನು ಪ್ರಚೋದಿಸುತ್ತವೆ, ಸವಾಲು ಒಡ್ಡುತ್ತವೆ.  ಅವರು ನಿರುದ್ಯೋಗ ಸಮಸ್ಯೆ ಕುರಿತು ಬರೆದಿದ್ದಾರ

ನಿರುದ್ಯೋಗ ಸಮಸ್ಯೆಗೆ ವ್ಯವಸ್ಥೆ ಬದಲಾವಣೆ ಅಗತ್ಯ

ನಾನು, ಹಿಂದಿನ ಲೇಖನದಲ್ಲಿ, ಮನೋಸ್ಥಿತಿ ನಿರ್ಮಾಣಕ್ಕೆ ನಾವು ಸೇವಿಸುವ ವಿಷಯ ಮಾಹಿತಿಗಳು ಹೇಗೆ ಕಾರಣವಾಗಬಹುದು ಎಂಬುದನ್ನು ಬರೆದಿದ್ದೆ. https://kendhooli.com/2021/11/06/ನಿರುದ್ಯೋಗ-ಸಮಸ್ಯೆಗೆ-ಮನೋಸ್/ ಮತ್ತೊಮ್ಮೆ ಓದಿ.

ವಿಚಾರಗಳು ಮೊದಲು ಬುದ್ಧಿಯಲ್ಲಿ ಮೂಡಿ, ಶಬ್ದರೂಪ ತಾಳಿ, ಕಾರ್ಯರೂಪಕ್ಕೆ ಬರುತ್ತವೆ. ಈ ಕಾರ್ಯಗಳು ಪದೇ ಪದೇ ಪುನರಾವರ್ತಿಸಿದಾಗ ಸಂಸ್ಕಾರಗಳಲ್ಲಿ ಬದಲಾಗುತ್ತವೆ. ಇದನ್ನು ಒಪ್ಪುತ್ತೀರಿ ಎಂದಾದರೆ ನಮ್ಮ ಪ್ರಸ್ತುತ ಜೀವನದ ರೂಪರೇಷೆಗಳು, ನಿರೀಕ್ಷೆಗಳು ಕೂಡ ಈ ಸಂಸ್ಕಾರಗಳ ಉತ್ಪನ್ನಗಳೇ ಎಂದು ಒಪ್ಪಬಹುದು, ಅಲ್ಲವಾ?.

ಪ್ರತಿದಿನ ಉಲ್ಬಣಿಸುತ್ತಿರುವ ನಿರುದ್ಯೋಗ ಸಮಸ್ಯೆ, ನಮ್ಮಲ್ಲಿ ಆಳವಾಗಿ ಬೇರೂರಿರುವ ಈ ವಿಷಪೂರಿತ ಸಂಸ್ಕಾರಗಳ ಒಂದು ರೋಗಲಕ್ಷಣ ಅಷ್ಟೇ. ಈ ಸಂಸ್ಕಾರಗಳು ಮೊದಲು ಬದಲಾಗಬೇಕು. ಜಡದಿಂದ ಬದಲಾಗಬೇಕು. ಈ ಮಹಾವಿಷವೃಕ್ಷ ಬೇರು ಸಮೇತ ನಾಶವಾಗಬೇಕು. ಇದರ ಸ್ಥಾನದಲ್ಲಿ ವಿನೂತನ ಸಾಮಾಜಿಕ ಸಂಸ್ಕಾರ ಮೊಳಕೆಯೊಡೆಯಬೇಕು. ಬೇರೂರಬೇಕು. ಅಗಾಧ ವೃಕ್ಷವಾಗಬೇಕು.

ಪ್ರಸ್ತುತ ವ್ಯವಸ್ಥೆಗೆ ತೇಪೆ ಹಚ್ಚುವದರಿಂದ, ಈ ಸಮಸ್ಯೆ ಎಂದಿಗೂ ದೂರಾಗದು. ಸಮೂಲಾಗ್ರವಾಗಿ ವ್ಯವಸ್ಥೆಯ ಬದಲಾವಣೆ ಅತ್ಯವಶ್ಯ. ಸಮಗ್ರರೂಪ (ಒಳಗಡೆಯೂ, ಹೊರಗಡೆಯೂ) ಬದಲಾಗಬೇಕು. ಇಲ್ಲದಿದ್ದರೆ, ಅದೇ ಶಿಥಿಲಗೊಂಡ, ಆಳವಿಲ್ಲದ ಅಡಿಪಾಯದ ಮೇಲೆ ತಡೆಯಲಾರದಷ್ಟು ಅಂತಸ್ತುಗಳನ್ನ ಕಟ್ಟಿದ ಮನೆಯಹಾಗೆ ನಮ್ಮೆಲ್ಲ ವ್ಯವಸ್ಥೆಗಳು ಕುಸಿದು ಬೀಳುವುದು ಖಂಡಿತ ಮತ್ತು ಅನಿವಾರ್ಯ.

ಆದರೆ, ಈ ಸಮಗ್ರ ಬದಲಾವಣೆ ಸಾಧ್ಯವೇ? ಅದನ್ನು ನೀವೇ ಹೇಳಬೇಕು.

ನಾನು ಇದಾಗಬೇಕಾದರೆ ಯಾವ ಬದಲಾವಣೆಗಳು ಅತ್ಯವಶ್ಯಕ ಎನ್ನುವ ಚಿಂತನೆ ನಿಮ್ಮೊಡನೆ ಹಂಚಿಕೊಳ್ಳುತ್ತೇನೆ. ತದ ನಂತರ, ಸಮಸ್ಯೆಗೆ ಸಂಭಾವ್ಯ ಪರಿಹಾರಗಳನ್ನ ಸೂಚಿಸುತ್ತೇನೆ. ಈಗಲೇ ಸಮಾಧಾನಗಳನ್ನು ಸೂಚಿಸಿದಲ್ಲಿ, ಅಪಕ್ವವಾದ ವಾದವನ್ನು, ಅಕಾಲಿಕವಾಗಿ ಮಂಡಿಸಿದಂತಿರುತ್ತದೆ ಅಷ್ಟೇ. ಆದ್ದರಿಂದ ತಾಳ್ಮೆಯಿರಲಿ.

ಮುಂದುವರೆಸೋಣ.

ಪ್ರತೀ ಮನೆಯು ರಾಷ್ಟ್ರದ ಒಂದು ಕನಿಷ್ಠ ಘಟಕ. ಹಲವಾರು ಮನೆಗಳು ಸೇರಿ ಒಂದು ಸಮಾಜ. ಹಲವಾರು ಸಮಾಜಗಳು ಸೇರಿ ಒಂದು ರಾಷ್ಟ್ರ. ನಾನು ಉದ್ದೇಶ್ಯಪೂರ್ವಕವಾಗಿ, ವಿವೇಚನೆಯಿಂದ, ಜಿಲ್ಲೆ, ರಾಜ್ಯ ಎಂಬ ವಿಭಜನೆಗಳನ್ನು ಈ ವಿಚಾರದಿಂದ ದೂರ ಇಟ್ಟಿದ್ದೇನೆ. ನನ್ನ ಅಭಿಪ್ರಾಯದಲ್ಲಿ ಇದೊಂದು ಅನವಶ್ಯಕ ವಿಭಜನೆ. ಸರ್ದಾರ್ ವಲ್ಲಭ ಪಟೇಲರ ಇದೊಂದೇ ಕಾರ್ಯ ನಾನೊಪ್ಪುವದಿಲ್ಲ. ಮೇಲ್ನೋಟಕ್ಕೆ ಅವರು ಮಾಡಿದ ಭಾಷಾಧಾರಿತ ರಾಜ್ಯಗಳ ರಚನೆ – ಭಾಷಾ ಸಂಪತ್ತನ್ನು ಹಾಗೂ ಪ್ರಾದೇಶಿಕ ಸಂಸ್ಕೃತಿಯನ್ನು ಉಳಿಸುವ ಒಂದೇ ಮಾರ್ಗ ಎಂದು ತೋರಿದರೂ, ರಾಷ್ಟ್ರೀಯ ಸಂಪತ್ತುಗಳನ್ನು ಸಮವಾಗಿ ಎಲ್ಲರೂ ಅನುಭವಿಸುವ ದೂರದೃಷ್ಟಿ ಹೊಂದಿರಲಿಲ್ಲ ಎಂಬುದು ನನ್ನ ಅಭಿವ್ರಾಯ. ಈ ರಾಜ್ಯಸಂಘಟನೆ, ನಮ್ಮೆಲ್ಲರನ್ನೂ ಶಾಶ್ವತವಾಗಿ ವಿಭಾಜಿಸಿದೆ. ಲೋಹಪುರುಷ ಶ್ರೀಯುತ ಪಟೇಲರ ಈ ಕಾರ್ಯದ ಹಿಂದೆ ಇದ್ದ ಪ್ರತಿಯೊಬ್ಬ ವ್ಯಕ್ತಿ ಮತ್ತು ಪ್ರತಿಯೊಂದು ನಿರ್ಧಾರಗಳೂ ಈ ಸಂಕುಚಿತ ದೃಷ್ಟಿಯಲ್ಲಿ ಸಮಭಾಗಿಗಳು. ಇಲ್ಲಿ ಸ್ವಲ್ಪ ವಿಷಯಾಂತರವಾಯಿತು ಎಂದುಕೊಂಡಿರಾ? ಇಲ್ಲ. ಹಲವಾರು ರಾಜ್ಯಸರ್ಕಾರಗಳು ಇತ್ತೀಚೆಗೆ ತರುತ್ತಿರುವ ಇಲ್ಲವೇ ತರಲು ವಿಚಾರ ಮಾಡುತ್ತಿರುವ ಭಾಷಾಧಾರಿತ ಉದ್ಯೋಗ ಮೀಸಲಾತಿ ಕಾನೂನುಗಳು ಇದಕ್ಕೆ ಒಂದು ಉದಾಹರಣೆ.

ಸಧೃಡ ರಾಷ್ಟ್ರನಿರ್ಮಾಣವೇ ನಮ್ಮ ಅಂತಿಮ ಲಕ್ಷ್ಯವಾಗಿರಬೇಕು, ಸಾಮಾನ್ಯ ಗುರಿಯಾಗಬೇಕು. ರಾಷ್ಟ್ರೀಯ ವಿಚಾರಗಳು ಯಾವುದೇ ಒಂದು ರಾಜಕೀಯ ಪಕ್ಷದ ಸೊತ್ತಲ್ಲ. ಇದು ಎಲ್ಲರಿಗೂ ಸಂಬಂಧ ಪಟ್ಟಿದ್ದು ಎಂಬುದು ನನ್ನ ಮತ. ನೀವೇನಂತೀರಿ? ಈ ರಾಜಕೀಯ ಪಕ್ಷಗಳು ಸಮಸ್ಯೆಗಳನ್ನು ನಿವಾರಿಸುವ ಕೆಲಸಗಳನ್ನು ಮರೆತೇಬಿಟ್ಟಿವೆ ಎಂದು ಹೇಳಿದರೆ ಉತ್ಪ್ರೇಕ್ಷೆ ಆಗಲಾರದು. ಏನಂತೀರಿ?. ಅದರ ಬದಲಿಗೆ, ಈ ಪಕ್ಷಗಳು ಹೊಸ ಹೊಸ ಸಮಸ್ಯೆಗಳನ್ನು ಹುಟ್ಟುಹಾಕುತ್ತ, ಇರುವ ಸಮಸ್ಯೆಗಳನ್ನು ಮುಂದುವರೆಸುತ್ತ, ಅಧಿಕಾರ ಜಮಾವಣೆ ಹಾಗೂ ಉಳಿಸಿಕೊಳ್ಳುವ ಒಂದೇ, ಏಕ ಮಾತ್ರ ಲಕ್ಷ್ಯ ಹೊಂದಿವೆ. ಅದಕ್ಕೆಂದೇ, ಅವು ತೆಗೆದುಕೊಳ್ಳುವ ಪ್ರತಿ ನಿರ್ಧಾರಗಳು, ಕೇವಲ ಕೆಲವೇ ಗುಂಪುಗಳ ಹಿತದೃಷ್ಟಿಯನ್ನು ಹೊಂದಿರುತ್ತವೆ. ಇಂತಹ ರಾಜಕೀಯ ವ್ಯವಸ್ಥೆ ಕೂಡ ಈ ನಿರುದ್ಯೋಗ ಸಮಸ್ಯೆ ಮುಂದುವರೆಯಲು, ಅಗಾಧವಾಗಿ ಬೆಳೆದಿರಲು ಕಾರಣ. ಈ ವ್ಯವಸ್ಥೆಯ ಬೇರು, ನಮ್ಮ ನಿಸ್ಸಹಾಯಕ, ನಿಷ್ಪ್ರಯೋಜಕ ಶಿಕ್ಷಣ ವ್ಯವಸ್ಥೆಯಲ್ಲಿದೆ. ಚೆನ್ನಾಗಿ ಬೇರೂರಿವೆ.

ಬಿತ್ತಿದನ್ನೇ ಬೆಳೆಯಬೇಕಲ್ವೇ?. ನಾನು ಶಿಕ್ಷಣ ಸಂಸ್ಥೆಗಳ ಪಠ್ಯಕ್ರಮ ಮತ್ತು, ಕಲಿಸಿಕೊಡುವ ವಿಷಯಗಳಾದರೂ ಏನು? ನಾವು ಕೊಡುತ್ತಿರುವ ಶಿಕ್ಷಣ ಯಾವ ಮಟ್ಟದಲ್ಲಿ ಇದ ಎನ್ನುವುದು ತುಂಬಾ ಎಚ್ಚರಿಕೆಯಿಂದ ಗಮಿಸಬೇಕಾದ ಸಂಗತಿ. ನಾನು ಈ ಮೊದಲೇ ಹೇಳಿದಂತೆ, ಶಿಕ್ಷಣ, ಕೇವಲ ಹೊಟ್ಟೆ ಹೊರೆಯುವ ಸಾಧನ ಅಂದರೆ ತೀರಾ ವಯಕ್ತಿಕ ಮಟ್ಟದ ಲಕ್ಷ್ಯ ಸಾಧನೆಯಾಗಿ ಮಾತ್ರ ಉಳಿದಲ್ಲಿ, ನಾವು ನಿಜವಾದ ಅರ್ಥದಲ್ಲಿ ಅಭಿವೃದ್ಧಿ ಹಾಗೂ ಪ್ರಗತಿಶೀಲರಾಗಲು ಹೇಗೆ ಸಾಧ್ಯ? ಸಕ್ರಿಯರಾಗಿ, ರಾಷ್ಟ್ರನಿರ್ಮಾಣ ಆಗೋದಾದದರೂ ಹೇಗೆ? ನೋಡಿ, ನಮ್ಮಲ್ಲಿ ಎಷ್ಟು ಜನ ಉತ್ಸಾಹದಿಂದ ಪ್ರತಿದಿನ, ಕೆಲಸಕ್ಕೆ ಹೋಗುವೆ ಆತುರ ತೋರುತ್ತೇವೆ? ಸಂಬಳ ಬರುವ ದಿನ ಇರುವ ಉತ್ಸಾಹ ಬೇರೆ ದಿನಗಲ್ಲಿ ಇರುತ್ತದೆಯೇ? ಉದಾಹರಣೆಗೆ, ಕ್ರಿಕೆಟ್ ಪಂದ್ಯದಲ್ಲಿ, ಭಾರತ ಆಡುವಾಗ, ಇಡೀ ದೇಶ ತೋರುವ ಉತ್ಸಾಹ ನಮ್ಮಲ್ಲಿ ಪ್ರತಿದಿನ ಕೆಲಸಕ್ಕೆ ಹೋಗುವಾಗ ಇರುವುದೇ? ಇಲ್ಲ ಎಂದು ಎಲ್ಲರಿಗೂ ಗೊತ್ತಿರುವ ಸಂಗತಿ. ಅದೇಕೆ ಹಾಗೆ? ಯೋಚಿಸಿ ನೋಡಿ. ಪ್ರಾಮಾಣಿಕವಾಗಿ, ನಿಮಗೆ ನೀವೇ ಉತ್ತರಿಸಿಕೊಳ್ಳಿ.

ವಿಷ

ನಾನು ಸಮೂಲಾಗ್ರ ಎಂದಿದ್ದು, ಪ್ರಸ್ತುತ, ಭಾರತದಲ್ಲಿ ಚಾಲನೆಯಲ್ಲಿರುವ ಇರುವ ಎಲ್ಲ ವ್ಯವಸ್ಥೆಗಳ ಸಮೀಕ್ಷೆ ಹಾಗೂ ಬದಲಾವಣೆಯ ಬಗ್ಗೆ. ಇರುವ ವ್ಯವಸ್ಥೆಗಳ ಸ್ಥಾನಗಳಲ್ಲಿ ವಿನೂತನ, ದೂರದೃಷ್ಟಿ ಹೊಂದಿದ, ಉತ್ತೇಜಕ, ಇಡೀ ರಾಷ್ಟ್ರದ ಹಿತದೃಷ್ಟಿಯುಳ್ಳ ವ್ಯವಸ್ಥೆಯ ನಿರ್ಮಾಣಕ್ಕೆ ಅಡಿಪಾಯ ಹಾಕಬೇಕಿದೆ. ಪ್ರಮುಖವಾಗಿ ಶಿಕ್ಷಣ ವ್ಯವಸ್ಥೆ, ಪೂರಕ ನ್ಯಾಯ ವ್ಯವಸ್ಥೆ, ಕಾನೂನು, ಆರ್ಥಿಕ, ಆರೋಗ್ಯ, ಆಡಳಿತ, ಸಾರಿಗೆ, ಸಂಪರ್ಕ, ಅರಣ್ಯ, ಕೃಷಿ, ಜವಳಿ, ವಸತಿ, ನೀರು, ವಿದ್ಯುತ್, ರಾಷ್ಟ್ರದ ಬಾಹ್ಯ ಹಾಗೂ ಆಂತರಿಕ ರಕ್ಷಣಾ, ವಿದೇಶ ನೀತಿಯ ವ್ಯವಸ್ಥೆಗಳು, ಸುಸಂಯೋಜಿತ ರೂಪದಲ್ಲಿ, ಪರಸ್ಪರ ಪೂರಕವಾಗಿ ಇರುವಂತೆ ಬದಲಿಸಬೇಕು. ಇದಕ್ಕೆ ತಕ್ಕಂತೆ ಬೇಕಾದ ಬದಲಾವಣೆಗಳನ್ನು ಸಂವಿಧಾನದಲ್ಲಿ ಕೂಡ ಮಾಡಬೇಕು. ಈ ಸಮಗ್ರ ಬದಲಾವಣೆ ಆಗಲೇಬೇಕಿದೆ. ಮತ್ತೊಮ್ಮೆ ಹೇಳುತ್ತೇನೆ. ತೇಪೆ ಹಚ್ಚುವ ಕೆಲಸ ಬೇಡ. ಸಮೂಲಾಗ್ರ ಬದಲಾವಣೆ ಬೇಕೇ ಬೇಕು. ಇದರಲ್ಲಿ ನಾವು ಬೇರೆ ದೇಶಗಳನ್ನು ಅನುಸರಿಸುವ ಯಾವ ಕೃತ್ರಿಮ ಹಾಗೂ ಅಸಹಜ ಅಗತ್ಯ ಇಲ್ಲ. ನಾವು ಸಶಕ್ತ ಹಾಗೂ ಸಕ್ಷಮರಿದ್ದೇವೆ.

ಮುಂಬರುವ ಲೇಖನಗಳಲ್ಲಿ ನಾನು ಹೇಳಲಿರುವ ಉಪಾಯಗಳು ಪರಿಣಾಮಕಾರಿ ಎಂದು ಅನ್ನಿಸಬೇಕಾದರೆ ಈ ಸಮಗ್ರ ಬದಲಾವಣೆ ಅತ್ಯವಶ್ಯ. ಪ್ರಸ್ತುತ ಕಾಲಮಾನ ಪರಿಸ್ಥಿತಿಗಳು ಇದನ್ನೇ ಬೇಡುತ್ತಿದೆ.

ನಿಮಗೇನನ್ನಿಸುತ್ತದೆ?

ನಿಮ್ಮ ಅನಿಸಿಕೆಗಳನ್ನು, ವಿಚಾರಗಳನ್ನು ನನ್ನೊಡನೆ ಹಂಚಿಕೊಳ್ಳಲು ನನ್ನ ಈ email ನ್ನು ಬಳಸಿ – AnswerGuy001@gmail.com

 

Girl in a jacket
error: Content is protected !!