ಜಿ.ಎನ್ ,ಶಿವಮೂರ್ತಿ ಐಎಎಸ್(ಬೆಂಗಳೂರು ಜಿಲ್ಲಾಧಿಕಾರಿಯಾಗಿದ್ದ )
ಅವರು ಅಮ್ಮನ ಕುರಿತು ಬರೆದ ಲೇಖನ ..
ಪ್ರತಿ ಭಾನುವಾರ ಬೆಳಗಿನ ಹೊತ್ತಿಗೆ ಫೋನ್ ರಿಂಗಾಯಿತೆಂದರೆ ಅದು ಅಮ್ಮನ ಕರೆ ಎಂದೆ ಸಂಭ್ರಮದಿಂದ ಕರೆಯನ್ನು ಸ್ವೀಕರಿಸಿ ಆ ಧ್ವನಿಯ ಆಲಿಕೆಯಲ್ಲಿ ಅನಂದ ಪಡೆದುತ್ತಿದ್ದೆವು ,ಆದರೆ ಕಳೆದ ಮೂರು ವಾರಗಳಿಂದ ಆ ಧ್ವನಿಯ ಸದ್ದು ಮಮತೆಯ ಮಾತುಗಳು, ಬದುಕಿನ ನಡೆಯ ಆದರ್ಶದ ನುಡಿಗಳು ಇಲ್ಲದೆ ನಿನ್ನಂತೆಯೇ ಮನೆಯ ಪೋನ್ ಶಾಶ್ವತವಾಗಿ ಮೌನತಾಳಿದೆ.
ಇಂದು ‘ಅಮ್ಮನ ದಿನ ‘ನೀನಲ್ಲದ ಈ ದಿನವನ್ನು ಯಾವ ಸಂತೋಷಕ್ಕಾಗಿ ಆಚರಿಸಬೇಕೆಂಬುದು ತಿಳಿಯುತ್ತಿಲ್ಲ ,ಆದರೂ ನೀನು ನನ್ನ ಹೃದಯದಲ್ಲಿ ಇದ್ದೀಯಾ ಎನ್ನುವ ಅನುಭವ ನಮ್ಮಲ್ಲಿ ಸದಾ ಇದೆ ನಿನ್ನ ವಾತ್ಸಲ್ಯ ಮಮತೆ ಪ್ರೀತಿ ನೀನಿಟ್ಟ ಅನ್ನ ಇಂದು ನನ್ನ ಮೈಯಲ್ಲಿ ರಕ್ತವಾಗಿಬಿಟ್ಟಿದೆ .ನೀನು ಭೌತಿಕವಾಗಿ ಅಗಲಿರಬಹುದು ಆದರೆ ನಮ್ಮೊಡಲಲ್ಲಿ ನಿನ್ನ ಆ ಭಾವ ಆ ಮಮಕಾರದ ಧ್ವನಿ ಸದಾ ಜೀವಂತವಾಗಿದೆ ಎನ್ನುವುದೇ ನಮ್ಮ ಸೌಭಾಗ್ಯ.
ಪ್ರತಿ ದಿನ ಸೂರ್ಯೋದಯದ ರೀತಿಯಲ್ಲಿಯೇ ಮನದಲ್ಲಿ ಬೆಳ್ಳಿಕಿರಣಗಳಾಗಿ ಪ್ರಜ್ವಲಿಸಿ ದಿನದ ಕಾರ್ಯಗಳಿಗೆ ಪ್ರಖರತೆ ತುಂಬುತಿದ್ದ ನಿನ್ನ ಆ ಮಾತುಗಳ ನೆನಪುಗಳ ಹಾದಿಯಲ್ಲೆ ಸಾಗುತ್ತಾ ಕಾಯಕದಲ್ಲಿ ಸತ್ಪರತೆ ಕಾಣುತ್ತಿದ್ದೇನೆ. ಅಮ್ಮ ನೀನು ನನಗಷ್ಟೆ ಅಮ್ಮನಾಗಿರಲಿಲ್ಲ ನನ್ನ ಒಡನಾಟದ ಎಲ್ಲರಿಗೂ ಅಮ್ಮನಾಗಿದ್ದೆ ಬಂದವರೆಲ್ಲರನ್ನು ಅಕ್ಕರೆಯಿಂದ ಮಾತನಾಡಿಸಿ, ಉಣಿಸಿ ಅನ್ನಪೂರ್ಣವಿಧ್ಯೆಗಿದ್ದೆ..ಬಂದ ಹಲವರಿಗೆ ಅಕ್ಷರ ಕಲಿಸಿ ಸರಸ್ವತಿಯಾದೆ, ತಾಳ್ಮೆಯಿಂದ ಶಾಂತಾದೇವಿಯಾದೆ,..ಎಲ್ಲರಿಗೂ ಶಕ್ತಿ ತುಂಬಿ ಶಕ್ತಿದೇವತೆಯಾದೆ.ಲಕ್ಷ್ಮಿಯರನ್ನು ಮೈಗೂಡಿಸಿಕೊಂಡು ಅಷ್ಟಲಕ್ಷ್ಮಿಯಾಗಿ ಮಹಾತಾಯಿಯಾದೆ , ಹಾಗಾಗಿಯೇ ನೀನು ನನ್ನಮ್ಮ ಎಂದು ಹೇಳಲು ಹೆಮ್ಮೆಯಾಗುತ್ತಿದೆ ಅದಕ್ಕಗಿಯೇ ನೀನು ಎಲ್ಲರ ‘ಅಮ್ಮ ಗೌರಮ್ಮನಾದೆ.
ಮನೆಗೆ ಹಸಿದು ಬಂದ ಅದೆಷ್ಟೋ ಜನರ ಪಾಲಿಗೆ ಅನ್ನವಿಟ್ಟೆ, ಕಷ್ಟದಲ್ಲಿ ಬಂದು ಕೈ ಚಾಚಿದವರಿಗೆ ಬರಿಗೈಲೆ ಕಳಿಸಲಿಲ್ಲ, ಬೇಡಿ ಬಂದವರಿಗೆ ವಿದ್ಯೆಯ ಅರಿವು ಮೂಡಿಸಿದ ನೀನು ಎಲ್ಲರ ವಾತ್ಸಾಲ್ಯಮಯಿ ..ಅಂತ ವಿಶಿಷ್ಟಗಳ ಮೈಗೂಡಿಸಿಕೊಂಡ ನೀನು ನನ್ನ ಎಲ್ಲಾ ಆಗು-ಹೋಗುಗಳ ನಡೆಗೆ ಕನ್ನಡಿಯಾದೆ ನೀನಿಲ್ಲ ಎನ್ನುವ ನೋವು ಒಂದು ಕಡೆಯಾದರೆ.. ಎಲ್ಲರ ಹೊಗಳಿಕೆಯ ಅಮ್ಮ ನಾಗಿರುವ ನೀನು ನನ್ನ ಮೈಯಲ್ಲಾ ನೀನೇ ಆವರಿಸಿಕೊಂಡು ಕಣ ಕಣದಲ್ಲೂ ನಿನ್ನ ನೆನಪು ಅಚ್ಚಳೆಯದೆ ಉಳಿದಿದೆ..
‘ಅಮ್ಮ ಒಡಲ ಸಂಕಟಗಳನ್ನೆಲ್ಲ ನಿನ್ನ ಮಡಿಲೊಳಗೆ ಹಾಕಿ ನಿರಾಳವಾಗುತ್ತಿದ್ದೆ,ನನ್ನ ಸಂತಸ-ಸಂಭ್ರಮಗಳನ್ನೂ ನಿನ್ನ ಬುಜಕ್ಕೆ ತೆಲೆಯೊಡ್ಡಿ ಅಪ್ಪಿಕೊಂಡು ವಿಜೃಂಭಿಸುತ್ತಿದ್ದೆ.ನಮ್ಮೆಲ್ಲ ಗೆಲುವುಗಳು ಮತ್ತು ಶ್ರೇಯಿಸ್ಸುಗಳ ನಿನ್ನ ತಲೆಗೆ ಕಿರಿಟವಾಗಿಸಿದ್ದೆ.
ಮನೆತುಂಬಾ ಮಕ್ಕಳ-ಮೊಮ್ಮಕಳೊಂದಿಗಿನ ನಿನ್ನ ಭಾವ- ಸಂಬಂಧ ಇನ್ನೆಂದೂ ಯಾರಿಗೂ ದೊರಕದಂತಾದ ಕೊರಗನ್ನು ಯಾರಲ್ಲಿ ಹಂಚಿಕೊಳ್ಳಲಿ? ಮನೆಯ ಮಕ್ಕಳಿಗೆ ಮದುವೆ ಸಂಭ್ರಮ ಆಚರಿಸಿದೆಯೋ ಅದೆಷ್ಟೊಂದು ಮೊಮ್ಮಕ್ಕಳ ತೊಟ್ಟಿಲಿಡುವ ಕಾರ್ಯಗಳ ಸಂಭ್ರಮಗಳಿಗೆ ಸಾಕ್ಷಿಯಾಗಿದ್ದೆ.ಕನ್ನಡದ ಎಲ್ಲಾ ವರ್ಣ ಮಾಲೆಗಳು ಮುಗಿಯುವಷ್ಟು ಮೊಮ್ಮಕಳಿಗೆ ಹೆಸರಿಟ್ಟು ಮನೆತುಂಬ ಕಂಡ ಭಾಗ್ಯಜೀವಿ ನೀನು ಪ್ರತಿಯೊಬ್ಬ ಮಗನ ಶ್ರೇಯಿಸ್ಸಿನಲ್ಲೂ ನಿನ್ನ ದಣಿವಿನ ಉಸಿರು ಇದ್ಯಾಗ್ಯೂ ಅವರ ಶ್ರೇಯಸ್ಸನ್ನು ನೋಡಿ ಖಷಿಪಟ್ಟೆ..
ಗಂಡನ ಮನೆ ಸೇರಿರುವ ಎಲ್ಲಾ ಹೆಣ್ಣುಮಕ್ಕಳಿಗೂ ದಿನ ನಿತ್ಯವೂ ಹುಡಿಹಕ್ಕಿಯಾಕಿದ ನೀನು.. ಎಲ್ಲಾ ನಿನ್ನ ಹೆಣ್ಣುಮಕ್ಕಳ ಕೈಯಿಂದಲೇ ಹುಡಿಯಕ್ಕಿಯಾಕಿಸಿಕೊಂಡು ಹಾಗೆಯೆ ನಮ್ಮೆಲ್ಲರ ನಡುವೆ ಕುಂತಿದ್ದ ನೀನು ಹಾಗೆಯೇ ಎದ್ದು ಹೋಗಿ ಸೌಭಾಗ್ಯವತಿಯಾದೆ, ಆದರೆ ನಾವು ನಿನ್ನ ಕಳೆದುಕೊಂಡು ನಿರ್ಜೀವಿಗಳಂತಾಗಿದ್ದೇವೆ..!
ಅಮ್ಮನಾಗಿ,ಆ ಹೆಸರಿಗೆ ಅನ್ವರ್ಥವಾಗಿ ಪರಿಪೂರ್ಣ ಬದುಕೊಂದನ್ನು ನೀನು ಬದುಕಿದ್ದೀಯಾ ಎಂಬ ಹೆಮ್ಮೆ ನಮಗಿದೆಯಾದರೂ, ನೀನಿಲ್ಲದ ಕೊರಗು ಸದಾ ನಮಗೆ ಊಟದ ಸಮಯದಲ್ಲಿ ಕಾಡುತ್ತಿದೆ..ಮನೆಯಲ್ಲಿ ನೀಡುವವರಿದ್ದರೂ ಖಾಲಿ ತಟ್ಟೆಯ ಮುಂದೆ ಕೂತಂತಾಗುತ್ತದೆ. ಮಕ್ಕಳಿಗೆಲ್ಲ ಕೈ ಹಿಡಿದು ತುತ್ತಾಕಿ ಗಿಂಡಿ ತುಂಬಾ ತುಪ್ಪಸುರಿದು ನೀನಿಟ್ಟ ಕೈ ತುತ್ತು ಮೈತುಂಬಾ ಕಸುವಾಗಿದೆ. ಜೀವನದುದ್ದಕ್ಕೂ ಮಕ್ಕಳ ಮನೆತನದ ಬಂದು-ಬಳಗದ ಹೊಟ್ಟೆ -ಬಟ್ಟೆ, ಗೌರವ ಅವರ ವ್ಯಸನಗಳಿಗೆ ಯಾವತ್ತೂ ಆಶ್ರಯವಾಗಿದ್ದ ನೀನು ಇಡೀ ಸಮುದಾಯದ ನಂದಾದೀಪವಾಗಿದ್ದೆ.
ಹೊಲದಲ್ಲಿ ಬೆಳೆದ ಫಲಸಲುಗಳನ್ನು ಚೀಲಗಟ್ಟಲೆ ಕಟ್ಟಿ ಮಕ್ಕಳೆಲ್ಲರ ಮನೆಗೆ ಮನೆಯಲ್ಲಿಟ್ಟಿದ ಪ್ರತಿಮನೆಗೂ ಚೀಲದ ಮೇಲೆ ಹೆಸರು ಬರೆದು ಅವರ ಮನೆ ಮುಟ್ಟುವವರೆಗೂ ಕಾಳಜಿ ವಹಿಸುತ್ತಿದ್ದೆ, ಅಷ್ಟೆಅಲ್ಲ ಪ್ರತಿದಿನ ಸರತಿಯಂತೆ ಎಲ್ಲಾ ಮಕ್ಕಳ ಮನೆಗೂ ಫೋನಾಯಿಸಿ ಆರೋಗ್ಯ ಊಟ- ಯೋಗಕ್ಷೇಮ ವಿಚಾರಿಸಿ ಆಶೀರ್ವಾದ ಮಾಡಿದ ನಿನ್ನ ಧ್ವನಿ ಇಲ್ಲವಾಗಿ ಎಲ್ಲಾಮನೆಯ ಫೋನುಗಳು ನಿಶ್ಯಬ್ದವಾಗಿವೆ.
ನೀನಿಲ್ಲದಿದ್ದರೂ ಮನೆ ಒಳಗ -ಹೊರೆಗೂ ನೀದ್ದಿಯಾ ಎಂದು ಬಾಸವಾಗುತ್ತದೆ… ನಿನ್ನ ಕರುಳಿನ ಕರೆ ಆ ಮಮತೆಯ ಒಲವು ನಮ್ಮನ್ನು ಸದಾ ಕೈ ಹಿಡಿದು ನಡೆಸಿದರೂ ನಿನ್ನ ಭೌತಿಕ ಅನುಪಸ್ಥಿತಿ ಕಾಡತೊಡಗಿದೆ.
ಅಪ್ಪ ಮತ್ತು ನಿಮ್ಮ ನಡುವಿನ ಬಹಳಷ್ಟು ಮಾತುಗಳು ಮೌನವಾಗಿಯೇ ಇರುತ್ತಿದ್ದವು .ಅ ಮೌನದಲ್ಲಿ ಕಾಳಜಿ ವಾತ್ಸಲ್ಯ ಪ್ರೀತಿಗಳ ಜೀವಸೆಲೆ ಕಾಣುತ್ತಿತ್ತು. ಇಬ್ಬರ ಮಾತುಗಳು ಹೆಚ್ಚು ಶಬ್ದಮಾಡುತ್ತಿಲ್ಲವಾಗಿದ್ದರೂ ಆ ಒಲವಿನ ಮಮಕಾರದ ಮಾತುಗಳ ಧ್ವನಿ ಇಡೀ ಕುಟುಂಬದ ಆಧಾರವಾಗಿರುತ್ತಿದ್ದವು.. ಅದರ್ಶಗಳ ಮಾಲೆಗಳಾಗಿ ಮೊಳಗುತ್ತಿದ್ದವು .. ಮನೆ ತುಂಬಾ ಮಕ್ಕಳಿದ್ದರೂ ಯಾಕೋ ಅಪ್ಪ ಈಗ ಒಂಟಿ ಎನಿಸುತ್ತದೆ.
ಮನೆಯ ಹಿರಿಮೆಗಾಗಿ ಅವಿಭಕ್ತಕುಟುಂಬದ ಆದರ್ಶಕ್ಕಾಗಿ ವಾತ್ಸಲ್ಯ-ಮಮತೆಗಳ ದ್ಯೂತಕವಾಗಿ ಹೆಣ್ಣಿನ ಸಂಸಾರದ ಸಂಸ್ಕೃತಿಯ ಪರಂಪರೆಯ ಪ್ರತೀಕವಾಗಿ ,ಮನೆಯ ಶಾಂತಿ,ನೆಮ್ಮದಿಯ ಪ್ರತಿರೂಪವಾಗಿ ಅನ್ನದಾನ ವಿಧ್ಯಾದಾನಗಳ ಶ್ರೇಷ್ಟತೆಯ ಹರಿಕಾರವಾಗಿ ಈ ಭೂಮಿಯ ಮೇಲೆ ಮತ್ತೊಮ್ಮೆ ಹುಟ್ಟಿಬಾ ಅಮ್ಮ.
ನಿನ್ನ ಒಲುಮೆಯ ಮಗ
ಜಿ.ಎನ್.ಶಿವಮೂರ್ತಿ