ದೆಹಲಿ,ಮೇ,29: ಕೊರೊನಾ ಸೋಂಕಿನಿಂದ ಪೋಷಕರನ್ನು ಕಳೆದುಕೊಂಡು ಅನಾಥ ಮಕ್ಕಳಿಗೆ ಕೇಂದ್ರ ಸರ್ಕಾರ ಪರಿಹಾರ ಘೋಷಿಸಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ಪ್ರಧಾನ ಮಂತ್ರಿ ಕೇರ್ಸ್ ಅಡಿ ಈ ಯೋಜನೆ ಘೋಶಿಸಿದ್ದು, ಅನಾಥ ಮಕ್ಕಳಿಗೆ 18 ವರ್ಷ ತುಂಬಿದಾಗ ಪ್ರತಿ ತಿಂಗಳು ಅಂದರೆ 5 ವರ್ಷಗಳ ಕಾಲ ಸ್ಟೈಫಂಡ್ ನೀಡಲಾಗುವುದು.
23 ವರ್ಷ ತುಂಬಿದ ಮೇಲೆ ಪಿಎಂ ಕೇರ್ಸ್ ನಿಂದ 10 ಲಕ್ಷ ರೂಪಾಯಿ ನಗದು ಹಣ ನೀಡಲಾಗುವುದು ಎಂದು ಹೇಳಿದ್ದಾರೆ. ಕೋವಿಡ್ ನಿಂದ ಪೋಷಕರನ್ನು ಕಳೆದುಕೊಂಡ ಮಕ್ಕಳು ಉನ್ನತ ಶಿಕ್ಷಣ ಪಡೆಯಲು ಸಾಲದ ವ್ಯವಸ್ಥೆ ಮಾಡಲಾಗುವುದು, ಆದರೆ ಬಡ್ಡಿಯನ್ನು ಕೇಂದ್ರ ಸರ್ಕಾರ ಪಾವತಿ ಮಾಡಲಿದೆ.
10 ವರ್ಷದವರೆಗೆ ಮಕ್ಕಳಿಗೆ ಉಚಿತ ಶಿಕ್ಷಣ ಅನಾಥ ಮಕ್ಕಳಿಗೆ ಹತ್ತಿರದ ಕೇಂದ್ರೀಯ ವಿದ್ಯಾಲಯ ಅಥವಾ ಖಾಸಗಿ ಶಾಲೆಯಲ್ಲಿ ಪ್ರವೇಶಾತಿ ನೀಡುವುದು. ಖಾಸಗಿ ಶಾಲೆಗೆ ದಾಖಲಾದರೆ ಶಾಲಾ ಫಿಜ್ಅನ್ನು ಆರ್ಟಿಐ ನಿಯಮದಂತೆ ನೀಡುವುದು.
ಶಾಲಾ ಸಮವಸ್ತ್ರ, ಪಠ್ಯ ಪುಸ್ತಕ ಹಾಗೂ ನೋಟ್ ಬುಕ್ಗಳಿಗೆ ಪಿಎಂ ಕೇರ್ನಿಂದ ಹಣ ನೀಡಲಾಗುವುದು. 11ರಿಂದ 18 ವರ್ಷದವರೆಗೆ ಶಿಕ್ಷಣ ಯಾವುದೇ ಕೇಂದ್ರ ಸರ್ಕಾರಿ ವಸತಿ ಶಾಲೆ, ಸೈನಿಕ ಶಾಲೆ ಹಾಗೂ ನವೋದಯ ಶಾಲೆಗಳಲ್ಲಿ ಮಕ್ಕಳಿಗೆ ಪ್ರವೇಶಾತಿ ನೀಡಲಾಗುತ್ತದೆ ಎಂದು ಪ್ರಧಾನ ಮಂತ್ರಿ ಕಚೇರಿ ಅಧೀಕೃತ ಆದೇಶದಲ್ಲಿ ತಿಳಿಸಿದೆ.
ಇತ್ತೀಚೆಗೆ ಕೇಂದ್ರ ಸಚಿವೆ ಸ್ಮೃತಿ ಇರಾನಿ ಕೋವಿಡ್ ನಿಂದ ತಂದೆ-ತಾಯಿ ಇಬ್ಬರನ್ನೂ ಕಳೆದುಕೊಂಡು 577ಮಕ್ಕಳು ಅನಾಥರಾಗಿದ್ದಾರೆ ಎಂದು ಮಾಹಿತಿ ನೀಡಿದ್ದರು.