ಕಳೆದ ೨೫ ವರ್ಷಗಳ ಹಿಂದೆ ದೇವೇಗೌಡರು ಪ್ರಧಾನಿ ಆದ ಸಂದರ್ಭದಲ್ಲಿ ರಾಮಕೃಷ್ಣ ಹೆಗಡೆ ಅವರನ್ನು ಉಚ್ಚಾಟಿಸಿ ೨೫ ವರ್ಷಗಳು ಸಂದಿವೆ.ಅವರ ಉಚ್ಚಾಟನೆ ಪರಿಣಾಮವಾಗಿ ಹೆಗಡೆ ಎನ್ಡಿಎ ಸೇರಿಕೊಳ್ಳುವ ಮೂಲಕ ರಾಜ್ಯದಲ್ಲಿ ಬಿಜೆಪಿ ಅಸ್ತತ್ವಕ್ಕೆ ಬರಲು ಹೇಗೆ ಕಾರಣರಾದರು ಎನ್ನುವುದನ್ನು ಹಿರಿಯ ಪತ್ರಕರ್ತ ಸಿ.ರುದ್ರಪ್ಪ ಅವರು ಇಲ್ಲಿ ಆಗಿನ ರಾಜಕಾರಣದ ಬೆಳವಣಿಗೆ ಕುರಿತು ಚಿತ್ರಿಸಿದ್ದಾರೆ.
ಹೆಗಡೆ ಉಚ್ಚಾಟನೆ ಬಿಜೆಪಿ ಗೆ ಅಧಿಕಾರ ತಂದು ಕೊಟ್ಟಿತೇ?
ಹಿರಿಯ ರಾಜಕಾರಣಿ ರಾಮಕೃಷ್ಣ ಹೆಗಡೆ ಅವರನ್ನು ಅವರೇ ಕಟ್ಟಿದ ಪಕ್ಷ ಜನತಾ ದಳದಿಂದ ೨೫ ವರ್ಷಗಳ ಹಿಂದೆ ಇದೇ ಸಂದರ್ಭದಲ್ಲಿ ಉಚ್ಚಾಟಿಸಿದಾಗ ರಾಷ್ಟ್ರ ಮಟ್ಟದಲ್ಲಿ ಸಂಚಲನ ಸೃಷ್ಟಿಯಾಗಿತ್ತು.ಕರ್ನಾಟಕದ ಮುಖ್ಯಮಂತ್ರಿ ಎಚ್ ಡಿ ದೇವೇಗೌಡರನ್ನು ೧೯೯೬ ರ ಜೂನ್ ಒಂದರಂದು ಪ್ರಧಾನಿ ಪಟ್ಟದಲ್ಲಿ ಕೂರಿಸುವಂತಹ ರಾಜಕೀಯ ಕ್ಷಿಪ್ರ ಬೆಳವಣಿಗೆಗಳು ದೆಹಲಿಯಲ್ಲಿ ನಡೆಯಬಹುದೆಂದು ಯಾರೂ ನಿರೀಕ್ಷೆ ಮಾಡಿರಲಿಲ್ಲ.ಸಂಯುಕ್ತ ರಂಗದ ಪ್ರಧಾನಿ ಅಭ್ಯರ್ಥಿಯಾಗಿ ದೇವೇಗೌಡರು ಆಯ್ಕೆಯಾಗಿರುವ ಸುದ್ದಿ ಬೆಂಗಳೂರಿಗೆ ತಲುಪಿದಾಗ ಮೊದಲು ಆಘಾತವಾಗಿದ್ದು ಅವರ ಸಹೋದ್ಯೋಗಿ ಮತ್ತು ಪಕ್ಷದೊಳಗೆ ಬಹುಕಾಲದ ವೈರಿ ಹೆಗಡೆಯವರಿಗೆ.೧೯೮೦ ರ ದಶಕದಲ್ಲಿ “ಭಾವೀ ಪ್ರಧಾನಿ”ಎಂದೇ ರಾಷ್ಟ್ರೀಯ ಮಾಧ್ಯಮಗಳು ಬಿಂಬಿಸುತಿದ್ದ ಹೆಗಡೆಯವರಿಗೆ ಈ ಸುದ್ದಿಯನ್ನು ಜೀರ್ಣಿಸಿಕೊಳ್ಳಲು ಸಾಧ್ಯವಾಗಲಿಲ್ಲ.ತಕ್ಷಣ ಪತ್ರಿಕಾ ಗೋಷ್ಠಿಯನ್ನು ಕರೆದ ಹೆಗಡೆಯವರು ಗೌಡರ ಮೇಲೆ ಕುಹಕ ಮಾತುಗಳನ್ನು ಮತ್ತು ವ್ಯಂಗ್ಯೋಕ್ತಿಗಳನ್ನು ಹರಿ ಬಿಟ್ಟರು.”ಅವರಿಗೆ ದೆಹಲಿಯಲ್ಲಿ ಕೂತು ಕೆಲಸ ಮಾಡುವ ಸಾಮರ್ಥ್ಯವಿಲ್ಲ.ಅವರಿಗೆ ಸರಿಯಾಗಿ ಹಿಂದಿ ಬರುವುದಿಲ್ಲ”ಎಂದೆಲ್ಲಾ ಟೀಕಿಸಿದರು.ಕನ್ನಡಿಗರೊಬ್ಬರು ಪ್ರಧಾನಿಯಾದಾಗ ಹೆಗಡೆಯವರು ಹೀಗೆ ಅಪಸ್ವರ ಎತ್ತಿರುವುದನ್ನು ಗೌಡರು ಗಂಭೀರವಾಗಿ ಪರಿಗಣಿಸಿದರು .
ಕೋಪ ತಾಪದಿಂದ ಕುದಿಯುತ್ತಿದ್ದ ಅವರು ಲೋಕಸಭೆಯಲ್ಲಿ ವಿಶ್ವಾಸ ಮತ ಪಡೆಯುತ್ತಿದ್ದಂತೆ ಹೆಗಡೆಯವರನ್ನು ಜನತಾ ದಳದಿಂದ ಪಕ್ಷದ ಅಧ್ಯಕ್ಷ ಲಾಲೂ ಪ್ರಸಾದ್ ಯಾದವ್ ಉಚ್ಚಾಟಿಸುವಂತೆ ಮಾಡಿದರು.
ಗೌಡರು ಮತ್ತು ಹೆಗಡೆಯವರು,ತಾವಿಬ್ಬರೂ ಹೀಗೆ ಪಕ್ಷದೊಳಗೆ ದಾಯಾದಿಗಳಂತೆ ಕಾದಾಡಿದರೆ ಜನತಾ ದಳ ದುರ್ಬಲವಾದೀತು,ಇದರಿಂದ ಬಿಜೆಪಿ ಬಲ ವೃದ್ಧಿಗೆ ತಾವೇ ಬೀಜ ಬಿತ್ತಿದಂತೆ ಆದೀತು ಎಂಬ ವಿವೇಚನೆಯನ್ನು ಮತ್ತು ಮುಂದಾಲೋಚನೆಯನ್ನೇ ಕಳೆದುಕೊಂಡಿದ್ದರು.
ಈ ಅನುಮಾನ ಮುಂದಿನ ದಿನಗಳಲ್ಲಿ ನಿಜವಾಗತೊಡಗಿತು.ಹೆಗಡೆ ನವನಿರ್ಮಾಣ ವೇದಿಕೆ ಮತ್ತು ಲೋಕಶಕ್ತಿಯನ್ನು ಸ್ಥಾಪಿಸಿದರು.ಅನಿವಾರ್ಯವಾಗಿ ಎನ್ ಡಿ ಎ ಗೆ ಸೇರ್ಪಡೆಯಾದರು.೧೯೯೮ ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಮತ್ತು ಲೋಕಶಕ್ತಿ ರಾಜ್ಯದಲ್ಲಿ ೧೬ ಸೀಟುಗಳನ್ನು ಗೆದ್ದುಕೊಂಡವು.ಹೆಗಡೆಯವರು ೧೩ ತಿಂಗಳ ವಾಜಪೇಯಿ ಸರ್ಕಾರದಲ್ಲಿ ವಾಣಿಜ್ಯ ಖಾತೆ ಸಚಿವರಾದರು.ಈ ಬೆಳವಣಿಗೆಗೆ ಇನ್ನೊಂದು ಆಯಾಮವಿದೆ.ರಾಮ ಜನ್ಮ ಭೂಮಿ ಹೋರಾಟದಿಂದ ತೊಂಬತ್ತರ ದಶಕದ ಆರಂಭದಲ್ಲಿ ರಾಜ್ಯದಲ್ಲಿ ಬಿಜೆಪಿಯ ನಾಗಾಲೋಟ ಕಾಣಿಸಿದರೂ ಅದು ಒಂದು ಹಂತದಲ್ಲಿ ಹಾಗೆಯೇ ನಿಂತುಕೊಂಡಿತು.೧೯೯೪ ರ ವಿಧಾನ ಸಭೆ ಚುನಾವಣೆಯಲ್ಲಿ ೧೬.೯೯ ಮತಗಳೊಂದಿಗೆ ಕೇವಲ ೪೦ ಸೀಟುಗಳಿಗೆ ತೃಪ್ತಿ ಪಟ್ಟುಕೊಳ್ಳಬೇಕಾಯಿತು.ಇದಕ್ಕೆ ಪ್ರಮುಖ ಕಾರಣ -ಬಿಜೆಪಿ ಗೆ ಹಿದುತ್ವದ ಬಲ ಬಂದಿದ್ದರೂ ಜಾತಿಯ ಬಲ ದಕ್ಕಿರಲಿಲ್ಲ.
ಜಾತಿ ಸಮೀಕರಣದ ಮಹತ್ವ ಅರಿತಿದ್ದ ಹೆಗಡೆಯವರು,ಕಾಂಗ್ರೆಸ್ ಬಗ್ಗೆ ಮುನಿಸಿಕೊಂಡಿದ್ದ ಉತ್ತರ ಕರ್ನಾಟಕದ ಎಡಗೈ ದಲಿತರ ವಿಶ್ವಾಸವನ್ನು ಗಳಿಸಿದ್ದರು.ಗೋವಿಂದ ಕಾರಜೋಳ,ರಮೇಶ್ ಜಿಗಜಿಣಗಿ ಮುಂತಾದ ನಾಯಕರನ್ನು ಬೆಳೆಸಿದ್ದರು.ಇದರ ಜೊತೆಗೆ ಆ ಭಾಗದ ಲಿಂಗಾಯತರು ಹೆಗಡೆಯವರನ್ನು ತಮ್ಮ ನಾಯಕರೆಂದು ಪರಿಗಣಿಸಿದ್ದರು.ಈ ಸಮುದಾಯದವರ ಮತಗಳು ವರ್ಗಾವಣೆಯಾಗಿದ್ದರಿಂದ ಬಿಜೆಪಿ-ಲೋಕಶಕ್ತಿ ಮೈತ್ರಿಗೆ ೧೯೯೮ ರ ಲೋಕಸಭೆ ಚುನಾವಣೆಯಲ್ಲಿ ಸಹಜವಾಗಿ ಭಾರೀ ಬೆಂಬಲ ವ್ಯಕ್ತವಾಗಿತ್ತು.೧೯೯೯ ರ ವಿಧಾನಸಭೆ ಚುನಾವಣೆಯಲ್ಲಿ ಹೆಗಡೆ ಮತ್ತು ಜೆ ಎಚ್ ಪಟೇಲ್ ಸಂಯುಕ್ತ ಜನತಾ ದಳ (ಜೆಡಿಯು )ರಚಿಸಿಕೊಂಡು ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡರು.ಆದರೆ ಬಿಜೆಪಿ ತನ್ನ ವೋಟು ಪ್ರಮಾಣವನ್ನು ಸ್ವಲ್ಪ ಮಟ್ಟಿಗೆ (ಶೇ ೨೦.೬೯)ಹೆಚ್ಚಿಸಿಕೊಂಡರೂ ಕೇವಲ ೪೪ ಸೀಟುಗಳಿಗೆ ತೃಪ್ತಿಪಟ್ಟುಕೊಳ್ಳಬೇಕಾಯಿತು.ಜೆಡಿಯು ಗೆ ಬಂದ ಸೀಟುಗಳೂ ತೀರಾ ಕಡಿಮೆ.ಪಟೇಲ್ ಸರ್ಕಾರದ ಮೇಲಿನ ಆಡಳಿತ ವಿರೋಧಿ ಭಾವನೆಯೇ ಈ ಹಿನ್ನಡೆಗೆ ಕಾರಣ ಎಂದೂ ಕೆಲವರು ವಿಶ್ಲೇಷಿಸುತ್ತಾರೆ.ಇದೇ ವೇಳೆ ಇನ್ನೊಂದು ಕುತೂಹಲಕಾರಿ ಬೆಳವಣಿಗೆ ನಡೆಯಿತು.೧೯೯೯ ರಲ್ಲಿ ಬಳ್ಳಾರಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿದ್ದ ಸುಷ್ಮಾ ಸ್ವರಾಜ್ ಶ್ರೀರಾಮುಲು ಮತ್ತು ಜನಾರ್ಧನ ರೆಡ್ಡಿಯವರ ತಲೆ ಮೇಲೆ ಎರಡೂ ಕೈಗಳನ್ನು ಇಟ್ಟು ತನ್ನ ಮಕ್ಕಳೆಂಬಂತೆ ಆಶೀರ್ವದಿಸಿದ ಫೋಟೋ ಕೊಪ್ಪಳದಿಂದ ಚಿತ್ರದುರ್ಗ ವರೆಗಿನ “ಮದಕರಿ ಬೆಲ್ಟ್”ನಲ್ಲಿ ಕುತೂಹಲ ಮೂಡಿಸಿತ್ತು.ಹೆಗಡೆಯವರ ನಂತರ ಅನಾಯಕತ್ವ ಎದುರಿಸಿದ ಈ ಸಮುದಾಯಗಳನ್ನು ಬಿಜೆಪಿ ಗೆ ಸೆಳೆದುಕೊಳ್ಳುವಲ್ಲಿ ಅನಂತ್ ಕುಮಾರ್ ಯಶಸ್ವಿಯಾದರು.
ಗೋವಿಂದ ಕಾರಜೋಳ,ಜಿಗಜಿಗಣಗಿ ಮತ್ತು ಕೆ .ಬಿ .ಶಾಣಪ್ಪ ಮುಂತಾದ ನಾಯಕರು ಬಿ ಜೆ ಪಿ ಯಲ್ಲಿ ಅಗ್ರ ಸ್ಥಾನಗಳನ್ನು ಪಡೆದುಕೊಂಡರು.ಇದಾದ ನಂತರ ಎಸ್ ಬಂಗಾರಪ್ಪನವರ ಸೇರ್ಪಡೆಯಿಂದಾಗಿ ಬಿಜೆಪಿ ಮಲೆನಾಡು ಮತ್ತು ಕರಾವಳಿ ಭಾಗದಲ್ಲಿ ತನ್ನ ಸಾಮಾಜಿಕ ನೆಲೆಯನ್ನು ವಿಸ್ತರಿಸಿಕೊಂಡಿತು.೨೦೦೪ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಶೇ೨೮.೩೩ ರಷ್ಟು ಮತಗಳನ್ನು ಪಡೆದು ೭೯ ಸೀಟುಗಳನ್ನು ಪಡೆದುಕೊಂಡಿತು.ಇನ್ನೊಂದು ಪ್ರಮುಖ ಬೆಳವಣಿಗೆಯೂ ನಡೆಯಿತು.ಕ್ಷೇತ್ರ ಪುನರ್ವಿಂಗಡಣೆ ಸಮಿತಿ ತುಂಗಭದ್ರಾ ನದಿಯಾಚೆಯ ಲಿಂಗಾಯತ ಪ್ರಾಬಲ್ಯವಿದ್ದ ಸುಮಾರು ಮೂವತ್ತಕ್ಕೂ ಹೆಚ್ಚು ವಿಧಾನಸಭಾ ಕ್ಷೇತ್ರಗಳನ್ನು ಮೀಸಲು ಕ್ಷೇತ್ರ ಗಳನ್ನಾಗಿ ಪರಿವರ್ತಿಸಿತು.ಆಗ ಅಲ್ಲಿ ಮೀಸಲು ಕ್ಷೇತ್ರದ ಅಭ್ಯರ್ಥಿಗಳು ಲಿಂಗಾಯತರ ಮೇಲೆ ಅವಲಂಬಿಸಬೇಕಾಯಿತು.ಅದೇ ರೀತಿ ಲಿಂಗಾಯತರೂ ತಮ್ಮ ಗೆಲುವಿಗೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದವರನ್ನು ನೆಚ್ಚಿಕೊಳ್ಳಬೇಕಾಯಿತು.
ಆದ್ದರಿಂದ ವಾಲ್ಮೀಕಿ-ಎಡಗೈ ದಲಿತರು-ಲಿಂಗಾಯತರ ಒಂದು ಬಲವಾದ ಕಾಂಬಿನೇಷನ್ ನಿರ್ಮಾಣವಾಯಿತು.ಅದೇ ಸಂದರ್ಭದಲ್ಲಿ ವಚನ ಭ್ರಷ್ಟತೆಯಿಂದಾಗಿ ಬಿ ಎಸ್ ಯಡಿಯೂರಪ್ಪನವರಿಗೆ ಹುತಾತ್ಮನ ಪಟ್ಟವೂ ದೊರೆತಿತ್ತು.ಈ ಎಲ್ಲಾ ಅನುಕೂಲಕರ ಅಂಶಗಳು ಬಿಜೆಪಿಗೆ ಪೂರಕವಾಗಿದ್ದವು.ಆದ್ದರಿಂದ ಬಿಜೆಪಿ ೨೦೦೮ ರ ವಿಧಾನ ಸಭೆ ಚುನಾವಣೆಯಲ್ಲಿ ಗೆಲುವಿನ ದಡ ತಲುಪಿತು.ಹಿಮದ ಒಂದು ಸಣ್ಣ ಉಂಡೆ ಉರುಳುತ್ತಾ ಉರುಳುತ್ತಾ ಬೃಹತ್ ಬಂಡೆಯಾಗಿ ಬೆಳೆದು ಬಿಡುತ್ತದೆ.ಅದಕ್ಕೆ ಇಂಗ್ಲಿಷ್ ನಲ್ಲಿ sಟಿoತಿbಚಿಟಟ( ಸ್ನೋ ಬಾಲ್)ಎಫೆಕ್ಟ್ ಎನ್ನುತ್ತಾರೆ.ರಾಮಕೃಷ್ಣ ಹೆಗಡೆಯವರ ಉಚ್ಚಾಟನೆ ರೂಪದಲ್ಲಿ ಆರಂಭವಾದ ಈ ಸ್ನೋ ಬಾಲ್ ಎಫೆಕ್ಟ್ ಕರ್ನಾಟಕದ ರಾಜಕಾರಣವನ್ನು ಮೂರು ಪಕ್ಷಗಳ ವ್ಯವಸ್ಥೆಗೆ ತಂದು ನಿಲ್ಲಿಸಿದೆ.ಕೇವಲ ರಾಜಕಾರಣ ಅಥವಾ ಆಡಳಿತ ವ್ಯವಸ್ಥೆಗೆ ಸೀಮಿತವಾಗಿದ್ದರೆ ಈ ಬೆಳವಣಿಗೆ ಸ್ವಾಗತಾರ್ಹ.ಆದರೆ ಭ್ರಷ್ಟಾಚಾರದಲ್ಲೂ ರಾಜ್ಯದಲ್ಲಿ ಥ್ರೀ ಪಾರ್ಟಿ ಸಿಸ್ಟಮ್ ಬಂದಿರುವುದು ದುರದೃಷ್ಟಕರ.