ಗುಹಾಲಯಗಳ ಆಗರ ಚಿತ್ರದುರ್ಗ ಕೋಟೆ ಪರಿಸರ
ಚಿತ್ರದುರ್ಗವು ಪ್ರಸಿದ್ಧಿಯಾಗಿರುವುದು ಅಲ್ಲಿನ ಕೋಟೆಯಿಂದ. “ಚಿತ್ರದುರ್ಗದ ಕಲ್ಲಿನ ಕೋಟೆ ಸಿಡಿಲಿಗೂ ಬೆಚ್ಚದ ಉಕ್ಕಿನ ಕೋಟೆ ಎಂಬ ಸಿನಿಮಾ ಹಾಡಿನಿಂದ ಹೆಚ್ಚು ಜನಮನ ಗಳಿಸಿದ ರಕ್ಷಣಾ ವಾಸ್ತುಶಿಲ್ಪವಿದು. ಈ ಕೋಟೆಯನ್ನು ನಿರ್ಮಿಸಿರುವುದು ಚಿನ್ಮೂಲಾದ್ರಿ ಬೆಟ್ಟಶ್ರೇಣಿಯಲ್ಲಿ. ಈ ಶ್ರೇಣಿಗಳೋ ಕಣಶಿಲೆಯ ಬೃಹತ್ ಬಂಡೆಗಲ್ಲುಗಳನ್ನು ಒಳಗೊಂಡ ಶಿಲಾಸ್ತೋಮಗಳೇ ಆಗಿವೆ. ಇಲ್ಲಿನ ಬಂಡೆಗಲ್ಲುಗಳಲ್ಲಿರುವ ಅನೇಕ ಸ್ವಾಭಾವಿಕ ಗುಹೆ-ಗಹ್ವರಗಳು ಪಾಗಿತಿಹಾಸ ಕಾಲದಿಂದಲೂ ಮಾನವನ ವಸತಿ ತಾಣಗಳಾಗಿ ಬಳಕೆಯಾಗಿವೆ. ಇಲ್ಲಿನ ಗುಹೆಗಳು ಹತ್ತಾರು ಜನ ವಾಸಮಾಡಬಹುದಾದಷ್ಟು ವಿಸ್ತಾರವಾದ ಆಶ್ರಯತಾಣಗಳು. ಕಾಲಾನುಕ್ರಮವಾಗಿ ಆಶ್ರಯತಾಣಗಳಾಗಿದ್ದ ಈ ಗುಹೆಗಳು ೧೨-೧೩ನೆಯ ಶತಮಾನದ ಹೊತ್ತಿಗೆ ದೇವ-ದೇವತೆಗಳ ಆಲಯಗಳಾಗಿ ಪರಿವರ್ತನೆಗೊಂಡು ಗುಹಾಲಯಗಳಾದದ್ದು ಇತಿಹಾಸ. ಇಂತಹ ಅನೇಕ ಗುಹಾಲಯಗಳು ಬೆಟ್ಟದಲ್ಲಿರುವುದು ಗಮನಾರ್ಹ ಸಂಗತಿ. ಅವುಗಳಲ್ಲಿ ಬನಶಂಕರಿ, ಏಕನಾಥೇಶ್ವರಿ, ಸಂಪಿಗೆ ಸಿದ್ದೇಶ್ವರ, ಹಿಡಿಂಬೇಶ್ವರ, ಫಲ್ಗುಣೇಶ್ವರ, ಕಾಶಿವಿಶ್ವನಾಥ, ನೆಲ್ಲಿಕಾಯಿ ಸಿದ್ದಪ್ಪ, ಬಾಳೆಕಾಯಿ ಸಿದ್ಧಪ್ಪ, ಪಂಚಲಿಂಗೇಶ್ವರ, ಭೀಮೇಶ್ವರ ಗುಹಾ ದೇವಾಲಯಗಳು ಪ್ರಮುಖವಾಗಿವೆ. ಈ ಎಲ್ಲ ಗುಹಾ ದೇವಾಲಯಗಳ ವಿಶೇಷತೆಯೆಂದರೆ ಬೃಹತ್ ಬಂಡೆಗಲ್ಲುಗಳ ಕೆಳಗಿನ ವಿಸ್ತಾರವಾದ ಸ್ವಾಭಾವಿಕ ಗುಹೆಯನ್ನು ಬಳಸಿ ಗುಹಾಲಯವಾಗಿ ಮಾಡಿರುವುದು. ಗುಹೆಯನ್ನೇ ಗರ್ಭಗೃಹವನ್ನಾಗಿಸಿ, ಅದಕ್ಕೆ ಹೊಂದಿದಂತೆ ಅಂತರಾಳ, ನವರಂಗ, ಮುಖಮಂಟಪಗಳನ್ನು ಕಾಲಾನುಕ್ರಮವಾಗಿ ಅಂದಂದಿನ ಆಳರಸರು ನಿರ್ಮಿಸಿ ವಿಸ್ತರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಇವೆಲ್ಲವುಗಳನ್ನು ಗುಹಾ ದೇಗುಲ ಅಥವಾ ಗುಹಾಲಯಗಳೆಂದೇ ಕರೆಯಬೇಕಾಗುತ್ತದೆ. ಚಿತ್ರದುರ್ಗ ಬೆಟ್ಟ ಪರಿಸರದ ಎಲ್ಲ ಗುಹಾ ದೇವಾಲಯಗಳನ್ನು ಸಾಮಾನ್ಯವಾಗಿ ಬೃಹತ್ ಬಂಡೆಗಲ್ಲುಗಳ ಕೆಳಭಾಗದ ವಿಶಾಲ ಸ್ಥಳವನ್ನು ಬಳಸಿಕೊಂಡು ಶಿವಲಿಂಗ ಮತ್ತಿತರ ಮೂರ್ತಿಗಳನ್ನು ಪ್ರತಿಷ್ಟಾಪಿಸಿರುವುದು ಗಮನೀಯ. ಈ ಹಿನ್ನೆಲೆಯಲ್ಲಿ ಗುಹೆಗಳ ಸ್ವಾಭಾವಿಕ ಗುಣಕ್ಕನುಗುಣವಾಗಿ ಇಲ್ಲಿನ ಗುಹಾ ದೇವಾಲಯಗಳು ದಕ್ಷಿಣ, ಪಶ್ಚಿಮ, ಪೂರ್ವ ಹಾಗೂ ಉತ್ತರಾಭಿಮುಖವಾಗಿವೆ. ಉದಾ: ಹಿಡಿಂಬೇಶ್ವರ, ಧರ್ಮೇಶ್ವರ, ಏಕನಾಥಿ ಗುಹಾಲಯಗಳು ದಕ್ಷಿಣಾಭಿಮುಖವಾಗಿದ್ದರೆ ಫಲ್ಗುಣೇಶ್ವರ, ಸಂಪಿಗೆ ಸಿದ್ಧೇಶ್ವರ ದೇಗುಲಗಳ ಗರ್ಭಗೃಹಗಳು, ಪಶ್ಚಿಮಕ್ಕೆ ಅಭಿಮುಖವಾಗಿವೆ. ಬನಶಂಕರಿ ದೇವಾಲಯ ಉತ್ತರಾಭಿಮುಖವಾಗಿದೆ. ಹಾಗೆಯೇ ಕಾಶಿವಿಶ್ವನಾಥ ದೇಗುಲವು ಪೂರ್ವಾಭಿಮುಖವಾಗಿ ಇರುವುದನ್ನು ಕಾಣಬಹುದು.
ಬೆಟ್ಟದ ಬುಡದಲ್ಲಿರುವ ಬನಶಂಕರಿಯ ದೇವಾಲಯವು ಬೃಹತ್ ಬಂಡೆಗಲ್ಲಿನ ಕೆಳಭಾಗದಲ್ಲಿರುವ ಸ್ವಾಭಾವಿಕ ಗುಹೆ. ಈ ಗುಹೆಯನ್ನೇ ದೇಗುವನ್ನಾಗಿಸಿ ಬನಶಂಕರಿಯನ್ನು ಪ್ರತಿಷ್ಟಾಪಿಸಿದ್ದಾರೆ. ಬೆಟ್ಟದ ಮಧ್ಯರಂಗದಲ್ಲಿರುವ ಸಂಪಿಗೆ ಸಿದ್ದೇಶ್ವರ ದೇವಾಲಯವೂ ಬೃಹತ್ ಬಂಡೆಗಲ್ಲಿನ ಕೆಳಭಾಗದ ಗುಹೆಯಲ್ಲಿ ನಿರ್ಮಾಣಗೊಂಡ ಗುಹಾಲಯ. ಶಾಸನಗಳಲ್ಲಿ ಇದನ್ನು ಸಿದ್ಧನಾಥನೆಂದೇ ಕರೆಯಲಾಗಿದೆ. ಈ ದೇವಾಲಯದ ಬಳಿ ಸಂಪಿಗೆಯ ಮರವಿರುವುದರಿಂದ ಸಂಪಿಗೆ ಸಿದ್ಧೇಶ್ವರನೆಂದೇ ಪ್ರಸಿದ್ಧಿಯಾಗಿದೆ. ಗರ್ಭಗೃಹ, ಅಂತರಾಳ, ನವರಂಗಗಳನ್ನು ಗುಹೆಗೆ ಹೊಂದಿದಂತೆಯೇ ನಿರ್ಮಿಸಿದ್ದು, ಮುಂಭಾಗದಲ್ಲಿ ಮುಖಮಂಟಪ, ವಿಶಾಲ ಪ್ರಕಾರ ಗೋಡೆ ಸಾಲುಮಂಟಪ, ದೀಪಸ್ತಂಭ, ಉಯ್ಯಾಲೆ ಕಂಬ, ಗೋಪುರ ಹಾಗೂ ಉಪದೇಗುಲಗಳನ್ನು ನಿರ್ಮಿಸಿ ವಿಸ್ತರಿಸಲಾಗಿದೆ. ಸಂಪಿಗೆ ಸಿದ್ದೇಶ್ವರ ದೇಗುಲದ ಒಳಭಾಗದಲ್ಲಿ ವೀರಭದ್ರನಿಗಾಗಿ ಇನ್ನೊಂದು ಗರ್ಭಗೃಹವನ್ನು ಪ್ರತ್ಯೇಕವಾಗಿ ಕಲ್ಪಿಸಲಾಗಿದೆ. ಮುಖ್ಯ ಗರ್ಭಗೃಹವು ಪಶ್ಚಿಮಾಭಿಮುಖವಾಗಿದ್ದರೆ, ದೇವಾಲಯದ ನವರಂಗ ಹಾಗೂ ಮುಖಮಂಟಪಗಳು ಉತ್ತರಾಭಿಮುಖವಾಗಿವೆ.
ಸಂಪಿಗೆ ಸಿದ್ಧೇಶ್ವರ ದೇವಾಲಯದಲ್ಲಿ ಕಪ್ಪು ಶಿಲೆಯ ನಯವಾದ ಶಿವಲಿಂಗವಿದೆ. ಅಂತರಾಳದಲ್ಲಿ ಶಿವಲಿಂಗಕ್ಕೆ ಎದುರಾಗಿ ಸ್ಥಾಪಿಸಲಾದ ನಂದಿಯಿದೆ. ಕ್ರಿ.ಶ.೧೩೨೮ರ ಶಾಸನದಲ್ಲಿ ಹೊಯ್ಸಳರ ಅಧಿಕಾರಿ ಬೇಬದಣ್ಣಾಯಕನ ಮಕ್ಕಳಾದ ಸಿಂಗೆಯನಾಯಕ ಮತ್ತು ಬಲ್ಲಪ್ಪ ದಣ್ಣಾಯಕರು ತಮ್ಮ ತಂದೆ ಬೇಬದಣ್ಣಾಯಕನ ಹೆಸರಿನಲ್ಲಿ ಶಿವಲಿಂಗವನ್ನು ಪ್ರತಿಷ್ಟಾಪನೆ ಮಾಡಿ, ದೇವರ ಅಮೃತಪಡಿಗೆ ಭೂಮಿ ಮತ್ತಿತರ ದಾನದತ್ತಿಗಳನ್ನು ನೀಡಿದರೆಂದು ಹೇಳಿದೆ. ಶಾಸನದಲ್ಲಿ ಸಿದ್ಧೇಶ್ವರನನ್ನು ಬೇಬನಾಥನೆಂದೇ ಕರೆಯಲಾಗಿದೆ. ಅಂತರಾಳದ ಎಡಬದಿಯಲ್ಲಿ ಪಾರ್ವತಿಯ ಸುಂದರವಾಗಿ ಕಡೆದ ಶಿಲ್ಪವಿದೆ. ತ್ರಿಭಂಗಿಯಲ್ಲಿ ನಿಂತಿರುವ ಪಾರ್ವತಿಯು ತನ್ನ ನಾಲ್ಕು ಕೈಗಳಲ್ಲಿ ಬಲಗೈಗಳಲ್ಲಿ ತ್ರಿಶೂಲ, ರುದ್ರಾಕ್ಷಿಮಾಲೆ, ಎಡಗೈಗಳಲ್ಲಿ ಡಮರು ಮತ್ತು ಫಲಗಳನ್ನು ಹಿಡಿದಿರುವಳು. ನವರಂಗದಲ್ಲಿ ಕಲ್ಯಾಣ ಚಾಲುಕ್ಯ ಶೈಲಿಯ ನಾಲ್ಕು ಕಂಬಗಳು, ಚಿಕ್ಕ ಕೂಡುವಿನಲ್ಲಿ ಗುಂಡ-ಬ್ರಹ್ಮಯ್ಯ(ಶೂಲಬ್ರಹ್ಮ) ಶಿಲ್ಪಗಳಿವೆ. ನವರಂಗದ ಗೋಡೆಯಲ್ಲಿ ವ್ಯಕ್ತಿ ಶಿಲ್ಪವಿದ್ದು, ಇವನನ್ನು ಸೋಮಣ್ಣನೆಂದು ಪಕ್ಕದ ಶಾಸನದಲ್ಲಿ ಹೇಳಿದೆ. ಇವುಗಳಲ್ಲದೆ ಭೈರವನ ಶಿಲ್ಪವನ್ನು ಕಾಣಬಹುದು. ದೇವಾಲಯದ ಈ ಶಿಲಾಶಾಸನವನ್ನು ಮಾಡಿದವನು ಆಚಾರಿ ಬಬೋಜನ ಮಗ ಸೋಮೋಜ. ದೇವಾಲಯದ ಮುಖಮಂಟಪದ ಕಕ್ಷ್ಷಾಸನದ ಮೇಲೆ ಸುಂದರವಾಗಿ ಕ್ರಿ.ಶ. ೧೩೫೫-೫೬ರಲ್ಲಿ ಕಡೆಯಲಾದ ಎರಡು ಶಿಲಾಶಾಸನಗಳಿವೆ. ವಿಜಯನಗರ ಅರಸ ಒಂದನೇ ಬುಕ್ಕರಾಯನ ಅಧಿಕಾರಿಯಾದ ಮಲ್ಲಿನಾಥ ಒಡೆಯನು ಈ ಸಿದ್ಧನಾಥ ದೇವಾಲಯಕ್ಕೆ ಕಲ್ಲಿನ ಉಪ್ಪರಿಗೆ, ಶಿಖರ ಪ್ರತಿಷ್ಟಾಪನೆ ಹಾಗೂ ಕಲ್ಲಿನ ಉಯ್ಯಾಲೆ ಕಂಬಗಳನ್ನು ಹಾಕಿಸಿದನೆಂದು ಶಾಸನದಿಂದ ತಿಳಿದುಬರುತ್ತದೆ. ಈ ಎರಡೂ ಶಿಲಾಶಾಸನಗಳನ್ನು ಕಡೆದವನು ಹಾಗೂ ಕಲ್ಲಿನ ಉಪ್ಪರಿಗೆ, ಶಿಖರ ಮತ್ತು ಕಲ್ಲಿನ ಉಯ್ಯಾಲೆ ಕಂಬಗಳನ್ನು ಮಾಡಿದವನು ಕಲ್ಲುಕುಟಿಗ ಜಡೆಯ ರಾಮೋಜನೆಂದು ಈ ಶಾಸನಗಳ ಬರಹವನ್ನು ಸಿದ್ಧಪಡಿಸಿದವರು ಕರಣಿಕರಾದ ದೇವಣ್ಣ, ರೇವಪ್ಪ, ಸೋವರಸರ ವೀರಪ್ಪ ಎಂಬುದೂ ಗಮನಾರ್ಹ.
ಚಿತ್ರದುರ್ಗದ ಅತ್ಯಂತ ಸುಂದರ ತಾಣಗಳಲ್ಲಿ ಹಿಡಿಂಬೇಶ್ವರ ದೇವಾಲಯವೂ ಒಂದು. ಹಿಡಿಂಬೇಶ್ವರನನ್ನು ಹಿಡುಂಬನಾಥ, ಹಿಡುಬಯ್ಯ, ಕಪ್ಪನೆಯ ನಯವಾದ ಶಿವಲಿಂಗ ಇದಾಗಿರುವುದರಿಂದ ಕರಿಯ ಇಡುಬಯ್ಯ ಎಂದೂ, ಇಲ್ಲಿನ ಸ್ಥಾನಿಕರನ್ನು ಇಡುಬಜೀಯ ಎಂದೆಲ್ಲಾ ಕರೆಯಲಾಗಿದೆ. ದೇವಾಲಯ ಕಟ್ಟಲು ನೂರಾರು ಮೀಟರುಗಳಷ್ಟು ಉದ್ದವಾದ ಕಣಶಿಲೆಯ ಏಕಶಿಲಾ ಬಂಡೆಗಲ್ಲಿನ ಬೆಟ್ಟವನ್ನು ಆಯ್ದುಕೊಂಡಿರುವುದು ಗಮನಾರ್ಹ. ಕ್ರಿ.ಶ.೧೦೭೩ರ ಹುಲೆಗೊಂದಿ ಸಿದ್ಧೇಶ್ವರ ದೇವಾಲಯದ ಬಳಿಯ ಶಾಸನದಲ್ಲಿ ಹಿಡಿಂಬೇಶ್ವರ ದೇವಾಲಯದ ಉಲ್ಲೇಖವಿದೆ. ಬೃಹತ್ ಬಂಡೆಗಲ್ಲಿನ ಕೆಳಭಾಗದಲ್ಲಿರುವ ಗುಹೆಯನ್ನು ದೇವಾಲಯವಾಗಿ ರೂಪಿಸಿ ಅದರಲ್ಲಿ ಶಿವಲಿಂಗವನ್ನು ಪ್ರತಿಷಾಪಿಸಲಾಗಿದೆ. ಈ ಗುಹಾಲಯಕ್ಕೆ ಮುಂದೆ ನವರಂಗ, ಸಭಾಮಂಟಪ ಹಾಗೂ ಮುಖಮಂಟಪಗಳನ್ನು ನಿರ್ಮಿಸಿ ವಿಸ್ತರಿಸಲಾಗಿದೆ.
ದೇವಾಲಯದ ಸಭಾಮಂಟಪದಲ್ಲಿ ಎರಡು ಶಿಲಾಶಾಸನಗಳಿವೆ. ಒಂದು ಶಾಸನವು ಕಲ್ಯಾಣ ಚಾಲುಕ್ಯರ ಜಗದೇಕಮಲ್ಲನ ಕಾಲದ್ದಾಗಿದೆ. ಇದರಲ್ಲಿ ಅವನ ಮಹಾಸಾಮಂತನಾದ ವಿಜಯಪಾಂಡ್ಯನು ಈ ಪ್ರದೇಶವನ್ನು ಆಳುತ್ತಿರುವಾಗ ಉದಯಾದಿತ್ಯನಾಯಕನು ಬೆಂಮತ್ತನೂರನ್ನು ಆಳುತ್ತಿದ್ದನು. ಉದಯಾದಿತ್ಯ ನಾಯಕನ ಮಗನಾದ ಮಾಚದೇವನು ಕಾಮಯ್ಯ ನಾಯಕ, ಚೋಳಯ್ಯನಾಯಕ ಮೊದಲಾದವರೊಂದಿಗೆ ಕ್ರಿ.ಶ.೧೧೮೩ರಲ್ಲಿ ಹಿಡಿಂಬೇಶ್ವರ ದೇವರ ನಂದಾದೀವಿಗೆ, ನೈವೇದ್ಯ, ಚೈತ್ರಪವಿತ್ರ ಕಾರ್ಯಗಳಿಗೆ ಭೂಮಿಯನ್ನು ದಾನ ಮಾಡಿದುದಾಗಿ ತಿಳಿದುಬರುತ್ತದೆ. ಹಿಡುಂಬಾ ವನದ ಉಲ್ಲೇಖವೂ ಈ ಶಾಸನದಲ್ಲಿದೆ. ಕ್ರಿ.ಶ. ೧೨೮೬ರ ಶಾಸನವು ಹೊಯ್ಸಳ ವೀರನರಸಿಂಹನ ಕಾಲದ್ದಾಗಿದೆ. ಈ ಅವಧಿಯಲ್ಲಿ ಮಹಾಪ್ರಧಾನನಾಗಿದ್ದ ಪೆರುಮಾಳೆದೇವ ದಣ್ಣಾಯಕನು ಹಿಡಿಂಬೇಶ್ವರ ದೇವರ ಅಮೃತಪಡಿಗೆ ದಾನದತ್ತಿಯನ್ನು ನೀಡಿದ ವಿವರವಿದೆ. ಈ ಶಾಸನದಲ್ಲಿ ಬೆಟ್ಟದ ಮೇಲೆ ತನ್ನ ಹೆಸರಿನಲ್ಲಿ ಪೆರುಮಾಳೆಪುರವನ್ನು ನಿರ್ಮಿಸಿದುದಾಗಿಯೂ, ಕುರುಬರ ಕಾಳೆಯನ ಕೆರೆಯನ್ನು ಕ್ರಯಕ್ಕೆ ಪಡೆದು ಅದನ್ನು ಜೀರ್ಣೋದ್ಧಾರ ಮಾಡಿ ಪೆರುಮಾಳಸಮುದ್ರವೆಂದು ಕರೆದನೆಂದೂ ಹೇಳುತ್ತದೆ. ಕ್ರಿ.ಶ. ೧೪೧೧ಕ್ಕೆ ಸೇರಿದ ಇನ್ನೊಂದು ಶಿಲಾಶಾಸನವು ವಿಜಯನಗರ ಅರಸ ಒಂದನೇ ದೇವರಾಯನ ಕಾದ್ದಾಗಿದೆ. ದೇವರಾಯನ ಮಗನಾದ ವೀರಮಲ್ಲಣ್ಣ ಒಡೆಯನು ಹಿಡಿಂಬನಾಥ ದೇವರಿಗೆ ಮಹಾಪೂಜೆ, ನೈವೇದ್ಯ, ಶಿಖರದೀಪ್ತಿ(ಶಿಖರಕ್ಕೆ ಮಾಡುವ ದೀಪಾಲಂಕಾರ)ಯನ್ನು ಮಾಡಿ ತಮ್ಮ ತಾಯಿ ಮಲ್ಲವ್ವೆಗೆ ಪರದಲ್ಲಿ ಪುಣ್ಯವಾಗಲೆಂದು ಹಾಗೂ ಅವಳ ಹೆಸರಿನಲ್ಲಿ ಚಿಮ್ಮತ್ತನಲ್ಲು ಪಟ್ಟಣಕ್ಕೆ ಪೂರ್ವದ ಹಳ್ಳಿಗಳಲ್ಲಿ ಒಂದಾದ ಕುಂಚಿಗನಹಳ್ಳಿಯನ್ನು ಮಲ್ಲಾಪುರವೆಂದು ಕರೆದು ಹಿಡಿಂಬನಾಥನಿಗೆ ಅದನ್ನು ದಾನಬಿಟ್ಟನೆಂದು ಹೇಳುತ್ತದೆ. ಹಾಗೆಯೇ ದೇವಾಲಯದ ದಕ್ಷಿಣ ದ್ವಾರದ ಕಲುವೆಸನ ಗೋಪುರವನ್ನು ಕಟ್ಟಿಸಿದನೆಂದೂ ತಿಳಿಸುತ್ತದೆ. ಈ ಶಾಸನದಿಂದ ಒಂದನೆಯ ದೇವರಾಯನ ರಾಣಿ ಮಲ್ಲವ್ವೆ ಎಂಬುದು, ಕ್ರಿ.ಶ. ೧೪೧೧ರ ಹೊತ್ತಿಗೆ ಅವಳು ತೀರಿಕೊಂಡಿದ್ದುದನ್ನು ಶಾಸನವು ಸ್ಪಷ್ಟಪಡಿಸುತ್ತದೆ.
ಅಕ್ಕತಂಗಿ ಹೊಂಡದ ಬಳಿಯಿರುವ ಬೃಹತ್ ಬಂಡೆಗಲ್ಲಿನ ಕೆಳಭಾಗದಲ್ಲಿರುವ ಕಾಶಿವಿಶ್ವನಾಥ ದೇವಾಲಯವಿದೆ. ಇದೂ ಕೂಡ ಗುಹಾಲಯವೇ. ಗರ್ಭಗೃಹ, ಅಂತರಾಳ, ಸಭಾಮಂಟಪ, ಮುಖಮಂಟಪ ಹಾಗೂ ದೀಪಸ್ತಂಭಗಳಿರುವ ದೇವಾಲಯವಿದು. ಗರ್ಭಗೃಹದ ಸುತ್ತಲೂ ಪ್ರದಕ್ಷಿಣ ಪಥವನ್ನೂ ನಿರ್ಮಿಸಿರುವರು. ಚಿತ್ರದುರ್ಗದ ಪ್ರಾಚೀನ ದೇವಾಲಯಗಳಲ್ಲಿ ಫಲ್ಗುಣೇಶ್ವರ ಗುಹಾದೇಗುಲವೂ ಒಂದು. ಗುಹಾಲಯಕ್ಕೆ ಹೊಂದಿದಂತೆ ನವರಂಗ ಹಾಗೂ ಮುಖಮಂಟಪಗಳನ್ನು ನಿರ್ಮಿಸಿ ಶಿವಲಿಂಗವನ್ನು ಪ್ರತಿಷ್ಟಾಪಿಸಿರುವುದು ಈ ದೇವಾಲಯದ ವಿಶೇಷ. ಫಲ್ಗುಣೇಶ್ವರ ದೇವಾಲಯದಲ್ಲಿ ಕ್ರಿ.ಶ. ೧೨೫೯ರ ಶಾಸನವಿದ್ದು, ಮಹಾಪ್ರಧಾನನೂ, ಸಂಧಿವಿಗ್ರಹಿಯೂ ಆದ ಸೋವಣ್ಣನು ಇದನ್ನು ಹಾಕಿಸಿದ್ದಾನೆ. ಇದರಲ್ಲಿ ಫಲ್ಗುಣೇಶ್ವರ ದೇವಾಲಯದ ಮುಂಬದಿಯ ಮಂಟಪವನು ಮಾಡಿಸಿದನು ಎಂದಿದೆ. ಇದರಿಂದ ಫಲ್ಗುಣೇಶ್ವರ ಎಂಬ ದೇವರ ಹೆಸರು ಕ್ರಿ.ಶ.೧೩ನೆಯ ಶತಮಾನದಲ್ಲಿ ಪರಿಚಿತವಾಗಿದ್ದಿತು. ಅಲ್ಲದೆ ಈ ಗುಹಾಲಯದಲ್ಲಿ ಈ ಹಿಂದೆಯೇ ಶಿವಲಿಂಗವಿದ್ದು, ನವರಂಗ ಮುಖಮಂಟಪಗಳನ್ನು ನಂತರ ನಿರ್ಮಿಸಿರುವುದು ಸ್ಪಷ್ಟವಾಗುತ್ತದೆ. ಬೆಟ್ಟದ ಇತರೆ ದೇವಾಲಯಗಳಂತೆ ಬಾಳೆಕಾಯಿ ಸಿದ್ಧಪ್ಪ ದೇಗುಲವೂ ಬೃಹತ್ ಬಂಡೆಗಲ್ಲಿನ ಕೆಳಗಿರುವ ಗುಹಾಲಯವೇ ಆಗಿದೆ. ಬೆಟ್ಟದ ಪೂರ್ವದ ಬುಡದಲ್ಲಿ ತಿಮ್ಮಣ್ಣನಾಯಕನ ಕೆರೆಯ ಬಳಿಯಿರುವ ಬಂಡೆಗಲ್ಲಿನ ಕೆಳಗೆ ಒಬ್ಬ ವ್ಯಕ್ತಿ ನುಸುಳಬಹುದಾದಷ್ಟು ಸ್ಥಳದಿಂದ ಒಳಹೊಕ್ಕರೆ ವಿಶಾಲವಾದ ಗುಹೆ ಕಾಣಬರುತ್ತದೆ. ಈ ಗುಹೆಯ ವಿಸ್ತಾರ ಸ್ಥಳವನ್ನು ದೇಗುಲದ ಗರ್ಭಗೃಹ, ಮತ್ತು ಸಭಾಮಂಟಪಗಳನ್ನಾಗಿ ಮಾಡಿಕೊಳ್ಳಲಾಗಿದೆ.
ಏಕನಾಥೇಶ್ವರಿ ದೇವಾಲಯವೂ ಬೃಹತ್ತಾದ ಬಂಡೆಗಲ್ಲಿನ ಕೆಳಭಾಗದ ವಿಶಾಲ ಗುಹೆಯಲ್ಲಿ ನಿರ್ಮಾಣವಾದ ಗುಹಾ ದೇಗುಲ. ಇದಕ್ಕೆ ಹೊಂದಿದಂತೆ ಪಾಳೆಯಗಾರರ ಕಾಲದಲ್ಲಿ ಮುಖಮಂಟಪ, ದೀಪಸ್ತಂಭ ಮತ್ತು ಉಯ್ಯಾಲೆ ಕಂಬಗಳನ್ನು ಸ್ಥಾಪಿಸಿದ್ದಾರೆ. ಏಕನಾಥಿ ಮೂರ್ತಿಯನ್ನು ಬಂಡೆಗಲ್ಲಿನಲ್ಲಿ ಮೂಡಿಸಿರುವುದು ಗಮನಾರ್ಹ.
ಚಂದ್ರವಳ್ಳಿಯ ಅಂಕಲಿ ಮಠದ ಮುಂಭಾಗದಲ್ಲಿರುವ ಸುಮಾರು ಎಪ್ಪತ್ತು ಅಡಿ ಎತ್ತರ ಹಾಗೂ ನಲವತ್ತು ಅಡಿ ಅಗಲವಾದ ಬೃಹತ್ ಬಂಡೆಗಲ್ಲಿನ ಕೆಳಭಾಗದಲ್ಲಿರುವ ಗುಹಾಲಯವೇ ಪಂಚಲಿಂಗೇಶ್ವರ. ವಿಸ್ತಾರವಾದ ಗುಹಾಲಯವನ್ನು ದೇವಾಲಯವನ್ನಾಗಿ ಮಾಡಿಕೊಂಡು ಪ್ರಾಚೀನ ಕಾಲದಲ್ಲಿ ಪಾಂಡವರ ಹೆಸರಿನ ಐದು ಶಿವಲಿಂಗಗಳನ್ನು ಪ್ರತಿಷ್ಟಾಪಿಸಲಾಗಿತ್ತು. ಸದ್ಯ ಈ ಗುಹಾಲಯದಲ್ಲಿ ಒಟ್ಟು ಒಂಭತ್ತು ಶಿವಲಿಂಗಗಳಿವೆ. ಇವುಗಳಲ್ಲಿ ಐದು ಲಿಂಗಗಳು ಪ್ರಮುಖವಾಗಿದ್ದು, ಉಳಿದ ಲಿಂಗಗಳನ್ನು ನಂತರದಲ್ಲಿ ಸ್ಥಾಪಿಸಲಾಗಿದೆ. ಮುಖ್ಯ ಲಿಂಗವು ಧರ್ಮೇಶ್ವರ ಲಿಂಗವಾಗಿದೆ. ಧರ್ಮೇಶ್ವರ ಲಿಂಗದ ಬಲಬದಿಯಲ್ಲಿ ಭೀಮೇಶ್ವರ, ಅರ್ಜುನೇಶ್ವರ, ನಕುಲೇಶ್ವರ, ಸಹದೇವ ಶಿವಲಿಂಗಗಳಿವೆ.
ಇಲ್ಲಿನ ಕ್ರಿ.ಶ. ೧೨೮೬ರ ಶಾಸನದಲ್ಲಿ ಹೊಯ್ಸಳರ ಮಹಾಪ್ರಧಾನನಾದ ಪೆರುಮಾಳೆ ದಣ್ಣಾಯಕನು ಪಂಚಲಿಂಗ ದೇವಾಲಯದ ಪೂಜಾಕಾರ್ಯಗಳಿಗೆ ಏಸಗೂರ ಕ್ಷೇತ್ರದಲ್ಲಿ ಭೂಮಿಯೊಂದನ್ನು ದಾನ ನೀಡಿದ ವಿವರವಿದೆ. ಈ ಶಾಸನವು ಸುಮಾರು ಏಳೂವರೆ ಅಡಿ ಎತ್ತರದ ಎಂಬತ್ತೇಳು ಸಾಲುಗಳುಳ್ಳ ಸುದೀರ್ಘ ಪಾಠವುಳ್ಳದ್ದಾಗಿದೆ. ಈ ಶಾಸನದಲ್ಲಿ ಪಂಚಲಿಂಗಗಳನ್ನು ಶ್ರೀ ಧರ್ಮೇಶ್ವರ ದೇವರು, ಶ್ರೀ ಭೀಮೇಶ್ವರ ದೇವರು, ಶ್ರೀ ಅರ್ಜುನೇಶ್ವರ ದೇವರು, ಶ್ರೀ ಲಕುಲೇಶ್ವರ ದೇವರು ಹಾಗೂ ಶ್ರೀ ಸಹದೇವೇಶ್ವರ ದೇವರು ಮತ್ತು ಪಂಚಲಿಂಗ ದೇವರಗಳ ದೇಗುಲವೆಂದು ಕೂಡ ಕರೆಯಲಾಗಿದೆ. ಈ ದೇವರುಗಳಿಗೆ ತ್ರಿಕಾಲ ಪೂಜೆ, ಅಂಗರಂಗಭೋಗ, ಗ್ರಹಣ, ಸಂಕ್ರಮಣ, ದೀಪೋತ್ಸವ ಮೊದಲಾದ ವಿಶಿಷ್ಟ ಉತ್ಸವಗಳಿಗೆ ಗ್ರಾಮಗಳನ್ನು ದತ್ತಿ ನೀಡಿದ ವಿವರವಿದೆ. ಹಾಗೆಯೇ ಈ ಶಾಸನದ ಕೊನೆಯಲ್ಲಿ ಚಿತ್ರದುರ್ಗ ಪರಿಸರದ ಅನೇಕ ದೇವಾಲಯಗಳನ್ನು ಉಲ್ಲೇಖಿಸಿರುವುದು ಗಮನಾರ್ಹ. ಅವುಗಳಲ್ಲಿ ಶ್ರೀ ಯಲ್ಲಾಳೇಶ್ವರ, ಶ್ರೀ ವಿಶ್ವೇಶ್ವರ, ಶ್ರೀ ಸೋಮನಾಥ, ಶ್ರೀ ಕಲ್ಲಿನಾಥ, ಶ್ರೀ ವೀತರಾಗ, ಬಾಚೇಶ್ವರ, ಶ್ರೀ ಕಾಟಿನಾರಾಯಣ, ಶ್ರೀ ಬ್ರಹ್ಮೇಶ್ವರ, ಶ್ರೀ ಭೀಮನಾಥ, ಶ್ರೀ ಮಲ್ಲಿನಾಥ, ಶ್ರೀ ಮಲ್ಲಿಕಾರ್ಜುನ, ಶ್ರೀ ಕೇತಯದೇವ, ಶ್ರೀ ಧರ್ಮೇಶ್ವರ, ಶ್ರೀ ಹಿಡುಂಬೇಶ್ವರ, ಶ್ರೀ ಗೋಪಿನಾಥ, ಶ್ರೀಭಿಲ್ಲೇಶ್ವರ, ಗವರೇಶ್ವರ, ಶ್ರೀ ಹರಿಹರ ಮುಖ್ಯವಾಗಿವೆ. ಇದರಿಂದ ೧೩ನೇ ಶತಮಾನದಲ್ಲಿ ಚಿತ್ರದುರ್ಗ ಬೆಟ್ಟ ಪರಿಸರದಲ್ಲಿದ್ದ ಪ್ರಾಚೀನ ದೇವಾಲಯಗಳು ಯಾವುವು? ಮತ್ತು ಎಷ್ಟಿದ್ದವೆಂಬುದು ಸ್ಪಷ್ಟವಾಗುತ್ತದೆ. ಅದರಲ್ಲೂ ಕಲ್ಲಿನಾಥ ಮತ್ತು ಸೋಮನಾಥ ಎಂಬ ಹೆಸರಿನಲ್ಲಿ ಹಲವು ದೇವಾಲಯಗಳಿದ್ದುದೂ ಈ ಶಾಸನದಿಂದ ದೃಢವಾಗುತ್ತದೆ.
ಈ ಶಾಸನದ ಪ್ರಮುಖ ಸಂಗತಿಯೆಂದರೆ ಚಂದ್ರವಳ್ಳಿ ಎಂಬ ಹೆಸರಿನ ಪ್ರಾಚೀನತೆಗೆ ಸಂಬಂಧಿಸಿದಂತೆ ಸಿಂಧುರವಳ್ಳಿ ಎಂಬ ಹೆಸರು ಉಲ್ಲೇಖವಾಗಿರುವುದು. ಶಾಸನದಲ್ಲಿ ಸಿಂದುರವಳ್ಳ್ಯಿ ಉಲ್ಲೇಖವಿದೆ. ಈ ಸಿಂಧುರವಳ್ಳಿಯೇ ಮುಂದೆ ಚಂದ್ರವಳ್ಳಿಯಾಗಿ ರೂಪಾಂತರ ಹೊಂದಿದೆಯೆಂದೂ ಹೇಳಲಾಗಿದೆ. ಕ್ರಿ.ಶ.೧೨೮೬ರ ಹೊತ್ತಿಗೆ ಚಂದ್ರವಳ್ಳಿಯನ್ನು ಸಿಂದುರವಳ್ಳಿ ಎಂಬ ಹೆಸರಿನಿಂದ ಕರೆದಿರುವುದು ಗಮನಾರ್ಹ. ಇದೇ ಪರಿಸರದ ದವಳಪ್ಪನ ಗುಡ್ಡದ ಮೇಲಿನ ಗುಹೆಯನ್ನು ದವಳೇಶ್ವರ ಶಿವಲಿಂಗವನ್ನು ಸ್ಥಾಪಿಸುವ ಮೂಲಕ ಗುಹಾಲಯವನ್ನಾಗಿಸಲಾಗಿದೆ. ಇದೊಂದು ಶೈವ ಧರ್ಮೀಯರ ವಿಶಿಷ್ಟ ಪೂಜ್ಯನೀಯ ಸ್ಥಳ. ಇಲ್ಲಿ ಹಾಕಿಸಲಾದ “ಸಿವಗಿರಿ ಕವುಳಾಸ ಸಿವಭಕ್ತರಲ್ಲದವರು ಹುಗಬಾರದು ಎಂಬ ಮಾತು ಶುದ್ಧ ಶೈವ ನೆಲೆಯಾಗಿತ್ತೆಂಬ ಸಂಗತಿಯನ್ನು ದೃಢಪಡಿಸುತ್ತದೆ. ಇವುಗಳಂತೆಯೇ ಗಂಜಿಗಟ್ಟೆಯ ಭೀಮೇಶ್ವರ ಗುಹಾಲಯವೂ ಬಂಡೆಗಲ್ಲಿನ ಕೆಳಗಿನ ಗುಹೆಯೇ ಆಗಿದೆ. ಇಲ್ಲಿನ ಶಾಸನದಲ್ಲಿ ಇಲ್ಲಿನ ದೇವರನ್ನನು ಚಂದಿಯಮ್ಮರಸ ದೇವರೆಂದು ಕರೆದಿದ್ದು, ಇದಕ್ಕೆ ಶ್ರೀ ಬಿಜೋಬೆ ಎಂಬುವವಳು ಸುಳ್ಗಲ್ನಾಡಿನ ಪಿಟ್ಟಗೆರೆಯ ಭೂಮಿಯನ್ನು ಕಾವಳಿಗ ಭಟರಿಗೆ ದನ ನೀಡಿದಳೆಂದು ಹೇಳಿದೆ. ಇಲ್ಲಿ ಉಲ್ಲೇಖವಾಗುವ ಕಾವಾಳಿಗರ ಹಿನ್ನೆಲೆಯಲ್ಲಿ ಕಾವಾಡಿಗರಹಟ್ಟಿ ಎಂಬ ಹೆಸರು ಬಂದಿರುವುದು ನೈಜನೀಯವಾಗಿದೆ.
ಒಟ್ಟಿನಲ್ಲಿ ಚಿತ್ರದುರ್ಗದ ಚಿನ್ಮೂಲಾದ್ರಿ ಶ್ರೇಣಿಯಲ್ಲಿರುವ ಬೃಹತ್ ಬಂಡೆಗಲ್ಲುಗಳ ಕೆಳಗಿರುವ ಅನೇಕ ಗುಹೆಗಳನ್ನು ದೇವಾಲಯಗಳನ್ನಾಗಿಸಿ ಅದರಲ್ಲೂ ಶೈವ ಮತ್ತು ಶಾಕ್ತ ದೇವದೇವತೆಗಳಿಗಾಗಿಯೇ ಗುಹಾಲಯಗಳನ್ನು ಬಳಸಿ ಮೂರ್ತಿಶಿಲ್ಪ ಸ್ಥಾಪಿಸಿ ಆರಾಧನಾ ಕೇಂದ್ರವನ್ನಾಗಿಸಿರುವುದು ವಿಶೇಷವೇ ಸರಿ.