ಬೆಂಗಳೂರು,ಮೇ,೨೯ : ಅಂತೂ ಇಂತೂ ನಿರೀಕ್ಷೆಯಂತೆಯೇ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಕ್ಲೀನ್ ಚಿಟ್ ನೀಡುವ ಎಲ್ಲಾ ಸಾಧ್ಯತೆಗಳು ಇವೆ.
ಎಸ್ಐಟಿ ಸದ್ಯದಲ್ಲೇ ರಮೇಶ್ ಜಾರಕಿಹೊಳಿ ಈ ಸಿಡಿ ಕೇಸ್ಗೆ ಸಂಬಂಧಿಸಿದಂತೆ ‘ಬಿ ರಿಪೋರ್ಟ್ ಸಲ್ಲಿಸಲು ಎಲ್ಲಾ ಸಿದ್ದತೆಗಳನ್ನು ಮಾಡಿಕೊಂಡಿದೆ.
ಸಾಕ್ಷ್ಯಾಧಾರಗಳ ಕೊರೆತೆ ಹಿನ್ನೆಲೆಯಲ್ಲಿ ರಮೇಶ್ ಜಾರಕಿಹೊಳಿಗೆ ಕ್ಲಿನ್ ಚಿಟ್ ಕೊಡಲು ಅಧಿಕಾರಿಗಳು ಮುಂದಾಗಿದ್ದಾರೆ.
ಅವರ ವಿರುದ್ಧ ಯಾವುದೇ ಪುರಾವೆಗಳಿಲ್ಲ ಎಂದು ನ್ಯಾಯಾಲಯಕ್ಕೆ ಸಲ್ಲಿಸಿ ಪ್ರಕರಣವನ್ನು ಸಮಾಪ್ತಿಗೊಳಿಸಲಿದೆ. ಮಾರ್ಚ್ ೨೬ ರಂದು ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಮಹಿಳೆ ಸಲ್ಲಿಸಿದ್ದ ಪ್ರಕರಣದಲ್ಲಿ ತನಿಖೆ ಮುಗಿದಿದೆ. ಜಲಸಂಪನ್ಮೂಲ ಸಚಿವರಾಗಿದ್ದ ಜಾರಕಿಹೊಳಿ ಅವರು ತಮ್ಮ ಇಲಾಖೆಗೆ ಸಂಬಂಧಿಸಿದ ಸಾಕ್ಷ್ಯಚಿತ್ರವನ್ನು ಚಿತ್ರೀಕರಿಸಲು ಅವಕಾಶ ನೀಡುವ ನೆಪದಲ್ಲಿ ಮಹಿಳೆಯನ್ನು ‘ಬಳಸುಕೊಳ್ಳಲಾಗಿದೆ ಎಂದು ಆರೋಪಿಸಲಾಗಿತ್ತು.
ಮಾರ್ಚ್ ೨೬ ರಂದು ಮಹಿಳೆ ಪ್ರಕರಣ ದಾಖಲಿಸಿದ್ದು, ಈ ಹಿನ್ನೆಲೆಯಲ್ಲಿ ಜಾರಕಿಹೊಳಿ ವಿರುದ್ಧ ೩೭೬ ಸಿ (ಅಧಿಕಾರದಲ್ಲಿದ್ದ ವ್ಯಕ್ತಿಯು ಲೈಂಗಿಕ ಸಂಭೋಗ), ೩೫೪ ಎ (ಲೈಂಗಿಕ ಕಿರುಕುಳ), ೫೦೪ (ಶಾಂತಿ ಪ್ರಚೋದನೆ), ೫೦೬ (ಕ್ರಿಮಿನಲ್ ಬೆದರಿಕೆ), ಐಪಿಸಿಯ ೪೧೭ (ಮೋಸ) ಮತ್ತು ೬೭ ಎ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣ ಸಂಬಂಧ ಆರಂಭವಾಗಿದ್ದ ತನಿಖೆ ಪೂರ್ಣಗೊಂಡಿದೆ. ಜಾರಕಿಹೊಳಿ ವಿರುದ್ಧ ಯಾವುದೇ ಸಾಕ್ಷ್ಯಾಧಾರಗಳು ದೊರೆತಿಲ್ಲ. ಮಹಿಳೆಯೇ ಪದೇ ಪದೇ ಜಾರಿಹೊಳಿಯವರನ್ನು ಸಂಪರ್ಕಿಸಿದ್ದಾರೆ.
ಸಾಕಷ್ಟು ಬಾರಿ ದೂರವಾಣಿ ಕರೆ ಮಾಡಿ ಪ್ರಚೋದನೆ ನೀಡುವ ರೀತಿಯಲ್ಲಿ ಮಾತನಾಡಿದ್ದಾರೆ. ಲಭ್ಯವಾಗಿರುವ ವಿಡಿಯೋದಲ್ಲಿ ಮಹಿಳೆಗೆ ಬಲವಂತ ಮಾಡಿರುವ, ದೌರ್ಜನ್ಯ ಎಸಗಿರುವ ಯಾವುದೇ ದೃಶ್ಯಗಳೂ ಕಂಡು ಬಂದಿಲ್ಲ. ಇಬ್ಬರ ಸಹಮತದಿಂದಲೇ ಕ್ರಿಯೆ ನಡೆದಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
ಪ್ರಕರಣ ಸಂಬಂಧ ಸಾಕಷ್ಟು ಜನರ ಹೇಳಿಕೆಯನ್ನೂ ಎಸ್ಐಟಿ ಅಧಿಕಾರಿಗಳು ದಾಖಲು ಮಾಡಿಕೊಂಡಿದ್ದಾರೆ. ವಿಡಿಯೋದಲ್ಲಿ ಇರುವುದು ನಾನಲ್ಲ. ವಿಡಿಯೋ ನಕಲಿ ಸೃಷ್ಟಿಯಾಗಿದೆ ಎಂದು ಇಷ್ಟು ದಿನ ಹೇಳಿಕೊಂಡು ಬಂದಿದ್ದ ಜಾರಕಿಹೊಳಿಯವರು ಕೆಲ ದಿನಗಳ ಹಿಂದಷ್ಟೇ ಎಸ್ಐಟಿ ಮುಂದೆ ಹಾಜರಾಗಿ ವಿಡಿಯೋದಲ್ಲಿರುವುದು ನಾನೇ ಎಂದು ಒಪ್ಪಿಕೊಂಡಿದ್ದಾರೆಂದು ಮೂಲಗಳು ತಿಳಿಸಿವೆ.
ಎಲ್ಲಾ ಬೆಳವಣಿಗೆ ಬಳಿಕ ಜಾರಕಿಹೊಳಿಯವರು ಹನಿ ಟ್ರ್ಯಾಪ್’ಗೆ ಒಳಗಾಗಿದ್ದಾರೆಂದು ಹೇಳಲಾಗುತ್ತಿದ್ದು, ಈ ಸಂಬಂಧ ಎಸ್ಐಟಿ ಅಧಿಕಾರಿಗಳೂ ನ್ಯಾಯಾಲಯಕ್ಕೆ ಶೀಘ್ರದಲ್ಲಿಯೇ ಬಿ ರಿಪೋರ್ಟ್ ಸಲ್ಲಿಸಲಿದ್ದಾರೆಂದು ತಿಳಿದುಬಂದಿದೆ.
ಈ ಮಹಿಳೆ ಸಚಿವರನ್ನು ಸಂಪರ್ಕಿಸಿ, ಹಲವಾರು ದೂರವಾಣಿ ಕರೆಗಳನ್ನು ಮಾಡಿ, ಅವರೊಂದಿಗೆ ಪ್ರಚೋದನಕಾರಿಯಾಗಿ ಮಾತನಾಡಿದ್ದಾಳೆ ಎಂದು ತನಿಖೆಯಿಂದ ತಿಳಿದುಬಂದಿದೆ.ಪ್ರಕರಣ ಸಂಬಂಧ ಸಾಕ್ಷ್ಯಾಧಾರಗಳು ಸಿಗದ ಹಿನ್ನೆಲೆಯಲ್ಲಿ ಬಿ ರಿಪೋರ್ಟ್ ಸಲ್ಲಿಸಿ ಪ್ರಕರಣಕ್ಕೆ ಫುಲ್ ಸ್ಟಾಪ್ ಹಾಕಲು ಅಧಿಕಾರಿಗಳು ನಿರ್ಧರಿಸಿದ್ದಾರೆಂದು ಮೂಲಗಳು ತಿಳಿಸಿವೆ.
ಜಾರಕಿಹೊಳಿ ಇತ್ತೀಚೆಗೆ ವಿಚಾರಣೆಗೆ ಹಾಜರಾಗಿದ್ದ ವೇಳೆ ಸಿಡಿಯಲ್ಲಿ ಕಾಣಿಸಿಕೊಂಡ ವ್ಯಕ್ತಿ ನಾನೇ. ಇದು ಒಮ್ಮತದ ಕ್ರಿಯೆ ಎಂದು ಹೇಳಿದ್ದಾಗಿ ವರದಿಯಾಗಿತ್ತು. ಜಾರಕಿಹೊಳಿ ವಿರುದ್ಧದ ಆರೋಪಗಳನ್ನು ಕೈಬಿಡುವಾಗ, ಇಡೀ ಪ್ರಸಂಗವು ಅವರ ವಿರುದ್ಧದ ಪಿತೂರಿ ಎಂಬುದು ತನಿಖೆಯಲ್ಲಿ ಗೊತ್ತಾಗಿದೆ.