ನಕ್ಸಲ್ ತೊಂಬಟ್ಟು ಉಡುಪಿಯಲ್ಲಿ ಶರಣಾಗತಿ
by-ಕೆಂಧೂಳಿ
ಉಡುಪಿ,ಫೆ,೦೩-ಹಸಿರುವನಗಳಲ್ಲಿ ಕೆಂಪು ಹೆಜ್ಜೆಗುರುತುಗಳ ಜಾಡು ಈಗ ಸಂಪೂರ್ಣ ಅಳಸಿದಂತಾಗಿದೆ. ಕರ್ನಾಟಕ ಈಗ ನಕ್ಸಲ್ ಮುಕ್ತ ಎನ್ನುವುದು ಸಾಬೀತಾದಂತಿದೆ.
ಹೌದು ಕಣ್ಮರೆಯಾಗಿದ್ದ ನಕ್ಸಲ್ ಲಕ್ಷ್ಮಿ ತೊಂಬಟ್ಟು ಉಡುಪಿ ಜಿಲ್ಲಾಧಿಕಾರಿ ಕೆ.ವಿದ್ಯಾಕುಮಾರಿ ಸಮ್ಮುಖದಲ್ಲಿ ಶರಣಾದರು. ಅಲ್ಲಿಗೆ ಬಹುಶಃ ಕರ್ನಾಟಕದ ಮಲೆನಾಡು ಕರಾವಳಿ ಸುತ್ತಮುತ್ತ ಇದ್ದ ಕೆಂಪು ಜಾಡಿನ ಹೆಜ್ಜೆ ಗುರುತುಗಳು ಈಗ ಕೇವಲ ನೆನಪು ಮಾತ್ರವಷ್ಟೆ.
ಉಡುಪಿ ಜಿಲ್ಲೆಯ ತೊಂಬಟ್ಟುವಿನ ಲಕ್ಷ್ಮಿ ತೊಂಬಟ್ಟು ಹಲವಾರು ದಿನಗಳಿಂದ ಕಣ್ಮರೆಯಾಗಿದ್ದರು ಮೂರು ಕೇಸುಗಳು ಅವರ ವಿರುದ್ಧ ಹಾಕಲಾಗಿತ್ತು. ಶರಣಾಗತಿಯಾದ
ಈ ಸಂದರ್ಭದಲ್ಲಿ ಮಾತನಾಡಿದ ಲಕ್ಷ್ಮಿ ತೊಂಬಟ್ಟು, ‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೀಡಿರುವ ಆಹ್ವಾನವನ್ನು ಸುದ್ದಿ ವಾಹಿನಿಗಳ ಮೂಲಕ ನೋಡಿದ್ದೇನೆ. ಆ ಅವಕಾಶವನ್ನು ಉಪಯೋಗಿಸಿಕೊಂಡು ಮುಖ್ಯವಾಹಿನಿಗೆ ಬಂದಿದ್ದೇನೆ ಎಂದರು.
‘ನಮ್ಮ ಊರಿಗೆ ಈಗಲೂ ಏನೂ ಸೌಲಭ್ಯವಿಲ್ಲ. ರಸ್ತೆ, ಆಸ್ಪತ್ರೆ, ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ಈ ಸಮಸ್ಯೆಗಳನ್ನು ಸರ್ಕಾರ ಪರಿಹರಿಸಬೇಕು. ನಾನು ಸ್ವ ಇಚ್ಛೆಯಂತೆ ಬಂದಿದ್ದೇನೆ’ ಎಂದು ಹೇಳಿದರು.
ಜಿಲ್ಲಾಧಿಕಾರಿ ಕೆ.ವಿದ್ಯಾಕುಮಾರಿ ಮಾತನಾಡಿ, ರಾಜ್ಯ ಸರ್ಕಾರವು ಮೂರು ವರ್ಗದ ನಕ್ಸಲ್ ಶರಣಾಗತಿ ಪ್ಯಾಕೇಜ್ ಘೋಷಿಸಿದೆ. ನಮ್ಮ ರಾಜ್ಯದ ನಿವಾಸಿಗಳಾಗಿದ್ದರೆ ‘ಎ’ ವರ್ಗದ ಪ್ಯಾಕೇಜ್ ನೀಡಲಾಗುತ್ತಿದೆ. ಲಕ್ಷ್ಮಿ ಅವರು ‘ಎ’ ವರ್ಗದ ನಕ್ಸಲ್ ಆಗಿದ್ದಾರೆ. ಪುನರ್ವಸತಿ, ಸ್ವ ಉದ್ಯೋಗ, ವಿದ್ಯಾಭ್ಯಾಸಕ್ಕೂ ಅವಕಾಶ ಇದೆ. ಅವರ ಬೇಡಿಕೆಗನುಗುಣವಾಗಿ ಅದನ್ನು ನೀಡಲಾಗುತ್ತದೆ. ಲಕ್ಷ್ಮಿ ಅವರ ಊರಿನ ಸಮಸ್ಯೆಗಳ ಬಗ್ಗೆಯೂ ಗಮನ ಹರಿಸಲಾಗುವುದು ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅರುಣ್ ಕೆ. ಮಾತನಾಡಿ, ‘ಲಕ್ಷ್ಮಿ ತೊಂಬಟ್ಟು ಅವರ ವಿರುದ್ಧ ೨೦೦೭ ಮತ್ತು ೨೦೦೮ರಲ್ಲಿ ಗುಂಡಿನ ದಾಳಿ ನಡೆಸಿದ, ಭಿತ್ತಿಪತ್ರ ಅಂಟಿಸಿದ ಮತ್ತು ವ್ಯಕ್ತಿಯೊಬ್ಬರಿಗೆ ಹಲ್ಲೆ ಮಾಡಿ, ಬೆದರಿಕೆ ಹಾಕಿದ ಪ್ರಕರಣಗಳು ಅಮಾಸೆಬೈಲು ಪೊಲೀಸ್ ಠಾಣೆಯಲ್ಲಿ ದಾಖಲಾಗಿವೆ’ ಎಂದು ತಿಳಿಸಿದರು.
ಅದಕ್ಕೂ ಮೊದಲು ಪೊಲೀಸ್ ಭದ್ರತೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಗೆ ಲಕ್ಷ್ಮಿ ಅವರನ್ನು ಕರೆದೊಯ್ದು ಶರಣಾಗತಿ ಪ್ರಕ್ರಿಯೆಗಳನ್ನು ಪೂರೈಸಲಾಗಿತ್ತು. ಲಕ್ಷ್ಮಿ ಅವರ ಪತಿ ಸಂಜೀವ ಕುಮಾರ್, ಸಹೋದರರಾದ ವಿಠಲ್ ಪೂಜಾರಿ, ಬಸವ ಪೂಜಾರಿ ಅವರು ಜಿಲ್ಲಾಧಿಕಾರಿ ಕಚೇರಿಗೆ ಬಂದಿದ್ದರು.
ನಕ್ಸಲ್ ಚಟುವಟಿಕೆಯಲ್ಲಿದ್ದಾಗಲೇ ೨೦೦೮ರಲ್ಲಿ ಸಂಜೀವ ಕುಮಾರ್ ಅವರನ್ನು ಮದುವೆಯಾಗಿದ್ದ ಲಕ್ಷ್ಮಿ ಅವರಿಗೆ ಇಬ್ಬರು ಮಕ್ಕಳಿದ್ದಾರೆ.
ಲಕ್ಷ್ಮಿ ತೊಂಬಟ್ಟು ಅವರನ್ನು ಕುಂದಾಪುರದ ಎರಡನೇ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಧೀಶರು ಅವರಿಗೆ ನ್ಯಾಯಾಂಗ ಬಂಧನ ವಿಧಿಸಿದ್ದಾರೆ. ಬಳಿಕ ಬಿಗಿ ಪೊಲೀಸ್ ಬಂದೋಬಸ್ತ್‌ನಲ್ಲಿ ಅವರನ್ನು ಮಂಗಳೂರಿನ ಜೈಲಿಗೆ ಕರೆದೊಯ್ಯಲಾಯಿತು.
ಸಂಪರ್ಕಕ್ಕೆ ಸಿಕ್ಕಿರಲಿಲ್ಲ’
‘ಲಕ್ಷ್ಮಿ ಅವರು ಹಲವು ವರ್ಷಗಳಿಂದ ನಕ್ಸಲ್ ಚಟುವಟಿಕೆಗಳಿಂದ ದೂರವಿದ್ದು, ಆಂಧ್ರಪ್ರದೇಶದಲ್ಲಿ ನೆಲೆಸಿದ್ದರಿಂದ ಸಂಪರ್ಕಕ್ಕೆ ಸಿಕ್ಕಿರಲಿಲ್ಲ. ಈಚೆಗೆ ಆರು ಮಂದಿ ನಕ್ಸಲರು ಮುಖ್ಯವಾಹಿನಿಗೆ ಬಂದ ಬಳಿಕ ಸುದ್ದಿವಾಹಿನಿಗಳಲ್ಲಿ ಗಮನಿಸಿ ಈ ಶರಾಣಗತಿಯಾಗಲು ಸಮ್ಮತಿಸಿದ್ದರು.