ಹಿಂದಿವಾಲಾಗಳ ಬುಲ್ಡೋಜರ್ ಬಾಬಾ ಯೋಜನೆಯನ್ನು ಕನ್ನಡ ನಾಡಿನಲ್ಲಿ ಹೇರಿದ ಸುಪ್ರೀಂ ಕೋರ್ಟ್
ಡಾ ಬಸವರಾಜ್ ಇಟ್ನಾಳ,ಹಿರಿಯ ಪತ್ರಕರ್ತರು
ಸನ್ಮಾನ್ಯ ಸಿದ್ದರಾಮಯ್ಯ ಮತ್ತು ಸನ್ಮಾನ್ಯ ಡಿಕೆ ಶಿವಕುಮಾರ್ ಅವರೇ, ಬುಲ್ಡೋಜರ್ ಬಾಬಾ ಯೋಜನೆ ಕರ್ನಾಟಕದಲ್ಲಿ ಆತ್ಮ ಹತ್ಯೆಗಳ ಹೊಸ ಸರಣಿ ಆರಂಭಿಸುವ ರೂಪು ರೇಷೆ ತಮ್ಮ ಅಧಿಕಾರಿಗಳು ಸಿದ್ಧ ಪಡಿಸಿದ ಪರಿ ನೋಡಿ.
ಉತ್ತರ ಪ್ರದೇಶ ಈ ದೇಶದ ಅತ್ಯಂತ ಹಿಂದುಳಿದ ಮತ್ತು ಕಾನೂನುರಹಿತ ಪ್ರದೇಶ. ಎಲ್ಲೆಂದರಲ್ಲಿ ಕೊಲೆ ಸುಲಿಗೆ ರೇಪ್ ಇತ್ಯಾದಿಗಳು ಬಿಡಿ, ಕಿಡ್ನ್ಯಾಪ್ ಮಾಡಿ ಬ್ಲಾಕ್ ಮೇಲ್ ಮಾಡಿ ದುಡ್ಡು ಮಾಡುವುದೇ ಒಂದು ಉದ್ಯಮ. ಮತ್ತು ಈ ಉದ್ಯಮಕ್ಕೆ ರಾಜಕೀಯ ಆಶ್ರಯ, ಬೆಂಬಲ ಮತ್ತು ಪಾಲುದಾರಿಕೆ ಹೇರಳ. ಯಾರದೇ ಆಸ್ತಿ ಲಪಟಾಯಿಸಿ ಯಾವುದೇ ಬಿಲ್ಡಿಂಗ್ ಹೆಂಗೆ ಬೇಕು ಹಂಗೆ ಕಟ್ಟುವುದು ಈ ಉತ್ತರ ಪ್ರದೇಶದಲ್ಲಿ ಸರ್ವೇ ಸಮಾನ್ಯ. ನಂತರ ಇವರ ರಾಜಕಾರಣ ವಿರೋಧ ಮಾಡಿದಲ್ಲಿ ಬುಲ್ಡೋಜರ್ ಕಳಿಸಿ ಕಟ್ಟಡ ಬೀಳಿಸಿ ಸೇಡು ತೀರಿಸಿಕೊಳ್ಳುವುದು ಈಗ ಸಮಕಾಲೀನ ಇತಿಹಾಸ.
ಸದರಿ ಉತ್ತರ ಪ್ರದೇಶದಲ್ಲಿ ಆವಾಸ್ ಮತ್ತು ವಿಕಾಸ ನಿಗಮದ ಒಂದು ಜಾಗೆಯಲ್ಲಿ ಇದ್ದ ಕಟ್ಟಡವನ್ನು ರಾಜೇಂದ್ರ ಕುಮಾರ್ ಬರ್ಜಾತಿಯಾ ಎಂಬ ಮಾರವಾಡಿ ಖರೀದಿಸಿ, ಅಲ್ಲಿನ ಅಧಿಕಾರಿಗಳಿಗೆ ಲಂಚ ಕೊಟ್ಟು ರಾಜಕೀಯ ವಶೀಲಿ ಉಪಯೋಗಿಸಿಕೊಂಡು ಅದರ ನಕ್ಷೆ ಉಪಯೋಗ ರೀತಿ ಇತ್ಯಾದಿ ಬದಲಿಸಿಕೊಂಡು ಬೇರೆಯೇ ತರದ ಕಟ್ಟಡ ಕಟ್ಟುತ್ತಾನೆ. ಅದಕ್ಕೆ ನೋಟೀಸು ಇತ್ಯಾದಿ ಕೊಟ್ಟ ನಿಗಮ ಎಲ್ಲವನ್ನೂ ಸಲೀಸಾಗಿಸುತ್ತದೆ. ಹೊಸ ಕಟ್ಟಡ ಮುಗಿದ ಮೇಲೆ ಈ ಬರ್ಜಾತೀಯನ ವೈರಿಗಳು ನಿಗಮಕ್ಕೆ ದೂರು ಕೊಟ್ಟು ಒತ್ತಡ ಹೇರಿ ಹೊಸ ಕಟ್ಟಡವನ್ನು ಕೆಡವಲು ಆದೇಶ ತರುತ್ತಾರೆ. ಇದು ಉತ್ತರ ಪ್ರದೇಶದ ಹೈ ಕೋರ್ಟಿಗೆ ಹೋಗಿ ನಂತರ ಸುಪ್ರೀಂ ಕೋರ್ಟಿಗೆ ಹೋಗಿ ಕಟ್ಟಡ ಕೆಡವುವುದೇ ಸೈ ಅಂತ ಆರ್ಡರ್ ಆಗುತ್ತದೆ.
ಅದೆಲ್ಲ ಸರಿ ಆದರೆ ಕೇಂದ್ರ, ರಾಜ್ಯ ಮತ್ತು ಸ್ಥಳೀಯ ಎಂಬ ಮೂರು ಸ್ಥರದ ಸಾಂವಿಧಾನಿಕ ಹಕ್ಕು ಬಾಧ್ಯತೆ ಇರುವ ಪ್ರಜಾಪ್ರಭುತ್ವದಲ್ಲಿ ಅಲ್ಲಿ ಎಲ್ಲಿಯೋ ಮೀರತ್ ಪಟ್ಟಣದಲ್ಲಿ ಯಾವುನೋ ಖದೀಮನ ಮೇಲೆ ಇವನ ವೈರಿಗಳು ಸೇಡು ತೀರಿಸಿಕೊಳ್ಳಲು ಮಾಡಿದ ಹುನ್ನಾರದ ಫಲಶ್ರುತಿ ಆದ ಈ ಆರ್ಡರ್ ಮೀರತ್ ಮತ್ತು ಉತ್ತರ ಪ್ರದೇಶಕ್ಕೆ ಸೀಮಿತವಾಗಿ ಸುಪ್ರೀಂ ಕೋರ್ಟ್ ಹೊರಡಿಸಿಲ್ಲ. ಬದಲಾಗಿ ಅಖಿಲ ಭಾರತದ ಸಕಲ ರಾಜ್ಯ ಸರಕಾರಗಳಿಗೂ, ಎಲ್ಲಾ ಸ್ಥಳೀಯ ಸರಕಾರಗಳಿಗೂ, ವಾಣಿಜ್ಯ ಮತ್ತು ಖಾಸಗಿ ವ್ಯಕ್ತಿಗಳ ಸ್ವಂತ ನಿವಾಸಗಳಿಗೂ ಅನ್ವಯ ಆಗುವಂತೆ ಆದೇಶ ಕೊಡುತ್ತದೆ.
ಯೋಗಿ ಬಾಬಾನ ಬುಲ್ಡೋಜರ್ ಯೋಜನೆ ಸುಪ್ರೀಂ ಕೋರ್ಟಿನಲ್ಲಿ ತಪರಾಕಿ ಹೊಡೆಸಿಕೊಂಡು ಮಕಾಡೆ ಮಲಗಿದ ಒಂದೆರಡೇ ತಿಂಗಳುಗಳಲ್ಲಿ ಇಡೀ ದೇಶದಲ್ಲಿ ಬುಲ್ಡೋಜರ್ ಭಯೋತ್ಪಾದನೆ ಬಂದಿದ್ದು ಹೀಗೆ. ಉತ್ತರದ, ಹಿಂದಿವಾಲಗಳು ನಮ್ಮ ಮೇಲೆ ಸೇಡು ತೀರಿಸಿಕೊಳ್ಳುವುದು ಹೀಗೆ.
ಸರಿ ಆರ್ಡರ್ ಬಂತಾ. ನಮ್ಮ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಇದು ರಾಜ್ಯ ಸರಕಾರದ ಮತ್ತು ಸ್ಥಳೀಯ ಸಂಸ್ಥೆಗಳ ಸಾಂವಿಧಾನಿಕ ಸ್ವಾಯತ್ತತೆ ಮೇಲೆ ದಾಳಿ ಮಾಡಿದಂತೆ ಆಗುತ್ತದೆ. ಇದು ಕೇವಲ ಉತ್ತರ ಪ್ರದೇಶದ ಮೀರತ್ ಪಟ್ಟಣಕ್ಕೆ ಸೀಮಿತ ವಿಚಾರ ಅಂತ ಷರಾ ಬರೆದು ಕೈ ತೊಳೆದುಕೊಳ್ಳುವುದಿಲ್ಲ. ಮುಖ್ಯಮಂತ್ರಿಗಳ ಗಮನಕ್ಕೆ ತಂದು ಸರಿಯಾಗಿ ಚರ್ಚೆಯನ್ನೂ ಮಾಡುವುದಿಲ್ಲ. ಬದಲಾಗಿ ಮಕ್ಕಿ ಕಾ ಮಕ್ಕಿ ಇದನ್ನೇ ಎಲ್ಲಾ ಸ್ಥಳೀಯ ಸಂಸ್ಥೆ ಆಯುಕ್ತರಿಗೆ ಆರ್ಡರ್ ಮಾಡಿ ಎಲ್ಲೆಲ್ಲಿ ಯಾವ ಬಿಲ್ಡಿಂಗ್ ಹೆಂಗೆಂಗೆ ಕಟ್ಟುತ್ತಿದ್ದಾರೆ ಅದು ವಾಣಿಜ್ಯವೋ, ಬಿಲ್ಡರ್ ಉದ್ಯಮವೋ, ಬ್ಯಾಂಕ್ ಸಾಲ ಮಾಡಿಕೊಂಡು ಸ್ವಂತ ವಾಸಕ್ಕೆ ಖಾಸಗಿ ವ್ಯಕ್ತಿ ಕಟ್ಟುತ್ತಿರುವ ಮನೆಯೋ ಯಾವುದನ್ನೂ ನೋಡದೆ ಬುಲ್ಡೋಜರ್ ನುಗ್ಗಿಸಲು ಆದೇಶ ಕೊಡುತ್ತಾರೆ. ತಪ್ಪಿದಲ್ಲಿ ಸ್ಥಳೀಯ ಅಧಿಕಾರಿಗಳ ಮೇಲೆ ಕ್ರಮ ಜರುಗಿಸಲು ಆದೇಶ ನೀಡುತ್ತಾರೆ.
ಇದನ್ನು ಮತ್ತೆ ಮಕ್ಕಿ ಕಾ ಮಕ್ಕಿ ಕಾಪಿ ಪೇಸ್ಟ್ ಮಾಡಿಕೊಂಡ ಕಾರ್ಪೊರೇಷನ್ ಕಮೀಷನರುಗಳು ಎಲ್ಲಾ ವಾರ್ಡಿನ ಇಂಜಿನೀಯರುಗಳನ್ನು ಕರೆದು ಮನೆ ಒಡೆಯುವ ಟಾರ್ಗೆಟ್ ಕೊಡುತ್ತಾರೆ. ಮನೆ ಒಡೆಯದಿದ್ದಲ್ಲಿ ನಿಮ್ಮನ್ನು ಅಮಾನತ್ತುಗೊಳಿಸುವುದಾಗಿ ಹೆದರಿಸುತ್ತಾರೆ. ಹೆದರಿ ತಲೆ ಇಲ್ಲದ ಕೋಳಿಗಳಾದ ಈ ಇಂಜಿನೀಯರುಗಳು ಎರ್ರಾ ಬಿರ್ರಿ ನೋಟೀಸು ಕೊಟ್ಟು ಬೆಂಗಳೂರಲ್ಲಿ ಮನೆ ಮುರಿಯುವ ಕೆಲಸದಲ್ಲಿ ನಿರತರಾಗಿದ್ದಾರೆ. ಕಳೆದ ಒಂದು ತಿಂಗಳಲ್ಲಿ ಎಂಟು ಸ್ವಂತ ವಾಸದ ಮನೆಗಳನ್ನು ನಿರ್ನಾಮ ಮಾಡಿ ಕುಟುಂಬಗಳು ಬೀದಿಗೆ ಬಂದಿವೆ. ಬ್ಯಾಂಕ್ ಸಾಲ ಕಟ್ಟುವುದು ಹೇಗೆ ಎಂಬ ಒತ್ತಡದಲ್ಲಿ ಆತ್ಮಹತ್ಯಾ ಚಿಂತನೆಯಲ್ಲಿವೆ.
ಈ ಮನೆ ಮುರುಕ ಆರ್ಡರ್ ಪಾಲಿಸದ ಅನೇಕ ಇಂಜಿನೀಯರುಗಳು ಅಮಾನತ್ತುಗೊಂಡಿದ್ದಾರೆ.
ಮನೆ ಅನ್ನುವುದು ಈ ದೇಶದ ಪ್ರತಿಯೊಬ್ಬನ ಮೂಲಭೂತ ಹಕ್ಕು. ಹಾಗೆಯೇ ಅದು ಒಂದು ಇಂಜಿನೀಯರಿಂಗ್ ಕೆಲಸ. ಒಂದು ಮಹಡಿ ಜಾಸ್ತಿ ಆಗಿದೆ ಅಂತ ನೆಲಮಹಡಿ ತಗೆದರೆ ಇಡೀ ಕಟ್ಟಡ ಬಿದ್ದು ಹೋಗುತ್ತದೆ. ಮೇಲ್ಮಹಡಿ ಮಾತ್ರ ತಗೆದರೆ ಉಳಿಕೆ ಕಟ್ಟಡ ದುರ್ಬಲಗೊಂಡು ಬಿದ್ದು ಹೋಗುತ್ತದೆ. ಇದೆಲ್ಲ ಕಾನೂನನ್ನು ವಾಣಿಜ್ಯ ಕಟ್ಟಡ, ಬಿಲ್ಡರುಗಳು ಮಾರಲು ಕಟ್ಟುವ ಅಪಾರ್ಟ್ಮೆಂಟುಗಳಿಗೆ ಅನ್ವಯಿಸದ ನಮ್ಮ ನಗರ ಪಾಲಿಕೆಗಳು ಖಾಸಗಿ ವ್ಯಕ್ತಿಗಳು ಬ್ಯಾಂಕ್ ಸಾಲ ಮಾಡಿಕೊಂಡು ಕನಸಿನ ಮನೆಯನ್ನು ಕಟ್ಟುವಾಗ ಬಂದು ಕಟ್ಟಡ ಕೆಡವುತ್ತೇವೆ ಅಂತ ಹೊರಟರೆ ಸಾಮಾನ್ಯ ಮಾಧ್ಯಮ ವರ್ಗ ಆತ್ಮಹತ್ಯೆ ಮಾಡಿಕೊಳ್ಳಬೇಕಾಗುತ್ತದೆ. ಇದನ್ನೇ ಉಪಯೋಗಿಸಿಕೊಂಡು ಸಾಮಾನ್ಯ ಜನರನ್ನು ಬ್ಲಾಕ್ ಮೇಲ್ ಮಾಡುವ ಒಂದು ಉದ್ಯಮವೇ ಇದೆ.
ಕಾನೂನು ಕೂಡ ಬುಲ್ಡೋಜರ್ ಇದ್ದಂತೆಯೇ. ಕಾನೂನು ಮತ್ತು ಬುಲ್ಡೋಜರ್ ಎರಡು ಕೂಡ ತಾನೇ ತಾನಾಗಿ ಕೆಲಸ ಮಾಡುವುದಿಲ್ಲ. ಎರಡಕ್ಕೂ ಜೀವ ಇಲ್ಲ. ಎರಡಕ್ಕೂ ವಿವೇಚನೆ ಇಲ್ಲ. ಕಾನೂನು ಮತ್ತು ಬುಲ್ಡೋಜರ್ ನಡೆಸುವ ಜನಕ್ಕೆ ಜೀವ ಇದೆ. ವಿವೇಚನೆ ಇದೆ. ಎಲ್ಲಕ್ಕಿಂತ ಹೆಚ್ಚಾಗಿ ಮಾನವೀಯತೆ ಇದೆ. ಇದನ್ನೆಲ್ಲ ಒಳಗೊಂಡ ಚಿಂತಕರೇ ಸಂವಿಧಾನ ಬರೆದು ಕೇಂದ್ರ ರಾಜ್ಯ ಮತ್ತು ಸ್ಥಳೀಯ ಎಂಬ ಮೂರೂ ಸ್ಥರದ ಸರಕಾರಗಳಿಗೆ ಅವರವರದೇ ಸ್ವಾಯತ್ತತೆ ಕೊಟ್ಟಿರುವುದು. ಈ ಸಾಂವಿಧಾನಿಕ ಸ್ವಾಯತ್ತತೆಯನ್ನು ಬುಲ್ಡೋಜ್ ಮಾಡುವ ಸ್ವಾತಂತ್ರ್ಯ ಸುಪ್ರೀಂ ಕೋರ್ಟಿಗೂ ಇಲ್ಲ. ಮೀರತ್ ಪಟ್ಟಣದ ಯೋಗಿ ಬಾಬಾನ ಕೆಸರು ಬೆಂಗಳೂರಿಗೂ ತರಬೇಕಾದ ಅಗತ್ಯ ಇಲ್ಲ.
ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಮತ್ತೊಂದು ಸರಣಿ ಆತ್ಮ ಹತ್ಯೆಯನ್ನು ಸಹಿಸಲಾರರು ಅಂತ ನಂಬೋಣ.