ಶಾಪಗ್ರಸ್ತ ವ್ಯವಸ್ಥೆಯೂ,ಕ್ರಿಮಿನಲ್ ಭಂಡತನವೂ
ಸಿ.ರುದ್ರಪ್ಪ,ರಾಜಕೀಯ ವಿಶ್ಲೇಷಕರು
‘ಜೈಲಿಗೆ ಕಳುಹಿಸಿದರೆ ಸರಿ ಹೋಗುತ್ತೆ..!’.ಈ ರೀತಿ ಹೈ ಕೋರ್ಟ್ ನ್ಯಾಯಾಂಗ ನಿಂದನೆ ಪ್ರಕಣವೊಂದರಲ್ಲಿ ಐಎಎಸ್ ಅಧಿಕಾರಿಯೊಬ್ಬರಿಗೆ ಕಳೆದ ವಾರ ಎಚ್ಚರಿಕೆ ನೀಡಿದೆ.ಈ ಹಿಂದೆಯೂ ಅಧಿಕಾರಿಗಳಿಗೆ ಹೈ ಕೋರ್ಟ್ ಛೀಮಾರಿ ಹಾಕಿದೆ.ಉದಾಹರಣೆಗೆ ಮುನಿಸಿಪಲ್ ಸಂಸ್ಥೆಗಳಲ್ಲಿ ಸಿ ಮತ್ತು ಡಿ ಗ್ರೂಪ್ ಹುದ್ದೆಗಳನ್ನು ವಿಲೀನಗೊಳಿಸುವುದಕ್ಕೆ ಸಂಬಂಧಿಸಿದಂತೆ ಏಕ ಸದಸ್ಯ ನ್ಯಾಯ ಪೀಠದ ಆದೇಶ ಜಾರಿಗೆ ನಿರ್ಲಕ್ಷ್ಯ ವಹಿಸಿದ್ದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯವರ ಬಗ್ಗೆ ಮುಖ್ಯ ನ್ಯಾಯಮೂರ್ತಿ ಋತುರಾಜ್ ಅವಸ್ಥಿಯವರ ವಿಭಾಗೀಯ ಪೀಠ”ಐಎಎಸ್ ಅಧಿಕಾರಿಯನ್ನು ಜೈಲಿಗೆ ಕಳುಹಿಸುವ ಸಮಯ ಬಂದಿದೆ”ಎಂದು ತೀವ್ರ ಅಸಮಾಧಾನವನ್ನು ವ್ಯಕ್ತಪಡಿಸಿತ್ತು.’
ಎಂಜಿನಿಯರ್ ಜೈಲಿಗೆ ಕಳಿಸಿದರೆ ಬುದ್ದಿ ಬರಲಿದೆ’ಎಂದು ರಸ್ತೆ ಗುಂಡಿ ಮುಚ್ಚುವ ಬಗ್ಗೆ ತಾತ್ಸಾರ ತೋರಿದ ಬಿಬಿಎಂಪಿ ಎಂಜಿನಿಯರ್ ಗಳಿಗೆ ಋತುರಾಜ್ ಅವಸ್ಥಿ ನೇತೃತ್ವದ ವಿಭಾಗೀಯ ಪೀಠ ಎಚ್ಚರಿಕೆ ನೀಡಿತ್ತು.ಆದರೆ ಇಂತಹ ಎಚ್ಚರಿಕೆಗಳಿಗೆ ಅಧಿಕಾರಿಗಳು ಸಾಮಾನ್ಯವಾಗಿ ಕೇರ್ ಮಾಡುವುದಿಲ್ಲ.ಆದರೆ ಕಳೆದ ವಾರದ ಪ್ರಕರಣದಲ್ಲಿ ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಠಾರಿಯಾ’ಸರ್,ವ್ಯವಸ್ಥೆ ತುಂಬಾ ಕೆಟ್ಟದಾಗಿದೆ…ಸರ್ಕಾರ ತನ್ನೆಲ್ಲಾ ಪ್ರಯತ್ನ ಮಾಡುತ್ತಿದೆ..ಭ್ರಷ್ಟಾಚಾರ ನಿರ್ಮೂಲನೆಗೆ ಶ್ರಮಿಸುತ್ತಿದ್ದೇವೆ”ಎಂದು ನ್ಯಾಯ ಪೀಠಕ್ಕೆ ವಿವರಣೆ ನೀಡಿರುವುದು ಗಮನಾರ್ಹವಾಗಿದೆ.ವ್ಯವಸ್ಥೆಯ ಭಾಗವಾಗಿರುವವರೇ ವ್ಯವಸ್ಥೆಯನ್ನು ಹೀಗೆ ಟೀಕಿಸುತ್ತಿರುವುದು ವಿಚಿತ್ರವಾಗಿದೆ.ವ್ಯವಸ್ಥೆಯೆಂದರೆ ಏನು?ಅದೊಂದು “ಅಧಿಕಾರಿಗಳು,ನೌಕರರು,ರಾಜಕಾರಣಿಗಳು,ಬಲಾಢ್ಯರು,ಗುತ್ತಿಗೆದಾರರು ಮತ್ತು ಬ್ರೋಕರ್ ಗಳ ಅಪವಿತ್ರ ಕೂಟ”.ಮೊದಲು,”ವ್ಯವಸ್ಥೆ ಜಡ್ಡುಗಟ್ಟಿದೆ”ಎನ್ನುತ್ತಿದ್ದೆವು.ಅದು ಈಗ ಒಂದು ರೀತಿಯ ಕ್ರಿಮಿನಲ್ ಸ್ವರೂಪದ ಭಂಡತನವನ್ನು ಬೆಳೆಸಿಕೊಳ್ಳುತ್ತಿದೆ.ಒಂದೆರಡು ಪ್ರಕರಣಗಳನ್ನು ಉಲ್ಲೇಖಿಸಬಹುದು.ಬೆಂಗಳೂರಿನ ಹೋಪ್ ಫಾರ್ಮ್ ಬಳಿ ತಾಯಿ ಮತ್ತು ಮಗು ವಿದ್ಯುತ್ ತಂತಿಗೆ ಸಿಲುಕಿ ಜೀವಂತವಾಗಿ ದಹನವಾಗಿದ್ದರು.ಬೆಸ್ಕಾಂ ಇಂಜಿನಿಯರ್ ಗಳ ವಿರುದ್ಧ ಕ್ರಿಮಿನಲ್ ನಿರ್ಲಕ್ಷ್ಯ ದ ಪ್ರಕರಣವನ್ನು ದಾಖಲಿಸುವ ಬದಲು ಕೇವಲ ಕರ್ತವ್ಯದಲ್ಲಿ ನಿರ್ಲಕ್ಷ್ಯ ದ ಪ್ರಕರಣವನ್ನು ದಾಖಲಿಸಿ ಸ್ಟೇಷನ್ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ.ಅದೇ ರೀತಿ 16 ಯುವ ಕಾರ್ಮಿಕರು ಜೀವಂತವಾಗಿ ದಹನವಾದ ಅತ್ತಿಬೆಲೆ ಪಟಾಕಿ ದುರಂತದ ಬಗ್ಗೆ ತೀವ್ರ ಆಘಾತವನ್ನು ವ್ಯಕ್ತಪಡಿಸಿದ್ದ ಮುಖ್ಯಮಂತ್ರಿ ಮತ್ತು ಗೃಹ ಮಂತ್ರಿಯವರು ಅಧಿಕಾರಿಗಳ ನಿರ್ಲಕ್ಷ್ಯವನ್ನು ಮೇಲ್ನೋಟಕ್ಕೆ ಗುರ್ತಿಸಿದ್ದರು ಮತ್ತು ಸಿ ಐ ಡಿ ತನಿಖೆಗೆ ಆದೇಶಿಸಿದ್ದರು.ಎರಡು ವರ್ಷಗಳಾಗುತ್ತಾ ಬಂದಿದ್ದರೂ ಇನ್ನೂ ಸಿ ಐ ಡಿ ತನಿಖೆಯ ವರದಿ ಬಹಿರಂಗವಾಗಿಲ್ಲ.ಪ್ರಾಯಶಃ ಇಡೀ ಪ್ರಕರಣವನ್ನು ಮುಚ್ಚಿ ಹಾಕುವ ಪ್ರಯತ್ನ ನಡೆಯುತ್ತಿದೆಯೇ ಎನ್ನುವ ಅನುಮಾನ ಬರುತ್ತಿದೆ.ಅಂದರೆ ಇಡೀ ವ್ಯವಸ್ಥೆ ಬಹುತೇಕ ಅನ್ಯಾಯ ಮಾಡಿದವರನ್ನೇ ರಕ್ಷಿಸುತ್ತಾ ಹೋಗುತ್ತದೆ.ಈ ಎರಡೂ ಪ್ರಕರಣಗಳ ಸಂತ್ರಸ್ತರಿಗೆ ದುಬಾರೀ ವಕೀಲರು ಅಥವಾ ಯಾವುದೇ ಜಾತಿ ಮತಗಳ ಸಂಘಟನೆಗಳ ಬೆಂಬಲವಿಲ್ಲದೆ ನ್ಯಾಯಕ್ಕಾಗಿ ಹೋರಾಡುವ ಶಕ್ತಿಯೂ ಇಲ್ಲ.ಕಮಲಾ ಹಾಸನ್ ಅವರ ಇಂಡಿಯನ್ ಸಿನೆಮಾದಲ್ಲಿ ಒಂದು ದೃಶ್ಯ ಈ ರೀತಿಯಿದೆ:”ಬಡ ಮಹಿಳೆಯೊಬ್ಬರು ಸರ್ಕಾರೀ ಕಚೇರಿಗಳಿಗೆ ವರ್ಷಾನುಗಟ್ಟಲೆ ಅಲೆದಾಡಿ ಕೊನೆಗೂ ನ್ಯಾಯ ಸಿಗದೇ ಹತಾಶರಾಗಿ ಅಧಿಕಾರಿಗಳ ಮುಂದೆ “ನಿಮ್ಮ ವಂಶ ನಿರ್ವಂಶ ವಾಗಲಿ”ಎಂದು ಹಿಡಿ ಮಣ್ಣನ್ನು ತೂರುತ್ತಾ ಶಾಪ ಹಾಕುತ್ತಾರೆ.
ಅಂದರೆ “ಹಿಂದಿನ ಜನ್ಮದ ಪಾಪ ಕಾರ್ಯದ ಫಲವನ್ನು ಈಗ ಅನುಭವಿಸುತ್ತಿದ್ದೇವೆ”ಎಂದು ಸಾಮಾನ್ಯ ಜನರು ಶಾಪ ಹಾಕಿ ನಿರುಮ್ಮಳವಾಗಿಬಿಡುತ್ತಾರೆ.ಈ ಕ್ರೂರ ಸತ್ಯವನ್ನು ಹಿರಿಯ ರಾಜಕಾರಣಿ ಮತ್ತು ಸಚಿವ ಹುಚ್ಚಮಾಸ್ತಿ ಗೌಡರು ಐವತ್ತು ವರ್ಷಗಳ ಹಿಂದೆಯೇ ಮನಗಂಡಿದ್ದರು.1974 ಜೂನ್ 25 ರಂದು ಅವರು ವ್ಯಕ್ತ ಪಡಿಸಿದ್ದ ಅಭಿಪ್ರಾಯ ಈ ರೀತಿ ಇತ್ತು:”ಇಂದು ಅನೇಕ ಕಷ್ಟ ಕಾರ್ಪಣ್ಯಗಳನ್ನು ಎದುರಿಸುತ್ತಿರುವ ಜನಸಾಮಾನ್ಯರ ತಾಳ್ಮೆಯ ಮೂಲ ಯಾವುದು?..ಕಷ್ಟಕ್ಕೆಲ್ಲಾ ತನ್ನ ದುರದೃಷ್ಟ ಕಾರಣ ಎನ್ನುವ ಹತಾಶ ಭಾವನೆ.ಸರ್ಕಾರಗಳು ಉಳಿದಿರುವುದಕ್ಕೂ ಅದೇ ಕಾರಣ.ಇಲ್ಲದಿದ್ದರೆ ದಂಗೆ ಏಳುತ್ತಿದ್ದರು.2022 ಅಕ್ಟೊಬರ್ 19 ರಂದು ನ್ಯಾಯಮೂರ್ತಿ ಕೃಷ್ಣ ದೀಕ್ಷಿತ್ ಅವರಿದ್ದ ಏಕ ಸದಸ್ಯ ನ್ಯಾಯ ಪೀಠ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಸರ್ಕಾರೀ ಅಧಿಕಾರಿಗಳು ಮತ್ತು ನೌಕರರ ಕಾರ್ಯವೈಖರಿ ವಿರುದ್ಧ ವ್ಯಕ್ತಪಡಿಸಿದ್ದ ಕಳವಳಕಾರಿ ಅಭಿಪ್ರಾಯಗಳು ಕೂಡಾ ಇದನ್ನೇ ಪುಷ್ಠಿಕರಿಸುತ್ತವೆ:”

ನ್ಯಾಯಮೂರ್ತಿ ಕೃಷ್ಣ ಎಸ್ ದೀಕ್ಷಿತ್
ಅಧಿಕಾರಿಗಳು ಸಾರ್ವಜನಿಕರೊಂದಿಗೆ ನಡೆದುಕೊಳ್ಳುತ್ತಿರುವ ಪರಿ ಯಾವಾಗ ಸ್ಪೋಟಗೊಳ್ಳುತ್ತೋ ಗೊತ್ತಿಲ್ಲ..ನಮ್ಮ ಜನ ಇನ್ನೂ ಸುಮ್ಮನಿದ್ದಾರೆ.ಅವರೆಲ್ಲಾ ಭಾಳಾ ಸಜ್ಜನರಿದ್ದಾರೆ.ಒಂದು ವೇಳೆ ನಮ್ಮಲ್ಲಿರುವ ವ್ಯವಸ್ಥೆ ಏನಾದರೂ ಫ್ರಾನ್ಸ್,ಜರ್ಮನಿಯಂತಹ ದೇಶಗಳಲ್ಲಿ ಇದ್ದಿದ್ದರೆ ಅಲ್ಲಿನ ಜನರು ವ್ಯವಸ್ಥೆಯ ಪ್ರಮುಖರನ್ನು,ಅವರು ವಾಕಿಂಗ್ ಹೋಗುವಾಗ ಇಲ್ಲವೇ ಕಾರುಗಳಲ್ಲಿ ತೆರಳುವಾಗ ಹೊರಗೆಳೆದು ಅಧಿಕಾರಿಗಳು,ನ್ಯಾಯಮೂರ್ತಿಗಳು,ವಕೀಲರೆನ್ನದೆ ಬಾರಿಸುತ್ತಿದ್ದರು”.