ಚಿಲಿಪಿಲಿ ಗುಬ್ಬಚ್ಚಿ ಮತ್ತು ಭಾವನಾತ್ಮಕ ಸಂಬಂಧದ ಕೊಂಡಿ….

Share

 

ಚಿಲಿಪಿಲಿ ಗುಬ್ಬಚ್ಚಿ ಮತ್ತು ಭಾವನಾತ್ಮಕ ಸಂಬಂಧದ ಕೊಂಡಿ….

ಗುಬ್ಬಚ್ಚಿಗಳಿಲ್ಲದ ಮನೆ ಇಲ್ಲ ಎಂಬ ಮಾತು ಸುಮಾರು 25 ವರ್ಷಗಳ ಹಿಂದೆಯೂ ಚಾಲ್ತಿಯಲ್ಲಿತ್ತು. ಪ್ರತಿ ಮನೆಯಂಗಳಗಳಲ್ಲಿ, ಪೇಟೆ ಬೀದಿಯ ಅಂಗಡಿಗಳ ಮುಂಭಾಗದಲ್ಲಿ ಗುಬ್ಬಚ್ಚಿಗಳ ಚಿಲಿಪಿಲಿ ಕೇಳುತ್ತಲೇ ಇತ್ತು. ಅವುಗಳ ಪುಕ ಪುಕ ಓಡಾಟಗಳೊಂದಿಗೆ ಬಾಲ್ಯದಲ್ಲಿ ಅದೆಷ್ಟೋ ಕ್ಷಣಗಳನ್ನು ಅನುಭವಿಸುವ ಮಜಾ ಮಕ್ಕಳಿಗಿತ್ತು. ಆದರೆ ಮನೆಯ ಸದಸ್ಯರಂತೆಯೇ ಹಾರಾಡಿಕೊಂಡು, ಚಿಲಿಪಿಲಿ ಎನ್ನುತ್ತಿದ್ದ ಪುಟ್ಟ ಪುಟ್ಟ ಗುಬ್ಬಚ್ಚಿಗಳನ್ನೂ ಸಹ ಇಂದಿನ ಮಕ್ಕಳಿಗೆ ಸಿಂಹ, ಹುಲಿ ಎಂದು ಚಿತ್ರಗಳನ್ನು ತೋರಿಸುವ ಸಾಲಿಗೆ ಗುಬ್ಬಚ್ಚಿಗಳು ಸೇರಿರುವುದು ಬೇಸರದ ಸಂಗತಿ. ಜೀವ ಸಂಕುಲದ ಉಳಿವಿನ ಕುರಿತು ಜಾಗೃತಿ ಮೂಡಿಸುವ ಹಾಗೂ ಅವುಗಳಿಗಾಗುತ್ತಿರುವ ಭೀತಿಯನ್ನು ತಡೆಗಟ್ಟುವ ಹಿನ್ನೆಲೆಯಲ್ಲಿ ಮಾ.20ರಂದು ವಿಶ್ವ ಗುಬ್ಬಚ್ಚಿಗಳ ದಿನವಾಗಿ ಆಚರಿಸಲಾಗುತ್ತಿದೆ.
ಇತರ ಪಕ್ಷಿಗಳಿಗಿಂತ ಗುಬ್ಬಿ ನಮಗೆ ಹೆಚ್ಚು ಪರಿಚಿತ, ಹೆಚ್ಚು ಆತ್ಮೀಯ. ಅಮ್ಮ ಅಕ್ಕಿ ಆರಿಸುವಾಗ ಚೀಂವ್, ಚೀಂವ್ ಎಂದು ಒಂದಿನಿತೂ ಅಂಕೆ-ಶಂಕೆ-ಹೆದರದೆ, ಕಾಳುಗಳನ್ನು ಕಬಳಿಸುತ್ತಾ ಕೈಗೆ ಸಿಗದಂತೆ ಸುರಕ್ಷಿತ ಅಂತರವನ್ನು ಕಾಪಾಡಿಕೊಂಡು ಹತ್ತಿರ ಹೋದಲ್ಲಿ ಪುರ್ರನೆ ಹಾರುತ್ತಿತ್ತು ಪುಟಾಣಿ ಗುಬ್ಬಿ. ನಿರುಮ್ಮಳವಾಗಿ ದೇವರ ಹಿಂದಿನ ಪಟದಲ್ಲಿ, ಅಟ್ಟದಲ್ಲಿ ತಮ್ಮದೇ ಮನೆ ಮಾಡಿಕೊಂಡು ಎಷ್ಟೇ ಓಡಿಸಿದರೂ ಮತ್ತೆ ಮತ್ತೆ ಮನೆಯೊಳಗೆ ನುಗ್ಗಿ ಸಂಸಾರ ಮಾಡಿಕೊಂಡಿರುತ್ತಿದ್ದ ಛಲ ಬಿಡದ ತ್ರಿವಿಕ್ರಮರು.

ಇಷ್ಟೇ ಅಲ್ಲ, ದಿನಬೆಳಗಾದರೆ ಮನೆಯೊಳಗೆ ಬಂದು ಲೂಟಿಮಾಡುತ್ತಾ, ಸಂಜೆಯಾದೊಡನೆ ಬೀದಿ ಬದಿಯ ವಿದ್ಯುತ್ ತಂತಿಯ ಮೇಲೆ ತೋರಣದಂತೆ ಸಾಲಾಗಿ ಕುಳಿತು ಮೀಟಿಂಗ್ ಮಾಡುತ್ತಿದ್ದ ಪರಿ ನೋಡಲು ಸೊಗಸಿತ್ತು. ಚಿಕ್, ಚಿಕ್ ಚೀಂವ್, ಚೀಂವ್ ಸಂವಾದ ನೋಡಲು ಕೇಳಲು ಇಂಪಿತ್ತು. ಎಲ್ಲಿ ನೀರು ಕಂಡರೂ ಪಟಪಟನೆ ರೆಕ್ಕೆ ಅರಳಿಸಿ ಮುಳುಗುಹಾಕಿ ಸ್ನಾನ ಮಾಡಿ ನಮಗೆ ಶುದ್ಧತೆಯ ಪಾಠ ಹೇಳಿಕೊಡುತ್ತಿದ್ದವು. ಮನೆಮನೆಯಲಿ ಚಿಲಿಪಿಲಿ ಗುಟ್ಟುತ್ತಿದ್ದ ಗುಬ್ಬಚ್ಚಿ, ಬಾಲ್ಯದ ನಿತ್ಯ ಸಂಗತಿಯಾಗಿದ್ದ ಗುಬ್ಬಚ್ಚಿ ಇದೀಗ ನಮ್ಮ ಮಕ್ಕಳ ಕಾಲಕ್ಕೆ ಅಪರೂಪದ ಅತಿಥಿಗಳಾಗಿವೆ. ನಾವಿನ್ನೂ ಎಚ್ಚರಗೊಳ್ಳದಿದ್ದರೆ ಹೇಗೆ?

ಗುಬ್ಬಚ್ಚಿಯದು ಪ್ಯಾಸರೀನ್ ಕುಟುಂಬ. ಇದು ಎಲೆಲ್ಲೂ ಕಣ್ಣಿಗೆ ಬೀಳುವ ಒಂದು ಹಕ್ಕಿ. ಗುಬ್ಬಚ್ಚಿಗಳು ಯಾವಾಗಲು ಜೋಡಿಯಾಗಿರುತ್ತದೆ. ಅವುಗಳ ಬಣ್ಣ ಕಂದು. ಬೆನ್ನು ಮತ್ತು ಪಕ್ಕಗಳಲ್ಲಿ ಬಿಳಿ ಮತ್ತು ಕಪ್ಪು ಬಣ್ಣಗಳು ಮಿಶ್ರಿತವಾಗಿರುತ್ತದೆ. ಮುಂಭಾಗ ಬೆಳ್ಳಗಿರುತ್ತದೆ. ಗಂಡು ಗುಬ್ಬಿಗೆ ಗಂಟಲ ಮೇಲೆ ಕಪ್ಪು ಕಲೆ ಇರುತ್ತದೆ. ಇವು ಧಾನ್ಯಗಳನ್ನು, ಹುಳು-ಹುಪ್ಪಟೆ ಮತ್ತು ಗಿಡದ ಎಳೆ ಕುಡಿಗಳನ್ನು ತಿನ್ನುತ್ತವೆ. ಬೇಯಿಸಿದ ಆಹಾರ ಸಹ ಅದಕ್ಕೆ ತುಂಬ ಇಷ್ಟ. ತಾಯಿ ಗುಬ್ಬಿ ನಸು ಹಸಿರು ಮಿಶ್ರಿತ ಬಿಳಿ ಬಣ್ಣದ ಮೂರು ಅಥವ ನಾಲ್ಕು ಮೊಟ್ಟೆಗಳನ್ನು ವರುಷದಲಿ ಮೂರ್ನಾಲ್ಕು ಬಾರಿ ಇಡುತ್ತದೆ. ಗುಬ್ಬಚ್ಚಿಯ ಕಾಲುಗಳು ತೀರ ತೆಳ್ಳಗಿರುವದರಿಂದ ಅದು ತನ್ನ ಮೈಭಾರವನ್ನು ಹೊರಲಾರದು. ಗುಬ್ಬಿಗಳು ಕೂಡ ವಿಶ್ವವ್ಯಾಪಿ. ಗುಬ್ಬಿ ಕಿಟಕಿಯ ಅಡಿಭಾಗ, ಬಾಗಿಲಿನ ಮೇಲ್ಭಾಗ, ಅಲ್ಮೇರಾ, ಮನೆಯ ಮೂಲೆಗಳು, ಗೋಡೆಗಳಲ್ಲಿನ ರಂಧ್ರಗಳು ಎಲ್ಲಿ ಜಾಗ ಸಿಕ್ಕರೆ ಅಲ್ಲಿ ಗೂಡು ಕಟ್ಟುತ್ತದೆ. ಮರಿ ಇಡುವ ಕಾಲ ಬಂದಾಗ ಒಟ್ಟಾಗಿಯೇ ಗೂಡು ಕಟ್ಟಿ, ಮೊಟ್ಟೆ ಇಟ್ಟು ಮರಿಮಾಡಿ ಆ ಮರಿಗಳಿಗೆ ಹಾರಲು ಕಲಿಸುವವರೆಗೆ ಆದರ್ಶ ದಂಪತಿಗಳಂತೆ ಜೊತೆಯಾಗಿರುತ್ತದೆ.


’ಗುಬ್ಬಿ ಮೇಲೆ ಬ್ರಹ್ಮಾಸ್ತ್ರ’ ಎಂದರೆ ಇದೇನಾ?
ಅಭಿವೃದ್ದಿ, ಅಭಿವೃದ್ದಿ ಎಂದು ಬೊಬ್ಬಿಟ್ಟು ಆ ನೆಪದಲ್ಲಿ ನಮ್ಮನ್ನು ಒಕ್ಕಲೆಬ್ಬಿಸಿದರೆ ಪ್ರತಿಭಟಿಸುತ್ತೇವೆ. ಪುನರ್ವಸತಿ, ಪರಿಹಾರ ಎಂದು ಹೋರಾಡುತ್ತೇವೆ. ಆದರೆ ಈ ಪಕ್ಷಿಗಳ ಉಣವನ್ನು, ಕಾಡನ್ನು, ಮರಗಳನ್ನು ಕಡಿಯುವಾಗ ಚೀಂವ್, ಚೀಂವ್, ಕಾವ್, ಕಾವ್ ಆರ್ತನಾದಗಳಿಗೆ ಕಿವುಡಾಗಿದ್ದೇವೆ. ಯಾರಲ್ಲಿ ತಮ್ಮ ಅಳಲನ್ನು ಹೇಳಿಕೊಳ್ಳುತ್ತವೆ, ಹೇಗೆ ಪ್ರತಿಭಟಿಸುತ್ತವೆ. ತಮ್ಮ ಹಕ್ಕಿಗಾಗಿ ಹೋರಾಟ ಮಾಡಲು ಸಾಧ್ಯವೇ ಆ ಮೂಕ ಪಕ್ಷಿಗಳಿಗೆ?

ನಾಶ ಸಂಸ್ಕೃತಿ ನಮಗೂ ಅಪಾಯಕಾರಿ
ಕಾಂಕ್ರೀಟ್ ಕಾಡು, ಸೇತುವೆಗಳು, ಮೆಟ್ರೊ, ವಾಣಿಜ್ಯ ಸಂಕೀರ್ಣ, ಮೊಬೈಲ್ ಟವರುಗಳ ರೇಡಿಯೇಷನ್, ಗೂಡುಕಟ್ಟಲು ಜಾಗವಿಲ್ಲದ ಗಗನ ಚುಂಬಿ ಕಟ್ಟಡ.. ಎಂದು ಅಭಿವೃದ್ಧಿಯತ್ತ ಸಾಗುತ್ತಿರುವ ನಾವು ಕಾಗೆ-ಗುಬ್ಬಚ್ಚಿಗಳ ಆವಾಸಸ್ಥಾನವಾಗಿದ್ದ ಗಿಡ-ಗಂಟೆಗಳನ್ನು ಕಡಿಯುತ್ತಿದ್ದೇವೆ. ಗೂಡು ಕಟ್ಟಲು ಪಕ್ಷಿಗಳಿಗೆ ಸ್ಥಳವಿಲ್ಲ. ಕಲುಷಿತ ವಾತಾವರಣ, ಪೆಸ್ಟಿಸೈಡ್ಸ್ ಬಳಕೆ, ಹುಳು ಹುಪ್ಪಟೆಗಳನ್ನು ಕಮ್ಮಿ ಮಾಡಿದೆ. ಇದರಿಂದಾಗಿ ಆಹಾರಕ್ಕೂ ಸಂಚಕಾರ. ಬೆಚ್ಚನೆಯ ಗೂಡಿಗೆ ನೆರವಾಗುತ್ತಿದ್ದ ಹೆಂಚಿನ ಮನೆ, ಅಟ್ಟ, ಫೋಟೋ ಹಿಂಬಂದಿ, ಗಿಡಗಳು ಹಾಗೂ ಸಾಂಪ್ರದಾಯಿಕ ಮನೆಗಳೂ ಇಲ್ಲವಾಗಿ ಆಹಾರ-ನಿವಾಸ ಎರಡೂ ಕ್ಷೀಣವಾಗಿ ಗುಬ್ಬಿ ಸಂತತಿ ನಶಿಸುತ್ತಿದೆ. ಈ ನಾಶ ಪ್ರಾಣಿ, ಪಕ್ಷಿ ಸಂಕುಲಕ್ಕೇ ಅಲ್ಲ ನಮಗೂ ಅಪಾಯಕಾರಿ.

ವಿನಾಶದ ಅಂಚಿಗೆ ತಳ್ಳುತ್ತಿರುವ ಬುದ್ಧಿವಂತಿಕೆ

ಜಗತ್ತಿನ ಜೀವ ಸರಪಳಿಯಲ್ಲಿ ನಾವೂ ಒಂದು ಕೊಂಡಿ. ಈ ಭೂಮಿಯ ಮೇಲೆ ನಮ್ಮಷ್ಟೇ ಜೀವಿಸಲು ಪ್ರಾಣಿ ಪಕ್ಷಿಗಳಿಗೂ ಹಕ್ಕಿದೆ. ಅಗಳಿಗೂ ನಮ್ಮಂತೆಯೇ ಆತ್ಮವಿದೆ. ಅವನ್ನು ನಾವು ಗೌರವಿಸಬೇಕು. ಬುದ್ಧಿವಂತಿಕೆ ಹೇಗೆ ನಮ್ಮನ್ನು ನಮ್ಮನ್ನು ವಿಕಸನದ ಹಾದಿಯಲ್ಲಿ ಮುನ್ನಡೆಸುವುದೋ ಹಾಗೆಯೇ ಅತೀ ಬುದ್ಧಿವಂತಿಕೆ ವಿನಾಶದ ಹಾದಿಗೂ ತಳ್ಳುತ್ತಿದೆ. ಪಕ್ಷಿ ಪ್ರೀತಿ ನಮ್ಮ ನಾಡಿನ ಸ್ವಾಸ್ಥ್ಯಕ್ಕೆ ಪೂರಕ. ಈ ಪಕ್ಷಿಹೋಮ ಹೀಗೆಯೇ ಮುಂದುವರೆದರೆ ಬಹಳ ಬೇಗ ನಾವು ಈ ಪಕ್ಷಿಗಳನ್ನು ನೋಡಬೇಕಾದ ಪರಿಸ್ಥಿತಿ ಬರುವುದರಲ್ಲಿ ಸಂಶಯವೇ ಇಲ್ಲ.

ಪ್ರಾಯಶಃ ಅಲ್ಲಿ ಅಕ್ಕಿ ಆರಿಸುವುದು, ಕಾಳು ಕೇರುವುದು, ಹುಳ, ಹುಪ್ಪಟೆಗಳು ದೊರಕುತ್ತಿರುವುದು ಕಾರಣ. ‘ಗುಬ್ಬಿ ಬಚಾವೋ’ ಎಂಬ ಸಮೀಕ್ಷೆಯ ವರದಿಯ ಪ್ರಕಾರ, ಗುಬ್ಬಿ, ಪಾರಿವಾಳ, ಪಕ್ಷಿಗಳನು ಆಕರ್ಷಿಸಲು ಕೆಲವರು ನಿರತರಾಗಿದ್ದಾರೆ. ಮನೆಯಂಗಳದಲಿ, ಕಿಟಕಿಗಳಲ್ಲಿ ಬೋಗುಣಿ, ಲೋಟಗಳನ್ನು ಕಟ್ಟಿ ಪಕ್ಷಿಗಳನ್ನು ಆಕರ್ಷಿಸುತ್ತಿದ್ದಾರೆ. ಕೆಲವರು ತಮ್ಮ ತಾರಸಿಯ ಮೇಲೆ ಪಕ್ಷಿಧಾಮವನ್ನೇ ಮಾಡಿದ್ದಾರೆ. ಪಕ್ಷಿಗಳ ಹಿಕ್ಕೆ ಒಳ್ಳೆಯ ಗೊಬ್ಬರ ಎಂದು ಸಂಗ್ರಹಿಸಿ ಕೃಷಿಗೆ ಬಳಸುತ್ತಿದ್ದಾರೆ.

ಗುಬ್ಬಿ ಗೂಡು ಎಂಬ ಪರಿಕಲ್ಪನೆಗೆ ಜೀವ
ಬಿಸಿ‌ಐ‌ಎಲ್, ಝೆಡ್ ಪ್ರತಿಷ್ಠಾನ, ಕರ್ನಾಟಕ ಮೃಗಾಲಯ ಪ್ರಾಧಿಕಾರ ‘ಗುಬ್ಬಿ ಗೂಡು’ ಯೋಜನೆ ಇದೀಗ ಶಾಲಾ, ಕಾಲೇಜುಗಳಲ್ಲಿ ಗುಬ್ಬಿ ಗೂಡು ಪರಿಕಲ್ಪನೆ, ಪರಿಸರ ಪ್ರಜ್ಞೆ ಮೂಡಿಸಿ ವಿದ್ಯಾರ್ಥಿಗಳಿಗೆ ಮರಗಳಿಗೆ ಬಿದಿರಿನ ಗೂಡು ಕಟ್ಟಿ ಪಕ್ಷಿಗಳನ್ನು ಆಕರ್ಷಿಸುವ ಪ್ರಯತ್ನ ಹೇಳಿಕೊಡುತ್ತಿದ್ದಾರೆ. ಗೂಡಿನ ಜೊತೆಗೆ ಗುಬ್ಬಚ್ಚಿ ಆಹಾರ, ಪೊದೆ ನಿರ್ಮಾಣ, ಹುಲ್ಲು ಇವುಗಳನ್ನು ನೀಡುತ್ತಾರೆ. ಗುಬ್ಬಿಗಳ ಸಂತಾನ ವೃದ್ಧಿಗೆ ಯೋಗವಾತಾವರಣ ಕಲ್ಪಿಸುವ ಮಾಹಿತಿಯನ್ನೂ ನೀಡುತ್ತಿದೆ.

ಯಾಂತ್ರಿಕ ಬದುಕಿನ ಜಂಜಾಟದಲ್ಲಿ ಮಾನವೀಯ ಸಂಬಂಧಗಳ ಕೊಂಡಿ ಕಳಚುತ್ತಿರುವ ಇಂದಿನ ದಿನಗಳಲ್ಲಿ ಪಕ್ಷಿಗಳೆಡೆಗಿನ ಪ್ರೀತಿ- ವಾತ್ಸಲ್ಯವನ್ನು ಕಾಪಾಡಡಲು ಪ್ರಯತ್ನಿಸುತ್ತಿರುವ ಇಂತಹ ಕೆಲವು ಪರಿಸರ ಪ್ರೇಮಿಗಳ ಪ್ರಯತ್ನಗಳು ಎಲ್ಲರಿಗೂ ಮಾದರಿಯಾಗಲಿ ಎನ್ನುವುದನ್ನು
ವಿಶ್ವ ಗುಬ್ಬಚ್ಚಿ ದಿನಾಚರಣೆ (ಮಾ.20) ಆಚರಿಸುತ್ತಿರುವ ಸಂದರ್ಭದಲ್ಲಿ ಪರಿಸರ ಸಮತೋಲನ ಕಾಪಾಡಲು ಪ್ರಯತ್ನಿಸಿ, ಕಳೆದುಕೊಳ್ಳುತ್ತಿರುವ ಬಾಂಧವ್ಯ, ಪರಿಸರದ ಕೊಂಡಿಯನ್ನು ಮತ್ತೆ ಕೂಡಿಸಲು ಪ್ರಯತ್ನಿಸೋಣ. ಪಕ್ಷಿಗಳು ಮತ್ತೆ ನಮ್ಮ ನಮ್ಮ ಮನೆಯಂಗಳದಲಿ ಚಿಲಿಪಿಲಿಗುಟ್ಟಲಿ. ಅವುಗಳ ಅಳಿವು-ಉಳಿವಿನೊಂದಿಗೆ ನಮ್ಮ ಬದುಕೂ ಅಂಟಿದೆ- ಭಾವನಾತ್ಮಕ ನಂಟಿದೆ.

ನಾಶ ಸಂಸ್ಕೃತಿ ನಮಗೂ ಅಪಾಯಕಾರಿ
ಕಾಂಕ್ರೀಟ್ ಕಾಡು, ಸೇತುವೆಗಳು, ಮೆಟ್ರೊ, ವಾಣಿಜ್ಯ ಸಂಕೀರ್ಣ, ಮೊಬೈಲ್ ಟವರುಗಳ ರೇಡಿಯೇಷನ್, ಗೂಡುಕಟ್ಟಲು ಜಾಗವಿಲ್ಲದ ಗಗನ ಚುಂಬಿ ಕಟ್ಟಡ.. ಎಂದು ಅಭಿವೃದ್ಧಿಯತ್ತ ಸಾಗುತ್ತಿರುವ ನಾವು ಕಾಗೆ-ಗುಬ್ಬಚ್ಚಿಗಳ ಆವಾಸಸ್ಥಾನವಾಗಿದ್ದ ಗಿಡ-ಗಂಟೆಗಳನ್ನು ಕಡಿಯುತ್ತಿದ್ದೇವೆ. ಗೂಡು ಕಟ್ಟಲು ಪಕ್ಷಿಗಳಿಗೆ ಸ್ಥಳವಿಲ್ಲ. ಕಲುಷಿತ ವಾತಾವರಣ, ಪೆಸ್ಟಿಸೈಡ್ಸ್ ಬಳಕೆ, ಹುಳು ಹುಪ್ಪಟೆಗಳನ್ನು ಕಮ್ಮಿ ಮಾಡಿದೆ. ಇದರಿಂದಾಗಿ ಆಹಾರಕ್ಕೂ ಸಂಚಕಾರ. ಬೆಚ್ಚನೆಯ ಗೂಡಿಗೆ ನೆರವಾಗುತ್ತಿದ್ದ ಹೆಂಚಿನ ಮನೆ, ಅಟ್ಟ, ಫೋಟೋ ಹಿಂಬಂದಿ, ಗಿಡಗಳು ಹಾಗೂ ಸಾಂಪ್ರದಾಯಿಕ ಮನೆಗಳೂ ಇಲ್ಲವಾಗಿ ಆಹಾರ-ನಿವಾಸ ಎರಡೂ ಕ್ಷೀಣವಾಗಿ ಗುಬ್ಬಿ ಸಂತತಿ ನಶಿಸುತ್ತಿದೆ. ಈ ನಾಶ ಪ್ರಾಣಿ, ಪಕ್ಷಿ ಸಂಕುಲಕ್ಕೇ ಅಲ್ಲ ನಮಗೂ ಅಪಾಯಕಾರಿ

Girl in a jacket
error: Content is protected !!