ಸಿಬಿಐ ಅಧಿಕಾರಿಗಳಿಂದ ದಾವಣಗೆರೆ ವಿವಿಯ ಪ್ರಾಧ್ಯಾಪಕಿ ಬಂಧನ
by-ಕೆಂಧೂಳಿ
ದಾವಣಗೆರೆ,ಫೆ,೦೩: ನ್ಯಾಕ್ ಗ್ರೇಡ್ ವಿಚಾರಕ್ಕೆ ಸಂಬಂಧಿಸಿದಂತೆ ದೇಶದಾದ್ಯಂತ ಕೆಲವು ವಿವಿಗಳಲ್ಲಿ ಸಿಬಿಐ ಅಧಿಕಾರಿಗಳು ದಾಳಿ ಮಾಡಿ ಕೆಲವು ಉಪನ್ಯಾಸಕರನ್ನು ಬಂಧಿಸಿದ್ದಾರೆ.
ದಾವಣಗೆರೆಯಲ್ಲೂ ಕೂಡ ನ್ಯಾಕ್ ಗ್ರೇಡ್ ಕೊಡಲು ಲಂಚಕ್ಕೆ ಬೇಡಿಕೆ ಇಟ್ಟಿದ್ದ ಆರೋಪದ ಮೇಲೆ ಸಾವಣಗೆರೆ ವಿವಿಯ ಪ್ರೊ.ಗಾಯತ್ರಿ ದೇವರಾಜ್ ಅವರನ್ನು ಹೈದರಾಬಾದ್‌ನಲ್ಲಿ ಸಿಬಿಐ ಅಧಿಕಾರಿಗಳು ಬಂಧಿಸಿದ್ದಾರೆ.
ದಾವಣಗೆರೆ ವಿಶ್ವವಿದ್ಯಾಲಯದ ಮೈಕ್ರೊ ಬಯಾಲಜಿ ವಿಭಾಗದ ಪ್ರೊ.ಗಾಯತ್ರಿ ದೇವರಾಜ್ ಅವರನ್ನು ಭ್ರಷ್ಟಾಚಾರಕ್ಕೆ ಸಂಬಂಧ ಪಟ್ಟಂತೆ ಬಂಧಿಸಲಾಗಿದೆ. ಈ ಹಿಂದೆ ವಿಶ್ವವಿದ್ಯಾಲಯದ ಕುಲಸಚಿವೆಯೂ ಆಗಿ ಕಾರ್ಯನಿರ್ವಹಿಸಿದ್ದ ಅವರ ಮನೆಗೂ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದಕ್ಕೂ ಮೊದಲು ಸಿಬಿಐ ಅಧಿಕಾರಿಗಳು ವಿಶ್ವವಿದ್ಯಾಲಯದಲ್ಲಿ ಶೋಧ ಕಾರ್ಯ ನಡೆಸಿದ್ದಾರೆ.
ನ್ಯಾಕ್ ಗ್ರೇಡ್ ಕೊಡಲು ಲಂಚಕ್ಕೆ ಬೇಡಿಕೆ ಇಟ್ಟಿದ್ದ ಆರೋಪ ಇವರ ಮೇಲಿದೆ. ಈ ಹಿನ್ನೆಲೆಯಲ್ಲಿ ದಾಳಿ ಮಾಡಿದ್ದ ಸಿಬಿಐ ಅಧಿಕಾರಿಗಳಿಗೆ ೩೭ ಲಕ್ಷ ರೂಪಾಯಿ ನಗದು, ೬ ಲ್ಯಾಪ್ಟಾಪ್, ಐಫೋನ್ ಅನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಭ್ರಷ್ಟಾಚಾರ, ಲಂಚ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಮುಂದುವರೆದಿದೆ. ಆಂಧ್ರ ಪ್ರದೇಶದ ಗುಂಟೂರು ಜಿಲ್ಲೆಯ ಕೆಎಲ್ಇಎಫ್ ವಿಶ್ವವಿದ್ಯಾಲಯದ ನ್ಯಾಕ್ ಕಮಿಟಿ ಪರಿಶೀಲನೆ ವೇಳೆ ಲಂಚ ಪಡೆಯುವಾಗ ಮಹಿಳಾ ಪ್ರೋಫೆಸರ್ ಅನ್ನು ಬಂಧಿಸಲಾಗಿದೆ.
ಇನ್ನು ಈ ಸಂಬಂಧ ಮಾತನಾಡಿರುವ ದಾವಣಗೆರೆ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಬಿ.ಡಿ ಕುಂಬಾರ, ವಿಶ್ವವಿದ್ಯಾಲಯದಲ್ಲಿ ಸಿಬಿಐ ಅಧಿಕಾರಿಗಳು ಶೋಧ ಕಾರ್ಯ ಮಾಡಿರುವುದರ ಬಗ್ಗೆ ಏನು ಗೊತ್ತಿಲ್ಲ. ಗಾಯತ್ರಿ ಅವರನ್ನು ಬಂಧಿಸಿರುವುದು ನನ್ನ ಗಮನಕ್ಕೆ ಬಂದಿಲ್ಲ ಎಂದು ಹೇಳಿದ್ದಾರೆ.