ಬೆಂಗಳೂರು,ಮೇ,೧೮:ಕೋವಿಡ್-೧೯ ಕ್ಕೆ ಬಲಿಯಾದ ಅಂಗನವಾಡಿ ಕಾರ್ಯಕರ್ತೆಯರಿಗೆ ೩೦ ಲಕ್ಷ ರೂ ಪರಿಹಾರ ಧನ ನೀಡಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು,
ಕೊರೊನಾದಿಂದ ತಂದೆ ಅಥವಾ ತಾಯಿಯನ್ನು ಕಳೆದುಕೊಂಡ ಮಕ್ಕಳಿಗೆ ಪ್ರತ್ಯೇಕ ಕೊವಿಡ್ ಕೇರ್ ಸೆಂಟರ್ ಸ್ಥಾಪನೆ ಮಾಡಲಾಗುವುದು. ಕೊರೊನಾ ಎರಡನೇ ಅಲೆ ತೀವ್ರವಾಗಿದೆ. ಎರಡನೇ ಅಲೆಯಲ್ಲಿ ಪೋಷಕರು ತೀರಿ ಹೋಗಿ ಮಕ್ಕಳು ಅನಾಥರಾಗಿರುವ ಪ್ರಕರಣಗಳಿವೆ. ಹೀಗಾಗಿ ಅನಾಥ ಮಕ್ಕಳಿಗೆ ಸಹಾಯ ಮಾಡುವ ಉದ್ದೇಶವಿದೆ ಎಂದು ತಿಳಿಸಿದರು.
ಪ್ರತಿ ಜಿಲ್ಲೆಯಲ್ಲೂ ಪ್ರತ್ಯೇಕ ಕೊವಿಡ್ ಕೇರ್ ಸೆಂಟರ್‌ಗಳನ್ನು ತೆರೆಯಲಾಗುತ್ತದೆ. ೧೦೯೮ ಸಹಾಯವಾಣಿ ಪ್ರಾರಂಭವಾಗಿದೆ. ಕೊವಿಡ್ ಕೇರ್ ಸೆಂಟರ್‌ಗಳಲ್ಲಿ ಮಕ್ಕಳಿಗೆ ಎಲ್ಲ ರೀತಿ ವ್ಯವಸ್ಥೆ ಮಾಡುತ್ತೇವೆ. ತುಂಬಾ ಚಿಕ್ಕ ಮಕ್ಕಳಿದ್ದರೂ ವ್ಯವಸ್ಥೆ ಮಾಡಲಾಗುವುದು. ಮಕ್ಕಳನ್ನು ದತ್ತು ಪಡೆಯುವಾಗ ದುರುಪಯೋಗವಾಗುತ್ತಿದೆ. ಹೀಗಾಗಿ ದತ್ತು ಪಡೆಯುವಾಗ ಮಾಹಿತಿ ನೀಡಬೇಕು. ೧೦೯೮ಗೆ ಕರೆ ಮಾಡಬೇಕು ಅಥವಾ ಜಿಲ್ಲಾಡಳಿತಕ್ಕೆ ಮಾಹಿತಿ ನೀಡಬೇಕು. ನಿಯಮಾನುಸಾರವೇ ಮಕ್ಕಳನ್ನು ದತ್ತು ಪಡೆಯಬೇಕು ಎಂದು ಹೇಳಿದರು.
ಕೊರೊನಾ ೨ನೇ ಅಲೆಯಲ್ಲಿ ಇಬ್ಬರು ಮಕ್ಕಳು ಅನಾಥವಾಗಿವೆ. ಚಾಮರಾಜನಗರ, ಮಂಡ್ಯದಲ್ಲಿ ತಲಾ ೧ ಪ್ರಕರಣ ಪತ್ತೆಯಾಗಿದೆ. ಅನಾಥ ಮಗುವಿನ ಯೋಗಕ್ಷೇಮ, ಆರೋಗ್ಯ ಗಮನಿಸಲು ದಾನಿಗಳ ಹುಡುಕಾಟ ನಡೆಸಲಾಗುವುದು. ಅನಾಥ ಮಕ್ಕಳಿಗೆ ಭಾಗ್ಯಲಕ್ಷ್ಮಿ ಬಾಂಡ್ ಮಾದರಿಯಲ್ಲಿ ಬಾಂಡ್ ನೀಡುವ ಸಂಬಂಧ ರಾಜ್ಯದ ಮುಖ್ಯಮಂತ್ರಿ ಜೊತೆ ಚರ್ಚೆ ಮಾಡಲಾಗುತ್ತದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಕಲ್ಯಾಣ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ತಿಳಿಸಿದರು.
ಕೊರೊನಾಗೆ ಬಲಿಯಾದ ಅಂಗನವಾಡಿಕಾರ್ಯಕರ್ತೆಯರಿಗೆ ೩೦ ಲಕ್ಷ ಪರಿಹಾರ-ಜೊಲ್ಲೆ
Share