ಇಂಗ್ಲೆಂಡ್ ವಿರುದ್ಧ ಭಾರತಕ್ಕೆ ಭರ್ಜರಿ ಜಯ
by-ಕೆಂಧೂಳಿ
ಮುಂಬೈ,ಫೆ,೦೩-ಇಂಗ್ಲೆಂಡ್ ವಿರುದ್ಧ ಭರತ ತಂಡ ಟಿ.೨೦ ಐದನೆ ಹಾಗೂ ಅಂತಿಮ ಇಂಟರ್‌ನ್ಯಾಷಿನಲ್ ಪಂದ್ಯವನ್ನು ೧೫೦ ರನ್‌ಗಳ ಅಂತರದಿಂದ ಭರ್ಜರಿ ಜಯಸಾಧಿಸಿತು.
ಈ ಮೂಲಕ ೫ ಪಂದ್ಯಗಳ ಸರಣಿಯನ್ನು ೪-೧ ಅಂತರದಿಂದ ಗೆದ್ದುಕೊಂಡಿದೆ.
ವಾಂಖೆಡೆ ಸ್ಟೇಡಿಯಮ್‌ನಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಭಾರತ ತಂಡವು ೯ ವಿಕೆಟ್‌ಗಳ ನಷ್ಟಕ್ಕೆ ೨೪೭ ರನ್ ಗಳಿಸಿತು. ಗೆಲ್ಲಲು ಕಠಿಣ ಗುರಿ ಪಡೆದ ಇಂಗ್ಲೆಂಡ್ ತಂಡ ೧೦.೩ ಓವರ್‌ಗಳಲ್ಲಿ ಕೇವಲ ೯೭ ರನ್‌ಗೆ ಆಲೌಟಾಗಿ ಹೀನಾಯವಾಗಿ ಸೋಲುಂಡಿತು.
ಇಂಗ್ಲೆಂಡ್ ತಂಡವು ಭಾರತ ವಿರುದ್ಧ ಭಾರೀ ರನ್ ಅಂತರದಿಂದ ಸೋತಿರುವ ೨ನೇ ಪೂರ್ಣ ಸದಸ್ಯ ದೇಶವಾಗಿದೆ. ೨೦೨೩ರಲ್ಲಿ ಅಹ್ಮದಾಬಾದ್‌ನಲ್ಲಿ ನ್ಯೂಝಿಲ್ಯಾಂಡ್ ಭಾರತ ವಿರುದ್ಧ ೧೬೮ ರನ್‌ಗಳಿಂದ ಸೋತಿತ್ತು.
ಇಂಗ್ಲೆಂಡ್ ಪರ ಆರಂಭಿಕ ಬ್ಯಾಟರ್ ಫಿಲ್ ಸಾಲ್ಟ್(೫೫ ರನ್, ೨೩ ಎಸೆತ, ೭ ಬೌಂಡರಿ,೩ ಸಿಕ್ಸರ್)ಸರ್ವಾಧಿಕ ಸ್ಕೋರ್ ಗಳಿಸಿದರು. ಬೆಥೆಲ್(೧೦ರನ್)ಹೊರತುಪಡಿಸಿ ಉಳಿದ ಬ್ಯಾಟರ್‌ಗಳು ಎರಡಂಕೆಯ ಸ್ಕೋರ್ ಗಳಿಸುವಲ್ಲಿಯೂ ವಿಫಲರಾದರು.
ಶಮಿ ಯಶಸ್ವಿ ಬೌಲರ್ ಎನಿಸಿಕೊಂಡರೆ, ಅಭಿಷೇಕ್ ಶರ್ಮಾ(೨-೩), ಶಿವಂ ದುಬೆ(೨-೧೧)ಹಾಗೂ ವರುಣ್ ಚಕ್ರವರ್ತಿ(೨-೨೫) ತಲಾ ಎರಡು ವಿಕೆಟ್‌ಗಳನ್ನು ಪಡೆದರು.
ಇದಕ್ಕೂ ಮೊದಲು ಟಾಸ್ ಸೋತು ಮೊದಲು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಭಾರತ ತಂಡವು ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ ಅವರ ಭರ್ಜರಿ ಶತಕದ ನೆರವಿನಿಂದ ನಿಗದಿತ ೨೦ ಓವರ್‌ಗಳಲ್ಲಿ ೯ ವಿಕೆಟ್‌ಗಳ ನಷ್ಟಕ್ಕೆ ೨೪೭ ರನ್ ಗಳಿಸಿದೆ.
ಅಭಿಷೇಕ್ ಟಿ-೨೦ ಕ್ರಿಕೆಟ್‌ನಲ್ಲಿ ಗರಿಷ್ಠ ವೈಯಕ್ತಿಕ ಸ್ಕೋರ್ ಗಳಿಸಿದ ಭಾರತದ ಮೊದಲ ಆಟಗಾರ ಎನಿಸಿಕೊಂಡರು. ಕೇವಲ ೩೭ ಎಸೆತಗಳಲ್ಲಿ ಶತಕ ಪೂರೈಸಿದ ಅಭಿಷೇಕ್ ಕೂದಲೆಳೆ ಅಂತರದಿಂದ ರೋಹಿತ್ ಶರ್ಮಾ(೩೫ ಎಸೆತದಲ್ಲಿ ೧೦೦)ದಾಖಲೆ ಮುರಿಯುವುದರಿಂದ ವಂಚಿತರಾದರು. ಅಭಿಷೇಕ್ ಟಿ-೨೦ ಇನಿಂಗ್ಸ್‌ನಲ್ಲಿ ಗರಿಷ್ಠ ಸಿಕ್ಸರ್‌ಗಳನ್ನು(೧೩) ಸಿಡಿಸಿದ ಭಾರತದ ಆಟಗಾರನೆಂಬ ಹಿರಿಮೆಗೆ ಪಾತ್ರರಾದರು.
ಅಭಿಷೇಕ್, ತಿಲಕ್ ವರ್ಮಾ(೨೪ರನ್)ಅವರೊಂದಿಗೆ ೨ನೇ ವಿಕೆಟ್‌ಗೆ ೧೧೫ ರನ್ ಜೊತೆಯಾಟ ನಡೆಸಿ ಉತ್ತಮ ಆರಂಭ ಒದಗಿಸಿದರು. ಶಿವಂ ದುಬೆ ೩೦ ರನ್ ಕೊಡುಗೆ ನೀಡಿದರು. ನಾಯಕ ಸೂರ್ಯಕುಮಾರ್(೨ ರನ್), ಸ್ಯಾಮ್ಸನ್(೧೬ ರನ್), ಹಾರ್ದಿಕ್ ಪಾಂಡ್ಯ(೯ ರನ್), ರಿಂಕು ಸಿಂಗ್(೯ ರನ್)ಹಾಗೂ ಅಕ್ಷರ್ ಪಟೇಲ್(೧೫)ದೊಡ್ಡ ಮೊತ್ತ ಗಳಿಸುವಲ್ಲಿ ವಿಫಲರಾದರು. ಅಭಿಷೇಕ್ ಏಕಾಂಗಿ ಹೋರಾಟ ನೀಡಿ ವಾಂಖೆಡೆ ಕ್ರೀಡಾಂಗಣದಲ್ಲಿ ರನ್ ಹೊಳೆ ಹರಿಸಿದರು.
ಉಭಯ ತಂಡಗಳು ತಲಾ ಒಂದು ಬದಲಾವಣೆ ಮಾಡಿದ್ದವು. ಭಾರತವು ಅರ್ಷದೀಪ್ ಸಿಂಗ್ ಬದಲಿಗೆ ಮುಹಮ್ಮದ್ ಶಮಿಗೆ ಅವಕಾಶ ನೀಡಿದರೆ, ಇಂಗ್ಲೆಂಡ್ ತಂಡವು ಸಾಕಿಬ್ ಮಹ್ಮೂದ್ ಬದಲಿಗೆ ಮಾರ್ಕ್ ವುಡ್‌ಗೆ ಅವಕಾಶ ನೀಡಿದೆ.
ಅಭಿಷೇಕ್ ಕೇವಲ ೧೭ ಎಸೆತಗಳಲ್ಲಿ ಅರ್ಧಶತಕ ಪೂರೈಸುವ ಮೂಲಕ ಈ ಸಾಧನೆ ಮಾಡಿದ ಭಾರತದ ೨ನೇ ಬ್ಯಾಟರ್ ಎನಿಸಿಕೊಂಡರು. ವೇಗಿ ಓವರ್ಟನ್ ಎಸೆತದಲ್ಲಿ ಸತತ ಸಿಕ್ಸರ್‌ಗಳನ್ನು ಸಿಡಿಸಿದ ಅಭಿಷೇಕ್ ೫ನೇ ಓವರ್‌ನಲ್ಲಿ ಅರ್ಧಶತಕ ಪೂರೈಸಿದರು.