ಕೊಳೆಯ ತೊಳೆವವರು ಇಲ್ಲ ಬಾ…

Share

ಕೊಳೆಯ ತೊಳೆವವರು ಇಲ್ಲ ಬಾ…

ನೀರು ಜೀವ ಪೋಷಕ.ನೀರಿದ್ದಲ್ಲಿ ಜೀವಿಗಳ ಚಲನೆ ಇರುತ್ತದೆ. ಆದಿ ಮಾನವ ಅಲೆಮಾರಿಯಾಗಿ ಹಸಿರು ಮತ್ತು ನೀರನ್ನ ಅರಸುತ್ತಾ ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಅಲೆಮಾರಿಯಾಗಿ ಹೊರಟು ಅವುಗಳ ತೀರದಲ್ಲಿ ನೆಲೆಯೂರಿ ನಿಂತ. ಅಲೆಮಾರಿಯಾದ ಮಾನವರು ತಳ ಊರಿದ ಜಾಗಗಳೆಲ್ಲಾ ಆನಂತರ ಊರು ಎಂದು ಕರೆಸಿಕೊಳ್ಳುತ್ತಾ ಬಂದವು.ಹಾಗಾಗಿ ಊರಿಗೆ ನೀರೇ ಮೂಲವಾಯಿತು.

ನಮ್ಮ ನಾಗರೀಕ ಚರಿತ್ರೆಯನ್ನ ಸಿಂದೂ ಬಯಲಿನ ಚರಿತ್ರೆಯೆಂದೂ,ನಮ್ಮ ನಾಡ ಕಥನ ವಿಸ್ತಾರವನ್ನ ಕಾವೇರಿಯಿಂದ ಗೋದಾವರಿಯವರೆಗೆ,ನರ್ಮದೆಯವರೆಗೆ ಎಂದು ವಿಸ್ತರಿಸಿರುವುದನ್ನೂ ಕಾಣಬಹುದಾಗಿದೆ.ಈ ನಾಡಿನ ಚರಿತ್ರೆಗಳನ್ನ ಗಮನಿಸಿದರೆ ಉದ್ದಕ್ಕೂ ನೀರ ತೀರಗಳು ಯುದ್ಧಗಳ ತಾಣಗಳೂ ಆಗಿವೆ.ನೀರ ತೀರಗಳು ಬಗೆ ಬಗೆಯ ಬಲಿದಾನದ ಕೇಂದ್ರಗಳೂ ಆಗಿವೆ.ನೀರು ಸಾಮಾಜಿಕವಾಗಿ ಬದುಕು ಹಸನು ಮಾಡಿಕೊಳ್ಳುವವರಿಗೆ ನೀರ ಮತ್ತೊಂದು ರೂಪವಾದ ನಾರಿಯರ ಬಲಿದಾನ ಬಯಸಿವೆ.ಮಾಯದ ಮಳೆ ಬಂದಾಗಲೆಲ್ಲಾ ಬಲಿದಾನಗಳ ಕಥನಗಳೂ ನಮ್ಮ ನಾಡಿನ ತುಂಬಾ ಲಾವಣಿಗಳ ಕಥನಗೀತೆಗಳ ಹಾಡಾಗಿ ಹರಿದಿವೆ.ಊರ ಕಿರಿ ಸೊಸೆಯರನ್ನೇ ಬಲಿದಾನ ಪಡೆದ ಈ ನಾಡು ಯಾಕೆ ಅವರ ಬದುಕುವ ಹಕ್ಕನ್ನ ಸಂಸ್ಕøತಿಯ ಹೆಸರಲ್ಲಿ ಬಲಿ ಪಡೆದಿವೆ? ಕೆರೆಗೆ, ಕೋಟೆಗೆ ಬಲಿಯಾಗುವವರು ಕಿರಿಯ ಆಳುವವರ ಮತ್ತು ದುಡಿವವರ ಮನೆಯ ಹೆಣ್ಣು ಮಕ್ಕಳು.ಹಾಗೇ ರಾಜ ತೀರಿದರೂ ಸತಿಯಾದವರು ಕಿರಿ ಹೆಂಡತಿಯರು ಮತ್ತು ದಾಸಿಯರು ಹಾಗೇ ಅವರನ್ನ ಪತಿಯೆಂದು ಒಪ್ಪಿಕೊಂಡ ಊರು ಊರಿನ ಅವರ ಊಳಿಗದ ಕಿರಿಯ ಹೆಣ್ಣು ಮಕ್ಕಳು.ಹೆಣ್ಣು ದೈವಗಳ ಜಾತ್ರೆ ನಡೆವ ಮುನ್ನವೂ ದೇವರನ್ನ ಗಂಗೆ ಹೊರಡಿಸಿದಾಗ ಅಲ್ಲ ಪೂಜೆಯಾದೊಡನೆ ಬಲಿಯಾಗುವುದು ಹೆಣ್ಣು ಕುರಿ ಮೇಕೆಗಳೇ ಎಂಬುದೂ ಗಮನೀಯ

.ನಾಡಿನ ಅಭಿವೃದ್ಧಿಯ ಆಚರಣೆಗಳಲ್ಲಿ ಹೆಣ್ಣು ಸಂಬಂಧಿ ಬಲಿಗಳೇ ನಡೆದಿರುವುದು ಯಾಕೆ? ಯುದ್ಧ ಎನ್ನವ ಆಕ್ರಮಣ ಭೂಮಿ ಹೆಸರಲ್ಲಿ ನಡೆಯುತಿತ್ತು ಆ ಭೂಮಿಯನ್ನ ಅದನ್ನ ತಂದೊಡ್ಡುವ ಜಯವನ್ನೂ ನಮ್ಮ ಸಂಸ್ಕøತಿಯು ಹೆಣ್ಣ ರೂಪಕಗಳಲ್ಲೇ ನೋಡಿದೆ.ಯುದ್ಧದಲ್ಲಿ ಗೆದ್ದರೆ ಲಕ್ಷ್ಮಿ ಸತ್ತರೆ ಅಪ್ಸರೆ ಸಿಗುತ್ತಾಳೆ ಎಂಬ ಮಾತುಗಳೂ ಹೆಣ್ಣ ಕೇಂದ್ರಿತವಾಗಿವೆ.ಯುದ್ಧ ಗೆದ್ದೊಡನೆ ದೊರೆಗೆ ಸಿಗುತಿದ್ದದ್ದು ಭೂಮಿ,ಲಕ್ಷ್ಮಿ,ಗೋ ಸಂಪತ್ತು ಮತ್ತು ಸ್ತ್ರೀ ಸಂಪತ್ತು ಹೀಗೆ ಪಡೆದ ಸ್ತ್ರೀಯರನ್ನ ದೊರೆಗಳು ಸರಕುಗಳಂತೆ ಕಾಣಿಕೆಯಾಗಿ ನೀಡುತಿದ್ದದ್ದು,ನದೀ ತೀರದ ಮಾರುಕಟ್ಟೆಯ ಕೇಂದ್ರಗಳಲ್ಲಿ ಸಾರ್ವಜನಿಕವಾಗಿ ಮಾರಾಟ ಮಾಡುತಿದ್ದದ್ದು ವಿಶೇಷ ಇದಕ್ಕೆ ಉದಾಹರಣೆಯಂತೆ ಹರಿಶ್ಚಂದ್ರ ತನ್ನ ಪತ್ನಿಯನ್ನ ಮಾರುವ ವಿವರವಿದೆ.ಈ ರೀತಿಯ ಸರಕಾಗಬಾರದು ಎಂದುಕೊಂಡ ಸ್ತ್ರೀಯರು ಸಾಮೂಹಿಕವಾಗಿ ಬಲಿದಾನಕ್ಕೆ ಒಳಗಾಗುತ್ತಿದ್ದರು,ಬೆಂಕಿಗೋ ಇಲ್ಲವೇ ಕೋಟೆ ಕೆಳಗಿನ ಹೊಂಡಕ್ಕೋ ಹಾರಿ ಸಾಯುತ್ತಿದ್ದರು.ಬೆಂಕಿಗೆ ಹಾರುತಿದ್ದ ಪದ್ದತಿಯನ್ನ ಹಿಂದೆ ಜೋಹರ ಪದ್ದತಿ ಎಂದು ಕರೆಯಲಾಗಿದೆ ರಾಜಸ್ಥಾನದ ಇಂತಹ ಉದಾಹರಣೆಯಂತೆಯೇ ಕಂಪಲಿರಾಯನ ಕಥೆಯೂ ಇಂತಹ ಉದಾಹರಣೆ ನೀಡುತ್ತದೆ.ನದಿಗಳು ಮೋಕ್ಷ ನೀಡುವ ತಾಣಗಳೂ ಹೌದು ಹಿಂದೆ ಗಂಗೆ ಮತ್ತು ತುಂಗೆ ನದಿಗಳಲ್ಲಿ ಸಾಯಲಿಕ್ಕಾಗಿಯೇ ತೀರ್ಥಯಾತ್ರೆ ಮಾಡುತಿದ್ದದ್ದನ್ನ ಚರಿತ್ರೆಗಳಲ್ಲಿ ನೋಡಬಹುದಾಗಿದೆ.ಧಾರ್ಮಿಕ ಮತ್ತು ಭಾಷಿಕ ವಿವಾದಗಳು ತಲ್ಲಣಗೊಳಿಸಿದಂತೆಯೇ ನೀರ ಹಂಚಿಕೆಯ ರಾಜಕೀಯ ವಿಚಾರಗಳೂ ನಾಡುಗಳನ್ನ ತಲ್ಲಣಗೊಳಿಸಿವೆ.


ಚರಿತ್ರೆಗಳು ಪುರುಷರ ಮೂಲಕ ಸಂಸ್ಕøತಿಯ ಚಿತ್ರಗಳನ್ನ ಹರವಿನಿಂತರೆ ಕಾವ್ಯಗಳು ನೀರ ಮೂಲಕ ಸ್ತ್ರೀಯರ ಸಂಸ್ಕ್ರತಿಯ ಚಿತ್ರಗಳನ್ನ ಬಿತ್ತರಿಸಿವೆ. ನೀರು ಎಂಬ ರೂಪವು ತಾಯಿಯಂತೆ ದೇವಿಯಂತೆ ರಕ್ಕಸಿಯಂತೆ,ಕೊಲ್ಲುವ ಮಾಯೆಯಂತೆ ಜೀವ ಪೋಷಕ ಮತ್ತು ಜೀವ ನಾಶಕ ಚಿತ್ರಗಳಾಗಿ ನಮ್ಮೆದುರು ಹರಡಿಕೊಂಡಿರುವೆ.
ಕನ್ನಡ ಕವಿತಾ ಚರಿತ್ರೆಯ ಹಾದಿಯಲ್ಲಿ ನೀರು ಕುರಿತ ಕವಿತೆಗಳನ್ನೂ ಆಯಾ ಕಾಲಗಳ ಸಾಮಾಜಿಕ ಜೀವನ ಅರಿಯಲು ಆಯ ಕಾಲಗಳ ಮೌಲ್ಯಗಳನ್ನ ಕಾಣಲು ಸಾಂಕೇತಿಕವಾಗಿ ನೋಡಬಹುದಾಗಿದೆ. ಈ ನೆಲೆಯಲ್ಲಿ ಬೇಂದ್ರೆಯವರ ಗಂಗಾವತರಣ,ಗೋಪಾಲ ಕೃಷ್ಣ ಅಡಿಗರ ಬತ್ತಲಾರದ ಗಂಗೆ ಕಂಬಾರರ ಗಂಗಾಮಾಯಿ,ಸಿದ್ಧಲಿಂಗಯ್ಯನವರ ಸಾವಿರಾರು ನದಿಗಳು ಕಾವ್ಯಗಳನ್ನ ಗಮನಿಸಬಹುದು.
ಕನ್ನಡದ ವರಕವಿ, ಜನಕವಿ ಎಂದು ಕರೆಸಿಕೊಂಡ ಬೇಂದ್ರೆಯವರ ಕಾವ್ಯಗಳ ಕೇಂದ್ರವೇ ಒಲವು.ಇವರು ಸರಸವೇ ಜನನ ವಿರಸವೇ ಮರಣ ಸಮರಸವೇ ಜೀವನ ಎಂಬ ಕೌಟುಂಬಿಕ ತತ್ವವನ್ನ ಸಾರಿದ್ದಾರೆ.ದೇವಿಯಿಂದ(ಅಂಬಿಕೆ) ನೆಲದಾಯಿಯವರೆಗೆ,ನೆಲದಾಯಿಯಿಂದ ತಾಯಿಯವರೆಗೆ ಹಲವು ಬಗೆಯ ಕವಲುಗಳಲ್ಲಿ ಈ ಒಲವನ್ನ ಇವರು ಬಗೆ ಬಗೆಯಲ್ಲಿ ವಿಸ್ತರಿಸಿಕೊಂಡಿದ್ದಾರೆ.ಹಾಗಾಗಿ ಬೇಂದ್ರೆಯವರ ಸಮರಸ ಭಾವವು ನಲ್ಲೆಯಿಂದ ತಾಯಿಯವರೆಗೆ, ತಾಯಿಯಿಂದ ನೆಲದಾಯಿಯವರೆಗೆ ವಿಸ್ತಾರಗೊಂಡಿದೆ.
ಬೇಂದ್ರೆಯವರ ಪ್ರಸಿದ್ದ ಕಾವ್ಯಗಳಲ್ಲಿ ಒಂದಾದ ಗಂಗಾವತರಣವು ಬಂಗಾಳದಲ್ಲಿ ಬಂದೆರಗಿದ ಭೀಕರ ಬರಗಾಲ ಕಂಡು ಜೀವ ಕರುಣೆಯಿಂದ ಮಾನವಸಮುದಾಯದ ಸೌಖ್ಯಕ್ಕಾಗಿ ಗಂಗಾ ಸ್ತೋತ್ರ ಎಂಬ ಸ್ಥಾಯಿ ಭಾವದಲ್ಲಿ ಬರೆದದ್ದು. ಈ ಕಾವ್ಯವು ನೀರೆಂಬ ರೂಪವನ್ನ ತಾಯಿಯಾಗಿ ಕಂಡಿದೆ.ದೇವಿಯಾಗಿ ಕಲ್ಪಿಸಿದೆ.ನೀರು ಹರನ ಜಡೆಯಿಂದ, ಋಷಿಯ ತೊಡೆಯಿಂದ ನುಸುಳಿ,ದೇವ ದೇವರನು ತಣಿಸಿ, ದಿಗ್ ದಿಗಂತದಲಿ ಹಣಿಸಿ,ಚರಾ ಚರಗಳಿಗೆ ಉಣಿಸುವಂತಿದೆ.ಕಲ್ಪನೆಯಲ್ಲಿ ಅರಳಿದ ಈ ಕಾವ್ಯಕ್ಕೆ ಸಾಂಪ್ರದಾಯಿಕ ಚೌಕಟ್ಟಿದೆ. ಸಂಸ್ಕøತಿ ಎಂಬ ವಾತ್ಸಲ್ಯ ಪ್ರಧಾನವಾದ ಇಲ್ಲಿನ ನೋಟವು ಕರು ಕಂಡ ಕರುಳೆ,ಶಿವ ಶುಭ್ರ ಕರುಣೆ,ವಾತ್ಸಲ್ಯ ವರಣೆಯಾಗಿದೆ.ಸತ್ತಂತಹ ಜನರ ಒಲವನ್ನ ತಮ್ಮ ಶುದ್ಧ ಎನ್ನುವ ಪಾಚೀನ ಪ್ರತಿಮೆಗಳ ಮೂಲಕ ಸೌಂದರ್ಯ ಪ್ರಧಾನ ನೋಟವನ್ನ ಬಿತ್ತುವುದೇ ಇಲ್ಲಿನ ಉದ್ದೇಶವಾಗಿದೆ.ಆ ಕಾಲದ ಆದರ್ಶವಾದ ಮತ್ತು ಉದಾರವಾದೀ ದೃಷ್ಟಿಕೋನ ಹೊತ್ತಿರುವ ಈ ಕಾವ್ಯವು ತನ್ನ ಕಾವ್ಯಾಲಂಕಾರದ ಗುಣಗಳಿಂದಲೇ ಆಕರ್ಷಕವಾಗಿದೆ.

ಜೀವ ಪರವಾದ ಈ ಕವಿಯ ನಿಲುವು ನೆಲದೊಂದಿಗೆ ಸುರರ ಸುಖವನ್ನ ತಾಳೆಹಾಕುತ್ತದೆ.ನೆಲದ ಕೊಳೆಗೆ ಸುರಲೋಕದ ಶುದ್ಧತೆಯನ್ನ ತರುವ ಕನಸು ಕಾಣುತ್ತದೆ.ಈ ಕನಸು ನಾಡಿಗೆ ನರರ ನಾಡಿಗೆ ಹರಿಯಬೇಕೆಂದು ಹಂಬಲಿಸುತ್ತದೆ.ಮೂಲಾಧಾರ ಚಕ್ರದಿಂದ ಸಹಸ್ರಾರ ಚಕ್ರದವರೆಗೆ ಏರುವ ಯೋಗದ ಚಲನೆಯಂತೆಯೇ ಭೂಮಿಯೆಂಬ ಮೂಲಾಧಾರದಿಂದ ಮುಗಿಲೆಂಬ ಸ್ವಾದಿಷ್ಟಾನ ಚಕ್ರದ ಸಾಗಬೇಕೆಂದು ಯೋಗ ಭಾಷೆಯ ವಿಶಿಷ್ಟ ಪರಿಭಾಷೆಯನ್ನ ಹೊತ್ತಿದೆ.

ಅರ್ಥ ಶಕ್ತಿ ಬದುಕನ್ನ ನಡೆಸಬಲ್ಲ ಪ್ರಧಾನ ಸಾಧನ ಎಂದು ಭಾವಿಸುವ ಹೊಸ ಸಮಾಜದಲ್ಲಿ ಈ ಕವಿತೆ ಯೋಗ ಶಕ್ತಿ ಜೀವಕ್ಕೆ ಆನಂದ ನೀಡಬಲ್ಲ ಸಾಧನ ಎಂದೇ ಕನಸಿದೆ.
ಕೊಳೆಯ ತೊಳೆವವರು ಇಲ್ಲ ಬಾ
ಬೇರೆ ಶಕ್ತಿಗಳು ಹೊಲ್ಲ ಬಾ
ಹೀಗೆ ಮಾಡದಿರು, ಅಲ್ಲ ಬಾ
ನಾಡಿ ನಾಡಿಯನು ತುತ್ತ ಬಾ
ನಮ್ಮ ನಾಡನ್ನೆ ಸುತ್ತ ಬಾ
ಸತ್ತ ಜನರನ್ನು ಎತ್ತ ಬಾ

ಸುರ ಸ್ವಪ್ನವಿದ್ದ ಪ್ರತಿಬಿಂಬ ಬಿದ್ದ ನೀರಿನ ರೂಪಕವು ಈ ಕಾವ್ಯದ ಉದ್ದಕ್ಕು ಬದಲಾಗುತ್ತಾ ಹೋಗುತ್ತದೆ.ಶುದ್ದ ನೀರು ತಂದೆ ತಾಯಿಯಾಗಿ,ಸಚ್ಛಿದಾನಂದ ಕನ್ಯೆಯಾಗಿ ಬಾಳ ಬೆಳಕಾಗಿ ಬೆಳೆಯುತ್ತಾ ಹೋಗಿದೆ.
ನೀರ ಕೊಳೆಯ ಮೂಲಕವೇ ನಾಡ ಕೊಳೆಯನ್ನ ಕಾಣುವ ಅಡಿಗರು ಕೊಳತು ನಾರುವ ಆ ಸಾಂಸ್ಕøತಿಕ ಸಂದರ್ಭವ್ನನ ಚಲನಶೀಲವಾಗಿಸಲು ಬತ್ತಲಾರದ ಗಂಗೆಯನ್ನ ಚಿತ್ರಿಸಿದ್ದಾರೆ ಇಲ್ಲಿ ನಾಡು ಒಣಗಿದ ಮರ ಇಲ್ಲಿ ಹಿಂದಿನ ಯಾವ ಶ್ರೇಷ್ಠ ಚಿತ್ರಗಳೂ ಉಳಿದಿಲ್ಲ ” ಇತ್ತುಗಳ ಧ್ವಜವ ಹಿಡಿದೆತ್ತಿ ನಿಲ್ಲಿಸೋ ಮಗು ” ಎಂದು ಇಂದೂ ನಮ್ಮೀ ನಾಡು ಕವಿತೆಯಲ್ಲಿ ಕಂಡಂತೆ ಅಡಿಗರು ಹಳೆಯ ಸುಖದ ಕಾಲಕ್ಕಾಗಿ ಗಂಗೆಯನ್ನ ” ಬತ್ತಿಹೋಗಲಿ ಗಂಗೆಯೊಂದು ಸಲ” ಎನ್ನುತ್ತಾ ಸಂಸ್ಕøತಿಯ ಉಳುಹಿನ ಹಳೆಯ ಕನಸ ಕಾಣುತ್ತಾರೆ.

ದಡದಲ್ಲಿ ಮತ್ತೆ ವಿದ್ಯಾರಣ್ಯ ಧರ್ಮಕ್ಷೇತ್ರ ಚಿಗುರುವುದು ಎನ್ನುವ ಈ ಕನಸು ಮಾತ್ರ ವರ್ತಮಾನದ ಕ್ರೌರ್ಯವನ್ನ ನಿಲ್ಲಿಸ ಬಲ್ಲದು ಇಲ್ಲಿದ್ದರೆ ಇಲ್ಲ ಏನಿದೆ? ” ಕಣ್ಣು ಕೀಳುವ ಸೂಜಿ ಬಡಿವ ಕೋಲು” ಎಂಬ ಹಿಂಸೆಯನ್ನ ಸೂಚಿಸುತ್ತಾರೆ.
ಚಂದ್ರಶೇಖರ ಕಂಬಾರ. ಇವರ ಗಂಗಾಮಾಯಿ ಕವಿತೆ ಅವೈದಿಕ ನೆಲೆಯ ಕಲ್ಪನೆಗಳನ್ನ ಹೊತ್ತಿರುವಂತದ್ದು. ಇದು ದುಡಿವ ಲೋಕವನ್ನ ಬಿಂಬಿಸುವ ಕಾವ್ಯ.ಇದಕ್ಕೆ ವೈದಿಕ ಕಲ್ಪನೆಗಳನ್ನ ಛಿದ್ರಿಸುವ ಆಮೂಲಕ ಹೊಸ ರೂಪಾಂತರ ಹೊಂದುವ ಉದ್ದೇಶವಿದೆ. ಬೇಂದ್ರೆ,ಅಡಿಗರಿಗೆ ವೈದಿಕ ಪುರಾಣ ಕಲ್ಪನೆಗಳು ಸಮುದಾಯ ಸುಖಕ್ಕೆ ಆಕರಗಳಾದರೆ ಕಂಬಾರರಿಗೆ ಅವೈದಿಕ ಪುರಾಣಗಳು ಆಕರಗಳಾಗಿವೆ.ಅಲ್ಲಿ ಏಕ ಸಂಸ್ಕøತಿ ಕಂಡರೆ ಇಲ್ಲಿ ಬಹು ಸಂಸ್ಕøತಿಗಳಿವೆ. ಈ ನೀರಿಗೆ ಆಳದಲ್ಲಿ ಸಂಸ್ಕøತಿಯ ಒಳಗಿನ ಪ್ಯೂಡಲ್ ತನವನ್ನ ಛೇಡಿಸುವ ಗುಣವಿದೆ.ಹಾಗಾಗಿ ಇಲ್ಲಿ ನೀರು ತಾಯಿಯಾಗದೆ ಗಂಗಾ ಮಾಯಿಯಾಗಿ ಕಾಣುತ್ತಾಳೆ.

ಅಲ್ಲಿ ತಾಯಿಯಾಗಿ, ಬೆಳಕಿನ ದೇವಿಯಾಗಿ ಗಂಗೆಯು ಜೀವ ಪೋಷಕ ರೂಪಧರಿಸಿದರೆ ಇಲ್ಲಿ ಮಾಯೆಯಾಗಿ ಮಾರಕ ರೂಪಧರಿಸಿದ್ದಾಳೆ.ಅಲ್ಲಿನ ನೀರು ಚಲನೆಯನ್ನ ಕಳಕೊಂಡು ಸ್ಥಗಿತ ರೂಪದಲ್ಲಿ ನಿಂತಿದೆ.ಅಲ್ಲಿ ಯಾವುದು ಸೌಂದರ್ಯ ಮೂಲವಾಗಿತ್ತೋ ಅದು ಇಲ್ಲಿ ನೋವು ಸಂಕಟಗಳ ಒಡೆದ ಮುದಿ ಕುರುವಾಗಿದೆ.
… ತೊಡಗುವರು ಮಂದಿ ಈ
ನೀರ ಬಳಸುವುದಕ್ಕೆ ಕುಡಿಯುವುದಕ್ಕೆ ಮೀಯಲಿಕ್ಕೆ ದನದ
ಸೆಗಣಿ ಮೈಗಂಬಳೆ ತೊಳೆಯಲಿಕ್ಕೆ ನಮ್ಮಪ್ಪ ಬೀರಪ್ಪನ ಪಾದ
ಪಡಕೊಳ್ಳಲಿಕ್ಕೆ, ಹಡೆದವ್ವ ಕರ್ರೆವ್ವನ ಕರಿಮೈ ಎರೆಯಲಿಕ್ಕೆ
ಹೊರಕಡೆಗೆ,ಹೇಲುಚ್ಚೆಗೆ,ಬೋಳಿಯರ ಮಡಿ ಒದ್ದೆಗೆ
ಭಟ್ಟರಾಚಮನಕ್ಕೆ,ಅದಕ್ಕೆ ಇದಕ್ಕೆ ಎದಕ್ಕು.

ಇಲ್ಲಿಯ ನೀರು ಗಂಗಾಷ್ಟಕ,ಸ್ಥಳಪುರಾಣ,ಭಟ್ಟರ ತೋಂಡಿ,ಕುರುಬರ ಹಾಡು ಏಸುವಿನ ಪವಾಡಗಳಿಗೆ ಹಾದರದ ಕೂಸು ಕರ್ಣರಿಗೆ ಹೀಗೆ ಹಲವು ನೆಲೆಗಳ ಬದುಕನ್ನ ಬಿಂಬಿಸುತ್ತದೆ.ಹಾಗೆಯೇ ವೈದಿಕ ಮೂಢನಂಬಿಕೆಗಳು ಸೃಷ್ಟಿಸುವ ಅಂಧ ಶ್ರದ್ಧೆಗಳೇನು ಎಂದು ಹೊಸ ಬೆಳಕಿನಲ್ಲಿ ಪರಿಶೀಲಿಸುತ್ತಾ ವೈಜ್ಞಾನಿಕ ತಿಳುವಳಿಕೆ ಇಲ್ಲದ ಜನ ಹೇಗೆ ಹೊಲಸನ್ನೂ ಪವಿತ್ರವೆಂದು ಭಾವಿಸುವ ಅಪಾಯದ ಕಡೆ ಸಾಗುತ್ತಾರೆ ಎಂಬ ಎಚ್ಚರವನ್ನೂ ಈ ಕವಿತೆ ತೋರುತ್ತದೆ.
ಬದುಕು ಜಡಗೊಂಡಾಗ, ಸಿನಿಕವೆನಿಸಿದಾಗ, ಮುದಿಯಾದಾಗ ಅದಕ್ಕೆ ಮತ್ತೆ ಹೊಸ ರಕ್ತ ಮಾಂಸತುಂಬಿ ಜೀವಂತಗೊಳಿಸುವ ಪ್ರತಿಕ್ರಿಯೆ ಮತ್ತು ಪ್ರತಿಭಟನೆಯ ಕಾವು ತುಂಬಿದವರು ದಲಿತ ಬಂಡಾಯದ ಕವಿಗಳು.ಬದಲಾವಣೆಗಾಗಿ ಕನಸು ಕಾಣುತ್ತಾ ಕೂರುವುದು ಪ್ರತಿ ಕ್ರಿಯೆ ನೀಡುತ್ತಾ ನಿಲ್ಲುವುದು ಸಲ್ಲದು ಪ್ರತಿಭಟನೆಯೊಂದೇ ಬದಲಾವಣೆಯ ಮೂಲ ಎಂದು ಭಾವಿಸಿದವರು ಕವಿ ಸಿದ್ಧಲಿಂಗಯ್ಯನವರು.ಅವರ ಸಾವಿರಾರು ನದಿಗಳು ಕಾವ್ಯವು ಸಮಾಜದ ಕೊಳಕುತನವನ್ನ ಮಲೀನತೆಯೆಲ್ಲವನ್ನ ತೊಳೆದು ಶುಭ್ರಗೊಳಿಬೇಕೆಂಬ ಆಶಯದಿಂದ ಹುಟ್ಟಿದ್ದು.ಇಲ್ಲಿಯ ನೀರಿಗೆ ಸಮಸಮಾಜದ ಕನಸಿದೆ.
ಸಾವಿರಾರು ನದಿಗಳು ಕಾವ್ಯವು ಸ್ವತಃ ಸಿದ್ಧಲಿಂಗಯ್ಯನವರಿಗೇ ಇಷ್ಟವಾದ ಕವಿತೆ ಕಾರಣ ಇದು ಕಾಲ್ಪನಿಕ ಲೋಕದ್ದಲ್ಲ. ಅಥವಾ ವ್ಯವಸ್ಥೆ ಬದಲಾಗಬೇಕು ಎಂಬ ಪೂರಕ ಸರಕಿನ ಕೋಣೆಯೊಳಗಿನ ಚಿಂತನಾ ಕಾವ್ಯ ಅಲ್ಲ.ಬೆಟ್ಟ ಗುಡ್ಡಗಳ ನಡುವೆ ಕಾಫಿ ತೋಟದ ಕೆಲಸಗಾರರು ನಡೆಸಿದ ಪ್ರತಿಭಟನಾ ಮೆರವಣಿಗೆಯಲ್ಲಿ ಕವಿಯೂ ಕೂಡಾ ಭಾಗವಹಿಸಿದಾಗ ಹುಟ್ಟಿದ ಕಾವ್ಯವಿದು.ತುಳಿತಕ್ಕೆ ಒಳಗಾದವರು ಒಂದಾಗಿ ಸಿಡಿದೆದ್ದಾಗ ತಮ್ಮ ಕನಸಿನ ಸುಖದ ಬದುಕು ಸಿಗಬಲ್ಲದೆಂಬ ಮಾಕ್ರ್ಸವಾದೀ ತತ್ವದ ಪ್ರಾಯೋಗಿಕ ಗುಣ ಈ ಕಾವ್ಯಕ್ಕಿದೆ.
ಲಕ್ಷಾಂತರ ನಾಗರಗಳು ಹುತ್ತಬಿಟ್ಟು ಬಂದಂತೆ
ಪಾತಾಳಕೆ ಇಳಿದರು
ಆಕಾಶಕೆ ನೆಗೆದರು
ಬೀದಿಯಲ್ಲಿ ಗಲ್ಲಿಯಲ್ಲಿ
ಬೇಲಿಮೆಳೆಯ ಮರೆಗಳಲ್ಲಿ
ಯಜಮಾನರ ಹಟ್ಟಿಯಲ್ಲಿ ಧಣಿಕೂರು ಪಟ್ಟದಲ್ಲಿ
ಎಲ್ಲೆಲ್ಲೂ ನನ್ನ ಜನ ನೀರಿನಂತೆ ನಿಂತರು.

ನೀರೆಂಬ ರೂಪಕವು ಕಾಲ್ಪನಿಕ ಸೊಗಸುಗಾರಿಕೆಯಲ್ಲಿ ಹಿಂದಿನ ಚರಿತ್ರೆಯನ್ನ ನೆನಪು ಮಾಡಿಕೊಳ್ಳುವಂತೆಯೇ ಕಟುವಾಸ್ತವದ ವರ್ತಮಾನದಲ್ಲಿ ಕ್ರಾಂತಿಯ ಮೊಳಗಾಗಿದೆ.ನೀರು ಕೆಲವರ ಆನಂದವನ್ನೂ ಮತ್ತೆ ಕೆಲವರ ಸಂಕಟದ ನಿರೂಪಣೆಗಳನ್ನ ಬಣ್ಣಿಸುವಂತೆಯೇ ಪ್ಯೂಡಲ್ ವ್ಯವಸ್ಥೆಯ ಕರಾಳ ಶಕ್ತಿಗಳನ್ನೂ ನಾಶಪಡಿಸುವ ಶಕ್ತಿಯ ರೂಪಕವೂ ಆಗಿದೆ.

Girl in a jacket
error: Content is protected !!