ಇಬ್ಬರ ಜಗಳ ಮೂರನೆಯವರಿಗೆ ಲಾಭ ಎಂಬಂತಿದೆ ರಾಜ್ಯದ ಮುಂದಿನ ಸಿಎಂ ಯಾರೆಂಬ ಚರ್ಚೆಯ ನಿರೀಕ್ಷಿತ ಫಲಿತ. ಡಿಕೆ ಶಿವಕುಮಾರ್ ಶತಾಯಗತಾಯ ಸಿಎಂ ಆಗುವ ಓಟ ಶುರುಮಾಡಿದ್ದಾರೆ. ಅವರನ್ನು ತಡೆದು ತಾವು ಮತ್ತೆ ಪೀಠಾಧಿಕಾರಿಯಾಗುವ ಛಲದಲ್ಲಿ ಸಿದ್ದರಾಮಯ್ಯ ತಂತ್ರ ಹೆಣೆಯುತ್ತಿದ್ದಾರೆ. ಇದೀಗ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕರಾಗಿರುವ ಬಿಕೆ ಹರಿಪ್ರಸಾದ್ ಹೆಸರೂ ಓಡುತ್ತಿದೆ. ದಿಲ್ಲಿ ಹೈಕಮಾಂಡ್ನ ಮನವೊಲಿಕೆ ಎಂಬ ಚಾಲಾಕಿ ರಾಜಕೀಯದಲ್ಲಿ ಹರಿಪ್ರಸಾದ್ ಈ ಇಬ್ಬರಿಗಿಂತ ಮುಂದಿರುವುದು ಭವಿಷ್ಯದ ರಾಜಕೀಯವನ್ನು ಉಲ್ಟಾಪಲ್ಟಾ ಮಾಡಬಹುದೇ…?
ಕುತೂಹಲದ ಕದನ ಕಾರಣ
ಕೈಲಿರುವ ಅಧಿಕಾರವನ್ನು ಹಸ್ತಾಂತರಿಸಲು ರಾಜ್ಯ ಬಿಜೆಪಿ ಸಿದ್ಧವಾಗಿರುವುದನ್ನು ಅದರ ಕಾರ್ಯವೈಖರಿಯೇ ಹೇಳುತ್ತಿದೆ. ಬರಲಿರುವ ವಿಧಾನ ಸಭಾ ಚುನಾವಣೆಯಲ್ಲಿ ೧೪೦- ೧೫೦ ಸೀಟು ಗೆಲ್ಲುವ ಮಾತನ್ನು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೊರತುಪಡಿಸಿ ಬೇರೆ ಯಾವೊಬ್ಬ ಬಿಜೆಪಿ ನಾಯಕರೂ ಆಡುತ್ತಿಲ್ಲ. ಇಳಿವಯಸ್ಸಿನಲ್ಲಿರುವ ಯಡಿಯೂರಪ್ಪನವರಿಗೆ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರಬೇಕೆಂಬ ಹಂಬಲದ ಒತ್ತಡ ಹೆಚ್ಚುವುದಕ್ಕೆ ಅವರದೆ ಆದ ಕಾರಣವಿದೆ. ಆದರೆ ಆ ಪಕ್ಷದ ಅನೇಕ ಮುಖಂಡರಿಗೆ ಬಿಜೆಪಿ ಅಕಸ್ಮಾತ್ ಅಧಿಕಾರಕ್ಕೆ ಬರುವಂತಾದರೆ ಅದರ ಶ್ರೇಯಸ್ಸು ಯಡ್ಡಿ ಕಿರೀಟದ ಭಾಗವಾಗುವುದು ಬೇಕಾಗಿಲ್ಲ. ಪಕ್ಷ ಅಧಿಕಾರಕ್ಕೆ ಬಾರದಿದ್ದರೂ ಚಿಂತಿಲ್ಲ ಯಡಿಯೂರಪ್ಪ ಕೈ ಮಾತ್ರ ಮತ್ತೆ ಮೇಲುಗೈ ಆಗಬಾರದು ಎಂಬ ಸಂಕಲ್ಪದಲ್ಲಿ ಹಲವು ನಾಯಕರುಳ್ಳ ಒಂದು ತಂಡ ಹಗಲಿರುಳೂ ಶ್ರಮಿಸುತ್ತಿದೆ. ಜನಕ್ಕೆ ಬಿಜೆಪಿ ಆಡಳಿತ ಸಾಕಾಗಿದೆ. ಹಾಗಂತ ಪರ್ಯಾಯವಾದರೂ ಕರ್ನಾಟಕದಲ್ಲಿ ಇದೆಯೆ ಎಂದರೆ ಸಮರ್ಪಕ ಉತ್ತರ ತೋಚುತ್ತಿಲ್ಲ. ಮುಖ್ಯ ವಿರೋಧ ಪಕ್ಷ ಕಾಂಗ್ರೆಸ್ ಒಳಜಗಳದ ಕೊಳಕು ಕೂಪದಿಂದ ಹೊರಬರುವ ಯಾವುದೆ ಸೂಚನೆ ತೋರುತ್ತಿಲ್ಲ. ಮತ್ತೆ ಅಧಿಕಾರಕ್ಕೆ ಬಿಜೆಪಿಯೇ ಮರಳುವುದಕ್ಕೆ ಇದು ನೆರವಾಗಬಹುದೆ? ಈಗಲೇ ಭವಿಷ್ಯ ನುಡಿಯುವುದು ಕಷ್ಟ.
ಹೇಳಬಹುದಾದ ಅಂಶವೆಂದರೆ ಕಾಂಗ್ರೆಸ್ ಮುಖಂಡರ ಜಗಳದ ಫಲ ಬಿಜೆಪಿಗೆ ವರವಾಗುವ ಎಲ್ಲ ಸಾಧ್ಯತೆಗಳೂ ಇವೆ ಎನ್ನುವುದನ್ನು ಮಾತ್ರ. ಇದಕ್ಕೆ ಪೂರಕವಾಗಿ ಕೆಲವು ಸಾಂದರ್ಭಿಕ ಸಾಕ್ಷ್ಯಗಳನ್ನು ನೋಡುತ್ತ ಸಾಗೋಣ. ಹತ್ತಾರು ಹಗರಣಗಳನ್ನು ನೆತ್ತಿಯ ಮೇಲೆ ಹೊತ್ತುಕೊಂಡು ತಿರುಗುತ್ತಿರುವ ಡಿ.ಕೆ. ಶಿವಕುಮಾರ್ ಅವರನ್ನು ಪ್ರದೇಶ ಕಾಂಗ್ರೆಸ್ ಅಧ್ಯಕ್ಷರನ್ನಾಗಿ ಮಾಡಲಾಗಿದೆ.
ಅವರ ಹತ್ತಿರ ಹೇರಳ ಹಣವಿದೆ ಎನ್ನುವುದೇ ಹೈಕಮಾಂಡ್ ತೀರ್ಮಾನಕ್ಕೆ ಕಾರಣ ಎನ್ನುವುದು ಆ ಪಕ್ಷದ ಅನೇಕರ ಅಭಿಮತ. ತಮ್ಮ ತೋಳ್ಬಲ ಮತ್ತು ಧನ ಬಲದಿಂದ ಪಕ್ಷವನ್ನು ಡಿಕೆಶಿ ಅಧಿಕಾರಕ್ಕೆ ತರುತ್ತಾರೆ ಎನ್ನುವುದು ವರಿಷ್ಟರ ತೀರ್ಮಾನ ಎನ್ನುವುದು ಒಳ ವರ್ತಮಾನ. ಹೈಕಮಾಂಡು ಕೆಲವು ದಿವಸಗಳ ಹಿಂದೆ ಎಂ.ಬಿ. ಪಾಟೀಲರನ್ನು ಪ್ರಚಾರ ಸಮಿತಿ ಅಧ್ಯಕ್ಷರನ್ನಾಗಿ ನೇಮಕ ಮಾಡಿದ್ದು ಅವರಲ್ಲಿರುವ ಸಂಪತ್ತೇ ಅವರ ನೇಮಕಾತಿಗೆ ಕಾರಣ ಎನ್ನುವುದು ಕೂಡಾ ಒಳ ವರ್ತಮಾನವೇ. ೨೦೧೮ರಲ್ಲಿ ರಾಜ್ಯ ವಿಧಾನ ಸಭೆಗೆ ಚುನಾವಣೆ ನಡೆದಾಗ ಸೋನಿಯಾ ಗಾಂಧಿ ಕರ್ನಾಟಕದಲ್ಲಿ ಪ್ರಚಾರ ಮಾಡಿದ್ದು ಪಾಟೀಲರ ಕ್ಷೇತ್ರದಲ್ಲಿ ಮಾತ್ರ ಎನ್ನುವುದನ್ನು ಮರೆಯಬಾರದು. ಉಳಿದ ಅಭ್ಯರ್ಥಿಗಳು ಗೆಲ್ಲುತ್ತಾರೋ ಸೋಲುತ್ತಾರೋ ಎನ್ನುವುದು ಸೋನಿಯಾರಿಗೆ ಮುಖ್ಯವಾಗಿರಲಿಲ್ಲ; ಪಾಟೀಲರು ಗೆಲ್ಲುವುದು ಮಾತ್ರವೇ ಅವರಿಗೆ ಮುಖ್ಯವಾಗಿತ್ತು!
ಕೆಪಿಸಿಸಿ ಅಧ್ಯಕ್ಷರಾಗಿ ಡಿಕೆಶಿ ಅಧಿಕಾರಕ್ಕೆ ಬಂದು ಹತ್ತಿರ ಹತ್ತಿರ ಎರಡು ವರ್ಷ. ಐವರು ಕಾರ್ಯಾಧ್ಯಕ್ಷರು, ಒಬ್ಬರು ಪ್ರಚಾರ ಸಮಿತಿ ಅಧ್ಯಕ್ಷರನ್ನು ನೇಮಿಸಿರುವ ಹೈಕಮಾಂಡ್ ಜಿಲ್ಲಾ ಅಧ್ಯಕ್ಷರೂ ಸೇರಿದಂತೆ ಪದಾಧಿಕಾರಿಗಳ ನೇಮಕಕ್ಕೆ ಇನ್ನೂ ಹಸಿರು ನಿಶಾನೆ ತೋರಿಲ್ಲ. ಪದಾಧಿಕಾರಿಗಳನ್ನು ನೇಮಕ ಮಾಡುವುದು ಕಾರ್ಯಾಧ್ಯಕ್ಷರನ್ನು ನೇಮಿಸಿದಷ್ಟು ಸುಲಭವಲ್ಲ ಎನ್ನುವುದು ಹೈಕಮಾಂಡ್ಗೆ ಮನವರಿಕೆಯಾಗಿದೆ. ಈ ವಿಚಾರ ಹೈಕಮಾಂಡ್ನ ತಲೆಬಿಸಿಯನ್ನು ಕ್ಷಣಮಾತ್ರಕ್ಕೂ ತಂಪಾಗದ ರೀತಿಯಲ್ಲಿ ಹೆಚ್ಚಿಸುತ್ತಿದೆ. ಕೆಪಿಸಿಸಿ ಅಧ್ಯಕ್ಷರಾಗಿ ಡಿಕೆಶಿ ತಮ್ಮದೆ ಆದೊಂದು ಪದಾಧಿಕಾರಿಗಳ ಪಟ್ಟಿಯನ್ನು ವರಿಷ್ಟರ ಸಮ್ಮತಿ ಕೋರಿ ಕಳಿಸಿದ್ದಾರೆ. ಈ ಪಟ್ಟಿಗೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರೂ ಆಗಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸುತರಾಂ ಒಪ್ಪಿಲ್ಲ. ಪ್ರತಿಯಾಗಿ ತಮ್ಮದೇ ಆದೊಂದು ಪ್ರತ್ಯೇಕ ಪಟ್ಟಿಯನ್ನು ದೆಹಲಿಗೆ ರವಾನಿಸಿದ್ದಾರೆ. ಇಬ್ಬರೂ ಕುಳಿತು ಚರ್ಚಿಸಿ ಉಭಯ ಸಮ್ಮತ ಪಟ್ಟಿ ಕಳಿಸುವಂತೆ ಹೈಕಮಾಂಡ್ ಖಡಕ್ ಸೂಚನೆ ನೀಡಿದ್ದರೂ ಸಿದ್ದು ಮತ್ತು ಡಿಕೆಶಿ ನಡುವೆ ಗೋಡೆಯಂತೆ ನಿಂತಿರುವ ಅನುಮಾನದ ಕಾರಣವಾಗಿ ಫಲಿತಾಂಶ ಶುಭ ಸೂಚಕವಾಗಿಲ್ಲ.
ರಾಮಲಿಂಗಾರೆಡ್ಡಿ,ಈಶ್ವರ ಖಂಡ್ರೆ, ಸಲೀಂ ಅಹಮದ್, ಸತೀಶ ಜಾರಕಿಹೊಳಿ, ಧ್ರುವನಾರಾಯಣ… ಹೀಗೆ ಐವರನ್ನು ಕಾರ್ಯಾಧ್ಯಕ್ಷರನ್ನಾಗಿ ಮತ್ತು ಎಂ.ಬಿ.ಪಾಟೀಲರನ್ನು ಪ್ರಚಾರ ಸಮಿತಿ ಅಧ್ಯಕ್ಷರನ್ನಾಗಿ ನೇಮಿಸಿರುವ ಹೈಕಮಾಂಡ್ ಕೆಪಿಸಿಸಿ ಪದಾಧಿಕಾರಿಗಳನ್ನು ನೇಮಿಸುವುದಕ್ಕೆ ಮಾತ್ರ ಇನ್ನೂ ಗಟ್ಟಿ ಮನಸ್ಸು ಮಾಡಿಲ್ಲ. ಮಾತ್ರವಲ್ಲ ಒಬ್ಬರಾದರೂ ಮಹಿಳೆಗೆ ಕಾರ್ಯಾಧ್ಯಕ್ಷ ಸ್ಥಾನ ನೀಡುವ ಔದಾರ್ಯವನ್ನೂ ತೋರಿಲ್ಲ. ಇದು ಆ ಪಕ್ಷದ ಬಹುತೇಕ ಮಹಿಳಾ ನಾಯಕರ ಒಳ ಮುನಿಸಿಗೆ ಕಾರಣವಾಗಿರುವುದು ಕೆಪಿಸಿಸಿ ಅಧ್ಯಕ್ಷರ ಗಮನಕ್ಕೂ ಬಂದಿದೆ.
ಮುಂದಿನ ತಿಂಗಳ ಮಧ್ಯ ಭಾಗದಲ್ಲಿ ಕರ್ನಾಟಕದ ಮುಖಂಡರ ಸಭೆಯನ್ನು ದೆಹಲಿಯಲ್ಲಿ ಹೈಕಮಾಂಡ್ ಕರೆದಿದ್ದು ಒಳ ಜಗಳದಲ್ಲಿ ಮುಳುಗಿರುವ ನಾಯಕರ ನಡುವೆ ತೇಪೆ ಹಚ್ಚುವ ಕೆಲಸ ನಡೆದೀತೆಂಬ ನಿರೀಕ್ಷೆ ಸಣ್ಣ ಪ್ರಮಾಣದಲ್ಲಾದರೂ ಗರಿಗೆದರಿದೆ. ಮಾರ್ಚ್ ಹತ್ತರಂದು ಉತ್ತರ ಪ್ರದೇಶ ಸೇರಿದಂತೆ ಐದು ರಾಜ್ಯ ವಿಧಾನ ಸಭೆಗೆ ನಡೆದಿರುವ /ನಡೆಯುತ್ತಿರುವ ಚುನಾವಣಾ ಫಲಿತಾಂಶ ಹೊರಬೀಳಲಿದೆ. ಅದರ ತರುವಾಯ ಉದ್ದೇಶಿತ ಈ ಸಭೆ ನಡೆಯುವ ಸಾಧ್ಯತೆ ಇದೆ. ಮನಸ್ಸು ಬಂದಾಗಲೆಲ್ಲ ವಿದೇಶಕ್ಕೋ ಮತ್ತೆಲ್ಲಿಗೋ ಯಾರಿಗೂ ಸುಳಿವು ಕೊಡದೆ ಹೋಗಿ ಅದೃಶ್ಯವಾಗುವ “ಕಾಣದಂತೆ ಮಾಯವಾದನು” ಖಯಾಲಿಯ ರಾಹುಲ್ ಗಾಂಧಿ ಸಮಯ ಬಿಡುವನ್ನು ಆಧರಿಸಿ ಸಭೆ ನಡೆಯಲಿದೆ. ಹಿಂದೆ ಆರ್.ವಿ.ದೇಶಪಾಂಡೆ ಕೆಪಿಸಿಸಿ ಅಧ್ಯಕ್ಷರಾಗಿದ್ದ ಸಮಯದಲ್ಲಿ ಡಿಕೆಶಿ ಕಾರ್ಯಾಧ್ಯಕ್ಷರಾಗಿದ್ದರು. ಕಾರ್ಯಾಧ್ಯಕ್ಷರು ಎಷ್ಟೆಲ್ಲ ಬಗೆಯಲ್ಲಿ ಅಧ್ಯಕ್ಷರನ್ನು ಗೋಳು ಹೊಯ್ದುಕೊಂಡರೆನ್ನುವುದನ್ನು ಬೇರೆಯವರು ಮರೆತಿರಬಹುದು ಆದರೆ ದೇಶಪಾಂಡೆ ಮಾತ್ರ ಮರೆತಿರಲಾರರು. ಈಗ ಅದೇ ಸ್ಥಿತಿ ಡಿಕೆಶಿಗೆ ಎದುರಾಗಿದೆ. ಕಾರ್ಯಾಧ್ಯಕ್ಷರನ್ನು ಜೊತೆಗೆ ಕರೆದೊಯ್ಯುವುದು ಎಂದರೆ ಕಲ್ಲನ್ನು ಕಾಲಿಗೆ ಕಟ್ಟಿಕೊಂಡು ಈಜಿದಂತೆ. ಡಿಕೆಶಿ ಒಂದು ಕಾಲದಲ್ಲಿ ದೇಶಪಾಂಡೆ ಪಾಲಿಗೆ ಕಲ್ಲಾಗಿದ್ದವರು. ಈಗ ಅವರ ಕಾಲಿಗೆ ಐದು ಕಲ್ಲುಗಳು ಆತುಕೊಂಡಿವೆ. ಐವರು ಕಾರ್ಯಾಧ್ಯಕ್ಷರಲ್ಲಿ ಕೆಲವರದು ತಂಟೆ ತಕರಾರಿಲ್ಲ. ಅಧ್ಯಕ್ಷರ ಜೊತೆ ಕ್ಯಾಮೆರಾದಲ್ಲಿ ಪೋಸು ಕೊಡುವುದರಲ್ಲಿ ಅವರ ಪೈಪೋಟಿ ನಡೆಯುತ್ತಿರುತ್ತದೆ. ಓಡೋಡುತ್ತ ಬಂದು ಕ್ಯಾಮೆರಾಕ್ಕೆ ಮುಖ ಒಡ್ಡುವ ಅವರನ್ನು ನೋಡುವುದು ನಿಜಕ್ಕೂ ಬ್ರಹ್ಮಾನಂದ! ಆದರೆ ಇನ್ನು ಕೆಲವರು ಅಷ್ಟೆಲ್ಲ ಸುಲಭದಲ್ಲಿ ಡಿಕೆಶಿ ಹೇಳಿದ್ದಕ್ಕೆಲ್ಲ ಗೋಣು ಆಡಿಸುವವರಲ್ಲ.
ಈ ಮಧ್ಯೆ ಬಿ.ಕೆ. ಹರಿಪ್ರಸಾದ್ರನ್ನು ವಿಧಾನ ಪರಿಷತ್ನ ವಿರೋಧ ಪಕ್ಷದ ನಾಯಕನನ್ನಾಗಿ ಹೈಕಮಾಂಡ್ ನೇಮಿಸಿದೆ. ಹರಿಪ್ರಸಾದ್ (ಈಡಿಗ ಸಮುದಾಯ) ಮತ್ತು ಸಿದ್ದರಾಮಯ್ಯ (ಕುರುಬ ಸಮುದಾಯ) ಇಬ್ಬರೂ ಹಿಂದುಳಿದ ವರ್ಗಕ್ಕೆ ಸೇರಿದವರು. ಪಕ್ಷದಲ್ಲಿ ಹಿಂದುಳಿದ ವರ್ಗದವರಲ್ಲದೆ ಬೇರೆ ಯಾರೂ ಅರ್ಹರಿಲ್ಲವೆ ಎನ್ನುವುದು ಕೇವಲ ಸಿ.ಎಂ. ಇಬ್ರಾಹಿಂ ವಾದ ಮಾತ್ರವಾಗಿಲ್ಲ. ಇನ್ನೂ ಹಲವರು ಆಪ್ತವಾಗಿ ಇದೇ ಅಸಮಾಧಾನವನ್ನು ಹಂಚಿಕೊಳ್ಳುತ್ತಾರೆ. ದಶಕಗಳಿಂದ ದೆಹಲಿಯಲ್ಲೇ ಬೀಡುಬಿಟ್ಟು ಹೈಕಮಾಂಡ್ ಜೊತೆ ಸೇರಿ ಸ್ಥಳೀಯ ರಾಜಕಾರಣದ ಅಸಲಿ ಪಟ್ಟುಗಳನ್ನು ಕರಗತ ಮಾಡಿಕೊಂಡಿರುವ ಹರಿಪ್ರಸಾದ್, ತಮ್ಮ ಮುಂದೆ ಬಹಳ ದೊಡ್ಡ ಗುರಿಯನ್ನು ಇಟ್ಟುಕೊಂಡಿದ್ದಾರೆ. ಇದೀಗ ನಿಯಂತ್ರಣ ಹೀನವಾಗಿ ನಡೆಯುತ್ತಿರುವ ಸಿದ್ದು ಡಿಕೆಶಿ ಜಗಳವನ್ನು ತಾವು ಹೇಗೆ ನಗದು ಮಾಡಿಕೊಳ್ಳಬಹುದೆಂಬ ಅಂದಾಜು ಲೆಕ್ಕಾಚಾರದ ಸುತ್ತ ಅವರಿಟ್ಟುಕೊಂಡಿರುವ ಗುರಿ ಗಿರಕಿ ಹೊಡೆಯುತ್ತಿದೆ. ಚುನಾವಣೆ ಬಳಿಕ ತಾವು ಮುಖ್ಯಮಂತ್ರಿ ಆಗಲೇಬೇಕೆಂಬುದು ಡಿಕೆಶಿ ಛಲ. ತಮಗೆ ಸಿದ್ದರಾಮಯ್ಯ ಅಡ್ಡಗಾಲಾಗಬಹುದೆಂಬ ಆತಂಕ ಅವರಲ್ಲಿದೆ. ಎರಡನೆ ಬಾರಿಗೆ ಸಿಎಂ ಆಗುವ ತವಕದಲ್ಲಿರುವ ಸಿದ್ದರಾಮಯ್ಯ, ಡಿಕೆಶಿ ಓಟಕ್ಕೆ ತಡೆ ಒಡ್ಡುವ ಕೆಲಸ ಶುರು ಮಾಡಿದ್ದಾರೆ ಎನ್ನಲಾಗುತ್ತಿದೆ. ಇಬ್ಬರ ಜಗಳ ಮೂರನೆಯವನಿಗೆ ಲಾಭ ತಂದೇ ತರುತ್ತದೆ ಎಂಬ ಪಂಚತಂತ್ರದ ಕಥೆಯಂತೆ ಹರಿಪ್ರಸಾದ್ ಸಿಎಂ ಸ್ಥಾನದ ಗುರಿ ಹಾಕಿಕೊಂಡಿದ್ದಾರೆ.
ದೆಹಲಿ ಮಟ್ಟದಲ್ಲಿ ಕಾಂಗ್ರೆಸ್ನ ಬಹುತೇಕ ಹಿರಿಯ ನಾಯಕರು ಹರಿಪ್ರಸಾದ್ ಅವರ ಖಾಸಾ ಖಾಸಾ ದೋಸ್ತುಗಳಾಗಿರುವುದು ಅವರಿಗೆ ಇರುವ ಬಹುದೊಡ್ಡ ಅಡ್ವಾಂಟೇಜು. ಇಂದಿರಾ ಗಾಂಧಿ, ರಾಜೀವ್ ಗಾಂಧಿ ಕಾಲದಿಂದ ಇವತ್ತಿನ ಸೋನಿಯಾ, ರಾಹುಲ್, ಪ್ರಿಯಾಂಕಾ ಗಾಂಧಿವರೆಗೆ ಆ ಪರಿವಾರದ ನಿಷ್ಟಾವಂತ ಕಾರ್ಯಕರ್ತ ಎಂಬ ಗರಿಮೆ ಹರಿಪ್ರಸಾದ್ ಅವರದು. ಕರ್ನಾಟಕದ ಯಾವುದೇ ಸಂಗತಿ ಹೈಕಮಾಂಡ್ವರೆಗೂ ಹೋದರೆ ಹರಿಪ್ರಸಾದ್ ಕೊಡುವ ಅಭಿಪ್ರಾಯಕ್ಕೆ ಹೆಚ್ಚು ತೂಕವಿದೆ.
ಎಸ್.ಆರ್.ಪಾಟೀಲರ ಅವಧಿ ತರುವಾಯ ಇಬ್ರಾಹಿಂ ಸೇರಿದಂತೆ ಆ ಪಕ್ಷದ ಹಲವು ಶಾಸಕರು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಸ್ಥಾನಾಕಾಂಕ್ಷಿಗಳಾಗಿ ಟವೆಲ್ ಹಾಕಿದ್ದರು. ಆದರೆ ಅದೃಷ್ಟ ಹರಿಪ್ರಸಾದ್ರತ್ತ ವಾಲಿತ್ತು. ಆ ಸಂದರ್ಭದಲ್ಲಿ ಸಿದ್ದರಾಮಯ್ಯ ನಿಲುವಿಗೆ ವಿರುದ್ಧವಾಗಿ ಹರಿಪ್ರಸಾದ್ ಜೊತೆ ನಿಂತಿದ್ದವರು ಡಿಕೆಶಿ. ಆದರೆ ಈಗ ಅದೇ ಡಿಕೆಶಿ ಆಕಾಂಕ್ಷೆಗೆ ಮುಳುವಾಗುವ ಸೂಚನೆ ಅದೇ ಹರಿಪ್ರಸಾದ್ ಕಡೆಯಿಂದ ಕಾಣುತ್ತಿದೆ. ಜನ ಬಿಜೆಪಿ ಬದಲಿಗೆ ಕಾಂಗ್ರೆಸ್ಗೆ ಓಟು ಹಾಕುವ ಮನಃಸ್ಥಿತಿಯಲ್ಲಿದ್ದರೂ ಆ ಓಟು ನಿಚ್ಚಳ ಬಹುಮತ ತರುವ ಸಾಧ್ಯತೆ ಕಡಿಮೆ. ಹಾಗಾದಲ್ಲಿ ಮತ್ತೆ ಜೆಡಿಎಸ್ ಮನೆ ಬಾಗಿಲಿಗೆ ಕಾಂಗ್ರೆಸ್ಸು ಹೋಗಬೇಕಾಗಿ ಬರಬಹುದು. ಅಂಥ ಸಂದರ್ಭದಲ್ಲಿ ಜೆಡಿಎಸ್ ನಾಯಕತ್ವ ಕೆಲವು ಷರತ್ತನ್ನು ಒಡ್ಡಬಹುದು. ಅದರಲ್ಲಿ ಮುಖ್ಯವಾದುದು ಯಾರು ಸಿಎಂ ಆಗಬೇಕೆನ್ನುವುದು. ಆಗ ತನ್ನ ಅಭ್ಯರ್ಥಿಯನ್ನು ಜೆಡಿಎಸ್ ಹೆಸರಿಸಬಹುದು. ಕಾಂಗ್ರೆಸ್ನಿಂದಲೇ ಆ ಸ್ಥಾನಕ್ಕೆ ಒಪ್ಪುವ ಸಂದರ್ಭ ಎದುರಾದಲ್ಲಿ ಡಿಕೆಶಿಗೆ ವಿರೋಧ ಎದುರಾಗುತ್ತದೆ. ಈ ಇಕ್ಕಟ್ಟಿನಿಂದ ಪಾರಾಗಲು ಡಿಕೆಶಿ ಹಣಿಯಲಿರುವ ತಂತ್ರ ಏನೆನನ್ನುವುದು ಕೂಡಾ ಚುನಾವಣಾ ಕದನ ಕುತೂಹಲದ ಸರಕಾಗಿದೆ.