ಬೆಂಗಳೂರು, ಜು.10: ಜೈಲಿನಲ್ಲಿದ್ದುಕೊಂಡೆ ಕಿಡಿಗೇಡಿಗಳು ಇತ್ತೀಚೆಗೆ ನಗರದಲ್ಲಿ ನಡೆದ ಕೃತ್ಯಗಳಿಗೆ ಸ್ಕೆಚ್ ಹಾಕಿದ್ದರು ಎನ್ನುವ ಅಂಶ ಈಗ ಬಯಲಿಗೆ ಬಂದಿದೆ.
ಈ ಆಧಾರದ ಮೇಲೆ ಸಿಸಿಬಿ ಪೊಲೀಸರು ಪರಪ್ಪನ ಅಗ್ರಹಾರ ಜೈಲಿನ ಮೇಲೆ ದಿಡೀರ್ ದಾಳಿ ನಡೆಸಿದರು.
ಇತ್ತೀಚೆಗೆ ಶಾಸಕ ಆರವಿಂದ್ ಬೆಲ್ಲದ್ ಅವರು ನನ್ನ ದೂರವಾಣಿ ಕದ್ದಾಲಿಕೆ ಮಾಡುತ್ತಿರುವುದರ ಜತೆಗೆ ಜೈಲಿನಲ್ಲಿರುವ ವ್ಯಕ್ತಿಯೊಬ್ಬ ನನಗೆ ದೂರವಾಣಿ ಕರೆ ಮಾಡಿದ್ದ ಎಂದು ಆರೋಪಿಸಿದ್ದರು.ಇದರ ಜತೆಗೆ ಬಿಬಿಎಂಪಿ ಮಾಜಿ ಸದಸ್ಯೆ ರೇಖಾ ಕದಿರೇಶ್ ಹತ್ಯೆ ಹಾಗೂ ಗೋವಿಂದಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸೈಯದ್ ಕರೀಂ ಆಲಿ ಎಂಬ ವ್ಯಕ್ತಿಯನ್ನು ಅಪಹರಿಸಿ, ನಿರ್ಜನ ಪ್ರದೇಶದಲ್ಲಿ ಕತ್ತು ಕೊಯ್ದು ಕೊಲೆ ಮಾಡಲು ಜೈಲಿನಲ್ಲೇ ಸ್ಕೆಚ್ ಹಾಕಲಾಗಿತ್ತು ಎಂಬ ಮಾಹಿತಿ ಸಿಸಿಬಿ ಪೊಲೀಸರಿಗೆ ದೊರೆತಿತ್ತು.
ಹೀಗಾಗಿ ಪರಪ್ಪನ ಅಗ್ರಹಾರ ಬಂಧಿಖಾನೆ ಮೇಲೆ ದಾಳಿ ನಡೆಸಿ ಕಿಡಿಗೇಡಿಗಳ ಎಡೆಮುರಿ ಕಟ್ಟಲು ಪ್ಲಾನ್ ರೂಪಿಸಿದ ಸಿಸಿಬಿಪೊಲೀಸರು ಇಂದು ಮುಂಜಾನೆ ಐದು ಗಂಟೆಯಲ್ಲಿ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಹಾಗೂ ಓರ್ವ ಡಿಸಿಪಿ ನೇತೃತ್ವದ ತಂಡ ಐದು ಮಂದಿ ಎಸಿಪಿ ಹಾಗೂ 120 ಪೊಲೀಸ್ ಸಿಬ್ಬಂದಿಗಳೊಂದಿಗೆ ದಿಡೀರ್ ದಾಳಿ ನಡೆಸಿ 9 ಗಂಟೆವರಿಗೆ ಪರಿಶೀಲನೆ ನಡೆಸಿ ರೌಡಿಗಳ ಬ್ಯಾರಾಕ್‍ಗಳನ್ನು ಜಾಲಾಡಿದ್ದಾರೆ.
ದಾಳಿ ಸಂದರ್ಭದಲ್ಲಿ ರೌಡಿಗಳು ಜೈಲಿನಲ್ಲೇ ಬಿಂದಾಸ್ ಜೀವನ ನಡೆಸುತ್ತಿದ್ದಲ್ಲದೆ, ಊಟದ ತಟ್ಟೆಗಳನ್ನೇ ಮಾರಕಾಸ್ತ್ರಗಳನ್ನಾಗಿ ಪರಿವರ್ತಿಸಿಕೊಂಡಿಟ್ಟುಕೊಂಡಿರುವುದು ಪತ್ತೆಯಾಗಿದೆ. ಇದರ ಜತೆಗೆ ಮೊಬೈಲ್‍ಗಳು, ಸಿಮ್‍ಗಳು, ಮಾದಕದ್ರವ್ಯ, ಗಾಂಜಾ, ಸ್ಮೋಕಿಂಗ್ ಪೈಪುಗಳು, ಚಾಕು, ಚೂರಿ ಸೇರಿದಂತೆ ಹಲವಾರು ಮಾರಕಾಸ್ತ್ರಗಳು ರೌಡಿಗಳ ಬಳಿ ಇರುವುದನ್ನು ಪತ್ತೆ ಮಾಡಲಾಗಿದೆ.ಮಾರಕಾಸ್ತ್ರ ಮತ್ತಿತರ ವಸ್ತುಗಳನ್ನಿಟ್ಟುಕೊಂಡಿದ್ದ ರೌಡಿಗಳಿಗೆ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಅವರು ಎಚ್ಚರಿಕೆ ನೀಡಿ , ಜೈಲಿನಲ್ಲಿ ಯಾವುದೇ ವಸ್ತುಗಳನ್ನು ಇಟ್ಟುಕೊಳ್ಳಬಾರದು ಹಾಗೂ ಜೈಲಿನಿಂದಲ್ಲೆ ಅಪರಾಧ ಕೃತ್ಯಗಳಿಗೆ ಸ್ಕೆಚ್ ಹಾಕುವುದು ಕಂಡು ಬಂದರೆ ತಕ್ಕ ಶಾಸ್ತಿ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿ ಬಂದಿದ್ದಾರೆ.