ಬೆಂಗಳೂರು ,ಜೂ, ೨೩; ಮಲತಾಯಿ ಮಾತು ಕೇಳಿ ಮೂವರು ಮಕ್ಕಳ ಮೇಲೆ ತಂದೆಯೇ ಅಮಾನುಷವಾಗಿ ಹಲ್ಲೆ ಮಾಡಿದ ಪಾಪಿ ತಂದೆಯನ್ನು ಜೆಪಿ ನಗರ ಪೊಲೀಸರು ಬಂಧಿಸಿದ್ದಾರೆ.
ಆರೋಪಿ ಸೆಲ್ವಾ ಕ್ರೂಸರ್ ಚಾಲಕನಾಗಿದ್ದು. ಆತನ ಎರಡನೇ ಹೆಂಡತಿ ಮಾತು ಕೇಳಿ ತನ್ನ ಸ್ವಂತ ಮಕ್ಕಳ ಭುಜ, ಮೊಣಕೈ ಮತ್ತು ಪಾದಗಳಿಗೆ ಚಾಕುವಿನಿಂದ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾನೆ. ನೋವನ್ನು ತಡೆಯಲಾರದೆ ಮಕ್ಕಳು ಕಿರುಚುತ್ತಾ ಮನೆಯಿಂದ ಹೊರಗೆ ಓಡಿ ಬಂದಿದ್ದಾರೆ. ಈ ವೇಳೆ ಅಕ್ಕಪಕ್ಕದವರು ಪೊಲೀಸರಿಗೆ ಮಾಹಿತಿ ನೀಡಿ ಮಕ್ಕಳನ್ನು ರಕ್ಷಿಸಿದ್ದಾರೆ.
ಮೂರು ತಿಂಗಳ ಹಿಂದಷ್ಟೇ ಸೆಲ್ವನ ಮೊದಲ ಪತ್ನಿ ಅಂಜಲಿ ಮೃತಪಟ್ಟಿದ್ದರು. ಹೀಗಾಗಿ ಸೆಲ್ವ ಮೊದಲ ಪತ್ನಿಯ ಮೂವರು ಮಕ್ಕಳನ್ನು ಎರಡನೇ ಪತ್ನಿ ಸತ್ಯಾ ಮನೆಗೆ ಕರೆತಂದಿದ್ದ. ಆದರೆ, ಸತ್ಯಾಗೆ ಇದು ಇಷ್ಟವಿರಲಿಲ್ಲ. ಸೆಲ್ವ ಕೆಲಸಕ್ಕೆ ಹೋಗಿ ವಾಪಸ್ ಮನೆಗೆ ಬರುತ್ತಿದ್ದಂತೆ ಮಕ್ಕಳ ಮೇಲೆ ದೂರು ನೀಡುತ್ತಿದ್ದಳು. ಹೀಗಾಗಿ ಎರಡನೇ ಪತ್ನಿ ಸತ್ಯಾಳ ಮಾತನ್ನ ಕೇಳಿ ಸ್ವಂತ ತಂದೆಯೇ ಮಕ್ಕಳ ಮೇಲೆ ಕ್ರೌರ್ಯ ಮೆರೆದಿರೋ ಘಟನೆ ಕಳವಳಕ್ಕೆ ಕಾರಣವಾಗಿದೆ.
ಪೊಲೀಸರು ಇದೀಗ ಆರೋಪಿ ಸೆಲ್ವಾನನ್ನು ಬಂಧಿಸಿ ಸೆಕ್ಷನ್ ೩೦೭ ಅಡಿಯಲ್ಲಿ ಕೊಲೆ ಯತ್ನ ಪ್ರಕರಣ ದಾಖಲಿಸಿದ್ದಾರೆ. ಅಲ್ಲದೆ, ಆತನನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಮಾರಣಾಂತಿಕ ಹಲ್ಲೆಗೆ ಒಳಗಾದ ಮಕ್ಕಳನ್ನು ರಕ್ಷಿಸಿ ಬಾಲ ಭವನದಲ್ಲಿ ಆಶ್ರಯ ನೀಡಲಾಗಿದೆ.
ಸ್ವಂತ ಮಕ್ಕಳ ಮೇಲೆ ಹಲ್ಲೆ ಮಾಡಿದ ಪಾಪಿ ತಂದೆ ಬಂಧನ
Share