writing-ಪರಶಿವ ಧನಗೂರು
ಭಕ್ಷಿಗಾರ್ಡನ್..! ಬೆಂಗಳೂರಿನ ಭಯಾನಕ ರಕ್ತಚರಿತ್ರೆಯ ಪುಟಗಳಿರುವ ವಿಚಿತ್ರವಾದ ವಿಭಿನ್ನ ಏರಿಯಾ! ಈ ಗಾರ್ಡನ್ ಗ್ಯಾಂಗ್ ವಾರ್ ನ ಮಾಫಿಯಾದ ಇತಿಹಾಸದ ಪುಟಗಳಲ್ಲಿ ಬೆಳಕಿಗೆ ಬರದ ಎಷ್ಟೋ ನಿಗೂಢ ಗುಪ್ತ ಕ್ರೂರ ಕತೆಗಳಿವೆ. ಪದೇ ಪದೇ ತನ್ನ ಅಪರಾಧ ಕೈತ್ಯಗಳಿಗಾಗಿ ಬೆಂಗಳೂರಿಗರನ್ನೂ ಬೆಚ್ಚಿ ಬೀಳಿಸುತ್ತ , ಹೆದರಿಸುತ್ತ ನರಳುತ್ತಾ ಹೊರಳುತ್ತಿದ್ದ ಬೆಂಗಳೂರಿನ ಹೈದಯ ಭಾಗದಲ್ಲಿರುವ ಭಕ್ಷಿಗಾರ್ಡನ್ ಈಗ ಮಾಜಿ ಮಹಿಳಾ ಕಾರ್ಪೋರೇಟರ್ ಬೀಕರ ಕೊಲೆಗೆ ಸಾಕ್ಷಿಯಾಗಿ, ರಾಜ್ಯದ ಜನಪ್ರತಿನಿಧಿಗಳನ್ನೇ ಬೆದರಿಸಿ, ನಿದ್ದೆಗೆಡಿಸಿದೆ. ಆಳುವ ಸರ್ಕಾರವೇ ತಣ್ಣಗೆ ತಲ್ಲಣಗೊಂಡು ತನ್ನ ಪಕ್ಷದ ಮಾಜಿ ಕಾರ್ಪೋರೇಟರ್ ರೇಖಾ ಕದಿರೇಶ್ ರನ್ನು ಕೊಲೆಗೈದ ಅಪರಾಧಿಗಳಿಗೆ ತಕ್ಕ ಶಿಕ್ಷೆ ಮಾಡಿಸಲು ಕಾನೂನು ಕಾರ್ಯಾಚರಣೆಗಿಳಿದಿದೆ. ಸಂಬಂಧಿಕರ ಹಣದಾಹಕ್ಕೆ, ಅಧಿಕಾರದಾಸೆಗೆ ಹಾಡುಹಗಲೇ ನಡುಬೀದಿಯಲ್ಲಿ ಮಾಜಿ ಮಹಿಳಾ ಕಾರ್ಪೋರೇಟರ್ ಭೀಕರವಾಗಿ ರಕ್ತಕಾರಿಕೊಂಡು ಉಸಿರು ಚೆಲ್ಲಿದ್ದಾರೆ. ಮತ್ತೆ ಮತ್ತೆ ಜನಸಾಮಾನ್ಯರಿಗೆ ಬೆಂಗಳೂರು ಸೇಫ್ ಅಲ್ಲವೆಂಬುದು ಸಾಬೀತಾಗುತ್ತಿದೆ. ಹತ್ತು ವರ್ಷ ಬೆಂಗಳೂರಿನ ಮಹಾನಗರ ಪಾಲಿಕೆ ವಾರ್ಡ್ ಒಂದರ ಸದಸ್ಯೆಯಾಗಿ,
ಜನಪ್ರತಿನಿಧಿಯಾಗಿ ಆಳ್ವಿಕೆ ನಡೆಸಿದವರನ್ನೇ ನಿರಾಯಾಸವಾಗಿ, ನಿರ್ಭಯವಾಗಿ ನಡುಬೀದಿಯಲ್ಲಿ ಚಾಕುವಿನಿಂದ ಇರಿದು ಹತ್ಯೆ ಮಾಡಿ ಪರಾರಿಯಾಗುತ್ತಾರೆಂದರೇ ರಾಜಧಾನಿ ಬೆಂಗಳೂರಿನಲ್ಲಿ ಕಾನೂನು ಸುವ್ಯವಸ್ಥೆ ಎಷ್ಟು ಹದಗೆಟ್ಟಿದೆ ಎಂಬುದನ್ನು ಊಹಿಸಲು ಸಾಧ್ಯವಿಲ್ಲ. ಬೆಂಗಳೂರಿನ ರೌಡಿಗಳು , ಕಳ್ಳಕಾಕರು, ದರೋಡೆಕೋರರು ನಗರದ ಸಿಸಿಬಿ ಪೊಲೀಸರೆಂದರೇ ಪ್ಯಾಂಟ್ ಒದ್ದೆ ಮಾಡಿಕೊಳ್ಳುತ್ತಿದ್ದ ಕಾಲವೊಂದಿತ್ತು. ಆದರೆ ಈಗ ಇದೇ ಸಿಸಿಬಿ ಕಚೇರಿಯ ಹಿಂಭಾಗದಲ್ಲಿಯೆ ಈ ಎಲ್ಲಾ ಕೊಲೆ ಕುಕ್ರತ್ಯಗಳೂ ಎಗ್ಗಿಲ್ಲದೆ ಜರುಗುತ್ತಿರುವುದು. ಸಿಟಿ ಕ್ರೈಂ ಬ್ರಾಂಚ್ ಪೊಲೀಸರ ಕಚೇರಿಗೆ ಕೂಗಳತೆ ದೂರದಲ್ಲಿರುವ ಭಕ್ಷಿ ಗಾರ್ಡನ್, ಅಂಜನಪ್ಪ ಗಾರ್ಡನ್, ಫ್ಲವರ್ ಗಾರ್ಡನ್ ಸ್ಲಂ ಏರಿಯಾ ಗಳಲ್ಲಿ ಈಗಲೂ ನಿತ್ಯ ಯಾವುದೇ ಪೊಲೀಸ್ ಭಯವಿಲ್ಲದೆ ಗಾಂಜಾ ವ್ಯಾಪಾರ ಜೋರಾಗಿಯೇ ನಡೆಯುತ್ತಿದೆಯಂತೆ! ರೌಡಿ ಚಟುವಟಿಕೆಗಳಂತೂ ಮಾಮೂಲಿ ಸಂಗತಿ. ಜಾಲಿ ಮೊಹಲ್ಲಾ ಸ್ಕ್ರಾಪ್ ಮಾಫಿಯಾ ಭಕ್ಷಿ ಗಾರ್ಡನ್ ಸ್ಲಂ ಗಳಲ್ಲಿ ಗಾಂಜಾ ಜೊತೆಗೆ ಬ್ರೌನ್ ಶುಗರ್, ಡ್ರಗ್ಸ್ ಇಂಜೆಕ್ಷನ್, ಮತ್ತಿನ ಮಾತ್ರೆಗಳ ಟ್ಯಾಬ್ಲೆಟ್ ದಂಧೆ, ಮೀಸೆ ಚಿಗುರದ ಹುಡುಗರನ್ನು ಕ್ರೈಂ ಲೋಕಕ್ಕೆ ಸೆಳೆಯುತ್ತಿವೆ. ಕೊಲೆಯಾದ ರೇಖಾ ಕದಿರೇಶ್ ಪ್ರತಿನಿಧಿಸುತ್ತಿದ್ದ ಛಲವಾದಿಪಾಳ್ಯ ವಾರ್ಡಿನಲ್ಲಿ ಶೇ ೨೦ ಮುಸ್ಲಿಮರು, ಶೇ ೭೦ರಷ್ಟು ಎಸ್ಸಿ ಎಸ್ಟಿ, , ಶೇ ೧೦ ಕ್ರಿಸ್ಚಿಯನ್ ಸಮುದಾಯದ ಗಳು ಬಿಟ್ಟರೇ ಮೇಜರ್ ಕಮ್ಯೂನಿಟಿಗಳು ಇನ್ಯಾರು ಹೆಚ್ಚಾಗಿ ವಾಸವಿಲ್ಲ. ೬ಕಿಲೋಮೀಟರ್ ಸರೌಂಡಿಂಗ್ ವ್ಯಾಪ್ತಿಯಲ್ಲಿರುವ ಈ ಛಲವಾದಿ ಪಾಳ್ಯ ವಾರ್ಡ್ ನಲ್ಲಿರುವ ಸ್ಲಂ ಗಳಲ್ಲಿ ಬೆಡ್ ಕೂಲಿ ಕಾರ್ಮಿಕರು, ಮಧ್ಯಮ ವರ್ಗದ ಜನರೆ ಹೆಚ್ಚು ವಾಸವಿರುವುದರಿಂದ ಅಲ್ಲಿ ಬಹಳ ಹಿಂದಿನಿಂದಲೂ ಜನರಿಗೆ ಶಿಕ್ಷಣದ, ಜ್ಞಾನದ ಕೊರೆತೆ, ಅದರಿಂದಾಗಿರುವ ಅಜ್ಞಾನ ಅವರನ್ನು ಹಾದಿ ತಪ್ಪಿಸಿ, ಅಡ್ಡದಾರಿಗಿಳಿಸಿ, ಅಪರಾಧ ಕ್ರತ್ಯಗಳ ಕಡೆ ಎಳೆದೋಯ್ದು ಈಗ ಇಡೀ ಬೆಂಗಳೂರೇ ಬೆಚ್ಚಿ ಬೀಳುವಂತೆ ಆಗಿಂದಾಗ್ಗೆ ಇಲ್ಲಿ ಕೊಲೆ ಕುಕೃತ್ಯಗಳು ಜೋರಾಗಿಯೇ ಸದ್ದು ಮಾಡುತ್ತಿರುತ್ತವೆ. ಬೆಂಗಳೂರಿನ ಹೃದಯ ಭಾಗದಲ್ಲಿ, ಅದರಲ್ಲೂ ಸಿಸಿಬಿ ಪೊಲೀಸರ ಕಚೇರಿಯ ಹತ್ತಿರವೇ ಹೀಗೊಂದು ಭಯಾನಕ ಏರಿಯಾ ಸೈಷ್ಟಿಯಾಗಿದ್ದರೂ, ನಾವೆಲ್ಲರೂ ಈ ಸಮಾಜ, ಈ ಸರ್ಕಾರ , ಪೊಲೀಸ್ ವ್ಯವಸ್ಥೆ ಇದನ್ನು ಸರಿಪಡಿಸುವ ಕ್ರಮಗಳ ಬಗ್ಗೆ ಕಿಂಚಿತ್ತೂ ತಲೆಕೆಡಿಸಿಕೊಳ್ಳದೆ ಮೈಮರೆತಿದ್ದೇವೆ. ಈಗ ಕಾರ್ಪೇರಟರ್ ಹತ್ಯೆಯಾಗಿದೆ ಎಂದು ಬೊಬ್ಬೆ ಹಾಕೋ ಪರಿಸ್ಥಿತಿ ಕೈಮೀರಿ ಹೋಗಿದೆ. ಮುಂದೆ ಅದೇ ಸ್ಲಂಮ್ನ ಕಿಡಿ ಇಡೀ ನಗರಕ್ಕೆ ವ್ಯಾಪಿಸಿ ಕರ್ನಾಟಕವೇ ಕೊಲೆ, ಸುಲಿಗೆಗೆ ಸಿಕ್ಕಿ ನರಳುವಂತಾದರೇ ಗತಿಯೇನು? ಅಂಜನಪ್ಪ ಗಾರ್ಡನ್ ಬಾಳೆಮಂಡಿ ಏರಿಯಾ, ಭಕ್ಷಿ ಗಾರ್ಡನ್, ಸಿದ್ಧಾರ್ಥ ನಗರ, ಜೈಭೀಮ್ ನಗರ, ಫ್ಲವರ್ ಗಾರ್ಡನ್, ಜಾಲಿ ಮೊಹಲ್ಲಾ, ಬಿನ್ನಿ ಮಿಲ್ ಜೋಪಡಿ, ಛಲವಾದಿ ಪಾಳ್ಯ ಸ್ಲಂಗಳ ಕರಾಳ ಕತೆಗಳು, ಅಪರಾಧಿ ಚಟುವಟಿಕೆಗಳ ಚರಿತ್ರೆ ಇಂದು ನೆನ್ನೆಯದಲ್ಲ. ಕಾಟನ್ ಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಈ ಎಲ್ಲಾ ಬೆಡ್ ಮದ್ಯಮ ವರ್ಗದ ಸ್ಲಂಮ್ಮು ಗಳನ್ನು, ಅಲ್ಲಿರುವ ಜನರ ಜೀವನ ಮಟ್ಟವನ್ನು ಮೇಲೆತ್ತಲು ಇಲ್ಲಿನವರೆಗೂ ಯಾವ ರಾಜಕೀಯ ಪಕ್ಷಗಳ ನಾಯಕರೂ ಏಕೆ ಪ್ರಯತ್ನಿಸಲಿಲ್ಲ ಎಂಬ ಪ್ರಶ್ನೆ ಗಳಿಗೇ ಉತ್ತರವೇ ಇಲ್ಲ. ಅಲ್ಲಿ ವಾಸಿಸುತ್ತಿರುವವರು ಮುಸ್ಲಿಂ ಜನಾಂಗದವರು, ಕ್ರಿಶ್ಚಿಯನ್ ಸಮುದಾಯದವರು, ಮತ್ತು ನೆರೆಯ ತಮಿಳುನಾಡು-ಆಂಧ್ರ ದಿಂದ ಗಾರೆ ಕೆಲಸಕ್ಕೆ, ಮೂಟೆ ಹೊರೋಕೆ ಬಂದು ವಾಸವಿರುವ ದಲಿತ ಕೂಲಿಕಾರ್ಮಿಕ ಜನರು ಮಾತ್ರ.
ಇಲ್ಲಿಲೇಡಿ ಡಾನ್ ಗಳೇ ಲೀಡರ್ ಗಳು!!
ಛಲವಾದಿ ಪಾಳ್ಯ ಒಂದು ಮೀಸಲು ಮಹಾನಗರ ಪಾಲಿಕೆ ವಾರ್ಡ್. ಬರೀ ಓಟಿಗಾಗಿ ಮಾತ್ರ ಜನರನ್ನು ಬಳಸಿಕೊಂಡು ಆ ಸ್ಲಂ ಗಳಲ್ಲಿ ರುವ ಜನರನ್ನು ಅವರದೇ ಅಜ್ಞಾನ, ಮೂಢನಂಬಿಕೆ, ಅನಕ್ಷರತೆ, ಅಪರಾಧ ಚಟುವಟಿಕೆಗಳಲ್ಲಿ ಮುಳುಗೇಳಲು ಬಿಟ್ಟು, ಸ್ಲಂ ಜನರ ನಿರುದ್ಯೋಗ ಸಮಸ್ಯೆ, ಹಸಿವು, ಬಡತನಗಳಿಗೆ ಸರಿಯಾದ ಉದ್ಯೋಗ ಭರವಸೆ, ಶಿಕ್ಷಣದ ಬೆಳಕನ್ನು ತೋರಿಸದೆ ಇದ್ದ ಕಾರಣದಿಂದ ಬೆಂಗಳೂರು ಬೆಳೆಯಲು ಪ್ರಾರಂಭ ವಾದಾಗಿನಿಂದಲೇ ಕೂಲಿ ಕೆಲಸಕ್ಕೆ, ಲಾರಿ ಕೆಲಸಕ್ಕೆ ಗಾರೆ ಕೆಲಸಕ್ಕೆ ತಮಿಳು ನಾಡಿನ, ಆಂಧ್ರದ ಬಡ ಜನರು ಬಂದು ಬಿನ್ನಿ ಮಿಲ್ ಜಾಗದಲ್ಲಿ ಗುಡಿಸಲು ಹಾಕಿಕೊಂಡು ವಾಸಿಸುತ್ತಾ ಅಲ್ಲಿದ್ದ ಕೆರೆಗಳ ಸಮೀಪ ಕಾಕಡಾ ಹೂ ಮುಂತಾದ ಹೂಗಳನ್ನು ಬೆಳೆಸಿ ಮಾರುತ್ತಾ, ಕಲಾಸಿಪಾಳ್ಯದ ಮಾರುಕಟ್ಟೆಗೆ ಬರುವ ಲಾರಿಗಳಲ್ಲಿ, ಮೂಟೆ ಹೊತ್ತು ಸಾಕಾಗಿ ಭಟ್ಟಿ ಸಾರಾಯಿ ಕುಡಿದು ನಿರುಮ್ಮಳವಾಗಿ ಮಲಗಿ, ಕೆಲಸ ಸಿಗದಿದ್ದಾಗ ಅಜ್ಞಾನದಿಂದ ಅಡ್ಡದಾರಿ ಹಿಡಿದು ಅಪರಾಧ ಕೃತ್ಯಗಳಲ್ಲಿ ಇಳಿದು ಕೊಲೆ, ದರೋಡೆ, ಗಾಂಜಾ ವ್ಯಾಪಾರಗಳಲ್ಲಿ ಮುಳುಗೇಳುತ್ತಾ ಇಡೀ ವ್ಯವಸ್ಥೆಗೆ ಕಳಂಕ ಮೆತ್ತಿ ಬದುಕುತ್ತಿದ್ದಾರೆ. ಬೆಂಗಳೂರಿನ ಹೃದಯ ಭಾಗದಲ್ಲಿ ನೋಡು ನೋಡುತ್ತಿದ್ದಂತೆ ಎದ್ದುನಿಂತ ಸ್ಲಂ ಗಳಲ್ಲಿ ದುಡಿವ ಜನರಿಗಾಗಿ ಅಂದು ಕಳ್ಳಭಟ್ಟಿ ಸಾರಾಯಿ ಅಂಗಡಿಗಳು ತಲೆಎತ್ತಿ ನಿಂತಿದ್ದವು. ಈ ಸ್ಲಂಗಳಲ್ಲಿ ಹೆಚ್ಚಾಗಿ ಮಹಿಳೆಯರೇ ಕಳ್ಳ ಭಟ್ಟಿ ಸಾರಾಯಿ ದಂಧೆಯಲ್ಲಿ ಪ್ರಮುಖ ವಾಗಿರುತ್ತಿದ್ದ ಕಾರಣ ಈ ಎಲ್ಲಾ ಸ್ಲಂ ಗಳೂ ಈಗಲೂ ಮಹಿಳಾ ಮಣಿಯರ ಕೈಯಲ್ಲೇ ಇವೆ! ರೌಡಿ ಗುಪ್ಪನ ಅಕ್ಕ ಭಟ್ಟಿ ಸಾರಾಯಿ ರಾಣಿ ಇಡೀ ಭಕ್ಷಿ ಗಾರ್ಡನ್ ಗೇ ಕಳ್ಳಭಟ್ಟಿ ಕುಡಿಸಿ ದುಡ್ಡು ಮಾಡಿಮೆರೆದಳು. ಮೃತ ಇದೇ ಕದಿರೇಶನ ಅಕ್ಕ ರೌಡಿ ಲೇಡಿ ಮಾಲಾ ಕೂಡ ಕಳ್ಳ ಭಟ್ಟಿ ಸಾರಾಯಿ ವ್ಯಾಪಾರಿಯೇ. ಮೆಜೆಸ್ಟಿಕ್ ಕಲಾಸಿಪಾಳ್ಯ ತರಕಾರಿ, ಹಣ್ಣುಗಳ ಮಾರುಕಟ್ಟೆ ಗಳು ಕೆಲವು ಈಗಲೂ ಮಹಿಳೆಯರ ಸುಪರ್ದಿಯಲ್ಲಿಯೇ ಇವೆ. ಲಾರಿ ಮಂಡಿಗಳ ತರಕಾರಿ ಮಾರುಕಟ್ಟೆ ಗಳ ಗೋಡೌನ್ ಗಳಲ್ಲಿ ಮೂಟೆ ಹೊತ್ತು ದುಡಿದು ಬಂದ ಕೂಲಿ ಕಾರ್ಮಿಕರಿಗೆ ಕಡಿಮೆ ಕಾಸಿಗೆ ಕಳ್ಳಭಟ್ಟಿ ಸಾರಾಯಿ ಒದಗಿಸುತ್ತಿದ್ದ ತಾಣಗಳಾಗಿದ್ದ ಈ ಭಕ್ಷಿ ಗಾರ್ಡನ್ ಸ್ಲಮ್ಮುಗಳಿಗೆ ಹೊಸಕೋಟೆಯ ಬೈಲನರಸಾಪುರ, ಅಡಿಗಾರಕಲ್ಲಳ್ಳಿ, ಬನ್ನೇರುಘಟ್ಟ ರಸ್ತೆಯ ಬಸವನಪುರಗಳಿಂದ ಕಳ್ಳಭಟ್ಟಿ ಸಾರಾಯಿ ಸರಬರಾಜಾಗುತ್ತಿದ್ದರೇ, ಇದೇ ಸ್ಲಮ್ಮುಗಳಿಗೆ, ತಮಿಳುನಾಡು, ಅಂದ್ರ , ರಾಮನಗರ ಮಹದೇಶ್ವರ ಬೆಟ್ಟಗಳ ಕಡೆಯಿಂದ ಗಾಂಜಾ ಸೊಪ್ಪು ಸಪ್ಲೈ ಆಗುತ್ತಿತ್ತು. ಸೀಮೆಎಣ್ಣೆ ಜೊತೆಗೆ ಗಾಂಜಾ ಮಾರಾಟ ವನ್ನೂ ಸುರುಹಚ್ಚಿಕೊಂಡ ಈ ಸ್ಲಮ್ಮುಗಳ ಕಳ್ಳಭಟ್ಟಿ ರಾಣಿಯರು ಮತ್ತವರ ಕುಟುಂಬ ನಿಧಾನಕ್ಕೆ ಸ್ವಲ್ಪ ಹಣ ಕಾಸು ಸೇರಿಸಿಕೊಂಡು ರಾಜಕೀಯ ಮಾಡುವ ಮಟ್ಟಿಗೆ ಬೆಳೆಯಿತು.
ವೈಶ್ಯಾವಾಟಿಕೆ ದಂಧೆಗಳು
ಮೊದ ಮೊದಲು ಮುಸ್ಲಿಂ ಪೈಲ್ವಾನರ ತೆಕ್ಕೆಯಲ್ಲಿದ್ದ ಈ ಸ್ಲಂ ಗಳು ನಿಧಾನಕ್ಕೆ ತಮಿಳು ರೌಡಿಗಳ ಕೈವಶವಾದವು! ದಿವಂಗತ ದೇವರಾಜ್ ಅರಸು ಅಳಿಯ ನಟರಾಜ್ , ಅಂದಿನ ಅಂಡರ್ ವರ್ಲ್ಡ್ ಡಾನ್ ಜಯರಾಜ್ ಕಾಲದಲ್ಲಿ ತೋಟ, ಫ್ಲವರ್ ಗಾರ್ಡನ್, ಕೂಲಿಕಾರ್ಮಿಕರು ಜೋಪಡಿಗಳಿಂದ ಕೂಡಿದ್ದ ಈ ಸ್ಲಂ ಗಳಲ್ಲಿ ಆಗ ಇಸ್ಪೀಟ್ ದಂಧೆ, ಕಳ್ಳಭಟ್ಟಿ ಸಾರಾಯಿ ದಂಧೆ, ವೇಶ್ಯಾವಾಟಿಕೆ ದಂಧೆ, ಗಾಂಜಾ ವ್ಯವಹಾರ ಮಾತ್ರ ನಡೆಯುತ್ತಿತ್ತು. ಚಿಕ್ಕ ಚಿಕ್ಕ ಕಳ್ಳತನ, ರಾಬರಿ, ಪಿಕ್ ಪಾಕೆಟ್ ಕ್ರಿಮಿನಲ್ ಗಳು ಸ್ಲಮ್ಮಿನಲ್ಲಿ ತಲೆಮರೆಸಿಕೊಂಡಿರುತ್ತಿದ್ದ ಕಾಲ ಅದು. ಲಾರಿ ಲೋಡ್ ಗೋಲ್ ಮಾಲ್, ದೋ ನಂಬರ್ ದಂಧೆ, ಇವೆಲ್ಲವನ್ನು ಆಗಲೂ ಪೊಲೀಸರ ಅಡ್ಜೆಸ್ಟ್ಮೆಂಟ್ ರಾಜಕೀಯ ನಾಯಕರ ಸೂಚನೆ ಮೇರೆಗೆ ನಡೀತಿರುವಾಗಲೇ ಈ ಸ್ಲಂ ಗಳ ಓಟು, ರಾಜಕಾರಣ ಎಂಟ್ರಿಯಾಗಿ, ಏರಿಯಾ ಗಳಲ್ಲಿ ಅಧಿಪತ್ಯ ಸ್ಥಾಪಿಸಲು ಪೈಪೋಟಿ, ಲೀಡರ್ ಶಿಪ್ ಗಲಾಟೆ ಪ್ರಾರಂಭ ವಾದಾಗಲೇ ರೌಡಿಸಂ, ಹಫ್ತಾ ವಸೂಲಿ, ಪ್ರಾಪರ್ಟಿ ಡೀಲ್, ಸೆಟ್ಲ್ ಮೆಂಟ್ ಹಣಕಾಸು ಕಿತ್ತಾಟ, ಜಗಳಗಳಿಂದ ಸ್ನೇಹಿತರಲ್ಲೇ ಒಡಕು, ಸ್ಕೆಚ್ಚು-ಮಚ್ಚು ರಕ್ತಪಾತ-ರಿವೇಂಜು ಪ್ರಾರಂಭವಾದವು. ಬಿನ್ನಿ ಮಿಲ್ ರೈಲ್ವೆ ನಿಲ್ದಾಣ ದಿಂದ ಕಾಟನ್ ಪೇಟೆ, ಕಲಾಸಿಪಾಳ್ಯ ಚಾಮರಾಜಪೇಟೆ ವರೆಗೂ, ಆ ಕಡೆ ಗೋರಿ ಪಾಳ್ಯ, ಟೀಪೂನಗರ ಪಂತರ್ ಪಾಳ್ಯ, ಕಡೆಗೆಲ್ಲಾ ಡಾನ್ ಜಯರಾಜ್ ಶಿಷ್ಯರು ಕಂಟ್ರೋಲ್ ಇಟ್ಕೊಂಡಿರುವಾಗಲೇ ಇತ್ತ ಭಕ್ಷಿ ಗಾರ್ಡನ್, ಅಂಜನಪ್ಪ ಗಾರ್ಡನ್, ಗಾಸ್ಕಿ ಲೈನ್ ,ಜಾಲಿ ಮೊಹಲ್ಲಾ ವ್ಯಾಪ್ತಿಯಲ್ಲಿ ಸಾಬು ಬೈ ಅಲಿಯಾಸ್ ಗಾಸ್ಕಿ ಲೈನ್ ಬಾಬು ಅನ್ನೋನ ಲೀಡರ್ ಶಿಪ್ ಸುರುವಾಗಿತ್ತು, ನಂತರ ಕಾಲೂ , ಆನಂತರ ತಮಿಳರ ಗುಣ ಮುಂಚೂಣಿಗೆ ಬಂದ ಕುದುರೆ ಸ್ಟಾಂಡು, ಹಸುಗಳಿಗೆ ಹುಲ್ಲುತಂದು ಮಾರುವ ಜಾಗಗಳಲ್ಲಿ ಸಣ್ಣ ಪುಟ್ಟ ರೋಲ್ ಕಾಲ್ ಮೂಲಕ ಆರಂಭವಾದ ಆವತ್ತಿನ ರೌಡಿಸಂ ಭಕ್ಷಿ ಗಾರ್ಡನ್ ನಲ್ಲಿ ಗಾರ್ಡನ್
ಮಣಿ ಹೆಸರು ಚಾಲ್ತಿಗೆ ಬರುವಷ್ಟರಲ್ಲಿ ಅಜಗಜಾಂತರ ರೂಪಾಂತರ ವನ್ನೇ ಪಡೆದುಕೊಂಡಿತ್ತು. ಮೊದಲೆಲ್ಲಾ ಕೆಂಗೇರಿ ಗೇಟ್ ಠಾಣಾ ವ್ಯಾಪ್ತಿಯ ದ್ದ ಈ ಭಕ್ಷಿ ಗಾರ್ಡನ್ ಸ್ಲಂಮ್ಮು ಗಳು ಆಗ ಬಿನ್ನಿಪೇಟೆ ವಿಧಾನಸಭಾ ಕ್ಷೇತ್ರಕ್ಕೆ ಸೇರಿದ್ದವು. ಈಗ ಕಾಟನ್ ಪೇಟೆ ಪೊಲೀಸ್ ಠಾಣೆ ವ್ಯಾಪ್ತಿಗೆ ಸೇರಿಕೊಂಡು ಚಾಮರಾಜ ಪೇಟೆ ವಿಧಾನಸಭ ವ್ಯಾಪ್ತಿಯಲ್ಲಿವೆ.
ರೌಡಿಗಳೇ ಇಲ್ಲಿ ಕಾರ್ಪೋರೇಟರ್ ಆಗೋದು!!
೧೯೯೮-೯೯ರಲ್ಲಿ ಇಲ್ಲಿನ ರೇಪಿಸ್ಟ್ ಷ ರೌಡಿ ಅಲೈ ಮಣಿ ಯನ್ನು ಪೊಲೀಸರು ಎನ್ ಕೌಂಟರ್ ಮಾಡಿದ ಕೆಲ ವರ್ಷಗಳ ನಂತರ ಗಾರ್ಡನ್ ಮಣಿ ಮತ್ತು ಕುಟುಂಬ ಇಡೀ ಭಕ್ಷಿ ಗಾರ್ಡನ್ ನಲ್ಲಿ ತನ್ನ ಅಧಿಪತ್ಯ ಸ್ಥಾಪಿಸಿಕೊಂಡಮೇಲೆ ಅಲ್ಲಿನ ಹಣಕಾಸು ವ್ಯವಹಾರಗಳು, ರೋಲ್ ಕಾಲ್ , ಭಟ್ಟಿ ಸಾರಾಯಿ, ಗಾಂಜಾ ವ್ಯವಹಾರ ಗಳಿಂದ ದುಡ್ಡು ಮಾಡಿ ರಾಜಕೀಯ ಅಧಿಕಾರದ ಚುಕ್ಕಾಣಿ ಹಿಡಿಯಲು ಆಕಾಂಕ್ಷಿ ಆಗುತ್ತಿದ್ದಂತೆಯೇ ಭಕ್ಷಿ ಗಾರ್ಡನ್ ನಲ್ಲಿ ಯೇ ಇದ್ದ ಮತ್ತೊಬ್ಬ ಕಾರ್ಪೋರೇಟರ್ ಇದನ್ನು ಸಹಿಸದೇ ಮಾಜಿ ರೌಡಿ ಚಾಮರಾಜ್, ರೌಡಿರಾಜಾಕುಟ್ಟಿ , ಮ್ರತರೌಡಿ ಕವಳ ಮುಂತಾದವರ ಮೂಲಕ ಗಾರ್ಡನ್ ಮಣಿ ಯನ್ನು ಕೊಲ್ಲಿಸಿದ. ಆಗಿನ್ನೂ ಈ ಕದಿರೇಶ್ & ಫ್ಯಾಮಿಲಿ ಅಷ್ಟೇನೂ ಬೆಳೆದಿರಲಿಲ್ಲ. ಗಾರ್ಡನ್ ಮಣಿ ಕೊಲೆಯಾದರೂ ಕೂಡ ಎಲ್ಲಾ ಸ್ಲಮ್ಮುಗಳೂ ಮಣಿಯ ಬಾಮೈದುನರಾದ ಗಣೇಶ್ ಮತ್ತು ಕುಖ್ಯಾತ ರೌಡಿ ಕುಪೇಂದ್ರನ ಕೈಲೇ ಇದ್ದವು! ಅಲ್ಲಿದ್ದ ಸಕಲ ಸ್ಲಮ್ಮುಗಳನ್ನೂ ಕೈಕೆಳಗಿಟ್ಟುಕೊಂಡು ಕುಖ್ಯಾತಿ ಗಳಿಸಿಕೊಂಡಿದ್ಧ ರೌಡಿ ಕುಪ್ಪನನ್ನು ಬೆಂಗಳೂರು ಪೊಲೀಸರು ಗಡಿಪಾರು ಮಾಡಿ, ಗೂಂಡಾ ಕಾಯ್ದೆ ಹಾಕಿ ಜೈಲಿಗೆ ಅಟ್ಟಿದ್ದರು! ಆತನ ನಟೋರಿಟಿ ಕ್ರೈಂ ಹಿಸ್ಟರಿ ಅಷ್ಟೊಂದು ಭಯಾನಕವಾಗಿತ್ತು. ಬೆಂಗಳೂರಿನ ಎಲ್ಲಾ ಏರಿಯಾ ಗಳಲ್ಲಿ ತನ್ನ ಫಾಲೋವರ್ಸ್ ಗಳನಾನಿಟ್ಟುಕೊಂಡು ಅಂದಿನ ಕಾಲಕ್ಕೆ ರೌಡಿ ಸಿಂಡಿಕೇಟ್ ಮಾಡಿಕೊಂಡು ಮೆರೆಯುತ್ತಿದ್ದ ಗುಪ್ಪನ ಹವಾ ನೋಡಿ ರೌಡಿ ಕದಿರೇಶ ಬಾಲಮುದುರಿಕೊಂಡಿದ್ದನಂತೆ!
ಅಕ್ಕಾ ಪಕ್ಕದ ಏರಿಯಾಗಳಾದ ಗೋರಿ ಪಾಳ್ಯದ ಅಲ್ತಾಫ್, ಇಮ್ರಾನ್ ಆಗಲಿ , ಕಲಾಸಿಪಾಳ್ಯದ ರೌಡಿಗಳಾದ ವೇಡಿಯಪ್ಪ, ವೇಲು ಆಗಲೀ ಅತ್ತ ಭಕ್ಷಿ ಗಾರ್ಡನ್ ಕಡೆ ಅಪ್ಪಿತಪ್ಪಿಯೂ ತಲೆ ಹಾಕುತ್ತಿರಲಿಲ್ಲವಂತೆ! ಅಷ್ಟರಮಟ್ಟಿಗೆ ಇಡೀ ಭಕ್ಷಿ ಗಾರ್ಡನ್,ಅಂಜನಪ್ಪ ಗಾರ್ಡನ್, ಬಾಳೆಮಂಡಿ ಏರಿಯಾ, ಸಿದ್ಧಾರ್ಥ ನಗರ, ಜೈಭೀಮ್ ನಗರ. ಗಳನ್ನು ತನ್ನ ಆಪ್ತ ರೌಡಿ ಅತೂಷ್ ಜೊತೆಗೆ ಸೇರಿಕೊಂಡು ಭದ್ರಪಡಿಸಿಕೊಂಡಿದ್ದ ಗುಪ್ಪ. ದಲಿತ್ ಪ್ಯಾಂಥರ್ಸ್ ಸಂಘದ ಬಾಲು ಇದೇ ಗಾರ್ಡನ್ ನಲ್ಲಿ ಲೀಡರ್ ಆಗೋಕೆ ಪ್ರಯತ್ನಿಸಿದನೆಂದು ಬಾಮೈದ ಸೂರ್ಯ ಅಪ್ಪು ಕೈಲಿ ಊರ್ವಶಿ ಥಿಯೇಟರ್ ಬಳಿ ಹೊಡೆದಾಕಿಸಿದ್ದ. ಛಲವಾದಿ ಪಾಳ್ಯ ವಾರ್ಡ್ ನಲ್ಲಿ ರೌಡಿ ಶೀಟರ್ ಗುಪ್ಪ ಮತ್ತು ಕುಟುಂಬ ಕಾರ್ಪೋರೇಟರ್ ಆಕಾಂಕ್ಷಿ ಗಳಾಗುತ್ತಿದ್ದಂತೆಯೇ ಮತ್ತೆ ಒಳಸಂಚು ರೂಪಿಸಿದ ಗುಪ್ಪನ ಶತ್ರುಗಳು ಮತ್ತು ಕದಿರೇಶ್ ಗುಪ್ಪನ ಅಣ್ಣ ಗಣೇಶ್ ನನ್ನು ವಿಜಯನಗರದ ಶನಿಮಹಾತ್ಮ ದೇವಸ್ಥಾನದ ಬಳಿ ಹಾಡುಹಗಲೇ ಹೆಂಡತಿ ಎದುರೇ ಕೊಚ್ಚಿಕೊಂದರು. ರೌಡಿಗುಪ್ಪನನ್ನು ಸ್ವಂತ ಬಾಮೈದ ಸೂರ್ಯ ಅಪ್ಪು ಎಂಬ ಟ್ಯಾಬ್ ರೌಡಿಯಿಂದ ಕೊಲ್ಲಿಸಿದ್ರು! ಅಲ್ಲಿಗೆ ರೌಡಿ ಕದಿರೇಶನಿಗೆ ಕಾರ್ಪೋರೇಟರ್ ಆಗುವ ಲೈನ್ ಕ್ಲಿಯರ್ ಆಗಿತ್ತು. ಗಾಂಜಾ ಪೆಡ್ಲಿಂಗ್ , ದೊನಂಬರ್ ದಂಧಾ, ಕೋಲೆ ಸುಲಿಗೆ ಗಳಿಂದ ಹಣ ಮಾಡಿಕೊಂಡಿದ್ಧ ರೌಡಿ ಶೀಟರ್ ಕದಿರೇಶ್ ಅದೇ ಸ್ಲಂಗಳ ತನ್ನ ಹಳೇ ಭಟ್ಟಿ ಸಾರಾಯಿ ಗಿರಾಕಿಗಳಿಗೆ ಕಂಠಪೂರ್ತಿ ಮದ್ಯ ಕುಡಿಸಿ, ತನ್ನ ಅಕ್ಕ ರೌಡಿ ಮಾಲಾಳ ಬೆಂಬಲದಿಂದ ಹೆರಡನೆ ಹೆಂಡತಿ ರೇಖಾಳನ್ನು ಛಲವಾದಿ ಪಾಳ್ಯದ ಕಾರ್ಪೋರೇಟರ್ ಮಾಡಿದ. ಅಷ್ಟರಲ್ಲಿ ರೌಡಿ ಗುಪ್ಪನ ಕೋಲೆ ರಿವೇಂಜಿಗಾಗಿ ಅದೇ ಸ್ಲಂನಲ್ಲಿ ಕುದಿಯುತ್ತಿದ್ದ ಗುಪ್ಪನ ಶಿಷ್ಯಂದಿರಾದ ರೌಡಿ ಅತೂಷ್ ಮತ್ತು ಲಿಯೋ ಗುಪ್ಪನ ಕೊಂದಿದ್ದ ಸೂರ್ಯ ಅಪ್ಪು ಮತ್ತು ಜೀವ ಎಂಬುವರನ್ನು ಕೊಂದು ರಿವೇಂಜ್ ತೀರಿಸಿಕೊಂಡಿದ್ರು! ಅತ್ತ ಐದು ವರ್ಷಗಳ ಕಾರ್ಪೋರೇಟರ್ ಅವದಿ ಪೂರ್ಣಗೊಳಿಸಿದ್ದ ಕದಿರೇಶನಿಗೆ ತಾನು ಹಿಂದೆ ಮಾಡಿದ್ದ ಭಕ್ಷಿ ಗಾರ್ಡನ್ ಜೋಪಡಿ ರಾಜೇಂದ್ರನ ಕೊಲೆಯ ರಿವೇಂಜು ಅಟ್ಟಿಸಿಕೊಂಡು ಬಂದು ಮುನೇಶ್ವರ ಟೆಂಪಲ್ ಬಳಿ ಚುಲ್ಟು ಹುಡುಗರು ಕದಿರೇಶ್ ನನ್ನು ಹೊಡೆದು ಕೊಂದರು.
ಒಂದೇ ತಟ್ಟೇಲ್ ಅನ್ನ ತಿಂದು ಸ್ಕೆಚ್ಚು ಹಾಕ್ತಾರೇ!!
ಭಕ್ಷಿ ಗಾರ್ಡನ್ ಈಗ ರೌಡಿಗಳ ಕೊಂಪೆಯಂತಾಗಿದೆ. ಇಂತಿಷ್ಟು ಹಣಕ್ಕೆ ಈಗಿಲ್ಲಿ ಸುಫಾರಿ ಕಿಲ್ಲಿಂಗ್ ಪಡೆದುಕೊಳ್ಳುವ ಗ್ಯಾಂಗುಗಳಿವೆಯಂತೆ! ತಮಿಳುನಾಡು ಅಂದ್ರಗಳಲ್ಲಿ ಅಪರಾಧ ಕ್ರತ್ಯಗಳನ್ನು ಮಾಡಿದವರು ಈ ಸ್ಲಂ ಗಳಲ್ಲಿ ಬಂದು ಅಡಗಿ ತಲೆಮರಿಸಿಕೊಳ್ಳುತ್ತಾರಂತೆ. ಗಾಂಜಾ ಇಲ್ಲಿನ ಪೆಡ್ಲರ್ ಗಳ ಕುಲಕಸುಬು! ಮೀಟರ್ ಬಡ್ಡಿ, ಪಕ್ಕದ ಕಲಾಸಿಪಾಳ್ಯ ತರಕಾರಿ ಮಾರುಕಟ್ಟೆ, ಫುಟ್ ಪಾತ್ ಬಾಡಿಗೆ ಮಾಫಿಯಾ , ಲಾರಿ ಲೋಡಿಂಗ್ ಅನ್ ಲೋಡಿಂಗ್ ಕಮಿಷನ್ ಮಾಫಿಯಾ ಇನ್ನಿತರ ಇಲ್ಲೀಗಲ್ ದಂಧೆ ಗಳು ಈ ಸ್ಲಮ್ಮಿನ ರೌಡಿಗಳನ್ನು ಸಾಕುತ್ತಿವೆ. ಇದು ಬೆಂಗಳೂರಿನ ಹ್ರದಯ ಭಾಗದಲ್ಲಿ ರುವುದರಿಂದ ಕಲಾಸಿಪಾಳ್ಯ ಮಾರುಕಟ್ಟೆಗೂ , ಮೆಜೆಸ್ಟಿಕ್ ಗೂ ನಡೆದುಕೊಂಡೇ ಹೋಗಬಹುದು. ವಿನಾಯಕ ಥೇಟರ್ ಹಿಂಭಾಗದ ಫ್ಲವರ್ ಗಾರ್ಡನಿನ ಗೂಡ್ಸ್ ಶೆಡ್ ರೋಡು ಫೀರ್ ಬೌಂಡರಿ ಸುತ್ತಮುತ್ತಲಿನ ಸ್ಲಮ್ಮುಗಳಲ್ಲಿ ಈಗ ಮಿನಿ ಡಾನ್ ಗಳದ್ದೇ ಕಾರುಬಾರು! ಅಕ್ರಮ ಚಟುವಟಿಕೆಗಳ ತಾಣವಾಗಿರುವ ಈ ಸ್ಲಂ ಗಳಲ್ಲಿ ನೂರಾರು ಯುವಕರು ರೌಡಿ ಚಟುವಟಿಕೆಯಲ್ಲೇ ತೊಡಗಿದ್ದಾರೆ. ಇಲ್ಲೀವರೆಗೂ ಈ ಸ್ಲಂ ನಲ್ಲಿ ಡಾನ್ ಪಟ್ಟ ವಹಿಸಿಕೊಂಡವರೆಲ್ಲಾ ಕೊಲೆಯಾಗಿದ್ದಾರೆ. ಕಾರ್ಪೋರೇಟರ್ ಆಗಲು ಹೊರಟಿದ್ದ ಎಲ್ಲಾ ರೌಡಿ ಶೀಟರ್ ಗಳೂ ಕೊಲೆಯಾಗಿ ಮಾಹಿತಿ ಸೇರುತ್ತಲೇ ಇದ್ದಾರೆ. ಇದು ಮಾತ್ರ ಯಾರಿಗೂ ತಿಳಿಯದ ಈ ಸ್ಲಂ ನ ನಿಜವಾದ ನಿಗೂಢ ಸತ್ಯ. ಈಗ ಮಾಜಿ ಮಹಿಳಾ ಕಾರ್ಪೋರೇಟರ್ ರೇಖಾ ಕದಿರೇಶ್ ತನ್ನವರಿಂದಲೇ ಕೊಲೆಯಾಗಿದ್ದಾರೆ. ತನ್ನ ಮಗಳನ್ನೋ, ಮಗ ಅರುಳ್ ಹೆಂಡತಿಯನ್ನೋ ಪಾಲಿಕೆ ಸದಸ್ಯೆ ಮಾಡಬೇಕೆಂದು ೫೦ ಲಕ್ಷಕ್ಕೆ ರೇಖಾ ಕದಿರೇಶ್ ಕೊಲೆಗೆ ಸುಫಾರಿ ನೀಡಿದ್ದ ರೌಡಿ ಲೇಡಿ ಕದಿರೇಶ್ ಅಕ್ಕ ಮಾಲಾ ಪಾಲಿಕೆ ಮೆಟ್ಟಿಲು ಹತ್ತುವ ದುರಾಸೆಗೆ ಬಿದ್ದು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಮೆಟ್ಟಿಲು ಹತ್ತಿದ್ದಾಳೆ. ಇದೇ ಭಕ್ಷಿ ಗಾರ್ಡನ್ ನ ಮತ್ತೊಬ್ಬ ರೌಡಿ ಅತೂಷ್ ರೇಖಾ ಕದಿರೇಶ್ ಎದುರು ಕಳೆದ ಪಾಲಿಕೆ ಚುನಾವಣೆಯಲ್ಲಿ ತನ್ನ ಹೆಂಡತಿ ಯನ್ನು ಕಣಕ್ಕಿಳಿಸಿ ಕೇವಲ ೬೦೦ ಮತಗಳ ಅಂತರದಲ್ಲಿ ಪರಾಭವ ಗೊಂಡಿದ್ದನಂತೆ! ರೆಖಾ ಕದಿರೇಶ್ ಸಾವು ಆತನ ಹೆಂಡತಿಯ ಗೆಲುವಿನ ಹಾದಿ ಸುಗಮ ವಾಗಿಸಿದೆಯೇನೋ? ಇದೇ ಏರಿಯಾ ದ ಕೊಲೆಯಾಗಿರುವ ರೌಡಿ ಕೆಂಚ ಮುರುಗನ ಮಗಳು ವನಿಲಾ ಕೂಡ ಕಾಂಗ್ರೆಸ್ ನಿಂದ ರೇಖಾ ಕದಿರೇಶ್ ಮೇಲೆ ಕಣದಲ್ಲಿದ್ದು ಫೈಟ್ ಕೊಟ್ಟಿದ್ದಳು. ಅವಳಿಗೂ ರೇಖಾ ಕೊಲೆ ವರದಾನ ವಾಗಬಹುದೇನೋ? ಅಥವಾ ಜೈಲಿನಲ್ಲಿ ಕುಳಿತೇ ರೇಖಾ ಕೊಲೆಗಾರ ಪೀಟರ್ ತನ್ನ ಹೆಂಡತಿಯನ್ನೇ ಮುಂದಿನ ಪಾಲಿಕೆ ಚುನಾವಣೆ ಗಿಳಿಸುತ್ತಾನೇನೋ?! ಎಲ್ಲಾ ಸಾಧ್ಯತೆಗಳೂ ಇದೇ ಭಕ್ಷಿ ಗಾರ್ಡನ್ ನಲ್ಲಿ ಸಾಧ್ಯವಿದೆ! ಏಕೆಂದರೆ ಇದೊಂದು ವಿಚಿತ್ರ ಮನಸ್ಥಿತಿ ಯ ಜನರಿರುವ ಪ್ರದೇಶ. ಕಾರ್ಪೊರೇಟರ್ ಆಗುವ ಆಸೆಯಲ್ಲಿ ಬೀದಿಯಲ್ಲಿ ಹೆಣವಾದ ಗಾರ್ಡನ್ ಮಣಿಯ ಮಗ ಸೂರ್ಯ ಅಪ್ಪು ಎಂಬ ಚಡ್ಡಿ ಹಾಕುತ್ತಿದ್ದ ಹುಡುಗನನ್ನು ಮನೆಗೆ ತಂದು ಸಾಕಿ ಬೆಳೆಸಿದ ತಪ್ಪಿಗೆ ಗುಪ್ಪ ಎಂಬ ರೌಡಿ ಬಾಮೈದ ಅಪ್ಪು ಸೂರ್ಯ ನಿಂದಲೇ ಕೊಲೆಯಾಗುತ್ತಾನೆ! ರೌಡಿ ಕದಿರೇಶನ ಹೆಂಡತಿ ಯನ್ನು ಸ್ವಂತದ ಕದಿರೇಶನ ಅಕ್ಕಂದಿರೇ ಸ್ವಂತ ರೇಖಾಳ ಬಾಡಿಗಾರ್ಡ್ ಗಳ ಕೈಯಲ್ಲಿ ಕೊಲ್ಲಿ ಸುತ್ತಾರೆ! ಇಲ್ಲಿ ಜೊತೆಗೆ ತಿಂದ ಅನ್ನದ ಋಣ .ಸಹಾಯ.ಸ್ನೇಹ.ಯಾವುದೂ ನೆನಪಿರುವುದಿಲ್ಲ! ರಕ್ತ ಸಂಬಂಧಗಳಿಗೂ ಇಲ್ಲಿನ ಕೆಲ ರೌಡಿಗಳು ಮಣೆ ಹಾಕುವುದಿಲ್ಲ. ಕೂಲಿ ಕಾರ್ಮಿಕರ ನಾಯಕನೆನೆಸಿಕೊಳ್ಳಲು ಹೊರಟ್ಟಿದ್ದ ಭಕ್ಷಿ ಗಾರ್ಡನ್ ನ ರೌಡಿ ಜೋಪಡಿ ರಾಜೇಂದ್ರನ ನ್ನೇ ಅವನದೇ ಜಾತಿಯ ಕದಿರೇಶ್ ಕೊಲ್ಲುವುದು ಇಲ್ಲಿ ಸಾಮಾನ್ಯ ವಿಚಾರ.
ಇಲ್ಲಿಮೌಲ್ಯಗಳ ಬಿತ್ತಲೇಬೇಕಿದೆ..
ಈ ಭಕ್ಷಿ ಗಾರ್ಡನ್ ನ ರೌಡಿಗಳ ರಕ್ತದ ಹಪಾಹಪಿಯನ್ನು ನೋಡುತ್ತಿದ್ದರೇ ಮುಂದೆ ಹಣದಾಸೆಗೆ, ಅಧಿಕಾರ ದಾಹಕ್ಕೆ ಮಾಜಿ ಎಂ.ಎಲ್.ಎ
ಗಳನ್ನು ಕೂಡ ಇದೇ ಸ್ಲಂನ ರೌಡಿಗಳು ನಿರ್ಭಯವಾಗಿ ಸುಫಾರಿ ಪಡೆದು ಕೋಂದರೂ ಅಚ್ಚರಿಪಡಬೇಕಿಲ್ಲ! ಈಗ ಎಲ್ಲಾ ಮುಗಿದ ಮೇಲೆ ನಮ್ಮ ಪೊಲೀಸರು ರಾತ್ರೋರಾತ್ರಿ ಎಲ್ಲಾ ಭಕ್ಷಿ ಗಾರ್ಡನ್ನಿನ ಸ್ಲಂ ಗಳ ರೌಡಿಗಳ ಮನೆಗಳ ಮೇಲೆ ದಾಳಿ ಮಾಡಿ ಸರ್ಚ್ ಮಾಡುತಿದ್ದಾರೆ. ಅದೂ ಜನಪ್ರತಿನಿಧಿಯೊಬ್ಬರು ಕೊಲೆಯಾಗಿ ವಾರ ಕಳೆದ ಮೇಲೆ! ಸಿಸಿಬಿ ಜಂಟಿ ಪೊಲೀಸ್ ಆಯುಕ್ತರಾದ ಸಂದೀಪ್ ಪಾಟೀಲ್ ನೇತೃತ್ವದಲ್ಲಿ ೧೧ ಇನ್ಸ್ಪೆಕ್ಟರ್ ಗಳು, ೩೩ ಸಬ್ ಇನ್ಸ್ಪೆಕ್ಟರ್ ಗಳು ನೂರಾರು ಕೆ.ಎಸ್.ಅರ್.ಪಿ ಪೊಲೀಸರನ್ನು ಸ್ಲಮ್ಮಿಗೆ ನುಗ್ಗಿಸಿ ರೌಡಿಗಳೆದೆಯಲ್ಲಿ ನಡುಕ ಹುಟ್ಟಿಸಲು ಪ್ರಯತ್ನಿಸಿದ್ದಾರೆ. ಆದರೇ ಈಗಾಗಲೇ ೩೦ಕ್ಕೂ ಹೆಚ್ಚಿನ ರೌಡಿಗಳು ಏರಿಯಾ ಬೌಂಡರಿ ದಾಟಿ ಪರಾರಿಯಾಗಿ ವಾರಗಳೇ ಕಳೆದಿವೆ! ಖಾಲಿ ಮನೆಯಲ್ಲಿ ಏನು ಹುಡುಕಿ ಏನು ಪ್ರಯೋಜನಾ? ಇಲ್ಲಿನ ಖತರ್ನಾಕ್ ನಟೋರಿಟಿಯುಳ್ಳ ರೌಡಿಗಳನ್ನು ಹೀಗೆ ರಾತ್ರಿ ಮನೆಗಳಿಗೆ ನುಗ್ಗಿ ಹೆದರಿಸುವುದರಿಂದ ಸರಿದಾರಿಗೆ ತರಲು ಸಾಧ್ಯವೇ? ೨೦೧೯ ರ ಅಕ್ಟೋಬರ್ ತಿಂಗಳಲ್ಲೇ ಬೆಂಗಳೂರಿನ ಸಿಲಿಕಾನ್ ಸಿಟಿಯ ಮಾರ್ಕೆಟ್ನಲ್ಲಿರುವ ಪೊಲೀಸ್ ಠಾಣೆಗೆ ಹಾಡುಹಗಲೇ ೨೦೦ಕ್ಕೂ ಹೆಚ್ಚು ಮಂದಿ ನುಗ್ಗಿ ಕಲ್ಲುತೂರಾಟ ನಡೆಸಿ ಠಾಣೆಗೆ ಕರೆತಂದಿದ್ದ ತಮ್ಮ ಕಡೆಯ ಮೂವರು ಲಾಕಪ್ಪಿನಿಂದ ರೌಡಿಗಳನ್ನು ಬಿಡಿಸಿಕೊಂಡು ಹೋಗುತ್ತಾ ಠಾಣೆಯ ಹೊರಗೆ ನಿಂತಿದ್ದ ಪೊಲೀಸರ ವಾಹನಗಳನ್ನು ಪುಡಿಮಾಡಿ ಹೋಗಿದ್ದ ಕರಾಳ ಘಟನೆ ಜರುಗಿತ್ತು! ಆ ವರದಿ ಮೀಡಿಯಾ ದಲ್ಲಿ ಬರದಂತೆ ಅಂದು ನಮ್ಮ ಪೊಲೀಸರೇ ನೋಡಿಕೊಂಡಿದ್ದರು! ಮತ್ತೊಮ್ಮೆ ಹಿಂದೆ ಕಾಟನ್ ಪೇಟೆಯ ಠಾಣಗೆ ಭಕ್ಷಿ ಗಾರ್ಡನ್ ನ ಸ್ಲಂ ಗಳ ಜನರು ನುಗ್ಗಿ ದಾಂಧಲೆ ನಡೆಸಲು ಮುಂದಾಗಿದ್ದಾರೆ! ಇಷ್ಟೆಲ್ಲಾ ಕರಾಳ ಹಿನ್ನೆಲೆ ಇರುವ ಈ ಸ್ಲಂ ಗಳ ರೌಡಿಗಳಿಗೆ ಎಷ್ಟೆಷ್ಟು ಕ್ಲಾಸ್ ತೆಗೆದುಕೊಂಡರೂ ಮತ್ತೆ ಮತ್ತೆ ಬಾಲ ಬಿಚ್ಚುವ ಪುಡಿರೌಡಿಗಳು ಹಳೆಯ ಧ್ವೇಷಕ್ಕೋ-ಹಣದ ಆಮಿಷಕ್ಕೊ ಬಲಿಯಾಗಿ ಅಪರಾಧ ಚಟುವಟಿಕೆ ಮುಂದುವರಿಸುತ್ತಾರೆ.