ಪಂತುಲು ನಿರ್ಮಿಸಿದ ಸುಂದರ ಐತಿಹಾಸಿಕ ಚಿತ್ರ ಕಿತ್ತೂರು ಚೆನ್ನಮ್ಮ

Share


ಪಂತುಲು ನಿರ್ಮಿಸಿದ ಸುಂದರ ಐತಿಹಾಸಿಕ ಚಿತ್ರ ಕಿತ್ತೂರು ಚೆನ್ನಮ್ಮ

‘ಕಿತ್ತೂರು ಚೆನ್ನಮ್ಮ‘ ಬಿ.ಆರ್.ಪಂತುಲು ತಮ್ಮ ‘ಪದ್ಮಿನಿ ಪಿಕ್ಚರ್ಸ್‘ ಲಾಂಛನದಲ್ಲಿ ನಿರ್ಮಿಸಿ, ನಿರ್ದೇಶಿಸಿದ ಕಪ್ಪು ಬಿಳುಪು ಐತಿಹಾಸಿಕ ಚಿತ್ರ. ೧೯೬೧ರಲ್ಲಿ ತೆರೆಗೆ ಬಂದಿತು. ರಾಜಕುಮಾರ್ ಮೊದಲ ಬಾರಿಗೆ ಪಂತುಲು ಚಿತ್ರದಲ್ಲಿ ಅಭಿನಯಿಸಿದರು.
‘ಕಿತ್ತೂರು ಚೆನ್ನಮ್ಮ‘ನ ಪಾತ್ರದಲ್ಲಿ ಬಿ.ಸರೋಜಾದೇವಿ ಅಭಿನಯ ನೀಡಿದ್ದರು. ಇನ್ನೂ ಹರೆಯದ ವಯಸ್ಸಿನಲ್ಲಿದ್ದರೂ ಸರೋಜಾದೇವಿಯವರು ಪ್ರೌಢ ವಯಸ್ಸಿನ, ಗಂಭೀರ ಗುಣಗಳನ್ನು ಹೊಂದಿದ್ದ ಚೆನ್ನಮ್ಮನ ಪಾತ್ರದಲ್ಲಿ ಅತ್ಯಂತ ಸಹಜವಾಗಿ ಅಭಿನಯಿಸಿದ್ದರು. ರಾಜಕುಮಾರ್ ಕಿತ್ತೂರಿನ ರಾಜ ಮಲ್ಲಸರ್ಜನಾಗಿ ಅಭಿನಯಿಸಿದ್ದು, ರುದ್ರಾಂಬೆಯಾಗಿ ಎಂ.ವಿ.ರಾಜಮ್ಮ, ವೀರವ್ವನಾಗಿ ಲೀಲಾವತಿ ನಟಿಸಿದ್ದರು. ಕೆ.ಎಸ್.ಅಶ್ವತ್ಥ್, ಬಾಲಕೃಷ್ಣ, ನರಸಿಂಹರಾಜು, ಚಿಂದೋಡಿ ಲೀಲಾ (ಕಲಾವತಿ), ಡಿಕ್ಕಿ ಮಾಧವರಾವ್, ರಾಜಾಶಂಕರ್, ಹನುಮಂತಾಚಾರ್, ರಮಾದೇವಿ (ಮಹಂತವ್ವ), ಮುಂತಾದವರು ಈ ಚಿತ್ರದಲ್ಲಿ ಅಭಿನಯಿಸಿದರು.

ಕಥೆ, ಚಿತ್ರಕಥೆ, ಸಂಭಾಷಣೆ ಹಾಗೂ ಗೀತೆಗಳನ್ನು ರಚಿಸುವ ಮೂಲಕ ಜಿ.ವಿ.ಅಯ್ಯರ್ ಮೊದಲ ಬಾರಿಗೆ ‘ಪದ್ಮಿನಿ ಪಿಕ್ಚರ್ಸ್‘ ಸಂಸ್ಥೆಗಾಗಿ ಕೆಲಸ ಮಾಡಿದರು. ಚಿತ್ರದಲ್ಲಿ ಬರುವ ಉತ್ತರ ಕರ್ನಾಟಕ ಭಾಷೆಯ ಸಂಭಾಷಣೆಯನ್ನು ಹೆಚ್.ಎನ್.ಹೂಗಾರ್ ರಚಿಸಿದರು. ಕಥೆಗೆ ಪೂರಕವಾಗಿ ಮಾಹಿತಿ ಒದಗಿಸಿದ ಬೈಲಹೊಂಗಲದ ಚೆನ್ನಮ್ಮರಾಣಿ ಇತಿಹಾಸ ಮಂಡಳದ ಕಾರ್ಯದರ್ಶಿಗಳಾಗಿದ್ದ ತಲ್ಲೂರ ರಾಯನಗೌಡ ಪಾಟೀಲ, ಸಾಹಿತಿ ಅನಕೃ, ಉತ್ತರಕರ್ನಾಟಕದ ವಾಲಿ ಚೆನ್ನಪ್ಪ, ಚಿತ್ತರಗಿ ಗಂಗಾಧರಶಾಸ್ತ್ರಿ ಮುಂತಾದವರಿಗೆ ಪದ್ಮಿನಿ ಪಕ್ಚರ್ಸ್ ವತಿಯಿಂದ ಆರಂಭದಲ್ಲಿ ಧನ್ಯವಾದಗಳ ಸಮರ್ಪಣೆಯಾಗಿದೆ. ಈ ಚಿತ್ರಕ್ಕೆ ಟಿ.ಜಿ.ಲಿಂಗಪ್ಪ ಸಂಗೀತ ನೀಡಿದ್ದು ೧೨ ಗೀತೆಗಳನ್ನು ಅಳವಡಿಸಲಾಗಿದೆ. ಪಿ.ಸುಶೀಲಾ, ಪಿ.ಕಾಳಿಂಗರಾವ್, ಪಿ.ಬಿ.ಶ್ರೀನಿವಾಸ್, ರುದ್ರಪ್ಪ, ಕೋಮಲ, ಎಸ್.ಜಾನಕಿ, ರಾಘವಲು ಗೀತೆಗಳನ್ನು ಹಾಡಿದ್ದಾರೆ.

ಎನ್.ದೇವರಾಜನ್ ಸಂಕಲನ, ಡಬ್ಲ್ಯೂ.ಆರ್.ಸುಬ್ಬರಾವ್ ಹಾಗೂ ಎಂ.ಕರ್ಣನ್ ಛಾಯಾಗ್ರಹಣ, ಪಿ.ವಿ.ಕೋಟೇಶ್ವರರಾವ್ ಧ್ವನಿಗ್ರಹಣ, ಬಿ.ಜಯರಾಮ್ ಹಾಗೂ ಕೃಷ್ಣಕುಮಾರ್ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ. ಮದರಾಸಿನ ಭರಣಿ ಸ್ಟುಡಿಯೊದಲ್ಲಿ ಚಿತ್ರೀಕರಣ ನಡೆಯಿತು. ಮೈಸೂರು ಹಾಗೂ ರಾಜಾಸ್ತಾನದ ಜೈಪುರದಲ್ಲಿ ಹೊರಾಂಗಣ ಚಿತ್ರೀಕರಣ ನಡೆಯಿತು. ಸ್ವಾತಂತ್ರ ಹೋರಾಟದಲ್ಲಿ ಕನ್ನಡಿಗರ ಪಾತ್ರ ಕುರಿತ ಕಥಾ ವಸ್ತುವನ್ನು ಹೊಂದಿದ ಈ ಚಿತ್ರಕ್ಕೆ ಭಾರತ ಸರ್ಕಾರ ರಾಷ್ಟ್ರಪತಿಗಳ ‘ರಜತ ಪದಕ‘ ಪ್ರಶಸ್ತಿ ನೀಡಿತು. ಕನ್ನಡ ಚಿತ್ರ ಪ್ರೇಮಿಗಳ ಸಂಘದ ಆರು ಪ್ರಶಸ್ತಿಗಳು ಈ ಚಿತ್ರಕ್ಕೆ ಲಭ್ಯವಾಯಿತು. ಚಿತ್ರ ೩ ಗಂಟೆ ೭ ನಿಮಿಷಗಳ ಅವಧಿಯದಾಗಿದೆ.

ಚಿತ್ರದ ಆರಂಭದಲ್ಲಿ ಚಿತ್ರದ ವಿವರಗಳನ್ನು ತೋರಿಸುವಾಗ ಹಿನ್ನೆಲೆಯಲ್ಲಿ ಆಗ ಜನಪ್ರಿಯಗೊಂಡಿದ್ದ ಸ್ಕೂಲ್ ಮಾಸ್ಟರ್ ಚಿತ್ರದ ‘ಸ್ವಾಮಿದೇವನೆ ಲೋಕಪಾಲನೆ ತೇ ನಮೋಸ್ತು ನಮೋಸ್ತುತೆ‘ ಪ್ರಾರ್ಥನಾ ಗೀತೆ ಆರಂಭವಾಗುತ್ತದೆ. ಈ ಗೀತೆ ಮುಗಿಯುವ ವೇಳೆಗೆ ಶಾಲಾ ಉಪಾಧ್ಯಾಯರಾದ ಪಂತುಲು ಅವರ ಪಾತ್ರ ಮೂಡಿ ಬರುತ್ತದೆ. ಶಾಲಾ ಮಕ್ಕಳಗೆ ಪ್ರಾರ್ಥನಾಗೀತೆಯನ್ನು ಹೇಳಿ ಕೊಟ್ಟ ನಂತರ ಇತಿಹಾಸ ಪಾಠ ಆರಂಭಿಸುತ್ತಾರೆ. ಶಾಲಾ ಮಕ್ಕಳಿಗೆ ಕಿತ್ತೂರುರಾಣಿ ಚೆನ್ನಮ್ಮನ ಬಗ್ಗೆ ತಿಳಿಸಿಕೊಡುವ ಕಥಾನಕವೇ ಚಲನಚಿತ್ರವಾಗಿ ಮೂಡಿ ಬರುವ ತಂತ್ರಗಾರಿಕೆಯನ್ನು ಅಳವಡಿಸಿಕೊಳ್ಳಲಾಗಿದೆ. ಟಿಪ್ಪಸುಲ್ತಾನ್ ಕಿತ್ತೂರು ಸಂಸ್ಥಾನದ ದೇಸಾಯಿಯಾಗಿದ್ದ ಮಲ್ಲಸರ್ಜನನ್ನು (ರಾಜಕುಮಾರ್) ಬಂಧಿಸಿ ತನ್ನ ಒಡ್ಡೋಲಗಕ್ಕೆ ಕರೆ ತರುವ ದೃಶ್ಯದೊಂದಿಗೆ ಚಿತ್ರ ಆರಂಭಗೊಳ್ಳುತ್ತದೆ. ಕಿತ್ತೂರು ಸಂಸ್ಥಾನ ಯಾರಿಗೂ ಅಡಿಯಾಳಾಗಿ ಬದುಕುವುದಿಲ್ಲ ಎಂಬ ಕ್ಷಾತ್ರ ಸಂದೇಶದೊಂದಿಗೆ ರಾಜಕುಮಾರ್ ಅವರ ಅಮೋಘ ಅಭಿನಯ ಈ ಚಿತ್ರದಲ್ಲಿದೆ.

ಕಿತ್ತೂರು ಕರ್ನಾಟಕದ ಸಣ್ಣದಾದ ಒಂದು ಸಂಸ್ಥಾನ. ಚೆನ್ನಮ್ಮ ಬಾಲಕಿಯಾಗಿದ್ದಾಗಿನಿಂದಲೂ ಧೈರ್ಯಶಾಲಿ. ಕಿತ್ತೂರಿನ ರಾಜ ಮಲ್ಲಸರ್ಜನೊಂದಿಗೆ ಈಕೆಯ ವಿವಾಹವಾಗುತ್ತದೆ. ಅನಾರೋಗ್ಯದಿಂದ ರಾಜ ಸತ್ತಾಗ ಚೆನ್ನಮ್ಮನೇ ರಾಣಿಯಾಗಿ ರಾಜ್ಯದ ಆಡಳಿತದ ಚುಕ್ಕಾಣಿ ಹಿಡಿಯುತ್ತಾಳೆ. ಅರಮನೆಯವರೇ ಮಾಡಿದ ಕುತಂತ್ರಗಳಿಂದ ಬ್ರಿಟಿಷರು ಸಂಸ್ಥಾನದ ಮೇಲೆ ದಾಳಿ ಮಾಡುತ್ತಾರೆ. ಬ್ರಿಟಿಷರಿಗೆ ಕಪ್ಪ ಕಾಣಿಕೆ ನೀಡಲು ಚೆನ್ನಮ್ಮ ನಿರಾಕರಿಸುತ್ತಾಳೆ. ಮಕ್ಕಳಿಲ್ಲದ ಈಕೆ ಬಾಲಕನೊಬ್ಬನನ್ನು ದತ್ತು ಪಡೆದಿರುತ್ತಾಳೆ. ಆದರೆ ಬ್ರಿಟಿಷರು ಇದನ್ನು ಪ್ರತಿರೋಧಿಸುತ್ತಾರೆ. ಕ್ಷಾತ್ರ, ಸಾಹಸ, ಧೈರ್ಯಗಳಿಂದ ಮುನ್ನುಗ್ಗಿ ಆಕೆ ಬ್ರಿಟಿಷರ ವಿರುದ್ಧ ಕಾದಾಡುತ್ತಾಳೆ. ಕಿತ್ತೂರು ರಾಣಿಯ ಅವಸಾನವಾಗಿ, ಸಂಸ್ಥಾನ ಅವನತಿಯಾಗುತ್ತದೆ. ಆದರೆ, ಕಿತ್ತೂರು ಚೆನ್ನಮ್ಮ ಕನ್ನಡಿಗರ ಹೃದಯದಲ್ಲಿಚಿರಸ್ಥಾಯಿಯಾಗಿ ನಿಲ್ಲುತ್ತಾಳೆ. ಇದು ಈ ಚಿತ್ರದ ಕಥಾಸಾರ.

Girl in a jacket
error: Content is protected !!