“ಅಪಾಯವಿದೆ ಎಚ್ಚರಿಕೆ” ಚುರುಕು ನೋಟವೇ ಲವ್ ಸಾಂಗ್.
Publish by manjunath
ಈ ಹಿಂದೆ ಮೋಶನ್ ಪೋಸ್ಟರ್ ಮತ್ತು ಬ್ಯಾಚುಲರ್ ಸಾಂಗ್ ಬಿಡುಗಡೆ ಮಾಡಿದ ಅಪಾಯವಿದೆ ಎಚ್ಚರಿಕೆ ಚಿತ್ರತಂಡ ನಂತರ ಚಿತ್ರದ ಟೀಸರ್ ಬಿಡುಗಡೆಗೊಳಿಸಿ ಅದರ ವಿಶೇಷತೆ ಯಿಂದ ನಿರೀಕ್ಷೆ ಹುಟ್ಟಿಸಿತ್ತು. ಪ್ರಾರಂಭದಿಂದಲೂ ಹೊಸತನದ ಕಂಟೆಂಟ್ ಜೊತೆ ಕಾಣಿಸಿ ಕೊಳ್ಳುತ್ತಿದ್ದ ಅಭಿಜಿತ್ ತೀರ್ಥಹಳ್ಳಿ ನಿರ್ದೇಶನ ಅಪಾಯವಿದೆ ಚಿತ್ರದಲ್ಲಿ ಇದೀಗ ಹೊಸ ಹಾಡೊಂದು ಬಿಡುಗಡೆಯಾಗಿದೆ. ಚುರುಕು ನೋಟವೇ ಸುಳಿವು ನೀಡಿದೆ ಎನ್ನುವಂತ ಸುಂದರ ಸಾಲುಗಳೊಂದಿಗೆ ಶುರುವಾಗೋ ಈ ಹಾಡಿನ ಸಾಹಿತ್ಯವನ್ನು ಸ್ವತಃ ನಿರ್ದೇಶಕ ಅಭಿಜಿತ್ ತೀರ್ಥಹಳ್ಳಿ ಯವರೇ ಬರೆದಿರುವುದು ವಿಶೇಷ. ತುಂಬಾ ಅಪರೂಪದ ಪದಬಳಕೆ ಮೂಲಕ ಸಾಹಿತ್ಯದಲ್ಲೂ ತನ್ನ ಕೈಚಳಕ ತೋರಿರುವ ನಿರ್ದೇಶಕ ಅಭಿಜಿತ್ ತೀರ್ಥಹಳ್ಳಿಗೆ ಸಂಗೀತದಲ್ಲಿ ಸಾಥ್ ನೀಡಿದ್ದಾರೆ ಸುನಾದ್ ಗೌತಮ್. ಅನಂತು ವರ್ಸಸ್ ನುಸ್ರತ್ ಚಿತ್ರದ ‘ಈಗ ತಾನೇ ಜಾರಿಯಾಗಿದೆ’, ಮತ್ತು ಜೊತೆಜೊತೆಯಲಿ ಧಾರಾವಾಹಿಯ ‘ನೂರು ಜನ್ಮ ಕೂಡಿ ಬಾಳುವ’ ದಂತಹ ಹಿಟ್ ಹಾಡುಗಳನ್ನು ಕೊಟ್ಟ ಸುನಾದ್ ಗೌತಮ್ ಈಗ ಹೊಸ ಮೆಲೋಡಿ ನೀಡುವುದರ ಜೊತೆಗೆ ಕೇಳುಗನಿಗೆ ಹೊಸ ಇಂಪನ್ನು ಉಣಬಡಿಸಲು ಸಜ್ಜಾಗಿದ್ದಾರೆ.
ಸರಿಗಮಪ ಖ್ಯಾತಿಯ ರಜತ್ ಹೆಗ್ಡೆ ಚುರುಕು ನೋಟವೇ ಹಾಡಿಗೆ ಧ್ವನಿಯಾಗಿದ್ದು ತನ್ನ ಕಂಠದಿಂದಲೇ ಮೋಡಿ ಮಾಡಿದ್ದಾರೆ. ಒಟ್ಟಾರೆ ಮನಸಿಗೆ ಮುದ ನೀಡಿ ಕಾಡುವಂತಹ ಹೊಸ ಗೀತೆ ಯೊಂದು ಕನ್ನಡ ಚಿತ್ರರಂಗದಲ್ಲಿ ತನ್ನ ಮೆಲೋಡಿ ಟಚ್ ನಿಂದ ಸದ್ದು ಮಾಡುತ್ತಿದೆ.
ಸಸ್ಪೆನ್ಸ್, ಹಾರರ್ ಥ್ರಿಲ್ಲರ್ ಜಾನರ್ ಹೊಂದಿರುವ ಅಪಾಯವಿದೆ ಎಚ್ಚರಿಕೆ ಚಿತ್ರ ಇದೆ ಫೆಬ್ರವರಿ ಯಲ್ಲಿ ತೆರೆ ಕಾಣಲು ಸಜ್ಜಾಗಿದೆ. ಚಿತ್ರಕ್ಕೆ ವಿ. ಜಿ ಮಂಜುನಾಥ್ ಮತ್ತು ಪೂರ್ಣಿಮಾ ಎಂ ಗೌಡ ಬಂಡವಾಳ ಹೂಡಿದ್ದಾರೆ. ಚಿತ್ರದ ಚುರುಕು ನೋಟವೇ ಸಾಂಗಲ್ಲಿ ಅಣ್ಣಯ್ಯ ಖ್ಯಾತಿಯ ನಾಯಕ ವಿಕಾಶ್ ಉತ್ತಯ್ಯ ಮತ್ತು ನಾಯಕಿ ರಾಧಾ ಭಗವತಿ ತುಂಬಾ ಮುದ್ದಾಗಿ ಕಾಣಿಸಿಕೊಂಡಿದ್ದಾರೆ.
ಇಬ್ಬರ ನಡುವಿನ ಕಚೆಗುಳಿ ಇಡುವಂತಹ ಲವ್ ದೃಶ್ಯಗಳನ್ನು ಅದ್ಭುತವಾಗಿ ಚಿತ್ರಿಸಿದ್ದಾರೆ ನಿರ್ದೇಶಕ ಅಭಿಜಿತ್ ತೀರ್ಥಹಳ್ಳಿ. ಈ ಹಾಡಿನ ಲಿರಿಕಲ್ ವಿಡಿಯೋ ಈಗಾಗಲೇ ಆನಂದ್ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಿ ಸದ್ದು ಮಾಡುತ್ತಿದೆ.