ಪ್ರಕಾಶ ಕಡಿಮೆ ಅವರು ಮೂಲ ಉತ್ತರ ಕನ್ನಡದ ಗೋಕರ್ಣ ಸಮೀಪದ ಕಡಮೆಯವರು, ಅವರು ಗಾಣದೆತ್ತು ಮತ್ತು ತೆಂಗಿನ ಮರ,ಆ ಹುಡುಗಿ,ಅಮ್ಮನಿಗೊಂದು ಕವಿತೆ ಎಂಬ ಮೂರು ಕವನ ಸಂಕಲನಗಳನ್ನು ಪ್ರಕಟಿಸಿದ್ದಾರೆ. ಹಲವಾರು ಕವಿಗೋಷ್ಠಿಗಳಲ್ಲಿ ಭಾಗವಹಿಸಿದ್ದಾರೆ .ಡಾ.ಡಿ.ಎಸ್.ಕರ್ಕಿ ಪ್ರಶಸ್ತಿಯೂ ಅವರಿಗೆ ಸಂದಿದೆ, ಅವರು ಸದ್ಯ ಕಳೆದ ಇಪ್ಪತೈದು ವರುಷಗಳಿಂದ ಹುಬ್ಬಳಿಯಲ್ಲಿ ವಾಸವಾಗಿದ್ದಾರೆ. ಶ್ರೀಯುತರು ವಿಶಾಲ ಆರಾಧ್ಯ ಅವರ ‘ಸೊರಹೊನ್ನೆ ಕವನ ಸಂಕಲನ ಕುರಿತು ವಿಮರ್ಶೆ ಬರೆದಿದ್ದಾರೆ
ಹೆಣ್ಣಿನ ಒಡಲಾಳದ ಪ್ರತಿಬಿಂಬಗಳು
ಮೂಲತಃ ಬೆಂಗಳೂರು ಜಿಲ್ಲೆಯ ರಾಜಾಪುರದವರಾದ ವಿಶಾಲಾ ಆರಾಧ್ಯರವರು ಶಿಕ್ಷಕಿಯಾಗಿ ಆನೇಕಲ್ ತಾಲೂಕಿನಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಎಂ.ಎ. ಕನ್ನಡ ಪದವೀಧರಾದ ಇವರಿಗೆ ಬಾಲ್ಯದಿಂದಲೇ ಕನ್ನಡ ಸಾಹಿತ್ಯದ ಹುಚ್ಚು. ಅಂದಿನ ಪಿಯೂಸಿ ದಿನಗಳಿಂದಲೇ ಇವರ ವೈಚಾರಿಕ ಲೇಖನಗಳು ಮತ್ತು ಕವಿತೆಗಳು ಕನ್ನಡದ ನಾಮಾಂಕಿತ ಪತ್ರಿಕೆಯಲ್ಲಿ ಪ್ರಕಟವಾಗುತ್ತಿತ್ತು. ಮುಂದಿನ ದಿನಗಳಲ್ಲಿ ಸಾಮಾಜಿಕ ಸೇವೆ, ಕನ್ನಡ ಪರ ಸಂಘಟನೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಮುಖ್ಯ ವಾಹಿನಿಯಲ್ಲಿ ಬೆರೆತು ಬರಹಗಾರರಾಗಿ, ಸಂಘಟಕಿಯಾಗಿ, ಗಾಯಕಿಯಾಗಿ ಎಲ್ಲಕ್ಕಿಂತ ಮಿಗಿಲಾಗಿ ಆದರ್ಶ ಮಹಿಳೆ ಮತ್ತು ಆದರ್ಶ ಶಿಕ್ಷಕಿಯಾಗಿ ಸದ್ದು ಗದ್ದಲವಿಲ್ಲದೇ ಮಗು ಮನ ಮತ್ತುನಗು ಮೊಗದಿ ಕ್ರಿಯಾಶೀಲತೆಯನ್ನು ಮೈಗೂಡಿಸಿಕೊಂಡು ಕನ್ನಡ ಕಟ್ಟುವ ಕೆಲಸ ಮಾಡುತ್ತಿರುವದು ನಿಜಕ್ಕೂ ಹೆಮ್ಮೆಯ ವಿಷಯವೇ.
“ಸುರಹೊನ್ನೆ” ಇದು ವಿಶಾಲಾ ಇವರ ಎರಡನೇ ಕವನ ಸಂಕಲನ. ಇಲ್ಲಿಯ ಕವಿತೆಗಳು ಜನಪರ, ಪ್ರಗತಿಪರ ಮತ್ತು ಹೆಣ್ಣಿನ ಒಡಲಾಳದ ಪ್ರತಿಬಿಂಬಗಳಾಗಿವೆ. ೭೨ ಪುಟಗಳ ಈ ಹೊತ್ತಿಗೆಯಲ್ಲಿ ಜನಸಾಮಾನ್ಯರೂ ಅರಿತು ಆನಂದಿಸುವ ೫೦ ಸರಳ-ಸುಂದರ ಕವಿತೆಗಳಿದ್ದು, ಇದನ್ನು ಇವರೇ ಹುಟ್ಟು ಹಾಕಿದ ಬೆಂಗಳೂರಿನ ಅಲ್ಲಮ ಪ್ರಕಾಶನದವರು ಪ್ರಕಟಿಸಿರುವುದು.
ವಿಶಾಲ ಆರಾಧ್ಯ
ಹೊಸಿಲು ಬೇಲಿ ದಾಟದಂತೆ ತಡೆದು
ಕಸಿವಿಸಿಯ ತೆರೆಯ ಸರಿಸಿ
ಮುಸುರೆ ಕಸವನು ತೆಗೆದು
ಮನೆಯ ಹಸನುಗೊಳಿಸಿ
ನಡೆವ ಬಾಳ ಬಂಡಿಯ ಆಸನದಿ
ಲಗಾಮು ಹಿಡಿದು ಕುಳಿತು
ಪತಿಯ ನಿದುರೆಗೆ ಲಾಲಿ ಹಾಡುವ
ಹೆಂಗಸರು ನಾವು ಹೆಂಗಸರು
ಎನ್ನುತ್ತಾ “ನಾವು ಹೆಂಗಸರು” ಕವಿತೆಯಲ್ಲಿ ಹೆಣ್ಣಿನ ಅಂದಿನ ಇಂದಿನ ಬದುಕಿನ ಸತ್ಯದ ನೋಟವನ್ನು ತೆರೆದಿಟ್ಟಿರುವರು. ಇಂಗು ತಿಂದ ಮಂಗನಂತಾದರೂ ಮತ್ತೆ ಮತ್ತೆ ಅದೇ ಚಕ್ರವ್ಯೂಹದಲ್ಲಿ ಸಿಲುಕಿ, ಕೊರಳು ಕೊಯ್ದು ಬೆರಳು ಕಿತ್ತರೂ ಕಂಬನಿ ತುಂಬಿದ ಕಣ್ಣುಗಳಿಗೇನೂ ಆಗಿಲ್ಲ ಎಂದು ನಟಿಸುತ್ತಾ ಒಡಲ ಬಸಿರಿಗಾಗಿ ಹಸಿದು ಮತ್ತೆ ಗಂಡನ ನಿದ್ದೆಗೆ ಲಾಲಿ ಹಾಡುತ್ತಾ ಬದುಕು ಸಾಗಿಸುತ್ತಿದ್ದ ಹೆಣ್ಣಿನ ಸ್ಥಿತಿಗತಿಗಳನ್ನು ಕಣ್ಣಿಗೆ ಕಟ್ಟುವಂತೆ ಬಿಚ್ಚಿಟ್ಟಿರುವರು. ಹೆಣ್ಣು ಸಹನಾ ಮೂರ್ತಿ. ತನ್ನ ಎಲ್ಲಾ ನೋವುಗಳ ನಡುವೆಯೂ ಎಲ್ಲವನ್ನೂ ಮರೆತು ’ಗಾಣದೆತ್ತಾದರೂ’ ಮತ್ತೆ ಅವಳಿಗೆ ಅಪವಾದಗಳ ಸರಮಾಲೆ. ಅವಳ ದುಡಿತಕ್ಕೆ ಬೆಲೆಯೇ ಇಲ್ಲ. ಇದು ಎಲ್ಲಾ ಜಾತಿ, ಧರ್ಮ, ದೇಶಗಳ ಅಲಿಖಿತ ಸಂವಿಧಾನವಾಗಿದೆ. ಇಲ್ಲಿ ಕವಿ ’ಪತಿಯ ನಿದಿರೆ ಗೆ ಲಾಲಿ ಹಾಡುವ’ ಸಾಲುಗಳ ಮೂಲಕ ಹೆಣ್ಣಿನ ದಾರುಣ ಸ್ಥಿತಿಗತಿಗಳನ್ನು ಮಾರ್ಮಿಕವಾಗಿ ವಿಷಧೀಕರಿಸಿರುವರು.
“ಹಸನ್ಮುಖಿ ಬುದ್ಧ” ಕವಿತೆಯಲ್ಲಿ
ಊರು ಹೋಗೆಂದರೂ
ಕಾಡು ಕರೆಯುವುದಿಲ್ಲ
“ಮುಪ್ಪು ಪಿತ್ರಾರ್ಜಿತ
ಉಪ್ಪು ತಿಂದವರು ನೀರು
ಕುಡಿಯಲೇ ಬೇಕು”
ಇದೇ ಆಶ್ರಮಕ್ಕೆ ಮಕ್ಕಳು
ಮುಂದವರೂ ಸೇರಲೇ ಬೇಕು
ಎನ್ನುತ್ತಾ ಇಂದಿನ ಐಟಿ, ಬಿಟಿ, ಹೈ ಪೈ ಬದುಕಿನ, ಆಧುನಿಕ ಪರಂಪರೆಯ ಮಕ್ಕಳ ಮನೋವೈಕಲ್ಯತೆಯನ್ನು ಬುದ್ಧನ ಅಂದಿನ ದಿನಗಳ ಲೌಕಿಕತೆಯ ಮಜಲುಗಳ ಒಳನೋಟದ ಕುರಿತು ವಿವರಿಸುತ್ತಾ ’ಮುಪ್ಪಿನ’ ಕುರಿತಾಗಿ ಬೆಳಕು ಚೆಲ್ಲಿ ಇಂದು ತಮ್ಮ ಪಾಲಕರನ್ನು ವೃದ್ಧಾಶ್ರಮಕ್ಕೆ ಅಟ್ಟಿದ ಜನರೇ ಮುಂದೇ ಸ್ವತಃ ಸೇರಲೇಬೇಕು ಎಂಬ ಕಟು ಸತ್ಯದ ಭವಿಷ್ಯದ ಮಾತಿಗೆ ಕವಿ ಮುಪ್ಪು, ರೋಗ, ಸಾವುಗಳ ಕುರಿತಾಗಿ ತಮ್ಮ ಭಾವನೆಗಳನ್ನು ವ್ಯಕ್ತಪಡಿಸಿರುವರು. ಇಂದು ಸೌಜನ್ಯ ಅಳಿದು ಬರೀ ದೌರ್ಜನ್ಯಗಳೇ ತುಂಬಿದೆ. ಬದುಕಿನ ಭೂಮಿಯಲಿ ದುರಾಸೆಗಳ ಬೆಳೆ ಎನ್ನುತ್ತಾ ಸತ್ತ, ಸಾಯುತ್ತಿರುವ ಮಾನವೀಯತೆಯ ಕುರಿತಾಗಿ ಮರುಕಪಟ್ಟಿರುವರು.
ಸುರಹೊನ್ನೆಗೆ ಮುನ್ನುಡಿಯ ಕಳಶವಿಟ್ಟ ಬರಹಗಾರ, ಚಿತ್ರ ನಿರ್ದೇಶಕರಾದ ಎಲ್ ಎನ್ ಮುಕುಂದ ರಾಜ್ “ವಿಶಾಲಾ ಹೆಸರಿಗೆ ತಕ್ಕ ಹಾಗೆ ವಿಶಾಲ ಮನಸ್ಥಿತಿ ಉಳ್ಳವರು. ವಿಶಾಲ ಜಗತ್ತಿನ ವೈಶಾಲ್ಯವನ್ನು ತಮ್ಮ ಬದುಕಿನ ಭಾಗವಾಗಿಸಿಕೊಂಡವರು. ಅಲ್ಲಿ ಪಡೆದುಕೊಂಡ ಅರಿವುಗಳನ್ನು ವಿಸ್ತರಿಸಲೆಂದೇ ಕವಿತೆಯ ಬೆನ್ನು ಹತ್ತಿದರು. ನಿತ್ಯದ ಚಡಪಡಿಕೆಗಳನ್ನು, ಅನುಭವದ ಧಾವಂತಗಳನ್ನು ಮುಚ್ಚುಮರೆಯಿಲ್ಲದೇ ಹೇಳಿಕೊಳ್ಳುವ ಭಾವ ಸಂಬಂಧವುಳ್ಳವರಾಗಿದ್ದಾರೆ. ವಿಶಾಲಾ ಅವರದು ಒಂದು ವಿಶಿಷ್ಟ ಸುಗಂಧ ಲೋಕ. ಹೂವುಗಳ ನವಿರು ಗಂಧವೇ ಅವರ ಕವಿತೆಗಳ ಜೀವ ಸಂಬಂಧೀ ಕೇಂದ್ರವಾಗಿದೆ. ಹೂವಿಗೆ ಗಂಧ ಘಮಲುಗಳು ಮಾತ್ರವಲ್ಲ ; ಹಣ್ಣಾಗುವ, ಬೀಜವಾಗುವ, ಹೊಳೆಯುವ, ಚಿಗುರುವ, ಬೆಳೆದು ವೃಕ್ಷವಾಗುವ ಬಹುದೊಡ್ಡ ಜವಾಬ್ದಾರಿಯುಳ್ಳ ಬದುಕೂ ಇರುತ್ತದೆ. ಇವರ ಸುರಹೊನ್ನೆ ಸಂಜೀವ ಪೊರೆವ ತಾಯಿಯ ಮಡಿಲಾಗಿರುವುದೇ ನಿಜವಾದ ಕಾಣ್ಕೆ” ಎಂದಿರುವರು.
ಹಚ್ಚು ಮುನ್ನ ಭಾಷೆಯಾಗಿ
ಮನೆಯಲೊಂದು ದೀಪ
ಮುಚ್ಚು ಇಂದೇ ಪಾಶ್ಚಾತ್ಯರ
ವ್ಯಾಯಾಮದ ಕೂಪ
ಎನ್ನುತ್ತಾ “ವೀರ ಯೋಧ” ಕವಿತೆಯಲ್ಲಿ ಭಾಷೆಯ ಅಭಿಮಾನವನ್ನು ಮೆರೆದಿರುವರು. ಇಂದಿನ ಆಧುನಿಕ ಸಂಸ್ಕೃತಿಗನುಗುಣವಾಗಿ ರಾಜಧಾನಿಯಲೇ ಕನ್ನಡ ಭಾಷೆ ಕ್ಷೀಣವಾಗುತ್ತಿರುವದನ್ನು ಕಂಡು ಕವಿ, ದೇಶ ಕಾಯುವ ಯೋಧರಂತೆ ಇಂದಿನ ಪರಿಸ್ಥಿತಿಗೆ ಭಾಷೆ ಕಾಯಲೂ ಸೈನಿಕ ಬೇಕಾಗಬಹುದೆಂದು ಖೇದ ವ್ಯಕ್ತ ಪಡಿಸಿರುವರು. ಇಂಗ್ಲಿಷ್ ವ್ಯಾಮೋಹ ಹೆಚ್ಚುತ್ತಿರುವ ಇಂದಿನ ದಿನಗಳಲ್ಲಿ ನಾವೆಲ್ಲರೂ ಕನ್ನಡದ ರಕ್ಷಣೆಗೆ ನಿಲ್ಲಲೇ ಬೇಕು ಮತ್ತು ನಾನೊಬ್ಬ ಕನ್ನಡಿಗ ಎಂದು ಗರ್ವದಿಂದ ಹೇಳಿ ಕೊಳ್ಳಬೇಕು. ತಾಯಿ ಭಾಷೆಗಾಗಿ ನಾವು ಅಭಿಮಾನ ಪಟ್ಟು ಮನೆಮನೆಯಲ್ಲೂ ಕನ್ನಡದ ದೀಪ ಹಚ್ಚ ಬೇಕಾಗಿದೆ ಎನ್ನುತ್ತಾ ಕವಿ ಇಲ್ಲಿ ಕನ್ನಡ ಪ್ರೇಮ ಮೆರೆಯುವದರೊಂದಿಗೆ ’ಮುಚ್ಚು ಇಂದೇ ಪಾಶ್ಚಾತ್ಯರ ವ್ಯಾಮೋಹದ ಕೂಪ” ಎಂಬ ಚಾಟಿಯನ್ನೂ ಬೀಸಿರುವರು.
“ಎಚ್ಚರ” ಕವಿತೆಯಲ್ಲಿ
ಎದುರಿಗೆ ಇದ್ದವರು
ಎಷ್ಟೇ ಮೃದುವಿರಲಿ
ನಿನ್ನ ಬೆರಳಲ್ಲಿ
ಉಗುರು ಉದ್ದವಿರಲಿ
ಎನ್ನುತ್ತಾ ಹೆಣ್ಣಿನ ಸ್ವಯಂ ರಕ್ಷಣೆಯ ಕುರಿತಾಗಿ ತಣ್ಣನೆಯ ದನಿಯಲ್ಲಿ ಬಿಸಿ ಮಾತು ಎಸೆದಿರುವರು. ಎಲ್ಲೆಲ್ಲೂ ಹಾಡೇ ಹಗಲು ಈಗ ಅತ್ಯಾಚಾರ, ಅನಾಚಾರಗಳು ನಡೆಯುತ್ತಲೇ ಇರುತ್ತದೆ. ಇದಕ್ಕೆ ಪೂರ್ವಭಾವಿಯಾಗಿ ಪ್ರತೀ ಹೆಣ್ಣೂ ಸ್ವಯಂ ರಕ್ಷಣೆ ಮಾಡಿಕೊಳ್ಳಲೇ ಬೇಕಾಗಿದೆ. ಬಣ್ಣನೆಯ ನುಡಿಗಳಿಂದ ಮೋಹಕ ಮಾತನಾಡಿ ಒಲಿಸಿಕೊಳ್ಳುವ ಈ ಜನಗಳ ನಡುವೆ ಸದಾ ಎಚ್ಚರಿಕೆಯಿಂದ ಜೀವವೆಲ್ಲಾ ಕಣ್ಣಾಗಬೇಕಾಗಿದೆ ; ಒಳಗಣ್ಣು ಸದಾ ತೆರೆದೇ ಇರಬೇಕು ಎಂಬ ಎಚ್ಚರಿಕೆಯ ಮಾತಿನಿಂದ ಕವಿ ಸಹೃದಯರನ್ನು ಎಚ್ಚರಿಸಿರುವರು.
ಪ್ರಗತಿಪರ ಚಿಂತನೆಯ ಬರಹಗಾರರಾದ ಡಾ. ಎಚ್.ಎಲ್. ಪುಷ್ಪಾ ಈ ಸಂಕಲನಕ್ಕೆ ಬೆನ್ನುಡಿಯ ಮಾತು ಬರೆಯುತ್ತಾ “ವಿಶಾಲಾ ಆರಾಧ್ಯ ಸಹ ಕವಿತೆ ಎಂಬ ಮಾಯಾ ಜಿಂಕೆಯ ಬೆನ್ನು ಹತ್ತಿದ್ದಾರೆ. ಅದು ಅವರ ಕೈ ಹಿಡಿಯುತ್ತದೋ, ಬೀಳಿಸುತ್ತದೋ ತಿಳಿಯದು. ಆದರೆ ಕವಿಗೆ ಭರವಸೆ ಮತ್ತು ಆಶಾವಾದ ಖಂಡಿತಾ ಇರಬೇಕು. ಇವರ ಕವಿ ಮನಸ್ಸಿಗೆ ಹಾಗೂ ಕಾವ್ಯಕ್ಕೆ ಇಂತಹ ಆಶಾವಾದವಿದ್ದು ಅದು ಉತ್ಸಾಹದಿಂದ ಮುನ್ನಡೆಯುತ್ತಿದೆ. ಇಲ್ಲಿಯ ಬಹುತೇಕ ಕವಿತೆಗಳ ಕೇಂದ್ರ ಹೆಣ್ಣು. ಈ ಹೆಣ್ಣಾದರೂ ತಾನು ಕೇಂದ್ರದಲ್ಲಿದ್ದು ತನ್ನಂತೆಯೇ ಸಮಾಜದಲ್ಲಿರುವ ಹಲವು ಹೆಣ್ಣುಗಳ ಬದುಕು ಹಾಗೂ ವ್ಯಕ್ತಿತ್ವಗಳನ್ನು ಗಮನಿಸುತ್ತಿದ್ದಾಳೆ. ಈ ಗಮನಿಸುವಿಕೆಯಿಂದ ಅವರಿಗೆ ತಿಳುವಳಿಕೆಯೊಂದು ಲಭ್ಯವಾಗಿದೆ. ಈ ತಿಳುವಳಿಕೆ ಸಂಚಿ ಹೊನ್ನಮ್ಮನ ಹದಿಬದಿಯ ಧರ್ಮಕ್ಕಿಂತ ಭಿನ್ನವಾದುದೇನಲ್ಲ. ಇಲ್ಲಿಯ ಕವಿತೆಗಳು ಸಮಾಜದೊಡನೆ ಸಹನೀಯ ಸಂಬಂಧವನ್ನು ಕಟ್ಟಿಕೊಳ್ಳುವ ಅಪೇಕ್ಷೆಯಲ್ಲಿದೆ. ಈ ಸಂಕಲನ ಯಶಸ್ವಿಯಾಗಲಿ” ಎಂದಿರುವರು.
ವಿಶೇಷ ಮಕ್ಕಳಿಗಾಗಿಯೂ ಸಹ ವಿಶಾಲಾ ಆರಾಧ್ಯ ಕವಿತೆ ಬರೆಯುವ ಮೂಲಕ ಹೊಸ ಪ್ರಯೋಗಕ್ಕೆ ಮುನ್ನುಡಿ ಬರೆದಿರುವರು.
ದೇಶವಿಂದು ನರಕವಾಗಿ
ನರಳುತಿಹರು ಎಲ್ಲ
ಶ್ರವ್ಯ ದೃಶ್ಯವಿರದ ನಾವೇ
ಪುಣ್ಯವಂತರಲ್ಲಾ
ಎಂಬ ಸಾಲುಗಳ ಮೂಲಕ ದೇಶದ ಇಂದಿನ ಇಂತಹ ಪರಿಸ್ಥಿತಿ ನೋಡಲು, ಕೇಳಲು ಆಗದೇ ಇದ್ದುದಕ್ಕೆ ನಾವೇ ಧನ್ಯರು ಎಂಬ ಭಾವನೆ ಅವರಲ್ಲಿ ಮೂಡಿಬಂದಿರುವದನ್ನು ಮಾರ್ಮಿಕವಾಗಿ ಬರೆಯುತ್ತಾ ’ಕಣ್ಣಿಲ್ಲದ ಕುರುಡರಲ್ಲಒಳಗಣ್ಣು ತೆರೆಯುತ, ಕೊರಳು ತೆರೆದು ಅರಿಯುವೆವು ನಾಡು ಸಿರಿಯ ಸ್ವರ್ಗವ, ಎಂಬ ಎಚ್ಚರಿಕೆಯ ಮಾತನ್ನೂ ನೀಡಿರುವರು.
ಅನ್ನದಾತನ ಇಂದಿನ ಪರಿಸ್ಥಿತಿಗೆ ಕಣ್ಣೀರಾಗುತ್ತಾ ಕವಿ
ಅಂಗಳದೆ ಹರಡಿ ರಾಶಿ
ಸುಗ್ಗಿ ಹಾಡು ಹಾಡುತ
ಅಂಬಲಿಯ ತಾನು ಕುಡಿದು
ಸಗ್ಗ ನೋಡುವಾತ
ಎಂದು ರೈತನ ತ್ಯಾಗ ಬದುಕನ್ನು ಮನ ಮುಟ್ಟುವಂತೆ ಚಿತ್ರಿಸಿರುವುದು.
ಸಂಕಲನದ ಕವಿ ವಿಶಾಲಾ ತಮ್ಮ ಕವಿತೆಗಳ ಕುರಿತು ಬರೆಯುತ್ತಾ, ಇಲ್ಲಿಯ ಬಹುತೇಕ ಕವಿತೆಗಳು ಸ್ತ್ರೀ ಸಂವೇದನಾತ್ಮಕ ಕವಿತೆಗಳಾಗಿವೆ. ಹೆಣ್ಣು ಎಷ್ಟು ಚತುರೆಯಾದರೂ ಆಕೆಗೆ ಮೋಸವಾಗುವ ರೀತಿಯನ್ನು ಮತ್ತು ಅವಳು ಸಮಾಜದಲ್ಲಿ ದೈಹಿಕ, ಮಾನಸಿಕ ದಾಷ್ಟ್ಯತೆಗಳನ್ನು ಎದುರಿಸಿ ಬಂಡೇಳುವ ರೀತಿಯಲ್ಲಿ ಪ್ರತಿಭಟಿಸುವದೊಂದು ಪರಿಯಾದರೆ, ಸಮಾಜಕ್ಕೆ ಅದರ ತಪ್ಪಿನ ಅರಿವನ್ನು ತಿಳಿಸುವ ಪರಿ ಮತ್ತೊಂದು. ಈ ಸಣ್ಣ ಪ್ರಯತ್ನದ ಪರಿಯೇ ಈ ಕವಿತೆಗಳ ಆಶಯ, ಎಂದಿರುವರು.
“ಸಾಗುತಿರು” ಕವಿತೆಯಲ್ಲಿ
ಹಾದಿಯ ಕಲ್ಲಿಗೆ ಹೆದರದಿರು
ಕಲ್ಲೊಂದಿಗೆ ಕಡಲಿಹುದು
ತಾಗುವ ಮುಳ್ಳಿಗೆ ಸರಿಯದಿರು
ಮುಳ್ಳೊಂದಿಗೆ ಹೂವಿಹುದು
ಎನ್ನುತ್ತಾ ಬದುಕಿನ ಸಾಗುವಿಕೆ ನಿರಂತರವಾಗಿರಲಿ, ಎಂತಹ ಸಂಕಷ್ಟಗಳಿದ್ದರೂ ಅದಕ್ಕೊಂದು ಪರಿಹಾರ ಇದ್ದೇ ಇರುವುದು. ಕಲ್ಲಿದೆ ಎಂದು ತಿಳಿದು ಪಲಾಯನ ಮಾಡುವ ಮೊದಲು ಅಲ್ಲಿಯ ಕಡಲಿನ ಕುರಿತಾಗಿಯೂ ಖುಷಿ ಪಡುವಾ, ಅದರಂತೆ ಮುಳ್ಳು ಮತ್ತು ಗುಲಾಬಿಯೂ ಸಹ ಎನ್ನುತ್ತಾ ಕವಿ ಆಶಾ ಭಾವನೆ ವ್ಯಕ್ತಪಡಿಸಿದರು.
’ದುಂಡಾದ ಮೊಲೆಗಳು ಬಂಡ ಕಾಮಕ್ಕೆ ಅಲ್ಲಾ, ಅವು ಕಂದನ ಒಡಲ ಹಸಿವ ದಣಿಸುವ ಅಮೃತದ ನೆಲೆಗಳು’ ಎಂದು ಹೇಳ ಬೇಕಾದುದೆಲ್ಲವನೂ ಶಾಂತಿ ಸಮಾಧಾನದಿಂದ ಹೇಳುವ ವಿಶಾಲಾ ಇವರ ಕವಿತೆಗಳು ಹೆಣ್ಣಿನಒಡಲಾಳದ ಬೆಂಕಿಯ ಸೆಲೆಗಳಿದ್ದಂತೆ. ಸಂಕಲನದುದ್ದಕ್ಕೂ ಪುಟಿಯುವ ಕೆಲ ಸಾಲುಗಳು ಇವರ ಕಾವ್ಯದ ಗಟ್ಟಿತನಕ್ಕೆ ಸಾಕ್ಷಿಯಾಗಿದೆ. ಮಾನವೀಯ ಮನೋಭಾವನೆಗಳನ್ನು ಪ್ರತಿನಿಧಿಸುವ ಇವರ ಕವಿತೆಗಳಲ್ಲಿ ಬುದ್ಧನ ನಸುನಗೆಯಿದೆ, ಬಾಂಧವ್ಯದ ಬುತ್ತಿಯಿದೆ, ಹೆಣ್ಣಿಗೆ ಎಚ್ಚರಿಕೆಯ ಮಾತಿದೆ, ರೈತರಿಗಾಗಿ ಮಿಡಿಯುವ ಮನಸ್ಸಿದೆ. ಗದ್ಯದ ಶುಷ್ಕ ಗಾಳಿಗೆ ಪದ್ಯ ನಲುಗದಿರಲಿ ಎಂದು ಆಶಿಸಿ, ಈ ಎರಡನೇ ಸಂಕಲನಕ್ಕೆ ಶುಭಕೋರಿ ವಿಶಾಲಾ ಆರಾಧ್ಯರನ್ನು ಅಭಿನಂದಿಸುವೆ.