ಹನಿಗಳೆಂಬ ಸಿಹಿ ಜೇನ ಬಟ್ಟಲು…

Share

 

ಡಾ.ಶಿವಕುಮಾರ್ ಕಂಪ್ಲಿ
ಸಹಾಯಕ ಪ್ರಾಧ್ಯಾಪಕರು
ದಾವಣಗೆರೆ ಪ್ರಥಮದರ್ಜೆ ಕಾಲೇಜು.

 

ಹನಿಗಳೆಂಬ ಸಿಹಿ ಜೇನ ಬಟ್ಟಲು…

ಕಾಲದೊಂದಿಗೆ ಪಾದಗಳು ಹೊರಟಂತೆಲ್ಲಾ ಅದರ ಕಾಲಾನುಭವಗಳೂ ಭಿನ್ನವಾಗುತ್ತಲೇ ಬಂದಿವೆ. ಪದಗಳ ಬೆಚ್ಚಗಿನ ತೆಕ್ಕೆಯಲ್ಲಿ ದಾಖಲೆಗೊಂಡ ಚಿಗುರು ಹೆಜ್ಜೆಗಳಿಗೆ ಬುತ್ತಿಯಾಗಿ,ಪ್ರೀತಿಯ ಕೈ ತುತ್ತಾಗಿ, ಕಿರುಬೆರಳು ಹಿಡಿದು ಬೆಳಕಿನ ಹಾದಿಯಾಗುವಂತಿವೆ. ಬದಲಾಗಿದ್ದು ಕಾಲವೋ? ಕಾಲಾನುಕ್ರಮದ ಬದುಕೋ? ಎಂದು ಪ್ರಶ್ನಿಸಿಕೊಂಡರೆ ಉತ್ತರ ಬಳುಕಿ ಮುಸಿ ಮುಸಿ ನಕ್ಕು ಬದಲಾದದ್ದು ಕಾಲವಲ್ಲ ನಮ್ಮಯ ಬದುಕು ಎಂಬ ಸಂಗತಿಯನ್ನ ನೀಡುತ್ತದೆ.ಹೌದು ನಿಸರ್ಗ ಸಹಜವಾಗಿದ್ದ ಬದುಕುಗಳು ಇಂದು ಯಾವುದೋ ದಿಕ್ಕಿಲ್ಲದ ಕಿಟಕಿಯಲ್ಲಿ ಕುಳಿತ ತೊಯ್ದ ಏಕಾಂಗಿ ಗುಬ್ಬಿ ಮರಿಯಂತೆ ಕಾಣುತ್ತಿವೆ.ಮಾನವ ಹಣವೆನ್ನುವ ವ್ಯಸನಕ್ಕೆ ಬಿದ್ದು ನಿಸರ್ಗ ಸಹಜತೆಯ ತಣ್ಣನೆ ಗಾಳಿಯಂತಹ ಬದುಕನ್ನೇ ಮರೆತಿದ್ದಾನೆ. ಈ ಬದುಕಿನ ಪ್ರತಿಬಿಂಬದಂತೆಯೇ ಆತನ ಅಭಿವ್ಯಕ್ತಿಗಳೂ ರೂಪಾಂತರಗೊಂಡಿವೆ. ಕನ್ನಡ ಹನಿಗವಿತೆಗಳ ಚರಿತ್ರೆಯು ಅಂಬೆಗಾಲಿಂದ ಎದ್ದು ನಡೆವ ಕೂಸಂತೆ ಬೆಳೆಯುತ್ತಿದೆ.ದಿನಕರ ದೇಸಾಯಿ,ರಾಜರತ್ನಂ,ಅಕ್ಬರ್ ಆಲಿ ತರದವರು ಹಿಂದೆ ಚುಟುಕುಗಳನ್ನ ಸೃಷ್ಟಿಸಿ ಹದಗೊಳಿಸಿದರು.
ಈ ನೆಲೆಯಲ್ಲ ಗಟ್ಟಿಯಾಗಿ ನಿಂತು ಹನಿಗವಿತೆಗಳೆಂಬ ಹೊಸ ಬಣ್ಣಗಳ ಚಿಟ್ಟೆಗಳನ್ನ ಹಾರಿಬಿಟ್ಟು ಜನರ ಕಣ್ಣು ಸೆಳೆದವರು ಡುಂಡಿರಾಜ್,ವೈ.ಎನ್.ಕೆ.,ಬಿ.ಆರ್.ಲಕ್ಷ್ಮಣ್ ರಾವ್,ಜರಗನಹಳ್ಳಿ ಶಿವಶಂಕರ್,ಮೊದಲಾದವರು.ಇವರ ಹನಿಗವಿತೆಗಳು ಅನಂದ ಮತ್ತು ಅರಿವಿನ ಮಿಶ್ರ ಫಲ ನೀಡುವಂತಿವೆ.


ಪ್ರೇಮ,ವಿರಹ,ರಾಜಕೀಯ,ಸಾಮಾಜಿಕ ಚಿಂತನೆಗಳನ್ನ ಹಾಸ್ಯದಲ್ಲಿ,ವಿಡಂಬನೆಯಲ್ಲಿ ಸಾಗುವ ಈ ಕವಿತೆಗಳ ಪ್ರಧಾನ ಗುಣವೇ ಪದ ಚಮತ್ಕಾರ.ಈ ಕವಿತೆಗಳಿಗೆ ಕಾವ್ಯ ಎಂಬ ಸಿದ್ಧ ರೂಪದ ಚೌಕಟ್ಟಿಲ್ಲ.ಭಾಷಾ ಬಳಕೆಯ ಮಡಿವಂತಿಕೆ ಇಲ್ಲ. ಇವು ತಮ್ಮೊಳಗಿನ ಅರ್ಥಸ್ಫೋಟ ಮತ್ತು ಧ್ವನಿ ಸ್ಫೋಟಗಳಿಂದಲೇ ಓದುಗರ ಹೆಗಲೇರಿ ಬಿಡುತ್ತವೆ. ಈ ಕವಿತೆಗಳು ಬರಗಾಲದಲ್ಲೂ ಬತ್ತದ ಹೊಲಗಳ ಬದಿಯ ಒರತೆಯಂತವು. ಒರತೆ ನೀರಿಗೆ ಪಿಲ್ಟರ್ ನ ಅನಿವಾರ್ಯತೆ ಇಲ್ಲ .
ನಾಚಿಕೊಳ್ಳುತ್ತ ಆಕೆ
ಎದೆಯ ಮೇಲಿನ ಹೊದಿಕೆ
ಕೊಂಚ ಕೊಂಚ ಬದಿಗೆ
ಸರಿಸುತ್ತ ಹೋದ ಹಾಗೆ
ಪಾಡ್ಯ,ಬಿದಿಗೆ,ತದಿಗೆ

ಎಂದು ತುಂಟತನದಿಂದಲೇ ಹೆಣ್ಣಿನ ಎದೆಯ ಅಂದದ ಆನಂದವನ್ನೂ ಕಾಲಸರಿದಂತೆಲ್ಲಾ ಕಾಣುವ ಚಂದ್ರನ ಸೊಗಸನ್ನೂ ಬೆಸೆವ ಡುಂಡಿರಾಜ್‌ರು ಕವಿತೆಯನ್ನ ನನ್ನ ಕವಿತೆ ನನ್ನ ಹಾಗೆ ಬೊಜ್ಜಿನ ಒಜ್ಜೆಯಿಲ್ಲದೆ ಪ್ರೀಯಾಗಿ,ಹೃದಯದ ಮಿಡಿತಕ್ಕೆ ಬಾಯಾಗಿ ತಂದವರು.
ಶಿವನ ಆ ಬಿಲ್ಲನ್ನ ಒಮ್ಮೆ ಮಾತ್ರ ಎತ್ತಿ
ಸೀತೆಯನ್ನ ಗೆದ್ದು ಬಿಟ್ಟ ರಾಮ
ಇವಳ ಬಿಲ್ಲುಗಳನ್ನ ದಿನವೂ ಹೊರುತ್ತಿರುವ
ನಾನಲ್ಲವೇ ಪುರುಷೋತ್ತಮ

ಎಂದು ವಾಸ್ತವವನ್ನ ಕವಿತೆ ಮಾಡಿ ಹೇಳುವ ಜಾಡು ತೋರಿದವರು ಬಿ.ಆರ್.ಲಕ್ಷ್ಮಣ್‌ರಾವ್. ವಂಡರ್ ಗಣ್ಣು,ಜ್ಞಾನಪೀಠ ದ ಪದ್ಯ ಬರೆಯುತ್ತಿದ್ದ ವೈ.ಎನ್.ಕೆ.ಅವರು ಪುರಾಣ ಮತ್ತು ಇತಿಹಾಸದ ಪಾತ್ರಗಳನ್ನ ಹಾಸ್ಯದ ಪ್ರತಿಮೆಗಳಾಗಿಸಿದವರು.
ದೂರವಿರು ದೂರ್ವಾಸನೆ
ಬರುತಲಿದೆ ದುರ್ವಾಸನೆ”

ಕಾದಿರುವಳು ಶಬರಿ
ಹಿಡಿದುಕೊಂಡು ಡಬರಿ
ಅದರಲಿಷ್ಟು ಕೊಬರಿ

ಅಸಾದುಲ್ಲಾ ಖಾನ್ ಅವರು ಹಿಂದಿ ಮತ್ತು ಕನ್ನಡ ಪದಗಳ ಮೂಲಕ ಅಪರೂಪದ ಹನಿಗವಿತೆಗಳನ್ನ ಕನ್ನಡಕ್ಕೆ ನೀಡಿದ್ದಾರೆ.
ಬೆಳ್ಳಕ್ಕಿ ಸಾಲು ಕಿತನೆ ಅಚ್ಚಾ ಹೈ
ಅಪ್ಪ ಅಮ್ಮಾಕೆ ಸಾಮ್ ನೆ
ಸೋಬ್ ಬಚ್ಚಾ ಹೈ

ಜರಗನಹಳ್ಳಿ ಶಿವಶಂಕರ್ ಅವರು ಹಾಸ್ಯದ ಮೂಲಕ ತೆಳುವಾಗಿ ಕಾಣುತ್ತಿದ್ದ ಹನಿಗವಿತೆಗಳಿಗೊಂದು ಗಂಭೀರ ಅರಿವಿನ ರೂಪ ಹೊದಿಸಿ ವಿಸ್ಮಯ ತಂದವರು.
ನೂರು ದಿನ ಬದುಕಿದ ಮನುಷ್ಯ
ಸತ್ತು ಮೂರುದಿನ ಉಳಿಯಲಾರ
ನೂರು ದಿನ ಬದುಕಿದ ಮರ
ಸತ್ತು ಸಾವಿರಾರು ವರ್ಷ ಬದುಕುತ್ತದೆ
ಮನೆಯ ತೊಲೆಯಾಗಿ,ಕಿಟಕಿ,ಕದವಾಗಿ.
ಹನಿಗವಿತೆಗಳೆಂದರೆ ಆ ಕ್ಷಣಕ್ಕೆ ನಗಿಸಿ ಮರೆಸಿಬಿಡುವ ತೆಳು ರೂಪವೆಂಬ ಚೌಕಟ್ಟನ್ನ ಸೀಳುವಂತೆ ರೆವ ಡಿ.ಬಿ.ರಜಿಯಾ ಅವರು ಹನಿಗವಿತೆಗಳನ್ನ ಹೆಣ್ಣ ಬಾಳಿನ ಗಾಢ ರೂಪಕಗಳಾಗಿಸಿದ್ದಾರೆ.
ಈ ಒಲೆಯಲ್ಲಿ
ಬೆಂಕಿ
ಉರಿಯಲೇ ಇಲ್ಲ
ಮೇಲಿಟ್ಟ ಪಾತ್ರೆಯಲಿ
ನನ್ನ ಹನಿ ಹನಿ ಭಾವನೆಗಳು
ಆದ್ರ ಕಾಮನೆಗಳು
ಹಾಗೇ ಉಳಿದಿವೆ
ತಣ್ಣಗೆ.

ರೂಪ ಹಾಸನ ಅವರು ಹಸಿವನ್ನ ಕೇಂದ್ರವಾಗಿಟ್ಟುಕೊಂಡು ಬದುಕಿನ ಕವಿತೆಯನ್ನ ತುಂಬಾ ವಿಚಾರ ಶೀಲವಾಗಿಸಿದ್ದಾರೆ.

ಹಸಿವು ಸೋಲುವುದಿಲ್ಲ.ರೊಟ್ಟಿ ಗೆಲ್ಲುವುದಿಲ್ಲ
ಪಂದ್ಯವೆಂಬ ಭ್ರಮೆ ಹಸಿವು ರೊಟ್ಟಿಗೆ.
ಆದರಿಲ್ಲಿ ಸೋಲು ಗೆಲುವುಗಳಿಲ್ಲ
ದಾಖಲಾಗುವುದಿಲ್ಲ ಚಕ್ರ ತಿರುಗುತ್ತದೆ ರೊಟ್ಟಿ
ಹಸಿವು ಕೈ ಹಿಡಿದು ಸುತ್ತಬೇಕಿದೆ ಜೊತೆ ಜೊತೆಗೇ…

ಹನಿಗವಿತೆಗಳಿಗೆ ಪರಂಪರೆಯ ಜೊತೆ ಜೊತೆಗೇ ಹೊರಟ ಭಿನ್ನ ಚಲುವಿದೆ ಕ್ಷಣದ ಸ್ಫೋಟದೊಳಗೂ ಅವು ನಿರಂತರ ತಾಜಾತನವನ್ನ ಉಳಿಸಿಕೊಳ್ಳುವ ಬನಿಯನ್ನ ಪಡೆದುಕೊಂಡಿವೆ.ಪುರುಸೊತ್ತಿಲ್ಲದ ಕಾಲದಲ್ಲಿ ಇವು ಕಾವ್ಯದ ಕಾವನ್ನ ನೀಡುವ ಹನಿ ಹನಿ ಮಳೆಯಂತೆ ಉಲ್ಲಾಸವನ್ನೇ ತನ್ನ ಕೇಂದ್ರವಾಗಿಸಿಕೊಂಡಿವೆ.

ಗೆಳೆಯಾ ಒಪ್ಪಿದೆ
ನೀನು ನುಡಿದರೆ
ಮುತ್ತಿನ ಹಾರದಂತೆ.
ಆದರೂ ತುಸು
ಎಚ್ಚರ ವಹಿಸು
ಎಂಜಲು ಹಾರದಂತೆ.(ಡುಂಡಿ ರಾಜ್)
* * *
ನನಗೆ ಅಜ್ಜಿಯ ಹಿತವಚನ:
“ನಿನ್ನ ವಿದ್ಯೆಗೆ ಬದಲು
ನಿನ್ನ ಲಜ್ಜೆ ನಡೆಸಿದಂತೆ
ಬದುಕು” (ಲಂಕೇಶ್ ನೀಲು ಕವನ)

ಹನಿಗವಿತೆಗಳಲ್ಲಿ ಹೊಸಬರ ಸಾಲೂ ಚಿಕ್ಕದೇನಿಲ್ಲ.ವಾರ ಪತ್ರಿಕೆ,ಮಾಸ ಪತ್ರಿಕೆಗಳಲ್ಲಿ ಕಾಣುವ ಅನೇಕರ ಹನಿಗವಿತೆಗಳೇ ಇದಕ್ಕೆ ಸಾಕ್ಷಿ.ಅನೇಕರ ಹನಿಗವಿತೆಗಳನ್ನ ಹಿಡಿದು ಕೆಲವನ್ನ ಬಡಿದು ಶೊಧದ ಹೊಸ ಚರ್ಚೆಯ ನಿಕಶಕ್ಕಿಟ್ಟು ನೋಡಬಹುದಾಗಿದೆ.

Girl in a jacket
error: Content is protected !!