ಬೋಲ್ಡ ಅಂಡ್ ಬ್ಯೂಟಿಪುಲ್ ರೇಖಾ

Share

ಡಾ.ಶಿವಕುಮಾರ್ ಕಂಪ್ಲಿ
ಸಹಾಯಕ ಪ್ರಾಧ್ಯಾಪಕರು
ದಾವಣಗೆರೆ ವಿಶ್ವವಿದ್ಯಾಲಯ

 

ಬೋಲ್ಡ ಅಂಡ್ ಬ್ಯೂಟಿಪುಲ್ ರೇಖಾ

ಸಮಾಜ ತನಗೆ ಒಪ್ಪಿತವಾದ ಹಲವು ಬಗೆಯ ಬದುಕುಗಳನ್ನ ಮೌಲ್ಯ ಎಂದು ಕರೆಯುತ್ತದೆ. ಆದರ್ಶ ಎಂದು ಪಾಲಿಸುತ್ತದೆ.ಅದು ಕುಟುಂಬದ ವಿಷಯದಲ್ಲಿ ಒಂದು ಗಂಡಿಗೆ ಒಂದೇ ಹೆಣ್ಣು ಎಂದು ಮದುವೆಯ ನಿಯಮವನ್ನ ವಿಧಿಸಿ ಹಾಗೆ ಬದುಕುವುದು ಸಾಮಾಜಿಕ ಗೌರವದ ಸಂಕೇತ ವೆಂದುಹೇಳುವ ನಿಯಮವನ್ನ ಪಾಸುಮಾಡುತ್ತದೆ. ಇದಕ್ಕೆ ಉದಾಹರಣೆ ಎಂಬಂತೆ ಸಮುದಾಯಗಳು ರಾಮ ಲಕ್ಷ್ಮಣರ ಆದರ್ಶವನ್ನ ಸೂಚಿಸುತ್ತವೆ.
ಸಮಾಜದಲ್ಲಿ ದುಡಿವ ಶ್ರಮಿಕವರ್ಗ ಮತ್ತು ನೌಕರಿಯ ಮಧ್ಯಮವರ್ಗ ಈ ನಿಯಮವನ್ನ ಬಹುತೇಕ ಕಟ್ಟುನಿಟ್ಟಾಗಿ ಪಾಲಿಸಿದರೆ ಮನೋರಂಜನೆಯ ಹಾದಿಯ ಕಲಾವರ್ಗ,ಸಿರಿವಂತವರ್ಗ,ಮತ್ತು ಆಳುವವರ್ಗಗಳು ಈ ನಿಯಮಗಳನ್ನ ಬಹುತೇಕ ಗಾಳಿಗೆ ತೂರಿ ಅವು ತಮ್ಮ ಮನಬಂದ ಹಾಗೆ ನಡೆದುಕೊಳ್ಳುತ್ತವೆ. ಇವರ ಈ ನಡೆಗಳು ತಳ ಹಂತದ ಶ್ರಮಿಕರಿಗೆ ಮತ್ತು ಮಧ್ಯಮವರ್ಗಕ್ಕೆ ಅಚ್ಚರಿಯಂತಲೂ ಕುತೂಹಲವೆಂತಲೂ ಕಾಣಿಸಿ ಇವರ ನಡೆಗಳನ್ನೇ ತರ್ಕಕ್ಕೆ ಒಡ್ಡುತ್ತಾ ಬಣ್ಣ ಬಣ್ಣದ ಉತ್ತರ ಪಡೆಯುತ್ತ ಖುಷಿಪಡುತ್ತವೆ.ಅವರ ಬದುಕುಗಳು ತಮ್ಮದೇ ಚಂಚಲ ಮನಸ್ಥಿತಿಯ ಕನಸಂತಿರುವುದನ್ನ ಕಂಡು ವಿಪರೀತ ಆಕರ್ಷಣೆಗೊಳಗಾಗುತ್ತಾರೆ.ಕೆಲವರಂತೂ ಎಲೆಅಡಿಕೆಯಂತೆ ಇವರ ಸುದ್ದಿಯನ್ನ ಸದಾ ಜಗಿಯುವುದರಲ್ಲೇ ಪರಮಾನಂದ ಪಡೆಯುತ್ತಾರೆ.ಬಣ್ಣದವರ,ದೊಡ್ಡವರ ಬದುಕೆಂದೆರೆ ಇಂದಿಗೂ ನಮ್ಮ ಜನರಿಗೆ ವಿಪರೀತ ಸೆಳೆತ ಈ ಸೆಳೆತವನ್ನ ಮಾಧ್ಯಮಗಳೂ ತಮ್ಮ ಹಣ ತುಂಬಿಸಿಕೊಳ್ಳಲು ರಹದಾರಿಯನ್ನಾಗಿಸಿಕೊಂಡಿರುವುದು ಅಚ್ಚರಿಯಂತೆಯೂ ಕಾಣಬಲ್ಲದು.


ಮನೆಯೆಂಬುದೊಂದು ಪಾಠ ಶಾಲೆ. ಅಪ್ಪ ಅಮ್ಮಂದಿರು ಸಂಸ್ಕಾರ ನೀಡುವ ಮೂಲ ಗುರುಗಳು. ಅವರೇ ದಿಕ್ಕು ತಪ್ಪಿದರೆ!? ಮಕ್ಕಳಿಗೆ ಬೆಳಕಿನ ದಾರಿ ತೋರುವವರಾರು? ಮಕ್ಕಳು ಮೊದಲು ಅಪ್ಪ ಅಮ್ಮಂದಿರನ್ನ ,ತನ್ನ ಸುತ್ತಲ ಹಿರಿಯರನ್ನ, ಪರಿಸರವನ್ನ ಅನುಕರಿಸುತ್ತಾ ಬೆಳೆಯುತ್ತವೆ. ಆ ಅನುಕರಣೆಯ ದಾರಿಗಳೇ ಕಲ್ಲು ಮುಳ್ಳುಗಳಿಂದ ತುಂಬಿದಾಗ, ತಗ್ಗು ದಿನ್ನೆಗಳಿಂದ ಅಸ್ತವ್ಯಸ್ಥವಾದಾಗ ಎಳೆ ಪಾದಗಳು ಸಾಗುವುದೆಲ್ಲಿಗೆ! ಅವು ದಾರಿ ತಪ್ಪಿಬಿಡವುದಿಲ್ಲವೇ? ಯಾರೂ ತುಳಿಯದ ನಿಯಮಬಾಹೀರವಾದ ಸಮಾಜದ ಗೌರವ ದೊರೆಯದ ದಾರಿಕಡೆ ಹೊರಟ ಮಕ್ಕಳ ಕಥೆಗಳೇ ಇಂತಹವು. ಹೀಗೆ ದಾರಿಬಿಟ್ಟ ಹುಡುಗಿಯೇ ಹಿಂದಿ ಚಿತ್ರಗರಂಗದ ಅಮರ ಪ್ರೇಮಿ, ಸದಾ ಚಿಗುರುವ ಹಸಿರ ಚಲುವೆ,ರೋಮಾಂಚನದ ರತುನದ ಗೊಂಬೆ ಬೆಳ್ಳಿತೆರೆಯ ಉಮ್ರಾವ್ ಜಾನ್ ರೇಖಾ.
ರೇಖಾಳ ಚಲ್ಲು ಚಲ್ಲಿನ ಕಥನಗಳನ್ನ ನೋಡಬೇಕೆಂದರೆ ಅವಳ ಅಪ್ಪ ಅಮ್ಮಂದಿರ ಕಥನಗಳನ್ನೇ ಮೊದಲು ಬಿಚ್ಚಿ ನೋಡಬೇಕು. ರೇಖಾಳ ಹಸಿ ಹಸಿ, ಬಿಸಿ ಬಿಸಿ ಕಥನಗಳನ್ನ ಬಿಡಿಸುತ್ತಾ ಹೋಗುವ ಇಂತಹ ಪುಸ್ತಕವೇ ದೇವಶೆಟ್ಟಿ ಮಹೇಶ್ ಅವರ ರೇಖಾ ಕೆಂಡ ಸಂಪಿಗೆ ಕಹಾನಿ.


ಈ ಪುಸ್ತಕ ಆಕೆಯ ಬೆಳ್ಳಿತೆರೆಯ ಬದುಕಿನ ಬೆಳೆಯನ್ನೂ,ಬೆಳಕಿನ ಹಿಂದಿನ ಆಕೆಯ ಕತ್ತಲ ಬದುಕನ್ನೂ ತುಲನೆಮಾಡುತ್ತಾ ಹೋಗುತ್ತದೆ. ಅದೇ ಆಗ ಹರೆಯ ಚಿಗುರುತ್ತಿದ್ದ ಕಾಲದಲ್ಲಿ ಉದ್ಯಮಕ್ಕೆ ಕಾಲಿಟ್ಟಿದ್ದಳು ರೇಖಾ,ಯಾರು ಏನೆಂದರೆ ನನಗೇನು ನನ್ನ ಸಂತೋಷ ಮಾತ್ರ ಮುಖ್ಯ ಎನ್ನುವಂತೆ ಬದುಕಿದಳು. ಊರಿಗೆ ಊರೇ ತನ್ನನ್ನು ಚಲ್ಲು ಚಲ್ಲಾದ ಹುಡುಗಿ ಅಂದರೂ ಅದರ ಬಗ್ಗೆ ಡೋಂಟ್ ಕೇರ್ ಅನ್ನುವಾಕೆ. ಅವಳ ಈ ನಿಲುವು ಎಷ್ಟೋ ಜನರ ಹೆಂಡತಿಯರ ನಿದ್ದೆಗೆ ಬೆಂಕಿ ಹಚ್ಚಿತ್ತು. ಅವಳು ನಟಿಸುವ ಚಿತ್ರದ ಹೀರೋ ನಿರ್ದೇಶಕರನ್ನು ಬಿಡಿ ಸಹಾಯಕ ನಿರ್ದೇಶಕರು ಕ್ಯಾಮಾರಾಮನ್‌ಗಳ ಹೆಂಡತಿಯರೂ ಕಂಗಾಲಾಗುತ್ತಿದ್ದರು. ಅವಳ ಕಣ್ಣು ನನ್ನ ಗಂಡನತ್ತ ಬೀಳದಿರಲಿ ದೇವರೇ.. ಎಂದು ಹರಕೆ ಹೊರುತ್ತಿದ್ದರು. ಹೀಗೆ ರೇಖಾ ಒಂದಳತೆಯಲ್ಲಿ ಬಾಲಿವುಡ್ ನ ಪಾಲಿಗೆ ಕತ್ತಿ ಅಲುಗಿನ ಹುಡುಗಿಯಾಗಿದ್ದಳು.
ಮಜಾಗೊತ್ತಾ? ಆಕೆಗೆ ಗಂಡಸರೆಂದರೆ ಒಂಥರಾ ಅಲರ್ಜಿ. ಅಟ್ ದಿ ಸೇಮ್ ಟೈಮ್ ವಿಚಿತ್ರ ವ್ಯಾಮೋಹ. ಒಂದು ಹಂತದ ವರೆಗೆ ಹತ್ತಿರ ಸೇರಿಸುತ್ತಿದ್ದಳು. ಎಲ್ಲಾ ಮುಗಿದ ಮೇಲೆ ದೂರ ತಳ್ಳುತ್ತಿದ್ದಳು. ಹಚ್ಚಿಕೊಂಡರೆ ಜೀವವನ್ನೇ ಕೊಡುವಷ್ಟು ಪ್ರೀತಿಸುತ್ತಿದ್ದಳು.ಆದರೆ ಅದೇಕೋ ಅವರು ಮೈಮೇಲೆ ಏರಿ ಬಂದಾಗ ಅಗುಳಿನಷ್ಟೂ ಕನಿಕರೆ ಇಲ್ಲದೇ ಎಡಗೈಯಿಂದ ಹಂಗೇ ತಳ್ಳಿ ಕಳಿಸುತ್ತಿದ್ದಳು. ಕಣ್ಣ ಅಳತೆಯಲ್ಲಿ ಸಕ್ಕವರು ಆಕೆಯ ಹಾಸಿಗೆಯಲ್ಲಿ ಕಾಲು ಚಾಚಲು ಹೆಚ್ಚು ಹೊತ್ತು ಬೇಕಾಗುತ್ತಿರಲಿಲ್ಲ.


ಅವಳ ಈ ಹಗ್ಗ ಕಡಿಯುವ ಚಟದಲ್ಲಿ ಬಂದು ಹೋದವರ ಪಟ್ಟಿ ನೋಡಿದರೆ ಆಕೆಯ ಖದರ್ ಯಾವ ರೀತಿ ಇತ್ತೆಂದು ಗೊತ್ತಾಗುತ್ತದೆ. ಅಮಿತಾಬ್ ಬಚ್ಚನ್, ವಿನೋದ್ ಮೆಹ್ರ,ಕಿರಣ್ ಕುಮಾರ್,ಮುಕೇಶ್ ಅಗರ‍್ವಾಲ್,ಜೀತೇಂದ್ರ, ಸಂಜಯ್ ದತ್ತ್,ಸುನೀಲ್ ದತ್ತ್,ಯಶ್ ಕೊಯ್ಲಿ,ಅಕ್ಷಯ್ ಕುಮಾರ್,..ಯಾರಿಗುಂಟು ಯಾರಿಗಿಲ್ಲ ಈ ಸುಖ ಜೀವನ ? ಆದರೆ ಆಕೆ ಬರಿ ಇದನ್ನೇ ಮಾಡಲಿಲ್ಲ. ಎಲ್ಲರಂತೆ ಬದುಕಿನಲ್ಲಿ ಸೆಟಲ್ ಆಗಬೇಕೆಂದು ಮದುವೆ ಯಾದಳು. ಒಂದಲ್ಲ ಎರಡಲ್ಲ ಅಂತ ನಾಲ್ಕು ಗಂಡಸರ ಮನೆಯಲ್ಲಿ ಸಂಸಾರ ನಡೆಸಿದಳು. ಆದರೆ ಅವರಲ್ಲಿ ಬಹುತೇಕರು ಆತ್ಮ ಹತ್ಯೆ ಮಾಡಿಕೊಂಡರು ಇಲ್ಲಾ ಆಕಸ್ಮಿಕ ಸಾವಿಗೆ ಶರಣಾದರು. ಅಲ್ಲಿಂದ ಇನ್ನೊಂದು ರೂಮರ್ ಹುಟ್ಟಿಕೊಂಡಿತು ರೇಖಾಳನ್ನ ಮದುವೆಯಾದ ಗಂಡಸಿಗೆ ಹೆಚ್ಚು ದಿನ ಬದುಕುವ ಅರ್ಹತೆ ಇಲ್ಲ.!
ರೇಖಾ ಹೆದರಲಿಲ್ಲ ಇಡೀ ಜಗತ್ತನ್ನೇ ಎದುರು ಹಾಕಿಕೊಂಡು ಬದುಕಿದಳು. ಅವಳಿಗೆ ತನ್ನ ಹಠ ಮುಖ್ಯ.ತನ್ನ ಸಂತೋಷ ಮುಖ್ಯ. ತನ್ನ ಮಾತೇ ನಡೆಯಬೇಕೆಂಬ ವಿಲಕ್ಷಣ ಬಯಕೆ.ಇದಕ್ಕೆಲ್ಲಾ ಕಾರಣ ಏನು? ಅವಳು ಹುಟ್ಟುತ್ತಲೇ ಹೀಗಿದ್ದಳಾ?ಅಥವಾ ಬಣ್ಣದ ಲೋಕ ಅವಳ ಮನಸ್ಸನಿಲ್ಲಿ ಕಾಮನ ಬಿಲ್ಲು ಬಿಡಿಸಿತಾ? ಇದನ್ನು ತಿಳಿಯಲು ಆಕೆಯ ಹಿಂದಿನ ಪುಟ ತಿರುವಬೇಕು. ಅಲ್ಲಿ ಕಾಣಿಸುವುದು ಎರಡು ಹೆಸರು.ಒಂದು ಜೆಮಿನಿ ಗಣೇಶನ್. ಇನ್ನೊಂದು ಪುಷ್ಪವಲ್ಲಿ. ಒಬ್ಬಾತ ಜನ್ಮ ಕೊಟ್ಟ ತಂದೆ ಇನ್ನೊಬ್ಬಾಕೆ ಹಡೆದ ತಾಯಿ.
ಅಪ್ಪ ಜೈಮಿನಿ ಗಣೇಶ್ ಸುಂದರಾಂಗ ಕಣ್ಣಿಗೆ ಕಂಡ ಚಲುವೆಯರನ್ನ ಕ್ಷಣಮಾತ್ರದಲ್ಲಿ ಸೆಳೆದು ಹಾಸಿಗೆ ಹಂಚಿಕೊಳ್ಳುತ್ತಿದ್ದ ಜಾರ. ತಾಯಿ ಪುಷ್ಪವಲ್ಲಿ ಕುದುರೆ ಜೂಜಿಗೆ ಬಿದ್ದು ರೋಸಿಗೆ ತರಿಸಿದಾಕೆ. ಮಗಳನ್ನ ಒಂದು ಆಟಿಕೆ ವಸ್ತುವೆಂಬಂತೆ ನೋಡುತ್ತಿದ್ದಾಕೆ. ಅಪ್ಪ ಬಾರದಿದ್ದಾಗ ಇನ್ನೊಬ್ಬನ ಜೊತೆ ಸಂಸಾರ ಮಾಡಲು ಶುರು ಮಾಡಿದವಳು ಪುಷ್ಪವಲ್ಲಿ. ಅಮ್ಮನ ಆ ನಡೆ ರೇಖಾಗೆ ಆಗ ಹಾದರದಂತೆ ಕಂಡಿದ್ದು ಮುಂದೆ ಅದೇ ತನ್ನ ಹಾದಿಯೂ ಆಗಿದ್ದು ವಿಪರ್ಯಾಸ!


ಹಿಂದಿ ಚಲನ ಚಿತ್ರರಂಗದ ನಟರು,ನಿರ್ದೇಶಕರ ಕಥೆಗಳೆಂದರೆ ಅವು ಬಹುತೇಕ ದುಂಬಿಗಳ ಕಥೆಗಳೇ! ತೆರೆಯ ಮೇಲೆ ಸಾಮಾಜಿಕ ಮೌಲ್ಯಗಳನ್ನ ವಿಜೃಂಭಿಸುವಂತೆ ಮಾಡುವ ಇವರ ವೈಯಕ್ತಿಕ ಕಹಾನಿಗಳು ಮಾತ್ರ ಅದಕ್ಕೆ ತದ್ವಿರುದ್ದ. ಅವರಿಗೆ ಮನೆ ಮಡದಿ,ಮಕ್ಕಳೆಂಬುವುದಕ್ಕಿಂತ ಅವರ ದೇಹ ಮತ್ತು ಮನಸ್ಸಿನ ಸುಖವೇ ಮುಖ್ಯ.ಅವರಲ್ಲಿ ಎರಡೆರಡು ಸಂಬಂಧಗಳೇ ಹೆಚ್ಚು.ಮಂಚ ಬದಲಿಸುತ್ತ ಹೋಗುವ ಅವರ ಕಥೆಗಳು ಬೆಳಕಿಗಿಂತ ಕತ್ತಲನ್ನೇ ತೋರುತ್ತವೆ.ಸುಮ್ಮನೆ ರೇಖಾ ಎಂದರೆ ಸಾಕು ಅಲ್ಲೊಂದು ಸಾಲೇ ನಿಲ್ಲುತ್ತದೆ.ಅಲ್ಲಿ ಪ್ರೇಮಕ್ಕಿಂತಲೂ ಕಾಮದ್ದೇ ದರ್ಬಾರು. ಈ ನೆಲೆಯಲ್ಲಿ ಮೀನಾಕುಮಾರಿ ನಂತರ ಎದ್ದು ಕಾಣುವ ಹೆಸರೇ ರೇಖಾಳದ್ದು.ವಿಚಿತ್ರ ನೋಡಿ ಮೀನಾಕುಮಾರಿ ರೇಖಾಳ ಬೆಸ್ಟ ಪ್ರೆಂಡ್.
ರೇಖಾ ಅಪ್ರತಿಮ ಡ್ರೆಸ್ ಸೆನ್ಸನ ಸುಂದರಿ. ಬಹುದೊಡ್ಡ ಚಂಚಲೆ.ರೇಖಾಳನ್ನ ಬೆನ್ನಟ್ಟಿದ್ದು ಬಗೆ ಬಗೆಯ ಜನ.ಆಕೆಯ ಪಾದ ಮುಟ್ಟಿದರೆ ಸಾಕು ನನ್ನ ಜೀವನವೇ ಸಾರ್ಥಕ ಎಂದು ಹೇಳುವ ಅಭಿಮಾನಿ, ನೀನು ಸಿಗದಿದ್ದರೆ ನಾನು ಸತ್ತೇ ಹೋಗುತ್ತೇನೆ ಎನ್ನುವ ಪ್ರೇಮಿಗಳು.ಆದರೆ ರೇಖಾ ಮಾತ್ರ ಯಾರಿಗಾಗಿ ಯಾರೂ ಸಾಯುವುದಿಲ್ಲ ಇಂಥ ಧಮಕಿಗಳಿಗೆ ನಾನು ಹೆದರುವುದಿಲ್ಲ. ಎನ್ನುತ್ತಿದ್ದಳು.ಅವಳ ಒಬ್ಬ ಗಂಡ ವಿಚ್ಚೇದನದಿಂದ ಬೇಸತ್ತು ಕೆಲವೇ ದಿನಗಳಲ್ಲಿ ರೇಖಾಳ ದುಪ್ಪಟವನ್ನೇ ಬಳಸಿ ನೇಣು ಹಾಕಿಕೊಂಡು ಆತ್ಮ ಹತ್ಯೆ ಮಾಡಿಕೊಂಡ ಮೇಲೂ ಕೆಲವೇ ತಿಂಗಳಲ್ಲಿ ಆಕೆ ತನ್ನ ಹಳೆಯ ಇಮೇಜ್ ಗೆ ಬಂದುಬಿಟ್ಟಳು. ಅಸಲಿಗೆ ಆತ್ಮಹತ್ಯೆಯ ಹವ್ಯಾಸ ಅವಳಿಗೂ ಬಾಲ್ಯದಿಂದಲೂ ಬಂದು ಬಿಟ್ಟಿತ್ತು.ಅವಳು ಅಮಿತಾಬ್ ನನ್ನ ಬಿಡುವುದಕ್ಕಿಂತಲೂ ಮೊದಲು ಮೂರು ಬಾರಿ ಸತ್ತು ಸತ್ತು ಬದುಕಿದವಳು!


ಬಗೆ ಬಗೆಯ ಹೋಟೇಲ್ ಊಟ ತಿಂದರೆ ಆರೊಗ್ಯ ಕೆಡುತ್ತದೆ ಎಂಬ ಮಾತಿದ್ದರೂ ಅದು ರೇಖಾಗೆ ಅನ್ವಯಿಸುವುದಿಲ್ಲ.ಹಾಗಾಗಿ ರೇಖಾಳ ಕಥನವೆಂದರೆ ಅದು ವಿಕ್ಷಿಪ್ತ ಮನಸ್ಸಿನದು. ಪ್ರೀತಿಗಾಗಿ ಹಂಬಲಿಸುವ ಬರಡು ಪ್ರೀತಿಯ ಜನರನ್ನ ನೆನಪಿಗೆ ತರುವಂತದ್ದು.ಪ್ರೀತಿಯನ್ನ ಬಿನ್ನಟ್ಟಿದ ರೇಖಾಗೆ ಸಿಕ್ಕದ್ದು ಬೇಜಾವಬ್ದಾರಿ ಅಪ್ಪ.ಆತ ಸದಾ ಇನ್ನೊಬ್ಬಳೊಂದಿಗೆ ಅಲೆಯುವುದನ್ನೇ ಕಾಯಕ ಮಾಡಿಕೊಂಡಾತ.ಇದಕ್ಕೂ ಮುಖ್ಯವಾಗಿ ಆಕೆಯ ತಾಯಿ ಪುಷ್ಟವಲ್ಲಿ ಸಿನಿಮಾ ಅವಕಾಶ ಸಿಗದಾಗ,ಕುದುರೆ ಜೂಜಿನಲ್ಲಿ ಸೋತು ಕನಲಿದಾಗ ಮಗಳನ್ನೇ ಹೆಸರಾಂತ ನಟರ ಹಾದರಕ್ಕೆ ಬಳಸಿದಾಕೆ.ಆಕೆಗೆ ಮಗಳ ಮೈಯಲ್ಲಿ ಕಂಡದ್ದು ವಾತ್ಸಲ್ಯವಲ್ಲ ಹಣದ ಥೈಲಿಯನ್ನ. ಈ ಚರಿತ್ರೆಯಿಂದಲೇ ರೇಖಾ ಇನ್ನೊಬ್ಬರಿಂದ ಅನ್ನಿಸಿಕೊಳ್ಳುವ ಪ್ರಮೇಯಕ್ಕೆ ಸಿಲುಕಿದ್ದು.ಜಯಬಹದ್ದೂರಿಯು ಇನ್ನೊಬ್ಬರ ಗಂಡನನ್ನು ತನ್ನ ಮನೆಗೆ ಕರೆಸಿಕೊಳ್ಳುವ ಹೆಣ್ಣು ಯಾವ ಮಟ್ಟದವಳೆಂದು ನನಗೆ ಗೊತ್ತಿಲ್ಲವಾ? ಅದನ್ನ ನಾವು ಕನಸಿನಲ್ಲೂ ಎಣಿಸಲು ಆಗೋಲ್ಲ ಅವಳ ಜತೆ ನನ್ನನ್ನ ಹೋಲಿಸಲು ಸಾಧ್ಯವಿಲ್ಲ ಎಂದು ಮುಖಕ್ಕೆ ರಾಚಿದರೆ, ವಿನೋದ್ ಮೆಹ್ರನಾ ತಾಯಿ ಸೊಸೆಯಾಗಿ ಬಂದ ರೇಖಾಳನ್ನ ಕಂಡದ್ದೇ ಒಂದೇ ಒಂದು ಹೆಜ್ಜೆ ನನ್ನ ಮನೆಯ ಹೊಸಿಲು ದಾಟಿದರೆ ರಕ್ತ ಪಾತ,ಇಲ್ಲಿಂದ ಜಾಗ ಖಾಲಿ ಮಾಡದಿದ್ದರೆ ಏನ್ ಮಾಡ್ತಿನಿ ನೋಡ್ತಾ ಇರು… ಎಂದು ರೇಖಾಳಿಗೆ ಗದರಿಸಿದ್ದೇ ಏನಾಗುತ್ತಿದೆ ಎಂದು ಅರಿವಾಗುವಷ್ಟರಲ್ಲಿ ಚಪ್ಪಲಿ ಹಿಡಿದು ರೇಖಾಳ ಕೆನ್ನೆ ಥರಗುಟ್ಟುವಂತೆ ಬಾರಿಸೇ ಬಿಟ್ಟಳು. ಯಾವ ಕೆನ್ನ ಮುಟ್ಟಲು ಕೋಟ್ಯಾಂತರ ಜನ ಕನಸು ಕಾಣುತ್ತಿದ್ದರೊ ಅಂಥ ಕೆನ್ನೆ ಚಪ್ಪಲಿ ಏಟಿಗೆ ತತ್ತರಿಸಿ ಹೋಗಿತ್ತು. ಅಲ್ಲೇ ನಿಂತಿದ್ದರೆ ಉಳಿಗಾಲವಿಲ್ಲ ಎಂದರಿತ ರೇಖಾ ಕಾರಿನತ್ತ ಓಡಿದಳು. ಆಯಮ್ಮ ಸುಮ್ಮನೇ ಬಿಡಲಿಲ್ಲ. ರೇಖಾ ಹಿಂದೆ ಹಿಂದೆಯೇ ಬೆನ್ನಟ್ಟಿದಳು. ಸುತ್ತಲಿನ ಜನ ಎಂಜಾಯ್ ಮಾಡುತ್ತಿದ್ದರು.ರೇಖಾ ನಡುಗುತ್ತ ಕಾರು ಏರಿದಳು ಅದು ಭಯದ ನಡುಗಲ್ಲ. ಕಿಬ್ಬೊಟ್ಟೆಯಿಂದ ಎದ್ದ ಅವಮಾನದ ಬೆಂಕಿ ಎಂದು ಲೇಖಕರು ಬರೆಯುತ್ತಾರೆ.


ಸದಾ ಅಫೇರ್ ಗಳಿಂದ ಬೇಸತ್ತ ರೇಖಾಳ ಕಣ್ಣು ಮನಸ್ಸು ಪ್ರೀತಿ ವಾತ್ಸಲ್ಯಕ್ಕೆ ಬೆನ್ನಟ್ಟಿತ್ತು ಎಂಬುದು ಈ ಪುಸ್ತಕ ನೋಡಿದ ಯಾರಿಗೂ ತಿಳಿದು ಬಿಡುತ್ತದೆ.ಆದರೆ ಆಕೆಗೆ ಹುಡುಕಿದಷ್ಟು ದೇಹ ರುಚಿಯ ಜನ ಸಿಕ್ಕರೇಹೊರತು ಹೃದಯಸಿರಿಯ ಜನ ಸಿಗಲಿಲ್ಲ.ಇದ್ದುದರಲ್ಲೇ ಗಾಯಗೊಂಡ ಆಕೆಗೆ ಹಿತವಾದವನೆಂದರೆ ಅಮಿತಾಬ್ ಬಚ್ಚನ್ ಮಾತ್ರ.ಆತನ ನಡೆ, ರೀತಿ, ಸಣ್ಣ ಪುಟ್ಟ ವಿಷಯಗಳನ್ನ ತಿಳಿ ಹೇಳುತ್ತಿದ್ದ ವಿಧಾನ ಅಭಿನಯಕ್ಕೂ ಚಾರಿತ್ರ್ಯಕ್ಕೂ ಇರುವ ನಂಟನ್ನ ಬಿಡಿಸಿ ಹೇಳಿದ ಮೊದಲ ಗಂಡು ಆತ. ಹಾಗಾಗಿ ಬಚ್ಚನ್ ಆಕೆಯ ಪಾಲಿಗೆ ಕೇವಲ ಪ್ರಿಯತi ಮಾತ್ರವಾಗಿರಲಿಲ್ಲ. ಆತನಾದರೂ ಅಷ್ಟೇ ಲೇಖಕರೇ ಹೇಳುವಂತೆ ಆತ ರೇಖಾಳನ್ನ ಪ್ರೀತಿಸುತ್ತಿದ್ದ ಅದೇ ಹೊತ್ತಿಗೆ ಜಯಾಳನ್ನ ಆರಾಧಿಸುತ್ತಿದ್ದ
ರೇಖಾಳ ಚರಿತ್ರೆ ಹಿಂದಿ ಸಿನಿ ಜಗತ್ತಿನ ಅಪ್ಪಟ ಅಭಿನೇತ್ರಿಯ ಕಲಾ ಚರಿತ್ರೆಯೂ ಹೌದು. ನಟನೆಯನ್ನ ಆರಾಧಿಸುತ್ತಿದ್ದ ಆಕೆ ತನಗೆ ಸಿಕ್ಕ ಪ್ರತಿ ಪಾತ್ರವನ್ನೂ ಹೊಕ್ಕು ಅಭಿನಯಿಸಿದಾಕೆ. ಚಿಕ್ಕ ಪಾತ್ರವಾದರೂ ಮನಸ್ಸಿನಲ್ಲಿ ಉಳಿಯುವಂತೆ ನಟಿಸುವಾಕೆ.ಉಮ್ರಾವ್ ಜಾನ್,ಉತ್ಸವ್, ಸಿಲ್ ಸಿಲಾ,ಮುಕದ್ದರ್ ಕಾ ಸಿಕಂದರ್,ಕಾಮಸೂತ್ರ, ಸುಹಾಗ್, ಆಸ್ತ, ಸಾವನ್ ಬಾಂದೊ, ಸೂರತ್,ಕಿಲಾಡಿಯೊಂಕಾ ಕಿಲಾಡಿ ಹೀಗೆ ಆಕೆಯ ಜನಪ್ರಿಯ ಸಿನಿಮಾಗಳ ಪಟ್ಟಿ ಸಾಗುತ್ತದೆ.


ರೇಖಾಳಿಗೆ ಪದ್ಮಶ್ರೀ ಪ್ರಶಸ್ತಿ,ಫಿಲಿಂ ಪೇರ್ ಪ್ರಶಸ್ತಿ, ಯಶ್ ಚೋಪ್ರಾ ಪ್ರಶಸ್ತಿ, ನ್ಯಾಷನಲ್ ಪಿಲಿಂ ಫೇರ್ ಅವಾರ್ಡ,ಸ್ಟಾರ್ ಸ್ಕ್ರೀನ್ ಅವಾರ್ಡ,ಜೀ ಸಿನಿ ಲೈಪ್ ಅಚೀವ್ ಮೆಂಟ್ ಅವಾರ್ಡ, ಸೋನಿ ಗೋಲ್ಡನ್ ಅವಾರ್ಡಗಳು ಬಂದಿವೆ. ರೇಖಾ ಕಥನದೊಳಗೆ ಭಾರತೀಯ ಬಹುತ್ವದ ರಕ್ತ ಗುಣವಿದೆ. ಕಾರಣ ಆಕೆಯ ತಂದೆ ತಮಿಳ,ತಾಯಿ ತೆಲುಗು ನಟಿ, ರೇಖಾಳ ಮೊದಲ ನಾಯಕಿ ಚಿತ್ರವೇ ಕನ್ನಡ ನಂತರ ತೆಲುಗು ಆನಂತರ ಹಿಂದಿಗೆ ಬಡ್ತಿ ಪಡೆದಾಕೆ. ನಟಿಯಾಗಿ ರೇಖಾಳದು ಸಕ್ಸಸ್‌ಕಥೆ.ಆದರೆ ಬೆಳ್ಳಿತೆರೆಯ ಬದುಕು ಆಕೆಯ ಕನಸನ್ನ ಕೆಂಡದ ಕಹಾನಿಯನ್ನಾಗಿಯೇ ಉಳಿಸಿದ್ದು ಮಾತ್ರ ವಿಪರ್ಯಾಸ!.

Girl in a jacket
error: Content is protected !!