– ತುರುವನೂರು ಮಂಜುನಾಥ
ಬಿ.ಸಿ.ರಾಮಚಂದ್ರ ಶರ್ಮರ ಸಾಹಿತ್ಯ ಮಗ್ಗಲುಗಳ ಪರಿಚಯ
ಆಧುನಿಕಕನ್ನಡ ಕಾವ್ಯ ಚರಿತ್ರೆಯಲ್ಲಿ ಪ್ರಮುಖ ಹೆಸರು ಡಾ.ಬಿ.ಸಿ.ರಾಮಚಂದ್ರ ಶರ್ಮ ಅವರು ತಮ್ಮ ನವ್ಯಕಾಲಘಟ್ಟದಲ್ಲಿ ಸಾಹಿತ್ಯ ಮತ್ತು ಹೊಸ ಚಿಂತನೆಗಳಿಗೆ ಹೇಗೆ ಹೊರೆಹಚ್ಚಿದರು ಎನ್ನುವುದು ಬಹುತೇಕ ಈಗಿನ ಯುವ ಸಾಹಿತಿಗಳಿಗೆ ಪರಿಚಯವಿಲ್ಲ. ಅವರ ಕುರಿತು ಹಲವಾರು ಕವಿಗಳು ಸಾಹಿತಿಗಳು ಬಿಡಿ ಬರಗಳನ್ನು ಸಂಕ್ಷಿಪ್ತವಾಗಿ ಪರಿಚಯಿಸಿದ್ದಾರೆ ಅದರಲ್ಲಿ ನನಗೆ ಒಂದಿಷ್ಟು ಮುಖ್ಯವಾಗಿದ್ದು ಮತ್ತು ಅವರ ಸಾಹಿತ್ಯ ಕುರಿತು ಸಮಗ್ರವಲ್ಲದಿದ್ದರು ಪರಿಚಯ ದೃಷ್ಟಿಯಲ್ಲಿ ಡಾ.ನರಹರಿ ಬಾಲಸುಬ್ರಮಣ್ಯ ಅವರು ಬರೆದಿರುವುದು ಒಂದಿಷ್ಟು ಮಾಹಿತಿಯನ್ನು ಹೊಂದಿದೆ.
ಆದರೆ ಈಗ ಡಾ.ರಾಮಚಂದ್ರ ಶರ್ಮ ಅವರ ಕುರಿತು ಶೂದ್ರ ಶ್ರೀನಿವಾಸ್ ಅವರು ಹೊರ ತಂದಿರುವ ಬಿ.ಸಿ.ರಾಮಚಂದ್ರ ಶರ್ಮ ಅವರ ಪುಸ್ತಕ ಸಮಗ್ರವಾಗಿದೆ ಅವರ ಸಾಹಿತ್ಯ ಮತ್ತು ಬದುಕಿನ ಎಲ್ಲಾ ಮಗ್ಗಲುಗಳನ್ನು ಪರಿಚಯಿಸುವ ಮೂಲಕ ಸಾಹಿತ್ಯದ ವಿದ್ಯಾರ್ಥಿಗಳ ದೃಷ್ಟಿಯಲ್ಲಿ ಒಂದು ಉತ್ತಮ ಕೃತಿಯಾಗಿದೆ. ಈ ಪುಸ್ತಕವನ್ನು ಭಾರತೀಯ ಸಾಹಿತ್ಯ ನಿರ್ಮಾಕರು ಮಾಲೆಯಲ್ಲಿ ಸಾಹಿತ್ಯ ಅಕಾಡೆಮಿ ಹೊರತಂದಿದೆ.
ಶೂದ್ರ ಶ್ರೀನಿವಾಸ ಅವರ ಆತ್ಮೀಯರಾದ ರಾಮಚಂದ್ರ ಶರ್ಮ ಅವರು ತೀರ ಹತ್ತಿರದಿಂದ ಬಲ್ಲವರು ಅವರ ಒಟ್ಟಾರೆ ಬದುಕು ಮತ್ತು ಸಾಹಿತ್ಯವನ್ನು ಓದಿದವರು ತಿಳಿದುಕೊಂಡವರು ಹಾಗಾಗಿ ಅವರ ಕುರಿತು ಸಮಗ್ರ ಸಾಹಿತ್ಯವನ್ನು ಪರಿಚಯಿಸುವ ಮೂಲಕ ಈಗಿನ ಮತ್ತು ಮುಂದಿನ ತಲೆಮಾರಿನ ಸಾಹಿತ್ಯಾಸಕ್ತರಿಗೆ ಇದೊಂದು ಉತ್ತಮ ಕೈಪಿಡಿಯಾಗಿದೆ.
ನವ್ಯಕಾಲಘಟ್ಟದಲ್ಲಿ ಗೋಪಾಲಕೃಷ್ಣ ಅಡಗಿರು ಜೊತೆ ಜೊತೆಯಲ್ಲಿ ವೈಚಾರಿಕತೆಯ ಬೆಸುಗೆಯಲ್ಲಿ ನಡೆದ ಸಾಹಿತ್ಯದ ಹಾದಿಯ ಅ ಕಾವ್ಯಗಳ ಗುಚ್ಚದಲ್ಲಿ ಗೋಚರಿಸುತ್ತದೆ. ಶರ್ಮ ಅವರು ಅಡಿಗರು,ಡಿ.ಆರ್.ನಾಗರಾಜ್ ಲಂಕೆಶ್ ಸೇರಿದಂತೆ ಆ ಕಾಲಘಟ್ಟದ ಬಹುತೇಕ ಸಾಹಿತಿಗಳ ಸಂಪರ್ಕ ಮತ್ತು ಅವರ ಒಟ್ಟಾರೆ ಸಾಹಿತ್ಯವನ್ನು ಇಲ್ಲಿ ಪರಿಚಯಿಸಲಾಗಿದೆ.
ಗೋಪಾಲಕೃಷ್ಣ ಅಡಿಗರು ಹೊಸ ಬಗೆಯಲ್ಲಿ ಬರೆಯಲು ಆರಂಭಿಸಿದ ಸರಿಸುಮಾರಿನಲ್ಲೇ ಅವರ ಸಮಕಾಲೀನರಾಗಿ ಬರೆಯಲು ತೊಡಗಿದ ಶರ್ಮರು ಅಡಿಗರಿಗಿಂತ ಭಿನ್ನವಾಗಿ ನವ್ಯಕಾವ್ಯ ಮಾರ್ಗವನ್ನು ರೂಪಿಸಲು ಪ್ರಯತ್ನಿಸಿದ ಕವಿ. ಸುಮಾರು ಆರು ದಶಕಗಳ ಕಾಲ ಕಾವ್ಯ ರಚನೆಯಲ್ಲಿ ತಮ್ಮನ್ನು ಇಡಿಯಾಗಿ ತೊಡಗಿಸಿಕೊಂಡ ಶರ್ಮರದು ಕಾವ್ಯದ ಬಗೆಗೆ ಶಬರಿಶ್ರದ್ಧೆಯ ಅತೀವ ನಿಷ್ಠೆ; ಅನೇಕ ಆಕರ್ಷಣೆ, ಆಮಿಷಗಳ ನಡುವೆಯೂ ಅವರು ಕಾವ್ಯದ ಶುದ್ಧರೂಪಕ್ಕೆ ಒಲಿದಂಥವರು.
ಚಿಕ್ಕಂದಿನಲ್ಲಿ ರಾಮಚಂದ್ರಶರ್ಮರಿಗೆ ಆಸರೆಯಾಗಿ ನಿಂತವರಲ್ಲಿ ಎಂ.ವಿ ಸೇತುರಾಮಯ್ಯನವರು ಒಬ್ಬರು. ಎಂ.ವಿ.ಸೀ ಅವರ ಒಡನಾಟದಿಂದಾಗಿ ಶರ್ಮರಿಗೆ ತಾರುಣ್ಯದಲ್ಲೇ ಕನ್ನಡದ ಪ್ರತಿಭಾವಂತ ಮನಸ್ಸುಗಳ ಸಹವಾಸ ಸಿಕ್ಕಿತು. ಬಿ.ಎಂ.ಶ್ರೀ ಆ ಕಾಲಕ್ಕೆ ಮಾಡುತ್ತಿದ್ದ ಪರಿಣಾಮಕಾರೀ ಭಾಷಣ, ಪರಿಷತ್ತಿನಲ್ಲಿ ನಿಘಂಟು ಕಛೇರಿಯಲ್ಲಿ ಸಹಾಯಕನಾಗಿ ಕೆಲಸ ಮಾಡುತ್ತಿದ್ದಾಗ ಒದಗಿ ಬಂದ ವಿ.ಸೀ, ಎಂ.ಆರ್.ಶ್ರೀ, ಕ.ವೆಂ. ರಾಘವಾಚಾರ್, ಎಲ್. ಗುಂಡಪ್ಪ ಮೊದಲಾದವರ ಸಂಪರ್ಕ ಶರ್ಮರಲ್ಲಿ ಸಾಹಿತ್ಯ ಪ್ರೀತಿ ಮೂಡಲು ಪ್ರೇರಣೆ ಒದಗಿಸಿದಂಥ ಸಂಗತಿಗಳು ಇಂತ ಹಲವಾರು ಸಂಗತಿಗಳನ್ನು ಅತ್ಯಂತ ಪ್ರಕರವಾಗಿ ಶೂದ್ರ ಶ್ರೀನಿವಾಸ್ ಅವರು ಪರಿಚಯಿಸುತ್ತಾ ಹೋಗತ್ತಾರೆ
ಮೈಸೂರು ವಿಶ್ವವಿದ್ಯಾನಿಲಯದಿಂದ ಬಿ.ಎಸ್ಸಿ, ಬಿ.ಎಡ್ ಪದವಿಗಳನ್ನು ಪಡೆದ ಶರ್ಮರು ಕೆಲಕಾಲ ಬೆಂಗಳೂರಿನ ಹೈಸ್ಕೂಲೊಂದರಲ್ಲಿ ಅಧ್ಯಾಪಕರಾಗಿದ್ದರು. ನಂತರ ಶರ್ಮರ ವಿದೇಶ ಯಾತ್ರೆ ಆರಂಭವಾಯಿತು. ಕೆಲಕಾಲ ಇಥಿಯೋಪಿಯಾದಲ್ಲಿ ಅಧ್ಯಾಪಕ ವೃತ್ತಿಯಲ್ಲಿದ್ದು ನಂತರ ಇಂಗ್ಲೆಂಡಿಗೆ ಬಂದರು. ಅಲ್ಲಿ ಅಧ್ಯಾಪಕ ವೃತ್ತಿಯಲ್ಲಿದ್ದುಕೊಂಡೇ ಮನಃಶಾಸ್ತ್ರ ಅಧ್ಯಯನ ಮಾಡಿದರು. ವಲಸೆ ಹೋದ ಭಾರತದ ಮಕ್ಕಳ ಬುದ್ಧಿಶಕ್ತಿಯ ಬಗ್ಗೆ ಅಧ್ಯಯನ ನಡೆಸಿ ಬರೆದ ಮಹಾಪ್ರಬಂಧಕ್ಕೆ ಪಿಎಚ್.ಡಿ ಪದವಿ ಪಡೆದರು. ಅಧ್ಯಾಪಕರಾಗಿದ್ದ ಶರ್ಮ ಮುಂದೆ ಮನಃಶಾಸ್ತ್ರದ ಸಲಹೆಗಾರರಾಗಿ ನೇಮಕರಾದರು. ಇಂಗ್ಲೆಂಡ್, ಜಾಂಬಿಯಾ ಹಾಗೂ ಯುನೆಸ್ಕೋ ಪರವಾಗಿ ಮಲಾವಿಗಳಲ್ಲಿ ಮನಃಶಾಸ್ತ್ರಜ್ಞರಾಗಿ ಕೆಲಸಮಾಡಿ ೧೯೮೨ರಲ್ಲಿ ತಾಯ್ನಾಡಿಗೆ ಹಿಂದಿರುಗಿದರು. ಪ್ರೀತಿಸಿ ಮದುವೆಯಾದ ಅವರ ಪತ್ನಿ ಪದ್ಮ ಅವರು ಸಹಾ ಲೇಖಕಿಯಾಗಿದ್ದರು. ಶರ್ಮರಿಗೆ ಉತ್ತಮ ಸಂಗಾತಿ. ಪದ್ಮ-ಶರ್ಮ ಜತೆಗೂಡಿ ಪೆಂಗ್ವಿನ್ ಪ್ರಕಾಶನಕ್ಕಾಗಿ ಮಾಸ್ತಿಯವರ ‘ಚಿಕ್ಕವೀರರಾಜೇಂದ್ರ’ ಕಾದಂಬರಿಯನ್ನು, ಯಶವಂತ ಚಿತ್ತಾಲರ ಕತೆಗಳನ್ನು ಮತ್ತು ಕುವೆಂಪು ಅವರ ‘ಕಾನೂರು ಹೆಗ್ಗಡತಿ’ ಕೃತಿಗಳನ್ನು ಇಂಗ್ಲೀಷಿಗೆ ಭಾಷಾಂತರಿಸಿದರು. ಈ ಮೂಲಕ ಕನ್ನಡದ ಮಹತ್ವದ ಲೇಖಕರನ್ನು ಹೊರಜಗತ್ತಿಗೆ ಪರಿಚಯ ಮಾಡಿಕೊಟ್ಟರು.
ಈ ವೇಳೆ ಶರ್ಮ ಅವರು ಕಿರಂ ನಾಗರಾಜ್,ಲಂಕೇಶ್,ಅಡಿಗ, ಜಿಎಸ್ಎಸ್ ಡಾ.ಗೌಡ ಹೀಗೆ ಸಾಹಿತ್ಯದ ದಂಡಿನಲ್ಲಿ ನಡೆಯುತ್ತಿದ್ದ ಚರ್ಚೆಗಳಲ್ಲಿ ಭಾಗವಹಿಸಿ ಅವರು ಮಂಡಿಸುತ್ತಿದ್ದ ಸಾಹಿತ್ಯದ ವಿಚಾರದಾರೆಗಳ ಕುರಿತ ಪರಿಚಯವನ್ನು ಅತ್ಯಂತ ಮನೋಜ್ಞವಾಗಿ ವಿವರಿಸಲಾಗಿದೆ
ರಾಮಚಂದ್ರಶರ್ಮ ಅವರ ಪ್ರಮುಖ ಕವನ ಸಂಕಲನಗಳೆಂದರೆ ? ‘ಹೃದಯಗೀತ’, ‘ಏಳುಸುತ್ತಿನ ಕೋಟೆ’, ‘ಬುವಿ ನೀಡಿದ ಸ್ಫೂರ್ತಿ’, ‘ಹೇಸರಗತ್ತೆ’, ‘ಬ್ರಾಹ್ಮಣ ಹುಡುಗ’, ‘ಮಾತು-ಮಾಟ’, ‘ದೆಹಲಿಗೆ ಬಂದ ಹೊಸ ವರ್ಷ’, ‘ಸಪ್ತಪದಿ’. ಹೀಗೆ ಹಲವಾರು ಕವಿತೆಗಳನ್ನು ಅಲ್ಲಲ್ಲಿ ಪರಿಚಯಿಸುತ್ತಾ ಅದಕ್ಕೆ ವಿವರಣೆಯನ್ನು ನೀಡುತ್ತಾ ಹೋಗಿದ್ದಾರೆ.
‘
‘ನೆಲದಂತೆ ನೀನೂ ಫಲವತಿಯಾದೆಯೆಂದೇ
ನನ್ನ ಅಸ್ತಿತ್ವ, ನಿನ್ನಿವೋತ್ತಿನ ಹೆಕ್ಕಳಿಕೆ
ತಾಳಕ್ಕೆ ಎಲ್ಲೋ ಪ್ರಾಂಜಲ ಹರಿದು ನಂಬಿಕೆ
ಬೆಳದೆ, ಅವ್ವ, ಅಗೆದಾಗ ಸಿಕ್ಕಿದ್ದ ತಂದೆ’
‘ಹೃದಯಗೀತೆ ಕವನದಲ್ಲಿ ತಂದೆಯ ಬಗ್ಗೆ ಬರೆದುಕೊಂಡ ಅವ್ಯಕ್ತ ಭಾವಗಳು ಅವರ ಇಡೀ ಕವನಗಳಲ್ಲೂ ಗಾಢಗೊಳಿಸುವ ಆ ಭಾವಗಳು ಓದುಗರ ಗ್ರಹಿಕೆಗಳಿಗೆ ಜೀವತುಂಬುತ್ತಿದ್ದವು;
ಶರ್ಮ ಅವರ ಕುರಿತು ಎಷ್ಟೊಂದು ನಿಕರವಾಗಿ ಬಲ್ಲವರಾಗಿದ್ದರು ಎಂದರೆ ಅವರ ಪ್ರತಿ ಹಂತದ ನೋವು-ನಲಿವುಗಳನ್ನು ದಾಖಲಿಸಿದ್ದಾರೆ,ಅವರ ಖಾಸಗಿ ಬದುಕಿನ ಕೆಲ ಘಟನೆಗಳನ್ನು ಪರಿಚಯಿಸಿದ್ದಾರೆ. ಅವರ ಪುತ್ರ ಮೇಲಿನಿಂದ ಬಿದ್ದ ಸಂದರ್ಭವನ್ನು ಅಷ್ಟೆ ಮಾರ್ಮಿಕವಾಗಿ ವಿವಿರಸುತ್ತಾ ಹೋಗುತ್ತಾರೆ. ಇದೆಲ್ಲದಕ್ಕೂ ಮುಖ್ಯವಾಗಿ ಕುಟುಂಬದಾಚೆಯಲ್ಲಿ ಸಾಹಿತ್ಯ ಮತ್ತು ಸಹಿತ್ಯ ಬಳಗ ಅವರ
ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಮಟ್ಟದ ಅನೇಕ ವಿಚಾರ ಸಂಕೀರ್ಣಗಳಲ್ಲಿ ಭಾಗವಹಿಸಿರುವ ಶರ್ಮರು ಅತ್ಯುತ್ತಮ ವಾಗ್ಮಿಗಳಾಗಿದ್ದರು. ಅವರು ಕವಿತೆ ಓದುತಿದ್ದುದನ್ನು ಕೇಳುವುದೇ ಒಂದು ಅನುಭವ ಎಂಬತ್ತಿರುತ್ತಿತ್ತು. ಲವಲವಿಕೆಯಿಂದ ಸಾಹಿತ್ಯಚರ್ಚೆಗಳಲ್ಲಿ ಪಾಲ್ಗೊಳ್ಳುತ್ತಿದ್ದ ಶರ್ಮರು ಸಾಹಿತ್ಯ ಪರಿಸರ ಜಡವಾಗದಂತೆ, ಜೀವಂತವಾಗಿ ಚಲನಶೀಲವಾಗಿರಬೇಕೆಂಬ ತೀವ್ರ ಕಾಳಜಿಯುಳ್ಳವರಾಗಿದ್ದರು. ಗಾಢ ಕಾವ್ಯಶ್ರದ್ಧೆ ಹೊಂದಿದ್ದ ಶರ್ಮರು ಅನ್ಯದೇಶೀಯ ಅನುಭವಗಳನ್ನು ಕನ್ನಡದಲ್ಲಿ ಸಫಲ ಕಲೆಯಾಗಿಸಲು ಪ್ರಯತ್ನಿಸಿದ ವಿಶಿಷ್ಟ ಕವಿ ಎನ್ನುವುದನ್ನು ದಾಖಲಿಸಿದ್ದಾರೆ.
ಅವರ ಬಗ್ಗೆ ಬರೆಯುತ್ತಾ ಶೂದ್ರ ಶ್ರೀನಿವಾಸ್ ಅವರು; ಇಷ್ಟೆಲ್ಲ ಕ್ರಿಯಾಶೀಲರಾಗಿರುವ ರಾಮಚಂದ್ರ ಶರ್ಮರು ಸೃಜನಶೀಲತೆ ಎಂಬುದನ್ನು ತಮ್ಮ ಒಟ್ಟು ಬರವಣೆಗೆಯ ಉದ್ದಕ್ಕು ಮನದಲ್ಲಿ ಉದ್ದೀಪನಗೊಳಿಸಿಕೊಳ್ಳುತ್ತಲೇ ಸಾಗಿದವರು.ಅದರೂ ವಿದೇಶದದಿಂದ ಇಪ್ಪತ್ತನಾಲ್ಕು ವರ್ಷಗಳ ಭಿನ್ನ ಸ್ವರೂಪದ ಅನುಭವವನ್ನು ಪಡೆದು ವಾಪಾಸ್ಸು ಬಂದ ಮೇಲೆ ಅವರನ್ನು ನಾನಾ ವಿಧವಾದ ಪ್ರಶ್ನೆಗಳು ಕಾಡುವುದು. ಅಲ್ಲಿಯ ಸಂಸ್ಕೃತಿ,ಸಾಮಾಜಿಕ ಏರುಪೇರು ಮುಂತಾದವುಗಳನ್ನು ಇಲ್ಲಿ ಸಂಸ್ಕೃತಿಯ ಜೊತೆಗಿಟ್ಟು ಹೇಗೆ ಬರೆಯುವುದು ಎಂಬುದನ್ನು ಕೂಡ ಎದುರಿಸಿದ್ದಾರೆ.ಅತ್ಯುತ್ತಮ ಬರವಣೆಯಲ್ಲಿ ತೊಡಗಿದ್ದರೂ ಅದು ಅವರನ್ನು ಗಾಢವಾಗಿ ಕಾಡಿದೆ ಎನ್ನುವುದನ್ನು ಅತ್ಯಂತ ವಿನಮ್ರವಾಗಿ ಬರದಿದ್ದಾರೆ ಶರ್ಮ ಪ್ರತಿ ಹಂತದ ನಡೆಗೆಯನ್ನು ಸೂಕ್ಷ್ಮವಾಗಿ ಗಮನಿಸಿರುವ ಶೂದ್ರ ಶ್ರೀನಿವಾಸ್ ಅವರ ಎಲ್ಲ ಮಗ್ಗಲುಗಳನ್ನು ದಾಖಲಿಸುವ ಮೂಲಕ ಈ ಕೃತಿಗೆ ಉನ್ನತ ನ್ಯಾಯವನ್ನು ಒದಗಿಸಿದ್ದಾರೆ
ಅವರ ಬದುಕಿನ ಅಷ್ಟು ಚಿತ್ರಣವನ್ನು ಮತ್ತು ಸಾಹಿತ್ಯದ ಕುರಿತು ಚರ್ಚೆಗಳ ಮೂಲಕ ಪರಿಚಯಿಸಿರುವ ಶೂದ್ರ ಶ್ರೀನಿವಾಸ್ ಅವರು ಕೊನೆಯಲ್ಲಿ ಹೀಗೆ ಬರೆಯುತ್ತಾರೆ;ಅವರ ವ್ಯಕ್ತಿತ್ವದಲ್ಲಿಯೇ ಮೂಲಭೂತವಾಗಿ ಶ್ರದ್ಧಾವಂತ ವ್ಯಕ್ತಿತ್ವಕ್ಕೆ ಶಿಸ್ತು ಮತ್ತು ಸಂಯಮ ಬೇಕಾಗುತ್ತದೆಂದು ನಂಬಿದ್ದರು. ಇಂಥದ್ದನ್ನು ಒಟ್ಟು ಅವರು ಕಾವ್ಯಕ್ಕೂ ಹಾಗೂ ಇತರೆ ಬರವಣೆಗೆಗೂ ಸಂಬಂಧಿಸಿ ನೋಡಬಹುದು. ಅವರನ್ನು ಅನುವಾದಕ್ಕೆ ಸೀಮಿತಗೊಳಿಸಿ ಚರ್ಚಿಸಲು ಹೊರಟರು ಸಾಕಷ್ಟು ಗುಣಾತ್ಮಕ ಸಂಗತಿಗಳು ಅನುವಾದ ಸಾಹಿತ್ಯ ವ್ಯಾಪ್ತಿಯಲ್ಲಿ ಅಪೂರ್ವ ನೋಟಗಳನ್ನು ಗ್ರಹಿಸಲು ಸಾದ್ಯವಿದೆ ಎಂದು ಹೇಳುವ ಮೂಲಕ ಶರ್ಮ ಅವರು ಬದುಕಿನಲ್ಲಿ ಸಾಹಿತ್ಯವನ್ನು ಪ್ರೀತಿಸಿದ ಆರಾಧಿಸಿದ ಕುರಿತು ಪ್ರಸ್ತಾಪ ಮಾಡುತ್ತಲೇ ಕೃತಿಯನ್ನು ಅಂತ್ಯಗೊಳಿಸಿದ್ದಾರೆ.