ಎನ್.ಸಿ. ಶಿವಪ್ರಕಾಶ್,ಮಸ್ಕತ್,ಒಮಾನ್
ಕ್ಷಮಿಸು ಭುವನೇಶ್ವರಿ..
ಊಳಿಡುತಿಹಳು ಭೂರಮೆ
ಕಳಚಿ ಕೇಳು ನಿನ್ನ ಗರಿಮೆ
ಹೆತ್ತ ತಾಯ ಕರುಳ ಸಂಕಟ
ಅರಿಯದಾದೆ ನೀ ಮಾನವಮರ್ಕಟ
ಜಗದದಾಹ ಹಿಂಗಿಸಲು
ಭಗೀರಥಿಗೆ ಒಡಲಾದೆ
ಹಸಿವಭರಿಸೆ ನೀ ಹೊತ್ತೆ ಬವಣೆಗಳ ಬೀಡೆ
ಋತುಗಳ ರಂಗೋಲಿಗೆ ಜೀವರಂಗು ತುಂಬಿದೆ
ಮೇಲೊಂದು ಮಳೆಯಬಿಲ್ಲನಿಡೆ
ನಾಕವದು ಧರೆಯಲಿ ಅವತರಿಸಿದೆ
ಸಾಗರ ಬ್ರಹ್ಮಾಂಡದಚ್ಚರಿ
ಗೌರಿಶಂಕರ ಔನತ್ಯದ ಪರಧಿ
ಕೆಳಗೆ ಹಸಿರು, ಮೇಲೆ ನೀಲಿ
ಅನನ್ಯ ಸೊಬಗಿಗೆ ಕುಂದಣ ಹಕ್ಕಿಪಿಕ್ಕಿ ಚಿಲಿಪಿಲಿ
ಉಸಿರನಿಟ್ಟೆ, ಜೀವವೈವಿಧ್ಯ ಸೃಜಿಸಿದೆ
ಒಲವನಿಟ್ಟೆ, ಸರ್ವಸಾಂಗತ್ಯ ಬಯಸಿದೆ
ಸಂತಾನದ ಏಳಿಗೆಗೆ ಅಹರ್ನಿಶಿ ಚಿಂತಿತೆ
ಒಡಲ ಕನಕವದನೂ ಸುರಿದಳು ನಿನ್ನ ಹರುಷಕೆ
ಇರುವುದೆಲ್ಲವ ಬಿಟ್ಟು ಇಲ್ಲದರ ಎಡೆಗೆ ನೀ ತುಡಿದೆ ಮಾನವ
ಬಗೆಬಗೆಯಲಿ ಬಗೆಬಗೆದೆ
ತಾಯ ಒಡಲು, ಹರಿದಿರಲು ಅವಳ ಕಣ್ಣೀರ ಕಡಲು
ತಾಯ ಸಂತಾನಗಳಲೆ ನೀ ದುರುಳ, ವಿರಾತಿವಿರಳ
ಹತ್ತಿ ಕುಳಿತ ಕೊಂಬೆಯ ಕತ್ತರಿಸಿ ನೆಲ ಕಚ್ಚುವುದ ನೆಚ್ಚ ಮಹಾಮರುಳ
ಬೇಡುಲೂ ಆರೆ ತಾಯಿ ನಾನು ನಿನ್ನನು
ನಿನ್ನ ಅವನತಿಯಲಿ ಪಾಲಿದೆ ನನ್ನದೂ
ಕ್ಷಮಿಸುವುದು ನಿನ್ನ ಹುಟ್ಟುಗುಣವಾದಲಿ ಓ ಕ್ಷಮಯಾಧರಿತ್ರಿ
ಈ ಬಾರಿ ನೀ ಕ್ಷಮಿಸೆ ಕಾಲುಕಟ್ಟುವನು ಮಾನವತೆಯ, ಪ್ರಕೃತಿ ಸೇವೆಗೈಯಲು ಹಗಲುರಾತ್ರಿ