ತೋಳ ವನ್ಯಧಾಮದಲ್ಲಿ ಸಫಾರಿ ಚಿಂತನೆ: ಈಶ್ವರ ಖಂಡ್ರೆ

Share

ತೋಳ ವನ್ಯಧಾಮದಲ್ಲಿ ಸಫಾರಿ ಚಿಂತನೆ: ಈಶ್ವರ ಖಂಡ್ರೆ

ಬೆಂಗಳೂರು, ಜ.19: ಕರ್ನಾಟಕ ಅರಣ್ಯ ಇಲಾಖೆ ಕೈಗೊಂಡಿರುವ ಸುರಕ್ಷತಾ ಕ್ರಮಗಳ ಫಲವಾಗಿ, ಕೊಪ್ಪಳ ಜಿಲ್ಲೆ ಬಂಕಾಪೂರ ತೋಳಧಾಮದಲ್ಲಿ ಅಳಿವಿನಂಚಿನಲ್ಲಿರುವ ತೋಳಗಳು ಸ್ವಚ್ಛಂದವಾಗಿ ವಿಹರಿಸುತ್ತಿದ್ದು, ಇತ್ತೀಚೆಗೆ ಹೆಣ್ಣು ತೋಳವೊಂದು 8 ಮರಿಗಳಿಗೆ ಜನ್ಮ ನೀಡಿದೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ತಿಳಿಸಿದ್ದಾರೆ.

ಮಾದ್ಯಮ ಹೇಳಿಕೆಯಲ್ಲಿ ಅವರು, ಗಂಗಾವತಿ ಪ್ರಾದೇಶಿಕ ವಲಯದ ವ್ಯಾಪ್ತಿಯಲ್ಲಿ ಸುಮಾರು 332 ಹೆಕ್ಟರ್ ಪ್ರದೇಶದಲ್ಲಿರುವ ಬಂಕಾಪೂರ ತೋಳ ಧಾಮವು ಕುರುಚಲು ಅರಣ್ಯದೊಳಗೆ ಗುಡ್ಡಗಳು, ಸ್ವಾಭಾವಿಕ ಗುಹೆಗಳನ್ನೂ ಹೊಂದಿದ್ದು, ತೋಳ, ಚಿರತೆ, ನವಿಲು, ಕತ್ತೆಕಿರುಬ, ನರಿ, ಮೊಲ, ಮುಳ್ಳುಹಂದಿಯೇ ಮೊದಲಾದ ಹಲವು ವನ್ಯಜೀವಿಗಳ ತಾಣವಾಗಿದೆ.


ಇಂಡಿಯನ್ ಗ್ರೇ ಉಲ್ಫ್ ಎಂಬ ಪ್ರಭೇದದ ತೋಳಗಳು ಈ ಸಂರಕ್ಷಿತ ಪ್ರದೇಶದಲ್ಲಿದ್ದು, ಇತ್ತೀಚೆಗೆ 8 ಮರಿಗಳಿಗೆ ಒಂದು ತೋಳ ಜನ್ಮ ನೀಡಿದೆ. ಇವುಗಳ ಪೈಕಿ ಸಾಮಾನ್ಯವಾಗಿ ಪ್ರತಿಶತ 50ರಷ್ಟು ಬದುಕುಳಿಯುವ ಸಾಧ್ಯತೆ ಇರುತ್ತದೆ, ಆದರೆ ಎಲ್ಲ ತೋಳದ ಮರಿಗಳನ್ನೂ ಉಳಿಸಲು ಅರಣ್ಯಾಧಿಕಾರಿಗಳು ಕ್ರಮವಹಿಸಿದ್ದಾರೆ ಎಂದು ತಿಳಿಸಿದ್ದಾರೆ.
ಈ ಪ್ರದೇಶವನ್ನು ತೋಳವನ್ಯಧಾಮ ಎಂದು 15ನೇ ವನ್ಯಜೀವಿ ಮಂಡಳಿಯ ಸಭೆಯಲ್ಲಿ ಘೋಷಿಸಲಾಗಿದ್ದು, ಜ.18ರಂದು ತಮ್ಮ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಉಪಸಮಿತಿ ಸಭೆಯಲ್ಲಿ ಪರಿಸರ ಸೂಕ್ಷ್ಮ ಪ್ರದೇಶ ಘೋಷಣೆಗೂ ನಿರ್ಣಯಿಸಲಾಗಿದೆ ಎಂದೂ ಈಶ್ವರ ಖಂಡ್ರೆ ತಿಳಿಸಿದ್ದಾರೆ.


ಬಂಕಾಪೂರ ತೋಳ ವನ್ಯಧಾಮದಲ್ಲಿ ಈ 8 ಮರಿಗಳೂ ಸೇರಿ ಸುಮಾರು 35-40 ತೋಳಗಳಿವೆ. ಇವುಗಳ ಸುರಕ್ಷತೆಗೆ ಕ್ರಮ ವಹಿಸಲಾಗಿದೆ. ನವಜಾತ ತೋಳದ ಮರಿಗಳಿಗೆ ಜನರಿಂದ ತೊಂದರೆ ಆಗದಂತೆ ಎಚ್ಚರಿಕೆ ವಹಿಸಲು ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ.
ಪ್ರವಾಸಿ ತಾಣವಾಗಿ ಅಭಿವೃದ್ಧಿ:
ಗಂಗಾವತಿ ನಗರದಿಂದ 15 ಕಿ.ಮೀ ದೂರದಲ್ಲಿರುವ ಈ ವನ್ಯಜೀವಿ ಧಾಮದಲ್ಲಿ ಸಫಾರಿ ವ್ಯವಸ್ಥೆ ಕಲ್ಪಿಸಿ ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸುವ ಉದ್ದೇಶವಿದೆ. ಈ ನಿಟ್ಟಿನಲ್ಲಿ ಅಧ್ಯಯನ ನಡೆಸಿ ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದೂ ಈಶ್ವರ ಖಂಡ್ರೆ ತಿಳಿಸಿದ್ದಾರೆ.

Girl in a jacket
error: Content is protected !!