ಬೆಂಗಳೂರು ,ಅ,೦೯: ದೇಶದಲ್ಲಿ ಪೆಟ್ರೋಲ್-ಡೀಸೆಲ್ ಬೆಲೆ ಸತತ ೧೧ನೇ ದಿನ ಏರಿಕೆ ಕಾಣುತ್ತಿದ್ದು, ಬೆಲೆ ಏರಿಕೆ ನಾಗಾಲೋಟ ಸದ್ಯಕ್ಕೆ ನಿಲ್ಲುವ ಯಾವುದೇ ಲಕ್ಷಣ ಕಾಣಿಸುತ್ತಿಲ್ಲ. ತೈಲ ಬೆಲೆ ಇಂದು ಮತ್ತೆ ಹೊಸ ಸಾರ್ವಕಾಲಿಕ ದಾಖಲೆ ಬರೆದಿದೆ. ಇಂದು ಬೆಂಗಳೂರಿನಲ್ಲಿ ಪೆಟ್ರೋಲ್ ಬೆಲೆ ೩೧ ಪೈಸೆ ಏರಿಸಿ ೧ ಲೀಟರ್ ಪೆಟ್ರೋಲ್ ಅನ್ನು ೧೦೭.೧೪ ರೂ.ಗೆ ಮಾರಾಟ ಮಾಡಲಾಗಿದ್ದರೆ, ಬಳ್ಳಾರಿ ೧ ಲೀಟರ್ ಪೆಟ್ರೋಲ್‌ಗೆ ೨೨ ಪೈಸೆ ಏರಿಸಲಾಗಿದ್ದು, ಅತ್ಯಧಿಕ ೧೦೯.೧೯ ರೂ.ಗೆ ಮಾರಾಟ ಮಾಡಲಾಗುತ್ತಿದೆ. ಅಲ್ಲದೆ, ಪೆಟ್ರೋಲ್ ಬೆಲೆ ಶೀಘ್ರದಲ್ಲೆ ೧೧೦ ರೂ ದಾಟುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿದೆ. ಡೀಸೆಲ್ ಬೆಲೆಯನ್ನೂ ಏರಿಸಲಾಗಿದ್ದು, ದಾವಣಗೆರೆಯಲ್ಲಿ ಅತ್ಯಧಿಕ ಲೀಟರ್‌ಗೆ ೯೯ ರೂ.ಗೆ ಮಾರಾಟ ಮಾಡಲಾಗುತ್ತಿದೆ. ಪ್ರಸ್ತುತ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಸಹ ಇಂದು ಪೆಟ್ರೋಲ್-ಡೀಸೆಲ್ ಬೆಲೆಯಲ್ಲಿ ಗಣನೀಯ ಏರಿಕೆ ಕಂಡು ಬಂದಿದ್ದು, ಆ ಕುರಿತ ವಿವರ ಇಲ್ಲಿದೆ.
ಇದಲ್ಲದೆ, ಇಂದು ಚೆನ್ನೈನಲ್ಲಿ ಪೆಟ್ರೋಲ್ ಬೆಲೆ ೧೦೧.೦೧ ರೂ ಇದ್ದರೆ ಡೀಸೆಲ್ ಬೆಲೆ ೯೬.೬೦ ರೂ.ಗೆ ಮಾರಾಟ ಮಾಡಲಾಗುತ್ತಿದೆ. ಅದರಂತೆ ಹೈದ್ರಾಬಾದ್ನಲ್ಲಿ ಪೆಟ್ರೋಲ್ ಬೆಲೆ ೧೦೯.೭೬ ರೂ ಆಗಿದ್ದರೆ, ಡೀಸೆಲ್ ಬೆಲೆ ೧೦೧.೨೪ ರೂ.ಗೆ ಮಾರಾಟ ಮಾಡಲಾಗುತ್ತಿದೆ. ಇನ್ನೂ ದೆಹಲಿಯಲ್ಲಿ ಪೆಟ್ರೋಲ್ ಬೆಲೆ ೧೦೩.೫೪ ರೂ ಮತ್ತು ಡೀಸೆಲ್ ೯೨.೧೨ ರೂ.ಗೆ ಮಾರಾಟ ಮಾಡಲಾಗುತ್ತಿದೆ. ಮಹಾರಾಷ್ಟ್ರದಲ್ಲಿ ಪೆಟ್ರೋಲ್ ೧೦೯.೫೪ ರೂ.ಗೆ ಮಾರಾಟ ಮಾಡಲಾಗುತ್ತಿದೆ. ಡೀಸೆಲ್ ಅನ್ನು ೯೯.೯೨ ರೂ.ಗೆ ಮಾರಾಟ ಮಾಡಲಾಗುತ್ತಿದೆ.
ಭಾರತದಲ್ಲಿ ಪೆಟ್ರೋಲ್ ದರಗಳನ್ನು ಪ್ರತಿದಿನ ಪರಿಷ್ಕರಿಸಲಾಗುತ್ತದೆ. ಪ್ರತಿದಿನ ಬೆಳಿಗ್ಗೆ ೦೬:೦೦ ಗಂಟೆಗೆ ಬೆಲೆಗಳನ್ನು ಪರಿಷ್ಕರಿಸಲಾಗುತ್ತದೆ. ಜಾಗತಿಕ ತೈಲ ಬೆಲೆಯಲ್ಲಿ ಒಂದು ನಿಮಿಷದ ವ್ಯತ್ಯಾಸವನ್ನು ಇಂಧನ ಬಳಕೆದಾರರು ಮತ್ತು ವಿತರಕರಿಗೆ ರವಾನಿಸಬಹುದು ಎಂದು ಇದು ಖಚಿತಪಡಿಸುತ್ತದೆ. ಇಂಧನದ ಬೆಲೆಯು ಅಬಕಾರಿ ಸುಂಕ, ಮೌಲ್ಯವರ್ಧಿತ ತೆರಿಗೆ (ವ್ಯಾಟ್) ಮತ್ತು ಡೀಲರ್ ಕಮಿಷನ್ ಅನ್ನು ಒಳಗೊಂಡಿದೆ. ವ್ಯಾಟ್ ರಾಜ್ಯದಿಂದ ರಾಜ್ಯಕ್ಕೆ ಬದಲಾಗುತ್ತದೆ.
ಅಬಕಾರಿ ಸುಂಕ, ಡೀಲರ್ ಕಮಿಷನ್ ಮತ್ತು ವ್ಯಾಟ್ ಸೇರಿಸಿದ ನಂತರ, ಪೆಟ್ರೋಲ್‌ನ ಚಿಲ್ಲರೆ ಮಾರಾಟ ಬೆಲೆ ದ್ವಿಗುಣಗೊಳ್ಳುತ್ತದೆ. ವಿವಿಧ ಅಂಶಗಳು ಇಂಧನದ ಬೆಲೆಯ ಮೇಲೆ ಪ್ರಭಾವ ಬೀರುತ್ತವೆ. ಇವುಗಳಲ್ಲಿ ರೂಪಾಯಿಗಳಿಂದ ಯುಎಸ್ ಡಾಲರ್ ವಿನಿಮಯ ದರ, ಕಚ್ಚಾ ತೈಲದ ಬೆಲೆ, ಜಾಗತಿಕ ಸೂಚನೆಗಳು, ಇಂಧನದ ಬೇಡಿಕೆ ಇತ್ಯಾದಿಗಳು ಸೇರಿವೆ. ಅಂತರಾಷ್ಟ್ರೀಯ ಕಚ್ಚಾ ತೈಲ ಬೆಲೆಗಳು ಹೆಚ್ಚಾದಾಗ ಭಾರತದಲ್ಲೂ ಸಾಮಾನ್ಯವಾಗಿ ಬೆಲೆ ಏರಿಕೆಯಾಗುವುದು ವಾಡಿಕೆಯಾಗಿದೆ.