ರಾಜ್ಯಕ್ಕೆ ಸಂಪೂರ್ಣ ಸಹಕಾರ: ಕೇಂದ್ರ ಸಚಿವ ಪೀಯೂಷ್ ಗೋಯಲ್ ಭರವಸೆ
by-ಕೆಂಧೂಳಿ
15 ಸಾಧಕ ಉದ್ಯಮಗಳಿಗೆ ಇನ್ವೆಸ್ಟ್ ಕರ್ನಾಟಕ ಪುರಸ್ಕಾರ ಪ್ರದಾನ
ಬೆಂಗಳೂರು,ಫೆ,12-ರಾಜ್ಯಗಳ ಪ್ರಗತಿಯೇ ದೇಶದ ಪ್ರಗತಿಯಾಗಿದೆ. ಕೇಂದ್ರ ಮತ್ತು ರಾಜ್ಯ ಸರಕಾರಗಳು ಸಹಭಾಗಿತ್ವ ಹಾಗೂ ಸಹಕಾರ ತತ್ತ್ವದ ಮೇಲೆ ಕೆಲಸ ಮಾಡಿದರೆ ಭಾರತವು 2047ರ ಹೊತ್ತಿಗೆ 30 ಟ್ರಿಲಿಯನ್ ಡಾಲರ್ ಮೌಲ್ಯದ ಆರ್ಥಿಕತೆಯಾಗಿ ಬೆಳೆಯಲಿದೆ. ಈ ವಿಚಾರದಲ್ಲಿ ಕೇಂದ್ರ ಸರಕಾರವು ಕರ್ನಾಟಕಕ್ಕೆ ಸಂಪೂರ್ಣ ಸಹಕಾರ ನೀಡಲಿದೆ ಎಂದು ಕೇಂದ್ರ ವಾಣಿಜ್ಯ ಸಚಿವ ಪೀಯೂಷ್ ಗೋಯಲ್ ಅವರು ಬುಧವಾರ ಆಶ್ವಾಸನೆ ಕೊಟ್ಟಿದ್ದಾರೆ.
ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ರಾಜ್ಯದ ಆರ್ಥಿಕತೆ ಮತ್ತು ಕೈಗಾರಿಕಾ ರಂಗದ ಬೆಳವಣಿಗೆಗೆ ಮಹತ್ತರ ಕೊಡುಗೆ ನೀಡುತ್ತಿರುವ 15 ಉದ್ಯಮಗಳಿಗೆ ‘ಇನ್ವೆಸ್ಟ್ ಕರ್ನಾಟಕ’ ಪ್ರಶಸ್ತಿ ಪುರಸ್ಕಾರಗಳನ್ನು ಅವರು ಪ್ರದಾನ ಮಾಡಿದರು. ಜತೆಗೆ ರಾಜ್ಯದ ಕೈಗಾರಿಕಾ ಯಶೋಗಾಥೆಗಳ `ಕರ್ನಾಟಕ ಸಕ್ಸಸ್ ಸ್ಟೋರೀಸ್’ ಸಂಪುಟವನ್ನು ಅವರು ಬಿಡುಗಡೆ ಮಾಡಿದರು.
ಕಳೆದ ವರ್ಷ ಮೂಲಸೌಕರ್ಯ ಅಭಿವೃದ್ಧಿಗೆ 11 ಲಕ್ಷ ಕೋಟಿ ರೂ.ಗಳನ್ನು ವಿನಿಯೋಗಿಸಲಾಗಿದೆ. ತುಮಕೂರಿನಲ್ಲಿ 8,000 ಎಕರೆ ವಿಸ್ತೀರ್ಣದಲ್ಲಿ ಪ್ಲೇ ಅಂಡ್ ಪ್ಲಗ್ ಮಾದರಿಯಲ್ಲಿ ಇಂಡಸ್ಟ್ರಿಯಲ್ ಸ್ಮಾರ್ಟ್ ಸಿಟಿಗೆ ಚಾಲನೆ ನೀಡಲಾಗಿದೆ. 1,736 ಎಕರೆಯಲ್ಲಿ ಇದರ ಮೊದಲ ಹಂತದ ಅಭಿವೃದ್ಧಿ ಪ್ರಗತಿಯಲ್ಲಿದ್ದು, 2026ರ ಕೊನೆಯ ಹೊತ್ತಿಗೆ ಇದು ಮುಗಿಯಲಿದೆ ಎಂದು ಅವರು ಭರವಸೆ ನೀಡಿದರು.
ಇಡೀ ಜಗತ್ತಿನಲ್ಲಿ ಭಾರತವು ಬಂಡವಾಳ ಹೂಡಿಕೆಗೆ ಪ್ರಶಸ್ತ ತಾಣವಾಗಿದೆ. ನಮ್ಮಲ್ಲಿರುವ ಪ್ರಜಾಸತ್ತೆ, ಬೇಡಿಕೆ, ಜನಸಂಖ್ಯೆ, ಡಿಜಿಟಲೀಕರಣ ಮತ್ತು ವೈವಿಧ್ಯಗಳೇ ಭಾರತದ ಐದು ಶಕ್ತಿಗಳಾಗಿವೆ. ಸದ್ಯದಲ್ಲೇ ದೇಶದಲ್ಲಿ ಇನ್ನೂ 75 ನೂತನ ವಿಮಾನ ನಿಲ್ದಾಣಗಳು, 120 ನಗರಗಳಿಗೆ ಉಡಾನ್-2 ಅಡಿಯಲ್ಲಿ ವಿಮಾನ ಸಂಪರ್ಕ, 114 ಜಲಮಾರ್ಗಗಳು, ಈಗಿರುವ ಬಂದರುಗಳಿಗಿಂತ ದುಪ್ಪಟ್ಟು ಬಂದರುಗಳು, 50 ಪ್ರವಾಸಿ ತಾಣಗಳ ಅಭಿವೃದ್ಧಿ ಎಲ್ಲವೂ ಅನುಷ್ಠಾನಕ್ಕೆ ಬರಲಿವೆ. ಇದರ ಲಾಭ ಕರ್ನಾಟಕಕ್ಕೂ ಸಿಗಲಿದೆ ಎಂದು ಅವರು ನುಡಿದರು.
ಭಾರತದ ರಫ್ತು ವಹಿವಾಟು ಈಗ 800 ಬಿಲಿಯನ್ ಡಾಲರ್ ಮುಟ್ಟಿದ್ದು, ಇದರಲ್ಲಿ ಕರ್ನಾಟಕದ ಸಿಂಹಪಾಲಿದೆ.
ಕೇಂದ್ರ ಸರಕಾರವು ನಾವೀನ್ಯತೆಗೆ 20 ಸಾವಿರ ಕೋಟಿ ರೂ, ಸೆಮಿಕಾನ್ ಮಿಷನ್ ಗೆ 74 ಸಾವಿರ ಕೋಟಿ ರೂ ಮತ್ತು ಕೈಗಾರಿಕೆಗಳಿಗೆ ಪಿಎಲ್ಐ ಆಧರಿತ ಪ್ರೋತ್ಸಾಹಕ್ಕೆ 2 ಲಕ್ಷ ಕೋಟಿ ರೂ. ಮೀಸಲಿಟ್ಟಿದೆ. ಕರ್ನಾಟಕದಲ್ಲಿ ಮುಂದಿನ ದಿನಗಳಲ್ಲಿ ಡೀಪ್-ಟೆಕ್, ಫಿನ್-ಟೆಕ್, ಫ್ಯೂಚರ್ ಇಂಡಸ್ಟ್ರಿಗಳಿಗೆ ಸಮೃದ್ಧ ಅವಕಾಶಗಳಿದ್ದು, ದೇಶವನ್ನು ಮುನ್ನಡೆಸಲಿದೆ ಎಂದು ಗೋಯಲ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಸಚಿವ ಎಂ ಬಿ ಪಾಟೀಲ ಮಾತನಾಡಿ, ರಾಜ್ಯದ ಸಮಗ್ರ ಕೈಗಾರಿಕಾ ಅಭಿವೃದ್ಧಿಗೆ ಬೇಕಾದ ಉದ್ಯಮಸ್ನೇಹಿ ನೀತಿಗಳು ಇತರರಿಗೆ ಮಾದರಿಯಾಗಿವೆ. ಸುಸ್ಥಿರ ಬೆಳವಣಿಗೆಯತ್ತ ದಾಪುಗಾಲು ಇಡಲಾಗುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಸಚಿವರಾದ ಕೆ ಜೆ ಜಾರ್ಜ್, ಡಾ.ಶರಣಪ್ರಕಾಶ್ ಪಾಟೀಲ್, ಪ್ರಿಯಾಂಕ್ ಖರ್ಗೆ, ದಿನೇಶ್ ಗುಂಡೂರಾವ್, ಎನ್ ಎಸ್ ಬೋಸರಾಜು, ಕಿಯೋನಿಕ್ಸ್ ಅಧ್ಯಕ್ಷ ಶರತ್ ಬಚ್ಚೇಗೌಡ, ಉದ್ಯಮಿ ನಿಖಿಲ್ ಕಾಮತ್ ಉಪಸ್ಥಿತರಿದ್ದರು.
ವಿಕ್ರಮ್ ಕಿರ್ಲೋಸ್ಕರ್ ಗೆ `ಇಂಡಸ್ಟ್ರಿಯಲ್ ಲೆಗಸಿ’ ಗರಿ
ಸಮಾರಂಭದಲ್ಲಿ ಹಿರಿಯ ಸಾಧಕ ಉದ್ಯಮಿ, ದಿವಂಗತ `ವಿಕ್ರಮ್ ಕಿರ್ಲೋಸ್ಕರ್ ಅವರಿಗೆ `ಇಂಡಸ್ಟ್ರಿಯಲ್ ಲೆಗಸಿ’ ಪುರಸ್ಕಾರವನ್ನು ನೀಡಿ, ಗೌರವಿಸಲಾಯಿತು. ಅವರ ಪರವಾಗಿ ಗೀತಾಂಜಲಿ ಕಿರ್ಲೋಸ್ಕರ್ ಪ್ರಶಸ್ತಿ ಸ್ವೀಕರಿಸಿದರು. ಉಳಿದಂತೆ ದಾಲ್ ಸ್ಟೀಲ್ ಗ್ರೂಪ್ ಗೆ `ದಶಮಾನದ ಹೂಡಿಕೆದಾರ’, ಏಕಸ್ ಕಂಪನಿಗೆ `ಕಾರ್ಯಪರಿಸರ ನಿರ್ಮಾತೃ’, ಸನ್ ರೈಸ್ ವಲಯದಲ್ಲಿ ಸಾರ್ವಜನಿಕ ವಲಯದ ಎಚ್ಎಎಲ್, ಖಾಸಗಿ ವಲಯದ ಆರ್.ಟಿ.ಎಕ್ಸ್ (ವೈಮಾಂತರಿಕ್ಷ & ರಕ್ಷಣಾ ವಲಯ), ಟೊಯೋಟಾ-ಕಿರ್ಲೋಸ್ಕರ್ (ವಾಹನ/ಇವಿ), ಬಯೋಕಾನ್ (ಬಿಟಿ/ಜೀವವಿಜ್ಞಾನ), ಬೋಯಿಂಗ್ (ಇಂಟರ್ನ್ಯಾಷನಲ್ ಪ್ರೊಕ್ಯೂರ್ಮೆಂಟ್ ಚಾಂಪಿಯನ್), ಟೆಕ್ಸಾಸ್ ಇನ್ಸ್ಟ್ರುಮೆಂಟ್ಸ್ (ಆರ್ & ಡಿ), ಸ್ಯಾಮ್ಸಂಗ್ (ಇನ್ನೋವೇಶನ್ ಎಕ್ಸಲೆನ್ಸ್), ಫಾಕ್ಸಕಾನ್ (ಇನ್ವೆಸ್ಟೆಂಟ್ ಟೈಟನ್), ಟಾಟಾ ಎಲೆಕ್ಟ್ರಾನಿಕ್ಸ್ (ಉತ್ಪಾದನೆ), ಇನ್ಫೋಸಿಸ್ (ಉದ್ಯೋಗಸೃಷ್ಟಿ), ಶಾಹಿ (ಉತ್ಕೃಷ್ಟ ನಾಯಕತ್ವ) ಮತ್ತು ರೆನ್ಯೂ ಪವರ್ (ಮರುಬಳಕೆ ಇಂಧನ) ಕಂಪನಿಗಳಿಗೆ ವಿವಿಧ ವಿಭಾಗಗಳಲ್ಲಿ ‘ಇನ್ವೆಸ್ಟ್ ಕರ್ನಾಟಕ’ಪುರಸ್ಕಾರಗಳನ್ನು ನೀಡಲಾಯಿತು.