ನಿರುದ್ಯೋಗ ಸಮಸ್ಯೆಯ ಮೂಲ ಹುಡುಕಾಟ…

Share

 

ಚಿದಂಬರ ಜೋಶಿ,ಚಿಕಾಗೂ.

ಚಿದಂಬರ ಜೋಶಿ ಅವರು ಮೂಲತಃ ರಾಯಚೂರು ಜಿಲ್ಲೆಯ, ಗಂಗಾವತಿಯವರು. ಪ್ರಸ್ತುತ ಅನಿವಾಸಿ ಭಾರತೀಯ. ಕಳೆದ ೩ ದಶಕಗಳಿಂದ ಉತ್ತರ ಅಮೆರಿಕಾದ ಚಿಕಾಗೊದಲ್ಲಿ ನೆಲಿಸಿದ್ದಾರೆ. ಅವರ ಕನ್ನಡ ಪ್ರೇಮ ಇವತ್ತಿಗೂ ಮಾಸಿಲ್ಲ. ಅವರ ವಿಶಿಷ್ಟ ಚಿಂತನೆ ಹಾಗೂ ಬರವಣಿಗೆಯ ಶೈಲಿ, ಓದುಗರ, ಕೇಳುಗರ ವಿಚಾರಶಕ್ತಿಯನ್ನು ಪ್ರಚೋದಿಸುತ್ತವೆ, ಸವಾಲು ಒಡ್ಡುತ್ತವೆ.  ಅವರು ನಿರುದ್ಯೋಗ ಸಮಸ್ಯೆ ಕುರಿತು ಬರೆದಿದ್ದಾರೆ.

ನಿರುದ್ಯೋಗ ಸಮಸ್ಯೆಯ ಮೂಲ ಹುಡುಕಾಟ…

ನಿರುದ್ಯೋಗ ಸಮಸ್ಯೆ ಕುರಿತು ಕಳೆದ ಎರಡು ಕಂತುಗಳ ಹಲವಾರು ಮಾಹಿತಿಗಳನ್ನು ತಿಳಿಸಲಾಗಿತ್ತು ಈಗ ೩ ನೇ ಕಂತಿನಲ್ಲಿ ಉಳಿದ ವಿಷಯಗಳನ್ನು..

ಮುಂದುವರೆಸೋಣ.

ಸದ್ಯದ ಪರಿಸ್ಥಿತಿಯಲ್ಲಿ ನಿರುದ್ಯೋಗಿ ಅಂದರೆ, ಹೆಚ್ಚಾಗಿ ಯಾವುದೇ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿಲ್ಲ ಎಂದೇ ಅರ್ಥೈಸುತ್ತೇವೆ.. ಹೌದಾ? ಹೌದು ಅಂತಾದ್ರೆ, ಯಾವ ಸಂಸ್ಥೆಗಳು? ಖಾಸಗಿ ಅಥವಾ ಸರ್ಕಾರಿ ಸಂಸ್ಥೆ ಅಂದರೆ ಒಪ್ಪಿಕೊಳ್ತೀರಾ? ಒಪ್ಪಿಕೊಳ್ಳದೆ ಬೇರೆ ಮಾರ್ಗವಿಲ್ಲ.
ಹಾಗೆಯೇ ನಿರುದ್ಯೋಗಿಗಳು ಅಂದರೆ ಕೇವಲ ಪದವೀಧರರು ಮಾತ್ರ ಇದರಲ್ಲಿ ಸೇರಿದ್ದಾರೆ ಬೇರೆಯವರು ಇಲ್ಲ ಎಂದು ಹೇಳಲಿಕ್ಕಾಗದು. ಒಪ್ಪುತ್ತೀರಾ? ಅಂದರೆ, ಶಾಲಾ ಕಾಲೇಜುಗಳ ಮೆಟ್ಟಲು ಹತ್ತದೇ ಇರುವವರೂ ಮತ್ತು ಕೆಲವೇ ಮೆಟ್ಟಲುಗಳನ್ನು ಹತ್ತಿದವರೂ ಇದರಲ್ಲಿ ಸೇರಿದ್ದಾರೆ ಎಂದರ್ಥ. ಸರಿ ತಾನೇ?

ಹಾಗಾದಲ್ಲಿ ಈ ಸಮಸ್ಯೆಗೆ ಪರಿಹಾರವಾದರೂ ಏನು? ಇದು ವೈಯುಕ್ತಿಕ ಸಮಸ್ಯೆಯಾ ಇಲ್ಲಾ ಸಾಮಾಜಿಕವೇ? ಪರಿಹಾರ ಒಂದೇ ಇದೆಯೋ? ಇಲ್ಲ ಬಗೆ ಬಗೆಯಾಗಿವೆಯೋ?

ಈಗ ಸಮಸ್ಯೆಗೆ ಪರಿಹಾರ ಹೇಳ್ತೀರೋ ಇಲ್ಲ ಹೀಗೆ ಉದ್ದಕ್ಕೆ ಎಳೀತಾ ಹೋಗ್ತೀರೋ ಅಂತೀರಾ? ಹಾಗಾದ್ರೆ, ಹೇಳಿ. ಸಮಸ್ಯೆಯ ಮೂಲ ಈಗಾಗಲೇ ಅರ್ಥ ಆಗಿದ್ಯಾ? ಇಲ್ಲ ಅಂದ್ರೆ ನನ್ನೊಟ್ಟಿಗೆ ಈ ಮೂಲದ ಹುಡುಕಾಟದ ಪಯಣ ಮುಂದುವರೆಸಿ. ಒಟ್ಟಿಗೆ ಮೂಲ ಹುಡುಕೋಣ. ಉತ್ತರ ತಾನಾಗೇ ಸಿಗತ್ತೆ. ಖಂಡಿತ. ಹೌದ್ರೀ ಖಂಡಿತ. ಅರ್ಧಕ್ಕೆ ಈ ಪಯಣ ನಿಲ್ಲಿಸಬೇಡಿ, ಸರಿನಾ?

ನಾನು ಮೊದಲೇ ಹೇಳಿದಂತ, ಮೂಲ ಹುಡುಕಬೇಕಂದ್ರೆ, ಮೂಲಕ್ಕೆ ಹೋಗೋಣ. ವೈಯುಕ್ತಿಕ ಮೂಲ ಹಾಗೂ ಸಾಮಾಜದ ಮೂಲ.

 

ಒಬ್ಬ ವ್ಯಕ್ತಿಯ ಮೂಲ ಹುಟ್ಟಿನಿಂದ ಶುರು. ಹುಟ್ಟಿನ ಜೊತೆಗೆ ಸಂಬಂಧಿಸಿರುವುದು ಹುಟ್ತರುವ ಸ್ಥಳ, ಕುಟುಂಬ ಅಂದರೆ ತಂದೆ ತಾಯಿ, ಕುಟುಂಬದ ಇತರೆ ಸದಸ್ಯರು, ಪರಿಸರ, ಕಾಲಮಾನ,ಅನುಕೂಲಗಳು, ಅನಾನುಕೂಲಗಳು ಇತ್ಯಾದಿ. ಒಪ್ಪುತ್ತೀರಾ? ಇದೆಲ್ಲ ಯಾಕೆ ತಿಳ್ಕೊಬೇಕು. ಇದ್ರಲ್ಲೇನಿದೆ ಅಂಥಾದ್ದು? ತಿಳ್ಕೊಂಡ್ರೆ ನಿರುದ್ಯೋಗ ಸಮಸ್ಯೆ ಪರಿಹಾರವಾಗಿಬಿಡುತ್ತಾ? ಅಂತೆಲ್ಲಾ ಪ್ರಶ್ನೆಗಳು ತಲೆಯಲ್ಲಿ ಬರ್ತಾ ಇವೆಯಾ? ಬರಲಿ ಬರಲಿ. ಬರಲೇ ಬೇಕು. ಬಂದರೇನೇ ಒಳ್ಳೆಯದು. ಅದೇನು ಒಳ್ಳೆಯದೋ, ಅದೇನು ಕಥೆಯೋ ಅಂತೀರಾ? ಸಧ್ಯಕ್ಕೆ ಅಂದುಕೊಳ್ಳಿ, ಪರವಾ ಇಲ್ಲ. ನನ್ನ ನೀವು ಬಯ್ದುಕೊಂಡರೂ ಪರವಾಗಿಲ್ಲ. ಓದೋದು ಮಾತ್ರ ನಿಲ್ಲಿಸಬೇಡಿ. ಬಯ್ದುಕೊಳ್ತಾ ಆದರೂ ಸರಿ, ಓದಿ.

ವ್ಯಕ್ತಿ ಬೆಳೆದಂತೆ, ವ್ಯಕ್ತಿತ್ವ ವಿಕಸನ ಸಹಜ ಕ್ರಿಯೆ. ಈ ವ್ಯಕ್ತಿತ್ವ ಬೆಳವಣಿಗೆ ಯಾವ ದಿಕ್ಕಿನಲ್ಲಾದ್ರೂ ತಿರುಗಬಹುದು. ಅದಕ್ಕೆ ನಮ್ಮ ಸನಾತನ ಜ್ನ್ಯಾನ ಏನು ಹೇಳುತ್ತದೆ ಎಂದು ಈಗ ನೋಡೋಣ. ದಯವಿಟ್ಟು ಸನಾತನ ಎಂದೊಡನೆ, ಸಂಕುಚಿತ ಯೋಚನೆಯಿಂದ ಜಾತಿ ಅನ್ನುವ ಅರ್ಥದಲ್ಲಿ ಯಾರಾದರೂ ಇದನ್ನು ನೋಡಿದಲ್ಲಿ, ಅರ್ಥೈಸಿದಲ್ಲಿ, ಕಣ್ಣಿದ್ದೂ ಕುರುಡರು ಅನ್ನುವ ಜಾತಿಯವರು ಅಂದುಕೊಳ್ಳಬೇಕಾಗುತ್ತದೆ ಅಷ್ಟೇ. ಅದು ದುರಾದೃಷ್ಟಕರ. ಸನಾತನ ಎಂದರೆ ಇದು ಪುರಾತನ, ತಲೆತಲಾಂತರದಿಂದ ಬಂದಿದ್ದು, ಬರುತ್ತಾ ಇರೋದು ಹಾಗೂ ಪ್ರಮಾಣಿತ ಎಂದು ತಿಳಿದುಕೊಳ್ಳುವುದು ಉಚಿತ ಹಾಗೂ ಹೆಚ್ಚಾಗಿ ಲಾಭಕರ ಮತ್ತು ಉಪಯುಕ್ತ. ಸನಾತನ ಯೋಚನೆ, ಕಾಲಮಾನ, ಪರಿಸ್ಥಿತಿ, ಪರಿಸರ ಇತ್ಯಾದಿಗಳಿಗೆ ತಕ್ಕಂತೆ, ಬದಲಾವಣೆ ಅವಶ್ಯ ಎಂದೇ ಹೇಳಿದೆ. ನಮ್ಮಲ್ಲಿ ಸನಾತನವನ್ನು, ಸಂಪೂರ್ಣವಾಗಿ ಅರ್ಥ ಮಾಡಿಕೊಳ್ಳದೆ, ತಮಗೆ ಹೇಗೆ ಬೇಕೋ ಹಾಗೆ ಅರ್ಥೈಸಿ, ಅಂದರೆ ಅಪಾರ್ಥ ಮಾಡಿಕೊಂಡು ಇಲ್ಲವೇ ಸಂಪೂರ್ಣವಾಗಿ ಅರ್ಥ ಮಾಡಿಕೊಳ್ಳದೆ ಪಾಲಿಸುವವರೂ ಇದ್ದಾರೆ. ಇವರದೇ ಒಂದು ಜಾತಿ. ವಿಚಿತ್ರವೆಂದರೆ, ನಮ್ಮಲ್ಲಿ ಎಲ್ಲ ತರಹದ ವ್ಯಕ್ತಿಗಳಿದ್ದಾರೆ ಹಾಗೂ ನಮ್ಮಲ್ಲೇ, ಅಂದರೆ ಪ್ರತಿಯೊಬ್ಬರಲ್ಲಿ ಈ ತರಹದ ಗುಣಗಳು ಇವೆ. ಸಮಯಾವಕಾಶ ಸಿಕ್ಕಿದಾಗ, ಈ ಗುಣಗಳು, ಪ್ರತ್ಯಕ್ಷವಾಗಿ ತೋರಿಸಿಕೊಳ್ಳುತ್ತವೆ. ಏನಂತೀರಿ? ವಿಷಯಕ್ಕೆ ಬರೋಣ.

ವ್ಯಕ್ತಿತ್ವ ರೂಪಿಸುವದರಲ್ಲಿ ಹಾಗೂ ಪ್ರದರ್ಶನದಲ್ಲಿ, ಪ್ರಮುಖವಾಗಿ ನಮ್ಮ ಪೋಷಕರು, ಪರಿಸರ ಅಂದರೆ ಸಹವಾಸ ಅಥವಾ ನಾವಿರುವ ಸಮಾಜ, ಪಡೆಯುವ ಶಿಕ್ಷಣ, ನಮ್ಮ ಸ್ವಂತ ವಿವೇಚನೆ ಹಾಗೂ ನಮ್ಮೊಟ್ಟಿಗೆ ಬಂದಂಥಾ ಲೇಪಿತ ಕರ್ಮಗಳೂ ಸೇರಿವೆ ಎಂದು ನಮ್ಮ ಸನಾತನ ಜ್ನ್ಯಾನ ಹೇಳುತ್ತದೆ. ಇದೇನಪ್ಪ, ಲೇಪಿತ ಕರ್ಮ, ಜನುಮ ಜನುಮಗಳ ಮಾತಾಡ್ತಾ ಇದಾನೆ ಅಂತೀರಾ? ಖಂಡಿತ. ಅದಕ್ಕೆ ಉದಾಹರಣೆ ಕೂಡ ಕೊಡುತ್ತೇನೆ.

ನೀವು ಯಾವತ್ತಾದ್ರೂ ಅತಿ ಚಿಕ್ಕ ಪ್ರಾಯದ ಅಂದರೆ ೧೦ ನೇ ವರ್ಷ ತುಂಬುವದರೊಳಗೆ ವಿಶೇಷ ಪ್ರತಿಭೆಗಳನ್ನು ಪ್ರದರ್ಶಿಸುವದಿಲ್ಲವೇ. ಅದು ಸಂಗೀತ, ವಿಜ್ನ್ಯಾನ, ಗಣಿತ, ನೃತ್ಯ, ಭಾಷ ಪಾಂಡಿತ್ಯ, ಕ್ರೀಡೆ, ವೈದ್ಯಕೀಯ ಹೀಗೆ ಹಲವಾರು ಕ್ಷೇತ್ರಗಲ್ಲಿ ಇರಬಹುದು. ಪಟ್ಟಿ ಅತಿ ದೊಡ್ಡದಿದೆ. ನಮಗೆ ಗೊತ್ತಿಲ್ಲದೇ, ಬೆಳಕಿಗೆ ಬರದೇ ಇರುವ ಅಂತಹ ವ್ಯಕ್ತಿಗಳು ಅದೆಷ್ಟೋ? ಆ ಕಲೆ ಅದೃಷ್ಟವಶಾತ್ ಅಲ್ಲವೇ ಅಲ್ಲ ಎಂದು ನನ್ನ ಧೃಡವಾದ ನಂಬಿಕೆ. ಶ್ರೀ ಕೃಷ್ಣ ಕೂಡ ಈ ಮಾತನ್ನು ಒಂದು ಸಂದರ್ಭದಲ್ಲಿ ಸ್ಪಷ್ಟ ಪಡಿಸುತ್ತಾನೆ. ಈ ಜೀವ ನಮ್ಮನ್ನು ಬಿಟ್ಟೊಡನೆ ನಮ್ಮೊಂದಿಗೆ ಬರುವ ಕೆಲವೇ ಸಂಗತಿಗಲ್ಲಿ, ಈ ಸಂಸ್ಕಾರಗಳು ಒಂದು. ಇವೇ ಲೇಪಿತ ಕರ್ಮಗಳು. ಇರಲಿ, ಈ ವಿಷಯದ ಕುರಿತು ಮತ್ತೊಮ್ಮೆ ಬೇರೆ ಲೇಖನ ಬರೆಯುತ್ತೇನೆ. ಸಧ್ಯಕ್ಕೆ, ನಾವು ಮಾಡುವ ಪ್ರತಿಯೊಂದು ಕೆಲಸಗಳು ಹಾಗೂ ವಿಚಾರಗಳ ಉದ್ದೇಶ್ಯ ಇವು ಸಂಚಿತವಾಗುತ್ತ ಹೋಗುತ್ತವೆ ಎಂಬ ವಿಚಾರವನ್ನು ತಿಳಿದರೆ ಸಾಕು. ಇವು ಪ್ರತ್ಯಕ್ಷರೂಪದಲ್ಲಿ, ಸಾಕಾರವಾಗಿ ಕಾಣಿಸಿಕೊಳ್ಳಬೇಕಾದರೆ, ಅಕ್ಕಿ ಬೆಂದು ಪರಿಪಕ್ವಾವಾದ ಅನ್ನವಾಗುವಂತೆ, ಆ ವ್ಯಕ್ತಿತ್ವ ಹಸನಾಗಿ ಬೆಳೆದು, ನುರಿತವಾಗಿ, ರಾಷ್ಟ್ರನಿರ್ಮಾಣ ಕಾರ್ಯಕ್ಕೆ ಸಿದ್ಧವಾಗಬೇಕು,

ಅಂದರೆ, ಈ ವ್ಯಕ್ತಿತ್ವವನ್ನು ರೂಪಿಸುವದರಲ್ಲಿ, ವ್ಯಕ್ತಿತ್ವ ನಿರ್ಮಾಣದಲ್ಲಿ ತುಂಬಾ ಕಾಳಜಿ ವಹಿಸುವುದು ಅತ್ಯಗತ್ಯ. ಅಂದರೆ, ಪ್ರತಿ ಹಂತದಲ್ಲೂ ಇದನ್ನು ಬೆಳೆಸುವಲ್ಲಿ ಪಾತ್ರಧಾರಿಗಳಾಗುವ ಸಂಗತಿಗಳೂ ಕೂಡ ಅನುಕೂಲಕರವಾಗಿರಬೇಕು, ಪೂರಕವಾಗಿರಬೇಕು. ಸಾಮಾನ್ಯ ಲಕ್ಷ್ಯ ರಾಷ್ಟ್ರನಿರ್ಮಾಣವಾದರೂ, ಈ ನಿಟ್ಟಿನಲ್ಲಿ, ಈ ಮಹತ್ಕಾರ್ಯದಲ್ಲಿ, ಪ್ರತಿ ವ್ಯಕ್ತಿಯ ಪಾತ್ರದ ಮಹತ್ವ, ಅರಿವು ತಿಳಿಯಬೇಕು. ಯಾರೂ ಗೌಣರಲ್ಲ. ಯಾವುದೂ ಗೌಣವಲ್ಲ ಎಂಬ ದೃಷ್ಟಿಕೋಣ ಅತ್ಯವಶ್ಯ.

ಯುಗ ಯುಗಗಳಿಂದ ಬಂದ ಈ ನಿಖರ, ವೈಜ್ನ್ಯಾನಿಕ, ಸಾಮಾಜಿಕ, ಹಾಗೂ ಆರ್ಥಿಕ ಸಮನ್ವಯದ ರೂಢಿ ಶ್ರೀ ಕೃಷ್ಣ ಕೂಡ ಮತ್ತೊಮ್ಮೆ ದ್ವಾಪರದಲ್ಲಿ ಧೃಡೀಕರಿಸಿದ್ದಾನೆ. ಅದೇನು? ಈ ವಿಷಯವನ್ನು ಸವಿಸ್ತಾರವಾಗಿ ಮುಂಬರುವ ಕಂತುಗಳಲ್ಲಿ ತಿಳಿಸುತ್ತೇನೆ. ಆದರೆ ಈಗ, ಇಲ್ಲಿ ಇದರ ಬಗ್ಗೆ ಒಂದು ಸುಳಿವನ್ನು ಕೊಟ್ಟಿರುತ್ತೇನೆ. ಇದನ್ನು ಕುರಿತು ಖಂಡಿತ ಯೋಚನೆ ಮಾಡಿ. ಶ್ರೀ ಕೃಷ್ಣ ಹೇಳಿರುವದನ್ನು ನಮ್ಮಲ್ಲಿ ಯಾರಿಂದಲೂ ಅಲ್ಲಗಳೆಯಲಾಗುವದಿಲ್ಲ. ವಿತಂಡವಾದ ಮಾಡಬಹುದೇ ಹೊರತು ಅಲ್ಲಗಳೆಯಲಸಾಧ್ಯ. ಈ ಉದಾಹರಣೆ ಯಾವುದು? ಹೇಳುತ್ತೇನೆ. ನೋಡಿ, ನಮ್ಮಲ್ಲಿ ಈ ಕೆಲವು ದಶಕಗಳಿಂದ ಗಂಡು ಹೆಣ್ಣು ಅಸಮಾನತೆ, ಸಾಮಾಜಿಕ ತಾರತಮ್ಯದ ಹೋಗಲಾಡಿಸುವ ಬಗ್ಗೆ ಅಸಂಖ್ಯಾತ ಸಂಸ್ಥೆಗಳು ಕೆಲಸ ಮಾಡುತ್ತಿವೆ ಇಲ್ಲವೇ ಆ ರೀತಿ ತೋರಿಸಿಕೊಳ್ಳುತ್ತಿವೆ. ಆದರೆ, ಈ ನಿಟ್ಟಿನಲ್ಲಿ ಅವೆಲ್ಲ ಸಾಧಿಸಿದ್ದೇನು? ಏನೂ ಇಲ್ಲ. ಅಸಾಮಾನತೆ ಎಷ್ಟರ ಮಟ್ಟಿಗೆ ಹೋಗಿದೆ? ಸಮಾನತೆಯ ವಿಚಾರಗಳು ಪರಿಣಾಮಕಾರಿಯಾಗಿ ಬೇರೂರಿವೆಯೇ? ಇಲ್ಲ. ಖಂಡಿತ ಇಲ್ಲ. ಇದು ಅಸಾಧ್ಯ ಸಂಗತಿ. ಅಸಾಧ್ಯ ಕೆಲಸಗಳನ್ನು ಮಾಡಲು ಹೊರಟರೆ ಇನ್ನೇನಾಗಲು ಸಾಧ್ಯ. ನಮ್ಮೆಲ್ಲರಿಗೆ ಅಸಹಜತೆಯೇ ಸಹಜ ಎನ್ನುವಷ್ಟು ನಮ್ಮ ಬುದ್ಧಿಗಳು ಭ್ರಷ್ಟವಾಗಿವೆ. ಭ್ರಷ್ಟ ಆಗಲು ಬಿಟ್ಟಿದ್ದು ನಾವೇ. ಕೇವಲ ನಾವೇ ಅದಕ್ಕೆ ಹೊಣೆ. ಉದಾಹರಣೆಗೆ ಎಲ್ಲರೂ ತಾಂತ್ರಿಕ ವಿಜ್ನ್ಯಾನದಲ್ಲಿ ನುರಿತವರಾಗಲು ಸಾಧ್ಯವೇ? ಆದ ತಾಂತ್ರಿಕ ಅಭಯಾಂತರರೆಲ್ಲರೂ ವಿಶ್ವೇಶ್ವರಯ್ಯ ಆದಾರೆಯೇ? ಅಸಾಧ್ಯ ಅಷ್ಟೇ ಅಲ್ಲ, ಇದನ್ನು ಬಯಸುವುದು, ಅಸಹಜ ಕೂಡ. ಹಾಗಂತ ಉಳಿದ ಅಭಯಾಂತರರೆಲ್ಲರೂ ನಿರುಪಯೋಗಿಗಳೇ? ಖಂಡಿತ ಅಲ್ಲ. ನಮ್ಮಲ್ಲಿ ಎಲ್ಲರೂ ಒಂದೇ ವಿಚಾರವನ್ನೇ ಒಂದೇ ತರಹ ಮಾಡುತ್ತೇವೆಯೇ? ನಮ್ಮ ದೇಹಗಳು ಒಂದೇ ತರಹ ಇವೆಯೇ? ನಮ್ಮ ದೇಹದ ಎಲ್ಲ ಅಂಗಾಂಗಳೂ ಕೂಡ ಒಂದೇ ರೀತಿಯಾಗಿವೆಯೇ? ನಾವು ಎಲ್ಲರೂ ಆಹಾರವನ್ನು ತಿನ್ನಲೇಬೇಕು ನಿಜ ಆದರೆ, ಒಂದೇ ತರಹದ ಆಹಾರ, ಒಂದೇ ತರಹವಾಗಿ ತಿನ್ನುತ್ತೇವೆಯೇ? ಹೇಗೆ ನಮ್ಮ, ರೂಪ, ಆಚಾರ, ವಿಚಾರಗಳು ವಿಭಿನ್ನವಾಗಿರುವುದು ಎಷ್ಟು ಸತ್ಯವೋ, ಆ ವಿಭಿನ್ನತೆಗಳು, ಒಂದೇ ನಿಟ್ಟಿನಲ್ಲಿ ಕೆಲಸ ಮಾಡಿದಲ್ಲಿ, ಒಂದು ಸಧೃಡ, ಆರೋಗ್ಯಕರ ದೇಹದಂತೆ, ಒಂದು ಸಧೃಡ, ಆರೋಗ್ಯಕರ, ರಾಷ್ಟ್ರದ ನಿರ್ಮಾಣ ಸಾಧ್ಯ. ಇಂತಹ ಒಂದು ದೇಹದಲ್ಲಿ, ಸರ್ವ ಅಂಗಾಂಗಳು, ದೇಹವನ್ನು ಉಪಯುಕ್ತ ಚಾಲನೆಯಲ್ಲಿಡುವ ಕೆಲಸದಲ್ಲಿ ತೊಡಗಿರುತ್ತವೆ. ಹಾಗೆಯೇ, ಸಧೃಡ ರಾಷ್ಟ್ರ ನಿರ್ಮಾಣವಾಗಬೇಕಂದಲ್ಲಿ, ನಮ್ಮ ದೇಶದಲ್ಲಿರುವ ಎಲ್ಲ ವ್ಯವಸ್ಥೆಗಳೂ ಪರಸ್ಪರ ಪೂರಕವಾಗಿ ಕೆಲಸ ಮಾಡಲೇ ಬೇಕು. ಅಂದರೆ, ಎಲ್ಲ ಸಂಗತಿಗಳೂ, ಎಲ್ಲ ವ್ಯಕ್ತಿಗಳೂ ಈ ರಾಷ್ಟ್ರದ ಅವಿಭಾಜ್ಯ ಅಂಗ. ಯಾರೂ ಹೊರತಲ್ಲ. ಎಲ್ಲರಿಗೂ ಜವಾಬ್ದಾರಿ ಇದೆ ಆದರೆ ಅದರ ಅರಿವು ಹುಟ್ಟಿಸುವತ್ತ ನಮ್ಮ ದೃಷ್ಟಿಹೋಗಬೇಕು. ಈ ಕೆಲಸ ಅತಿ ಶೀಘ್ರವಾಗಿ, ಸರಿಯಾಗಿ, ಆಗಬೇಕಿದೆ.

ಈ ನಿಟ್ಟಿನಲ್ಲಿ, ನಮ್ಮೆಲ್ಲ ವ್ಯವಸ್ಥೆಗಳನ್ನು, ನಾಲ್ಕು ಕಾಲುಗಳಲ್ಲಿ ನೋಡಲೇ ಬೇಕು. ನಡೆಯುವ ನಿರುದ್ಯೋಗ ಸಮಸ್ಯೆಯ ಮೂಲ ಹುಡುಕಾಟ…. ಒಂದರಲ್ಲಿ ನಾಲ್ಕು ಭಾಗ ಮಾಡಿದರೆ ಬರುವ ಕಾಲು ಭಾಗ. ರಾಷ್ಟ್ರ ಚಾರಿತ್ರ್ಯ ಹಾಗೂ ಬೌದ್ಧಿಕ ಸಾಮರ್ಥ್ಯ, ಆರ್ಥಿಕ, ರಕ್ಷಣಾ, ಹಾಗೂ ಉಳಿದೆಲ್ಲ ದೈಹಿಕ ಸಾಮರ್ಥ್ಯಬೇಕಾಗಿರುವ ಕೆಲಸಗಳೇ ಈ ನಾಲ್ಕು ಕಾಲುಗಳು.

ಈ ನಾಲ್ಕು ಕಾಲುಗಳು ಸಧೃಡವಾಗಿದ್ದಾಗ ಮಾತ್ರ, ರಾಷ್ಟ್ರದ ಸಮಗ್ರ, ಸರ್ವತ್ರ ಸಮಾನ ಸಮೃದ್ಧತೆ ಸಾಧ್ಯ. ಸಧೃಡ ದೇಹದ ಲಾಭ ಹೇಗೆ ಎಲ್ಲ ಅಂಗಾಂಗಳಿಗೂ ತಲುಪುತ್ತದೆಯೋ, ಸಧೃಡ ರಾಷ್ಟ್ರದ ಲಾಭ ಪ್ರತಿ ವ್ಯಕ್ತಿಗೂ ತಲುಪುವುದು ಅಷ್ಟೇ ಸಹಜ.

ಮುಂದಿನ ಕಂತುಗಳಲ್ಲಿ ಪ್ರತಿಯೊಂದು ಕಾಲುಗಳನ್ನು ಇನ್ನಷ್ಟು ವಿವರವಾಗಿ ಚರ್ಚಿಸೋಣ.

ನಿಮಗೇನನ್ನಿಸುತ್ತದೆ?

ನಿಮ್ಮ ಅನಿಸಿಕೆಗಳನ್ನು, ವಿಚಾರಗಳನ್ನು ನನ್ನೊಡನೆ ಹಂಚಿಕೊಳ್ಳಲು ನನ್ನ ಈ email ನ್ನು ಬಳಸಿ – AnswerGuy001@gmail.com
—–

Girl in a jacket
error: Content is protected !!