ಡೆಡ್ಲಿ ಚಂಡಮಾರುತಕ್ಕೆ ದಕ್ಷಿಣ ಭಾರತ ತತ್ತರ,ವಿಜ್ಞಾನಿಗಳಿಗೆ ಸಿಗುತ್ತಿಲ್ಲ ಉತ್ತರ..!
Writing- ಪರಶಿವ ಧನಗೂರು
ಪ್ರಚಂಡ ಚಂಡಮಾರುತ..! ದಕ್ಷಿಣ ಭಾರತದ ಮೇಲೇಕೆ ಮುರಿದುಕೊಂಡು ಬಿದ್ದಿವೆ ಈ ಡೆಡ್ಲಿ ಚಂಡಮಾರುತಗಳು?ವೀಶ್ವ ಭೂಪಟದಲ್ಲಿ ಹಲವು ನಗರಗಳು ನಾಪತ್ತೆ ಯಾಗುವ ಕಾಲ ಬಂದೇ ಬಿಡ್ತಾ? ಭಾರತದ ಹನ್ನೆರಡು ಪ್ರಮುಖ ನಗರಗಳು ಈ ಶತಮಾನದಂತ್ಯಕ್ಕೆ ಸಮುದ್ರದೊಳಗೆ ಮುಳುಗಿಹೋಗಬಹುದು ಎಚ್ಚರಾ! ಎಂದು ನಾಸಾ ವಿಜ್ಞಾನಿಗಳು ಹೇಳಿದ್ದು ಯಾಕೇ? ದಕ್ಷಿಣ ಭಾರತದ ರಾಜ್ಯಗಳಾದ ಕರ್ನಾಟಕ, ಆಂದ್ರ ಪ್ರದೇಶ, ಕೇರಳ, ತೆಲಂಗಾಣ, ತಮಿಳು ನಾಡುಗಳನ್ನು ಜಲಪ್ರಳಯ ದಲ್ಲಿ ಮುಳುಗಿಸಿ ತೇಲಿಸುತ್ತಿರುವ ಈ ‘ವಾಟರ್ ವೈರಸ್!’ ಗೇ ಪ್ರಬಲವಾದ ಕಾರಣವೇನೆಂಬುದನ್ನು ಕಂಡುಕೊಳ್ಳಲು ನಮ್ಮ ವಿಜ್ಞಾನಿಗಳು ತಲೆಕೆಡಿಸಿಕೊಂಡು ಕುಳಿತಿದ್ದಾರೆ. ಅಲ್ಲಲ್ಲಿ ರೆಡ್ ಅಲರ್ಟ್, ಆರೆಂಜ್ ಅಲರ್ಟ್, ಯಲ್ಲೊ ಅಲರ್ಟ್, ಹೈ ಅಲರ್ಟ್ ಘೋಷಿಸುವುದನ್ನು ಬಿಟ್ಟು ಬೇರೇನನ್ನೂ ಮಾಡುವ ಪರಿಸ್ಥಿತಿಯಲ್ಲಿ ಅವರಿಲ್ಲ! ಸಂಶೋಧನೆಗೇ ನಿಲುಕದೆ ಭಾರತೀಯ ವಿಜ್ಞಾನಿಗಳನ್ನೇ ಗೊಂದಲಕ್ಕೆ ದೂಡಿರುವ ಈ ಅಕಾಲಿಕ ಚಂಡಮಾರುತಳಿಗೆ, ಬಂಗಾಳಕೊಲ್ಲಿಯಲ್ಲಿ ಪದೇ ಪದೇ ಉಂಟಾಗುತ್ತಿರುವ ವಾಯುಭಾರ ಕುಸಿತಕ್ಕೆ ನಿಜವಾದ ವೈಜ್ಞಾನಿಕ ಕಾರಣಕ್ಕಾಗಿ ವಿಜ್ಞಾನಿಗಳ ತಂಡವೇ ಹಗಲು ರಾತ್ರಿ ನಿದ್ದೆಗೆಟ್ಟು ಸಂಶೋಧನೆಗಿಳಿದಿದೆ! ಈ ಶತಮಾನದ ದಾಖಲೆ ಮಳೆಯೆಂದು ಸಂತೋಷ ಪಡುವ ಪರಿಸ್ಥಿತಿಯಲ್ಲಿ ದಕ್ಷಿಣ ಭಾರತದ ಜನರಂತೂ ಇಲ್ಲ.
ಎರಡು ಸಾವಿರಕ್ಕೂ ಹೆಚ್ಚಿನ ಕೆರೆಕುಂಟೆಗಳು ಹಲವಾರು ವರ್ಷಗಳ ನಂತರ ತುಂಬಿ, ಹರಿದು ಕೋಡಿ ಬಿದ್ದು, ಬಾಗಿನ ಅರ್ಪಸಲು ನಿಂತವರ ಕಣ್ಣಲ್ಲು ಕಣ್ಣಿರು ತರಿಸುತ್ತಿರುವ, ಎಡೆಬಿಡದೆ ಸುರಿಯುತ್ತಿರುವ, ಈ ಅಕಾಲಿಕ ಮಳೆ ಮಾರುತದಿಂದ ಲಕ್ಷಾಂತರ ಜನರು ಮನೆಕಳೆದುಕೊಂಡು ಬೀದಿಪಾಲಾಗಿ, ಊರಿಗೂರೇ ಮುಳುಗಿಹೋಗಿ, ನಿರಾಶ್ರಿತರಾಗಿ ಗಂಜಿ ಕೇಂದ್ರ ಸೇರಿದ್ದಾರೆ. ಸಾವಿರಾರು ಜನರು ಸಾವನ್ನಪ್ಪಿದ್ದು ನೂರಾರು ಮಂದಿ ನಾಪತ್ತೆಯಾಗಿದ್ದಾರೆ! ದಕ್ಷಿಣ ಭಾರತದ ನಾಲ್ಕು ರಾಜ್ಯಗಳ ರೈತರು ಲಕ್ಷಾಂತರ ಹೆಕ್ಟೇರ್ ಪ್ರದೇಶದಲ್ಲಿ ಬೆಳೆದಿದ್ದ ತರಕಾರಿ, ಭತ್ತ,ರಾಗಿ, ಈರುಳ್ಳಿ ಜೋಳ, ಶೇಂಗಾ ಮೆಣಸು, ಕಾಫಿ ಬೇಳೆಯ ಪಸಲು ನೀರುಪಿಲಾಗಿ ಹಲವಾರು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ! ಬರದಿಂದ ತತ್ತರಿಸಿ ‘ಹುಯ್ಯೋ ಹುಯ್ಯೋ ಮಳೆರಾಯ! ಹೂವಿನ ತೋಟಕ್ಕೆ ನೀರಿಲ್ಲ!’ ಎಂದು ಹಾಡುತ್ತಾ ಕೂಗುತ್ತಿದ್ದ ಜನರೇ ಈಗ ‘ನಿಲ್ಲೋ ನಿಲ್ಲೋ ನಿನ್ ಮನೆಕಾಯ! ಮಳೆರಾಯ! ನಿನ್ನಿಂದ ಬೆಳೆಯೆಲ್ಲಾ ಹಾಳಾದೋ!’ ಎನ್ನುತ್ತಿದ್ದಾರೆ. ವರ್ಷದಿಂದ ಬೆವರು ಹರಿಸಿ ಬೆಳೆದ ಬೆಳೆಗೆ ಜಲ ದಿಗ್ಬಂಧನ! ಗದ್ದೆಯಲ್ಲೆ ಮೊಳಕೆಯೊಡೆದು ಕೊಳೆತುಹೋದ ಪಸಲು! ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ! ರೈತರ ಗೋಳು ಕೇಳೋರು ಯಾರು? ಮುಂದೆ ಗಗನಕ್ಕೇರುವ ತರಕಾರಿ, ಆಹಾರಧಾನ್ಯಗಳ ಬೆಲೆಗೆ ಹೊಣೆಯಾರು? ಈಗಾಗಲೇ ಕೊರೋನಾ ಆಲೆಗಳ ಕಾಟದಿಂದ ಮಾನಸಿಕವಾಗಿ, ದೈಹಿಕವಾಗಿ ಜರ್ಜರಿತರಾಗಿ, ಆರ್ಥಿಕವಾಗಿ ಕುಸಿದು ಹೋಗಿದ್ದ ಜನರಿಗೆ ಈಗ ಮಹಾ ಮೇಘಸ್ಫೋಟದ ಹೊಡೆತ! ಋತುವೆಲ್ಲ ಹಿಂದೆ ಮುಂದೆ ಆಗುತ್ತಿದೆಯೇನೋ ಎಂಬ ಗೊಂದಲದಲ್ಲಿರುವ ಜನರು ಈಗ ಎಲ್ಲೆಡೆ ಸುರಿಯುತ್ತಿರುವ ಧಾರಾಕಾರ ಮಳೆಗೆ ತತ್ತರಿಸಿ ಹೋಗುತ್ತಿದ್ದಾರೆ.
ಹಲವಾರು ನಗರಗಳಲ್ಲಿ ಮನೆಗಳಿಗೆ ನೀರು ನುಗ್ಗಿದೆ. ಮನೆಗಳು, ಶಾಲೆಗಳು, ಆಸ್ಪತ್ರೆಗಳು ಕುಸಿದುಬಿದ್ದಿವೆ! ಅಭಿವೃದ್ಧಿಯ ಮುಖವಾಡ ಧರಿಸಿ ನಿಂತಿದ್ದ ಸಿಟಿಯ ಹೈವೇ ರಸ್ತೆಗಳಲ್ಲಿ ಹಳ್ಳಗುಂಡಿ ಬಿದ್ದು, ಎದೆಮಟ್ಟ ನೀರು ಬಂದು, ನಡುರಸ್ತೆಯಲ್ಲೇ ವಾಹನಗಳು ಸವಾರರ ಸಮೇತ ತೇಲುತ್ತಾ ಹಳ್ಳಸೇರುತ್ತಿವೆ!
ಬಾರೀ ಮಳೆಯಾಗಲಿದೆ! ಇನ್ನೆರಡು ದಿನ ಕರಾವಳಿ ತೀರದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗುವ ಸಂಭವವಿದೆ!ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿ ನೀಡಿ ಸುಸ್ತಾಗಿದೆ. ವರುಣನ ಆರ್ಭಟಕ್ಕೆ ಹೆದರಿದ ಕೆಲವು ರಾಜ್ಯಗಳ ಸರ್ಕಾರಗಳು ಸರ್ಕಾರಿ ರಜೆ ಘೋಷಿಸಿವೆ! ಸಮುದ್ರ ತೀರದ ಕರಾವಳಿ ನಗರಗಳಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣೆ ಪರಿಹಾರ ಪಡೆ ‘ಜನರು ತಮಗೆ ಬೇಕಾದ ಅಗತ್ಯ ಆಹಾರ ಸಾಮಗ್ರಿಗಳನ್ನು ದಾಸ್ತಾನು ಮಾಡಿ!’ ಎಂಬ ಸಂದೇಶ ಹೊರಡಿಸುವುದೊಂದು ಬಾಕಿ ಇದೆ. ಆಂದ್ರ ಕರಾವಳಿಯಿಂದ ಹೊರಟ ಮಳೆಯ ಮಾರುತಗಳು ತಿರುಪತಿಯ ಬೆಟ್ಟಕ್ಕೆ ಬಡಿದು ನದಿಯಾಗಿ ಧುಮುಕುತ್ತಿವೆ! ಬೆಟ್ಟಗಳು ಕುಸಿದು, ಮರಗಳು ದರೆಗುರುಳಿ ರಸ್ತೆಗಳೇ ನಾಪತ್ತೆಯಾಗಿವೇ! ತಮಿಳು ನಾಡಿನ ಇಪ್ಪತ್ತಕ್ಕೂ ಹೆಚ್ಚಿನ ಜಿಲ್ಲೆಗಳಲ್ಲಿ ಈಗಲೂ ರೆಡ್ ಅಲರ್ಟ್ ಘೋಷಿಸಲಾಗಿದೆ. ಮಾರುಕಟ್ಟೆ ವ್ಯಾಪಾರಸ್ಥರು, ಕೂಲಿಕಾರ್ಮಿಕರು ದುಡಿಮೆಯಿಲ್ಲದೆ ಪರಿತಪಿಸುವಂತಾಗಿದೆ. ಜನರಿಗೆ ಕೆಮ್ಮು ಶೀತ ನೆಗಡಿ ಜಾಸ್ತಿ ಆಗಿ ಎಲ್ಲೆಡೆ ವೈರಲ್ ಜ್ವರದ ಲಕ್ಷಣಗಳು ಗೋಚರಿಸುತ್ತಿವೆ! ಮತ್ತೊಂದೆಡೆ ಕೊರೋನಾ ರೂಪಾಂತರಿ ಹೊಸ ವೈರಸ್ ಆತಂಕ ಮನೆಮಾಡಿದೆ.
ಇಷ್ಟೆಲ್ಲಾ ಆವಾಂತರಗಳಿಗೆ ಕಾರಣ ವರುಣ! ಕಳೆದ ಹತ್ತು ದಿನಗಳಿಂದ ಸುರಿಯುತ್ತಿರುವ ವರುಣನ ಆರ್ಭಟಕ್ಕೆ ಇಡೀ ದಕ್ಷಿಣ ಭಾರತವೇ ತತ್ತರಿಸಿ ತರಗುಟ್ಟಿಹೋಗಿದೆ! ಈಗ ಹೊಸರೀತಿಯ ಆರ್ಥಿಕ ಸಂಕಷ್ಟಕ್ಕೆ, ಸವಾಲಿಗೆ ಸರ್ಕಾರಗಳು ಸಿದ್ದರಾಗಬೇಕಿದೆ. ಮುಂದೆ ಈ ವಿಧ್ವಂಸಕ ಚಂಡಮಾರುಗಳ ಸರಣಿ ಅಟ್ಯಾಕ್ ಮುಂದುವರಿಯುವ ಮುನ್ನೆಚ್ಚರಿಕೆಗಳನ್ನು ಹವಾಮಾನ ಇಲಾಖೆ ತಿಳಿಸಿ ಎಚ್ಚರಿಸುತ್ತಿದೆ. ಈಗ ಆಗಿರುವ ಲಕ್ಷಾಂತರ ಹೆಕ್ಟೇರ್ ಪ್ರದೇಶದ ಆಹಾರ ಬೆಳೆಗಳ ನಾಶದ ಪರಿಣಾಮವಾಗಿ ಬೆಲೆಗಳೂ ಗಗನಮುಟ್ಟುವ ಸಂಭವ ಹೆಚ್ಚಾಗಿದೆ. ಆಹಾರ ಸಾಮಗ್ರಿಗಳ ಕೊರತೆಯನ್ನು ಸರ್ಕಾರವೇ ಸರಿದೂಗಿಸಬೇಕಾದ ಪ್ರಮೇಯ ಬರಬಹುದು. ಇಂತಹ ವಿಷಮ ಘಳಿಗೆಗೆ ದೂಡುತ್ತಿರುವ ಡೆಡ್ಲಿ ಸೈಕ್ಲೋನ್ ಗಳ ಬಗ್ಗೆ ನಾವು ಸರಿಯಾದ ವೈಜ್ಞಾನಿಕ ಮಾಹಿತಿಯನ್ನು ಇಟ್ಟುಕೊಂಡು ಮುಂದಿನ ದಿನಗಳಲ್ಲಿ ಈ ಹವಾಮಾನ ವೈಪರೀತ್ಯಗಳನ್ನು ಸರಿಪಡಿಸಿಕೊಳ್ಳದಿದ್ದರೇ, ಭಾರೀ ಬೆಲೆಯನ್ನೇ ಭಾರತೀಯರಾದ ನಾವು ತೆರಬೇಕಾಗುತ್ತದೆ. ಕಳೆದ ಆಗಸ್ಟ್ ತಿಂಗಳಲ್ಲೇ ನಾಸಾ ವಿಜ್ಞಾನಿಗಳು, 757ತಜ್ಞರು ಹೇಳಿದ್ದ ಜಲಪ್ರಳಯದ ಕರಾಳ ಸತ್ಯವನ್ನು, ಭಾರತದ ವಿಜ್ಞಾನಿಗಳು, ಸರ್ಕಾರಗಳು ಗಂಭೀರವಾಗಿ ಪರಿಗಣಿಸಬೇಕು. ಇತ್ತೀಚೆಗೆ ಸಮುದ್ರದ ಮೇಲಾಗುತ್ತಿರುವ ಅಸಾಮಾನ್ಯ ಹವಾಮಾನ ಬದಲಾವಣೆ ಗಳಿಂದ, ಸಾಗರದ ಮೇಲೆ ನಡೆಯುತ್ತಿರುವ ಉಬ್ಬರಮಿಳಿತಗಳ ಚಲನಲನಗಳಿಂದ, ಮುಂಬರುವ ದಿನಗಳಲ್ಲಿ ಕರಾವಳಿ ಕಡಲ ತೀರದ ರಾಜ್ಯಗಳು ಹೆಚ್ಚಿನ ಚಂಡಮಾರುತ, ಪ್ರವಾಹ, ಅನಾವ್ರಷ್ಠಿಗೆ ತುತ್ತಾಗುವ ಅಪಾಯಕ್ಕೆ ಸಿಲುಕಬೇಕಾಗುತ್ತದೆಂದು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟ್ರಾಫಿಕಲ್ ಮೆಟ್ರಾಲಜಿಯ ಹವಾಮಾನ ಇಲಾಖೆ ವಿಜ್ಞಾನಿಗಳೇ ಹೇಳುತ್ತಿದ್ದಾರೆ! ಈ ಶತಮಾನದ ಒಳಗೆ ಎಚ್ಚೆತ್ತು ಕೊಳ್ಳದಿದ್ದರೇ ಭಾರತಕ್ಕೆ ಗಂಡಾಂತರ ಎದುರಾಗಲಿದೆ ಎಂದು ವಿಶ್ವಸಂಸ್ಥೆಯ ವರದಿಯನ್ನಾಧರಿಸಿ ನಾಸಾ ಎಚ್ಚರಿಕೆ ನೀಡಿಯಾಗಿದೆ. ಮಳೆಯ ರಿಮೋಟ್ ಎಂದು ವಿಜ್ಞಾನಿಗಳು ಕರೆಯುತ್ತಿದ್ದ ‘ಎಲ್ ನಿನೋ’ ಹವಾಮಾನ ವೈಪರೀತ್ಯದ ವಿದ್ಯಮಾನಕ್ಕೆ ಸವಾಲೆಸೆಯುವಂತೆ ಈಗ ಬಂಗಾಳಕೊಲ್ಲಿಯ ಸಮುದ್ರದ ಮೇಲೆ ಅಕಾಲಿಕ ಸರಣಿ ಚಂಡಮಾರುತಗಳ ವಿಚಿತ್ರ ವಿದ್ಯಮಾನಗಳು ಜರುಗುತ್ತಿವೆ!. ಮಧ್ಯ ಪೆಸಿಫಿಕ್ ಸಾಗರದಲ್ಲಿ ಎಲ್ ನಿನೋ ವಿದ್ಯಮಾನಗಳು ಕಂಡುಬಂದರೆ ಭಾರತದಲ್ಲಿ ಬರಗಾಲ! ಪೂರ್ವ ಪೆಸಿಫಿಕ್ ಸಮುದ್ರದಲ್ಲಿ ಎಲ್ ನಿನೋ ವಿದ್ಯಮಾನಗಳು ಕಂಡುಬಂದರೆ ಭಾರತಕ್ಕೆ ಮುಂಗಾರುಮಳೆಯ ಸಿಂಚನ! ಎಂಬ ವಿಜ್ಞಾನಿಗಳ ಹಳೇ ಫಾರ್ಮೂಲಾಕ್ಕೆ ಈಗ ಬೆಲೆ ಇಲ್ಲದಂತಾಗಿದೆ! ವೈಜ್ಞಾನಿಕ ಪುರಾವೆಗಳೇ ಗೊಂದಲಕ್ಕೆ ಬೀಳುವಂತೆ ಇತ್ತೀಚಿನ ವರ್ಷಗಳಲ್ಲಿ ಅರಬ್ಬಿ ಸಮುದ್ರದಲ್ಲಿ, ಬಂಗಾಳಕೊಲ್ಲಿಯಲ್ಲಿ ಪದೇ ವಾಯುಭಾರ ಕುಸಿತ ಉಂಟಾಗಿ ಚಿತ್ರ ವಿಚಿತ್ರವಾದ ಡೇಂಜರಸ್ ಚಂಡಮಾರುತಗಳಿಗಳ ಹುಟ್ಟಿಗೆ ಕಾರಣವಾಗುತ್ತಿದೆ. ಇದಕ್ಕೆಲ್ಲ ವೈಜ್ಞಾನಿಕ ಉತ್ತರಗಳನ್ನೇ ಕಂಡುಕೊಳ್ಳಲೇಬೇಕಿದೆ.
ಕಳೆದ ಹತ್ತು ವರ್ಷಗಳಲ್ಲಿ ಭಾರತವೂಂದರಲ್ಲೇ 40ಕ್ಕೂ ಹೆಚ್ಚಿನ ಸಂಖ್ಯೆಯ ಚಂಡಮಾರುತಗಳ ದಾಳಿ! ಸಾವಿರಾರು ಜನರ ಸಾವು. ಲಕ್ಷಾಂತರ ಮಂದಿ ನಾಪತ್ತೆ. ಇದೆಲ್ಲವನ್ನು ನೋಡುತ್ತಿದ್ದರೇ ಬಂಗಾಳಕೊಲ್ಲಿಯೇ ಚಂಡಮಾರುತಗಳ ತವರೂರಾಗುತ್ತಿದೆಯೇನೋ ಎನ್ನಿಸುತ್ತಿದೆ! ಭಾರತೀಯ ಹವಾಮಾನ ವಿಜ್ಞಾನಿಗಳ ಪ್ರಕಾರ ಉಷ್ಣವಲಯದಲ್ಲಿಯೇ ಸೈಕ್ಲೋನ್ ಗಳ ಹಾವಳಿ ಜಾಸ್ತಿಯಂತೆ! ಹಾಗಾದರೆ ಬಂಗಾಳಕೊಲ್ಲಿಯಲ್ಲಿ ಪದೇ ಪದೇ ವಾಯುಭಾರ ಕುಸಿತಕ್ಕೆ ಕಾರಣ ಈಗಲಾದರೂ ನಾವು ಕಂಡುಕೊಂಡು ಶೀಘ್ರವಾಗಿ ಪರಿಹಾರ ಹುಡುಕಿಕೊಳ್ಳಬೇಕಿದೆ. ದೂರದ ಸಮುದ್ರ ದ ಮೇಲೆ ತೂಕ ಕಳೆದುಕೊಳ್ಳುವ ಗಾಳಿಗೆ ಅಪ್ಪಳಿಸಿ ಸುರುಳಿ ಸುತ್ತಿ ಕೊಳ್ಳುವ ಬಿಸಿಗಾಳಿಯ ಜುಗಲ್ ಬಂದಿಯೇ ಈ ಡೆಡ್ಲಿ ಸೈಕ್ಲೋನ್! ತಣ್ಣಗಿನ ಸಮುದ್ರದ ನೀರು ಮತ್ತು ಬೀಸಿ ಬರುವ ತಾಪಮಾನದ ಬಿಸಿಗಾಳಿಗುಳ್ಳೆಯ ನಡುವಿನ ಕಧನ ಈ ವಾಯುಭಾರ ಕುಸಿತದ ಚಂಡಮಾರುತ! ನಡು ಸಮುದ್ರ ಮೇಲೆ ಹವಾಮಾನ ದಲ್ಲಿ ಕಡಿಮೆ ಒತ್ತಡದ ಪ್ರದೇಶಗಳು ಸ್ರಷ್ಠಿಯಾದಾಗ ಅವುಗಳ ಸುತ್ತಲೂ ಚಕ್ರವ್ಯೂಹಾಕಾರದಲ್ಲಿ ಉಂಟಾಗುವ ಬಿರುಗಾಳಿ ಮತ್ತು ತೀವ್ರಮಳೆಯಿಂದ ಹೆಚ್ಚಿನ ಚಂಡಮಾರುತಗಳು ಎದ್ದೇಳುತ್ತವೆ. ಕಡಿಮೆ ಒತ್ತಡದ ವಲಯದ ಸುತ್ತ ಸುತ್ತುವ ಒಳಮುಖ ಸುರುಳಿ ಗಾಳಿಯಿಂದ ರೂಪಿತವಾಗುವ ವಾಯುದ್ರವ್ಯರಾಶಿಯ ಜಗತ್ತು ಈ ಚಂಡಮಾರುತಗಳ ತಾಕತ್ತು. ಶೀತಗಾಳಿಯ ದ್ರವ್ಯ ರಾಶಿಗಳು, ಅಕ್ಷಾಂಶದ ವ್ಯತಿರಿಕ್ತ ಪರಿಣಾಮಗಳು ತಾಪಮಾನದ ಏರಿಕೆಯ ಪರಿಣಾಮದಿಂದ ಉಂಟಾಗಿ ಚಂಡಮಾರುತಗಳ ರೂಪದಲ್ಲಿ ಬಂದು ಕರ್ಮ ರಿಟರ್ನ್ ರೀತಿ ಜನರನ್ನು ಕಾಡುತ್ತಿವೆ! ಹಿಂದೂ ಮಹಾಸಾಗರ ಪ್ರಾಂತ್ಯದಲ್ಲಿ ಉಂಟಾಗುವ ತೀವ್ರ ವಾಯುಭಾರ ಕುಸಿತವು ಬಿರುಗಾಳಿ ಯಾಗಿ ಬದಲಾದಾಗ ಈ ಚಂಡಮಾರುಗಳು ಸ್ರಷ್ಠಿಯಾಗುತ್ತಿವೆ ಎನ್ನಲಾಗುತ್ತಿದೆ.
ಭಾರತವಂತೂ ಈ ಹತ್ತು ವರ್ಷಗಳಲ್ಲಿ ಅರಬ್ಬಿ ಸಮುದ್ರ ಮತ್ತು ಬಂಗಾಳ ಕೊಲ್ಲಿ ಗಳಲ್ಲಿ ಉದ್ಭವಿಸಿ ಬರುವ ಚಂಡಮಾರುತಗಳಿಂದ ಅಪಾರವಾದ ಪೆಟ್ಟು ತಿಂದು ತತ್ತರಿಸಿಹೋಗುತ್ತಿದೆ. 1999 ರಲ್ಲಿ ಮಹಾ ಚಂಡಮಾರುತ ಪೈಲೀನ್ ಗಂಟೆಗೆ 220ರಿಂದ 280 ಕಿ.ಮೀಟರ್ ವೇಗದಲ್ಲಿ ಒಡಿಸ್ಸಾ ಕರಾವಳಿಗೆ ಅಪ್ಪಳಿಸಿತ್ತು. ಹತ್ತುಸಾವಿರ ಮಂದಿ ಪ್ರಾಣಕಳೆದುಕೊಂಡು ಲಕ್ಷಾಂತರ ಜನರು ಬೀದಿಪಾಲಾಗಿದ್ದರು. 2009 ಫ್ಯಾನ್ ಚಂಡಮಾರುತ. 2010 ಜೈಲ್ ಚಂಡಮಾರುತ.2012ನೀಲಂ ಚಂಡಮಾರುತ. ತಮಿಳು ನಾಡು, 2013ಹೆಲನ್ ಚಂಡಮಾರುತ. 2014 ಅಕ್ಟೋಬರ್ ರಲ್ಲಿ ಅಂಡಮಾನ್ ಸಮುದ್ರದಲ್ಲಿ ಸ್ರಷ್ಠಿಯಾಗಿದ್ದ ಹುಡ್ ಹುಡ್ ಚಂಡಮಾರುತ ಒಡಿಸ್ಸಾ,ಆಂದ್ರ ಪ್ರದೇಶಕ್ಕೆ ಅಪ್ಪಳಿಸಿತ್ತು.125ಜನರನ್ನು ಬಲಿಪಡೆದಿದ್ದ ಈ ಚಂಡಮಾರುತ 21ಸಾವಿರ ಕೋಟಿ ನಷ್ಟವನ್ನುಂಟು ಮಾಡಿತ್ತು! 2015ರಲ್ಲಿ ಎ-ಆರ್-ಬಿ-02 ಚಂಡಮಾರುತ ಗುಜರಾತ್ ನಲ್ಲಿ ತನ್ನ ರೌದ್ರಾವತಾರ ತೋರಿತ್ತು.2016ಕ್ಯಾಂಟ್, ಬಂಗಾಳಕೊಲ್ಲಿ 2016ವಾರ್ಧಾ ಚಂಡಮಾರುತ ಅಂಡಮಾನ್ ನಿಕೋಬಾರ್ ದ್ವೀಪಗಳಲ್ಲಿ. 2016ನಾದಾ ಕೇರಳ-ತಮಿಳುನಾಡು. 2017 ಓಕಿ ಸೈಕ್ಲೋನ್ ಕೇರಳ, ತಮಿಳುನಾಡು . 2019 ಫಣಿ ಸೈಕ್ಲೋನ್ ಒಡಿಸ್ಸಾ. 2020 ಪಶ್ಚಿಮ ಬಂಗಾಳದ ಒಡಿಸ್ಸಾಗೆ ಅಂಫಾನ್ ಚಂಡಮಾರುತದಾಳಿ. ಇದು 20ವರ್ಷಗಳಲ್ಲೇ ಅತಿ ದೊಡ್ಡ ಸೈಕ್ಲೋನ್. ಅತ್ಯಂತ ಹಾನಿಕಾರಕ ಸೈಕ್ಲೋನ್ ಎನಿಸಿಕೊಂಡಿದ್ದ ಯಾಸ್ ಚಂಡಮಾರುತ ಮೇ 2021ರಲ್ಲಿ ಪಶ್ಚಿಮ ಬಂಗಾಳಕ್ಕೆ ಅಪ್ಪಳಿಸಿತ್ತು. ಈಗಾಗಲೇ ಬಂಗಾಳ ಕೊಲ್ಲಿಯಲ್ಲಿ ಉದ್ಭವಿಸಿ, ಆರ್ಭಟಿಸಿ ಮರೆಯಾದ ಹಲವಾರು ಚಂಡಮಾರುತಗಳ ಪಟ್ಟಿಯೇ ಇವೆ. ನೀಲಂ. ಥಾಣೆ. ಲಿನಾಯಿಸ್.ದುಮಿಲಾ.ಸೊಲಾಸಿ.ಉರಿಲಿಯಾ.ತಮೀಮ್.ಬಾಲ್ಡ್ ವಿನ್.ಸಿತರಾ ಅಮರ.ಸಾಯ.ಬನ್ಸಿ.ತಾರಿಕ್.ಕೇಶ.ಪುಂಡಿ.ಮಹರ.ಜಿಜಿಸಾ.ವಿಂದು. ಮತ್ತು ಹಿಂದೂ ಮಹಾಸಾಗರದಲ್ಲಿ ಹುಟ್ಟಿದ್ದ ಅಗ್ನಿ ಆಕಾಶ್.ಬಿಜ್ಲಿ.ವಾಯು.ಜಲ್ ಲೆಹರ್. ಪೆಸಿಫಿಕ್ ಸಾಗರದಲ್ಲಿ ಕಟ್ರೀನಾ.ಸ್ಯಾಂಡೀ.ರೀನಾ.
ಬಾರ್ಬರಾ.ಕ್ರಿಸ್. ಜೀಸ್. ಆಸ್ಕರ್ ಮಾರ್ಟಿ. ಟೋನಿ. ಕಿರ್ಕ್.ಅಗಾಥ ಮುಂತಾದ ಚಂಡಮಾರುಗಳು ದಾಳಿ ನಡೆಸಿ ತೊಂದರೆ ಕೊಟ್ಟಿವೆ. ಈಗ ನೈರುತ್ಯ ಮುಂಗಾರು ಅಂತ್ಯವಾಗಿದ್ಜರೂ ಹಿಂಗಾರಿನಲ್ಲಿ ರೈತರ ಬೆಳೆಯ ಕುಯಿಲಿನ ಸಮಯದಲ್ಲಿ ಶಾಹೀನ್ ಚಂಡಮಾರುತ ಕರ್ನಾಟಕದಲ್ಲಿ ದಾಳಿ ಪ್ರಾರಂಭ ಮಾಡಿತ್ತು. ಸೆಪ್ಟೆಂಬರ್ ನಲ್ಲಿ ಮುಂಬೈ ನಗರವನ್ನೆ ನಡುಗಿಸಿದ್ದ ಗುಲಾಬ್ ಚಂಡಮಾರುತದೊಂದಿಗೆ ಆರಂಭವಾದ ದಕ್ಷಿಣ ಭಾರತದ ರಾಜ್ಯಗಳ ಚಂಡಮಾರುತ ಕಂಟಕ ಇಂದಿಗೂ ಮುಗಿದಿಲ್ಲ. ಈಗ ಮತ್ತೊಂದು ಭೀಕರ ಡೆಡ್ಲಿ ಸೈಕ್ಲೋನ್ ದಾಳಿಯ ಮುನ್ಸೂಚನೆಯನ್ನು ಈಗ ಹವಾಮಾನ ಇಲಾಖೆ ತಿಳಿಸಿ ಎಚ್ಚರಿಸುತ್ತಿದೆ! 7516 ಕಿಲೋ ಮೀಟರ್ ಉದ್ದವಿರುವ ಭಾರತದ ಕರಾವಳಿ ತೀರವೇ ಸೈಕ್ಲೋನ್ ತವರುಮನೆಯಾಗಿದೆ! ಈಗ ಹವಾಮಾನ ವೈಪರೀತ್ಯಗಳಿಂದ ವರ್ಷಕ್ಕೊಂದು ಚಂಡಮಾರುತದ ಕಾಟ ದಕ್ಷಿಣ ಭಾರತದ ರಾಜ್ಯಗಳಿಗೆ ತಪ್ಪಿದ್ದಲ್ಲ ಎನ್ನುವಂತಾಗಿದೆ! 1970ರಲ್ಲೇ ಬಾಂಗ್ಲಾ ಮತ್ತು ಭಾರತದ ಕರಾವಳಿಗೆ ಅಪ್ಪಳಿಸಿದ್ದು ಭೋಲಾ ಎಂಬ ಚಂಡಮಾರುತ ಜಗತ್ತಿನ ಅತ್ಯಂತ ವಿನಾಶಕಾರಿ ಸೈಕ್ಲೋನ್ ಎಂಬ ಕುಖ್ಯಾತಿ ಹೊಂದಿದೆ. 1839ರಲ್ಲಿ ಕೊರಿಂಗ ಚಂಡಮಾರುತ ಬಂಗಾಳಕೊಲ್ಲಿ ಯಿಂದ ಭಾರತದ ಮೇಲೆ ಎರಗಿತ್ತು.
3ಲಕ್ಷಜನರು ಸಾವನ್ನಪ್ಪಿದ್ದರು. 1773ರಲ್ಲಿ ಹೋಗ್ಲಿ ನದಿ ಸೈಕ್ಲೋನ್ ಭಾರತ-ಬಾಂಗ್ಲಾ ಬಂಗಾಳ ಕೊಲ್ಲಿಯಲ್ಲಿ ಅಪ್ಪಳಿಸಿ ಮೂರುಲಕ್ಷ ಜನರನ್ನು ಬಲಿ ಪಡೆದಿತ್ತು. ಭಾರತಕ್ಕೆ ಈ ಡೆಡ್ಲೀ ಸೈಕ್ಲೋನ್ ಗಳೇನೂ ಹೊಸತಲ್ಲ ಆದರೆ ಇತ್ತೀಚಿನ ವರ್ಷಗಳಲ್ಲಿ ಮಾತ್ರ ಭಾರತದ ಕರಾವಳಿ ತೀರಗಳು ಈಶಾನ್ಯ ರಾಜ್ಯಗಳ ಮೇಲೆ ಹೆಚ್ಚಿನ ಚಂಡಮಾರುತಗಳ ದಾಳಿಯಾಗುತ್ತಿದೆ. ಉಗ್ರ ಚಂಡಮಾರುಗಳ (ವೆರಿ ಸಿವಿಯರ್ ಸೈಕ್ಲೋನಿಕ್ ಸ್ಟಾಮ್) ಗಾಳಿಯ ವೇಗ ಗಂಟೆಗೆ 116 ರಿಂದ 166 ಕಿಲೋ ಮೀಟರ್ ಇರುವುದಂತೇ! ಬಂಗಾಳ ಕೊಲ್ಲಿ ಸಮುದ್ರದಿಂದ ಎದ್ದು ಬಂದು ಇಡೀ ದಕ್ಷಿಣ ಭಾರತದ ರಾಜ್ಯಗಳನ್ನು ನೆರೆ ಪರಿಸ್ಥಿತಿಗೆ ದೂಡಿರುವ ಚಂಡಮಾರುತಗಳು
ಗಂಟೆಗೆ 180ರಿಂದ 200ಕಿ.ಮೀಟರ್ ವೇಗದಲ್ಲಿ ತಮಿಳು ನಾಡಿನ ಕರಾವಳಿ ತೀರಕ್ಕೆ ಅಪ್ಪಳಿಸಿದ್ದರಿಂದಲೇ ಈ ಪರಿಸ್ಥಿತಿ ಬಂದಿದೆ. ಇನ್ನು ಮತ್ತೊಂದು ಭೀಕರ ಚಂಡಮಾರುತದ ಭೀತಿಯಲ್ಲಿರುವ ದಕ್ಷಿಣ ಭಾರತೀಯರು ಏರುತ್ತಿರುವ ಸಮುದ್ರದ ತಾಪಮಾನವೇ ಈ ಎಲ್ಲಾ ಸೈಕ್ಲೋನ್ ಅವಘಡಗಳಿಗೆ ಕಾರಣವೆಂಬುದನ್ನು ಎಲ್ಲಾ ಭಾರತೀಯರಿಗೂ ಮನವರಿಕೆ ಮಾಡಿಕೊಡಬೇಕಿದೆ. ಏಕೆಂದರೆ ಸಮುದ್ರ ಸೇರುತ್ತಿರುವ ಎಣ್ಣೆ ಪದಾರ್ಥಗಳು, ವಿಷಕಾರಕ ಕೆಮಿಕಲ್ ರಾಸಾಯನಿಕ ವಸ್ತುಗಳು, ಇಂಧನಗಳು, ಪ್ಲಾಸ್ಟಿಕ್ ವಸ್ತುಗಳನ್ನು ನಿಷೇಧಿಸಬೇಕಾಗಿದೆ. ಮತ್ತು ನಾವು ಬಳಸುತ್ತಿರುವ ಇಂಧನಗಳಿಂದ, ಪೆಟ್ರೋಲ್ ಡೀಸೆಲ್ ಗ್ಯಾಸ್ ತೈಲ ಗಳಿಂದಲೂ, ಕಲ್ಲಿದ್ದಲು, ಅಣುವಿದ್ಯುತ್ ಸ್ಥಾವರ ಗಳಿಂದಲೂ ವಾತಾವರಣದಲ್ಲಿ ಕಾರ್ಬನ್ ಡೈಆಕ್ಸೈಡ್ ಹೆಚ್ಚಾಗಿ ಜಾಗತಿಕ ತಾಪಮಾನ ಏರಿಕೆ ಯಾಗುತ್ತಿದೆ! ಇದರಿಂದ ಹಿಮಶಿಖರ ಪರ್ವತಗಳು. ಕರಗಿ ಸಮುದ್ರ ಸೇರುತ್ತಿರುವುದರಿಂದಲೂ ಸಮುದ್ರದ ಮಟ್ಟ ಏರಿಕೆಯಾಗಿದೆ! ಮೇಘಸ್ಫೋಟ ಚಂಡಮಾರುತಗಳಿಂದ ನೆರೆಬಂದು ನದಿಗಳು ತುಂಬಿ ಸಮುದ್ರ ಸೇರುತ್ತಿರುವ ಮಾಲಿನ್ಯಯುಕ್ತ ನೀರು ವಾಯುಭಾರ ಕುಸಿತಕ್ಕೂ ಕಾರಣವಾಗುತ್ತಿದೆ. ಮೂರು ಕಡೆಯೂ ಸಮುದ್ರದಿಂದ ಆವ್ರತ್ತ ವಾಗಿರುವ ಈ ನಮ್ಮ ಜಂಬೂ ಧ್ವಿಪ ಭಾರತಕ್ಕೆ ಕರಾವಳಿ ತೀರಗಳದ್ದೆ ಗಂಡಾಂತರವೆನಿಸಿದೆ. ಏಕೆಂದರೆ ಸಮುದ್ರಕ್ಕಂಟಿದ ನಗರಗಳು ತಮ್ಮೊಡಲ ಸರ್ವ ತ್ಯಾಜ್ಯವನ್ನು ಕಡಲ ಒಡಲಿಗೇ ಸುರಿಯುತ್ತಿವೆ. ಆದ ಕಾರಣವೇ ಎಲ್ ನಿನೋ ವಿದ್ಯಮಾನಗಳು ಕೂಡ ಸಮುದ್ರದಲ್ಲಿ ವ್ಯತ್ಯಾಸ ಗೊಂಡಿವೆ! ಮುಂದೊಂದು ದಿನ ಜಾಗತಿಕ ತಾಪಮಾನ 1.5 ಡಿಗ್ರಿ ಸೆಲ್ಸಿಯಸ್ ಮುಟ್ಟಿದರೂ ಈ ಜಗತ್ತಿನಲ್ಲಿರುವ ನಾವೆಲ್ಲರೂ ಘೋರ ದುರಂತಗಳಿಗೆ ಬೆಲೆ ತೆರಬೇಕಾಗುತ್ತದೆ. ಬಿಸಿಗಾಳಿಗೆ 35ಕೋಟಿ ಜನರು ಬಲಿಯಾಗಬಹುದೆಂದು ಜಿನಿವಾ ವಿಜ್ಞಾನಿಯೊಬ್ಬ ಭವಿಷ್ಯ ನುಡಿದಿದ್ದಾನೆ. ಭಾರತ ದೇಶವೇ ಉಷ್ಣ ವಿದ್ಯುತ್ ಸ್ಥಾವರದ ಕಾರಣಕ್ಕೆ 900ದಶ ಲಕ್ಷ ಟನ್ ಇಂಗಾಲವನ್ನು ಪ್ರತಿ ವರ್ಷ ಹೊರ ಹಾಕಿ ಜಗತ್ತಿನಲ್ಲಿ ಐದನೇ ಸ್ಥಾನದಲ್ಲಿದೆ!ತಾಪಮಾನ ಏರಿಕಯೂ ಈ ಅಕಾಲಿಕ ಚಂಡಮಾರುತಳಿಗೆ ಕಾರಣವಾಗಿರಬಹುದೆಂದು ವಿಜ್ಞಾನಿಗಳಳೇ ಹೇಳುತ್ತಿದ್ದಾರೆ.
ಜಗತ್ತಿನ ಹಲವು ನಗರಗಳು ಈ ಶತಮಾದಲ್ಲೆ ಸಮದ್ರದ ಮಟ್ಟದ ಏರಿಕೆಯಿಂದ ಮುಳುಗಿ ಕಣ್ಮರೆಯಾಗುತ್ತವೆಂದು ನಾಸಾ ಹೇಳುತ್ತಿದೆ.ಭಾರತದ ಕರಾವಳಿ ಕಡಲ ತೀರದ ರಾಜ್ಯಗಳು ಸಮುದ್ರ ಮಟ್ಟದ ಏರಿಳಿತಗಳಿಗೆ ತಕ್ಕುದಾದ ಸಿದ್ದತೆ ಮಾಡಿಕೊಂಡು ಅಲ್ಲಿನ ನಗರಗಳ ಜನರನ್ನು ಬೇರೆಡೆಗೆ ಸ್ಥಳಾಂತರಿಸದಿದ್ದರೇ ಅಪಾಯ ಕಟ್ಟಿಟ್ಟ ಬುತ್ತಿ ಎಂದು ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ವಿಜ್ಞಾನಿ ಸುನಿಲ್ ಗವಾಸ್ಕರ್ ಎಚ್ಚರಿಸಿದ್ದಾರೆ. ಜಾಗತಿಕ ಸಮುದ್ರ ಮಟ್ಟ 1993 ಮತ್ತು 2012ರ ನಡುವೆಯೇ 3.3ಮಿಮೀಟರ್ ಆಗುವ ಮೂಲಕ ದ್ವಿಗುಣ ಆಗಿದೆಯೆಂದು ಹವಾಮಾನ ತಜ್ಞೆ ಸ್ವಪ್ನ ಪಾನಿಕಲ್ ಹೇಳಿದ್ದಾರೆ. ಈ ಎಲ್ಲಾ ಕಾರಣಗಳಿಗಾಗಿ ನಾವು ಹಲವಾರು ಪರ್ಯಾಯಗಳನ್ನು ರೂಪಿಸಿಕೊಳ್ಳಲೇಬೇಕಿದೆ. ಕಲ್ಲಿದ್ದಲು ಬಳಸುವುದನ್ನು, ಅಣುವಿದ್ಯುತ್ ಬಳಸುವುದನ್ನು, ಪೆಟ್ರೋಲ್ ಡೀಸೆಲ್ ಬಳಸುವುದನ್ನು ಪ್ಲಾಸ್ಟಿಕ್ ವಸ್ತುಗಳನ್ನು ಬಳಸುವುದನ್ನು ಕಡಿಮೆಮಾಡಿ ಜಾಗತಿಕ ತಾಪಮಾನವನ್ನು ತಗ್ಗಿ ಸಲೇಬೇಕಿದೆ. ನದಿಗಳನ್ನು ಕಲುಷಿತ-ಮಾಲಿನ್ಯಗೊಳಿಸಿ ಸಮುದ್ರಕ್ಕೆ ವಿಷಹಾಕುವುದನ್ನು ತ್ಯಜಿಸಬೇಕಿದೆ. ನಮ್ಮನ್ನಾಳುವ ಸರ್ಕಾರಗಳು ಕಠಿಣ ಕಾನೂನುಗಳನ್ನು ಜಾರಿಗೊಳಿಸಿ ಜಗತ್ತಿನ ತಾಪಮಾನ ಕಡಿಮೆಗೊಳಿಸಲು, ಹೆಚ್ಚು ಹೆಚ್ಚು ಅರಣ್ಯ ಉಳಿಸಿ ಬೆಳೆಸಲು ಕಟಿಬದ್ದವಾಗಬೇಕಿದೆ. ಇಂದಿನ ಯುವ ಜನಾಂಗ ಪರಿಸರವನ್ನು ಶುದ್ಧ ಹವಾಮಾನ-ವಾತಾವರಣ ವನ್ನು ಕಾಪಾಡಲು-ಉಳಿಸಲು ಪಣತೊಬೇಕಿದೆ. ಏಕೆಂದರೆ ನಮಗೆ ಮಳೆಯ ಮಾರುತಗಳಷ್ಟೇ ಬೇಕಿದೆ;ಚಂಡಮಾರುತಗಳ ಹಿಂದೆ ಜಗತ್ತಿನ ಸಾವಿದೆ!