ತುರುವನೂರು ಮಂಜುನಾಥ
ಮೊನ್ನೆ ಅಮೆಜಾನ್ ಮತ್ತು ಗೂಗಲ್ ಗಳು ಕನ್ನಡಭಾಷೆಗೆ ಅವಮಾನ ಮಾಡಿದ ವಿಷಯವನ್ನು ಸರ್ಕಾರ ಅಷ್ಟೊಂದು ಗಂಭೀರವಾಗಿ ಪರಿಗಣಿಸಲಿಲ್ಲ, ಒಂದು ಹೇಳಿಕೆಯನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರು ಕೊಟ್ಟು ಸುಮ್ಮನಾಗಿ ಬಿಟ್ಟರು. ಆದರೆ ಅದರ ಹಿಂದೆ ಅಡಗಿರುವ ಉದ್ದೇಶವೇನು ಎನ್ನುವುದನ್ನು ಕೆದಕಲಿಲ್ಲ. ಕನ್ನಡ ಅಭಿವೃದ್ಧಿ ಪ್ರಾಧಿಕಾರವಾಗಲಿ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಾಗಲಿ ಅದರ ಹಿಂದೆ ಬೀಳಲಿಲ್ಲ ಆದ ಒಂದು ಘಟನೆಗೆ ಹೇಳಿಕೆಗಳನ್ನು ಬಿಡುಗಡೆ ಮಾಡಿ ತೆಪ್ಪಗಾಗಿಬಿಟ್ಟವು.
ಇದು ಅಷ್ಟೊಂದು ಬೇಕಾಬಿಟ್ಟಿ ಕೆಲಸವೇ? ಒಂದು ಭಾಷೆ ಒಂದು ರಾಜ್ಯದ ಮರ್ಯಾದ ಪ್ರಶ್ನೆ ಯಾಕೆ ಹೀಗಾಯಿತು? ಅದರ ಹಿಂದಿನ ಉದ್ದೇಶಗಳೇನು ಎನ್ನುವುದನ್ನು ಕೆದಕಲಿಕ್ಕೆ ಹೋಗಲಿಲ್ಲ, ಒಂದು ವೇಳೆ ಇದನ್ನು ಉದ್ದೇಶಪೂರ್ವಕವಾಗಿಯೇ ಮಾಡಲಾಗುತ್ತಿದೆಯೇ ಎನ್ನುವುದು ಈ ಪ್ರಶ್ನೆಯಾಗಿದೆ.
ಇದರ ಬೆನ್ನತ್ತಿ ಹೋದವರು ಇದರ ಒಳಮರ್ಮವನ್ನು ಅರಿತ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ತ್ರಿಭಾಷ ಸೂತ್ರ ಹೇರಿಕೆಯ ಒಂದು ಭಾಗದ ಕೊಂಡಿ ಇದು ಎನ್ನುವುದನ್ನು ಹೇಳಿದ್ದಾರೆ. ಅಂದರೆ ಇಲ್ಲಿ ಕಂಪನಿಗಳ ಪಾತ್ರಕ್ಕಿಂತಲು ಭಾಷೆಯ ಮೇಲಿನ ಅಭಿಮಾನ ಕೇವಲ ಅಭಿಮಾನವಾಗದ ಅದು ಕನ್ನಡ ಕರ್ನಾಟಕಕ್ಕೆ ಸಿಗಬೇಕಾದ ನ್ಯಾಯದ ವಿಚಾರದಲ್ಲಿ ಕೇಂದ್ರಿಕೃತವಾಗಬೇಕು ಎಂದಿದ್ದಾರೆ.
ಈ ವಿಷಯದ ಬಗ್ಗೆ ಮುಖ್ಯಮಂತ್ರಿಯಾದಿಯಿಂದ ಹಿಡಿದು ಯಾವ ಸಚಿವರು ಯಾವ ರಾಜಕಾರಣಿಗಳು ವಿರೋಧ ಪಕ್ಷಗಳು ಧ್ವನಿ ಎತ್ತಲಿಲ್ಲ ಯಾಕೆಂದರೆ ಒಂದು ರಾಷ್ಟ್ರೀಯ ಪಕ್ಷಗಳು ಕೇಂದ್ರದ ವಿರುದ್ಧ ತಮ್ಮ ಪಕ್ಷದ ಧೋರಣೆಗಳಿಗೆ ಮಣಿಹಾಕಿಬಿಡುತ್ತವೆ ಹಾಗಾಗಿಯೆ ಇಂತ ಭಾಷಾಭಿಮಾನದ ವಿಷಯದಲ್ಲಿ ತೆಪ್ಪಗಾಗಿಬಿಡುತ್ತವೆ ಅದಕ್ಕೆ ಪ್ರಾದೇಶಿಕ ಪಕ್ಷಗಳ ಅಗತ್ಯ ಎನ್ನುವುದು. ಪಕ್ಕದ ರಾಜ್ಯಗಳಲ್ಲಿರುವ ಪ್ರಾದೇಶಿಕ ಪಕ್ಷಗಳು ಮತ್ತು ಅಲ್ಲಿ ತಮ್ಮ ರಾಜ್ಯದ ಭಾಷಾಭಿಮಾನವನ್ನು ನಾವು ಗಮನಿಸಿದರೆ ಅದರ ಅರಿವು ಗೊತ್ತಾಗುತ್ತದೆ .ಎರಡು ಕಂಪನಿಗಳು ಕನ್ನಡ ಭಾಷೆಯನ್ನು ಇಡೀ ಜಗತ್ತಿನಲ್ಲಿಯೇ ಕನ್ನಡ ಭಾಷೆಯನ್ನು ಅವಮಾನಿಸುವ ರೀತಿಯಲ್ಲಿ ನಡೆದುಕೊಂಡಿವೆ ಹೀಗಿರುವಾಗ ಕನ್ನಡಿಗರ ಧ್ವನಿ ಹೆಚ್ಚಾಗಬೇಕಿತ್ತು ಆದರೆ ಕೊರೊನಾದಂತಹ ಈ ಸಂದರ್ಭದಲ್ಲಿ ಸಾಮಾಜಿಕ ಜಾಲತಾಣಗಳ ಮೂಲಕ ಆ ಪ್ರತಿಭಟನೆ ನಡೆದಿವೆ , ನಿರೀಕ್ಷೆಗೂ ಮೀರಿ ಸಾಮಾಜಿಕ ಜಾಲತಾಣಗಳಲ್ಲಿ ಎರಡು ಕಂಪನಿಗಳನ್ನು ತರಾಟೆಗೆ ತಗೆದುಕೊಳ್ಳಲಾಗಿದೆ .ಇದನ್ನು ಮನಗಂಡೆ ಆ ಕಂಪನಿಗಳು ತಕ್ಷಣ ಜಾಗೃತಿಗೊಂಡವು ಎನ್ನುವುದು ಬೇರೆ ಪ್ರಶ್ನೆ ಆದರೆ ಇಂತಹ ಅಜಾಗರುಕತೆ ಆಗುವ ಮುನ್ನವೇ ಕನ್ನಡದ ಬಗ್ಗೆ ಅವರಿಗೆ ಅರಿವಿರಬೆಕಿತ್ತು ಎನ್ನುವುದು ಇಲ್ಲಿನ ಪ್ರಶ್ನೆ.
ಕನ್ನಡಿಗರಾದ ನಾವು ಆ ಕಂಪನಿಗಳು ಕನ್ನಡಕ್ಕೆ ಮಾಡಿದ ಅವಮಾನ ಇದೆಯಲ್ಲ ಅದು ಅಚಾತುರ್ಯವಾಗಿ ನಡೆದು ಹೋದ ಪ್ರಮಾದವಲ್ಲ ಅದರ ಹಿಂದೆ ಇರುವ ಉದ್ದೇಶಗಳು ಸ್ಪಷ್ಟವಾಗಬೇಕು ಮತ್ತು ಈ ರೀತಿ ಪದೆ ಪದೆ ಪ್ರಮಾದ ಎನ್ನುವ ಮೂಲಕ ಕನ್ನಡಕ್ಕೆ ಮಾಡುವ ಅಪಮಾನಗಳು ತಪ್ಪಬೇಕು.ಇಲ್ಲದವಾದರೆ ಕನ್ನಡಿಗರು ಹಿಂದಿ ಹೇರಿಕೆ ಭಾಷೆ ಅದರ ಹಿಂದೆಯೇ ನುಸುಳಿಕೊಂಡು ಬಂದು ಅಬ್ಬರಿಸಿದರೆ ಕನ್ನಡಿಗರ ದುರಂತವಾಗಿಬಿಡುತ್ತದೆ ಹಾಗಾಗಿ ಇದನ್ನು ಗಂಭೀರವಾಗಿ ನಾವು ಪರಿಗಣಿಸಬೇಕು ಮತ್ತು ತ್ರಿಭಾಷಾ ಸೂತ್ರವನ್ನು ಖಂಡಿಸುವ ಮೂಲಕ ಈ ಪ್ರಮಾದವನ್ನು ಸಹಿಸದೆ ಹೋರಾಟಗಳು ನಡೆಯಬೇಕು. ಈಗಾಗಲೇ ತ್ರೀಭಾಷಾ ಸೂತ್ರದ ಬಗ್ಗೆ ಇಡೀ ರಾಜ್ಯವೇ ಖಂಡಿಸಿದೆ ಪ್ರತಿಪಕ್ಷಗಳು ಆ ನಿಲುವನ್ನು ಉಗ್ರವಾಗಿ ಖಂಡಿಸಿವೆ.
ಇವೆಲ್ಲವನ್ನು ಮುಂದುವರೆಸಿ ಕುಮಾರಸ್ವಾಮಿ ಇನ್ನೊಂದು ಮಾತನ್ನು ಹೇಳಿದ್ದಾರೆ ಕನ್ನಡಿಗರ ಭಾಷಾಭಿಮಾನವನ್ನು ಅಮೇಜಾನ್, ಗೂಗಲ್ ಕೆಣಕಿದ್ದವೋ, ಇಲ್ಲವೇ ಪಟ್ಟಭದ್ರರು ಕೆಣಕಿದ್ದರೋ.. ಆದರೆ, ಕನ್ನಡಿಗರು ಖಚಿತವಾಗಿ ಸಿಡಿಯುತ್ತಾರೆ ಎಂಬ ಉತ್ತರ ಕೆಣಕಿದವರಿಗೆ ಸಿಕ್ಕಿದೆ. ಆದರೆ, ಈ ಸಣ್ಣ ವಿಚಾರಗಳೇ ವೈಭವೀಕರಣಗೊಂಡು, ಚರ್ಚೆಯಾಗಬೇಕಾದ ಗಂಭೀರ ವಿಚಾರಗಳು ಮರೆಯಾಗದಿರಲಿ. ಕನ್ನಡ,ಕರ್ನಾಟಕಕ್ಕೆ ಸಿಗಬೇಕಾದ ನ್ಯಾಯ ದೊಡ್ಡದಿದೆ ಎಂದು ಟ್ವೀಟ್ ನಲ್ಲಿ ಉಲ್ಲೇಖಿಸಿದ್ದಾರೆ.
ಬಾವುಟದ ಜೊತೆಗೇ, ಕರ್ನಾಟಕದ ರಾಜ್ಯಲಾಂಛನವನ್ನೂ ಅಮೆಜಾನ್ ಅಮಾನಿಸಿದೆ. ಇದು ಸರ್ಕಾರಕ್ಕೆ ಮಾಡಲಾದ ಅಪಮಾನ. ಸರ್ಕಾರ ಸಂವಿಧಾನದ ಅಂಗ. ಹೀಗಾಗಿ ಅಮೇಜಾನ್ನಿಂದ ಬಹುದೊಡ್ಡ ಅಪಚಾರವಾಗಿದೆ. ಅಮೆಜಾನ್ ವಿರುದ್ಧ ಕ್ರಮ ಕೈಗೊಳ್ಳಲು ಸಾಧ್ಯವೇ ಎಂಬುದರತ್ತ ರಾಜ್ಯ ಸರ್ಕಾರ ಗಮನ ಹರಿಸಬೇಕು. ಮುಂದೆ ಇಂಥ ಮುಜುಗರ ತಪ್ಪಿಸಲು ಇದು ಅಗತ್ಯ ಆದರೆ ರಾಜ್ಯ ಸರ್ಕಾರ ಇದರ ಬಗ್ಗೆ ಮತ್ತೆ ಚಕಾರವೇ ಎತ್ತಿಲ್ಲ ಕನ್ನಡ ಮತ್ತು ಸಂಸ್ಕೃತಿ ಸಚಿವರು ಇದರತ್ತ ಚಿತ್ತ ಹರಿಸಬೇಕು ಆದರೆ ಅವರೂ ಒಂದು ಹೇಳಿಕೆ ಕೊಟ್ಟು ಮುಗಿಯುತು ಎನ್ನುವ ಲೆಕ್ಕಾಚಾರದಲ್ಲಿದ್ದಾರೆ .ಆದರೆ ಇವರೆಡು ಕಂಪನಿಗಳು ಮಾಡಿರುವುದು ಸಣ್ಣ ಅಪರಾಧವಲ್ಲ ಎನ್ನುವ ಗಂಭೀರತೆ ಅವರ ಮನಸ್ಸಿಗೆ ಹೋದಂತಿಲ್ಲ ಅಥವಾ ಅಧಿಕಾರಿಗಳು ಕೂಡ ಇದರ ಬಗ್ಗೆ ಗಂಭೀರವಾಗಿ ಪರಿಗಣಿಸಿದಂತೆ ಕಾಣುತ್ತಿಲ್ಲ ಇಲ್ಲವಾದರೆ ಅ ಕಂಪನಿಗಲ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕಿತ್ತು ಅಂತ ಯಾವ ಪ್ರಯತ್ನಕ್ಕೂ ಸರ್ಕಾರ ಕೈ ಹಾಕಲಿಲ್ಲ ಎನ್ನುವುದು ಕನ್ನಡಿಗರ ದುರಂತ.
ಗೂಗಲ್, ಅಮೆಜಾನ್ಗಳಲ್ಲಿ ಈಗ ಆಗಿರುವ ಅವಮಾನಕಾರಕ ಘಟನೆಗಳು ಇವುಗಳನ್ನು ಪ್ರಶ್ನಿಸುವಾಗ, ಇದಕ್ಕೆ ಕಾರಣವಾದ ನಮ್ಮ ಕ್ರಿಯಾಹೀನ ಅರಿವನ್ನೂ ಆತ್ಮವಿಮರ್ಶೆಗೆ ಒಡ್ಡಿಕೊಳ್ಳಬೇಕಾಗಿದೆ.ಆದರೆ ಅಂತ ಯಾವ ಆತ್ಮವಿಮರ್ಶೆಯನ್ನು ಸರ್ಕಾರ ಮಾಡಲಿಲ್ಲ. ಆಳುವ ಸರ್ಕಾರಗಳು ಯಾವ ಕಾಲದಲ್ಲೂ ಭಾಷೆ, ಸಾಹಿತ್ಯ, ಸಂಸ್ಕೃತಿಗಳ ಪ್ರವರ್ಧನೆಯನ್ನು ತಮ್ಮ ಆದ್ಯತೆಯ ವಲಯವೆಂದು ಪರಿಗಣಿಸಿಲ್ಲ. ಸರ್ಕಾರದ ಈ ಉದಾಸೀನ ಧೋರಣೆನ್ನೇ ಅನುಸರಿಸುತ್ತಾ ಬಂದಿದೆ. ಆದರೆ ಜನಭಾಷೆಗಳು ಜನಸಾಮಾನ್ಯರ ಕಾಳಜಿ-ಕಳಕಳಿಯಿಂದ ದೂರವಾಗುತ್ತಿರುವುದು ಅದಕ್ಕಿಂತಲೂ ಮಿಗಿಲಿನ ದುರಂತವಾಗಿದೆ. ಕಳೆದ ರಾಜ್ಯೋತ್ಸವದಂದು ನಮ್ಮ ಮುಖ್ಯಮಂತ್ರಿ ಇಡೀ ವರ್ಷವನ್ನು ‘ಕನ್ನಡ ಕಾಯಕ ವರ್ಷ’ವನ್ನಾಗಿ ಆಚರಿಸೋಣವೆಂದು ಕರೆ ನೀಡಿದ್ದರು. ಆದರೆ ಬಜೆಟ್ನಲ್ಲಿ ಕನ್ನಡದ ಪ್ರವರ್ಧನೆಗೆ, ಅಂದರೆ ಕನ್ನಡ ಅಭಿವೃದ್ಧಿ ಪ್ರಾಧಿಕಾರವೇ ಮುಂತಾದ ಸಾಹಿತ್ಯಿಕ, ಸಾಂಸ್ಕೃತಿಕ ಸಂಸ್ಥೆಗಳಿಗೆ ತೀರಾ ನಿರಾಶಾದಾಯಕವಾದ ಅನುದಾನದ ಮೊತ್ತವನ್ನು ತೆಗೆದಿರಿಸಿದರು ಆದರೆ ಮಠ-ಮಾನ್ಯಗಳಿಗೆ ದಾರಳವಾಗಿ ಅನುದಾನವನ್ನು ಘೋಷಣೆ ಮಾಡಿದರು.ಇದು ಕನ್ನಡದ ಪ್ರೀತಿ,ಕನ್ನಡಕ್ಕೆ ತೋರುತ್ತಿವ ಅಭಿಮಾನ ಇಲ್ಲಿ ಭಾಷೆಗಿಂತಲೂ ಮತಗಳ ಮೇಲೆ ರಾಜಕಾರಣಿಗಳ ಓಲೈಕೆ ಹೀಗಾಗಿಯೇ ಇಂದು ಕನ್ನಡ ಭಾಷೆಗೆ ಇಂತ ಕಂಪನಿಗಳು ತೋರುತ್ತಿರುವ ಉದ್ಧಟತನ , ಇಂತ ಉದ್ಧಟತನಕ್ಕೆ ಸರ್ಕಾರ ಯಾಕೆ ಉಗ್ರ ನಿಲುವು ತಾಳಬಾರದು? ಊಹು ಅದು ಯಾವ ಕಾಲಕ್ಕೂ ಆಗುವುದಿಲ್ಲವೇ ಎನ್ನುವ ಅನುಮಾನಗಳು ಮೂಡುತ್ತಿವೆ.
.ಸರ್ಕಾರವು ಮುತುವರ್ಜಿಯಿಂದ ಕನ್ನಡವನ್ನು ಕಟ್ಟುವ ಕೆಲಸ ಮಾಡಲು ಮುಂದಾದರೆ ಅದಕ್ಕೆ ಯಾರೂ ಆಕ್ಷೇಪಿಸುವುದಿಲ್ಲ. ಆದರೆ ಹಾಗೆ ಬೆಳೆಸುವ ಮಾರ್ಗೋಪಾಯಗಳನ್ನು ಶೋಧಿಸುವ ಕೆಲಸವನ್ನು ನಾವಿಂದು ಪ್ರಾರಂಭಿಸಬೇಕಾಗಿದೆ. ಕನ್ನಡವನ್ನು ಅನ್ನದ ಭಾಷೆಯನ್ನಾಗಿ ರೂಪಿಸಬೇಕೆಂದು ಭಾಷಣ ಮಾಡುತ್ತೇವೆ. ಆದರೆ, ಈ ದಿಸೆಯಲ್ಲಿ ಪ್ರಯತ್ನ ಮಾಡುವುದನ್ನೇ ಮರೆತಿದ್ದೇವೆ.ಕನ್ನಡಿಗರಿಗೆ ಅನ್ನದ ದಾರಿಯನ್ನು ಸೃಷ್ಟಿಸಬೇಕಾಗಿದೆ. ಕನ್ನಡ ಪ್ರೇಮ ಬರಿದೇ ಘೋಷಣೆ, ಪ್ರಚಾರ, ಪ್ರದರ್ಶನಗಳಿಗೆ ಸೀಮಿತವಾದರೆ ಸಹಜವಾಗಿಯೇ ಜನಸಾಮಾನ್ಯರು ಕನ್ನಡ ಕಾಯಕದ ವಿಷಯದಲ್ಲಿ ಉತ್ಸಾಹಶೂನ್ಯರಾಗುತ್ತಾರೆ. ನಾಡು-ನುಡಿ, ಸಂಸ್ಕೃತಿ ಪೋಷಣೆಗೆ ಸರ್ಕಾರವು ಅನುದಾನ ಕಡಿತ ಮಾಡುವುದು ಸರ್ವಥಾ ಸಮರ್ಥನೀಯವಲ್ಲ. ಆದರೆ ಈ ಬಗ್ಗೆ ಜನಸಾಮಾನ್ಯರು, ನಿಜವಾದ ಕನ್ನಡ ಪ್ರೀತಿಯುಳ್ಳವರು ಏಕೆ ಸೊಲ್ಲೆತ್ತುತ್ತಿಲ್ಲ ಎಂಬುದರ ಕುರಿತು ಸಹ ನಾವು ವಿವೇಚಿಸಬೇಕಾಗಿದೆ.
ಕನ್ನಡಿಗರ ಮೇಲೆ ಆಗುತ್ತಿರುವ ದಬ್ಬಾಳಿಕೆಗೆ ಕನ್ನಡಿಗರು ಹಲವಾರು ಉಗ್ರ ಹೋರಾಟಗಳನ್ನು ಮಾಡುವ ಮೂಲಕ ಕನ್ನಡಿಗರ ಸಾರ್ವಭೌತ್ವದ ಅರಿವನ್ನು ಮೂಡಿಸಿದ್ದಾರೆ ಕನ್ನಡ ಸಂಘಟನೆಗಳು ಇಂತಹ ಹೋರಾಟಗಳಲ್ಲಿ ತಮ್ಮ ನಾಡಿನ ಹಿರಿಮೆಗೆ ಬೆನ್ನಾಗಿ ನಿಂತಿವೆ ಆದರೆ ಅಷ್ಟೆ ಸಾಲದು ಸರ್ಕಾರವೂ ತಮ್ಮ ದೋರಣೆಯನ್ನು ದೃಡೀಕರಿಸಬೇಕಾಗುತ್ತದೆ ಆದರೆ ಅದು ರಾಷ್ಟ್ರೀಯ ಪಕ್ಷಗಳಿಂದ ಆಗುವ ಕೆಲಸವಲ್ಲ ಬದಲಾಗಿ ಪ್ರಾದೇಶಿಕ ಪಕ್ಷಗಳ ಅಗತ್ಯವಿದೆ .