ಚಿತ್ರಲೇಖನ – ಹ.ಸ.ಬ್ಯಾಕೋಡ
ಆವತ್ತು ಭಾನುವಾರ ಬೆಳಿಗ್ಗೆ ಮಗಳೊಂದಿಗೆ ಮನೆಯ ಹತ್ತಿರದ ಕೆರೆಯ ದಂಡೆ ಮೇಲೆ ವಾಯುವಿಹಾರಕ್ಕೆ ಹೋಗಿದ್ದೆ. ಆ ಕೆರೆ ದಂಡೆಯ ಮೇಲೆ ಕೊಡೆಯಾಕಾರದಲ್ಲಿ ಬೆಳೆದು ನಿಂತಿದ್ದ ಗಸಗಸೆ ಗಿಡ ಗಮನಸೆಳೆಯಿತು. ಅದರಲ್ಲೂ ವಿಶೇಷವಾಗಿ ಕಾಣಿಸಿತು. ಕಾರಣ ಗಿಡದ ತುಂಬ ಬಿಳಿ ಬಣ್ಣದ ಸಣ್ಣ ಸಣ್ಣ ಹೂವುಗಳು ಅರಳಿದ್ದವು. ಅವುಗಳನ್ನು ನೋಡಿದ ಮಗಳು ಶ್ರೀವೇದ, ‘ಅಪ್ಪಾ, ಹೂವು ಬೇಕು ಹೂ… ಎಂದು ಒಂದೇ ಸಮನೆ ಹಠಹಿಡಿದಳು.
ಆ ಕೂಡಲೇ ನನ್ನ ಕೊರಳಲ್ಲಿದ್ದ ಕ್ಯಾಮರಾವನ್ನು ಪಕ್ಕದ ಕಲ್ಲು ಬಂಡೆಯ ಮೇಲೆ ಜೋಪಾನವಾಗಿ ಇಟ್ಟು ಮಗಳನ್ನು ಮೇಲಕ್ಕೆ ಗಿಡದತ್ತ ಎತ್ತಿ ಹಿಡಿದೆ. ಹೂವನ್ನು ಕಿತ್ತುಕೊಳ್ಳಲು ತಿಳಿಸಿದೆ. ಮಗಳು ಹೂವನ್ನು ಕಿತ್ತುಕೊಳ್ಳಲು ತನ್ನ ಪುಟ್ಟ ಕೈಗಳನ್ನು ಚಾಚುತ್ತಿದ್ದಂತೆ ಪುರ್ರನೆ ಪುಟ್ಟದೊಂದು ಹಕ್ಕಿ ಹಾರಿತು. ಅದು ಬಾಯಿಯಲ್ಲಿ ಹಳದಿ ಬಣ್ಣದ ಹಣ್ಣನ್ನು ಕಚ್ಚಿಕೊಂಡಿತ್ತು. ಪಕ್ಕದ ಟೊಂಗೆಯಲ್ಲಿಯೇ ಕುಳಿತ ಅದು ನಮ್ಮನ್ನೊಮ್ಮೆ ಇಣುಕಿ ನೋಡಿತು. ಕಿಂಚಿತ್ತು ತಲೆ ಕೆಡಿಸಿಕೊಳ್ಳದೆ ಹಣ್ಣನ್ನು ಕಚ್ಚಿ ಕಚ್ಚಿ ರಸವನ್ನು ಹಿರತೊಡಗಿತು.
ಆ ಹಕ್ಕಿಯನ್ನು ನೋಡಿದ ಮಗಳು ಹೂವನ್ನು ಕೀಳುವುದನ್ನು ಬಿಟ್ಟಳು. ‘ಅಪ್ಪಾ ಆ ಹಕ್ಕಿ ಬೇಕು. ಹಿಡಿದು ಕೊಡು… ಎಂದು ಹಠ ಹಿಡಿದಳು.
‘ಹಕ್ಕಿ ಹಣ್ಣು ತಿಂತಿದೆ. ಅದಕ್ಕೆ ತೊಂದರೆ ಕೊಡಬಾರದು. ಅದು ಹಣ್ಣು ತಿಂದಾದ ಮೇಲೆ ಅದನ್ನು ಹಿಡಿದು ನಿಂಗೆ ಕೊಡುವೆ. ಈಗ ಅದನ್ನು ನೋಡುತ್ತಿರು ಎಂದು ಸಮಾಧಾನಪಡಿಸಿದೆ. ಆಗವಳು ಬೆರಗುಗಣ್ಣಿನಿಂದ ಆ ಹಕ್ಕಿಯನ್ನೇ ನೋಡುತ್ತ ನಿಂತುಬಿಟ್ಟಳು. ಆಗ ನಾನು ಇದೇ ಸುಸಂದರ್ಭ ಎಂದುಕೊಂಡು ಕಲ್ಲು ಬಂಡೆಯ ಮೇಲೆ ಇಟ್ಟಿದ್ದ ಕ್ಯಾಮರಾವನ್ನು ಕೈಗೆತ್ತಿಕೊಂಡೆ. ಅಷ್ಟರಲ್ಲಿ ಹಕ್ಕಿ ತನ್ನ ಬಾಯಿಯಲ್ಲಿ ಕಚ್ಚಿಕೊಂಡಿದ್ದ ಹಣ್ಣನ್ನು ತಿಂದು ಸಿಪ್ಪೆಯನ್ನು ನೆಲಕ್ಕೆ ಬಿಸಾಡಿ ಬಿಟ್ಟಿತು. ಛೇ ಎಂಥಾ ಒಳ್ಳೆಯ ಚಿತ್ರವನ್ನು ಸೆರೆಯುವ ಅವಕಾಶ ಕೈತಪ್ಪಿತಲ್ಲವೆಂದು ಬೇಸರದಿಂದ ಕ್ಯಾಮರಾವನ್ನು ಕೆಳಗಿಸಿದೆ. ಪಕ್ಕದಲ್ಲಿದ್ದ ಮಗಳತ್ತ ಕಣ್ಣಾಯಿಸಿದೆ. ಆಗವಳು ಆ ಹಕ್ಕಿಯನ್ನೇ ನೋಡುತ್ತಿದ್ದಳು. ಅವಳ ಮುಖದಲ್ಲಿ ಒಂದು ಥರಾ ಖುಷಿ ಇತ್ತು. ನಿಂತಲ್ಲೇ ಪುಟಿಯುತ್ತಿದ್ದಳು. ಕೂಡಲೇ ಅವಳು, ‘ಅಪ್ಪಾ ಅಲ್ನೋಡು, ಹಕ್ಕಿ ಮತ್ತೆ ಹಣ್ಣು ತಿಂತಿದೆ… ಎಂದು ಮೇಲಕ್ಕೆ ಕೈ ತೋರಿಸಿದಳು.
ತಟ್ಟನೆ ಅವಳು ಕೈ ತೋರಿಸಿದ ಕಡೆ ಕಣ್ಣಾಯಿಸಿದೆ. ನಿಜ, ಆ ಹಕ್ಕಿ ಮತ್ತೊಂದು ಹಣ್ಣನ್ನು ಕಚ್ಚಿಕೊಂಡಿತ್ತು. ಈ ಬಾರಿ ನಿಧಾನವಾಗಿ ಹಣ್ಣನ್ನು ತಿನ್ನಲು ಪ್ರಯತ್ನಿಸುತ್ತಿತ್ತು. ಕಾರಣ ಆ ಹಣ್ಣು ಸರಿಸುಮಾರು ಆ ಹಕ್ಕಿಯ ತಲೆಗಿಂತ ಕೊಂಚ ಸಣ್ಣದಿತ್ತು. ಪೂರ್ತಿಯಾಗಿ ಹಣ್ಣಾಗಿರದ ಆ ಗಸಗಸೆ ಹಣ್ಣು ತಿಳಿಹಳದಿ ಬಣ್ಣಕ್ಕೆ ತಿರುಗಿತ್ತು. (ಪೂರ್ತಿ ಹಣ್ಣಾದಾಗ ಗಸಗಸೆ ಹಣ್ಣು ಕೆಂಪು ಬಣ್ಣಕ್ಕೆ ತಿರುಗುತ್ತದೆ) ಹಾಗಾಗಿ ಆ ಹಣ್ಣು ಸ್ವಲ್ಪ ಗಟ್ಟಿಯಾಗಿತ್ತು. ಆದ್ದರಿಂದ ಆ ಪುಟ್ಟ ಹಕ್ಕಿ ಹಣ್ಣನ್ನು ಆಗಾಗ ಹೊರಳಿಸಿ ಹೊರಳಿಸಿ ಮೇಲಕ್ಕೆ ಹಾರಿಸಿ ತನ್ನ ಚಿಕ್ಕದಾದ ಕೊಕ್ಕಿನಲ್ಲಿ ಬಲವಾಗಿ ಕಚ್ಚಲು ಪ್ರಯತ್ನಿಸುತ್ತಿತ್ತು. ಆಗ ನಾನು ಅದರ ಕಾರ್ಯವೈಖರಿಯನ್ನು ಕ್ಯಾಮರಾದೊಳಗೆ ಬಂಧಿಸತೊಡಗಿದೆ.
ಆ ಒಂದು ಹಣ್ಣನ್ನು ತಿನ್ನಲು ಆ ಪುಟ್ಟ ಹಕ್ಕಿ ಬರೋಬರಿ ಐದಾರು ನಿಮಿಷ ತೆಗೆದುಕೊಂಡಿತು. ಅದು ಹಂತ ಹಂತವಾಗಿ ಹಣ್ಣನ್ನು ಮೆತ್ತಗೆಗೊಳಿಸಿ ಮುಕ್ಕಿತು. ಕೆಲವು ಕ್ಷಣಗಳ ಬಳಿಕ ಈ ಹಕ್ಕಿ ತನ್ನ ಚೊಂಚನ್ನು ಟೊಂಗೆಗೆ ಒರೆಸಿ ಶುಚಿಗೊಳಿಸಿಕೊಂಡಿತು. ಅಲ್ಲದೆ ನಮ್ಮ ಕಡೆಗೆ ಒಮ್ಮೆ ತಿರುಗಿ ನೋಡಿದ ಹಕ್ಕಿ ಪುಟಕನೆ ಹಿಕ್ಕೆ ಹಾಕಿತು. ಅದನ್ನು ಗಮನಿಸಿದ ಮಗಳು, ‘ಅಪ್ಪಾ ಹಕ್ಕಿ ಕಕ್ಕಾ ಪೀಯಾ ಮಾಡಿತು… ಛೀ… ಎಂದು ಮುಖ ಕಿವುಚಿಕೊಂಡಳು.
ಆ ಕೂಡಲೇ ನಾನು, ‘ನೋಡ್ದಾ ಮಗಳೇ, ಹಕ್ಕಿ ಕಕ್ಕಾ ಪೀಯಾ ಮಾಡಿತು. ಆ ಹಕ್ಕಿ ನಿಂಗೆ ಬೇಡ ಅಲ್ವಾ? ಎಂದು ಕೇಳಿದೆ.
‘ಇಲ್ಲ ಅಪ್ಪಾ, ಆ ಹಕ್ಕಿ ಬೇಕು. ಕಕ್ಕಾ ಪೀಯಾ ಮಾಡಿದರೇನಾಯಿತು. ಅದನ್ನ ಮನೆಗೆ ತೆಗೆದುಕೊಂಡು ಹೋಗಿ ಸ್ನಾನ ಮಾಡಿಸೋಣ… ಎಂದಳು.
ಆಗ ನಾನು ತಟ್ಟನೆ, ‘ಅಲ್ನೋಡು, ಹಕ್ಕಿ ಮತ್ತೆ ಹಣ್ಣು ತಿನ್ನುತ್ತಿದೆ. ನಿನ್ನ ಕಡೆ ನೋಡುತ್ತಿದೆ ಎಂದು ಹೇಳಿದೆ.
ಮಗಳು ಮತ್ತೆ ಹಕ್ಕಿಯತ್ತ ಕಣ್ಣಾಯಿಸಿದಳು. ಆದರೆ ಆ ಹಕ್ಕಿ ಗಸಗಸೆ ಮರದ ಯಾವ ಟೊಂಗೆಯ ಮೇಲೂ ಇರಲಿಲ್ಲ. ‘ಅಪ್ಪಾ ಹಕ್ಕಿ ಎಲ್ಲೊಯಿತು. ಕಾಣ್ತುತ್ತಿಲ್ಲ? ಪ್ರಶ್ನಿಸಿದಳು.
‘ಆಗ ಅದು ಕಕ್ಕಾ ಪೀಯಾ ಮಾಡಿತ್ತಲ್ಲ, ಅದಕ್ಕೆ ಅದು ಸ್ನಾನ ಮಾಡಕೆ ತನ್ನ ಮನೆಯ ಕಡೆಗೆ ಹೋಗಿದೆ. ಈಗ ನಾವು ನಮ್ಮ ಮನೆ ಕಡೆಗೆ ಹೋಗೋಣ. ತಿಂಡಿ ತಿಂದು ಮರಳಿ ಬರೋಣ. ಅದು ಮರಳಿ ಬರದಿದ್ದರೂ ಬೇಜಾರು ಮಾಡಿಕೊಳ್ಳಬೇಡ. ಇಲ್ನೋಡು ಕ್ಯಾಮರಾದಲ್ಲಿ ಆ ನಿನ್ನ ಪುಟ್ಟ ಹಕ್ಕಿ ಇದೆ ನೋಡು… ಎಂದು ಜಾಣತನದಿಂದ ಅವಳನ್ನು ಸಮಾಧಾನಪಡಿಸಿದೆ. ಬೇರೊಂದು ಹಕ್ಕಿಯ ಕಥೆಯನ್ನು ಹೇಳುತ್ತ ಮನೆಗೆ ಮರಳಿದೆ.
ತಿಂಡಿ ತಿಂದು, ಆ ಹಕ್ಕಿಯ ಬಗ್ಗೆ ತಿಳಿದುಕೊಳ್ಳಲು ಸಲೀಂ ಅವರ ಪುಸ್ತಕದ ಪುಟಗಳನ್ನು ತಿರುವಿ ಹಾಕಿದೆ. ಆ ಹಕ್ಕಿಯ ಬಗ್ಗೆ ತಿಳಿದುಕೊಂಡಾಗ ಅದ್ಬುತವೇನಿಸಿತು. ಅದರಲ್ಲೂ ಅದು ಸಾಮಾನ್ಯ ಹಕ್ಕಿಯಲ್ಲವೆಂದು ತಿಳಿಯಿತು. ಅದು ಅಪರೂಪದ ಹಕ್ಕಿ!.
ಆಂಗ್ಲ ಭಾಷೆಯಲ್ಲಿ ಫ್ಲಾವರ್ ಫೆಕ್ಕರ್ ಎಂದು ಹೇಳಲಾಗುವ ಈ ಹಕ್ಕಿಯನ್ನು ಕನ್ನಡದಲ್ಲಿ ‘ಹೂವಿನ ಹಕ್ಕಿ ಎಂದು ಕರೆಯಲಾಗುತ್ತದೆ. ಈ ಹಕ್ಕಿಗಳು ಹೆಚ್ಚಾಗಿ ಚಿಟ್ಟೆಗಳಂತೆ ಹೂವಿನ ಮಕರಂದವನ್ನು ಹೀರುತ್ತವೆ. ಸಿಹಿಯನ್ನು ಹೊಂದಿರುವ ಸಣ್ಣ ಸಣ್ಣ ಹಣ್ಣುಗಳನ್ನು ಮಾತ್ರ ಸೇವಿಸುತ್ತವೆ. ಎತ್ತರದ ಗಿಡಗಳಲ್ಲಿ ಎಲೆಗಳ ನಡುವೆ ಗೂಡು ಕಟ್ಟುವ ಹೂವಿನ ಹಕ್ಕಿಗಳು ಎರಡರಿಂದ ನಾಲ್ಕು ಮೊಟ್ಟೆ ಇಟ್ಟು ಮರಿ ಮಾಡುತ್ತವೆ. ತಮ್ಮ ಮರಿಗಳಿಗೆ ಸಣ್ಣ ಕ್ರಿಮಿಕೀಟಗಳನ್ನು ಹಿಡಿದು ತಂದು ಗುಟುಕು ನೀಡುತ್ತವೆ. ಹಾಗೆಯೇ ಹಣ್ಣುಗಳ ರಸವನ್ನು ಮರಿಗಳಿಗೆ ಕೊಕ್ಕಿನಲ್ಲಿ ತಂದು ಕುಡಿಸುತ್ತವೆ.
ಭೂಮಿಯತ್ತ ಮುಖ ಮಾಡಿರುವ ಹೂವುಗಳಲ್ಲಿನ ಮಕರಂದವನ್ನು ಹೂವಿನ ಹಕ್ಕಿಗಳು ತಮ್ಮ ಇಡೀ ದೇಹವನ್ನು ತಲೆಕೆಳಗೆ ಮಾಡಿಕೊಂಡು ಹೀರುತ್ತವೆ. ಕೆಲವೊಮ್ಮೆ ರೆಕ್ಕೆ ಬಡಿಯುತ್ತಲೇ ಹಮ್ಮಿಂಗ್ ಹಕ್ಕಿಯಂತೆ ಹೂವುಗಳಲ್ಲಿನ ಮಕರಂದವನ್ನು ಹಿರುತ್ತವೆ.
ವಿಶ್ವದಲ್ಲಿಯೇ ಅತ್ಯಂತ ಸಣ್ಣ ಹಕ್ಕಿಯಾಗಿರುವ ‘ಹಮ್ಮಿಂಗ ಹಕ್ಕಿ ನಂತರದ ಎರಡನೆಯ ಸಣ್ಣ ಹಕ್ಕಿ ಇದಾಗಿದೆ. ಏಷ್ಯಿಯಾ ಖಂಡದಲ್ಲಿಯೇ ಅತ್ಯಂತ ಸಣ್ಣ ಹಕ್ಕಿಯಾಗಿರುವ ಈ ಹೂವಿನ ಹಕ್ಕಿಗಳು ಬೂದು ಬಣ್ಣವನ್ನು ಹೊಂದಿವೆ. ಕೇವಲ ೧೦ರಿಂದ ೧೮ ಸೆಂ.ಮೀ. ನಷ್ಟು ಉದ್ದದ ದೇಹವನ್ನು ಹೊಂದಿರುತ್ತವೆ. ಹೆಣ್ಣು ಹಕ್ಕಿಗಿಂತ ಗಂಡು ಹೂವಿನ ಹಕ್ಕಿ ಹೆಚ್ಚು ಆಕರ್ಷಕವಾಗಿರುತ್ತದೆ. ಅದರ ಮೈಮೇಲಿನ ಗರಿಗಳು ಹೊಳಪನ್ನು ಹೊಂದಿರುತ್ತವೆ. ಕಣ್ಣಿನ ಸುತ್ತ ಬಿಳಿ ಹುಬ್ಬವನ್ನು ಹೊಂದಿವೆ. ಸಾಮಾನ್ಯವಾಗಿ ಕರ್ನಾಟಕದ ಎಲ್ಲಾ ಪ್ರದೇಶದಲ್ಲಿ ಕಂಡುಬರುವ ಸೂರಕ್ಕಿ (ಸನ್‌ಬರ್ಡ್) ಗಿಂತಲೂ ಹೂವಿನ ಹಕ್ಕಿ ಸಣ್ಣದಾಗಿರುತ್ತದೆ.
ವಿಶ್ವದಲ್ಲಿ ಈ ಹೂವಿನ ಹಕ್ಕಿಗಳಲ್ಲಿ ಒಟ್ಟು ೪೮ ಜಾತಿಗಳಿವೆ. ಅವುಗಳಲ್ಲಿ ಹನ್ನೆರಡು ಜಾತಿಯ ಹೂವಿನ ಹಕ್ಕಿಗಳು ಆಗ್ನೇಯ ಏಷ್ಯಾದಲ್ಲಿವೆ. ಅವುಗಳಲ್ಲಿ ಹೆಚ್ಚಾಗಿ ಮಲೇಷಿಯಾದಲ್ಲಿವೆ. ಅವುಗಳಲ್ಲಿ ಹಳದಿ ಬಣ್ಣದ ಹೂವಿನ ಹಕ್ಕಿಗಳು ವಿಭಿನ್ನವಾಗಿ ಸುಂದರವಾಗಿ ಇರುತ್ತವೆ. ಅವು ನಮ್ಮ ದೇಶದಲ್ಲಿ ಕಾಣಸಿಗುವುದಿಲ್ಲ. ನಮ್ಮ ನೆರೆ ರಾಷ್ಟ್ರಗಳಾದ ಶ್ರೀಲಂಕಾ, ಚೀನಾ, ಬಾಂಗ್ಲಾದೇಶ, ನೇಪಾಳದಲ್ಲಿ ಹಾಗೂ ಆಸ್ಟ್ರೇಲಿಯಾದಲ್ಲಿ ಮಾತ್ರ ನಮ್ಮಲ್ಲಿ ಕಾಣಸಿಗುವ ಹೂವಿನ ಹಕ್ಕಿಗಳು ಇವೆ.
ಹಳದಿ, ಕೆಂಪು, ಕಂದು ಬಣ್ಣದಿಂದ ಕೂಡಿದ ಬಣ್ಣ ಬಣ್ಣದ ಹೂವಿನ ಹಕ್ಕಿಗಳು ವಿಶ್ವದ ಬೇರೆ ಬೇರೆ ದೇಶಗಳಲ್ಲಿ ಅಲ್ಲಿನ ಭೌಗೋಳಿಕ ಪರಿಸರಕ್ಕೆ ಅನುಗುಣವಾಗಿ ಜೀವಿಸುತ್ತಿವೆ. ಅವುಗಳಲ್ಲಿ ತಂಪು ಪ್ರದೇಶಗಳಲ್ಲಿ ಹಾಗೂ ಹಿಮದ ಬೆಟ್ಟಗಳಿರುವ ಪ್ರದೇಶದಲ್ಲಿ ಕಣ್ಮನಸೆಳೆಯುವ ವರ್ಣಮಯವಾಗಿರುವ ಹೂವಿನ ಹಕ್ಕಿಗಳು ಕೂಡ ಇವೆ. ಅಂತಹ ಹಕ್ಕಿಗಳ ಪೈಕಿ ಒಂದಾಗಿರುವ ಹೂವಿನ ಹಕ್ಕಿಯೊಂದನ್ನು ರಾಜಧಾನಿಯಲ್ಲಿಯೇ ಇದ್ದುಕೊಂಡು ಸೆರೆಹಿಡಿದ ತೃಪ್ತಿ ನನ್ನದಾಯಿತು.