ನವದೆಹಲಿ,ಸೆ,01: ಒಂದು ಕಡೆ ತೈಲ ಬೆಲೆ ನಿರಂತರವಾಗಿ ಏರಿಕೆಯಾಗುತ್ತಲೆ ಇದೆ ಮತ್ತೊಂದು ಕಡೆ ಅಡುಗೆ ಅನಿಲ ಬೆಲೆ ಕೂಡ ಏರಿಕೆಯಾಗುತ್ತಿದೆ.ಕಳೆದ ಒಂದು ತಿಂಗಳಲ್ಲಿ ಎರಡು ಬಾರಿ ಏರಿಕೆ ಕಂಡಿದೆ.
ಕೊರೋನಾ, ಲಾಕ್ ಡೌನ್ ಸಂಕಷ್ಟದಲ್ಲಿ ಸಿಲುಕಿ ನರಳುತ್ತಿರುವ ಜನರಿಗೆ ಅಡುಗೆ ಅನಿಲ ಬೆಲೆ ಏರಿಕೆ ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿಸಿದಂತಾಗಿದೆ.
ಸಬ್ಸಿಡಿ ರಹಿತ ದ್ರವೀಕೃತ ಪೆಟ್ರೋಲಿಯಂ ಅನಿಲ (ಎಲ್ ಪಿಜಿ) ಸಿಲಿಂಡರ್ ಬೆಲೆಯಲ್ಲಿ ಮತ್ತೆ ಏರಿಕೆ ಮಾಡಲಾಗಿದೆ. ಪ್ರತಿ ಸಿಲಿಂಡರ್ ಗೆ 25 ರೂ.ಗಳಷ್ಟು ಹೆಚ್ಚಳ ಮಾಡಲಾಗಿದೆ. 14.2 ಕೆಜಿ ಸಬ್ಸಿಡಿ ರಹಿತ ದ್ರವೀಕೃತ ಪೆಟ್ರೋಲಿಯಂ ಅನಿಲ (ಎಲ್ ಪಿಜಿ) ಸಿಲಿಂಡರ್ ಗೆ ಈಗ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 884.50 ರೂ. ತಲುಪಿದೆ. ಬೆಂಗಳೂರಿನಲ್ಲಿ 862 ರೂ ಇದ್ದ ಸಿಲಿಂಡರ್ ಬೆಲೆ ಈಗ 887 ರೂ ಆಗಿದೆ.
ಸಬ್ಸಿಡಿ ರಹಿತ ಎಲ್ ಪಿಜಿ ಸಿಲಿಂಡರ್ ಬೆಲೆಯನ್ನು ಆಗಸ್ಟ್ 17 ರಿಂದ ಜಾರಿಗೆ ಬರುವಂತೆ ಪ್ರತಿ ಸಿಲಿಂಡರ್ ಗೆ 25 ರೂ.ಗಳಷ್ಟು ಹೆಚ್ಚಿಸಲಾಗಿತ್ತು. ಇದೀಗ ಮತ್ತೆ 25 ರೂ ಏರಿಕೆ ಮಾಡಲಾಗಿದೆ. 15 ದಿನಗಳ ಅಂತರದಲ್ಲಿ 50 ರೂ. ಏರಿಕೆಯಾಗಿದೆ. ಜನವರಿ 1ರಿಂದ ಸೆಪ್ಟಂಬರ್ 1ರವರೆಗೆ ಎಲ್ ಪಿಜಿ ಅಡುಗೆ ಅನಿಲದ ಬೆಲೆ 190 ರೂ ಏರಿಕೆಯಾದಂತಾಗಿದೆ.