ನವದೆಹಲಿ, ಜೂ,೧೩: ಜಿ-೭ ಶೃಂಗ ಸಭೆಯಲ್ಲಿ ಪಾಲೊಂಡಿರುವ ಪ್ರಧಾನಿ ನರೇಂದ್ರ ಮೋದಿ ಅವರು ಸಲ್ಲಿಸಿರುವ ಪ್ರಸ್ತಾವನೆಗೆ ಹಲವಾರು ಮುಖಂಡರು ಒಪ್ಪಿಕೊಂಡಿದ್ದು,ಇದಕ್ಕೆ ದಕ್ಷಿಣ ಆಫ್ರಿಕ ಪೂರ್ಣ ಬೆಂಬಲ ವ್ಯಕ್ತಪಡಿಸಿದೆ.
ಜೂನ್ ೧೨ ಮತ್ತು ೧೩ ರಂದು ವರ್ಚುವಲ್ ಮಾದರಿಯಲ್ಲಿ ನಡೆಯಲಿರುವ ಜಿ.೭ ಶೃಂಗದ ಬಾಹ್ಯ ಅಧಿವೇಶನ ಹೈಬ್ರೀಡ್ ಮಾದರಿಯಲ್ಲಿ ಆಯೋಜನೆಗೊಂಡಿದೆ.
ವಿಶ್ವ ನಾಯಕರು ಕೋವಿಡ್ ೧೯ ವಿರುದ್ಧ ಹೋರಾಡುತ್ತಿರುವ ರಾಷ್ಟ್ರಗಳಿಗೆ ಲಸಿಕೆಯ ೧೦೦ ಕೋಟಿ ಡೋಸ್‌ಗಳನ್ನು ಒದಗಿಸುವುದಾಗಿ ವಾಗ್ದಾನ ಮಾಡಿದ್ದಾರೆ. ಯುಕೆ, ಕೆನಡಾ, ಫ್ರಾನ್ಸ್, ಜರ್ಮನಿ, ಇಟಲಿ, ಜಪಾನ್ ಹಾಗೂ ಯುಎಸ್‌ಎ -ಜಿ೭ ಪ್ರಮುಖ ರಾಷ್ಟ್ರಗಳಾಗಿವೆ. ಭಾರತ ಸೇರಿದಂತೆ ಅನೇಕ ರಾಷ್ಟ್ರಗಳ ನಾಯಕರಿಗೆ ಅತಿಥಿಗಳಾಗಿ ಪಾಲ್ಗೊಳ್ಳಲು ಆಹ್ವಾನಿಸಲಾಗಿದೆ.
ಕೋವಿಡ್ ೧೯ ಲಸಿಕೆ ಹಕ್ಕು ಸ್ವಾಮ್ಯ, ಪೇಟೆಂಟ್, ಮೂಲ ವಸ್ತು ಪೂರೈಕೆ ಬಗ್ಗೆ ಭಾರತದ ಮೋದಿ ತಮ್ಮ ಭಾಷಣದಲ್ಲಿ ಪ್ರಸ್ತಾವಿಸಿದರು. ಕೋವಿಡ್ ಸಂಬಂಧಿಸಿದ ತಂತ್ರಜ್ಞಾನ, ಸಂಶೋಧನೆ ಹಾಗೂ ಅಭಿವೃದ್ಧಿಯ ಹಕ್ಕು ಸ್ವಾಮ್ಯ, ಪೇಟೆಂಟ್ ಹಿಡಿತದಿಂದ ಹೊರಬರಬೇಕಿದೆ. ಭವಿಷ್ಯದಲ್ಲಿ ಸಾಂಕ್ರಾಮಿಕರೋಗಗಳನ್ನು ತಡೆಗಟ್ಟಲು, ನಿಯಂತ್ರಿಸಲು ವಿಶ್ವ ಮಟ್ಟದಲ್ಲಿ ಮೈತ್ರಿ, ಒಗ್ಗಟ್ಟಿನ ಬಲ ಅಗತ್ಯ ಎಂದು ಹೇಳಿದರು. ಜಾಗತಿಕವಾಗಿ ಒಂದು ಭೂಮಿ ಒಂದು ಆರೋಗ್ಯ ವಿಧಾನ ಅನುಸರಿಸಬೇಕಿದೆ ಎಂದರು.
ಲಸಿಕೆ ತಯಾರಿಕೆಗೆ ನೆರವು ಅಗತ್ಯ
ಲಸಿಕೆ ತಯಾರಿಕೆಗೆ ಬೇಕಾದ ಮೂಲ ವಸ್ತು ಹಾಗೂ ಪೂರಕ ರಾಸಾಯನಿಕಗಳನ್ನು ಮುಕ್ತವಾಗಿ ಪೂರೈಕೆಯಾಗುವಂತೆ ನೋಡಿಕೊಳ್ಳಬೇಕು ಎಂದರು.ಮೋದಿ ಪ್ರಸ್ತಾವನೆಗೆ ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ ಬೆಂಬಲ ವ್ಯಕ್ತಪಡಿಸಿವೆ. ಜರ್ಮನಿ ಕೌನ್ಸಿಲರ್ ಏಂಜೆಲಾ ಮಾರ್ಕೆಲ್ ಮಾತನಾಡಿ, ಮೋದಿ ಅವರ ಒಂದು ಭೂಮಿ ಒಂದು ಆರೋಗ್ಯ ಕಲ್ಪನೆ ಇಂದಿಗೆ ಪ್ರಸ್ತುತವಾಗಿದೆ ಎಂದರು.
ಬ್ರಿಟನ್ ೧೦ ಕೋಟಿ ಡೋಸ್ ಒದಗಿಸಲಿದೆ
ಲಸಿಕೆಯ ಅರ್ಧದಷ್ಟು ಡೋಸ್‌ಗಳನ್ನು ಅಮೆರಿಕ ಒದಗಿಸಲಿದ್ದರೆ, ಬ್ರಿಟನ್ ೧೦ ಕೋಟಿ ಡೋಸ್‌ಗಳನ್ನು ಒದಗಿಸಲಿವೆ ಎಂದು ಮೂಲಗಳು ಹೇಳಿವೆ. ಕೆನಡಾ, ಫ್ರಾನ್ಸ್, ಜರ್ಮನಿ ಹಾಗೂ ಜಪಾನ್ ನಾಯಕರು ಕೂಡ ಪಾಲ್ಗೊಳ್ಳಲಿದ್ದು, ಕೋವಿಡ್ ಲಸಿಕೆ ನೀಡುವುದಕ್ಕೆ ಸಂಬಂಧಿಸಿದಂತೆ ಅವರು ಮಾಡುವ ಘೋಷಣೆಗೆ ಈ ಶೃಂಗಸಭೆ ಸಾಕ್ಷಿಯಾಗಲಿದೆ.
ಇಂಗ್ಲೆಂಡ್ ಜಿ.೭ ರ ಅಧ್ಯಕ್ಷತೆಯನ್ನು ವಹಿಸಿಕೊಂಡಿದೆ ಮತ್ತು ಭಾರತ, ಆಸ್ಟ್ರೇಲಿಯಾ, ಕೊರಿಯಾ ಗಣತಂತ್ರ ಮತ್ತು ದಕ್ಷಿಣ ಆಫ್ರಿಕಾಗಳನ್ನು ಜಿ.೭ ಶೃಂಗಕ್ಕೆ ಅತಿಥಿ ರಾಷ್ಟ್ರಗಳನ್ನಾಗಿ ಆಹ್ವಾನಿಸಿದೆ.
“ಉತ್ತಮವಾಗಿ ಮರು ನಿರ್ಮಾಣ ಮಾಡಿ” ಎಂಬುದು ಶೃಂಗದ ವಿಷಯ ಶೀರ್ಷಿಕೆಯಾಗಿದೆ ಮತ್ತು ಇಂಗ್ಲೆಂಡ್ ಅದರ ಅಧ್ಯಕ್ಷತೆಗೆ ನಾಲ್ಕು ಆದ್ಯತಾ ರಂಗಗಳನ್ನು ರೂಪಿಸಿದೆ. ಅವುಗಳೆಂದರೆ ಕೊರೊನಾದಿಂದ ಜಾಗತಿಕ ಪುನಶ್ಚೇತನ; ಭವಿಷ್ಯದ ಜಾಗತಿಕ ಸಾಂಕ್ರಾಮಿಕಗಳ ವಿರುದ್ಧ ಪುನಶ್ಚೇತನವನ್ನು ಬಲಪಡಿಸುವುದು; ಮುಕ್ತ ಮತ್ತು ನ್ಯಾಯೋಚಿತ ವ್ಯಾಪಾರವನ್ನು ಪ್ರಚುರಪಡಿಸುವ ಮೂಲಕ ಭವಿಷ್ಯದ ಸಮೃದ್ಧಿಗೆ ಉತ್ತೇಜನ; ವಾತಾವರಣ ಬದಲಾವಣೆಯನ್ನು ನಿಭಾಯಿಸುವುದು ಮತ್ತು ಭೂಗ್ರಹದ ಜೀವವೈವಿಧ್ಯವನ್ನು ಕಾಪಾಡುವುದು, ಹಂಚಿಕೊಂಡ ಮೌಲ್ಯಗಳು ಹಾಗು ಮುಕ್ತ ಸಮಾಜಗಳನ್ನು ಬೆಂಬಲಿಸುವುದು.