ಅಹಮದಬಾದ್,ಮೇ,೧೯:ಗುಜರಾತ್‌ನಲ್ಲಿ ತೌತೆ ಚಂಡಮಾರುತದ ಅಬ್ಬರದಿಂದ ಹಾನಿಗೊಳಗಾದ ಪ್ರದೇಶಗಳ ವೈಮಾನಿಕ ಸಮೀಕ್ಷೆಯನ್ನು ಇಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ನಡೆಸಿದರು. ಈ ವೇಳೆ ಅವರು ರಾಜ್ಯದಲ್ಲಿ ತಕ್ಷಣದ ಪರಿಹಾರ ಕ್ರಮಗಳಿಗಾಗಿ ೧,೦೦೦ ಕೋಟಿ ರೂ ಘೋಷಿಸಿದ್ದಾರೆ. ಇದರ ಜೊತೆಗೆ ಅವರು ಚಂಡ ಮಾರುತದಿಂದ ಪ್ರಾಣಕಳೆದುಕೊಂಡವ ಸಂತ್ರಸ್ತ ಕುಟುಂಬಗಳಿಗೆ ೨ ಲಕ್ಷ, ಗಾಯಗೊಂಡವರಿಗೆ ೫೦ ಸಾವಿರ ಪರಿಹಾರ ಹಣ ಘೋಷಿಸಿದ್ದಾರೆ.
ಗುಜರಾತ್ ಮತ್ತು ಡಿಯುನಲ್ಲಿ ಚಂಡಮಾರುತದಿಂದ ಹಾನಿಗೊಳಗಾದ ಪ್ರದೇಶಗಳಿಗೆ ಇಂದು ಪ್ರಧಾನಿ ಭೇಟಿ ನೀಡಿದರು. ಈ ವೇಳೆ ಅವರು ಉನಾ, ಡಿಯು, ಜಫರಾಬಾದ್‌ಮತ್ತು ಮಹುವಂತಹ ಪ್ರದೇಶಗಳಲ್ಲಿ ವೈಮಾನಿಕ ಸಮೀಕ್ಷೆ ನಡೆಸಿದರು. ಬಳಿಕ ಅಹಮದಾಬಾದ್‌ನಲ್ಲಿ ಪರಿಶೀಲನಾ ಸಭೆ ನಡೆಸಿದರು.
ತೌತೆ ಚಂಡಮಾರುತ ಬಿರುಸಾಗಿರುವ ಹಿನ್ನೆಲೆಯಲ್ಲಿ ಗುಜರಾತ್‌ನ ಹಲವು ಭಾಗಗಳಲ್ಲಿ ಭಾರಿ ಮಳೆ ಆಗುತ್ತಿದೆ. ಸಾವಿರಾರು ಮರಗಳು ಮತ್ತು ವಿದ್ಯುತ್ ಕಂಬಗಳು ನೆಲಕ್ಕೆ ಉರುಳಿವೆ. ಕೆಲವು ಕಡೆ ಭೂಕುಸಿತ ಮತ್ತು ಸಮುದ್ರ ಕೊರೆತ ಉಂಟಾಗಿದೆ. ಇದರ ಪರಿಣಾಮದಿಂದ ೧೫೦ಕ್ಕೂ ಹೆಚ್ಚು ರಸ್ತೆಗಳು ಕೊಚ್ಚಿಹೋಗಿವೆ. ಅಲ್ಲದೆ ಕರಾವಳಿ ಭಾಗದ ಹೆದ್ದಾರಿಗಳಿಗೆ ಹಾನಿ ಕೂಡ ಆಗಿದೆ.
ಗುಜರಾತ್‌ನಲ್ಲಿ ಇದುವರೆಗೂ ೨ ಲಕ್ಷ ಜನರನ್ನು ಸುರಕ್ಷಿತ ಸ್ಥಳಗಳಿಗೆ ಶಿಫ್ಟ್ ಮಾಡಲಾಗಿದೆ. ಅಹಮದಾಬಾದ್ ಏರ್‌ಪೋರ್ಟ್ ಸುತ್ತಲೂ ನೀರು ಆವರಿಸಿಕೊಂಡು, ವಿಮಾನ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ. ಗುಜರಾತ್‌ನ ಬಹುತೇಕ ಎಲ್ಲ ಪ್ರಮುಖ ವಿಮಾನ ನಿಲ್ದಾಣಗಳೂ ಬಂದ್ ಆಗಿದೆ. ಗುಜರಾತ್‌ನಲ್ಲಿ ೧೯೯೮ರ ನಂತರ ಕಳೆದ ೨೩ ವರ್ಷಗಳಲ್ಲಿ ಉಂಟಾಗಿರುವ ಅತ್ಯಂತ ಭೀಕರ ಚಂಡಮಾರುತ ಇದು ಎನ್ನಲಾಗಿದೆ.
ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡ ತುರ್ತು ಕೆಲಸಗಳಿಗೆ ೧೦೦ ತಂಡಗಳನ್ನು ಕೇರಳ, ಕರ್ನಾಟಕ, ತಮಿಳು ನಾಡು, ಗುಜರಾತ್, ಗೋವಾ ಮತ್ತು ಮಹಾರಾಷ್ಟ್ರ ಭಾಗಗಳಲ್ಲಿ ನಿಯೋಜಿಸಿದೆ. ಉತ್ತರ ವಾಯವ್ಯ ಭಾಗದತ್ತ ಗಂಟೆಗೆ ೧೮ ಕಿಲೋ ಮೀಟರ್ ವೇಗದಲ್ಲಿ ಚಂಡಮಾರುತ ಬೀಸುತ್ತಿದ್ದು ಗಾಳಿಯ ವೇಗ ೧೫೫ರಿಂದ ೧೬೫ ಕಿಲೋ ಮೀಟರ್ ನಷ್ಟು ಇರಲಿದೆ. ಮಹಾರಾಷ್ಟ್ರ, ಗುಜರಾತ್‌ನಲ್ಲಿ ಬುಧವಾರ ಕೂಡ ಮಳೆಯಾಗುತ್ತಿದೆ.
ಪಶ್ಚಿಮ ಕರಾವಳಿಯಲ್ಲಿ ಹಗುರ ಗಾಳಿಯಿಂದ ಕೂಡಿದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಸೌರಾಷ್ಟ್ರ ಮತ್ತು ಕಚ್ ಒಳನಾಡು ಪ್ರದೇಶ ಭಾರೀ ಮಳೆಯಾಗಲಿದೆ. ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿ ಇದೇ ೨೦ರವರೆಗೂ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಗುಜರಾತ್‌ಗೆ ೧ಸಾವಿರ ಕೋಟಿ ಪರಿಹಾರ ಘೋಷಿಸಿದ ಮೋದಿ
Share