ಕೊರೊನಾ ವಿರುದ್ಧದ ಹೋರಾಟಕ್ಕೆ ಯೋಗ ಆಶಾಕಿರಣ; ಮೋದಿ

Share

ನವದೆಹಲಿ,ಜೂ,21: ಭಾರತೀಯ ಮೂಲದ ಯೋಗ ಪದ್ದತಿಯನ್ನು ಅಳವಡಿಸಿಕೊಂಡಿದ್ದು,ಇದರಿಂದ ಕೊರೊನಾ ಕಾಲದ ಈ ಸಮಯದಲ್ಲಿ ಯೋಗಾಭ್ಯಾಸ ಒಂದು ಉತ್ತಮ ಅಂಶವಾಗಿದೆ ಇದರಿಂದ ದೇಹ ಮತ್ತು ಮನಸ್ಸು ಮತ್ತಷ್ಟು ದೃಡವಾಗುತ್ತದೆ ಎಂದು ಪ್ರಧಾನಿ ಮೋದಿ ಅಭಿಪ್ರಾಯ ಪಟ್ಟಿದ್ದಾರೆ.

ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ಉದ್ದೇಶಿಸಿ ಮಾತನಾಡಿರುವ ಅವರು,ಎಲ್ಲರಿಗೂ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಶುಭಾಶಯಗಳು ಎನ್ನುವ ಮೂಲಕ ಮಾತು ಆರಂಭಿಸಿ, ಕೊರೊನಾ ನಡುವೆ ಯೋಗ ಆಶಾಕಿರಣವಾಗಿದೆ. ಕೊರೊನಾ ವಿರುದ್ಧದ ಹೋರಾಟಕ್ಕೆ ಯೋಗದಿಂದ ಬಲ ಸಿಕ್ಕಿದೆ ಎಂದು ತಿಳಿಸಿದ್ದಾರೆ.

ವಿಶ್ವದ ಮೂಲೆಮೂಲೆಯಲ್ಲಿ ಲಕ್ಷಾಂತರ ಜನರು ಯೋಗಾಭ್ಯಾಸ ಮಾಡುತ್ತಿದ್ದಾರೆ. ವೈದ್ಯರೂ ಸಹ ಯೋಗವನ್ನು ಸ್ವಯಂ ಅಸ್ತ್ರವಾಗಿಸಿಕೊಂಡಿದ್ದು, ಕೊರೊನಾ ಸಂದರ್ಭದಲ್ಲಿ ಇದು ಪರಿಣಾಮಕಾರಿಯಾಗಿದೆ. ರೋಗಿಗಳ ಶೀಘ್ರ ಗುಣಮುಖಕ್ಕೂ ಯೋಗ ಸಹಕಾರಿಯಾಗಿದ್ದು, ಯೋಗದಿಂದ ಜನರ ಉತ್ಸಾಹ, ಪ್ರೀತಿಯೂ ಹೆಚ್ಚಾಗಿದೆ. ಇಂದು ಇದನ್ನು ಜಗತ್ತಿನಾದ್ಯಂತ ಆಚರಿಸಲಾಗುತ್ತಿದೆ ಎನ್ನುವುದು ಸಂತಸದ ಸಂಗತಿ ಎಂದು ಹೇಳಿದ್ದಾರೆ.

ತಿರುವಳ್ಳವರ್​ ಹೇಳಿರುವುದು ಯೋಗದಿಂದ ಸಾಬೀತಾಗಿದೆ. ನಮ್ಮ ಆರೋಗ್ಯ, ಉಸಿರಾಟ ವ್ಯವಸ್ಥೆಯಲ್ಲಿ ಸುಧಾರಣೆಯಾಗಲು ಯೋಗ ಸಹಕರಿಸುತ್ತದೆ ಎನ್ನುವುದು ಗೊತ್ತಾಗಿದೆ. ಹಲವು ಶಾಲೆಗಳು ಆನ್​ಲೈನ್ ತರಗತಿಗೆ ಯೋಗವನ್ನೂ ಸೇರಿಸಿವೆ. ಯೋಗದಿಂದ ದೈಹಿಕ ಆರೋಗ್ಯದ ಜತೆ ಮಾನಸಿಕ ಆರೋಗ್ಯ ವೃದ್ಧಿಯಾಗುತ್ತದೆ. ಋಣಾತ್ಮಕ ಅಂಶಗಳ ವಿರುದ್ಧದ ಹೋರಾಟಕ್ಕೆ ಸಹಕಾರಿಯಾದ ಯೋಗ ನಮ್ಮೊಳಗಿನ ಆಂತರಿಕ ಬಲ ಹೆಚ್ಚಳ ಮಾಡುತ್ತದೆ. ನಮಗೆ ಸಂತಸದ ಜೀವನ ನೀಡುತ್ತದೆ ಎಂದು ಮೋದಿ ಅಭಿಪ್ರಾಯಪಟ್ಟಿದ್ದಾರೆ.

ಜಗತ್ತಿನ ಹಲವು ರಾಷ್ಟ್ರಗಳಿಗೆ ಯೋಗ ಅವರ ಪಾರಂಪರಿಕ ಆಚರಣೆಯೇನಲ್ಲ. ಕೊರೊನಾ ಸಂದರ್ಭದಲ್ಲಿ ಬೇರೆ ಚಿಂತೆಯಲ್ಲಿ ಸಿಲುಕಿದ ಜನ ಇದನ್ನು ಮರೆಯಬಹುದಿತ್ತು. ಆದರೆ, ಯೋಗದೆಡೆಗೆ ಜನರಿಗಿದ್ದ ಆಸಕ್ತಿ ಮತ್ತಷ್ಟು ಹೆಚ್ಚಾಗಿದೆ. ಕೊರೊನಾ ಈ ಜಗತ್ತಿನ ಬಾಗಿಲು ತಟ್ಟಿದಾಗ ಅದನ್ನು ತಡೆದು ನಿಲ್ಲಿಸಲು ಯಾರೂ ಸಂಪೂರ್ಣ ಸಿದ್ಧರಾಗಿರಲಿಲ್ಲ. ಅಂತಹ ಹೊತ್ತಿನಲ್ಲಿ ಯೋಗ ಆತ್ಮವಿಶ್ವಾಸ ವೃದ್ಧಿಸುವ ಬಹುಮುಖ್ಯ ಮಾಧ್ಯಮವಾಗಿ ಪರಿಣಮಿಸಿ ಎಲ್ಲರಲ್ಲೂ ಧೈರ್ಯ ಮೂಡಿಸಿತು ಎಂದು ಯೋಗದ ಕುರಿತಾಗಿ ಮಾತನಾಡಿದ್ದಾರೆ.
ಭಾರತದ ಋಷಿ ಮುನಿಗಳು ಆರೋಗ್ಯದ ಬಗ್ಗೆ ಮಾತನಾಡಿದಾಗ ಅದು ಕೇವಲ ದೈಹಿಕ ಆರೋಗ್ಯಕ್ಕೆ ಸೀಮಿತವಾಗುತ್ತಿರಲಿಲ್ಲ. ಸಂಪೂರ್ಣ ಆರೋಗ್ಯ ಎಂದರೆ ಮಾನಸಿಕ ಆರೋಗ್ಯವೂ ಸೇರಿಕೊಳ್ಳುತ್ತದೆ. ಇದನ್ನು ಸಾಧಿಸಲು ಯೋಗದಿಂದ ಸಾಧ್ಯವಿದೆ ಎಂದರು. ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಬಗ್ಗೆ ಭಾರತ ಪ್ರಸ್ತಾಪಿಸಲು ಮೂಲ ಕಾರಣ ಯೋಗ ಇಡೀ ವಿಶ್ವಕ್ಕೆ ತಲುಪಬೇಕು, ಎಲ್ಲರೂ ಇದರ ಸದುಪಯೋಗ ಪಡೆದುಕೊಳ್ಳಬೇಕು ಎನ್ನುವುದಾಗಿತ್ತು. ಇದೀಗ ವಿಶ್ವ ಆರೋಗ್ಯ ಸಂಸ್ಥೆ ಮೂಲಕ ಭಾರತ ಇನ್ನೊಂದು ಮಹತ್ತರ ಕಾರ್ಯಕ್ಕೆ ಜತೆಯಾಗುತ್ತಿದೆ ಎಂದು ಹೇಳಿದ್ದಾರೆ.

Girl in a jacket
error: Content is protected !!