ಲಖೀಂಪುರ್ ಖೇರ್,ಅ,06: ಲಖೀಂಪುರ್ ಖೇರ್ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶ ಪೊಲೀಸರು ದಾಖಲಿಸಿರುವ ಎಫ್ ಐಆರ್ ನಲ್ಲಿ ಕಾರಿನಲ್ಲಿ ಕುಳಿತಿದ್ದ ಕೇಂದ್ರ ಸಚಿವರ ಪುತ್ರ ಅಶಿಶ್ ಮಿಶ್ರಾ ಅಲಿಯಾಸ್ ಮೋನು ಪ್ರತಿಭಟನಾನಿರತ ರೈತರನ್ನು ಕೆಣಕಿರುವುದಲ್ಲದೇ, ಅವರ ಮೇಲೆ ಗುಂಡು ಹಾರಿಸಿರುವುದಾಗಿ ಹೇಳಲಾಗಿದೆ.
ಬಹ್ರೈಚ್ ಜಿಲ್ಲೆಯವರಾದ ಜಗಜಿತ್ ಸಿಂಗ್ ಅವರ ದೂರಿನ ಮೇಲೆ ದಾಖಲಾದ ಮೊದಲ ಮಾಹಿತಿ ವರದಿ (ಎಫ್ಐಆರ್) ಪ್ರಕಾರ, ಈ ಎಪಿಸೋಡ್ ಪೂರ್ವ ಯೋಜಿತವಾಗಿದ್ದು, ಮಂತ್ರಿ ಹಾಗೂ ಆತನ ಪುತ್ರನಿಂದ ಪಿತೂರಿ ನಡೆದಿದೆ ಎಂದು ಹೇಳಲಾಗಿದೆ.
ಕೇಂದ್ರ ಗೃಹ ಸಚಿವರ ಪ್ರಚೋದನಕಾರಿ ಹೇಳಿಕೆಗಳು ರೈತರ ಪ್ರತಿಭಟನೆಗೆ ಕಾರಣವಾಗಿ ಹಿಂಸಾಚಾರ ಭುಗಿಲೆದ್ದಿತು ಮತ್ತು ಎಂಟು ಜನರ ಜೀವವನ್ನು ಬಲಿ ತೆಗೆದುಕೊಂಡಿತು ಎಂದು ಆರೋಪಿಸಲಾಗಿದೆ.
ಭಾನುವಾರ ಮಹಾರಾಜ ಅಗ್ರಾಸೇನ್ ಇಂಟರ್ ಕಾಲೇಜಿನ ಕ್ರೀಡಾ ಮೈದಾನದಲ್ಲಿ ಜಮಾಯಿಸಿದ್ದ ರೈತರು, ಬನ್ಬೀಪುರಕ್ಕೆ ಭೇಟಿ ನೀಡುತ್ತಿದ್ದ ಮಿಶ್ರಾ ಮತ್ತು ಉತ್ತರ ಪ್ರದೇಶ ಉಪ ಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಅವರಿಗೆ ಶಾಂತಿಯುತವಾಗಿ ಕಪ್ಪು ಬಾವುಟಗಳನ್ನು ತೋರಿಸಲು ಬಯಸಿದ್ದರು ಎಂದು ಎಫ್ ಐಆರ್ ನಲ್ಲಿದೆ.